ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿರಳ ಅಂಚೆ ಚೀಟಿ ಸಂಗ್ರಹ ಪ್ರದರ್ಶನ

Last Updated 13 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಅಂಚೆ ಚೀಟಿಗಳ ಸಂಗ್ರಹ ಅನೇಕರ ಹವ್ಯಾಸ. ದೇಶ, ಭಾಷೆಗಳ ಗಡಿ ಮೀರಿದ ಈ ಹವ್ಯಾಸಕ್ಕೆ ಜಾಗತಿಕವಾಗಿ ಮನಸು ಬೆಸೆಯುವ ಶಕ್ತಿಯಿದೆ. ಪತ್ರಗಳು, ಪೋಸ್ಟ್‌ ಕಾರ್ಡ್‌ಗಳ ಕಾಲ ಇನ್ನೇನು ಮುಗಿಯಿತು ಅನ್ನುವ ಮಾತುಗಳ ನಡುವೆಯೂ ಅಂಚೆ ಲೋಕ ತನ್ನ ಜೀವಂತಿಕೆಯನ್ನು ಸಾಬೀತುಪಡಿಸುತ್ತಲೇ ಇದೆ. ಅದರ ಪ್ರತೀಕವೆಂಬಂತೆ ಕರ್ನಾಟಕ ವೃತ್ತ ಅಂಚೆ ಇಲಾಖೆ ಡಿ. 14ರಿಂಧ 16ರವರೆಗೆ ಕಬ್ಬನ್ ಪಾರ್ಕ್‌ನ ಸಚಿವಾಲಯದ ಕ್ಲಬ್‌ನಲ್ಲಿ ರಾಷ್ಟ್ರೀಯ ಮಟ್ಟದ ವಿರಳ ಅಂಚೆ ಚೀಟಿಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ಅಂಚೆ ಇಲಾಖೆಯ ಉದ್ಯೋಗಸ್ಥರು,ನಿವೃತ್ತ ಉದ್ಯೋಗಸ್ಥರು, ಅವರ ಮಕ್ಕಳು, ಮರಿಮೊಮ್ಮಕ್ಕಳು ಮಾತ್ರ ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಸಾಮಾನ್ಯವಾಗಿ ಅಂಚೆಚೀಟಿ ಸಂಗ್ರಹಕಾರರ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಆದರೆ, ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಂಚೆ ಇಲಾಖೆಯ ಸಿಬ್ಬಂದಿ ಸಂಗ್ರಹಿಸಿದ ಅಂಚೆಚೀಟಿಗಳ ಪ್ರದರ್ಶನ ಆಯೋಜಿಸಲಾಗುತ್ತದೆ. ಈ ಮೂಲ ಅಂಚೆ ಚೀಟಿ ಸಂಗ್ರಹ ಮತ್ತು ಪ್ರದರ್ಶನದ ಕುರಿತು ಅಂಚೆ ಇಲಾಖೆ ಸಿಬ್ಬಂದಿಗೆ ತಿಳಿವಳಿಕೆ ನೀಡುವುದು, ಸಾರ್ವಜನಿಕ ವಲಯದಲ್ಲಿ ಅಂಚೆಚೀಟಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಈ ಅಂಚೆ ಚೀಟಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಚೀಫ್ ಪೋಸ್ಟ್ ಜನರಲ್ ಮಾಸ್ಟರ್ (ಕರ್ನಾಟಕ)ಡಾ.ಚಾರ್ಲ್ಸ್‌ ಲೋಬೊ.

ಪ್ರದರ್ಶನದಲ್ಲಿ ಎರಡು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುವ ಜತೆಗೆ, ವಿವಿಧ ದೇಶಗಳ ಅಪರೂಪದ ಅಂಚೆಚೀಟಿಗಳ ಪ್ರದರ್ಶನ ನಡೆಯಲಿದೆ. ಮೂರು ದಿನಗಳ ಅಂಚೆಚೀಟಿಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳನ್ನೂ ಆಯೋಜಿಸಲಾಗಿದೆ. ಮಕ್ಕಳಿಗಾಗಿ ‘ಲೆಟರ್ಸ್ ಫಾರ್‌ಎವರ್’ ಅನ್ನುವ ವಿಶಿಷ್ಟ ಸ್ಪರ್ಧೆಯೊಂದನ್ನು ಇಲಾಖೆ ಆಯೋಜಿಸಿದ್ದು, ‘ಮಾತೃಭೂಮಿಗಾಗಿ ಒಂದು ಪತ್ರ’ ಎನ್ನುವ ವಿಷ‌ಯಕ್ಕೆ ಸಂಬಂಧಿಸಿದಂತೆ 50 ಸಾವಿರ ಮಕ್ಕಳು ಪತ್ರಗಳನ್ನು ಬರೆದುಕಳಿಸಿದ್ದಾರೆ. ಇದರಲ್ಲಿ ಅತ್ಯುತ್ತಮ ಪತ್ರ ಬರೆದವರಿಗೆ 31 ಅಂಚೆ ವಿಭಾಗಗಳಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡುತ್ತಾರೆ ಅವರು.

ಡಿ. 14ರಂದು ಅಂಚೆ ಚೀಟಿ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಬೆಂಗಳೂರು ಜಿಪಿಒ ಸ್ಥಾಪಕ ಕೆ.ಆರ್.ಮೂರ್ತಿ ಕುರಿತು ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಲಿದೆ. ಕೀಟಗಳ ಕುರಿತು ವಿಶಿಷ್ಟ ಅಂಚೆ ಚೀಟಿಗಳನ್ನು ಸಂಗ್ರಹಿಸಿರುವ ರಮಣಿ ಅವರು ಅಂದು ‘ಅಂಚೆಗಳಲ್ಲಿ ಕೀಟಗಳು’ ವಿಷಯ ಕುರಿತು ಉಪನ್ಯಾಸ ನೀಡುವರು. ಇದರ ಜತೆಗೆ ಸಂವಾದ ಕಾರ್ಯವೂ ನಡೆಯಲಿದೆ. 15ರಂದು ‘ಪೋಸ್ಟ್‌ ಕ್ರಾಸಿಂಗ್’ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಎಸ್.ರಾಜೇಂದ್ರಕುಮಾರ್ ಬಿಡುಗಡೆ ಮಾಡಲಿದ್ದಾರೆ. ಭೌಗೋಳಿಕತೆಯನ್ನು ಮೀರಿ ದೇಶ–ವಿದೇಶ ಜನರೊಂದಿಗೆ ಭಾವಬಂಧ ಬೆಸೆಯುವ ‘ಪೋಸ್ಟ್ ಕ್ರಾಸಿಂಗ್’ ಬಳಸುವವರ ಸಂಖ್ಯೆ ದೇಶದಲ್ಲೇ 70 ಸಾವಿರ ಜನರಿದ್ದಾರೆ. ವಿಶ್ವದಾದ್ಯಂತ 7 ಲಕ್ಷಕ್ಕೂ ಹೆಚ್ಚು ಮಂದಿ ‘ಪೋಸ್ಟ್ ಕ್ರಾಸಿಂಗ್’ ಮೂಲಕ ದೇಶ–ವಿದೇಶದ ಜನರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತಾರೆ ಚಾರ್ಲ್ಸ್‌.

15ರಂದು ‘ಮೈಸೂರು ಅಂಚೆ’ ಕುರಿತು ಎಂ.ಎಸ್. ರಾಮು ವಿಶೇಷ ಉಪನ್ಯಾಸ ನೀಡುವರು. ಬ್ರಿಟಿಷರು ಭಾರತದಲ್ಲಿ ಅಂಚೆ ವ್ಯವಸ್ಥೆ ಆರಂಭಿಸುವ ಮುನ್ನವೇ ಚಿಕ್ಕದೇವರಾಯ ಒಡೆಯರ್ ಅವರು ಮೈಸೂರು ಭಾಗದಲ್ಲಿ ‘ಮೈಸೂರು ಅಂಚೆ’ ಎನ್ನುವ ವಿಶಿಷ್ಟ ಅಂಚೆ ವ್ಯವಸ್ಥೆ ರೂಪಿಸಿದ್ದರು. ಒಂದೂರಿನಿಂದ ಮತ್ತೊಂದು ಊರಿಗೆ ಅಂಚೆ ವಿಲೇವಾರಿ ಮಾಡುತ್ತಿದ್ದವರನ್ನು ‘ಹರಿಕಾರರು’ ಎಂದೇ ಕರೆಯಲಾಗುತ್ತಿತ್ತು. ಇವರು ಬೇಹುಗಾರಿಕೆಯ ಕೆಲಸವನ್ನೂ ಮಾಡುತ್ತಿದ್ದರು. 1889ರ ಹೊತ್ತಿಗೆ ಈ ಪದ್ಧತಿ ನಿಂತು ಹೋಯಿತು. ಈ ಬಗ್ಗೆ ಪ್ರದರ್ಶನದಲ್ಲಿ ವಿವರವಾದ ಮಾಹಿತಿ ದೊರೆಯಲಿದೆ.

16ರಂದು ಮಕ್ಕಳಿಗಾಗಿ ಪಿಕ್ ಅಂಡ್ ಸ್ಪೀಕ್ ಸ್ಪರ್ಧೆ ನಡೆಸಲಾಗುತ್ತಿದೆ. ಅಂಚೆ ಚೀಟಿಗಳನ್ನು ಆಯ್ದು ಕೊಳ್ಳುವ ಮಕ್ಕಳು ತಮ್ಮ ಪಾಲಿಗೆ ಬರುವ ಅಂಚೆ ಚೀಟಿಗಳಲ್ಲಿರುವ ವಿಷಯಗಳ ಕುರಿತು ಮಾತನಾಡುತ್ತಾರೆ. ಅಂತೆಯೇ ಅಂಚೆ ಚೀಟಿಗಳ ಕುರಿತು ’ಟ್ರಷರ್ ಹಂಟರ್’ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಫ್ರೆಂಚ್ ಇಂಡಿಯಾದ ಅಂಚೆ ಚೀಟಿಗಳು ಆಕರ್ಷಣೆಯ ಕೇಂ‌ದ್ರ ಬಿಂದು. ಪಾಂಡಿಚೆರಿಯಲ್ಲಿ ಆಳ್ವಿಕೆ ನಡೆಸಿದ ಫ್ರೆಂಚರು ಭಾರತದ ಬ್ರಹ್ಮ, ವಿಷ್ಣು, ಮಹೇಶ್ವರ ದೇವರ ಚಿತ್ರಗಳು, ಭಾರತದ ವಿವಿಧ ದೇವಾಲಯಗಳ ಚಿತ್ರಗಳನ್ನೂ ಅಂಚೆ ಚೀಟಿಯಲ್ಲಿ ತಂದಿದ್ದರು. ಅಂತೆಯೇ ಮಹಾತ್ಮ ಗಾಂಧಿ ಅವರ ಜೀವನ ಚಿತ್ರಣದ ಅಂಚೆ ಚೀಟಿಗಳು, ರಾಮಾಯಣವನ್ನು ಬಿಂಬಿಸುವ ಅಂಚೆಚೀಟಿಗಳು ಈ ಪ್ರದರ್ಶನದ ಮುಖ್ಯ ಆಕರ್ಷಣೀಯ ಸಂಗತಿಗಳಾಗಿವೆ.

ಅಂಚೆ ಚೀಟಿ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇ‌ಶವಿದೆ.

ರಾಷ್ಟ್ರೀಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ: ಉದ್ಘಾಟನೆ ಮತ್ತು ಬೆಂಗಳೂರು ಜಿಪಿಒ ಸ್ಥಾಪಕ ಕೆ.ಆರ್. ಮೂರ್ತಿ ಕುರಿತು ವಿಶೇಷ ಅಂಚೆ ಲಕೋಟೆ ಬಿಡುಗಡೆ –ಡಾ.ಚಾರ್ಲ್ಸ್ ರೋಬೊ, ಅತಿಥಿಗಳು–ಡಾ.ಎಸ್. ರಮಣಿ, ಯು.ಡಿ. ನರಸಿಂಹಯ್ಯ. ಆಯೋಜನೆ–ಅಂಚೆ ಇಲಾಖೆ, ಸ್ಥಳ–ಸಚಿವಾಲಯ ಕ್ಲಬ್, ಕಬ್ಬನ್ ಪಾರ್ಕ್. ಬೆಳಿಗ್ಗೆ 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT