ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಮೊದಲ ಪ್ರಜೆಗಳು...

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಕರಪನಾ, ಗೊಂಡ್‌, ಭಿಲ್‌, ನಾಗಾ, ಹಾಜಾ, ತೋಬಾ, ಹಿಂಬಾ, ಬಾಕಾ, ಅಪಚೆ...

ಏನಿವೆಲ್ಲ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರಾ? ಜಗತ್ತಿನ ಕೆಲವು ವಿಶಿಷ್ಟ ಮೂಲನಿವಾಸಿ ಸಮುದಾಯಗಳ ಹೆಸರುಗಳಿವು.

ನೀವು ಅವರನ್ನು ಮೂಲನಿವಾಸಿಗಳು ಎಂದೆನ್ನಬಹುದು. ಮೊದಲ ಪ್ರಜೆಗಳು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಎಂದೂ ಕರೆಯಬಹುದು. ಅವರೆಲ್ಲ ಪರಿಸರದೊಂದಿಗೆ ಒಂದಾಗಿ ಬಾಳುವವರು. ಕಾಡಿನಲ್ಲೇ ಬದುಕು ಕಟ್ಟಿಕೊಂಡವರು. ಜಗತ್ತಿನ ಸುಮಾರು ನಾಲ್ಕು ಸಾವಿರ ವಿಶಿಷ್ಟ ಭಾಷೆಗಳ ವಾರಸುದಾರರು ಅವರು. ಅವರ ಬಹುತೇಕ ಭಾಷೆಗಳಿಗೆ ಲಿಪಿಗಳಿಲ್ಲ. ಮೂಲನಿವಾಸಿಗಳ ಜನಸಂಖ್ಯೆಯ ಪ್ರಮಾಣವಾದರೂ ಎಷ್ಟು ಅಂತೀರಿ? ಅದು ಜಗತ್ತಿನ ಜನಸಂಖ್ಯೆಯ ಶೇಕಡ 6.2ರಷ್ಟು ಮಾತ್ರ.

ನೆಲವನ್ನೇ ಆಶ್ರಯಿಸಿದ ಈ ಜನರಿಗೆ ತಮ್ಮದೇ ಸಂಸ್ಕೃತಿ ಉಂಟು, ರೀತಿ ರಿವಾಜುಗಳೂ ಉಂಟು. ಕೆಲವು ಜನಾಂಗಗಳು ಆಧುನಿಕ ಸಂಪರ್ಕಕ್ಕೂ ಬಂದಿದ್ದುಂಟು. ‘ತಲೆಮಾರುಗಳಿಂದ ಆಧುನಿಕತೆಯ ಸ್ಪರ್ಶವಿಲ್ಲದ ಬುಡಕಟ್ಟು ಜನಾಂಗದವರು’ ಎಂದು ಅವರನ್ನು ‘ನಾಗರಿಕ’ ಸಮಾಜ ಗುರ್ತಿಸುವುದುಂಟು.

ಒಂದು ಅಂದಾಜಿನ ಪ್ರಕಾರ, ವಿಶ್ವದಲ್ಲಿ ಮೂಲನಿವಾಸಿಗಳ ಒಟ್ಟು ಸಂಖ್ಯೆ 47.6 ಕೋಟಿಯಷ್ಟಿದ್ದು, ಅವರೆಲ್ಲ ಜಗತ್ತಿನ ಮೂಲೆ, ಮೂಲೆಯಲ್ಲಿ –ಸುಮಾರು 90 ದೇಶಗಳಲ್ಲಿ– ಹಂಚಿ ಹೋಗಿದ್ದಾರೆ. ಜಗತ್ತಿನ ಶೇಕಡ 80ರಷ್ಟು ಜೀವವೈವಿಧ್ಯದ ಸಂರಕ್ಷಣೆಗೆ ಅವರು ಕಾರಣರಾಗಿದ್ದಾರೆ.

ಆಫ್ರಿಕಾದ ತುರ್ಕಾನಾ ದೇಶದ ಆದಿವಾಸಿ ದಂಪತಿ

ಈ ಅಪರೂಪದ ಜನಾಂಗಗಳನ್ನು ರಕ್ಷಿಸಲು ಅವರಿಗೆ ಆಹಾರದ ಭದ್ರತೆ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಅಗತ್ಯ ಎನ್ನುವುದು ಮೂಲನಿವಾಸಿಗಳ ಕ್ಷೇಮಾಭಿವೃದ್ಧಿಗಾಗಿ ದುಡಿಯುತ್ತಿರುವ ಸಂಘಟನೆಗಳ ಅಭಿಪ್ರಾಯ. ಕೆಲವು ದೇಶಗಳಲ್ಲಿ ಆದಿವಾಸಿಗಳ ನೆಲೆಗಳು ಹಾಗೂ ಹೊರಜಗತ್ತಿನ ಮಧ್ಯದ ಸಂಪರ್ಕ ಕೊಂಡಿಯಾಗಿ ರೇಡಿಯೊ ಕೆಲಸ ಮಾಡುತ್ತಿದೆ.

ಈ ವರ್ಷ ಜಗತ್ತನ್ನೇ ಕೋವಿಡ್‌-19 ಆಕ್ರಮಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ಸೋಂಕು ನಗರವಾಸಿಗಳನ್ನು ಬಾಧಿಸಿದಷ್ಟು ಈ ಮಣ್ಣಿನ ಮಕ್ಕಳನ್ನು ಬಾಧಿಸಿಲ್ಲ ಎನ್ನುವುದೇನೋ ನಿಜ. ಆದರೆ, ಅಮೆಜಾನ್‌ ಕಾಡಿಗೂ ಕೊರೊನಾ ವೈರಸ್‌ ಹರಡಿದ್ದರಿಂದ ಬ್ರೆಜಿಲ್‌ನ ಮೂಲನಿವಾಸಿಗಳು, ಅದರಲ್ಲೂ ಕರಪನಾ ಸಮುದಾಯ, ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳೀಯವಾಗಿ ಸಿಗುವ ಗಿಡಮೂಲಿಕೆಗಳನ್ನು ಈ ಸಮುದಾಯ ಹೆಚ್ಚಾಗಿ ಆಶ್ರಯಿಸಿದ್ದರೂ ಅವರಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇರುವುದು ಮಾನವಶಾಸ್ತ್ರಜ್ಞರಲ್ಲಿ ಕಳವಳ ಮೂಡಿಸಿದೆ.

ಕರಪನಾ ಸಮುದಾಯದ ಜನರಲ್ಲಿ ಈಗ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮುಖಗವಸುಗಳನ್ನು ಧರಿಸಲೂ ಹೇಳಲಾಗುತ್ತಿದೆ. ತಲೆಯಲ್ಲಿ ಪ್ರಭಾವಳಿಯಂತೆ ಗರಿಗಳ ತುರಾಯಿ ಕಟ್ಟುತ್ತಿದ್ದ ಜನರಿಗೆ, ಮುಖಗವಸು ಧರಿಸುವುದು ಏಕೋ ಕಿರಿಕಿರಿಯಾಗಿ ಕಾಡುತ್ತಿದೆ.

ಆಫ್ರಿಕಾದ ಹಾಜಾದಂತಹ ಸಮುದಾಯ ಈಗಲೂ ಕಾಡಿನಲ್ಲಿ ಬೇಟೆಯಾಡುವ ಮೂಲಕವೇ ಜೀವನ ಸಾಗಿಸುತ್ತದೆ. ಆ ಸಮುದಾಯದವರಿಗೆ ವಾಸ್ತವ್ಯ ಹೂಡಲು ಸ್ವಂತದ್ದೊಂದು ಮನೆಯಿಲ್ಲ. ಕಾಡಿನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೇಟೆಯರಸಿ ಹಾಜಾಗಳ ಗುಂಪು ಅಲೆದಾಡುತ್ತಲೇ ಇರುತ್ತದೆ.

ಒಂದೆಡೆ ಆಧುನಿಕತೆಯ ದಾಳಿ, ಇನ್ನೊಂದೆಡೆ ಒಕ್ಕಲೆಬ್ಬಿಸುವ ಆಟ, ಮತ್ತೊಂದೆಡೆ ಕಳ್ಳ ಸಾಗಾಣಿಕೆದಾರರ ಹಾವಳಿ... ಹೀಗೆ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ ಮೂಲನಿವಾಸಿಗಳು. ಒಂದೆಡೆ ಬಲವಂತವಾಗಿ ಕಾಡಿನಿಂದ ಒಕ್ಕಲೆಬ್ಬಿಸಿ, ಹೊರದಬ್ಬುತ್ತಿರುವ ಸರ್ಕಾರಗಳು, ಇನ್ನೊಂದೆಡೆ ಆ ಜನಾಂಗಗಳಿಗೆ ಪೌರತ್ವ ನೀಡಿ, ಶಾಸನಬದ್ಧ ಹಕ್ಕುಗಳನ್ನು ನೀಡಲು ಹಿಂದೇಟು ಹಾಕುತ್ತಿವೆ. ನಾಗರಿಕ ಸಮಾಜ ಕೂಡ ಅವರನ್ನು ಕೀಳುದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿದೆ. ಈ ಜನಾಂಗಗಳ ಸಾಂಪ್ರದಾಯಿಕ ಜ್ಞಾನ ಹಾಗೂ ಪಾರಂಪರಿಕ ಕಲೆಗಳ ಕೌಶಲವನ್ನು ಶೋಷಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೊರಜಗತ್ತಿನ ‘ನಾಗರಿಕ’ ಸಮಾಜದ ಒತ್ತಡದಿಂದ ಮೂಲನಿವಾಸಿಗಳ ಸಂಸ್ಕೃತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಮೂಲನಿವಾಸಿಗಳ ಸಂಸ್ಕೃತಿಯನ್ನು ಯಥಾವತ್ತಾಗಿ ಕಾಪಾಡಲು ಒಂದು ಹೆಜ್ಜೆ ಮುಂದಿಟ್ಟರೆ ‘ಮೂಲನಿವಾಸಿಗಳ ದಿನ’ದ ಆಚರಣೆಗೂ ಒಂದು ಅರ್ಥ ಬರುತ್ತದೆ.

ಮರದ ತುಂಡಿನಿಂದ ತೊಟ್ಟಿಕ್ಕುತ್ತಿದ್ದ ರಸವನ್ನು ಕುಡಿಯುತ್ತಿರುವ ಬ್ರೆಜಿಲ್‌ನ ಗೌರಾನಿ ಸಮುದಾಯದ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT