ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ‘ಬ್ರಹ್ಮಾಂಡ’ ದರ್ಶನ

Last Updated 2 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಕಲಾವಿದೆ ಚರಿತಾ ದಾಸಪ್ಪ ಅವರ ‘ಬ್ರಹ್ಮಾಂಡ’ ಏಕವ್ಯಕ್ತಿ ಕಲಾ ಪ್ರದರ್ಶನ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಸೋಮವಾರದಿಂದ ಇದೇ 9ರವರೆಗೆ ಆಯೋಜನೆಗೊಂಡಿದೆ. ಒಟ್ಟು 36 ಕಲಾಕೃತಿಗಳಿದ್ದು, ಪ್ರತಿ ಕಲಾಕೃತಿಯೂ ಒಂದೊಂದು ‘ಥೀಮ್‌’ ಒಳಗೊಂಡಿದೆ. ‘ಶಾಶ್ವತದಿಂದ ತಾತ್ಕಾಲಿಕ’ದವರೆಗೆ ಎಂಬ ಪರಿಕಲ್ಪನೆಯಲ್ಲಿ ಇಷ್ಟೂ ಕಲಾಕೃತಿಗಳನ್ನು ರಚಿಸಲಾಗಿದೆ ಎಂದು ಚರಿತಾ ದಾಸಪ್ಪ ಹೇಳುತ್ತಾರೆ.‌

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಚರಿತಾ, ಅಮೆರಿಕದಲ್ಲಿ ಗ್ರಾಫಿಕ್‌ ಡಿಸೈನ್‌ನಲ್ಲಿ ಪದವಿ ಪಡೆದಿದ್ದಾರೆ. ಮದುವೆಯಾಗಿ ಪತಿಯ ಜೊತೆ ಅಮೆರಿಕದಲ್ಲಿ 12 ವರ್ಷ ಇದ್ದ ಅವರು, ಈಗ ಬೆಳ್ಳಂದೂರು ಬಳಿ ವಾಸವಿದ್ದಾರೆ. ಮನೆಯಲ್ಲಿಯೇ ಚಿತ್ರಕಲಾ ಸ್ಟುಡಿಯೊ ಇಟ್ಟುಕೊಂಡು ಕಲಾಕೃತಿ ರಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.

ಮೈಸೂರಿನವರಾದ ಚರಿತಾ ಬಾಲ್ಯದ ಆಸಕ್ತಿಯನ್ನು ಅಮೆರಿಕದಲ್ಲಿ ಸಾಕಾರಗೊಳಿಸಿಕೊಂಡವರು. ಅಲ್ಲಿ ಅನೇಕ ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇದು ಅವರ ಮೊದಲ ಏಕವ್ಯಕ್ತಿ ಕಲಾ ಪ್ರದರ್ಶನ.

‘ಬ್ರಹ್ಮಾಂಡ ಪ್ರದರ್ಶನದಲ್ಲಿರುವ 36 ಕಲಾಕೃತಿಗಳನ್ನೂ ಒಂದೊಂದು ವಿಷಯ ಇಟ್ಟುಕೊಂಡು ರಚಿಸಲಾಗಿದೆ. ಒಟ್ಟಾಗಿ ನೋಡಿದರೆ ಅದು ಅದ್ಭುತ ಜೀವನವನ್ನು ಕಟ್ಟಿಕೊಡುತ್ತದೆ. ಬ್ರಹ್ಮಾಂಡ ಶಾಶ್ವತ, ಆದರೆ ಬದುಕು ತಾತ್ಕಾಲಿಕ ಎಂಬುದನ್ನು ಕಲಾಕೃತಿಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಸುಮಾರು ಎರಡು ವರ್ಷಗಳಲ್ಲಿ ಈ ಕಲಾಕೃತಿಗಳನ್ನು ರಚಿಸಿದ್ದೇನೆ. ಥೀಮ್‌ ಇರುವುದರಿಂದ ಮತ್ತು ಒಂದು ಕಲಾಕೃತಿಯ ಮುಂದುವರಿದ ಭಾಗ ಮತ್ತೊಂದು ಕಲಾಕೃತಿ ಆಗಿರುವ ಕಾರಣ ಹೆಚ್ಚು ಸಮಯ ಬೇಕಾಯಿತು’ ಎನ್ನುತ್ತಾರೆ ಚರಿತಾ.

ಕ್ಯಾನ್ವಾಸ್‌ ಬದಲಿಗೆ ಫ್ರೈವುಡ್‌

ಚರಿತಾ ಅವರ ಕಲಾಕೃತಿಗಳ ವಿಶೇಷವೆಂದರೆ ಅವರು ಕ್ಯಾನ್ವಾಸ್‌ ಮೇಲೆ ಚಿತ್ರಗಳನ್ನು ಮೂಡಿಸಿಲ್ಲ. ಬದಲಾಗಿ ಫ್ಲೈವುಡ್‌ ಮೇಲೆ ಕಲಾಕೃತಿಗಳನ್ನು ರಚಿಸಿದ್ದಾರೆ. ಫ್ಲೈವುಡ್‌ ಮೇಲೆ ಇರುವ ‘ಟೆಕ್ಚರ್‌’ ಅವರಿಗೆ ಇಷ್ಟವಂತೆ.

‘ವಿದೇಶದಲ್ಲಿ ಇಂಥಾ ಪ್ರಯೋಗಗಳು ನಡೆಯುತ್ತಿರುತ್ತವೆ. ನನಗೆ ಫ್ಲೈವುಡ್‌ ಮೇಲೆ ಕಲಾಕೃತಿ ರಚಿಸುವುದು ಹೆಚ್ಚು ಇಷ್ಟ. ಇದು ಹೆಚ್ಚು ಭಾರವಿರುತ್ತದೆ. ಆದರೆ, ಬಾಳಿಕೆ ಹೆಚ್ಚು. ಚೌಕಟ್ಟು ಹಾಕಿಸುವ ಅಗತ್ಯವಿಲ್ಲ. 2/3 ನನ್ನ ಕಲಾಕೃತಿಗಳ ಗರಿಷ್ಠ ಅಳತೆ. ಮನೆಯಲ್ಲಿಯೇ ಕಲಾ ಸ್ಟುಡಿಯೊ ಇದೆ’ ಎಂದು ಅವರು ಹೇಳುತ್ತಾರೆ.

‘ಎಲಿಫಾಂಟೀನ್‌ ಯೂನಿವರ್ಸ್‌’ ಕಲಾಕೃತಿಯಲ್ಲಿ ಆನೆಯ ತಲೆ ಮತ್ತು ಗಣೇಶನ ಪ್ರತಿರೂಪವಿದೆ. ಈ ಜಗತ್ತಿನಲ್ಲಿ ನೇರ ರೇಖೆಗಳೇ ಇಲ್ಲ, ಎಲ್ಲಾ ವಸ್ತುಗಳೂ ನಿಸರ್ಗ ರೂಪಿಸಿರುವ ವಕ್ರಾಕೃತಿಗಳು ಎಂಬುದನ್ನು ಸಂಕೇತದ ಮೂಲಕ ಕಲಾವಿದೆ ಅಭಿವ್ಯಕ್ತಪಡಿಸಿದ್ದಾರೆ.

ಮನುಷ್ಯನ ಬೌದ್ಧಿಕ ಅನ್ವೇಷಣೆಯಂತೆ ಬ್ರಹ್ಮಾಂಡದ ಸ್ವರೂಪ ಇರುತ್ತದೆ ಎಂಬುದನ್ನು ‘ಮೈಂಡ್‌ ಓವರ್‌ ಮ್ಯಾಟರ್ ಕಲಾಕೃತಿ ಪ್ರತಿನಿಧಿಸುತ್ತದೆ. ‘ಬ್ರಷ್‌ ವಿಥ್‌ ಡೆಸ್ಟಿನಿ’ ಕಲಾಕೃತಿ ವಿಕಾಸವಾದವನ್ನು ಪ್ರತಿನಿಧಿಸುತ್ತದೆ. ‘ಕಾಸ್ಮಿಕ್‌ ಪ್ರೊಪೋರ್ಷನ್ಸ್‌’ನಲ್ಲಿ ಜೇನಿನ ಹುಳುವಿನಿಂದಾಗುವ ಪರಾಗಸ್ಪರ್ಶ, ಮನುಷ್ಯನ ಬದುಕಿಗೆ ಎಷ್ಟು ಮುಖ್ಯ ಎಂಬುದನ್ನು ಪ್ರತಿನಿಧಿಸುತ್ತದೆ. ಹೀಗೆ ಇಡೀ ಬ್ರಹ್ಮಾಂಡದ ಅನೇಕ ತರ್ಕಗಳಿಗೆ ಉತ್ತರವಾಗಿ ಈ ಸರಣಿ ಕಲಾಕೃತಿಗಳನ್ನು ಕಾಣಬಹುದು.

********

l ಸಮಯ: ಬೆಳಿಗ್ಗೆ 10ರಿಂದ ಸಂಜೆ 7

l ಸ್ಥಳ: ಗ್ಯಾಲರಿ 3, ಕರ್ನಾಟಕ ಚಿತ್ರಕಲಾ ಪರಿಷತ್ತು.

l ಕಡೆಯ ದಿನ: ಡಿಸೆಂಬರ್‌ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT