ಶುಕ್ರವಾರ, ಅಕ್ಟೋಬರ್ 18, 2019
24 °C

ಕೃಷ್ಣಪ್ರಸಾದ್ ಬರಹ | ಬಹುತೇಕ ಮಾಧ್ಯಮ ಸಂಸ್ಥೆಗಳು ಸುದ್ದಿಮನೆಯನ್ನು ಟೊಳ್ಳಾಗಿಸಿವೆ

Published:
Updated:
Prajavani

ಇದು ನಡೆದಿದ್ದು ಹತ್ತು ವರ್ಷಗಳ ಹಿಂದೆ. ಬೆಂಗಳೂರಿಗೆ ಸಮೀಪದ ವಸತಿ ಶಾಲೆಯೊಂದರ ಸಮಾರಂಭದಲ್ಲಿ. ದೊಡ್ಡ ಪತ್ರಿಕಾ ಸಮೂಹದ ಮುಖ್ಯಸ್ಥರೊಬ್ಬರು ಭಾರತದ ಮೊದಲ ಖಾಸಗಿ ಸುದ್ದಿವಾಹಿನಿಯನ್ನು ಆರಂಭಿಸಿದ್ದ ವ್ಯಕ್ತಿಯ ಬಳಿ ಪ್ರಶ್ನೆಯೊಂದನ್ನು ಕೇಳಿದರು. ‘ನಮ್ಮ ಪತ್ರಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎನ್ನುವುದು ಆ ಪ್ರಶ್ನೆ. ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ, ತಮ್ಮ ಪತ್ರಿಕೆಯನ್ನು ಎತ್ತರಕ್ಕೆ ಒಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಅವರು. ಟಿ.ವಿ. ವಾಹಿನಿ ಆರಂಭಿಸಿದವರಿಂದ ಉತ್ತರ ಬರುವ ಮೊದಲೇ ಅವರು, ‘ನನ್ನ ಪತ್ರಿಕೆ ಗ್ರೇಟ್ ಎಂದು ಯಾರಾದರೂ ನನ್ನಲ್ಲಿ ಹೇಳಿದರೆ, ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂದು ನಾನು ತಕ್ಷಣ ತೀರ್ಮಾನಿಸುತ್ತೇನೆ’ ಎಂದರು!

1991ರ ನಂತರ ಪತ್ರಿಕೋದ್ಯಮ ಹೇಗೆ ಬದಲಾಯಿತು ಎಂಬುದನ್ನು ಇಬ್ಬರೂ ತಿಂಡಿ ತಿನ್ನುತ್ತ ಚರ್ಚಿಸಿದರು.

ಉದಾರೀಕರಣ ಶುರುವಾದ ನಂತರದಲ್ಲಿ ಬಂಡವಾಳ ಮತ್ತು ತಂತ್ರಜ್ಞಾನ ಸುಲಭವಾಗಿ ಲಭ್ಯವಾಗಿದ್ದು, ಸಾಕ್ಷರತೆಯ ಮಟ್ಟ ಹೆಚ್ಚಿದ್ದು ಮತ್ತು ಗ್ರಾಹಕರ ಬಯಕೆಗಳು ಬದಲಾಗಿದ್ದು ಮಾಧ್ಯಮ ಬೆಳವಣಿಗೆಯ ಕಿಡಿ ಹೊತ್ತಿಸಿದವು. ಹಿಂದೊಮ್ಮೆ ವಿದೇಶದಲ್ಲಿ ಬಾತ್ಮೀದಾರರಾಗಿ ಕೆಲಸ ಮಾಡಿದ್ದ ಟಿ.ವಿ. ಉದ್ಯಮಿ, ಈ ಎಲ್ಲ ಗುಣಾತ್ಮಕ ಬೆಳವಣಿಗೆಗಳನ್ನು ಖುಷಿಯಿಂದ ಒಪ್ಪಿಕೊಂಡರು. ಆದರೆ, ಭಾರತದ ಮಾಧ್ಯಮಗಳು ತಮ್ಮ ಉದ್ದೇಶದಿಂದ ದೂರ ಸರಿದಿವೆ. ರಾಷ್ಟ್ರದ ‘ಸಾಕ್ಷಿಪ್ರಜ್ಞೆಯನ್ನು ಕಾಪಾಡುವ’ ತಮ್ಮ ಹೊಣೆಯನ್ನು ತೊರೆದಿವೆ ಎಂದೂ ಅವರು ಹೇಳಿದರು. ಅವರು ಇದಕ್ಕೆ ಒಂದು ಉದಾಹರಣೆ ಕೂಡ ನೀಡಿದರು. ಹೆಚ್ಚು ಓದುಗಸ್ನೇಹಿ ಆಗುವ ಭರದಲ್ಲಿ, ಪತ್ರಿಕೆಯ ಆತ್ಮದಂತೆ ಇರುವ ಸಂಪಾದಕೀಯ ಪುಟದ ಗಾಂಭೀರ್ಯ ಹಾಗೂ ಪಾವಿತ್ರ್ಯ ಕುಗ್ಗಿಸಲಾಗಿದೆ ಎಂದರು.

‘ಆದರೆ, ನೀವು ನಮ್ಮ ಪತ್ರಿಕೆಯ ಸಂಪಾದಕೀಯ ಪುಟವನ್ನು ಓದಬೇಕು. ನಮ್ಮಲ್ಲಿ ಅಧ್ಯಾತ್ಮದ ಕುರಿತು ಅಂಕಣ ಬರುತ್ತದೆ’ ಎಂದು ಅವರ ಮಾತಿಗೆ ಉತ್ತರವಾಗಿ ಪತ್ರಿಕೆಯ ಮುಖ್ಯಸ್ಥ ಘರ್ಜಿಸಿದರು.

ಇವರಿಬ್ಬರ ನಡುವಿನ ಮಾತುಕತೆಯಿಂದ ಗೊತ್ತಾಗುವ ಎರಡು ಅಂಶಗಳಿವೆ. ಮೊದಲನೆಯದು, ಹಿಂದೊಂದು ಕಾಲದಲ್ಲಿ ‘ಮಹಾನ್’ ಆಗಿದ್ದ ಪತ್ರಿಕೆಯ ಮಾಲೀಕರೇ ತಮ್ಮ ಪತ್ರಿಕೆ ಈಗ ಮೊದಲಿನಂತೆ ಇಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಅಂದರೆ ಹೆಚ್ಚಿನ ಪ್ರಸಾರ ಸಂಖ್ಯೆ, ಆದಾಯ ಹಾಗೂ ಲಾಭ ಅರಸುವಿಕೆಯ ಹಾದಿಯಲ್ಲಿ ಪತ್ರಿಕೆಯ ಗುಣಮಟ್ಟಕ್ಕೆ ಧಕ್ಕೆಯಾಗಿದೆ. ಅವರು ಒಪ್ಪಿಕೊಂಡಿದ್ದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಔಷಧಿ ತಯಾರಕನೊಬ್ಬ ಹೀಗೆ ಹೇಳುವ ಸಂದರ್ಭವನ್ನು ಊಹಿಸಿಕೊಳ್ಳಿ: ‘ನಾನು ಉತ್ಪಾದಿಸುತ್ತಿರುವ ಅತ್ಯಗತ್ಯ ಔಷಧವು ಮೊದಲಿನಷ್ಟು ಪರಿಣಾಮಕಾರಿಯಾಗಿಲ್ಲ. ಸುರಕ್ಷಿತವೂ ಅಲ್ಲ. ಏಕೆಂದರೆ ನಾವು ಹೆಚ್ಚು ಔಷಧಿ ಮಾರಬೇಕು. ಯಾವುದೇ ಬೆಲೆ ತೆತ್ತಾದರೂ ಹೆಚ್ಚು ಸಂಪಾದಿಸಬೇಕು’.

ದೇವರು, ದೇವಮಾನವರು... ಇಂಥವರ ಬಗ್ಗೆ ಬರಹಗಳಿರುವ ಖೊಟ್ಟಿ ಅಂಕಣವೊಂದು ಬೇರೆಲ್ಲೂ ಅಲ್ಲದೆ ಪತ್ರಿಕೆಯ ಅತ್ಯಂತ ಪ್ರಮುಖ ಜಾಗದಲ್ಲಿ ಕೂರಬೇಕು ಎಂದು ಮಾಲೀಕ ನಂಬಿರುವುದು ಈ ಮಾತುಕತೆಯಿಂದ ಗೊತ್ತಾಗುವ ಇನ್ನೊಂದು ಅಂಶ. ಅಂತಹ ಅಂಕಣವೊಂದು ಭಾರಿ ಸಂಶೋಧನೆ, ಅದು ಎಲ್ಲರ ಗಮನಕ್ಕೆ ಬರಬೇಕು, ಎಲ್ಲರೂ ಅದನ್ನು ಹೊಗಳಬೇಕು ಎಂದೂ ಅವರು ನಂಬಿದ್ದರು. ಕಾರು ತಯಾರಕರು ಕಾರಿನ ಪೆಟ್ರೋಲ್‌ ಟ್ಯಾಂಕ್ ಪಕ್ಕದಲ್ಲಿ ಅಗರಬತ್ತಿ ಸ್ಟ್ಯಾಂಡ್‌ ಇಟ್ಟು, ಚಾಲಕ ಪ್ರಯಾಣ ಆರಂಭಿಸುವ ಮೊದಲು ಅಗರಬತ್ತಿ ಹಚ್ಚಬಹುದು ಎಂದು ಹೇಳುವ ಸಂದರ್ಭ ಊಹಿಸಿಕೊಂಡು, ಅಂಕಣಕ್ಕೆ ಸಂಬಂಧಿಸಿದ ಮಾತಿನ ಅರ್ಥವನ್ನು ಗ್ರಹಿಸಿ.

ಮಾಧ್ಯಮ ಜಗತ್ತಿನ ಇಬ್ಬರ ನಡುವಿನ ಈ ಮಾತುಕತೆಯನ್ನು ‘ತಮಾಷೆ’ ಎಂದು ಬದಿಗೆ ಸರಿಸುವುದು ಸುಲಭ. ಆದರೆ, ಇದು ಮುಕ್ತ ಮಾರುಕಟ್ಟೆಯ ಅರ್ಥವ್ಯವಸ್ಥೆಯಲ್ಲಿ ಮಾಧ್ಯಮಗಳ ಮಾಲೀಕರು, ಮ್ಯಾನೇಜರ್‌ಗಳು ಹೇಗೆ ಆಲೋಚಿಸುತ್ತಾರೆ, ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಒಳನೋಟ ನೀಡುತ್ತದೆ.

ಜಾಹೀರಾತುಗಳೇ ಚಾಲಕ ಶಕ್ತಿ ಆಗಿರುವ ಉದ್ಯಮದಲ್ಲಿ, ಸಮಾಜದಲ್ಲಿ ಅತ್ಯಂತ ಕಳಪೆ ಅಭಿರುಚಿ ಹೊಂದಿರುವ ಗುಂಪನ್ನು ಆಕರ್ಷಿಸುವುದೇ ಉದ್ಯಮದ ಗುರಿಯಾಗಿರುತ್ತದೆ. ಹಾಗಾಗಿ, ಬೌದ್ಧಿಕವಾಗಿ ಶ್ರೀಮಂತವಾಗಿರುವ ಸಂಪಾದಕೀಯ ಹೂರಣವನ್ನು ಉದ್ದೇಶಪೂರ್ವಕವಾಗಿ ಅತಿಯಾಗಿ ಸರಳಗೊಳಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಮಾಧ್ಯಮಗಳು ತೀರಾ ಕೆಟ್ಟ ಸ್ಥಿತಿಯ ಕಡೆ ಸಾಗಲು ಆರಂಭಿಸಿದ್ದು ಹೇಗೆ ಎಂಬುದರ ಬಗ್ಗೆಯೂ ಈ ಮಾತುಕತೆ ಸೂಚನೆ ನೀಡುತ್ತದೆ.

ಇಂಗ್ಲಿಷ್ ‘ಸೂತ್ರ’ ಯಶಸ್ಸು ಕಂಡಿದ್ದರ ಪರಿಣಾಮವಾಗಿ, ಅದೇ ಸೂತ್ರವನ್ನು ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಹಲವು ಪ್ರಭಾವಿ ಮಾಧ್ಯಮ ಸಂಸ್ಥೆಗಳು ಅನುಸರಿಸುವಂತೆ ಆಯಿತು. ಈ ಕ್ರಮಕ್ಕೆ ಪ್ರತಿಯಾಗಿ ಮಾರುಕಟ್ಟೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂತಾದರೂ, ಸುದ್ದಿ ಮನೆಗಳು ತಮ್ಮ ಅತ್ಯಂತ ಅಮೂಲ್ಯ ಸಂಪನ್ಮೂಲವಾದ ‘ಬೌದ್ಧಿಕ ಶಕ್ತಿ’ಯನ್ನು ಕಳೆದುಕೊಳ್ಳುವಂತಾಯಿತು.

ಮಾಧ್ಯಮಗಳು (ಸಾಮಾನ್ಯವಾಗಿ ಹೇಳಬೇಕೆಂದರೆ) ಉನ್ನತ ಮೌಲ್ಯಗಳನ್ನು, ಆದರ್ಶಗಳನ್ನು ಮತ್ತು ತತ್ವಗಳನ್ನು ಪ್ರತಿಪಾದಿಸುತ್ತ ‘ಮಹಾನ್’ ಆಗಲು ಬಯಸುತ್ತಿಲ್ಲ ಎಂಬುದು ಸೂಕ್ಷ್ಮ ಮನಸ್ಸಿನ ಯಾವುದೇ ಕನ್ನಡಿಗನಿಗೆ ಗೊತ್ತಾಗುತ್ತದೆ. ‘ಮಾರುಕಟ್ಟೆ’ಯಲ್ಲಿ ನಾವು ಇಂದು ಕಾಣುತ್ತಿರುವುದು ಗುಣಮಟ್ಟ, ಗಾಂಭೀರ್ಯ ಮತ್ತು ಧೈರ್ಯವನ್ನು ಕಳೆದುಕೊಂಡಿರುವ ಅರಚುವ, ಮೌಲ್ಯಯುತವಲ್ಲದ ಹಾಗೂ ಅರ್ಥವಿಲ್ಲದ ಪತ್ರಿಕೋದ್ಯಮ. ಭ್ರಷ್ಟಾಚಾರ, ಜಾತಿವಾದ ಮತ್ತು ಕೋಮುವಾದದಲ್ಲಿ ಮುಂದೆ ಇರುವ ರಾಜ್ಯದಲ್ಲಿ ಕನ್ನಡದ ಯಾವುದೇ ದೊಡ್ಡ ಮಾಧ್ಯಮ ಸಂಸ್ಥೆ ಒಂದು ಹಂತವನ್ನು ಮೀರಿ ಗಟ್ಟಿಯಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ; ಜನಪ್ರಿಯವಲ್ಲದ ಧೋರಣೆ ತಾಳಲು ಸಾಧ್ಯವಿಲ್ಲ; ಯಾರನ್ನೂ ನೋಯಿಸುವಂತೆ ಇಲ್ಲ. ಆದರೆ, ಮಾಧ್ಯಮ ಸಂಸ್ಥೆಗಳು ಅಗತ್ಯವಾದರೆ ಸಾಕಷ್ಟು ಜೋಕುಗಳನ್ನು ಹೇಳಲು, ಅಷ್ಟೇನೂ ಮಹತ್ವವಲ್ಲದ ವಿಷಯಗಳ ಬಗ್ಗೆ ಹಾಗೂ ಗಾಸಿಪ್‌ಗಳ ಬಗ್ಗೆ ಹೇಳಲು ಅವಕಾಶ ಇದೆ – ಮತ್ತು ಖೊಟ್ಟಿ ಅಧ್ಯಾತ್ಮದ ಬಗ್ಗೆ ಕೂಡ ಹೇಳಬಹುದು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಆರಂಭವಾಗಿ 175 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ, ಕರ್ನಾಟಕದ ಮಾಧ್ಯಮ ಲೋಕ ಗಂಭೀರ ಬೌದ್ಧಿಕ ನಿರ್ವಾತ ಎದುರಿಸುತ್ತಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

ತಪ್ಪು ತಿಳಿಯುವ ಅವಶ್ಯಕತೆ ಇಲ್ಲ. 1991ಕ್ಕಿಂತ ಮೊದಲೂ ಕನ್ನಡ ಪತ್ರಿಕಾರಂಗದಲ್ಲಿ ‘ಸುವರ್ಣ ಯುಗ’ ಎಂಬುದು ಇರಲಿಲ್ಲ.

ಇಂದಿನ ದಿನಪತ್ರಿಕೆಗಳು ಹಾಗೂ ಟಿ.ವಿ. ವಾಹಿನಿಗಳು ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಕವಾಗಿವೆ, ಹೆಚ್ಚು ವರ್ಣಮಯವಾಗಿವೆ, ಹೆಚ್ಚು ಮನರಂಜನೆ ನೀಡುತ್ತಿವೆ, ಓದುಗ/ವೀಕ್ಷಕನನ್ನು ತಮ್ಮೊಂದಿಗೆ ತೊಡಗಿಸಿಕೊಳ್ಳುತ್ತಿವೆ. ಅವುಗಳನ್ನು ಈಗ ಚೆನ್ನಾಗಿ ಮುದ್ರಿಸಲಾಗುತ್ತಿದೆ, ಚೆನ್ನಾಗಿ ಪ್ರಸ್ತುತಪಡಿಸಲಾಗುತ್ತಿದೆ, ಬೆಲೆ ಕಡಿಮೆ ಇರುವ ಕಾರಣ ಮೊದಲಿಗಿಂತಲೂ ಹೆಚ್ಚಿನ ಮನೆಗಳನ್ನು, ಮೊಬೈಲ್‌ ಫೋನ್‌ಗಳನ್ನು ಅವು ತಲುಪುತ್ತಿವೆ. ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಪೈಪೋಟಿ ಇದೆ. ಇದನ್ನು ತಾಳಿಕೊಳ್ಳಲು ಹಾಗೂ ಬೆಳೆಯಲು ಅಪಾರ ಕೌಶಲ ಬೇಕು, ಶಕ್ತಿ ಬೇಕು. ಆದರೆ, ಪತ್ರಿಕೋದ್ಯಮದಲ್ಲಿ ಪ್ರಸರಣ ಸಂಖ್ಯೆಗಿಂತ ಹೆಚ್ಚಿನದ್ದು, ಟಿ.ವಿ. ವಾಹಿನಿಗಳ ಟಿಆರ್‌ಪಿಗಿಂತ ಮಿಗಿಲಾದದ್ದು, ಲಾಭಕ್ಕಿಂತ ದೊಡ್ಡ ವಿಷಯಗಳು ಬೇರೆ ಇವೆ. ಇದಕ್ಕೆ ಮಾಧ್ಯಮದ ಹೂರಣ ಎನ್ನಬಹುದು. ಕೆಲವು ಗೌರವಾನ್ವಿತ ಅಪವಾದಗಳನ್ನು ಹೊರತುಪಡಿಸಿದರೆ, ಆ ಹೂರಣ ಇಂದು ಕನ್ನಡ ಮುಖ್ಯವಾಹಿನಿಯ ಪತ್ರಿಕೋದ್ಯಮದಲ್ಲಿ ಇದೆ ಎನ್ನಲು ಇರುವ ಆಧಾರಗಳು ತೀರಾ ಅಲ್ಪ.

ತಕ್ಷಣದ ಉತ್ತರ ಬಯಸುವ ಒಂದು ಡಜನ್ ಪ್ರಶ್ನೆಗಳು ಇಲ್ಲಿವೆ.

# ಕನ್ನಡ ಪತ್ರಿಕೋದ್ಯಮದ ಧ್ರುವತಾರೆ ಎನ್ನುವ ವ್ಯಕ್ತಿಗಳು ಇಂದು ಯಾರು?

# ಯಾವ ಸಂಪಾದಕ ಅಥವಾ ಟಿ.ವಿ. ನಿರೂಪಕನ ಮಾತಿಗೆ ಇಂದು ಅತಿಹೆಚ್ಚು ಮೌಲ್ಯ ಮತ್ತು ವಿಶ್ವಾಸಾರ್ಹತೆ ಇದೆ?

# ಯಾವ ಲೇಖನ, ವರದಿ, ಅಂಕಣ ಅಥವಾ ಸಂದರ್ಶನ ನಿಮ್ಮಲ್ಲಿ ಹೊಸ ಆಲೋಚನೆ ಹುಟ್ಟುಹಾಕಿತು?

# ಕನ್ನಡದ ಅತ್ಯುತ್ತಮ ತನಿಖಾ ಪತ್ರಕರ್ತ ಯಾರು?

# ಪತ್ರಿಕಾ ಕಚೇರಿಯಲ್ಲಿ ಸಾಹಿತ್ಯಕ ಕೌಶಲಗಳಿಗಾಗಿ ಯಾವಾಗಲೂ ನೀವು ಮೊರೆಹೋಗುವ ಅಂಕಣಕಾರ ಯಾರು?

# ಪತ್ರಿಕೆ ಆಗಲಿ ಅಥವಾ ಟಿ.ವಿ ಆಗಲಿ ಯಾರ ರಾಜಕೀಯ ವಿಶ್ಲೇಷಣೆಗಾಗಿ – ಆ ವಿಶ್ಲೇಷಣೆ ಪಕ್ಷಪಾತಿಯಾಗಿಯೇ ಇದ್ದರೂ – ನೀವು ಕಾದು ಕುಳಿತಿರುತ್ತೀರಿ?

# ದಲಿತ, ಮುಸ್ಲಿಂ, ರೈತ ಹಾಗೂ ಕಾರ್ಮಿಕರ ವಿಚಾರಗಳ ಕುರಿತು ಎಷ್ಟು ಮಾಧ್ಯಮ ಸಂಸ್ಥೆಗಳಲ್ಲಿ ತಜ್ಞರಿದ್ದಾರೆ?

# ‘ಸಿಲಿಕಾನ್ ವ್ಯಾಲಿ’ ವಿಚಾರಗಳನ್ನು ಗಂಭೀರವಾಗಿ ಹಾಗೂ ನಿರಂತರವಾಗಿ ವರದಿ ಮಾಡುವ ಯಾರಾದರೂ ಕನ್ನಡ ಮಾಧ್ಯಮಗಳಲ್ಲಿ ಇದ್ದಾರಾ?

# ಕನ್ನಡದಲ್ಲಿ ಅತ್ಯುತ್ತಮ ಸಿನಿಮಾ ವಿಮರ್ಶಕ ಯಾರು? ಸಂಗೀತ, ವಿಜ್ಞಾನ, ಆಹಾರ, ಫ್ಯಾಷನ್ ಅಥವಾ ಕ್ರೀಡೆಯಲ್ಲಿ ತಜ್ಞರಾಗಿರುವ ಎಷ್ಟು ಜನರನ್ನು ನಾವು ನೇಮಿಸಿಕೊಂಡಿದ್ದೇವೆ?

# ಕನ್ನಡ ಮಾಧ್ಯಮದಲ್ಲಿ ಮೂವರು ಅತ್ಯುತ್ತಮ ಕಲಾವಿದರು ಹಾಗೂ ಚಿತ್ರ ಬಿಡಿಸುವವರು ಯಾರು?

# ರಾಜ್ಯದ ಹೊರಗೆ ಎಷ್ಟು ಜನ ವರದಿಗಾರರನ್ನು ನಮ್ಮ ಪತ್ರಿಕೆಗಳು ಹಾಗೂ ಟಿ.ವಿ. ವಾಹಿನಿಗಳು ಹೊಂದಿವೆ?

# ಕನ್ನಡದ ಯಾವುದಾದರೂ ಪತ್ರಿಕೆ ಅಥವಾ ವಾಹಿನಿ ವಿದೇಶಿ ಬಾತ್ಮೀದಾರರನ್ನು ಹೊಂದಿದೆಯೇ?

# ಕನ್ನಡದ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ರಾಷ್ಟ್ರಮಟ್ಟದಲ್ಲಿ ಎಷ್ಟು ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ?

ಅಂಕಿ-ಸಂಖ್ಯೆಗಳು ಹೆಚ್ಚುತ್ತಿದ್ದರೂ, ಹಣದ ಪೆಟ್ಟಿಗೆ ತುಂಬುತ್ತಿದ್ದರೂ ಕನ್ನಡ ಪತ್ರಿಕೋದ್ಯಮದ ಕಪಾಟು ಎಷ್ಟು ಖಾಲಿ ಎಂಬುದನ್ನು ಈ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ತಿಳಿಸುತ್ತವೆ. ಸಂಪಾದಕೀಯ ಗುಣಮಟ್ಟಕ್ಕಿಂತಲೂ ಆದಾಯಕ್ಕೇ ಹೆಚ್ಚಿನ ಆದ್ಯತೆ ನೀಡುವ ಮೂಲಕ – ಪತ್ರಿಕಾವೃತ್ತಿಯ ಮೇಲೆ ಹಾಗೂ ಪತ್ರಕರ್ತರ ಮೇಲೆ ಹೂಡಿಕೆ ಮಾಡದಿರುವ ಮೂಲಕ – ಬಹುತೇಕ ಮಾಧ್ಯಮ ಸಂಸ್ಥೆಗಳು ಸುದ್ದಿಮನೆಯನ್ನು ಟೊಳ್ಳಾಗಿಸಿವೆ. ಜ್ಞಾನ, ವಿವೇಕ ಮತ್ತು ಒಳನೋಟಗಳ ಆಗರವಾಗುವ ಬದಲು ಮುಖ್ಯವಾಹಿನಿಯ ಕನ್ನಡ ಮಾಧ್ಯಮವು ಇಂದು ಕಣ್ಣು ಹಾಗೂ ಕಿವಿಗೆ ಖುಷಿ ಕೊಡುವ, ಮನಸ್ಸಿಗೆ ಏನನ್ನೂ ಕೊಡದ ಸರಕನ್ನು ಉತ್ಪಾದಿಸುತ್ತಿದೆ.

ಆಲೋಚನೆಯ ಕಿಡಿ ಹೊತ್ತಿಸುವಂಥದ್ದು ಏನೂ ಇಲ್ಲ. ಮಹತ್ತರವಾದದ್ದು ಏನೂ ಇಲ್ಲ. ಸ್ಫೂರ್ತಿ ಕೊಡುವಂಥದ್ದು ಏನೂ ಇಲ್ಲ. ಎಲ್ಲವೂ ಮಾಮೂಲಿ ಸಂಗತಿಗಳು.

ಎಲ್ಲ ಮಾತುಗಳಿಗೂ ಗೌರವಾನ್ವಿತ ಅಪವಾದಗಳು ಇದ್ದೇ ಇವೆ. ಆ ಅಪವಾದಗಳಿಗೆ ನಾವು ಗೌರವ ಸಮರ್ಪಿಸಲೇಬೇಕು. ಕರ್ನಾಟಕದಲ್ಲಿ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಇರುವುದು ಟೊಳ್ಳುತನ, ಆಲೋಚನೆಗಳ ಕೊರತೆ. ಅನುಭವಿ ದನಿಗಳು ಬದಿಗೆ ಸರಿಸಲ್ಪಟ್ಟಿವೆ. ಸತ್ವಯುತ ಆಲೋಚನೆಗಳು ಹಿಂದಕ್ಕೆ ಸರಿದಿವೆ ಅಥವಾ ಹೊರನಡೆದಿವೆ. ವಿವೇಕವನ್ನು ಹೊರಗುತ್ತಿಗೆ ನೀಡಲಾಗಿದೆ. ಇದರಿಂದ ವೆಚ್ಚ ನಿಯಂತ್ರಣ ಆಗಬಹುದು. ಆದರೆ ಇದು ನಮ್ಮ ಜೀವನದಲ್ಲಿ ಮಾಧ್ಯಮದ ಸ್ಥಾನ ಏನು ಎಂಬ ಪ್ರಶ್ನೆ ಎತ್ತುತ್ತದೆ. ಕುಳಿತುಕೊಳ್ಳಬಯಸುವ ಯಾರಿಗೆ ಬೇಕಿದ್ದರೂ ಜಾಗ ನೀಡುವ ಟ್ಯಾಕ್ಸಿಗಳಂತೆಯಾ ಮಾಧ್ಯಮಗಳು? ಅಥವಾ ಗಟ್ಟಿತನ ಬೆಳೆಸುವ ಸ್ವತಂತ್ರ ವಾಹಕಗಳಾ?

ಕನ್ನಡ ಪತ್ರಿಕೋದ್ಯಮವು ಇಂದು ಬೌದ್ಧಿಕವಾಗಿ ಒಣ ಭೂಮಿಯಂತೆ ಆಗಿದೆ ಎಂಬ ಮಾತಿಗೆ ವಿರುದ್ಧವಾಗಿ ಎರಡು ವಾದಗಳನ್ನು ಮುಂದಿಡಬಹುದು. ಅದರಲ್ಲಿ ಮೊದಲನೆಯದು, ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಲೇ ಬೆಳೆದಿರುವ ‘ಹೊಸ ತಲೆಮಾರಿನ’ ಓದುಗರು ಮತ್ತು ವೀಕ್ಷಕರಿಗೆ ಆಲೋಚನೆಗೆ ಹಚ್ಚುವ ಪತ್ರಿಕೋದ್ಯಮ ನಿಜವಾಗಿಯೂ ಬೇಕಾಗಿದೆಯಾ ಎಂಬ ಪ್ರಶ್ನೆ. ಬಹುಶಃ ಅವರಿಗೆ ಅದು ಬೇಕಿಲ್ಲದಿರಬಹುದು. ಆದರೆ, ಶ್ರೋತೃಗಳಿಗೆ ಬೇಕಿರುವುದನ್ನು ಕೊಡುವುದಷ್ಟೇ ಒಳ್ಳೆಯ ಪತ್ರಿಕೋದ್ಯಮದ ಗುರಿ ಅಲ್ಲ. ಅವರಿಗೆ ಏನನ್ನು ಕೊಡಲೇಬೇಕೋ ಅದನ್ನು ಕೊಡುವ ಹೊಣೆಯೂ ಇದೆ. ಅವರ ಹಸಿವನ್ನು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು, ಅವರಲ್ಲಿ ಹೊಸ ಆಲೋಚನೆಗಳನ್ನು ಬಿತ್ತಬೇಕು.

ಆಲೋಚನೆಗಳನ್ನು ಬಿತ್ತುವ ಪತ್ರಿಕೋದ್ಯಮ ಬೋರಿಂಗ್ ಅನಿಸಬಹುದು. ಆದರೆ ಅದು ಮುಖ್ಯವಾದ ಸಂಗತಿಗಳು ಆಸಕ್ತಿಕರ ಅನಿಸುವಂತೆ ಮಾಡಲು ಪತ್ರಿಕೋದ್ಯಮದ ಅವಶ್ಯಕ ಅಂಶ.

ಎರಡನೆಯ ವಾದವನ್ನು ಹೀಗೆ ಮಂಡಿಸಬಹುದು: ಇಂತಹ ಪತ್ರಿಕೋದ್ಯಮ ಮಾಡದೆಯೂ ಹಣ ಸಂಪಾದಿಸಬಹುದು ಎಂದಾದರೆ, ಈ ಬಗೆಯ ಪತ್ರಿಕೋದ್ಯಮ ಏಕೆ ಮಾಡಬೇಕು? ಇದಕ್ಕೆ ಒಂದು ಸಂಭಾವ್ಯ ಉತ್ತರವನ್ನು ಹೀಗೆ ನೀಡಬಹುದು. ‘ನಮ್ಮದು ಭವ್ಯ ಸಾಹಿತ್ಯ ಇರುವ ಹಾಗೂ ಆಲೋಚನೆಗಳನ್ನು ಕಟ್ಟಿದ ನಾಯಕರ ನಾಡು. ರಾಜ್ಯದ ಭಾಷೆಯ ಸಂರಕ್ಷಕರಾಗಿ, ಜನರ ಕಣ್ಣು ಮತ್ತು ಕಿವಿಗಳಾಗಿ ಮಾಧ್ಯಮಗಳು ತಾವು ಎಷ್ಟೆಲ್ಲ ಪಡೆದಿರುವ ವೃತ್ತಿಗೆ ಒಂದಿಷ್ಟನ್ನು ಮರಳಿಸಬೇಕು. ಒಳ್ಳೆಯ ಪತ್ರಿಕೋದ್ಯಮ ಮಾಡುವುದು ತುಸು ದುಬಾರಿ ಯೋಜನೆಯೇ ಹೌದು. ಆದರೆ ಅಂಥದ್ದನ್ನು ಪೋಷಿಸುವ ವಾತಾವರಣವನ್ನು ಭಾರತದ ಜನತಂತ್ರ ಬೆಳೆಸುವಂತೆ ಮಾಡುವ ಹೊಣೆ ಮಾಧ್ಯಮ ಸಂಸ್ಥೆಗಳ ಮೇಲಿದೆ.

ಈಗಿನ ಸ್ಥಿತಿಯಲ್ಲಿ ಕನ್ನಡ ಪತ್ರಿಕೋದ್ಯಮವು ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೋಸ, ಬ್ಲ್ಯಾಕ್‌ಮೇಲ್, ಸುಲಿಗೆ, ಬೆದರಿಸಿದ ಆರೋಪಗಳ ಅಡಿ ಡಜನ್‌ಗಿಂತ ಹೆಚ್ಚು ಪತ್ರಕರ್ತರು ಸಿಕ್ಕಿಬಿದ್ದಿದ್ದಾರೆ. ಇಂತಹ ಮಾಧ್ಯಮ ಉದ್ಯಮ ತನ್ನ ಪಾತ್ರ ಹಾಗೂ ಭವಿಷ್ಯದ ಬಗ್ಗೆ ಖಂಡಿತ ಆಲೋಚನೆ ಮಾಡಬೇಕು.

ದೊಡ್ಡ ಪತ್ರಿಕಾ ಸಂಸ್ಥೆಯೊಂದರ ಮಾಲೀಕರು ಎರಡು ವರ್ಷಗಳ ಹಿಂದೆ ತಮ್ಮ ಪತ್ನಿಯ ಸಹೋದರಿಯ ವರ ಆಗಬೇಕಿದ್ದವನನ್ನು ಭೇಟಿ ಮಾಡಿದರು. ಆ ಯುವಕನನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು, ‘ಮಾಹಿತಿ ಪಡೆಯಲು ನೀವು ಯಾವ ಪತ್ರಿಕೆಗಳನ್ನು ಓದುತ್ತೀರಿ’ ಎಂದು ಪ್ರಶ್ನಿಸಿದರು. ಮಾಧ್ಯಮ ಮಾಲೀಕರನ್ನು ಮೆಚ್ಚಿಸಲು ಆ ಯುವಕ, ಅವರ ಸಮೂಹದ ಪತ್ರಿಕೆಗಳ ಹೆಸರು ಹೇಳಿದ. ‘ಅದನ್ನು ನೀವು ಓದಬೇಕಿಲ್ಲ’ ಎಂದು ಹೇಳಿದ ಮಾಲೀಕರು, ವಿದೇಶಗಳ ಕೆಲವು ಅತ್ಯುತ್ತಮ ಪತ್ರಿಕೆಗಳ, ವೆಬ್‌ಸೈಟ್‌ಗಳ ಹೆಸರು ಹೇಳಿದರು. ಮುಂದೆ ಆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂಬುದು ಬೇರೆಮಾತು.

25ನೆಯ ವಯಸ್ಸಿನಲ್ಲಿ ‘ಮಂಗಳೂರ ಸಮಾಚಾರ’ ಆರಂಭಿಸಿದ ಹರ್ಮನ್ ಮೊಗ್ಲಿಂಗ್, ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ‘ಸತ್ಯವಲ್ಲದ ಸಂಗತಿಗಳು ಹಾಗೂ ಗಾಳಿಮಾತುಗಳು ಹರಡುವುದನ್ನು ತಡೆಯಲು, ಜನರಿಗೆ ಖಚಿತ ಮಾಹಿತಿ ಸಿಗುವಂತೆ ಆಗಲು, ನಾವು ಈ ಪತ್ರಿಕೆಯನ್ನು ಸೂಕ್ತ ಬೆಲೆ ನಿಗದಿ ಮಾಡಿ ತರುತ್ತಿದ್ದೇವೆ’ ಎಂದು ಬರೆದಿದ್ದರು. ಈವರೆಗೆ ನಡೆದಿರುವ ವಿದ್ಯಮಾನಗಳನ್ನು ಕಂಡಿದ್ದರೆ ಅವರು ಭಯಪಟ್ಟುಕೊಳ್ಳುತ್ತಿದ್ದರು.

 (ಲೇಖಕ: ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಸದಸ್ಯ, ಔಟ್‌ಲುಕ್‌ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ)

Post Comments (+)