ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿಗಳು ಲಾಕ್‌ಡೌನ್‌ನಲ್ಲಿ ಕಲಿತಿದ್ದು

Last Updated 6 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಲಾಕ್‌ಡೌನ್‌ ಎನ್ನುವುದು ಹಲವರಿಗೆ ಅನಿವಾರ್ಯ ಐಸೊಲೇಶನ್‌ ಆದರೆ, ಕೆಲವರಿಗೆ ಅದು ಹೊಸತನ್ನು ಕಲಿಯಲು ಒದಗಿ ಬಂದ ಅವಕಾಶ. ಲಾಕ್‌ಡೌನ್‌ನಲ್ಲಿ ತಾವು ಕಲಿತ ಹೊಸ ವಿಷಯಗಳನ್ನು, ಕೌಶಲಗಳನ್ನು, ಪಾಠಗಳನ್ನು ‘ಪ್ರಜಾಪ್ಲಸ್‌’ ಜೊತೆ ಹಂಚಿಕೊಂಡಿದ್ದಾರೆ ಸೆಲೆಬ್ರಿಟಿಗಳು.

***

ಸ್ನೂಕರ್‌ ಕಲಿಕೆಗೆ ಅವಕಾಶ
ಧರ್ಮ, ಅಧ್ಯಾತ್ಮ, ಸಮುದಾಯ ಸಂಘಟನೆಗಾಗಿ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ಸಂಚರಿಸುತ್ತಿರುವಾಗ ಘೋಷಣೆಯಾದ ಲಾಕ್‌ಡೌನ್‌ ಮಠದಲ್ಲೇ ಉಳಿಯುವಂತೆ ಮಾಡಿತು. ಇದು ಸ್ನೂಕರ್‌ನತ್ತ ಹೊರಳಲು ಅವಕಾಶ ಕಲ್ಪಿಸಿತು.

ಆರಂಭದಲ್ಲಿ ಓದು, ಬರಹದಲ್ಲಿ ತೊಡಗಿಕೊಂಡೆ. ಸಮುದಾಯದ ಏಳಿಗೆಗಾಗಿ ವಿಸ್ತೃತವಾದ ಯೋಜನೆಯೊಂದನ್ನು ಸಿದ್ಧಪಡಿಸಿದೆ. ದಿನ ಕಳೆದಂತೆ ಶುರುವಾದ ಬೇಸರ ಕಳೆಯಲು ಕ್ರೀಡೆಯ ಮೊರೆ ಹೋಗ ಬೇಕಾಯಿತು. ಕ್ರಿಕೆಟ್‌, ವಾಲಿಬಾಲ್‌ ತುಂಬಾ ಇಷ್ಟ. ಜಿಲ್ಲಾ ವಾಲಿಬಾಲ್‌ ಅಸೋಸಿಯೇಷನ್‌ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ.

ಆದರೆ, ಗುಂಪು ಸೇರಿ ಆಟವಾಡಲು ಅವಕಾಶ ಇಲ್ಲದಿರುವುದರಿಂದ ಒಳಾಂಗಣ ಕ್ರೀಡೆಗಳತ್ತ ಒಲವು ಬೆಳೆಯಿತು. ಸ್ನೂಕರ್‌ ತುಂಬಾ ಇಷ್ಟವೇನೂ ಅಲ್ಲ. ಆದರೆ, ಆ ಕ್ರೀಡೆಯ ಬಗ್ಗೆ ಸಣ್ಣ ಕುತೂಹಲವಿತ್ತು. ಸ್ನೂಕರ್‌ ತರಬೇತುದಾರರೊಬ್ಬರ ಒತ್ತಾಯದ ಮೇರೆಗೆ ಆಟ ಕಲಿಯಲು ಆರಂಭಿಸಿದೆ. ನಿತ್ಯ ಒಂದು ಗಂಟೆ ಇದಕ್ಕೆ ಮೀಸಲಿಡುತ್ತಿದ್ದೆ. ದಿನ ಉರುಳಿದಂತೆ ಆಟವೂ ಇಷ್ಟವಾಯಿತು.
-ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ

***

ಬ್ಯಾಡ್ಮಿಂಟನ್‌ ಕಲಿತ ‘ಡಾಲಿ’
ಬಾಲ್ಯದಿಂದಲೂ ನನಗೆ ರನ್ನಿಂಗ್‌ ರೇಸ್‌ ಎಂದರೆ ಇಷ್ಟ. ಶಾಲಾ ಹಂತದಲ್ಲಿ ಇದ್ದಾಗ ಓಡುತ್ತಿದ್ದೆ ಮತ್ತು ಕ್ರಿಕೆಟ್‌ ಆಡುತ್ತಿದ್ದೆ. ಕಾಲೇಜು ಮೆಟ್ಟಿಲು ಹತ್ತಿದಾಗ ಜಿಮ್‌ ಮೇಲೆ ಮೋಹ ಬೆಳೆಯಿತು. ಬೆಳ್ಳಿತೆರೆ ಪ್ರವೇಶಿಸಿದಾಗ ಇದು ನನ್ನ ವೃತ್ತಿಬದುಕಿಗೆ ನೆರವಾಯಿತು. ಮೊದಲಿನಿಂದಲೂ ಬ್ಯಾಡ್ಮಿಂಟನ್‌ ಕ್ರೀಡೆಯ ಮೇಲೆ ಒಲವಿತ್ತು. ಆದರೆ, ಅದರ ಕಲಿಕೆಗೆ ಅವಕಾಶವೇ ಸಿಕ್ಕಿರಲಿಲ್ಲ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಬ್ಯಾಡ್ಮಿಂಟನ್‌ ಆಡೋದನ್ನು ಕಲಿತುಕೊಂಡೆ. ಇದಕ್ಕೆ ನೆರವಾಗಿದ್ದು ನನ್ನ ಸ್ನೇಹಿತರು.

ಲಾಕ್‌ಡೌನ್‌ನಲ್ಲಿ ಸಾಕಷ್ಟು ಸಿನಿಮಾಗಳು, ವೆಬ್‌ ಸರಣಿಗಳನ್ನು ನೋಡಿದೆ. ನನ್ನ ಬರವಣಿಗೆಯ ಕೌಶಲವನ್ನು ವೃದ್ಧಿಸಿಕೊಂಡೆ. ಹೊಸ ಕಥೆಗಳನ್ನು ಬರೆದಿದ್ದೇನೆ. ಆ ಕಥೆಗಳಿಗೆ ದೃಶ್ಯರೂ‍ಪ ಕೊಡಬೇಕಿದೆ.

ಊರಿಗೆ ಹೋದಾಗ ಅಡುಗೆ ಮಾಡಲು ಅಮ್ಮನಿಗೆ ನೆರವಾಗುವುದು ನನ್ನ ಹವ್ಯಾಸ. ತರಕಾರಿ ಹಚ್ಚಿಕೊಡುತ್ತೇನೆ. ತೆಂಗಿನಕಾಯಿ ತುರಿದು ಕೊಡುತ್ತೇನೆ. ಆದರೆ, ಅಡುಗೆ ಮಾಡುವುದು ಬರುವುದಿಲ್ಲ.

ನಾನು ‘ಹೆಡ್‌ ಬುಷ್‌’ ಚಿತ್ರದಲ್ಲಿ ಬೆಂಗಳೂರಿನ ಡಾನ್‌ ಆಗಿದ್ದ ಎಂ.ಪಿ. ಜಯರಾಜ್ ಪಾತ್ರದಲ್ಲಿ ನಟಿಸುತ್ತಿರುವೆ. ಅವರ ಯಂಗ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆ ಇಮೇಜ್‌ಗೆ ತಕ್ಕಂತೆ ದೇಹದಾರ್ಢ್ಯಕ್ಕಾಗಿ ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸುತ್ತಿರುವೆ.
-ಧನಂಜಯ್‌,ನಟ

***

ಕೃಷಿಯ ಖುಷಿ
ಕೊರೊನಾದಿಂದಾಗಿ ಎಲ್ಲೂ ಹೋಗಲು ಸಾಧ್ಯವಿಲ್ಲದ, ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಗೆಳೆಯ ಹಾಗೂ ಕಬಡ್ಡಿ ಆಟಗಾರ ರಾಜಶೇಖರನ ತೋಟದಲ್ಲಿ ಕಾಲ ಕಳೆದೆ. ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಖುಷಿ ಕಂಡೆ. ಸಣ್ಣವನಿದ್ದಾಗ ಕೃಷಿ ಮಾಡುವುದನ್ನು ನೋಡಿದ್ದೆ, ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೆ ಕೂಡ. ಆದರೆ ನಿಜವಾಗಿ ಕೃಷಿ ಕಾರ್ಯದಲ್ಲಿ ತೊಡಗಲು ಸಮಯ ಸಿಕ್ಕಿದ್ದು ಲಾಕ್‌ಡೌನ್ ಸಂದರ್ಭದಲ್ಲಿ. ರಾಜಶೇಖರನ ತೋಟದಲ್ಲಿ ಪಾತಿ ಮಾಡಲು ಕಲಿತಿದ್ದನ್ನು ಮರೆಯಲಾರೆ.

ಬೆಂಗಳೂರು ಹೊರವಲಯದ ದೊಡ್ಡಾಲದಮರ ಸಮೀಪ ಮೂರು ಎಕರೆ ವಿಸ್ತಾರದ ತೋಟಕ್ಕೆ ಸುಮಾರು ಎರಡು ತಿಂಗಳು ಹೋಗಿದ್ದೆ. ಶಾರ್ಟ್ಸ್‌ ಮತ್ತು ಟಿ–ಶರ್ಟ್‌ ತೊಟ್ಟುಕೊಂಡು ಗೆಳೆಯನ ಜೊತೆಗೂಡಿ ತೆಂಗಿನಮರಗಳಿಗೆ ಪಾತಿ ಕಟ್ಟಿ, ಗೊಬ್ಬರ ಹಾಕಿ, ನೀರು ಹೋಗಲು ವ್ಯವಸ್ಥೆ ಮಾಡಿ ಸಂಭ್ರಮಿಸಿದೆ. ತೋಟದಲ್ಲೇ ಅಡುಗೆ ಮಾಡುತ್ತಿದ್ದೆವು. ಇದಕ್ಕಾಗಿ ಮಣ್ಣಿನ ಒಲೆ ತಯಾರಿಸಿದ್ದು ಕೂಡ ಹೊಸ ಅನುಭವ. ಇಟ್ಟಿಗೆ ಇರಿಸಿ, ಅದಕ್ಕೆ ಮಣ್ಣು ಮೆತ್ತಿ ಒಲೆ ಮಾಡಿ ಕಟ್ಟಿಗೆಯನ್ನು ಉರಿಸಿ ಬಗೆಬಗೆಯ ಅಡುಗೆ ತಯಾರಿಸುತ್ತಿದ್ದೆವು.
-ಬಿ.ಸಿ.ರಮೇಶ್, ಅಂತರರಾಷ್ಟ್ರೀಯ ಮಾಜಿ ಕಬಡ್ಡಿ ಪಟು

***

ತಂತ್ರಜ್ಞಾನದ ಅರಿವು ಮೂಡಿತು...
ಲಾಕ್‌ಡೌನ್‌ ಸಮಯದಲ್ಲಿ ಸ್ವತಂತ್ರವಾಗಿ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವುದನ್ನು ಎಲ್ಲರೂ ಕಲಿತಿದ್ದೇವೆ. ಕೆಲಸದವರ ಸಹಾಯವಿಲ್ಲದೇ ನಿರಂತರವಾಗಿ ಮನೆಗೆಲಸ ಮಾಡಿಕೊಳ್ಳಲು ಕಲಿತಿದ್ದು ಲಾಕ್‌ಡೌನ್‌ನಿಂದ. ಸಂಗೀತದ ವಿಷಯಕ್ಕೆ ಬಂದರೆ ನಾನು ಮೊದಲಿನಿಂದಲೂ ಸಂಗೀತದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೆ.

ತಂತ್ರಜ್ಞಾನದ ಬಗ್ಗೆ ನಾನು ಅಷ್ಟೊಂದು ಅರಿಯುವ ಮನಸ್ಸು ಮಾಡಿರಲಿಲ್ಲ. ಆದರೆ ಲಾಕ್‌ಡೌನ್‌ ಸಮಯದಲ್ಲಿ ಸ್ಟುಡಿಯೊಗೆ ಹೋಗಲು ಸಾಧ್ಯವಾಗದ ಕಾರಣಕಂಪೋಸಿಂಗ್‌, ರೆರ್ಕಾಡಿಂಗ್, ಎಡಿಟಿಂಗ್‌ನಂತಹ ತಂತ್ರಜ್ಞಾನದ ವಿಷಯಗಳನ್ನು ಸ್ನೇಹಿತರು ಹಾಗೂ ಆನ್‌ಲೈನ್ ಮೂಲಕ ನೋಡಿ ಕಲಿಯುತ್ತಿದ್ದೇನೆ. ನನಗೆ ಚಿತ್ರಕಲೆ ಮೇಲೆ ಆಸಕ್ತಿ ಇತ್ತು. ಮೊದಲೆಲ್ಲಾ ಚಿತ್ರ ಬಿಡಿಸುವುದು, ಪೇಂಟಿಂಗ್ ಮಾಡುತ್ತಿದ್ದೆ. ನಮ್ಮ ಕೆಲಸದ ನಡುವೆ ಅದಕ್ಕೆ ಸಮಯವಿರಲಿಲ್ಲ. ಹಾಗಾಗಿ ಬಿಡುವಿನ ವೇಳೆ ಚಿತ್ರಕಲೆಯ ಮೇಲೂ ಒಂದಷ್ಟು ಗಮನಹರಿಸಿದೆ.
-ಶಮಿತಾ ಮಲ್ನಾಡ್‌, ಗಾಯಕಿ

***

ಎಡಿಟಿಂಗ್‌ನ ಆರಂಭಿಕ ಪಾಠ
ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಕಲಿತ ಹತ್ತು ಪಾಠಗಳ ಬಗ್ಗೆ ಇಲ್ಲಿ ವಿವರಿಸಬಹುದು
* ವೃತ್ತಿಸಂಬಂಧಿ ಕೌಶಲಗಳಾದ ಎಡಿಟಿಂಗ್, ಕೀಬೋರ್ಡ್ ಇತ್ಯಾದಿ ಆರಂಭಿಕ ಪಾಠಗಳನ್ನು ಕಲಿತೆ
* ದುರ್ಜನರಿಂದ ಮಾತ್ರವಲ್ಲ; ಸಜ್ಜನರಿಂದಲೂ ಅಂತರ ಕಾಯ್ದುಕೊಳ್ಳಬೇಕು ಎಂಬ ಹೊಸ ಪಾಠ ಕಲಿತೆ!
* ‘ಸತ್ಯಾನ್ವೇಷಣೆ’ ಎಂಬ ದೊಡ್ಡ ದೊಡ್ಡ ಮಾತು ಹೇಳಿಕೊಂಡು ಅಲೆಮಾರಿಯಾಗಿ ಲೋಕ ಸುತ್ತುತ್ತಿದ್ದವನು ನನ್ನ ಪುಟ್ಟ ಮನೆಯೊಳಗೂ ಅದೆಷ್ಟು ಅಗಾಧ ಪ್ರೀತಿಯ, ಶಾಂತಿಯ ಮತ್ತು ನೆಮ್ಮದಿಯ ಲೋಕವಿದೆ ಎಂಬ ಒಳನೋಟದ ಪಾಠ ಕಲಿತೆ
* ಈ ಕೃತಜ್ಞರನ್ನು ಸ್ಮರಿಸಲು, ಮೆಚ್ಚಲು ಕಲಿತೆ. ಆ ಕೃತಘ್ಞರನ್ನು ಕ್ಷಮಿಸಲು, ಮರೆಯಲು ಕಲಿತೆ
* ತಾರುಣ್ಯದ ಕಡುಕಷ್ಟದ ದಿನಗಳ ದುಡಿತದಿಂದ ನಿದ್ರೆಯನ್ನು ಬಹುಕಾಲ ನೀಗಿಕೊಂಡಿದ್ದವನು ಮಟಮಟ ಮಧ್ಯಾಹ್ನವೇ ಮಲಗುವುದನ್ನು ಕಲಿತೆ
* ಜನಜಂಗುಳಿ ಇಲ್ಲದೆ ಸಾಹಿತ್ಯ, ಸಂಗೀತ ಕೊನೆಗೆ ಸಿನಿಮಾವನ್ನೂ ಏಕಾಂಗಿಯಾಗಿ ನಿರುದ್ದಿಶ್ಯವಾಗಿ ಧ್ಯಾನಿಸಬಹುದು ಎಂದು ಅರಿತೆ
* ಗುಂಪುಗದ್ದಲವಿಲ್ಲದೆಯೂ, ಟಿ.ವಿಯಲ್ಲಿ ಠೀವಿಯಿಂದ ಕಾಣಿಸದೆಯೂ ನೊಂದವರಿಗೆ ನೆರವಾಗಬಹುದು ಎಂದು ಅರಿತೆ


* ನಾನು ಸರಳ ಮದುವೆಯಾದವ ಮತ್ತು ಸರಳ ಮದುವೆಗಳನ್ನು ಬೋಧಿಸಿದವ. ಆದರೆ, ಅನಿವಾರ್ಯವಾಗಿ ಗೆಳೆಯರ, ಬಂಧುಬಾಂಧವರ ದುಬಾರಿ ಮದುವೆಗಳಿಗೆ/ ಖಾಸಗಿ ಸಮಾರಂಭಗಳಿಗೆ ಹೋಗಬೇಕಾಗುತ್ತಿತ್ತು. ಈ ಅನಿವಾರ್ಯತೆ ತಪ್ಪಿಸಿದ ಕೋವಿಡ್ ಒಲ್ಲದ್ದನ್ನು ಒಲ್ಲೆ ಎನ್ನುವ ಶಾಶ್ವತ ಪಾಠ ಕಲಿಸಿತು
* ಹಳೆಯ ಡೈರಿ/ಆಲ್ಬಂ ತಿರುವಿ ಹಾಕಿ ಅರ್ಹರನ್ನು ಗುರುತಿಸಿ ಕರೆ ಮಾಡಿದೆ. ಎಂದೋ ಆಗಿರುವ ತಪ್ಪುಗಳಿಗೆ ಸಾರಿ ಕೇಳಿದೆ
* ಆಗಸ್ಟ್ 15 ನನ್ನ ಜನ್ಮ ದಿನ. ಈ ಸಲ ವಿದ್ಯಾರ್ಥಿಗಳಿಗೆ ಮೂರು ತಾಸು ಆನ್‌ಲೈನ್ ಉಚಿತ ಪಾಠ ಹೇಳಿದೆ
-ನಾಗತಿಹಳ್ಳಿ ಚಂದ್ರಶೇಖರ್‌,ಚಲನಚಿತ್ರ ನಿರ್ದೇಶಕ ಮತ್ತು ಲೇಖಕ

***

ಹೊಸ ರೆಸಿಪಿಯ ಸಂಭ್ರಮ
ನಾನು ಅಡುಗೆ ಮಾಡುತ್ತಿರಲಿಲ್ಲ. ಮಾಡುವ ಪ್ರಯತ್ನ ಕೂಡ ಮಾಡಿರಲಿಲ್ಲ.ಕೊರೊನಾ ಲಾಕ್‌ಡೌನ್‌ನಲ್ಲಿ ಸಿಕ್ಕಿದ ಸಮಯವನ್ನು ಅಡುಗೆ ಕಲಿತುಕೊಳ್ಳಲು ಬಳಸಿಕೊಂಡೆ. ತುಂಬಾ ರುಚಿಕರ ರೆಸಿಪಿಯನ್ನು ಕಲಿತೆ. ಅದರ ಹೆಸರು ‘ಸೋಯಾ ಚಂಕ್ಸ್’. ಇದು ಚೀನಿ ರೆಸಿಪಿ. ನನ್ನ ಸ್ನೇಹಿತೆಯರು ‘ಈ ರೆಸಿಪಿ ತುಂಬಾ ಚೆನ್ನಾಗಿದೆ. ಒಮ್ಮೆ ಟ್ರೈ ಮಾಡಿ ನೋಡು’ ಎಂದಿದ್ದರು.ಈ ಬಾರಿ ಅದನ್ನು ಸಾಧಿಸಿಬಿಟ್ಟೆ.

ಮೊದಲ ಬಾರಿಗೆ ನಾನ್‌ವೆಜ್‌ ರೆಸಿಪಿ ಮಾಡುವುದು ಕಷ್ಟವಾಗುತ್ತದೆ ಎಂದುಕೊಂಡು,ನನ್ನ ಸ್ನೇಹಿತೆಯರು ಹೇಳಿಕೊಟ್ಟಿದ್ದ ಕೆಲವು ರೆಸಿಪಿಗಳನ್ನು ಪ್ರಯೋಗ ಮಾಡಿ ನೋಡಿದೆ, ತುಂಬಾ ಚೆನ್ನಾಗಿ ಬಂತು. ರೆಸಿಪಿಯ ರುಚಿ ನೋಡಿ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿಂದರು. ಅದಂತೂ ತುಂಬಾ ಖುಷಿ ನೀಡಿತು. ಈಗ ಯಾರಾದರೂ ಸ್ಪೆಷಲ್‌ ರೆಸಿಪಿ ಕೇಳಿದರೆ ಸೋಯಾ ಚಂಕ್ಸ್ ಮಾಡಲೇ ಎನ್ನುವೆ.

ಪುಸ್ತಕಗಳನ್ನು ಓದುವ ಹವ್ಯಾಸ ಕೂಡ ಇರಲಿಲ್ಲ. ಲಾಕ್‌ಡೌನ್‌ ಅವಧಿ ನನ್ನ ಮನಸ್ಸು ಪುಸ್ತಕಗಳತ್ತ ಹೊರಳುವಂತೆ ಮಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಅರಿಯುವುದನ್ನು ಕಲಿತೆ.
-ರಚಿತಾ ರಾಮ್,ನಟಿ

***

ಮನೆಯಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡುವುದು ಕಲಿತೆ
ಲಾಕ್‌ಡೌನ್‌ ಸಮಯದಲ್ಲಿ ಹೊಸತನ್ನು ಕಲಿತೆ ಎನ್ನುವುದಕ್ಕಿಂತ ಕಲಿತದ್ದನ್ನು ವ್ಯವಸ್ಥಿತವಾಗಿ ಮಾಡುವುದನ್ನು ಕಲಿತೆ. ಮೊದಲೆಲ್ಲಾ ಮನೆಯ ಕೆಲಸಗಳನ್ನೆಲ್ಲಾ ಸರಿಯಾದ ಸಮಯಕ್ಕೆ ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಲಾಕ್‌ಡೌನ್ ಅವಧಿ ವ್ಯವಸ್ಥಿತವಾಗಿ ಮಾಡುವುದನ್ನು ಕಲಿಸಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗುವುದನ್ನು ಕಲಿತೆ.

ಆ ಮೂಲಕ ಪ್ರಪಂಚದಾದ್ಯಂತ ನನಗೆ ಎಷ್ಟೊಂದು ಅಭಿಮಾನಿಗಳಿದ್ದಾರೆ, ಎಷ್ಟೊಂದು ಪ್ರೀತಿ ನೀಡುತ್ತಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗಿತ್ತು. ಒಬ್ಬ ಸಂಗೀತಗಾರ್ತಿಯಾಗಿ ನನ್ನನ್ನು ನಾನು ಅವಲೋಕನ ಮಾಡಿಕೊಂಡು ಸಂಗೀತದಲ್ಲಿ ಇನ್ನಷ್ಟು ಹೊಸತನ್ನು ಕಲಿಯಲು ಸಾಧ್ಯವಾಗಿದ್ದು ಈ ಲಾಕ್‌ಡೌನ್‌ನಿಂದ.
-ಸಂಗೀತ ಕಟ್ಟಿ, ಗಾಯಕಿ

________________________________________________

ನಿರೂಪಣೆ: ಕೆ.ಎಚ್‌.ಓಬಳೇಶ್‌, ಕೆ.ಎಂ.ಸಂತೋಷ್‌ ಕುಮಾರ್‌, ವಿಕ್ರಂ ಕಾಂತಿಕೆರೆ, ಜಿ.ಬಿ.ನಾಗರಾಜ್‌, ರೇಷ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT