ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಬೊಂಬೆಯಾಟ ಉತ್ಸವ

Last Updated 2 ಜನವರಿ 2020, 8:55 IST
ಅಕ್ಷರ ಗಾತ್ರ

ಜಾನಪದ ಕಲೆಗಳಲ್ಲಿ ಅತಿ ಪುರಾತನವಾದುದು ಬೊಂಬೆಯಾಟ. ಈ ಬೊಂಬೆಯಾಟದ ಕಂಪನ್ನು ವಿದೇಶಗಳಲ್ಲಿ ಪಸರಿಸಿದವರು ನಗರದ ಧಾತು ಸಂಸ್ಥೆಯ ಅನುಪಮಾ ಹೊಸಕೆರೆ. ಕಳೆದ 20 ವರ್ಷಗಳಿಂದಅವರು ಸೂತ್ರದ ಬೊಂಬೆಯಾಟದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ.

ಇಂತಹ ಅಪರೂಪದ ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಧಾತು ಸಂಸ್ಥೆ ಕಳೆದ ಆರು ವರ್ಷಗಳಿಂದ ನಗರದಲ್ಲಿ ‘ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ’ ಆಯೋಜಿಸುತ್ತಿದೆ. ಈ ಬಾರಿ ಜ.3ರಿಂದ 5ರವರೆಗೆ ಮೂರು ದಿನಗಳ ಕಾಲ ಜಯನಗರದ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್‌ ಸಭಾಂಗಣದಲ್ಲಿ ಉತ್ಸವ ನಡೆಯಲಿದೆ.

ಬೊಂಬೆಯಾಟದ ಜೊತೆಗೆ ಸೂತ್ರದ ಬೊಂಬೆ, ಸಲಾಕಿ ಬೊಂಬೆಗಳ ಬಗ್ಗೆ ಕಮ್ಮಟ, ಕಾರ್ಯಾಗಾರ ಈ ಬಾರಿಯ ಉತ್ಸವದ ವಿಶೇಷತೆ. ಇಲ್ಲಿ ಬೊಂಬೆಗಳನ್ನು ಆಡಿಸುವ ವಿಧಾನ, ವೇದಿಕೆ ಹಿಂದೆ ಅವುಗಳ ನಿಯಂತ್ರಣ, ವಿನ್ಯಾಸ, ಬೊಂಬೆಗಳ ಮೈಮಾಟ, ವಿಧಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಕೇರಳ, ಒಡಿಶಾ, ಮಣಿಪುರವಷ್ಟೇ ಅಲ್ಲ, ಈಜಿಪ್ಟ್‌ನ ಸೂತ್ರದ ಬೊಂಬೆಯಾಟದವರು ಭಾಗವಹಿಸಿ, ಮಾಹಿತಿ ನೀಡಲಿದ್ದಾರೆ. ದೇಶ, ವಿದೇಶಗಳಲ್ಲಿ ಬೊಂಬೆಯಾಟದ ಮಹತ್ವ, ಇತಿಹಾಸದ ಬಗ್ಗೆ ತಿಳಿಸಲಾಗುತ್ತದೆ.

ಈ ಬಾರಿಯ ವಿಶೇಷವಾಗಿ ಈಜಿಪ್ಟ್‌, ಇಟಲಿ, ಮ್ಯಾನ್ಮಾರ್‌ನ ಬೊಂಬೆಯಾಟದ ಜೊತೆಗೆ ಅಲ್ಲಿನ ಬೊಂಬೆಯಾಟದ ವಿಶೇಷತೆಗಳ ಬಗ್ಗೆ ಅಲ್ಲಿನ ಕಲಾವಿದರು ಮಾತನಾಡಲಿದ್ದಾರೆ.

ಭಾರತವೇ ಮೂಲ

‘ಬೊಂಬೆಯಾಟ ಮೂಲ ಭಾರತ. ಭಾರತಕ್ಕೆ ಬಂದ ವಿದೇಶಿಯರಿಂದ 300– 400 ವರ್ಷಗಳ ಹಿಂದೆ ಈ ಕಲೆ ವಿದೇಶಗಳಿಗೂ ಪರಿಚಯವಾಯಿತು. ಇಲ್ಲಿಯ ಬೊಂಬೆಯಾಟ ಅಲ್ಲಿಗೆ ಹೋಗಿ ಆ ನೆಲದ ಗುಣಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡರು. ಈಗ ಬೇರೆ ಬೇರೆ ದೇಶಗಳಲ್ಲಿ ಬೊಂಬೆಯಾಟ ವಿಧಾನದಲ್ಲಿ ವೈಶಿಷ್ಟ್ಯಗಳಿವೆ. ಆದರೆ ಈಗಲೂ ಭಾರತದಲ್ಲಿನ ಬೊಂಬೆಯಾಟದ ಮೂಲತತ್ವದಲ್ಲಿ ಬದಲಾವಣೆಯಾಗಿಲ್ಲ. ಪುರಾಣದ ಕತೆಗಳನ್ನು, ನೀತಿ ಕತೆಗಳನ್ನು ತೋರಿಸಲಾಗುತ್ತದೆ. ವಿದೇಶಿಗರು ಈಗಲೂ ನಮ್ಮ ಸೂತ್ರದ ಬೊಂಬೆಯಾಟವನ್ನು ಆಸಕ್ತಿಯಿಂದ ನೋಡುತ್ತಾರೆ. ಆಧುನಿಕತೆ ಭರದಲ್ಲಿ ಇದು ಮರೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಇಂತಹ ಅಂತರರಾಷ್ಟ್ರೀಯ ಉತ್ಸವಗಳು ಮುಖ್ಯ ಎನ್ನುವುದು ಅನುಪಮಾ ಹೊಸಕೆರೆ ಮಾತು.

ಬೊಂಬೆಯಾಟದಲ್ಲಿ ಬಳಸುವ ಮುಖವಾಡಗಳಲ್ಲೂ ವಿಧಗಳಿವೆ. ಭಾರತದಲ್ಲಿ ಯಕ್ಷಗಾನದ ಗೊಂಬೆ, ತೊಗಲು ಗೊಂಬೆ ಹೀಗೆ ನಾನಾ ವಿಧಗಳಿವೆ. ಉತ್ಸವದಲ್ಲಿ ಕರ್ನಾಟಕ, ತೆಲಂಗಾಣ, ಒಡಿಶಾ, ಕೇರಳ, ಗುಜರಾತ್‌, ಮಣಿಪುರಿ ಬೊಂಬೆಯಾಟ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಅವರು ಬಳಸುವ ಮುಖವಾಡ, ಬೊಂಬೆ ಅಲಂಕಾರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕೇವಲ ಮನರಂಜನೆ ಅಲ್ಲ!

ಬೊಂಬೆಯಾಟ ಅಂದ್ರೆ ಬರೀ ಮನರಂಜನೆಯಲ್ಲ. ಇದು ಪುರಾತನ, ಸಾಂಪ್ರದಾಯಿಕ ಕಲೆ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಇದರಲ್ಲಿ ಆಧ್ಯಾತ್ಮಿಕತೆಯೂ ಇದೆ. ಆದರೆ ವಿದೇಶಗಳಲ್ಲಿ ಪ್ಲಾಸ್ಟಿಕ್‌ ಬೊಂಬೆಗಳನ್ನು ಬಳಸುತ್ತಾರೆ. ಆದರೆ ನಾವು ಈಗಲೂ ಮರದ ಗೊಂಬೆ, ತೊಗಲು ಬೊಂಬೆಗಳನ್ನೇ ಬಳಸುತ್ತಿದ್ದೇವೆ. ನಾವು ನಾಟ್ಯ, ಸಂಗೀತ, ಆಂಗಿಕ ಅಭಿನಯ, ತಾಳ ಎಲ್ಲವೂ ಇದೆ. ಇಂತಹ ಅಪರೂಪದ ಕಲೆಯನ್ನು ಉಳಿಸಿಕೊಂಡು ಹೋಗಬೇಕು ಎಂಬುವುದು ಬೊಂಬೆಯಾಟದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಅನುಪಮಾ ಅವರ ಕಳಕಳಿಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT