ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ವೇಷಭೂಷಣದ ಸುಡುಗಾಡು ಸಿದ್ಧರು

Last Updated 6 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೀದರ್‌: ತಲೆಗೆ ಬಣ್ಣದ ರುಮಾಲು ಸುತ್ತಿ ನವಿಲುಗರಿಯನ್ನು ಧರಿಸಿ, ಮುಖಕ್ಕೆ ವಿಭೂತಿ, ಕುಂಕುಮ, ಭಂಡಾರವನ್ನು ಧರಿಸಿ ಬಣ್ಣದ ವಸ್ತ್ರಗಳನ್ನು ಹೆಗಲ ಮೇಲೆ ಹಾಕಿಕೊಂಡು ವಿಶಿಷ್ಟ ಗಾಯನದಿಂದ ಗುಣುಗುತ್ತ ಮನೆಮನೆ ಸಾಗುವ ಜನಾಂಗದವರೇ ಸುಡುಗಾಡು ಸಿದ್ಧರು.

ಒಂದೊಂದು ಕಡೆ ಇವರನ್ನು ಕಾಡಿಪಾಪರು ಎಂದೂ ಕರೆಯುವುದುಂಟು. ಅವರು ಸಹಜವಾಗಿ ಒಬ್ಬರೇ ಬರುವುದಿಲ್ಲ ಅಲಂಕಾರಿಕ ವೇಶಭೂಷಣ ಧರಿಸಿದ ಇಬ್ಬರೂ ಅಥವಾ ಅಧಿಕ ಸಂಖ್ಯೆಯಲ್ಲಿಯೂ ಸಂಚಾರಿಯಾಗಿ ಬರುವುದನ್ನು ಕಾಣಬಹುದು. ‘ರಾಮ ರಾಮುಡು ಸೀತಾರಾಮುಡು, ಹನಮಂತಯ್ಯ’ ಎಂದು ಅವರದೇ ಶೈಲಿಯಲ್ಲಿ ರಾಗಬದ್ಧವಾಗಿ ಪೌರಾಣಿಕ ಪರಿಕಲ್ಪನೆಯ ಹಾಡುಗಳನ್ನು ಹಾಡುತ್ತ ಕೈಯಲ್ಲಿರುವ ಗೆಜ್ಜೆಯುಳ್ಳ ಗಂಟೆಯನ್ನು ಭಾರಿಸುತ್ತ ಸುಶ್ರಾವ್ಯವಾಗಿ ಹಾಡುತ್ತಾರೆ. ಮೈಮೇಲೆ ಕೌದಿ ಅಥವಾ ಬಣ್ಣದ ಬಟ್ಟೆಗಳನ್ನು ಆಕರ್ಷಕವಾಗಿ ಧರಿಸಿದ ಸುಡುಗಾಡು ಸಿದ್ಧ ಠೀವಿ ನೋಡುಗರ ಗಮನ ಸೆಳೆಯುತ್ತದೆ.

ಪೌರಾಣಿಕ ಕಥನಗಳನ್ನು ಹಾಡುತ್ತ ಮನೆ ಮನೆಗೆ ತಿರುಗಿ ದವಸ ಧಾನ್ಯಗಳನ್ನು ಸ್ವೀಕರಿಸುತ್ತಾರೆ. ಧೈರ್ಯಶಾಲಿಗಳಾದ ಇವರು ಹಕ್ಕಿನಿಂದ ಎನ್ನುವಂತೆ ಇಂತಿಷ್ಟು ದವಸ-ಧಾನ್ಯಗಳನ್ನು ನೀಡಲು ಕೋರುತ್ತಾರೆ. ಸಮಾಜದಲ್ಲಿ ಅವರನ್ನು ಬರಿಗೈಯಿಂದ ಕಳುಹಿಸುವುದಿಲ್ಲ. ತಮ್ಮ ಶಕ್ತ್ಯಾನುಸಾರವಾಗಿ ಜನರು ಅವರಿಗೆ ದಾನ ನೀಡಿ ಕಳುಹಿಸುತ್ತಾರೆ.

ಇವರ ಕುರಿತಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ನಂಬಿಕೆ, ಕಲ್ಪನೆಗಳು ಹಾಗೂ ಅತೀಂದ್ರಿಯ ಶಕ್ತಿಯ ಕುರಿತಾದ ವಿಚಾರಗಳಿವೆ. ಅವರಲ್ಲಿನ ಮಂತ್ರ ಶಕ್ತಿಯಿಂದ ಮನುಷ್ಯರನ್ನು ಒಂದು ಹರಳಿನಿಂದ ಹೊಡೆದಾಗ ಆ ವ್ಯಕ್ತಿಯು ಅವರ ಹಿಂದೆಯೇ ನಾಯಿಯಾಗಿ ಬೆನ್ನತ್ತಿ ಹೋಗುತ್ತಿದ್ದರು ಎನ್ನುವ ಪ್ರತೀತಿ ಇದೆ. ಕಾಲ್ಪನಿಕ ಕತೆಗಳನ್ನು ಹಿರಿಯರು ಹೇಳುತ್ತಾರೆ. ಅವರು ಮಂತ್ರ ಶಕ್ತಿಯನ್ನು ಪಡೆಯಲು ಸುಡುಗಾಡಲ್ಲಿ ತಪಸ್ಸನ್ನು ಆಚರಿಸಿ ಶಕ್ತಿಯನ್ನು ಪಡೆಯುತ್ತಾರೆ. ಇವರಿಗೆ ಸ್ಮಶಾನವೇ ಪವಾಡ ಶಕ್ತಿಯ ಕೇಂದ್ರವಾಗಿರುವುದರಿಂದ ಇವರನ್ನು ಸುಡುಗಾಡು ಸಿದ್ಧರು ಎಂಬ ಹೆಸರು ಬಂದಿದೆ. ಅವರು ಭಿಕ್ಷೆಗೆ ಬಂದಾಗ ಕೈಯಿಂದ ದಾನ ಸ್ವೀಕರಿಸುವುದು ವಿರಳ. ಅವರಿಗೆ ಮೊರದಲ್ಲಿ ದಾನ ನೀಡುವ ವಾಡಿಕೆಯಿದೆ. ಈ ಕಾಡಿಪಾಪರು ಅಥವಾ ಸುಡುಗಾಡು ಸಿದ್ಧರು ಊರಲ್ಲಿ ನಿರಂತರವಾಗಿ ಬರುವುದಿಲ್ಲ. ನಾಡಿನ ದೊಡ್ಡ ಹಬ್ಬಗಳಲ್ಲಿ ಮಾತ್ರ ವಿಶೇಷ ಅಲಂಕಾರದೊಂದಿಗೆ ತಮ್ಮ ಸಂಗಡಿಗರೊಂದಿಗೆ ಬರುವುದುಂಟು.

ಅವರಲ್ಲಿ ಮಾಂತ್ರಿಕ ಶಕ್ತಿಯಿರುವ ನಂಬಿಕೆಯಿಂದಾಗಿ ಚಿಕ್ಕ ಮಕ್ಕಳು, ಯುವತಿಯರು ಅವರು ಬಂದಾಗ ಭಯದಿಂದ ಮನೆ ಸೇರುವ ರೂಢಿಯಿತ್ತು. ಮಕ್ಕಳನ್ನು ಹೆದರಿಸಲು ಇಂದಿಗೂ ಹಿರಿಯರು ಅವರಿಗೆ ಕೊಡುತ್ತೇವೆ ಅಥವಾ ಸುಡುಗಾಡು ಸಿದ್ಧ ಬಂದ ಎಂದು ಹೆದರಿಸುತ್ತಿದ್ದರು.

ಇಂದಿನ ಆಧುನಿಕ ಯುಗದಲ್ಲಿ ತಮ್ಮ ಪಾರಂಪರಿಕ ವೃತ್ತಿ ಹಾಗೂ ಕಲೆಯಿಂದ ದೂರವಾಗುತ್ತಿರುವ ಈ ಕಾಡಿಪಾಪರು ಅಥವಾ ಸುಡುಗಾಡು ಸಿದ್ಧರು ಈ ವೃತ್ತಿಯಿಂದ ದೂರ ಸರಿದು ಆಧುನಿಕ ಜೀವನ ಶೈಲಿಗೆ ಒಗ್ಗಿಕೊಳ್ಳುತ್ತ ಸಮರ್ಥವಾಗಿ, ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ಅವರ ಪಾರಂಪರಿಕ ಕಲೆಯನ್ನು ಜೀವಂತವಾಗಿರಿಸಲು ಹಬ್ಬ ಹರಿದಿನಗಳಂತಹ ವಿಶೇಷ ಸಂದರ್ಭಗಳಲ್ಲಿ ತಮ್ಮ ವಿಶಿಷ್ಟ ಪೋಷಾಕುಗಳೊಂದಿಗೆ ಮನೆ ಮನೆಗೆ ಬರುತ್ತಾರೆ. ಮುಂಬರುವ ದಿನಗಳಲ್ಲಿ ಇವರ ಅಪೂರ್ವ ಕಲೆ ಮರೆಯಾಗದಿರಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT