ಮಂಗಳವಾರ, ಅಕ್ಟೋಬರ್ 27, 2020
25 °C

Pv Web Exclusive | ಮೂಡಲಪಾಯ ಯಕ್ಷಗಾನ: ಕುಣಿವ ಕಾಲುಗಳು ಬೇಕಾಗಿವೆ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಸಾಹಿತ್ಯ, ಸಂಗೀತ, ನೃತ್ಯದೊಂದಿಗೆ ಸಮನ್ವಿತಗೊಂಡ ವಿಶಿಷ್ಟ ಜನಪದ ಕಲೆ ಯಕ್ಷಗಾನ. ಅತ್ಯಂತ ಪ್ರಾಚೀನವಾದ ಈ ಪ್ರದರ್ಶನ ಕಲಾ ಪ್ರಕಾರವು ಆಯಾ ಸ್ಥಳಕ್ಕೆ ಅನುಗುಣವಾಗಿ ಬಹುರೂಪಗಳೊಂದಿಗೆ ಜನರ ಜೊತೆ ಮಿಳಿತವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಪಡುವಲಪಾಯ ಎಂತಲೂ, ಹಳೇ ಮೈಸೂರು ಭಾಗದಲ್ಲಿ ಮೂಡಲಪಾಯ ಎಂದು ಗುರುತಿಸಿಕೊಂಡಿದೆ.

ಪಡುವಲಪಾಯ ಯಕ್ಷಗಾನ ಕರಾವಳಿ, ಮಲೆನಾಡಿನ ಜನಸಂಸ್ಕೃತಿಯ ಭಾಗವಾಗಿದ್ದು ಉತ್ತುಂಗ ಸ್ಥಿತಿಯಲ್ಲಿದೆ. ವೃತ್ತಿಪರ ಯಕ್ಷಗಾನ ಮೇಳಗಳು, ಪಾತ್ರಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಪಡುವಪಾಯ ಪ್ರಕಾರವನ್ನು ಪೊರೆಯುತ್ತಿದ್ದಾರೆ. ಆದರೆ ಪಡುವಲಪಾಯದಷ್ಟೇ ಪ್ರಾಚೀನವಾದ, ಪೌರಾಣಿಕ ಹಿನ್ನೆಲೆ ಹೊಂದಿರುವ ಮೂಡಲಪಾಯ ಯಕ್ಷಗಾನ ಅಳಿವಿನ ಅಂಚು ತಲುಪಿದೆ.

ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಜೀವಂತವಾಗಿದ್ದ ಈ ಕಲೆ ಈಗ ಪಳಿಯುಳಿಕೆಯ ಸ್ಥಿತಿಯಲ್ಲಿದೆ. ಹುಡುಕಾಡಿದರೂ 10 ಮಂದಿ ಭಾಗವತರು ಸಿಗುವುದಿಲ್ಲ, ಕಲಾ ತಂಡಗಳು ಜೀವ ಕಳೆದುಕೊಂಡಿವೆ, ಪಾತ್ರಧಾರಿಗಳು ಕಲೆಯ ಮೇಲೆ ನಿರಾಸಕ್ತರಾಗಿದ್ದಾರೆ.

ಹಬ್ಬ ಹರಿದಿನ, ದೇವಾಲಯಗಳ ಹರಕೆ ಮೇಳದ ಭಾಗವಾಗಿದ್ದ ಪಡುವಲಪಾಯ ಯಕ್ಷಗಾನ ಈಗ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹಲವು ಪ್ರಯೋಗಗಳಿಗೆ ತೆರೆದುಕೊಂಡಿದೆ. ಆ ಭಾಗದ ವಿದ್ಯಾವಂತರ ಪ್ರವೇಶದಿಂದಾಗಿ ವಿಶ್ವವಿಖ್ಯಾತಿ ಪಡೆದಿದೆ. ಪ್ರಸ್ತುತ ವಿದ್ಯಾಮಾನಗಳನ್ನು ಧ್ವನಿಸುವ ಪ್ರದರ್ಶನ ಕಲೆಯಾಗಿಯೂ ಗುರುತಿಸಿಕೊಂಡಿದೆ. ಆದರೆ ಮೂಡಲಪಾಯ ಯಕ್ಷಗಾನ ಜೀವ ಉಳಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ.

ಮೂಡಲಪಾಯ ಹೆಜ್ಜೆಗಳು ಹಾಸನ ಜಿಲ್ಲೆಯ ಅರಕಗೂಡಿನಿಂದ ಆರಂಭವಾದರೆ ಚನ್ನರಾಯಪಟ್ಟಣ, ಮಂಡ್ಯ ಜಿಲ್ಲೆಯ ನಾಗಮಂಗ, ಬೆಳ್ಳೂರು, ಮಂಡ್ಯ, ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಶಿರಾ, ಮಧುಗಿರಿ ಮೂಲಕ ಸಾಗಿ ದಾವಣಗೆರೆ, ಹಿರಿಯೂರುವರೆಗೂ ಸಾಗುತ್ತದೆ. ದಶಕದ ಹಿಂದೆ ವಿವಿಧೆಡೆ ಇದ್ದ ಮೂಡಲಪಾಯ ಯಕ್ಷಗಾನ ಮೇಳಗಳು ಈಗ ಜೀವ ಕಳೆದುಕೊಂಡಿವೆ.

ತುಮಕೂರು ಜಿಲ್ಲೆಯ ಕೊನೇಹಳ್ಳಿ ಗ್ರಾಮದಲ್ಲಿ ತ್ರಿಮೂರ್ತಿಗಳು ಎಂದೇ ಪ್ರಸಿದ್ಧಿ ಪಡೆದಿದ್ದ ಜಿ.ನಂಜುಂಡಪ್ಪ, ಭಾಗವತರಾಗಿದ್ದ ಪಟೇಲ್‌ ನಾರಸಪ್ಪ, ಜಾನಪದ ವಿದ್ವಾಂಸ ಜೀ.ಶಂ.ಪರಮಶಿವಯ್ಯ (ಜೀಶಂಪ) ಅವರಿಂದ ಸ್ಥಾಪಿತವಾದ ‘ಮೂಡಲಪಾಯ ಯಕ್ಷಗಾನ ಕಲಾಕೇಂದ್ರ’ ಮೂಡಲಪಾಯಕ್ಕೆ ಕಲಾ ಪ್ರಕಾರಕ್ಕೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿತ್ತು. ಹೊಸ ತಲೆಮಾರಿನ ಯುವಜನರು ಕೂಡ ಇತ್ತ ಹೆಜ್ಜೆ ಇಡುತ್ತಿದ್ದರು. ಹೊಸ ರಂಗ ಮಂದಿರವೂ ನಿರ್ಮಾಣಗೊಂಡಿತ್ತು.

ಕೊನೇಹಳ್ಳಿ ಕಲಾವಿದರು ಆಡುತ್ತಿದ್ದ ಕರಿಭಂಟನ ಕಾಳಗ, ದೇವಿ ಮಹಾತ್ಮೆ, ಭಕ್ತ ಮಾರ್ಕಂಡೇಯ, ಇಂದ್ರಜಿತು ವಧೆ ಪ್ರಸಂಗಗಳು ಜನರ ಮನಸೂರೆಗೊಂಡಿದ್ದವು. ಆದರೆ ಕಲಾಕೇಂದ್ರ ಸ್ಥಾಪಿಸಿದ್ದ ತ್ರಿಮೂರ್ತಿಗಳು ತೀರಿಹೋದ ನಂತರ ಕೊನೇಹಳ್ಳಿಯ ಮೂಡಲಪಾಯ ಯಕ್ಷಗಾನ ಕಲಾವಿದರೂ ನೇಪಥ್ಯಕ್ಕೆ ಸರಿದರು.

‘ಮೂಡಲಪಾಯ ಯಕ್ಷಗಾನದ ಕುಣಿತ ಅತ್ಯಂತ ಒರಟು. ಅದನ್ನು ಕಲಿತು, ಪರಿಣತಿ ಸಾಧಿಸುವುದು ಸುಲಭ ಸಾಧ್ಯವಲ್ಲ. ಒಮ್ಮೆ ಹಾರಿ ಸುರಳಿಯಾಗಿ ಸುತ್ತಿ ಭೂಮಿಗೆ ಇಳಿಯಬೇಕು. ಆ ರೀತಿ ಹೆಜ್ಜೆ ಹಾಕುವ ಪಾತ್ರಧಾರಿಗಳು ಈಗ ಎಲ್ಲಿದ್ದಾರೆ? ಈಗಿನ ಯುವಕರಲ್ಲಿ ಶಕ್ತಿಯೇ ಇಲ್ಲ. ಮೂಡಲಪಾಯ ನೇಪಥ್ಯಕ್ಕೆ ಸರಿಯಲು ಇದೂ ಒಂದು ಕಾರಣ’ ಎಂದು ತಿಪಟೂರು ತಾಲ್ಲೂಕಿನ ಅರಳಕುಪ್ಪೆ ಗ್ರಾಮದ, 85 ವರ್ಷದ ಅಪರೂಪದ ಮೂಡಲಪಾಯ ಯಕ್ಷಗಾನ ಭಾಗವತ ಎ.ಎಸ್‌.ನಂಜಪ್ಪ ಹೇಳಿದರು.

ವಿಶಿಷ್ಟ ವೇಷಭೂಷಣ: ಮೂಡಲಪಾಯ ಹಾಗೂ ಪಡುವಲಪಾಯ ಯಕ್ಷಗಾನದಲ್ಲಿ ಹಲವು ವ್ಯತ್ಯಾಸಗಳಿವೆ. ಪಡುವಲಪಾಯಕ್ಕೆ ಚಂಡೆಯೇ ಆಧಾರ. ಆದರೆ ಮೂಡಲಪಾಯದಲ್ಲಿ ದಕ್ಷಿಣಾದಿ ಸಂಗೀತದ ಅಂಗವಾಗಿರುವ ಮೃದಂಗ, ಅಪರೂಪವಾಗುತ್ತಿರುವ ಮುಖವೀಣೆ ಹಾಗೂ ತಾಳವನ್ನು ಬಳಸಲಾಗುತ್ತದೆ.

ವೇಷಭೂಷಣದಲ್ಲೂ ಹಲವು ವ್ಯತ್ಯಾಸಗಳಿವೆ. ಪಾತ್ರಧಾರಿಗಳು ಧರಿಸುವ ಭುಜಕೀರ್ತಿ ರೆಕ್ಕೆಯ ರೂಪದಲ್ಲಿರುತ್ತದೆ. ಕಿರೀಟ ಕೂಡ ಪಡುವಲಪಾಯದ ಕಿರೀಟಕ್ಕಿಂತ ಎತ್ತರವಿರುತ್ತದೆ. ಈ ವೇಷಗಳು ಧೈತ್ಯವಾಗಿರುವ ಕಾರಣ ಅದನ್ನು ಧರಿಸಿ ಪಾತ್ರ ಮಾಡುವುದು ಕಷ್ಟವೇ ಸರಿ. ಹಿಂದಿನಿಂದಲೂ ವೇಷಭೂಷಣದಲ್ಲಿ ಯಾವುದೇ ಬದಲಾವಣೆಗಳು ಆಗದಿರುವುದು ಕೂಡ ಮೂಡಲಪಾಯ ಕಲೆಯ ಹಿನ್ನಡೆಗೆ ಕಾರಣವಾಗಿದೆ ಎಂದು ಜಾನಪದ ತಜ್ಞರು ಹೇಳುತ್ತಾರೆ.

ನಾಗಮಂಗಲ ತಾಲ್ಲೂಕು ನೇರಳೆಕೆರೆ ಗ್ರಾಮದ ಭಾಗವತ ತಿಮ್ಮಪ್ಪಚಾರ್ಯ ಹಲವು ವರ್ಷಗಳಿಂದ ಮೂಡಲಪಾಯ ವೇಷಭೂಷಣಗಳನ್ನು ಕಾಪಿಟ್ಟುಕೊಂಡು ಬಂದಿದ್ದರು. ಈಗ ಆ ವೇಷಭೂಷಣಗಳು ಪಳಿಯುಳಿಕೆಯಂತಿವೆ. ತಿಮ್ಮಪ್ಪಚಾರ್ಯ ಅವರ ಮಗ ಮೂರ್ತಾಚಾರ್ಯ ತಂದೆಯಿಂದ ಬಂದ ಭಾಗವತಿಕೆಯನ್ನು ಮುಂದುವರಿಸಿದ್ದಾರೆ. ಮೂಡಲಪಾಯ ಯಕ್ಷಗಾನ ಪಾತ್ರಧಾರಿಗಳನ್ನೇ ಹೋಲುವ ಗೊಂಬೆಗಳನ್ನು ಸೃಷ್ಟಿಸಿ ಗೊಂಬೆಯಾಟ ಕಲೆಯನ್ನೂ ಅವರು ಮುಂದುವರಿಸುತ್ತಿದ್ದಾರೆ.

‘ಪಡುವಲಪಾಯ ಯಕ್ಷಗಾನವನ್ನು ಕರಾವಳಿಯ ಜನರು ತಮ್ಮ ಬದುಕಿನ ಒಂದು ಭಾಗ ಎಂದು ತಿಳಿದಿದ್ದಾರೆ. ಅವರು ಎಲ್ಲಿಗೆ ಹೋದರೂ ಕಲೆಯನ್ನು ತಮ್ಮ ಜೊತೆಯಲ್ಲೇ ಕೊಂಡೊಯ್ಯುತ್ತಾರೆ. ಆದರೆ ನಮ್ಮ ಭಾಗದಲ್ಲಿ ಮೂಡಲಪಾಯ ಯಕ್ಷಗಾನ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿಯ ಯುವಜನರಿಗೆ ಆಸಕ್ತಿ ಇಲ್ಲದಾಗಿದೆ’ ಎಂದು ನೆಲ್ಲಿಗೆರೆಯ ಮೂರ್ತಾಚಾರ್ಯ ಹೇಳಿದರು.

ಮತ್ತೆ ಮೂಡುವುದೇ ಹೆಜ್ಜೆ?: ಮೂಡಲಪಾಲ ಯಕ್ಷಗಾನಕ್ಕೆ ಮರುಜೀವ ನೀಡುವ ಯತ್ನಗಳು ಆರಂಭಗೊಂಡಿವೆ. ಮಂಡ್ಯ, ಹಾಸನ, ತುಮಕೂರು, ರಾಮನಗರ ಭಾಗದಲ್ಲಿ ಕಲಿಕಾ ಕಮ್ಮಟಗಳು ನಡೆದಿವೆ. ವಿದ್ಯಾರ್ಥಿಗಳಿಗೆ ಮೂಡಲಪಾಯ ಯಕ್ಷಗಾನ ಕಲಿಸಿ ಪ್ರದರ್ಶನ ಮಾಡಿಸುವ ಯತ್ನಗಳೂ ಆರಂಭವಾಗಿವೆ. ಇರುವ ಬೆರಳೆಣಿಕೆಯಷ್ಟು ಭಾಗವತರನ್ನು ಹುಡುಕಿ, ಒಂದೆಡೆ ಸೇರಿಸಿ ಚಿಂತನ–ಮಂಥನ ನಡೆಸಲಾಗಿದೆ. ಜೊತೆಗೆ ಪಡುವಲಪಾಯದ ಪಾತ್ರಧಾರಿಗಳು, ಭಾಗವತರನ್ನು ಆಹ್ವಾನಿಸಿ ಅವರಿಂದಲೂ ಸಲಹೆ, ತರಬೇತಿಯನ್ನೂ ಪಡೆಯಲಾಗುತ್ತಿದೆ.

ಮಂಡ್ಯದ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಚನ್ನರಾಯಪಟ್ಟಣದ ಜನಪದ ರಂಗ ಮಾಧ್ಯಮ ಸಂಸ್ಥೆಯ ಡಾ.ಚಂದ್ರು ಕಾಳೇನಹಳ್ಳಿ ಮುಂತಾದವರು ಪ್ರಾಚೀನ ಕಲೆಗೆ ಹೊಸ ರೂಪ ನೀಡುವ ಕುರಿತಾದ ಕೆಲಸ ಆರಂಭಿಸಿದ್ದಾರೆ.

‘ನಮ್ಮ ಹಳೇ ಮೈಸೂರು ಭಾಗದಲ್ಲಿ ಪಾರ್ಸಿ ರಂಗಭೂಮಿ ಪ್ರಭಾವ ಹೆಚ್ಚು. ಇದರಿಂದಾಗಿ ನಮ್ಮ ಭಾಗದ ಜನಪದ ಕಲೆಯಾಗಿದ್ದ ಮೂಡಲಪಾಯ ಯಕ್ಷಗಾನ ನೇಪಥ್ಯ ಸೇರುವಂತಾಯಿತು. ಕಂಪನಿ ನಾಟಕಗಳು ಕರಾವಳಿ ಕಡೆಗೆ ಪ್ರವೇಶ ಮಾಡಲಿಲ್ಲ. ಹೀಗಾಗಿ ಅಲ್ಲಿಯ ಪಡುವಲಪಾಯ ಯಕ್ಷಗಾನ ಕಲೆ ಜೀವಂತವಾಗಿ ಉಳಿಯಿತು. ಶಿವರಾಮ ಕಾರಂತ ಅವರಂಥವನ್ನು ದೊಡ್ಡ ಪ್ರಯೋಗ ಮಾಡಿ ಬ್ಯಾಲೆ ಮಟ್ಟಕ್ಕೂ ಕೊಂಡೊಯ್ದರು. ಇಂತಹ ಪರಿಸ್ಥಿತಿಯಲ್ಲಿ ಮೂಡಲಪಾಯಕ್ಕೆ ಮರುಜೀವ ನೀಡುವ ಅನಿವಾರ್ಯತೆ ಈಗ ನಮ್ಮ ಮುಂದಿದೆ’ ಎಂದು ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.

10 ತಿಂಗಳ ಕೋರ್ಸ್‌: ಡಾ.ಗಂಗೂಬಾಯಿ ಹಾನಗಲ್‌ ಪ್ರದರ್ಶನ ಕಲೆಗಳ ವಿವಿ ವತಿಯಿಂದ ಮೂಡಲಪಾಯ ಯಕ್ಷಗಾನದಲ್ಲಿ 10 ತಿಂಗಳ ಕೋರ್ಸ್‌ ಆರಂಭಿಸಲಾಗಿದೆ. ಇದು ಮೂಡಲಪಾಯ ಕಲೆಯ ಉಳಿವಿಗಾಗಿ ಯುವಜನರನ್ನು ಒಳಗೊಳ್ಳುವ ಪ್ರಮುಖ ಹೆಜ್ಜೆಯಾಗಿದೆ. 10 ತಂಗಳಲ್ಲಿ 7 ತಿಂಗಳ ಕಾಲ ಕೆಲೆಯ ಬಗೆಗಿನ ಅಧ್ಯಯನ, 8ನೇ ತಿಂಗಳಲ್ಲಿ ಒಂದು ಪ್ರಸಂಗದ ಕಲಿಕೆ, ನಂತರ 9ನೇ ತಿಂಗಳಲ್ಲಿ ವಿವಿಧೆಡೆ ತಿರುಗಾಟ ಮಾಡಿ ಪ್ರರ್ದಶನ ಮಾಡುವುದು ಹಾಗೂ 10ನೇ ತಿಂಗಳಲ್ಲಿ ಪ್ರಮಾಣ ಪತ್ರ ವಿತರಿಸುವ ಯೋಜನೆಗೆ ಈ ಕೋರ್ಸ್‌ ಉದ್ದೇಶವಾಗಿದೆ.

‘ಮೂಲಕ್ಕೆ ಧಕ್ಕೆಯಾಗದಂತೆ ವೇಷಭೂಷಣದಲ್ಲಿ ಕೊಂಚ ಬದಲಾವಣೆ ತರುವ ಚಿಂತನೆ ನಡೆದಿದೆ. ಅದಕ್ಕಾಗಿ ರಂಗಕರ್ಮಿ ಪ್ರಮೋದ್‌ ಶಿಗ್ಗಾಂವ್‌ ಅವರೊಡಗೂಡಿ ಕೆಲಸ ಮಾಡಲಾಗುತ್ತಿದೆ. ಮೂಡಪಲಾಯ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ ಮಾಡುವ ಒತ್ತಾಯವನ್ನೂ ಮಾಡಲಾಗಿದೆ’ ಎಂದು ಡಾ.ಚಂಡ್ರು ಕಾಳೇನಹಳ್ಳಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು