ಸೋಮವಾರ, ಫೆಬ್ರವರಿ 24, 2020
19 °C

‘ಮದು ಮಗಳ’ ಶತದಿನೋತ್ಸವ

ದಿಲಾವರ್‌ ರಾಮದುರ್ಗ Updated:

ಅಕ್ಷರ ಗಾತ್ರ : | |

prajavani

ಮಲೆನಾಡಿನ ಪರಿಸರದಲ್ಲಿ ಅರಳುವ ಕುವೆಂಪು ಅವರ ಮಹಾಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಕಥೆಯಲ್ಲಿ ಅಲ್ಲಿನ ಜನಜೀವನದ ಪ್ರೀತಿ, ಪ್ರೇಮ, ಕಾಮ, ಮೋಹ, ಜಾತಿ... ಬದುಕಿನ ಎಲ್ಲದರ ದರ್ಶನವಿದೆ. ಈ ಕಾದಂಬರಿಯನ್ನು ರಂಗದ (ರಂಗರೂಪ: ಕೆ.ವೈ. ನಾರಾಯಣಸ್ವಾಮಿ) ಮೇಲೆ ಯಶಸ್ವಿಯಾಗಿ ಪ್ರಸ್ತುತಪಡಿಸಿದವರು ಪ್ರಸಿದ್ಧ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ. ಈ ಪ್ರಯೋಗಕ್ಕೀಗ ‘ಶತದಿನೋತ್ಸವ’ ಸಂಭ್ರಮ.

ಫೆ.14ರಂದು ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್‌ ಡೇ)ದಂದೇ ‘ಮದು ಮಗಳು’ಗೆ ಶತದಿನ. ಇದೂ ಕೂಡ ಮಹಾನ್‌ ಪ್ರೇಮಕಾವ್ಯ. ಇಲ್ಲಿಯೂ ಅಪ್ಪಟ ಪ್ರೀತಿಯ ಪಯಣವಿದೆ. ಜೊತೆಯಲ್ಲೇ ಲಸ್ಟ್‌ (ವ್ಯಾಮೋಹ) ಪಯಣವೂ ಇದೆ. ಇವೆರಡು ಪಯಣಗಳು ಕಾಣುವ ಅಂತಿಮ ಫಲಿತಾಂಶ ಎಂದರೆ ಪ್ರೇಮದ ಮಹತ್ವವನ್ನು ಒಂದು ಎತ್ತರಕ್ಕೆ ತಂದು ನಿಲ್ಲಿಸುವುದು. ಇದು ‘ಮಲೆಗಳಲ್ಲಿ ಮದುಮಗಳು’ ಪ್ರಯೋಗದ ನಿಜವಾದ ಜೀವದ್ರವ್ಯ.

ಕುವೆಂಪು ಅವರ ಕೆಲ ನಾಟಕಗಳನ್ನು ಹತ್ತಾರು ತಂಡಗಳು ಹಲವಾರು ಬಾರಿ ಆಡಿದ್ದಿದೆ. ಆದರೆ, ‘ಮದುಮಗಳು’ ಮೂಲತಃ ಕಾದಂಬರಿಯಾದರೂ ಅದೀಗ ಅದ್ಭುತ ನಾಟಕವಾಗಿಯೇ ಜನರಿಗೆ ಹತ್ತಿರವಾಗಿದೆ! ಅದಕ್ಕೂ ಮುಖ್ಯವಾಗಿ ಈ ಪ್ರಯೋಗ ಕುವೆಂಪು ಅವರನ್ನು ಈ ತಲೆಮಾರಿನ ಯುವಪೀಳಿಗೆಗೆ ಪರಿಚಯಿಸಿದ ಪರಿ ಮಾತ್ರ ಅದ್ಭುತ, ಅರ್ಥಪೂರ್ಣ.

ಸಿ. ಬಸವಲಿಂಗಯ್ಯ ಅವರ ಒಟ್ಟು ರಂಗಸಾಹಸಕ್ಕೆ ತಾತ್ವಿಕ ನೆಲೆಗಟ್ಟಿದೆ. ಅವರು ದೇವನೂರ ಮಹಾದೇವ ಅವರ 'ಕುಸುಮಬಾಲೆ’ ಕೃತಿಯ ಆಶಯ ಮತ್ತು ಲೇಖಕರನ್ನು ಒಟ್ಟೊಟ್ಟಿಗೆ ರಂಗಮುಖೇನ ಜನಮಾನಸಕ್ಕೆ ಪರಿಣಾಮಕಾರಿಯಾಗಿ ತಲುಪಿಸಿದ್ದು ಕೂಡ ಗಮನಾರ್ಹವೇ. ಗಾಂಧಿ, ಟಿಪ್ಪು ವ್ಯಕ್ತಿತ್ವಗಳನ್ನೂ ರಂಗಮುಖೇನ ಅರ್ಥಪೂರ್ಣವಾಗಿ ಬಸವಲಿಂಗಯ್ಯ ಕಟ್ಟಿಕೊಟ್ಟಿದ್ದಾರೆ. ಅವರು ಕೈಗೆತ್ತಿಕೊಳ್ಳುವ ವಿಷಯಗಳೇ ಅವರೊಳಗಿನ ಬಹುತ್ವದ, ಸಾಮರಸ್ಯದ ಮಾನವೀಯ ಸಂವೇದನೆಗಳನ್ನು ಸ್ಪಷ್ಟಪಡಿಸುತ್ತವೆ.

ಮಲೆಗಳಲ್ಲಿ ಮದುಮಗಳು ಕೃತಿಯನ್ನು ರಂಗಕ್ಕಿಳಿಸುವ ರಂಗಸಾಹಸದ ಬಗ್ಗೆ ಮೊದಲಿಗೆ ರಂಗಾಸಕ್ತರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಅದನ್ನು ಬಸವಲಿಂಗಯ್ಯ ಅವರು ಹುಸಿಗೊಳಿಸಲಿಲ್ಲ. ಅದಕ್ಕೆಂದೇ ಮಲ್ಲತ್ತಹಳ್ಳಿಯ ಕಲಾಗ್ರಾಮದ ಕುರುಚಲು ಕಾಡನ್ನು ರಂಗಕಾಡನ್ನಾಗಿಸಿದರು. ಕಾಡಿನ ದಟ್ಟ ಅನುಭವವನ್ನು ರಂಗದಲ್ಲಿ ತಂದರು. ಅಲ್ಲಿಗೆ ಜನ ರಾತ್ರಿ ಹಗಲು ಎನ್ನದೇ ಎಡತಾಕುವಂತೆ ಮಾಡಿದರು.

ಅಹೋರಾತ್ರಿ ಒಂಬತ್ತು ಗಂಟೆಗಳ ಈ ನಾಟಕ ವೀಕ್ಷಿಸಿದ, ಈಗಲೂ ವೀಕ್ಷಿಸುತ್ತಿರುವ ಪ್ರೇಕ್ಷಕರು ಬಹುತೇಕ ಹೊಸಬರು. ಸಾಹಿತ್ಯ ಕೃತಿಯನ್ನು ಬಹುಶಃ ಅಪರೂಪಕ್ಕೆ ಅಂತ ಕೆಲವೇ ಜನ ಓದಿದವರು ಇರಬಹುದು. ಬಹುತೇಕ ಐಟಿ/ಬಿಟಿ, ಎಂಜಿನಿಯರಿಂಗ್‌, ಮೆಡಿಕಲ್‌, ಮ್ಯಾನೇಜ್‌ಮೆಂಟ್‌... ಮತ್ತಿತರ ಆಧುನಿಕ ಶಿಕ್ಷಣದಲ್ಲಿ ಮುಳುಗಿಹೋದಂತಿರುವ ಈಗಿನ ಜನರೇಶನ್‌ ಅನ್ನು ಸೆಳೆದಿದ್ದು ‘ಮಲೆಗಳಲ್ಲಿ ಮದುಮಗಳು’ ರಂಗ ಸಾಹಸದ ಬಹುದೊಡ್ಡ ಸಾಧನೆ. ಕೆಲವರು ಕುಟುಂಬ ಸಮೇತ ಹಾಸುಗೆ, ದಿಂಬು, ಊಟದ ಬುತ್ತಿ ಹಿಡಿದು ನಾಟಕ ಸವಿಯಲು ಬಂದಿದ್ದು ಒಂದು ಕಾಲದ ರಂಗವೈಭವವನ್ನು ಕಣ್ಮುಂದೆ ನಿಲ್ಲಿಸಿದೆ. ವೀಕೆಂಡ್‌ ಶೋಗಳಿಗೆ ಸೇರುತ್ತಿದ್ದ ಸಾವಿರದ ಮುನ್ನೂರಕ್ಕೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕ ಸಮೂಹ ನೋಡಿದಾಗ ‘ರಂಗಭೂಮಿಯ ಸ್ವರ್ಣಯುಗ’ ಮತ್ತೆ ಶುರುವಾದಂತೆ ಭಾಸವಾಗುತ್ತದೆ.

ಮದುಮಗಳು ಮತ್ತು ವ್ಯಾಲೆಂಟೈನ್ಸ್‌ ಡೇ

ಕುವೆಂಪು ಅವರ ಈ ಮಹಾಕಾದಂಬರಿಯಲ್ಲಿ ಕೆಲವು ಮುಖ್ಯ ಪಯಣಗಳಿವೆ. ಅವುಗಳಲ್ಲಿ ಪ್ರೀತಿ ಮತ್ತು ವ್ಯಾಮೋಹ (ಲವ್‌ ಅಂಡ್‌ ಲಸ್ಟ್‌) ಎರಡು ಪಯಣಗಳು ತುಂಬ ಸೆಳೆಯುವಂಥವು. ಇದರಲ್ಲಿ ಬರುವ ಪ್ರಮುಖ ಪಾತ್ರಗಳಾದ ಗುತ್ತಿ ಮತ್ತು ತಿಮ್ಮಿ ಇವರ ಜೊತೆಯಲ್ಲಿಯೇ ಮುಕುಂದ ಮತ್ತು ಚಿನ್ನಮ್ಮ ಜೋಡಿಗಳ ಪ್ರೀತಿ ಪಯಣ ತುಂಬ ನವಿರಾಗಿದೆ. ಅಷ್ಟೇ ಗಾಢ. ಗಮನಾರ್ಹ ಅಂಶವೆಂದರೆ ಗುತ್ತಿ–ತಿಮ್ಮಿ ಕೆಳವರ್ಗದ ಜೋಡಿಯಾದರೆ ಮುಕುಂದ–ಚಿನ್ನಮ್ಮ ಮೇಲ್ವರ್ಗದ ಜೋಡಿ. ಎರಡೂ ಜೋಡಿಗಳ ಪ್ರೀತಿ ಪಯಣ ಒಂದು ಎತ್ತರಕ್ಕೆ ಏರುತ್ತದೆ. ಕಾದಂಬರಿಯಲ್ಲಿ ಹುಲಿಕಲ್ಲು ಗುಡ್ಡದ ನೆತ್ತಿಯ ಮೇಲೆ ಈ ಜೋಡಿಗಳನ್ನು ಗುತ್ತಿಯ ನಾಯಿ ಹುಲಿಯಾ ಜೊತೆ ನಿಲ್ಲಿಸುವ ಕುವೆಂಪು ಅವರ ವೈಚಾರಿಕವೂ ಮತ್ತು ಮಾನವೀಯವೂ ಆದ ಮನೋಧರ್ಮವೇ  ಸೊಗಸಾಗಿದೆ. ಪ್ರೀತಿಯ ಎತ್ತರದಲ್ಲಿ ಎಲ್ಲ ಜಾತಿ, ಧರ್ಮ, ಅಂತಸ್ತುಗಳು ಸಮನಾಗಿ ನಿಲ್ಲುತ್ತವೆ ಎನ್ನುವ ಸತ್ಯ ಅನನ್ಯ. ನಿರ್ದೇಶಕ ಸಿ ಬಸವಲಿಂಗಯ್ಯ ಅವರು ಕಾದಂಬರಿಯ ಆತ್ಮವನ್ನು ರಂಗದ ಮೇಲೆ ಜೀವಂತಗೊಳಿಸಿದ್ದು ಪ್ರೇಕ್ಷಕರ ಪಾಲಿಗೆ ಅವಿಸ್ಮರಣೀಯ.

ಮತ್ತೊಂದು ಪಯಣವಿದೆ. ಅದು ಲಸ್ಟ್‌ನಿಂದ ತುಂಬಿರುವಂಥದು. ಇಲ್ಲಿ ಅನಾಥ ಪ್ರಜ್ಞೆಯನ್ನು ಸೂಸುವ ಅಂತಕ್ಕ ಶೆಟ್ಟಿ ಮತ್ತು ಕಾವೇರಿ ಎನ್ನುವ ತಾಯಿ ಮಗಳು ಪಾತ್ರಗಳಿವೆ. ಇವರ ಮೇಲೆ ಈ ಲಸ್ಟ್‌ ನಡೆಸುವ ದಾಳಿ ಹೃದಯ ಹಿಂಡುವಂಥದು. ಇವರಿಗೆ ಮಲೆನಾಡ ಹಿರೀಕ ಸುಬ್ಬಣ್ಣ ತೋರುವ ವಾತ್ಸಲ್ಯ ತುಂಬ ಸಹಜ ಮಾನವೀಯ ನೆಲೆಯದ್ದು. ಆದರೆ ಅಂತಕ್ಕನ ಮಗಳು ಕಾವೇರಿಯ ಮೇಲೆ ಕಣ್ಣು ಹಾಕುವ ಸುಬ್ಬಣ್ಣನ ಕುಲಬಾಂಧವ ದೇವಯ್ಯ ಗೌಡನ ಮನಃಸ್ಥಿತಿ ಲಸ್ಟ್‌ಮಯ. ಈ ಇಬ್ಬರ ಪ್ರಣಯವನ್ನು ಕಂಡು ತಾನೂ ಒಮ್ಮೆ ಇವಳ ಸೇರಬೇಕೆನ್ನುವ ಮತ್ತೊಂದು ಪಾತ್ರ ಶೇರೇಗಾರ ಚಿಂಕ್ರ ಹಾಕುವ ಬಲೆಗೆ ಬೀಳುವ ಕಾವೇರಿ ಕೊನೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬಾವಿಗೆ ಹಾರುತ್ತಾಳೆ. ಸ್ವಭಾವದಿಂದ ಕೊಂಚ ಫ್ಲರ್ಟ್‌ ಅನ್ನಿಸುವ ಕಾವೇರಿಗೆ ದೇವಯ್ಯಗೌಡ ಆಗಲೇ ಮದುವೆಯಾಗಿದ್ದ ವಿಷಯ ತಿಳಿದಿತ್ತು. ಚಿಂಕ್ರ ಮತ್ತು ದೇವಯ್ಯಗೌಡರ ಈ ಲಸ್ಟ್‌ಗೆ ಕಾವೇರಿ ಬಲಿಪಶುವಾಗುವ ಪಯಣ ಕಾಣುವ ಅಂತ್ಯ ಮಾತ್ರ ದುರಂತಮಯವಾಗಿದೆ. ಇದೇ ಸೆಳಕಿನಲ್ಲಿ ಬರುವ ಸ್ತ್ರೀ ಲಂಪಟ ವೆಂಕಣ್ಣಗೌಡನ ಪಾತ್ರದ್ದೂ ಅಷ್ಟೇ ಟ್ರಾಜಿಡಿ.

ಪ್ರೀತಿ ಪಯಣದಲ್ಲಿ ನಂಬಿಕೆ ಇಟ್ಟವರ ಪಯಣದ ಅಂತಿಮ ಫಲಿತಾಂಶ ಸುಖ, ಸಾರ್ಥಕ್ಯದ ಎತ್ತರವಾದರೆ, ಲಸ್ಟ್‌ ಪಯಣ ಮಾತ್ರ ದುರಂತದಲ್ಲೇ ಕೊನೆಗೊಳ್ಳುವುದೆಂಬ ಸಂದೇಶ ಈ ಕಾಲದ ಪ್ರೇಮಿಗಳ ಎದೆಯಲ್ಲಿ ಉಳಿಯಲಿದೆ. ನೂರರ ಸಂಭ್ರಮದಲ್ಲಿರುವ ‘ಮಲೆಗಳಲ್ಲಿ ಮದುಮಗಳು’ ಪ್ರೇಮಿಗಳ ದಿನದಂದು ನೀಡುವ ಸಂದೇಶ ಪ್ರೇಮದ ಎತ್ತರವನ್ನು ತೋರಲಿದೆ.

ಎಲ್ಲರ ‘ವ್ಯಾಲೆಂಟೈನ್ಸ್‌ ಡೇ’ ಅರ್ಥಪೂರ್ಣವಾಗಿರಲಿ.

ತಮ್ಮ ಸಹಜ ಅಭಿನಯದಿಂದ ತುಂಬ ಗಮನ ಸೆಳೆವ ಐತ ಪಾತ್ರದ ಸ್ವಾಮಿ ಮತ್ತು ಪೀಂಚಲು ಪಾತ್ರದ ಜಲಜ

ಕಲಾಮನಸುಗಳಿಗೆ ಸಲಾಂ.

ಕೊಟ್ಟಷ್ಟು ದುಡ್ಡಲ್ಲಿ ಖುಷಿಯಾಗಿ ಒಂದು ಸಂಸ್ಕೃತಿಯ ಸಂಕಥನವನ್ನು ರಂಗದ ಮೇಲೆ ಮೂಡಿಸಿದ ತಂಡದ ಎಲ್ಲ ಕಲಾಮನಸುಗಳಿಗೆ ಸಲಾಂ. ವಿಶೇಷವಾಗಿ ನಾಟಕದ ಪಾತ್ರಗಳನ್ನು ನಿರ್ವಹಿಸಿದ ಹೆಣ್ಣು ಮಕ್ಕಳು ತಿಂಗಳು ಕಾಲ ತಮ್ಮೂರು, ಮನೆ ಬಿಟ್ಟು ಬಂದಿದ್ದು, ತಮಗೆ ಪರಿಚಿತವಲ್ಲದ ಸಂಸ್ಕೃತಿ, ಜನಾಂಗ ಮತ್ತು ಪರಿಸರವನ್ನು ರಂಗದ ಮೇಲೆ ಬಾಳಿ ಪ್ರೇಕ್ಷಕರಲ್ಲೂ ಬಿತ್ತಿದ್ದು ಅರ್ಥಪೂರ್ಣ.

ತಮ್ಮದಲ್ಲದ ಭಾಷೆ ಮತ್ತು ಮಲೆನಾಡ ಪರಿಸರವನ್ನು ಇವರೆಲ್ಲ ರಂಗದ ಮೇಲೆ ತುಂಬ ಸೊಗಸಾಗಿ ಬಾಳಿದರು. ತಮ್ಮದೇ ಬಾಳು ಎಂಬಂತೆ. ದೇಶದ ರಂಗಭೂಮಿ ಇತಿಹಾಸದಲ್ಲಿ ಇದೊಂದು ಅಪರೂಪದ ಪ್ರಯೋಗ. ನೆಲದ ಒಂದು ಮಹಾಕಾದಂಬರಿಯನ್ನು ಹೀಗೆ ಭಿನ್ನವಾಗಿ ಎನ್ವಿರಾನ್ಮೆಂಟ್‌ ಥಿಯೇಟರ್‌ ಮೂಲಕ ಮರು ಓದಿಗೊಳಪಡಿಸಿದ್ದು ಗಮನಾರ್ಹ.

ಗುತ್ತಿ ಪಾತ್ರದ ರಾಕೇಶ್‌

ಗುತ್ತಿ ಪಾತ್ರದಲ್ಲಿ ರಾಕೇಶ್‌ ದಳವಾಯಿ ತನ್ಮಯತೆ ಮತ್ತು ವೃತ್ತಿಪರ ನಿಲುವು ಅತ್ಯಂತ ಢಾಳಾಗಿ ಕಾಣಿಸುವಂಥದು. ತನ್ನ ಆತ್ಮಸಂಗಾತದಂತಿದ್ದ ನಾಯಿ ಹುಲಿಯಾನನ್ನು ನದಿಯ ಸೆಳವಲ್ಲಿ ಕಳೆದುಕೊಂಡ ಸಂದರ್ಭವನ್ನು ಎದುರಿಸಿದ ಗುತ್ತಿ ಪರಿ ಮನಮಿಡಿಯುವಂಥದು. ಬೆಳಗಿನ ಚುಮು ಚುಮು ಚಳಿಯಲ್ಲಿ ಆ ದೃಶ್ಯವನ್ನು ಪರಿಣಾಮಕಾರಿಯಾಗಿಸಲು ಗುತ್ತಿ ಮತ್ತು ನಾಯಿ ಹುಲಿಯಾ (ಅನೀಲ್‌) ಅಕ್ಷರಶಃ ನೀರಿಗೆ ಹಾರುವುದು ಕಲಾವಿದರ ಬದ್ಧತೆಗೊಂದು ಸಾಕ್ಷಿ.

ಹುಲಿಯಾ ಆಗಿ ಅನಿಲ್‌

ನಾಯಿ ಹುಲಿಯಾ ಪಾತ್ರವನ್ನು ಮಾಡುವುದು ನಿಜವಾಗಿಯೂ ಸವಾಲಿನ ಕೆಲಸ ಎನ್ನುವುದನ್ನು ಅನೀಲ್‌ ನಿರ್ವಹಿಸಿದ ಪರಿಯಲ್ಲೇ ಸ್ಪಷ್ಟವಾಗುವಂಐದು. ಮೈಸೂರಿನ ಈ ಯುವಕ ಸಾವಿರಾರು ಪ್ರೇಕ್ಷಕರ ಹೃದಯದಲ್ಲಿ ಹುಲಿಯಾ ಆಗಿ ಶಾಶ್ವತ ನೆಲೆನಿಂತ. ಹುಲಿಯಾ ರಂಗಕ್ಕೆ ಬಂದಾಗಲೆಲ್ಲ ಪ್ರೇಕ್ಷಕರು ತೋರುತ್ತಿದ್ದ ಸ್ಪಂದನೆ, ಅತ್ಯಂತ ಭಾವನಾತ್ಮಕ ಸನ್ನಿವೇಶದಲ್ಲಿ ಹುಲಿಯಾ ಸ್ಫುರಿಸುತ್ತಿದ್ದ ಭಾವನೆಗಳಿಗೆ ಪ್ರೇಕ್ಷಕ ಮೂಕವಿಸ್ಮತರಾಗುತ್ತಿದ್ದ ಪರಿ ಮನೋಜ್ಞ. 

ಪ್ರಮೋದ್‌ ಶಿಗ್ಗಾಂವ್‌

ಮಲೆನಾಡಿನ ಪರಿಸರದಲ್ಲಿ ಜನಸಂಸ್ಕೃತಿ ಅದರಲ್ಲೂ ಕುವೆಂಪು ಕಾಲದ ಆ ಜನಜೀವನದ ವೇಷ ಭೂಷಣಗಳು, ಬಣ್ಣಗಳನ್ನು ಕಲಾನಿರ್ದೇಶಕ ಪ್ರಮೋದ್‌ ಶಿಗ್ಗಾಂವ್‌ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಯೋಗದಲ್ಲಿ ಬಳಕೆಯಾದ ರಂಗಪರಿಕರಗಳು, ವಸ್ತ್ರ ವಿನ್ಯಾಸ ಇಡೀ ಪ್ರಯೋಗದ ಹೈಲೈಟ್‌. ಸಂಸ್ಕೃತಿಯ ಒಂದೊಂದು ಸೂಕ್ಷ್ಮವನ್ನು ಅವರು ಆಳವಾಗಿ ಅಧ್ಯಯನ, ಸಂಶೋಧನೆ ಮಾಡಿ ಪರಿಕರ ಮತ್ತು ವಸ್ತ್ರ ವಿನ್ಯಾಸ ರೂಪಿಸಿದ್ದು ಅವರ ಕಲಾವಂತಿಕೆಯನ್ನು ಎತ್ತಿ ತೋರಿಸಿದ್ದು ಗಮನಾರ್ಹ. ರಂಗಭೂಮಿಯಲ್ಲಿ ವೃತ್ತಿಪರತೆಗೆ ಮನ್ನಣೆ ದಕ್ಕಬೇಕು ಎನ್ನುವ ತುಡಿತದ ಪ್ರಮೋದ್‌ ಶಿಗ್ಗಾಂವ್‌ ನಿರ್ದೇಶಕರೂ ಹೌದು. 

ರಾಮಕೃಷ್ಣ ಬೆಳ್ತೂರ್‌

ಸದ್ಯದ ರಂಗಭೂಮಿಯ ಚಟುವಟಿಕೆಗಳಲ್ಲಿ ಬಹುತೇಕ ಪ್ರಯೋಗಗಳಿಗೆ ಪ್ರಸಾಧನ ಸೇವೆ ಅವರದೇ ಎನ್ನುವಷ್ಟರಮಟ್ಟಿಗೆ ಬ್ಯೂಸಿ ಆಗಿರುವವರು ಮೇಕಪ್‌ ಕಲಾವಿದ ರಾಮಕೃಷ್ಣ ಬೆಳ್ತೂರ್‌. ‘ಮಲೆಗಳಲ್ಲಿ ಮದುಮಗಳು’ ಪ್ರಯೋಗದ ಪ್ರಸಾಧನ ಸೇವೆ ಇವರದೇ. ಒಂದೊಂದು ಪಾತ್ರಗಳನ್ನು ಅವರು ಕುವೆಂಪು ಕಾದಂಬರಿಯಲ್ಲಿ ಕಟ್ಟಿಕೊಟ್ಟ ಮಲೆಗಳ ಜನಜೀವನ ನೆನಪಿಸುವಂತೆ ಮೇಕಪ್‌ನಲ್ಲಿ ಬೆಳ್ತೂರ್‌ ಕಟ್ಟಿಕೊಟ್ಟಿದ್ದಾರೆ. ಪ್ರಯೋಗದ ಅವಿಸ್ಮರಣೀಯ ಅನುಭವಕ್ಕೆ ಇದೂ ಒಂದು ಅನುಪಮ ಕಾಣಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)