ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪು | ಯಕ್ಷಲೋಕದ ಧ್ರುವ ನಕ್ಷತ್ರ - ಕುಂಬಳೆ ಸುಂದರ ರಾವ್‌

Last Updated 3 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಯಕ್ಷಗಾನದ ಸುವರ್ಣ ಯುಗದ ದೊಡ್ಡ ಪ್ರತಿಭೆಯೆಂದರೆ ಕುಂಬಳೆ ಸುಂದರ ರಾವ್‌. ತಮ್ಮ ಅಸಾಧಾರಣ ಪ್ರತಿಭೆಯಿಂದ ಲಕ್ಷಾಂತರ ಯಕ್ಷಗಾನ ರಸಿಕರ ಮನಸೂರೆಗೊಂಡಿದ್ದ ಅವರು, ಯಕ್ಷಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು.

ಇಡೀ ರಾತ್ರಿ ನಡೆಯುತ್ತಿದ್ದ ‘ಮಹಾರಥಿ ಕರ್ಣ’ ಯಕ್ಷಗಾನ ಪ್ರದರ್ಶನದಲ್ಲಿ ಒಟ್ಟು ಮೂರು ಕರ್ಣರಿರುತ್ತಿದ್ದರು. ಮೊದಲನೆಯ ಕರ್ಣ ಹುಡುಗ, ಉತ್ಸಾಹಿ, ಪುತ್ತೂರು ಶ್ರೀಧರ ಭಂಡಾರಿಯವರ ವೇಷ. ಎರಡನೆಯ ಕರ್ಣ ಬಹುಬಗೆಯ ಕ್ಲೇಷಗಳಿಗೊಳಗಾದವನು, ಉದ್ಯೋಗ ಪರ್ವದಲ್ಲಿ ಕಾಣಸಿಗುವವನು. ಇಲ್ಲಿ ಕುಂಬಳೆ ಸುಂದರರೇ ಕರ್ಣ. ಈ ಭಾಗದಲ್ಲಿ ತನ್ನ ಶ್ರದ್ಧೆಯ ಕೇಂದ್ರವನ್ನೇ ಚೂರಾಗಿಸಿಕೊಂಡು ಕರ್ಣ ಬಳಲುತ್ತಾನೆ. ಕೊನೆಯ ದುರಂತ ಕರ್ಣನ ವೇಷ ಮಾಡುತ್ತಿದ್ದವರು ಪುತ್ತೂರು ನಾರಾಯಣ ಹೆಗ್ಡೆಯವರು. ಶ್ರೀಧರ, ಸುಂದರರಾಯರು ಮತ್ತು ಹೆಗ್ಡೆಯವರು ಸೇರಿ ಯಕ್ಷಗಾನದ ಸುವರ್ಣಯುಗಕ್ಕೊಂದು ಭಾಷ್ಯ ಬರೆಯುತ್ತಿದ್ದರು.

ನಾನು ಕಣ್ಣು ಬಾಯಿಬಿಟ್ಟು ಆಟ ನೋಡುತ್ತಿದ್ದೆ. ಕೌರವನ ಆಸ್ಥಾನದಲ್ಲಿ ಧುರವೀಳ್ಯ ಸ್ವೀಕರಿಸಿ ಹೊರಟ ಕೃಷ್ಣ ಅನತಿ ದೂರ ಸಾಗಿ ಇದ್ದಕ್ಕಿದ್ದಂತೆ ಹಿಂಬಾಲಿಸಿ ಬರುತ್ತಿದ್ದ ಕರ್ಣನ ಬರಸೆಳೆದು ಅಪ್ಪಿ ‘ಕರ್ಣಾ, ನನಗೂ ನಿನಗೂ ಭೇದವೇ?’ ಎಂದು ಕೇಳುತ್ತಾನೆ. ಇದುವರೆಗೆ ತನ್ನನ್ನು ಸೂತ ಪುತ್ರನೆಂದೇ ಭಾವಿಸಿಕೊಂಡಿದ್ದ ಕರ್ಣ ದಿಗ್ಭ್ರಮೆಗೊಂಡು ಹೇಳುತ್ತಾನೆ - ‘ಕೃಷ್ಣಾ, ನೀನೋ ಒಂದು ಪರ್ವತ, ನಾನೋ ಪ್ರಪಾತ. ನೀನೋ ಆ ಮಹಾ ಸಿಂಧು, ನಾನೋ ಆ ಸಿಂಧುವಿನಿಂದ ಸಿಡಿದು ಬಿದ್ದ ಒಂದು ಬಿಂದು, ಹೇ ಜಗದ ಬಂಧೂ, ನಾನೂ ನೀನೂ ಹೇಗೆ ಒಂದು?’ ಹೀಗೆ ಹೇಳುವಾಗ ಕುಂಬಳೆಯವರ ಮಾತುಗಳು ಯಾಂತ್ರಿಕವಾಗುತ್ತಿರಲಿಲ್ಲ. ಬದಲು ಭಾವೋತ್ಕರ್ಷದಿಂದ ಕೂಡಿರುತ್ತಿದ್ದುವು. ಭಾರತೀಯ ಕಾವ್ಯ ಮೀಮಾಂಸೆಯ ಎಲ್ಲ ಲಕ್ಷಣಗಳೂ ಕುಂಬಳೆಯರ ಮಾತಿನ ಮುಂದೆ ನಮಗೆ ಸಪ್ಪೆ ಅನಿಸುತ್ತಿದ್ದವು.

ನಾನು ಯಕ್ಷಗಾನ ನೋಡಲು ಆರಂಭಿಸಿದ್ದು ಬಹುಮಟ್ಟಿಗೆ 1959-60ರ ಸುಮಾರಿನಲ್ಲಿ. ಅಂದಿನಿಂದ ಇಂದಿನವರೆಗೆ ಕಳೆದ 60 ವರ್ಷಗಳಲ್ಲಿ ನಾನು ನೂರಾರು ಯಕ್ಷಗಾನಗಳನ್ನು ನೋಡಿದ್ದೇನೆ, ತಾಳಮದ್ದಳೆಗಳ ವಾದ ವಿವಾದಗಳಿಗೆ ಕಿವಿಗೊಟ್ಟಿದ್ದೇನೆ. ಹವ್ಯಾಸಿ ಕಲಾವಿದರೊಂದಿಗೆ ಅವಕಾಶ ಸಿಕ್ಕಿದಾಗಲೆಲ್ಲ ಗೆಜ್ಜೆ ಕಟ್ಟಿ, ಕುಣಿದು, ಅರ್ಥ ಹೇಳಲು ಹೆಣಗಿದ್ದೇನೆ. ಕಲಾವಿದರೊಂದಿಗೆ ವಿದೇಶ ಸುತ್ತಿದ್ದೇನೆ. ಈಗ 2022ರ ಕೊನೆಯಲ್ಲಿ ಒಂದು ಕ್ಷಣ ನಿಂತು ಹಿಂದಿರುಗಿ ನೋಡಿದರೆ, ನಾನು ಮತ್ತು ನನ್ನ ತಲೆಮಾರಿನ ಜನರು ಯಕ್ಷಗಾನ ನೋಡುತ್ತಿದ್ದ ಕಾಲವು ಯಕ್ಷಗಾನದ ಸುವರ್ಣ ಯುಗ ಆಗಿತ್ತೇ ಎಂಬ ಭಾವ ಬಲವಾಗಿ ಮೂಡುತ್ತಿದೆ.

ನಾವೆಲ್ಲ ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ, ಅಗರಿ, ಪುತ್ತಿಗೆ, ಪದ್ಯಾಣ, ಉಪ್ಪೂರು, ಕಾಳಿಂಗ ನಾವುಡ, ನೀಲಾವರ ಮೊದಲಾದ ಸಾರ್ವಕಾಲಿಕ ಮಹತ್ವದ ಭಾಗವತರ ಹಾಡುಗಳಿಗೆ ಕಿವಿ ಕೊಟ್ಟಿದ್ದೇವೆ. ನಿಡ್ಲೆ ನರಸಿಂಹ ಭಟ್‌, ದಿವಾಣ ಭೀಮಭಟ್‌, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌, ಕಾಸರಗೋಡು ವೆಂಕಟರಮಣ, ಕುದ್ರೆ ಕೂಡ್ಲು ರಾಮಭಟ್‌, ಪದ್ಯಾಣ ಶಂಕರ ನಾರಾಯಣ ಭಟ್‌, ಗೋಪಾಲಕೃಷ್ಣ ಕುರುಪ್‌, ಹಿರಿಯಡಕ ಗೋಪಾಲ ರಾವ್‌ ಮತ್ತಿತರ ಮಹಾನ್‌ ಕಲಾವಿದರ ಕೈಚಳಕಗಳಿಗೆ ಪುಳಕಗೊಂಡಿದ್ದೇವೆ.

ರಂಗದ ಮೇಲೆ ಇನ್ನಿಲ್ಲದಂತೆ ಮೆರೆದ ಪಡ್ರೆ ಚಂದು, ಅಳಿಕೆ ರಾಮಯ್ಯ ರೈ, ಕುರಿಯ ವಿಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್‌, ರಾಮದಾಸ ಸಾಮಗ, ಪುತ್ತೂರು ನಾರಾಯಣ ಹೆಗ್ಡೆ, ಕೋಳ್ಯೂರು ರಾಮಚಂದ್ರ ರಾವ್‌, ಎಂಪೆಕಟ್ಟೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ವಿಟ್ಲ ಗೋಪಾಲಕೃಷ್ಣ ಜೋಶಿ, ಬಂಟ್ವಾಳ ಜಯರಾಮ ಆಚಾರ್ಯ, ಕೆರೆಮನೆ ಗಜಾನನ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ, ಪ್ರಭಾಕರ ಜೋಶಿ, ಬಣ್ಣದ ಮಾಲಿಂಗ, ಕುಟ್ಯಪ್ಪು, ಅಂಬು, ಶ್ರೀಧರ ಭಂಡಾರಿ, ಅರುವ ಕೊರಗಪ್ಪ, ಕೊಂಡದಕುಳಿ ರಾಮಚಂದ್ರ ಹೆಗಡೆ ಮೊದಲಾದ ಕಲಾವಿದರ ಭಿನ್ನ ಪಾತ್ರಾಭಿವ್ಯಕ್ತಿಗಳನ್ನು ನೋಡಿ ಸಂಭ್ರಮಿಸಿದ್ದೇವೆ.

ಇರಾ, ಕರ್ನಾಟಕ, ಧರ್ಮಸ್ಥಳ, ಕಟೀಲು, ಕದ್ರಿ, ಸುರತ್ಕಲ್‌, ಮೇಳಗಳು ತಿರುಗಾಟದಲ್ಲಿ ಇತಿಹಾಸ ಸೃಷ್ಟಿಸಿದ್ದಕ್ಕೆ ನಾವೇ ಸಾಕ್ಷಿ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್‌, ಅನಂತರಾಮ ಬಂಗಾಡಿ ಅವರಂತಹವರು ರಂಗದ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಿದ ಪ್ರಸಂಗಗಳನ್ನು ಬರೆದದ್ದು ಕೂಡಾ ನಮ್ಮ ಕಾಲದಲ್ಲಿಯೇ. ಶಿವರಾಮ ಕಾರಂತರು ಕುಣಿದಿದ್ದನ್ನು ನಾವು ಕಂಡಿದ್ದೇವೆ. ಈ ಅರ್ಥದಲ್ಲಿ ನಾವು ಪುಣ್ಯವಂತರು. ಯಕ್ಷಗಾನದ ಸುವರ್ಣ ಯುಗಕ್ಕೆ ಸಾಕ್ಷಿಗಳಾದ ಭಾಗ್ಯ ನಮ್ಮದು. ಇಂಥ ಕಾಲಘಟ್ಟದ ಬಹುದೊಡ್ಡ ಪ್ರತಿಭೆಯೆಂದರೆ ಕುಂಬಳೆ ಸುಂದರ ರಾವ್‌. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ಕುಂಬಳೆಯವರು ಲಕ್ಷಾಂತರ ಯಕ್ಷಗಾನ ರಸಿಕರ ಮನಸೂರೆಗೊಂಡದ್ದಲ್ಲದೆ, ಯಕ್ಷಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಇತಿಹಾಸ ಸೃಷ್ಟಿಸಿದರು.

ನಮ್ಮ ಭಾಗ್ಯವೋ ಎಂಬಂತೆ, ಸುಂದರ ರಾಯರು ತಮ್ಮ ಆತ್ಮಚರಿತ್ರೆಯನ್ನೂ ಬರೆದು ಮಹದುಪಕಾರ ಮಾಡಿದ್ದಾರೆ. ಸುಂದರಕಾಂಡ (ಸಂ: ಅಮೃತ ಸೋಮೇಶ್ವರ) ಅವರ ಅಭಿನಂದನ ಕೃತಿಯೇ ಹೌದಾದರೂ, ಅದರ ಆರಂಭದ ‘ಯಕ್ಷಪಥ ಯಾತ್ರಿಕ’ ಭಾಗದಲ್ಲಿ 236 ಪುಟಗಳಷ್ಟು ದೀರ್ಘ‌ವಾದ ಜೀವನ ಸ್ಮೃತಿ ಸಂಚಯವಿದ್ದು, ಅದರಲ್ಲಿ ಕುಂಬಳೆಯವರು ತಮ್ಮ ಕಲಾ ಜೀವನದ ಏಳು-ಬೀಳುಗಳ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ.

ಕುಂಬಳೆ ಪರಿಸರದಲ್ಲಿ ನೇಯ್ಗೆ ಕುಲ ವೃತ್ತಿ ಮಾಡಿಕೊಂಡಿದ್ದ ಅವರ ತಂದೆಯ ಹೆಸರು ಕುಂಞಕಣ್ಣ ಮತ್ತು ತಾಯಿ ಕಲ್ಯಾಣಿ. ಬಡಕುಟುಂಬದಲ್ಲಿ ಜನಿಸಿದ ಮಲೆಯಾಳಂ ಮಾತೃಭಾಷೆಯ ಸುಂದರ ಎಂಬ ಹೆಸರಿನ ಹುಡುಗ, ಅತ್ತ ನೇಯ್ಗೆಯನ್ನೂ ಕಲಿಯದೆ, ಇತ್ತ ಶಾಲೆಗೂ ಹೋಗದೆ, ಯಕ್ಷಗಾನ ಕಲಾವಿದನಾಗಿ ಹಂತ ಹಂತವಾಗಿ ಮೇಲೇರುತ್ತಾ ಹೋಗಿ, ಕುಂಬಳೆ ಸುಂದರ ರಾವ್‌ ಆಗಿ ರೂಪುಗೊಂಡ ಬಗೆಯ ಅತ್ಯಂತ ರೋಚಕ ವಿವರಗಳು ಇಲ್ಲಿವೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಊರು ಬಿಡಬೇಕಾದ ಸಂದರ್ಭ ಬಂದದ್ದು, ಬಣ್ಣಹಚ್ಚಿ, ವೇಷ ಕಟ್ಟಿದರೂ ರಂಗಸ್ಥಳ ಪ್ರವೇಶ ಮಾಡಲಾಗದೇ ವೇಷ ಬಿಚ್ಚಿ, ಬಣ್ಣ ಅಳಿಸದೇ ಮನೆ ಸೇರಿದ ಪ್ರಸಂಗ - ಇತ್ಯಾದಿ ಘಟನೆಗಳನ್ನು ಸುಂದರ ರಾಯರು ಒಂದು ಬಗೆಯ ಮುಗ್ಧತೆಯಲ್ಲಿ ವಿವರಿಸುವ ಸೊಗಸನ್ನು ಓದಿಯೇ ತಿಳಿದುಕೊಳ್ಳಬೇಕು. ಕುಂಬಳೆಯವರು ಬಡತನದ ಬೇಗುದಿಯಲ್ಲಿ ಉರಿದು, ಅದರ ಬೂದಿಯಿಂದೆದ್ದು ಬಂದು ಮುಂದೆ ಸುಮಾರು 60 ವರ್ಷಗಳ ಕಾಲ ಯಕ್ಷಗಾನ ರಂಗಭೂಮಿಯ ಅದ್ವಿತೀಯ ಕಲಾವಿದರಾಗಿ ರಾರಾಜಿಸಿದ್ದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ನಿರಂತರ ಅವಮಾನಕ್ಕೊಳಗಾದ ‘ಮಾಸ್ಟರ್‌ ಸುಂದರ’ ಮುಂದೆ ಪ್ರಾಸಬದ್ಧವಾಗಿ ಮಾತಾಡುವಾಗ ಬದುಕು ಮತ್ತು ರಂಗಭೂಮಿ ಅನುಸಂಧಾನಗೊಂಡು, ನನ್ನಂಥ ಅನೇಕ ಪ್ರೇಕ್ಷಕರ ಕಣ್ಣು ತೇವಗೊಂಡದ್ದು ಸುಳ್ಳಲ್ಲ. ಕೂಡ್ಲು ಮೇಳ, ಸುರತ್ಕಲ್‌ ಮೇಳ, ಕುಂಡಾವು, ಧರ್ಮಸ್ಥಳ ಮೇಳಗಳಲ್ಲಿ ಕುಂಬಳೆಯವರು ವೇಷಧಾರಿಯಾಗಿ, ಊರೆಲ್ಲಾ ತಾಳಮದ್ದಳೆಯ ಅರ್ಥಧಾರಿಯಾಗಿ ಜನಮನ ಸೂರೆಗೊಂಡರು.

ಈಗ ದೆಹಲಿಯಲ್ಲಿ ಕಣ್ಣು ತೇವಮಾಡಿಕೊಂಡು ಕುಳಿತಿರುವ ನನ್ನ ಮುಂದೆ ಕುಂಬಳೆಯವರ ಚಂದ್ರಾವಳಿಯ ಕೃಷ್ಣ, ಸುಧನ್ವ ಮೋಕ್ಷದ ಸುಧನ್ವ, ಮಹಾಕಲಿ ಮಗಧೇಂದ್ರದ ಕೃಷ್ಣ, ಕೋಟಿ ಚೆನ್ನಯದ ಪೆರುಮಲೆ ಬಲ್ಲಾಳ, ಸಿರಿಮಹಾತ್ಮೆಯ ಕಾಂತು ಪೂಂಜ, ಕಚದೇವಯಾನಿಯ ಕಚ, ಕಾಯಕಲ್ಪದ ಚ್ಯವನ, ಅಮರವಾಹಿನಿಯ ಭಗೀರಥ, ಪಾದುಕಾಪ್ರದಾನದ ಭರತ, ಭರತೇಶ ವೈಭವದ ಭರತ, ಮಹಾರಥಿ ಕರ್ಣದ ಕರ್ಣ, ತ್ರಿಪುರ ಮಥನದ ಚಾರ್ವಾಕ, ಗೋಗ್ರಹಣದ ಉತ್ತರ, ಚಕ್ರವರ್ತಿ ದಶರಥದ ದಶರಥ, ವಿಶ್ವಾಮಿತ್ರ ಮೇನಕೆಯ ವಿಶ್ವಾಮಿತ್ರ ಮೊದಲಾದ ಪಾತ್ರಗಳು ಜೀವಂತವಾಗಿ ಕಾಣುತ್ತಿವೆ. ಅವರ ಮಾತುಗಳಿಗೆ ಕ್ರಿಯೆಯಾಗುವ ಅಪೂರ್ವ ಗುಣವಿರುವುದರಿಂದಾಗಿ ‘ಕುಂಬಳೆಯವರಿಗೆ ಕುಣಿಯಲು ಬರುವುದಿಲ್ಲ’ ಎಂಬ ಮಾತಿಗೆ ಅರ್ಥವೇ ಉಳಿಯುವುದಿಲ್ಲ. ದುರಂತದ ಛಾಯೆ ಇರುವ ಪಾತ್ರಗಳನ್ನು ಕುಂಬಳೆಯವರ ಹಾಗೆ ನಿರ್ವಹಿಸುವ ಕಲಾವಿದರು ಯಕ್ಷಲೋಕದಲ್ಲಿ ಬಹಳ ಜನರಿಲ್ಲ.

ನಾನು ಬದುಕಿದ ಕಾಲಘಟ್ಟದ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ಕುಂಬಳೆಯವರೂ ಕಾರಣ ಎಂಬುದು ಸಣ್ಣ ಸಂಗತಿಯೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT