ಮಂಗಳವಾರ, ಏಪ್ರಿಲ್ 7, 2020
19 °C

ಯಕ್ಷ ನಾಟ್ಯೋತ್ಸವ

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಇಡಗುಂಜಿಯ ‘ಯಕ್ಷಾಂಗಣ’ ಬಯಲು ರಂಗಮಂದಿರದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ರಂಗೇರಿದೆ. ಯಕ್ಷಗಾನ ಮಾತ್ರವಲ್ಲದೆ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಜಾನಪದ, ಆದಿವಾಸಿ ಕಲಾವಿದರ ನೃತ್ಯಗಳ ಅಪೂರ್ವ ಸಂಗಮ ಕಲಾರಸಿಕರಿಗೆ ರಸದೌತಣ ನೀಡುತ್ತಿದೆ.

ತಾರಕ, ಅತಿತಾರಕ ಸ್ಥಾಯಿಯಲ್ಲಿ ದೇವತಾ ಸ್ತುತಿಯನ್ನು ಹಿಮ್ಮೇಳದೊಂದಿಗೆ ಶಾಸ್ತ್ರೀಯವಾಗಿ ಹಾಡುವ ಭಾಗವತರ ಕಂಚಿನ ಕಂಠದ ಮೋಡಿ ಪ್ರಶಾಂತವಾದ ಹಳ್ಳಿಯಲ್ಲಿ ರಿಂಗಣಗೊಂಡಿತೆಂದರೆ ಅಲ್ಲಿ ನೂರಾರು ಜನ ಜಮಾಯಿಸುತ್ತಾರೆ. ಯಕ್ಷಗಾನದ ಆಕರ್ಷಣೆಯೇ ಅಂಥದ್ದು. ಯಾವುದೇ ‘ಪ್ರಸಂಗ’ವಿರಲಿ, ಭಾಗವತರ ಹಾಡಿಗೆ ವೇಷಧಾರಿಗಳು ರಂಗಸ್ಥಳದ ಮೇಲೆ ಲಯಬದ್ಧ ‘ನಡೆ’ಯಲ್ಲಿ ಕುಣಿಯಲಾರಂಭಿಸಿದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ.

ಕರಾವಳಿ ಭಾಗದ ಶ್ರೀಮಂತ ಕಲೆ ಯಕ್ಷಗಾನ. ಇದು ಹಳ್ಳಿಯ ಜನರಿಗೆ ಅಚ್ಚುಮೆಚ್ಚು, ಅಷ್ಟೇ ಜನಪ್ರಿಯವೂ ಹೌದು. ಆದರೆ, ಇಲ್ಲಿಯ ಜನರಿಗೆ ಇತರ ಕಲಾ ಪ್ರಕಾರಗಳಾದ ಭರತನಾಟ್ಯ, ಸಂಗೀತ, ಅಸ್ಸಾಂ, ಒಡಿಶಾ, ಮಣಿಪುರಿ ಮುಂತಾದ ರಾಜ್ಯಗಳ ನೃತ್ಯಗಳ ಪರಿಚಯವೂ ಇರಬೇಕಲ್ಲವೇ? ಕಲಾ ರಸಿಕರು ಇವುಗಳನ್ನೂ ಆಸ್ವಾದಿಸಬೇಕಲ್ಲವೇ?

ಇಂತಹ ಮಹತ್ತರ ಉದ್ದೇಶವಿಟ್ಟುಕೊಂಡು ಯಕ್ಷಗಾನದ ಧೀಮಂತ ಹಾಗೂ ಮೇರು ಕಲಾವಿದ ಕೆರೆಮನೆ ಶಂಭು ಹೆಗಡೆ ಅವರ ಸವಿನೆನಪಿಗಾಗಿ ಅವರ ಪುತ್ರ ಹಾಗೂ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಕಳೆದ ಹತ್ತು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದಾರೆ. ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಈ ಬಾರಿ ಹನ್ನೊಂದನೇ ವರ್ಷದ ರಾಷ್ಟ್ರೀಯ ನಾಟ್ಯೋತ್ಸವ ನಡೆಯುತ್ತಿದ್ದು, ಹಳ್ಳಿಯಲ್ಲಿ ಕಲಾ ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ.

ಹಾಗೆ ನೋಡಿದರೆ ಯಕ್ಷಗಾನ ಉತ್ತರ ಕನ್ನಡ–ದಕ್ಷಿಣ ಕನ್ನಡ ಭಾಗದ ಜನರಲ್ಲಿ ರಕ್ತಗತವಾಗಿಯೇ ಬಂದಿದೆ. ಕೆರೆಮನೆ ಶಂಭು ಹೆಗಡೆ ಅವರು ಯಕ್ಷಗಾನವನ್ನು ಉಳಿಸಿ, ಬೆಳೆಸುವಲ್ಲಿ ಅಪಾರ ಶ್ರಮವಹಿಸಿದವರಾದರೂ ಅವರ ದೂರದೃಷ್ಟಿ ಯಕ್ಷಗಾನೇತರ ಕಲೆಗೆ ಪ್ರೋತ್ಸಾಹ ನೀಡುವುದೇ ಆಗಿತ್ತು. ಆದರೆ, ಅದನ್ನು ಸಾಕಾರಗೊಳಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಅವರ ಪುತ್ರ ಯಥಾವತ್‌ ಸಾಕಾರಗೊಳಿಸಿ ತಂದೆಯವರ ನೆನಪಿನಲ್ಲೇ ರಾಷ್ಟ್ರೀಯ ನಾಟ್ಯೋತ್ಸವ ನಡೆಸುತ್ತಿರುವುದು ಔಚಿತ್ಯಪೂರ್ಣ.

‘ನಮ್ಮ ಹಳ್ಳಿಯ ಜನ ಬೇರೆ ಬೇರೆ ಕಲಾ ಪ್ರಕಾರಗಳನ್ನು ಆಸ್ವಾದಿಸಬೇಕು. ಭರತನಾಟ್ಯ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ, ರಂಗ ಸಂಗೀತಗಳಂತಹ ಕಲೆಗಳಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ನಾಟ್ಯೋತ್ಸವ ಆಯೋಜಿಸುತ್ತಾ ಬಂದೆವು. ನಮ್ಮ ನಾಡಿನ ಕಲಾವಿದರ ಜೊತೆಗೆ ದೇಶದ ನಾನಾ ರಾಜ್ಯಗಳ ಕಲಾವಿದರನ್ನೂ, ಸಿಂಗಪುರ, ರಷ್ಯಾ ಮುಂತಾದ ವಿದೇಶಿ ಕಲಾವಿದರನ್ನೂ ಕರೆಸಿ ವೇದಿಕೆ ಒದಗಿಸಿ ನಮ್ಮ ಕಲಾಭೂಮಿಯನ್ನು ಮತ್ತಷ್ಟು ಪಾವನಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆ ನಮ್ಮದು’ ಎನ್ನುತ್ತಾರೆ ನಾಟ್ಯೋತ್ಸವದ ರೂವಾರಿ ಕೆರೆಮನೆ ಶಿವಾನಂದ ಹೆಗಡೆ.

ನಾಟ್ಯೋತ್ಸವವನ್ನು ಮತ್ತಷ್ಟು ವೈವಿಧ್ಯಮಯವಾಗಿಸಲು ಸಂಗೀತ, ನೃತ್ಯ, ಯಕ್ಷಗಾನದ ಜೊತೆಗೆ ಕಲೆಗೆ ಸಂಬಂಧಿಸಿದ ವಿಚಾರ ಸಂಕಿರಣಗಳನ್ನೂ ಆಯೋಜಿಸುತ್ತೇವೆ. ಯಕ್ಷಗಾನಕ್ಕೆ ತೀರಾ ಸನಿಹವಾದ ಅಸ್ಸಾಂನ ‘ಅಂಕಿಯೊ ನಾಟ್ಯ’, ಗುಜರಾತಿನ ದಾಂಡಿಯಾರಾಸ್‌, ಬುಡಕಟ್ಟು ಜನಾಂಗದವರ ಕಲೆ ‘ಸೋಕು’ ಜಾನಪದ ಸಂಗೀತ ಮುಂತಾದ ಪ್ರಕಾರಗಳಿಗೂ ಆದ್ಯತೆ ನೀಡುತ್ತೇವೆ. ಆಗ ಕಲಾಪ್ರದರ್ಶನ ಮತ್ತಷ್ಟು ರಂಗೇರುತ್ತದೆ’ ಎನ್ನುವುದು ಅವರ ವಿವರಣೆ.


ಕೃಷ್ಣಧಾರಿಯಾಗಿ ಕೆರೆಮನೆ ಶಿವಾನಂದ ಹೆಗಡೆ

‘ನಾಟ್ಯೋತ್ಸವ ಅಲ್ಲದೆ ಕೆರೆಮನೆ ಯಕ್ಷಗಾನ ಮಂಡಳಿಯಿಂದ ಹಲವು ಉಪಯುಕ್ತ ಕಾರ್ಯಕ್ರಮಗಳನ್ನೂ ವರ್ಷವಿಡೀ ಆಯೋಜಿಸಲಾಗುತ್ತದೆ. ಗ್ರಾಮಾಂತರ ಶಾಲೆಗಳಲ್ಲಿ ‘ಆಟ–ಪಾಠ’ ಶೀರ್ಷಿಕೆಯಡಿ ಯಕ್ಷಗಾನದ ಸ್ವರೂಪವನ್ನು ಮಕ್ಕಳಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದೇವೆ. ಸ್ಪಿಕ್‌ಮೆಕೆ ಸಂಘಟನೆ ಈ ನಿಟ್ಟಿನಲ್ಲಿ ಉಪಯುಕ್ತ ಕೆಲಸ ಮಾಡುತ್ತಿದೆ. ದೇಶದ ನೂರಾರು ಶಾಲಾ– ಕಾಲೇಜುಗಳಲ್ಲಿ ಸ್ಪಿಕ್‌ಮೆಕೆ ವರ್ಷಪೂರ್ತಿ ನಡೆಸುವ ಕಾರ್ಯಕ್ರಮದಲ್ಲಿ ಯಕ್ಷಗಾನಕ್ಕೂ ಆದ್ಯತೆ ನೀಡಿ ಈ ಪಾರಂಪರಿಕ ಕಲೆಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಹೇಳುತ್ತಾರೆ ಅವರು.

ಐದು ದಿನಗಳ ರಾಷ್ಟ್ರೀಯ ಹಬ್ಬಕ್ಕೆ ಲಕ್ಷಗಟ್ಟಲೆ ವೆಚ್ಚವಾಗುತ್ತದೆ. ಕಲಾವಿದರ ಸಂಭಾವನೆ, ವೇದಿಕೆ ನಿರ್ವಹಣೆ, ಊಟೋಪಚಾರ, ವಸತಿ ವ್ಯವಸ್ಥೆ... ಇವೆಲ್ಲವನ್ನು ನಿಭಾಯಿಸುವುದು ಹೇಗೆ? ಎನ್ನುವ ಪ್ರಶ್ನೆಗೆ ಶಿವಾನಂದ ಹೆಗಡೆ ಅವರ ಮನಸ್ಸು ಭಾರವಾಗುತ್ತದೆ. ‘ಪಾರಂಪರಿಕ ಕಲೆ ಉಳಿಸಿ ಬೆಳೆಸಬೇಕು ಎಂದರೆ ಅದು ತಮಾಷೆಯ ಸಂಗತಿಯಲ್ಲ. ಧನ ಸಂಗ್ರಹ ಮಾಡುತ್ತೇವೆ. ಆದರೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವಾಗಲಿ ಈ ಕಲಾ ಉತ್ಸವಕ್ಕೆ ಕಿಂಚಿತ್ತೂ ಧನಸಹಾಯ ಮಾಡುತ್ತಿಲ್ಲ ಎಂಬುದನ್ನು ಖೇದದಿಂದಲೇ ಹೇಳಬೇಕಾಗಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲೇ ಕಳೆದ 33 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಗುರುಕುಲ ಪದ್ಧತಿಯ ಯಕ್ಷಗಾನ ಕಲಾ ಕೇಂದ್ರವನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ’ ಎನ್ನುವಾಗ ಶಿವಾನಂದ ಹೆಗಡೆ ಅವರ ಮುಖದಲ್ಲಿ ವಿಷಾದದ ಛಾಯೆ ಮೂಡುತ್ತದೆ.

‘ನಮ್ಮ ಕಲೆ, ಕಲಾವಿದರು ಉಳಿಯಬೇಕು. ದುಡ್ಡಿನಿಂದಲೇ ಎಲ್ಲವನ್ನೂ ಅಳೆಯಲಾಗದು. ಜನರ ಪ್ರೀತಿ, ವಿಶ್ವಾಸವೇ ಮುಖ್ಯ ಎನ್ನುವ ಅವರು, ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕಾಗಿ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ ಅವರ ಸವಿನೆನಪಿನಲ್ಲಿ ₹ 25 ಸಾವಿರ ಮೊತ್ತದ ಪ್ರಶಸ್ತಿ ನೀಡುತ್ತಾ ಬಂದಿದ್ದೇವೆ. ಯಕ್ಷಗಾನ ಕಲಾವಿದರು ಮಾತ್ರವಲ್ಲ, ಕಥಕ್‌ ಕಲಾವಿದೆ ಮಾಯಾರಾವ್‌, ನೆಬ್ಬೂರು ಭಾಗವತರು, ಗಾಯಕಿ ಗಂಗೂಬಾಯಿ ಹಾನಗಲ್‌, ಸಾಹಿತಿ ಯು.ಆರ್‌. ಅನಂತಮೂರ್ತಿ ಮುಂತಾದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ನಾಟ್ಯೋತ್ಸವದಲ್ಲಿ ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯ ಅವರಿಗೆ ನಾಟ್ಯೋತ್ಸವ ಸನ್ಮಾನ ಸಲ್ಲಲಿದೆ’ ಎನ್ನುತ್ತಾರೆ ಅವರು.

‘ಯಕ್ಷಗಾನದ ವಿಸ್ತಾರದ ಹೊಳಹು ವಿದೇಶಗಳಲ್ಲೂ ಛಾಪು ಮೂಡಿಸಿದೆ. ಯಕ್ಷಗಾನ ನಮ್ಮ ಊರಿನಲ್ಲೇ ಇರಲಿ, ಹೊರದೇಶದಲ್ಲೇ ಇರಲಿ ಇದನ್ನು ಹೆಚ್ಚು ಸರಳವಾಗಿ, ಮುಕ್ತವಾಗಿ ವ್ಯಕ್ತಪಡಿಸುವ ಗುರಿ ನಮ್ಮದು. ಆ ಪ್ರಯತ್ನ ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ. ಯಾವುದೇ ವಿಷಯವೇ ಇರಲಿ, ಯಕ್ಷಗಾನ ಪರಂಪರೆಯ ಚೌಕಟ್ಟಿನೊಳಗೆ, ಇಂದಿನ ಸಮಾಜಕ್ಕೆ ಪ್ರಸ್ತುತವಾಗುವಂತೆ ಪ್ರದರ್ಶಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ’ ಎಂಬುದು ಅವರ ಖಚಿತ ನಿಲುವು.

ಇದನ್ನೂ ಓದಿ: ಯಕ್ಷಗಾನದ ಉತ್ತುಂಗ ಕೃಷ್ಣಮೂರ್ತಿ ತುಂಗ

ಕಲೆ ಒಂದು ನಾಡಿನ ಸಾಂಸ್ಕೃತಿಕ ಪ್ರತಿನಿಧಿ. ಒಂದು ಕಲೆಯನ್ನು ಅರ್ಥೈಸಿ, ಆಸ್ವಾದಿಸಬೇಕಾದರೆ ಅಲ್ಲಿ ರಂಜನೆಯಷ್ಟೇ ಅಲ್ಲ; ಕಲೆಯ ಒಳನೋಟವೂ ಮುಖ್ಯ. ಎಲ್ಲ ಕಲೆಗಳನ್ನು ಅರಿಯುವ ಮನಸ್ಥಿತಿ ನಮ್ಮದಾಗಬೇಕು. ಅವುಗಳ ರಸಾಸ್ವಾದವನ್ನು ಅನುಭವಿಸುವ ವಿಶಾಲ ಮನೋಭಾವನೆ ನಮ್ಮದಾಗಬೇಕು. ಆಗ ಯಕ್ಷಗಾನ ಒಂದೇ ಅಲ್ಲ; ಎಲ್ಲ ಕಲಾ ಪ್ರಕಾರಗಳ ರುಚಿವರ್ಧನೆಯೂ ಆಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು