ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷ ಸಾಹಿತ್ಯ: ಸಾಮಾಜಿಕ ಕಾಳಜಿಯ ಕಥಾಹಂದರ

Last Updated 23 ಜನವರಿ 2021, 19:30 IST
ಅಕ್ಷರ ಗಾತ್ರ

ಯಾವುದೇ ಪ್ರಸಂಗ ಯಕ್ಷ ಸಾಹಿತ್ಯದ ರಚನೆಯಲ್ಲಿ ಮೂಲಕಥೆಗೆ ಭಂಗವಾಗದಂತೆ, ಅದರ ಭಾಗವಾಗಿಯೇ ಸಾಮಾಜಿಕ ಬದ್ಧತೆಯನ್ನೂ ಕಳಕಳಿಯನ್ನೂ ಸಾಹಿತ್ಯವು ನಿವೇದಿಸಿದರೆ ಅದರ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ಇದೇ ಸೂತ್ರವನ್ನು ಬಹುತೇಕ ಯಕ್ಷಗಾನ ಕವಿಗಳು ಪಾಲಿಸಿದ್ದು ವಿಶೇಷ...

ಸಾಮಾನ್ಯರ ತಿಳಿವಳಿಕೆಯಲ್ಲಿ ಯಕ್ಷಗಾನ ಸಾಹಿತ್ಯವೆನ್ನುವುದು ರಂಗ ಸಾಹಿತ್ಯ. ರಂಗದ ಆಶಯಗಳನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ಮೂಲಧಾತು ಎನಿಸಿಕೊಂಡು ರಂಗಕ್ಕೆ ಬೇಕಾದ ಪಠ್ಯವನ್ನು ಮಾತ್ರ ಒದಗಿಸುತ್ತದೆ ಎಂಬ ಭಾವನೆಯಿದೆ. ಅದು ಸತ್ಯವಾದರೂ ಅದಕ್ಕಿಂತ ಭಿನ್ನವಾದ ನೆಲೆಯಲ್ಲಿ ಅದರ ಸಾಹಿತ್ಯವನ್ನು ಅವಲೋಕಿಸಬಹುದಾಗಿದೆ. ಸಮಾಜದ ಓರೆಕೋರೆಗಳನ್ನು ಒರೆಗೆ ಹಚ್ಚಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ವೈಚಾರಿಕತೆಯನ್ನು ಹೊಂದಿದಾಗ ಸಾಹಿತ್ಯ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಯಕ್ಷಗಾನ ಸಾಹಿತ್ಯವನ್ನು ಗಮನಿಸುವಾಗ ಅಲ್ಲಿ ಕೂಡ ಸಾಮಾಜಿಕ ಕಳಕಳಿಯ ವಿಷಯಗಳನ್ನು ತನ್ನ ಕಥಾ ಹಂದರದ ಭಾಗವಾಗಿ ಹೊಂದಿರುವುದನ್ನು ಕಾಣಬಹುದಾಗಿದೆ.

ಗೇಯ ಪ್ರಬಂಧವಾದ ಯಕ್ಷಗಾನ ಸಾಹಿತ್ಯವು ಪುರಾಣದ ಕಥೆಯನ್ನು ಅಥವಾ ಸಾಮಾಜಿಕ ಕಥೆಗಳನ್ನು ಮಟ್ಟುಗಳಲ್ಲಿ ಅಥವಾ ಛಂದಸ್ಸಿನಲ್ಲಿ ಪೋಣಿಸಿ ಅದನ್ನು ಯಕ್ಷಗಾನದ ಮೂಲಕವಾಗಿ ಅಭಿವ್ಯಕ್ತಗೊಳಿಸುತ್ತದೆ. ಒಂದು ಯಕ್ಷಗಾನ ಪ್ರಸಂಗವು ಉತ್ಕೃಷ್ಟವಾದ ರಚನೆಯಾಗಿರುವುದಕ್ಕೆ ಹಲವಾರು ಅಂಶಗಳು ಕಾರಣವಾಗಿರುತ್ತವೆ.

ಪ್ರಸಂಗದ ಸಾಹಿತ್ಯವು ಸರಳವಾಗಿರಬೇಕು ಮತ್ತು ಅದನ್ನು ಹಾಡಿದಾಗ ಅದರ ಅರ್ಥವು ಆ ಕ್ಷಣದಲ್ಲಿಯೇ ಪ್ರೇಕ್ಷಕನಿಗೆ ತಿಳಿಯುವಂತಿರಬೇಕು. ಇದು ಯಕ್ಷಗಾನ ಸಾಹಿತ್ಯದ ಮೂಲತತ್ವ. ಅದರ ಜೊತೆಗೆ ಸಾಹಿತ್ಯದ ರಚನೆಯು ಛಂದೋಬದ್ಧವಾಗಿರಬೇಕು, ಗಾನ ನೃತ್ಯಗಳಿಗೆ ಅನುಕೂಲವಾಗಿರಬೇಕು, ಅದು ವಿಶಾಲವಾದ ಅರ್ಥವನ್ನು ಸ್ಫುರಿಸುವಂತಿರಬೇಕು, ಸಂವಾದಕ್ಕೆ ಹಾಗೂ ಪ್ರದರ್ಶನಕ್ಕೆ ಅನುಕೂಲಕರವಾಗಿರಬೇಕು, ಯಕ್ಷಗಾನೀಯ ಅಂಶಗಳ ಪ್ರತಿಪಾದನೆಗೆ ಅವಕಾಶಗಳಿರಬೇಕು ಎಂಬ ಇತ್ಯಾದಿ ಅಂಶಗಳು ಅಪೇಕ್ಷಣೀಯ ಗುಣಗಳಾಗಿವೆ.

ಯಾವುದೇ ಪ್ರಸಂಗ ಯಕ್ಷ ಸಾಹಿತ್ಯದ ರಚನೆಯಲ್ಲಿ ಮೂಲ ಕಥೆಗೆ ಭಂಗವಾಗದಂತೆ, ಅದರ ಭಾಗವಾಗಿಯೇ ಸಾಮಾಜಿಕ ಬದ್ಧತೆಯನ್ನು, ಕಳಕಳಿಯನ್ನು ಸಾಹಿತ್ಯವು ನಿವೇದಿಸಿದರೆ ಅದರ ಗಾಂಭೀರ್ಯ ಹಾಗೂ ಸೌಂದರ್ಯವು ಇನ್ನಷ್ಟು ಗಟ್ಟಿಯಾಗಿ ಪ್ರತಿಪಾದನೆಗೊಳ್ಳುತ್ತದೆ. ಇದೇ ಸೂತ್ರವನ್ನು ಬಹುತೇಕ ಯಕ್ಷಗಾನ ಕವಿಗಳು ಪಾಲಿಸಿರುವುದನ್ನು ಗಮನಿಸಬಹುದು. ಇದಕ್ಕೆ ಮೂಲ ಕಾರಣ ಬಹುತೇಕ ಯಕ್ಷಗಾನ ಕವಿಗಳು ಜನರ ಮಧ್ಯದಲ್ಲಿಯೇ ಬೆಳೆದವರು. ಜನರ ಕಷ್ಟ ಸುಖಗಳನ್ನು ಅರಿತವರು. ಹಾಗಾಗಿಯೇ ಬದುಕಿನ ತಲ್ಲಣಗಳ ಬಗ್ಗೆ, ಸಮಾಜದ ಸಮಸ್ಯೆಗಳ ಬಗ್ಗೆ ಅರಿವನ್ನು ಹೊಂದಿ ಆ ಬಗ್ಗೆ ತಮಗಿರುವ ಕಾಳಜಿಯನ್ನು ಪ್ರಸಂಗದಲ್ಲಿ ಪ್ರಜ್ಞಾಪೂರ್ವಕವಾಗಿ ವಿಶದವಾಗಿ ಅಳವಡಿಸಿರುವುದನ್ನು ಕಾಣಬಹುದಾಗಿದೆ.

ಯಾವುದೇ ಸಾಹಿತ್ಯ ಅಥವಾ ಕಲೆಯನ್ನು, ಸಮಾಜದಿಂದ ಹೊರತುಪಡಿಸಿ ನೋಡುವುದಕ್ಕೆ ಸಾಧ್ಯವಿಲ್ಲ. ಒಂದೊಮ್ಮೆ ಸಮಾಜದಿಂದ ಹೊರತಾದ ಸಾಹಿತ್ಯವು ಕೇವಲ ರಂಜನೆಯಾಗಬಹುದೇ ವಿನಾ ಅದರ ಮೂಲ ಉದ್ದೇಶ ಈಡೇರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಯಕ್ಷಗಾನ ಸಾಹಿತ್ಯವೂ ಹೊರತಲ್ಲ. ಯಕ್ಷಗಾನ ಸಾಹಿತ್ಯವು ಆಧಿಕ್ಯವೆನಿಸುವುದು, ಅದು ಪೌರಾಣಿಕ/ಐತಿಹಾಸಿಕ ಕಥೆಗಳನ್ನು ಹೇಳಿದರೂ ಪರ್ಯಾಯವಾಗಿ ಪ್ರತಿಪಾದಿಸುವುದು ಭಾರತೀಯ ದಾರ್ಶನಿಕ ಅಂಶಗಳನ್ನು. ಆ ವಿಷಯವನ್ನೇ ನೇರವಾಗಿ ಪ್ರತಿಪಾದಿಸಿದರೆ ರಸಕ್ಕೆ ಭಂಗವಾಗುವುದು ಅಥವಾ ನೋಡುವ ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗದಿರಬಹುದು. ಆದರೆ ಅದೇ ಅಂಶಗಳನ್ನು ಸಾಮಾಜಿಕ ನೆಲೆಯಲ್ಲಿ ಬಳಸಿಕೊಂಡರೆ ಶ್ರೀಸಾಮಾನ್ಯನಲ್ಲಿಯೂ ಅದರ ಬಗ್ಗೆ ಆಸಕ್ತಿಯನ್ನು, ಆಪ್ತತೆಯನ್ನು ಪರಿಣಾಮಕಾರಿಯಾಗಿ ಮೂಡಿಸಬಹುದು.

ಅಲೌಕಿಕ ಭೂಮಿಕೆಯ ವಿಷಯಗಳನ್ನು ಲೌಕಿಕ ವಿಷಯಗಳೊಂದಿಗೆ ಸಮನ್ವಯಗೊಳಿಸುವ ಯಕ್ಷಗಾನದ ಗುಣವೂ ಹೆಚ್ಚು ಆಕರ್ಷಕವೆನಿಸುತ್ತದೆ. ಈ ಪ್ರಯತ್ನ ಹಾಗೂ ವಸ್ತುನಿಷ್ಠತೆಯನ್ನು ಸಾಹಿತ್ಯ ವಲಯವು ಗಂಭೀರವಾಗಿ ಅವಲೋಕಿಸುವ ಅಗತ್ಯವಿದೆ. ಬೇರೆ ಉದ್ದೇಶಿತ ಸಾಹಿತ್ಯದಂತೆ ಭಿನ್ನ ಹರವುಗಳನ್ನು ಮೂಡಿಸದಿದ್ದರೂ ಯಕ್ಷಗಾನ ಸಾಹಿತ್ಯವು ತನಗಿರುವ ಅವಕಾಶವನ್ನು ವಿಸ್ತಾರವಾಗಿ ಬಳಸಿಕೊಳ್ಳುತ್ತಿರುವುದು ಹೆಚ್ಚುಗಾರಿಕೆ. ಉದಾಹರಣೆ ನೋಡಿ:

ಪ್ರಸಂಗ: ವಾಲಿ ವಧೆ, ಕವಿ: ಪಾರ್ತಿಸುಬ್ಬ, 17ನೇ ಶತಮಾನ

ಮಧ್ಯಮಾವತಿ ಏಕತಾಳ

ನ್ಯಾಯವೆ ತಮ್ಮನ ಸತಿಯ ಮುಟ್ಟುವದು|

ಹೇಯವಾದುದರಿಂದ ದೋಷ ತಟ್ಟಿದುದು||

ಪ್ರಾಯಶ್ಚಿತ್ತಗಳಿದು ಪರದೋಷಗಳಿಗೆ|

ಕಾಯಖಂಡನವೆಂಬ ನಿಜಮಾತಿನೊಳಗೆ||

ಇದು ರಾಮಾಯಣದ ವಾಲಿ ವಧೆಯ ಸನ್ನಿವೇಶ. ತನ್ನ ಮೇಲೆ ರಾಮನು ಮರೆಯಲ್ಲಿ ನಿಂತು ಬಾಣ ಪ್ರಯೋಗಿಸಿದ ಎಂಬ ಕಾರಣಕ್ಕೆ ವಾಲಿಯು ರಾಮನನ್ನು ಹಲವು ಪರಿಯಲ್ಲಿ ಪ್ರಶ್ನಿಸುತ್ತಾನೆ. ಅಧಿಕಾರ-ವಿಷಯ-ಪ್ರಯೋಜನ-ಸಂಬಂಧ ಎನ್ನುವ ಅನುಬಂಧ ಚತುಷ್ಟಯದ ನೆಲೆಯಲ್ಲಿ ಕೊಲ್ಲುವ ಕಾರಣವನ್ನು ಕೇಳಿ ರಾಮನನ್ನು ವಾಲಿ ಹಳಿಯುತ್ತಾನೆ. ಮಿತಭಾಷಿಯಾದ ರಾಮನು ವಾಲಿಯ ಸಮರ್ಥನೆಯನ್ನು ಅಲ್ಲಗಳೆಯುತ್ತ ಅವನ ತಮ್ಮನಾದ ಸುಗ್ರೀವನ ಸತಿಯನ್ನು ಬಲಾತ್ಕಾರದಿಂದ ಇಟ್ಟುಕೊಂಡಿರುವ ತಪ್ಪಿಗೆ ಕಾಯಖಂಡನವೇ (ಮರಣ) ಶಿಕ್ಷೆ ಎಂದು ಹೇಳಿ ಅವನನ್ನು ಕೊಲ್ಲುತ್ತಾನೆ.

ಈ ಸನ್ನಿವೇಶವನ್ನು ಮೂಲ ರಾಮಾಯಣಕ್ಕಿಂತ ಭಿನ್ನವಾದ ನೆಲೆಯಲ್ಲಿ ಯಕ್ಷಗಾನ ಕವಿಯು ಯಕ್ಷ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾನೆ. ಅಂಗದ ಸಂಧಾನ ಪ್ರಸಂಗದಲ್ಲಿ ರಾವಣನ ವಿಚಾರದಲ್ಲಿ ‘ಸಾರಿಕೊಂದರೆ ಪಾಪವಿಲ್ಲ’ ಎಂದು ಹೇಳಿದ ಕವಿ, ವಾಲಿ ವಿಚಾರದಲ್ಲಿ ಭಿನ್ನ ನಿಲುಮೆಯನ್ನು ತಳೆಯುತ್ತಾನೆ. ಇಲ್ಲಿ ಕವಿಯ ಸಾಮಾಜಿಕ ಪ್ರಜ್ಞೆಯನ್ನು ಗುರುತಿಸಬಹುದಾಗಿದೆ. ಇಂದು ಸಮಾಜದಲ್ಲಿ ಹೆಣ್ಣಿನ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಬಲಾತ್ಕಾರ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಕೃತ್ಯಗಳಿಗೆ ಯಾವುದೇ ಸಮರ್ಥನೆಗಳಿಲ್ಲ. ಇದಕ್ಕೆ ಗಲ್ಲುಶಿಕ್ಷೆಯಂತಹ (ಕಾಯಖಂಡನ) ಘೋರ ಶಿಕ್ಷೆಯನ್ನು ವಿಧಿಸುವುದು ಅನಿವಾರ್ಯವೆಂಬಂತೆ ರಾಮನ ಮೂಲಕವಾಗಿ ಜನರಿಗೆ ಹೇಳಿರುವುದು ಕವಿಯ ಸಾಮಾಜಿಕ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಜೊತೆಗೆ ರಾಜನಾದವನು (ಕಿಷ್ಕಿಂಧೆ ರಾಜ ವಾಲಿ) ನೈತಿಕವಾಗಿ ಕುಗ್ಗಿದರೆ ಅವನು ಕೂಡ ಪ್ರಶ್ನಾತೀತನಲ್ಲದ ವ್ಯಕ್ತಿ ಎನ್ನುವುದನ್ನು ತಿಳಿಸುತ್ತಾನೆ. ಇದು ಕೂಡ ಇಂದಿನ ರಾಜಧರ್ಮಕ್ಕೆ ಸೂಕ್ಷ್ಮವಾಗಿ ಹೇಳಿದಂತಿದೆ.

ಪ್ರಸಂಗ: ಕೃಷ್ಣ ಸಂಧಾನ, ಕವಿ:ದೇವಿದಾಸ, 18ನೇ ಶತಮಾನ.

ಮಧುಮಾಧವಿ ಏಕತಾಳ

ದೊರೆತನ ಸುಡಲಿನ್ನು ಬಡತನವೆಮಗಕ್ಕು|

ಕುರುರಾಯ ಸುಖಿಯೆಂದು ಕೇಳ್ದರೆ ಸಾಕು||

ವರಸಂಧಿ ಲೇಸು ತೋರ್ಪುದು ಎನ್ನ ಮನದಿ|

ವಿರಚಿಸರ್ಜುನ ಭೀಮಾದಿಗಳೆಂದ ತೆರದಿ||

ಧರ್ಮರಾಯನು ಕೃಷ್ಣನನ್ನು ಕೌರವನಲ್ಲಿ ಸಂಧಾನಕ್ಕೆಂದು ಕಳುಹಿಸುವ ಸನ್ನಿವೇಶ. ಧರ್ಮರಾಯ ತನಗೆ ಈ ದೊರೆತನವೇ ಬೇಡ. ಅದು ಕೌರವನಿಗೆ ಸಿಗಲಿ. ಅದರಿಂದ ಕೌರವ ಸುಖಿ ಎಂದು ಕೇಳಿದರೆ ಸಾಕು. ತನಗೆ ಯಾವ ಅರಸೊತ್ತಿಗೆ ಬೇಡ. ಇಲ್ಲಿಯವರೆಗೆ ಅನುಭವಿಸಿದ ಬಡತನವೇ ಇರಲಿ ಎಂದು ಉದಾತ್ತವಾಗಿ ಹೇಳುವ ಮಾತು. ಚಿತ್ರಸೇನ ಪ್ರಕರಣದಲ್ಲಿ ಧರ್ಮರಾಯನೇ ಲೋಕದ ಮಂದೆ ನಾವು ನೂರೈದು ಮಂದಿ ಎಂದು ಸಾರಿ ಸಹಬಾಳ್ವೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಕೌರವನಿಗೆ ಇದು ಸಹ್ಯವಾಗದೆ ಸಹಬಾಳ್ವೆಯನ್ನು ತಿರಸ್ಕರಿಸುತ್ತಾನೆ. ಕೊನೆಗೆ ಶಾಂತಿ ಮಂತ್ರವನ್ನು ಧರ್ಮರಾಯನೇ ಪಠಿಸುತ್ತಾನೆ. ಇಲ್ಲಿ ಕವಿಯ ಕೌಟುಂಬಿಕ ಪ್ರಜ್ಞೆಯನ್ನು ಗುರುತಿಸಬಹುದು.

ಸಮಾಜವೆನ್ನುವುದು ಅದು ಕುಟುಂಬಗಳ ಸಮೂಹ. ಯಾವುದೇ ಕಾರಣಕ್ಕೆ ಕುಟುಂಬಗಳ ಮಧ್ಯದಲ್ಲಿ ಏಕತೆಗೆ ಭಂಗವಾದರೆ ಪರ್ಯಾಯವಾಗಿ ಸಮಾಜದ ಶಾಂತಿಗೆ ಭಂಗವಾಗುತ್ತದೆ ಎನ್ನುವುದನ್ನು ಕವಿ ಪ್ರತಿಪಾದಿಸುತ್ತಾನೆ. ಜೊತೆಗೆ ಕುಟುಂಬಗಳ ನಡುವೆ ಹೊಂದಾಣಿಕೆ ಮುಖ್ಯವೆನ್ನುವುದನ್ನು ಧರ್ಮರಾಯನ ಮೂಲಕವಾಗಿ ಸಾರುವುದು ಈ ಪದ್ಯದ ವಿಶೇಷ. ಕಥೆಯ ಓಘಕ್ಕೆ ಯಾವುದೇ ಭಂಗವಾಗದ ರೀತಿಯಲ್ಲಿ ಕವಿಯು ಸಾಮಾಜಿಕ ಕಳಕಳಿಯನ್ನು ತೋರಿರುವುದನ್ನು ಮೆಚ್ಚಬೇಕಾಗುತ್ತದೆ.

ಪ್ರಸಂಗ ಮಹಾಪ್ರಸ್ಥಾನ, ಕವಿ:ಶ್ರೀಧರ್ ಡಿ.ಎಸ್. , 21ನೇ ಶತಮಾನ

ಸುರುಟಿ | ಏಕ |

ಚಿಣ್ಣರ ಹಸಿವೆಯನು | ತಣಿಸದೆ |

ಕಣ್ಣೀರಿಡುತಿಹೆನು ||

ಉಣ್ಣಲಿಕ್ಕುವುದು | ಇನ್ನೆಂತೋಪನೆ |

ಹೆಣ್ಣಾದೆನಗಾ | ಪುಣ್ಯವ ಕರುಣಿಸು ||

ಏತಕಳುವೆ ನಿಲಿಸು | ಈ ಕ್ಷಣ |

ನಾ ತರುವೆನು ತಿನಿಸು ||

ಆತುಕೊಳ್ಳುತ್ತ ಕಿ | ರಾತನು ಗಾಳವ |

ನೈತಂದನು ಯಮು | ನಾತಟಕಾಕ್ಷಣ ||

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಅನ್ನವು ಒಂದು. ಹಸಿದ ಮನುಷ್ಯನಲ್ಲಿ ಮಾನವೀಯ ಅಂಶಗಳನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಡಾರ್ವಿನ್ನನ ವಿಕಾಸವಾದವು ಪ್ರತಿಪಾದಿಸುವಂತೆ ‘ಪ್ರತಿ ಜೀವಿಯೂ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತದೆ’ ಎಂಬಂತೆ ಮಾನವ ತನ್ನ ಒಡಲ ಕೂಗನ್ನು ತಣಿಸುವುದಕ್ಕೆ ಎಂತಹ ಕಾರ್ಯವನ್ನು ಬೇಕಾದರೂ ಮಾಡುವುದಕ್ಕೆ ಸಿದ್ಧನಿರುತ್ತಾನೆ. ಇದರಿಂದ ಸಮಾಜದ ಆಶಯಗಳು ಶಿಥಿಲಗೊಂಡು ಮತ್ತೊಂದು ರೂಪವನ್ನು ಪಡೆಯುವ ಸಾಧ್ಯತೆಗಳಿರುತ್ತದೆ. ಈ ಸಮಾಜದಲ್ಲಿ ಇಂದಿಗೂ ಅನೇಕ ಬಡತನದ ಅನೇಕ ಕರಾಳ ಚಿತ್ರಗಳು ನಮ್ಮ ಕಣ್ಣಮುಂದೆ ಕಾಣಿಸುತ್ತವೆ. ಬಡತನದ ಕಾರಣಕ್ಕೆ ದರೋಡೆ, ಕಳ್ಳತನ ಇತ್ಯಾದಿ ಕುಕೃತ್ಯಗಳು ನಡೆಯುತ್ತವೆ. ಇಲ್ಲಿ ಕವಿಯೂ ಸಾಮಾಜಿಕ ಕಳಕಳಿಯನ್ನು ಪ್ರಸಂಗದಲ್ಲಿ ಕಾಣಿಸುತ್ತ ಬಡತನದ ಪರಿಣಾಮಗಳನ್ನು ಚಿತ್ರಿಸಿದ್ದಾರೆ.

ಪ್ರಸಂಗ: ದಕ್ಷ-ಚಂದ್ರ, ಕವಿ: ಗಿಂಡಿಮನೆ ಮೃತ್ಯುಂಜಯ, 21ನೇ ಶತಮಾನ

ತುಜಾವಂತು ಝಂಪೆ

ಮನುಜ ವರ್ಗಕೆ ಪ್ರಾಣಿಸಂಕುಲಕೆ ಖಗಗಳಿಗೆ |

ವನವೆ ಮೂಲಾಧಾರವೈಸೆ ಜೀವಿಸಲು ||

ದಿನನಿತ್ಯ ತರು ಲತಾ ಸಸ್ಯ ಗುಲ್ಮಾದಿಗಳ |

ಗಣಿಸೆನೆಂಬವಗೆ ಸತ್ಯದಿ ಮತಿಗೆ ಮರುಳು ||

ಮಧುಮಾಧವಿ ಏಕ

ವೃಕ್ಷಗಳಿರದಿರೆ ಪಕ್ಷಿಗಳಿಲ್ಲ|

ಪಕ್ಷಿಗಳಿರದಿರೆ ಸಸ್ಯಗಳಿಲ್ಲ||

ಸಸ್ಯಗಳಿಂದಲೆ ಸರ್ವ ವೃಕ್ಷಗಳು|

ವೃಕ್ಷಗಳಿರ್ದೊಡೆ ಪಕ್ಷಿ ಸಸ್ಯಗಳು||

ಕಾಂಭೋದಿ ಝಂಪೆ

ಹಸಿರು ಮರೆಯಾಗುತಿರೆ ತಂಪಡಗಿ ವನದೇವಿ |

ಯುಸಿರು ಬಿಸಿಯಾಗಿ ಬರುತಿಹುದು ||

ನಶಿಸಿದುವು ಸೌಂದರ್ಯ ಸೌಗಂಧ ಸೌರಂಭ |

ವಶವಾಯ್ತು ಲೋಕ ರೂಕ್ಷತೆಗೆ ||

ದಕ್ಷನ ಅಶ್ವಿನ್ಯಾದಿ 27 ಹೆಣ್ಣುಮಕ್ಕಳನ್ನು ವಿವಾಹವಾಗಿದ್ದ ಚಂದ್ರನು ರೋಹಿಣಿಯೊಬ್ಬಳಲ್ಲೇ ಹೆಚ್ಚು ಅನುರಾಗ ಹೊಂದಿರುತ್ತಾನೆ. ಪತ್ನಿಯರಲ್ಲಿ ಪಕ್ಷಪಾತ ಸರಿಯಲ್ಲವೆಂದು ದಕ್ಷನು ಬುದ್ಧಿ ಹೇಳಿದರೂ ಕಿವಿಗೊಡದ ಚಂದ್ರನಿಗೆ ದಕ್ಷನು ಕ್ಷಯರೋಗಿಯಾಗೆಂದು ಶಪಿಸುತ್ತಾನೆ. ಮುಂದೆ ಓಷಧೀಷನಾದ ಚಂದ್ರನು ಮರೆಯಾಗಿದ್ದರಿಂದ ಸಸ್ಯವರ್ಗಗಳು ನಾಶ ಹೊಂದುತ್ತವೆ. ಇಲ್ಲಿ ಕವಿಯೂ ಪರಿಸರ ಕಾಳಜಿ ಹಾಗೂ ಅದಕ್ಕೂ ನಮಗೂ ಇರುವ ಸಂಬಂಧದ ಬಗ್ಗೆ ತಿಳಿಸಿ ಪರಿಸರ ಪ್ರಜ್ಞೆಯನ್ನು ಮೆರೆದಿದ್ದಾರೆ.

ಇಂತಹ ಸಾವಿರಾರು ರಚನೆಗಳನ್ನು ಯಕ್ಷಗಾನ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಈ ಸಾಹಿತ್ಯದ ಉದ್ದೇಶ ಕಲಾ ಅಭಿವ್ಯಕ್ತಿಯೇ ಆದರೂ ಇಲ್ಲಿ ಸಾಮಾಜಿಕ ಅಂಶಗಳನ್ನು ಯಥೇಚ್ಛವಾಗಿ ಸಂದರ್ಭಕ್ಕೆ ಅನುಸಾರವಾಗಿ ಇಲ್ಲಿಯ ಕವಿಗಳು ಬಳಸಿರುವುದು ಯಕ್ಷಗಾನ ಕಲೆಯ ಹೆಚ್ಚುಗಾರಿಕೆ. ದೃಶ್ಯ ಮಾಧ್ಯಮವೊಂದು ಕೊಡುವ ಪರಿಣಾಮಗಳು ಹಾಗೂ ಅದರ ಸಾಧ್ಯತೆಗಳು ನೂರಾರು ಹೊತ್ತಿಗೆಗಳು ನೀಡುವ ಪರಿಣಾಮಕ್ಕಿಂತ ದೊಡ್ಡದು. ಯಕ್ಷಗಾನವೊಂದು ದೃಶ್ಯ ಮಾಧ್ಯಮವಾಗಿ ಪುರಾಣದ ಆಶಯಗಳನ್ನು, ಅತಿಮಾನುಷ ಪಾತ್ರಗಳನ್ನು ಮನಮುಟ್ಟುವಂತೆ ಚಿತ್ರಿಸಿ, ಸಮಾಜದ ಕೈಗನ್ನಡಿಯಾಗಿದೆ.

ಕೃಷ್ಣನಾಗಿ ಬಾಲಕಲಾವಿದೆ ತುಳಸಿ ಹೆಗಡೆ –ಪ್ರಜಾವಾಣಿ ಚಿತ್ರ: ರಂಜು ಪಿ.
ಕೃಷ್ಣನಾಗಿ ಬಾಲಕಲಾವಿದೆ ತುಳಸಿ ಹೆಗಡೆ –ಪ್ರಜಾವಾಣಿ ಚಿತ್ರ: ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT