ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರ

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ಹೊರಟು ಕೇರಳದ ಕೊಲ್ಲಂ ಕರಾವಳಿ ಭಾಗದ ಚವರ ತಲುಪಿದ್ದು ಬೆಳಗಿನ ಎಂಟಕ್ಕೆ. ಹಿಂದಿನ ರಾತ್ರಿಯಿಡೀ ನಿದ್ದೆಯಿಲ್ಲದೆ, ಈಗ ತಾನೆ ನಿದ್ದೆಗೆ ಜಾರುತ್ತಿದ್ದಂತೆ ಊರು ಮಂದವಾಗಿತ್ತು. ರಸ್ತೆಯ ವಾಹನಗಳ ಸದ್ದನ್ನು ಹೊರತುಪಡಿಸಿದರೆ ಜನರ ಓಡಾಟ ಅಷ್ಟಕಷ್ಟೆ. ಭಗವತಿ ದೇವಾಲಯವು ದುಪ್ಪಡಿ ಹೊದ್ದು ಮಲಗಿದಂತೆ ಝೀರೋ ಬಲ್ಬುಗಳ ಸರಮಾಲೆಯ ಇಳಿಬಿಟ್ಟುಕೊಂಡಿತ್ತು. ಅಂದು ಚಾಮಯವಿಳಕ್ಕುವಿನ ಎರಡನೆಯ ದಿನ. ಬಿಸಿಲೇರಿದಂತೆ ನಿಧಾನಕ್ಕೆ ದೇವಸ್ಥಾನದ ಆಚರಣೆಗಳು ಶುರುವಾಗತೊಡಗಿದವು. ಭಕ್ತರು ಬರತೊಡಗಿದರು. ಜಾತ್ರೆ ಕಳೆಗಟ್ಟತೊಡಗಿತು.

ಜಾತ್ರೆಯಲ್ಲಿ ಗಂಡಸರೆಲ್ಲಾ ಹೆಣ್ಣಿನ ವೇಷಧರಿಸಿ ದೇವಿಯ ಆರಾಧನೆ ಮಾಡುವ ವಿಶೇಷ ಸೆಳತವೇ ನನ್ನನ್ನು ಚವರಕ್ಕೆ ಬರುವಂತೆ ಮಾಡಿತ್ತು. ಈ ಕುತೂಹಲಕ್ಕಾಗಿ ದೇವಸ್ಥ ಮಂಡಳಿಯ ಹಿರಿಯರನ್ನು ಭೇಟಿ ಮಾಡಿ ಮಾತನಾಡಿದೆ. ಚವರದ ಶ್ರೀ ಕೊಟ್ಟನ್ ಕುಳಂಘರ ದೇವಿಯ ದೇವಸ್ಥಾನ ತಿರುವಾಂಕೂರ್ ದೇವಸ್ವ ಮಂಡಳಿಯಲ್ಲಿ ಪ್ರಮುಖ ದೇವಾಲಯ.

ಇಲ್ಲೊಂದು ಐತಿಹ್ಯವಿದೆ. ಈಗಿರುವ ದೇವಸ್ಥಾನದ ಆವರಣದಲ್ಲಿ ಭೂತಕ್ಕುಳಂ ಎನ್ನುವ ಸಣ್ಣ ನೀರಿನ ಕೊಳವಿತ್ತು. ಇಲ್ಲಿಯೇ ದಟ್ಟವಾದ ಕಾಡು ಹುಲ್ಲುಗಾವಲಿನಲ್ಲಿ ಮಕ್ಕಳು ದನಕರು ಮೇಯಿಸುತ್ತಿದ್ದರು. ಒಮ್ಮೆ ಉದುರಿಬಿದ್ದ ತೆಂಗಿನಕಾಯಿಯನ್ನು ತಿನ್ನಲೆಂದು ಮಕ್ಕಳು ಅಲ್ಲಿಯೇ ಇದ್ದ ಕಲ್ಲೊಂದ್ದಕ್ಕೆ ಜಜ್ಜುತ್ತಾರೆ. ಹೀಗೆ ಜಜ್ಜಿದಾಗ ಕಲ್ಲಿನಿಂದ ರಕ್ತ ಬರುತ್ತದೆ. ಮಕ್ಕಳು ಭಯಗೊಂಡು ಊರಿಗೆ ಓಡುತ್ತಾರೆ. ಊರ ಜನ ಬಂದು ನೋಡಿ, ನಂತರ ಶಾಸ್ತ್ರ ಕೇಳಿದಾಗ ‘ಇಲ್ಲಿ ಭಗವತಿ ನೆಲೆಸಿದ್ದಾಳೆ, ಇದು ಶಕ್ತಿಯ ಸ್ಥಳ. ಅವಳನ್ನು ಒಲಿಸಿಕೊಳ್ಳಲು ಗಂಡು ಹೆಣ್ಣಾಗಿ ದೀಪ ಬೆಳಗಬೇಕು’ ಎನ್ನುತ್ತಾರೆ.

ಇದೇ ನಂಬಿಕೆಯ ಭಾಗವಾಗಿ ಅಂದಿನಿಂದ ಈ ತನಕ ತೆಂಗಿನಕಾಯಿಯನ್ನು ಕುಟ್ಟಿ ಹಿಂಡಿ ತೆಗೆದ ಗಸಿ (ಕೊಟ್ಟನ್) ದೇವಿಗೆ ನೈವೇದ್ಯ ನೀಡಲಾಗುತ್ತಿದೆ. ಕುಮಾರರು ಹೆಣ್ಣುಮಕ್ಕಳ ವೇಷಧರಿಸಿ ದೀಪ ಬೆಳಗಿ ಪೂಜಿಸುತ್ತಾರೆ. ಹೀಗಾಗಿಯೇ ಈ ಆಚರಣೆ ಚಾಮಯ ವಿಳಕ್ಕಂ (ವೇಷದ ದೀಪ) ಎಂದು ಪ್ರಸಿದ್ಧಿಯಾಗಿದೆ.

ಇಡೀ ಜಾತ್ರೆ ತೆಂಗಿನ ಜೊತೆ ತಳಕು ಹಾಕಿಕೊಂಡಿದೆ. ತೆಂಗಿನ ಎಳೆಗರಿಗಳಿಂದ ಚಪ್ಪರ ನಿರ್ಮಿಸಿ ಅಲ್ಲಿ ದೀಪವನ್ನಿಡುತ್ತಾರೆ. ನಡುರಾತ್ರಿ ದೇವಿ ಹೊರಟಾಗ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ವೇಷಧಾರಿ ಹೆಣ್ಣುಗಳು ದೀಪವಿಡಿದು ದೇವಿಗೆ ಬೆಳಗುತ್ತಾರೆ. ಕೊಳದ ದಡದಲ್ಲಿನ ಈ ಭಗವತಿಯ ದೇವಸ್ಥಾನ ಕಾಲಾನಂತರ ಕೊಟ್ಟನ್‌ಕುಳಂಘರ ದೇವಸ್ಥಾನವೆಂದು ಕರೆಯಲ್ಪಡುತ್ತದೆ.

ಭಗವತಿಯ ಪೂಜಾರಿಗಳು ಹೇಳುವ ಪೌರಾಣಿಕ ಎನ್ನಬಹುದಾದ ಈ ಕಥೆ ಕೇಳಿದರೆ, ಮಹಾರಾಷ್ಟ್ರದ ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ರಾಮಚಂದ್ರ ಚಿಂತಾಮಣಿ ಡೇರೆ ಅವರು ಹೇಳಿದ ಮಾತು ನೆನಪಾಗುತ್ತದೆ. ‘ದೇವಿಯರ ಅಥವಾ ಮಾತೆಯರ ಪ್ರಭುತ್ವ ಇದ್ದ ಕಾಲದಲ್ಲಿ ಪುರುಷರು ದೇವಿಯ ಗರ್ಭಗುಡಿಯನ್ನು ಪ್ರವೇಶಿಸುವಂತಿರಲಿಲ್ಲ. ಆಗ ಗಂಡು, ಹೆಣ್ಣಿನ ಉಪಾಸನೆಯ ಅಧಿಕಾರ ಪಡೆಯಲು ಗಂಡು ಹೆಣ್ಣಾಗುವ ರೂಪಾಂತರ ನಡೆಯಿತು. ಹಾಗಾಗಿಯೇ ದೇವಿ ಉಪಾಸನೆಯ ಗಂಡಸರು ಉದ್ದನೆ ಕೂದಲು ಬಿಡುವುದು, ಹೆಣ್ಣಿನ ಸೀರೆಯಂತಹ ಬಟ್ಟೆಯನ್ನು ಹೆಗಲಿಗೆ ಹಾಕಿಕೊಳ್ಳುವುದನ್ನು ಈಗಲೂ ಕಾಣಬಹುದು’ ಎನ್ನುತ್ತಾರೆ.

ಬಹುಶಃ ಚವರದ ಭಗವತಿ ದೇವಿಗೆ ಹರಕೆ ಕಟ್ಟುವ ‘ಗಂಡು ಹೆಣ್ಣಾಗುವುದರ’ ಹಿಂದೆ, ಪ್ರಮೀಳಾ ರಾಜ್ಯವಾದ ಕೇರಳದಲ್ಲಿಯೂ ಇಂತಹದ್ದೊಂದು ಮಾತೆಯರ ಪ್ರಭುತ್ವದ ಕಾಲದ ರೂಪಾಂತರವಿರಬಹುದು ಅನ್ನಿಸುತ್ತದೆ. ಮೇಲುನೋಟಕ್ಕೆ ಗಂಡು ಹೆಣ್ಣಾಗುವ ಆಚರಣೆಯಂತೆ ಕಂಡರೂ, ಚಾರಿತ್ರಿಕವಾಗಿ ಹೆಣ್ಣಿನ ವೇಷಧರಿಸಿ ಮೋಸದಿಂದ ದೇವಿ ಉಪಾಸನೆಯ ಹೆಣ್ಣಿನ ಅಧಿಕಾರ ಪಡೆದು ಗಂಡಾಳ್ವಿಕೆ ಸ್ಥಾಪಿಸಿದ ವೈರುಧ್ಯಕ್ಕೂ ಈ ಆಚರಣೆ ಸಾಕ್ಷಿಯಾಗಿದೆ.

ಯಾವಾಗಲೂ ಆಚರಣೆಗಳು ರೂಪಾಂತರಕ್ಕೆ ಒಳಗಾಗುತ್ತವೆ. ಈಗ ನಡೆಯುತ್ತಿರುವ ಚಾಮಯವಿಳಕ್ಕಂ ಆಚರಣೆಯಲ್ಲೂ ಇದು ಘಟಿಸಿದೆ. ಗಂಡು ಹೆಣ್ಣಾಗುವ ಕಾರಣಕ್ಕೇ ವಿಭಿನ್ನ ಆಚರಣೆಗಳಲ್ಲಿ ಒಂದಾಗಿ ಸುದ್ದಿಯಾಗುತ್ತಿದೆ. ಈ ಜಾತ್ರೆಯಲ್ಲಿ ಕಂಡ ಚಿತ್ರಗಳು ಬಹುರೂಪಿಯಾಗಿವೆ.

ಹರಕೆ ಹೊತ್ತ ಗಂಡಸರು ಟೈಲರ್‌ಗಳಿಗೆ ಒಂದು ತಿಂಗಳು ಮುಂಚೆ ಅಳತೆ ಕೊಟ್ಟು ಬ್ಲೌಸ್ ಹೊಲಿಸುತ್ತಾರೆ. ಚವರದ ಟೈಲರ್ ಸುಲೇಮಾನ್, ‘ಗಂಡಸರ ಎದೆ ಅಳತೆ ತಗೊಂಡು ಬ್ಲೌಸ್ ಹೊಲಿಯೋರು ಇಲ್ಲಿನವರು ಮಾತ್ರ’ ಎಂದು ನಗುತ್ತಾರೆ.

ಹರಕೆ ಹೊತ್ತ ಗಂಡಸು ಮದುವೆಯಾಗಿದ್ದರೆ ತನ್ನ ಹೆಂಡತಿಯ ಸೀರೆಯನ್ನು, ಅವಳ ಒಡವೆ, ಅಲಂಕಾರ ಸಾಮಗ್ರಿಯನ್ನು ಬಳಸುತ್ತಾನೆ. ಎಷ್ಟೋ ಹೆಂಡತಿಯರು ಮನೆಯಲ್ಲೆ ತಮ್ಮ ಗಂಡಂದಿರಿಗೆ ಹೆಣ್ಣುಡುಗೆ ಉಡಿಸಿ ಆರತಿಯೊಂದಿಗೆ ದೇವಾಲಯಕ್ಕೆ ಬರುತ್ತಾರೆ.ಆರು ತಿಂಗಳ ಮಗುವಿನಿಂದ, ಅರವತ್ತು ದಾಟಿಯ ವಯೋಮಾನದ ಗಂಡಸರವರೆಗೆ ಬಂದವರು ಹೆಣ್ಣಾಗುವುದುಂಟು. ಕೆಲವರು ವರ್ಷವೂ ತಪ್ಪದೆ ವೇಷ ಹಾಕಿದರೆ, ಮತ್ತೆ ಕೆಲವರು ಮೂರು ವರ್ಷ, ಐದು ವರ್ಷ ಹೀಗೆ ಹರಕೆ ಹೊತ್ತಷ್ಟು ವರ್ಷ ಹೆಣ್ಣುಡುಗೆ ಉಡುವುದಿದೆ.

ಇಡೀ ಜಾತ್ರೆಯಲ್ಲಿ ಗಂಡನ್ನು ಹೆಣ್ಣಾಗಿಸುವ ಬ್ಯೂಟಿ ಪಾರ್ಲರ್‌ಗಳದ್ದೇ ಆಕರ್ಷಣೆ. ಸ್ಥಳೀಯರು ಮನೆಗಳಲ್ಲೆ ಹೆಣ್ಣುಡಿಗೆ ಶೃಂಗರಿಸಿಕೊಂಡು ಬಂದರೆ, ಬೇರೆ ಭಾಗದವರು ಬ್ಯೂಟಿ ಪಾರ್ಲರ್‌ಗಳನ್ನು ಆಶ್ರಯಿಸುತ್ತಾರೆ. ಸಾಮಾನ್ಯ ಜನರಿಗೆ ಕಡಿಮೆ ರೇಟಿನಲ್ಲಿ ಹೆಣ್ಣಾಗಿಸುವ ಬ್ಯೂಟಿ ಪಾರ್ಲರ್ ಇದ್ದರೆ, ಹೆಂಗಸರೂ ನಾಚುವಂತೆ ಸುರಸುಂದರಿಯನ್ನಾಗಿಸುವ ದುಬಾರಿ ಹೈಟೆಕ್ ಪಾರ್ಲರ್‌ಗಳೂ ಇವೆ. ಇನ್ನು ವೇಷತೊಟ್ಟ ನೆನಪಿಗೆ ಫೋಟೊ ತೆಗೆಸಿಕೊಳ್ಳಲೆಂದೇ ಹಲವು ಛಾಯಾಗ್ರಾಹಕರು ಮಳಿಗೆ ಹಾಕಿರುತ್ತಾರೆ. ಅಂತೆಯೇ ಹುಡುಗರು ‘ಟ್ರಾನ್ಸ್ ಸುಂದರಿ’ಯರ ಜತೆ ಹಣ ಕೊಟ್ಟು ಫೋಟೊ ತೆಗೆಸಿಕೊಳ್ಳುವುದೂ ನಡೆಯುತ್ತದೆ.

ತಾಯಂದಿರು ಮಗನನ್ನು ‘ಮಗಳನ್ನಾಗಿಸಿಕೊಂಡು’ ಕಂಕುಳಲ್ಲಿ ಎತ್ತಿಕೊಂಡು ಬರುತ್ತಾರೆ. ಇವರು ಗಂಡು ಮಗುವನ್ನು ಕೊಟ್ಟರೆ, ಹೆಣ್ಣಾಗಿಸಿ ಆರತಿ ಮಾಡಿಸುತ್ತೇವೆಂದು ದೇವಿಯಲ್ಲಿ ಹರಕೆ ಕಟ್ಟಿಕೊಂಡವರು. ಹೀಗೆ ಹರಕೆ ಹೊತ್ತವರು ಪುಟ್ಟ ತೊಟ್ಟಿಲುಗಳನ್ನೂ ದೈವಕ್ಕೆ ಅರ್ಪಿಸುತ್ತಾರೆ. ಹೊಸದಾಗಿ ಮದುವೆಯಾದ ಜೋಡಿಗಳು ಮಕ್ಕಳ ಭಾಗ್ಯಕ್ಕಾಗಿ ಜಾತ್ರೆಗೆ ಬರುತ್ತಾರೆ.

‘ಈ ದೇವಿಯ ಬಳಿ ಹೆಣ್ಣುಮಕ್ಕಳನ್ನು ಬೇಡುವುದು ಕಡಿಮೆ, ಗಂಡು ಮಕ್ಕಳನ್ನು ಬೇಡುವವರೇ ಹೆಚ್ಚು. ದೇವಿ ಕೂಡ ಗಂಡುಮಕ್ಕಳನ್ನು ಕರುಣಿಸುವಲ್ಲಿ ಎತ್ತಿದ ಕೈ’ ಎನ್ನುತ್ತಾರೆ ಚವರದ ನಿವಾಸಿ ಪಳನಿ. ಭಗವತಿ ಮೂಲತಃ ಫಲವಂತಿಕೆಯ ದೇವಿಯಾದ ಕಾರಣ ಈ ಬಗೆಯ ಮಕ್ಕಳ ಫಲ ಬೇಡುವ ನಂಬಿಕೆ ಮೊದಲಿನಿಂದಲೂ ಉಳಿದಿದೆ.

ಇನ್ನೊಂದು ಬಗೆಯ ತಾಯಂದಿರು ಜಾತ್ರೆಯಲ್ಲಿ ಸಿಕ್ಕರು. ಅವರು ಹೆಣ್ಣು ಮಗು ಆಗದ, ಬರೀ ಗಂಡು ಮಕ್ಕಳಾದ ತಾಯಂದಿರು. ಅವರು ‘ನಮಗೆ ಹೆಣ್ಣುಮಕ್ಕಳಿಲ್ಲ, ವರ್ಷಕ್ಕೊಮ್ಮೆಯಾದರೂ ನಮ್ಮ ಗಂಡು ಮಕ್ಕಳಿಗೆ ಹುಡುಗಿಯರನ್ನಾಗಿ ಶೃಂಗಾರ ಮಾಡುವುದೇ ಒಂದು ಖುಷಿ. ಹಾಗಾಗಿ ನಾವು ವರ್ಷಕ್ಕೊಮ್ಮೆ ಮಗನಿಗೆ ವೇಷ ಹಾಕಿಸುತ್ತೇವೆ’ ಎನ್ನುತ್ತಾರೆ.

ಸಂಜೆ ಮೂರರಿಂದಬಗೆ ಬಗೆಯ ದೇವತಾ ಮೂರ್ತಿಗಳ ಮೆರವಣಿಗೆ. ಕೊನೆಯಲ್ಲಿ ಮಹಿಷಾಶುರ ಮರ್ಧಿನಿಯ ಇಪ್ಪತ್ತು ಅಡಿ ಎತ್ತರದ ಮೂರ್ತಿ ಗಮನ ಸೆಳೆಯುವಂತಿತ್ತು. ಸಂಜೆ ಆರರಿಂದ ಜಾತ್ರೆ ರಂಗೇರತೊಡಗುತ್ತದೆ. ವೇಷ ಹಾಕಿದ ಹೆಣ್ಣಾದ ಗಂಡುಗಳು ದೀಪ ಹಿಡಿದು ದೇವಸ್ಥಾನಕ್ಕೆ ಬರುತ್ತಾರೆ.

ಈ ದೇವಾಲಯದ ಪೌರಾಣಿಕ ಚರಿತ್ರೆ ನೋಡಿದರೆ ಟ್ರಾನ್ಸ್ ಜೆಂಡರ್ ಸಮುದಾಯದ ಜತೆ ಯಾವುದೇ ಸಂಬಂಧವಿಲ್ಲ. ಆದರೆ, ಗಂಡು ಹೆಣ್ಣಾಗಿ ವೇಷ ಧರಿಸುವ ಸಂಗತಿಯೊಂದೇ ಟ್ರಾನ್ಸ್ ಜೆಂಡರ್ ಸಮುದಾಯವನ್ನು ಆಕರ್ಷಿಸಿದೆ. ಹಾಗಾಗಿ ದೇಶ ವ್ಯಾಪಿ ಟ್ರಾನ್ಸ್ ಜೆಂಡರ್ ಸಮುದಾಯ ಈ ಜಾತ್ರೆಗೆ ಬಂದಿಳಿಯುತ್ತದೆ. ಕೊಲ್ಲಂ ಚವರ ಒಳಗೊಂಡಂತೆ ಈ ಭಾಗದ ಎಲ್ಲಾ ಹೋಟೆಲ್‌ಗಳನ್ನು ಮುಂಚೆಯೇ ಟ್ರಾನ್ಸ್ ಜೆಂಡರ್ ಸಮುದಾಯದವರು ಬುಕ್ ಮಾಡಿರುತ್ತಾರೆ. ಹಾಗಾಗಿ ಪೂರ್ವತಯಾರಿ ಇಲ್ಲದೆ ಚವರಕ್ಕೆ ಹೋದರೆ ನಿಮಗೆ ಉಳಿಯಲು ಯಾವ ವ್ಯವಸ್ಥೆಯೂ ಇರುವುದಿಲ್ಲ. ಅಂದಹಾಗೆ ಇದೇ 23ರಿಂದ 25ರ ತನಕ ಚಾಮಯ ವಿಳಕ್ಕು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT