ಮಂಗಳವಾರ, ಸೆಪ್ಟೆಂಬರ್ 21, 2021
27 °C

ಬದಲಾದ ಕಾಲದಲ್ಲಿ ಯಕ್ಷಗಾನ

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

Prajavani

ಸಂಜೆ ವಿಮಾನದಲ್ಲಿ ಮಂಗಳೂರು ತಲುಪಿ, ಜೀನ್ಸ್ ಪ್ಯಾಂಟು ತೆಗೆದು, ಯಕ್ಷಗಾನ ವೇಷಹಾಕಿ ‘ಹಾರಿದನು ಹನುಮ’ ಪದ್ಯಕ್ಕೆ ಅಂದವಾಗಿ ಕುಣಿಯುವ ತರುಣ ಕಲಾವಿದರೂ ಇದ್ದಾರೆ. ಯಕ್ಷಗಾನದ ಹೆಸರಲ್ಲಿ ಇವತ್ತು ₹ 300 ಕೋಟಿ ವ್ಯವಹಾರ ನಡೆಯುತ್ತಿದೆಯಂತೆ! ಆದರೆ, ಭಾಗವತರ ಪುನರಾವರ್ತಿತ ಹಾಗೂ ಅತಿಲಂಬಿತ ಹಾಡಿಗೆ ಕುಣಿಯಲಾಗದ ಕಲಾವಿದರ ಕಷ್ಟ ನೋಡಲಾಗದೆ, ಆಗಾಗ ಕಣ್ಣುಮುಚ್ಚಿ ಯಕ್ಷಗಾನ ನೋಡುವ ನನ್ನಂಥವರೂ ಇದ್ದಾರೆ!!

**

ದೆಹಲಿಯಲ್ಲಿ ಇರುವ ನಾನು ಊರಿಗೆ ಹೋಗುವಾಗಲೆಲ್ಲ ಯಕ್ಷಗಾನ ನೋಡುತ್ತೇನೆ. ಅದರಲ್ಲಿ ತೆಂಕು, ಬಡಗು, ಇಡೀ ರಾತ್ರಿ ಆಟ, ಕಾಲಮಿತಿ ಪ್ರಸಂಗ, ತಾಳಮದ್ದಳೆ, ತುಳು ಆಟ ಹೀಗೆ ಎಲ್ಲವೂ ಸೇರಿರುತ್ತದೆ. ವಾಟ್ಸ್ಆ್ಯಪ್‍ನಲ್ಲಿರುವ ಯಕ್ಷಗಾನ ಗುಂಪುಗಳಲ್ಲಿ ಮಾಹಿತಿಗಳು ಸುಲಭವಾಗಿ ಸಿಗುತ್ತವೆ. ಇನ್ನೇನಾದರೂ ವಿಶೇಷ ಮಾಹಿತಿ ಬೇಕೆಂದರೆ ಒಂದು ಸಂದೇಶ ಕಳಿಸಿದರಾಯಿತು. ಕರಾವಳಿಯ ಮೂಲೆ ಮೂಲೆಯಿಂದ ರಾಶಿ ರಾಶಿ ವಿವರಗಳು ಬಂದು ಬೀಳುತ್ತವೆ. ಜೊತೆಗೆ ‘ನೀವು ಬರ್ತೀದ್ದೀರಾ? ಒಳ್ಳೆಯದಾಯಿತು. ಹಂಪನಕಟ್ಟೆಗೆ ಬನ್ನಿ. ಒಟ್ಟಿಗೇ ಕಾರಲ್ಲಿ ಹೋಗೋಣ’ ಎಂಬ ಸಹಾಯದ ಮಾತು.

ಹಿರಿಯ ಕಲಾವಿದ ಡಾ.ಪ್ರಭಾಕರ ಜೋಷಿಯವರ ಯಾರ ಆಟ ಹೇಗೆ? ಎಂಬ ಸಣ್ಣ ವಿಮರ್ಶೆಯೂ ಕಿವಿಗೆ ಬೀಳುತ್ತದೆ. ಕರಾವಳಿಯ 10-15 ಕಿ.ಮೀ. ವ್ಯಾಪ್ತಿಯ ಒಳಗೆ ಮೇಲೆ ಹೇಳಿದ ಎಲ್ಲವನ್ನೂ ಸುಲಭವಾಗಿ ನೋಡಬಹುದು. ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ತಾಳಮದ್ದಳೆ, ಸಂಜೆ 7 ಗಂಟೆಯಿಂದ 11 ಗಂಟೆವರೆಗೆ ಕಾಲಮಿತಿ ಯಕ್ಷಗಾನ, ಆನಂತರ ಬೆಳಗಿನವರೆಗೆ ಕಟೀಲು ಮೇಳದ ಆಟ. ಸುಮಾರು 40 ಮೇಳಗಳು ವರ್ಷಕ್ಕೆ 7000ಕ್ಕೂ ಹೆಚ್ಚು ಪ್ರದರ್ಶನ ನೀಡುವಾಗ ನಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ.

1950ರ ದಶಕದ ಕೊನೆಯಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಪ್ರೇಕ್ಷಕನಿಗೆ ಈಗಿನಷ್ಟು ಆಯ್ಕೆಗಳಿರಲಿಲ್ಲ. ರಾತ್ರಿ 9 ಗಂಟೆಗೆ ಆಟ ನೋಡಲು ಕುಳಿತರೆ ಬೆಳಗ್ಗಿನ ತನಕ ಆಟ ನೋಡುವುದಷ್ಟೇ ಕೆಲಸ. ಆದರೆ, ಈಗ ತುಂಬ ಬದಲಾವಣೆಗಳಾಗಿವೆ. ಯಾಕಾಗಬಾರದು? ಬದಲಾವಣೆಗೆ ಸುಲಭವಾಗಿ ಮೈಗೊಟ್ಟದ್ದರಿಂದಲೇ ಯಕ್ಷಗಾನ ಇವತ್ತಿನವರೆಗೆ ಬದುಕುಳಿದಿದೆ. ಮಧ್ಯಕಾಲೀನ ಭಕ್ತಿಯುಗ ಯಕ್ಷಗಾನವನ್ನು ಆಮೂಲಾಗ್ರವಾಗಿ ಬದಲಾಯಿಸಿತು.

ಇಂದು ಹರಕೆ ಮೇಳಗಳು ಪ್ರತಿನಿಧಿಸುವ ಯಕ್ಷಗಾನಗಳು ನಿರ್ವಿವಾದವಾಗಿ ಭಕ್ತಿಯುಗದ ಕೊಡುಗೆಗಳು. ಕಥಾವಸ್ತು, ವೇಷಭೂಷಣ ಮತ್ತು ಮುಖವರ್ಣಿಕೆಗಳು ವೈಷ್ಣವ ಭಕ್ತಿಯನ್ನು ಪ್ರತಿಪಾದಿಸುತ್ತವೆ. ಪ್ರಸಂಗಗಳಲ್ಲಿ ಕಂಡುಬರುವ ಅರಸ, ಬೇಟೆ, ಪ್ರಣಯ, ಗಡಿ ವಿಸ್ತರಣೆ ಮೊದಲಾದುವುಗಳೆಲ್ಲ ಮಧ್ಯಕಾಲೀನ ತುಳುನಾಡಿನ ಅರಸೊತ್ತಿಗೆಯ ಅಭಿವ್ಯಕ್ತಿಗಳಾಗಿವೆ. ಬೇಟೆ, ಬೇಟ ಮತ್ತು ಯುದ್ಧಗಳಿಲ್ಲದೆ ಯಾವ ಯಕ್ಷಗಾನವೂ ಇಲ್ಲವಲ್ಲ! 20ನೇ ಶತಮಾನದ 50-60ರ ದಶಕದಲ್ಲಿ ಯಕ್ಷಗಾನಕ್ಕೆ ಹರಿದಾಸರ ಪ್ರವೇಶವಾಯಿತು.

ಅವರು ತಮ್ಮ ಅಪ್ರತಿಮವಾದ ಪಾಂಡಿತ್ಯ ಹಾಗೂ ಮಾತುಗಾರಿಕೆಯಿಂದ ಪ್ರಸಂಗದ ವಸ್ತುವನ್ನು ಗಮನಾರ್ಹವಾಗಿ ವಿಸ್ತರಿಸಿದರು. ಅವರ ಕನ್ನಡ ಬಳಕೆಯೂ ಅಸಾಮಾನ್ಯ. ಕಾವ್ಯ- ಶಾಸ್ತ್ರ- ಪುರಾಣಗಳಿಂದ ಬೇಕಾದ್ದನ್ನು ಹೆಕ್ಕಿ ತೆಗೆದು ತಮ್ಮ ವಾದಕ್ಕೆ ಜೋಡಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿತ್ತು. ತಾಳಮದ್ದಳೆಯಲ್ಲಿಯಂತೂ ಇಂಥ ಪ್ರತಿಭೆಗಳಿಗೆ ಹೇರಳವಾದ ಅವಕಾಶವಿತ್ತು. ಇಂಥ ಬೆಳವಣಿಗೆಗಳಿಂದಾಗಿ ವಿದ್ಯಾವಂತರೆಲ್ಲ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನದ ಕಡೆ ಬರುವಂತಾಯಿತು. ಶಿವರಾಮ ಕಾರಂತರೇ ಗೆಜ್ಜೆ ಕಟ್ಟಿ ಕುಣಿದರೆಂದರೆ ಸಾಕಲ್ಲ! ಇದರ ಜೊತೆಗೆ ಯಕ್ಷಗಾನವೂ ಬದಲಾಯಿತು.

ಹರಿದಾಸರುಗಳಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟ ಹಾಗೂ ಮಲ್ಪೆ ರಾಮದಾಸ ಸಾಮಗರ ಸರಳೀಕೃತ ವೇಷಭೂಷಣ ಮತ್ತು ಕುಣಿತಗಳನ್ನು ನೋಡಲು ಕಷ್ಟವಾಗುತ್ತಿತ್ತು. ಆದರೆ, ಅವರ ಮಾತುಗಳು ಕಳಕೊಂಡದ್ದನ್ನು ತುಂಬಿಕೊಡುತ್ತಿದ್ದುದರಿಂದ ಇದೊಂದು ಕೊರತೆ ಎಂದು ನಮಗ್ಯಾರಿಗೂ ಅನ್ನಿಸುತ್ತಿರಲಿಲ್ಲ. ಇವರಿಬ್ಬರ ಮಾತಿನ ಲೋಕವನ್ನು ಹಿಂದೊಮ್ಮೆ ನಾನು ‘ಸರಸ್ವತಿಯ ದಿಗ್ವಿಜಯ ಕಥನ’ ಎಂದು ವರ್ಣಿಸಿದ್ದುಂಟು.

ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಈಗ ಯಕ್ಷಗಾನದಲ್ಲಿ ಅಂತಹ ಗಂಭೀರ ವಾಗ್ವಾದಕ್ಕೆ ಅವಕಾಶವೇ ಇಲ್ಲ. ಪ್ರಾಚೀನ ಪಠ್ಯಗಳನ್ನು ಅಭ್ಯಾಸ ಮಾಡಿ, ಅವನ್ನು ರಂಗದ ಮೇಲೆ ಸಮಕಾಲೀನಗೊಳಿಸುವ ಹಠ ಕಲಾವಿದರಲ್ಲಿ ಕಡಿಮೆಯಾಗುತ್ತಿದೆ. ಸ್ಥಳೀಯ ಪತ್ರಿಕೆಗಳನ್ನು ಓದಿ, ರಾಜಕಾರಣಿಗಳ ಭಾಷಣಗಳನ್ನು ಕೇಳಿ, ತಮ್ಮ ಪಾತ್ರ ನಿರ್ವಹಣೆಗೆ ಬೇಕಾದ ಶಕ್ತಿಯನ್ನು ತುಂಬಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇವತ್ತಿನ ಯಕ್ಷಗಾನಗಳು ಸುಲಭವಾಗಿ ರಾಜಕೀಯ ಪಕ್ಷಗಳ ತುತ್ತೂರಿಗಳಾಗಿ ಪರಿವರ್ತನೆ ಹೊಂದುತ್ತಿವೆ. ಕೋಮುವಾದದ ಪರವಾಗಿ ಮಾತನಾಡುವ ದಯನೀಯ ಪರಿಸ್ಥಿತಿಗೂ ಯಕ್ಷಗಾನ ಇಳಿದಿದೆ. ಖಂಡನೆ- ಮಂಡನೆ ಮೂಲಕವೇ ಬೆಳೆದ ಕಲೆಯೊಂದು ಏನನ್ನೋ ಪ್ರತಿಷ್ಠಾಪಿಸ ಹೊರಟರೆ ತಾನೇ ಶಿಥಿಲವಾಗುತ್ತದೆ.

1980ರ ದಶಕದಲ್ಲಿ ಕಾಣಿಸಿಕೊಂಡ ತುಳು ಪ್ರಸಂಗಗಳು ಯಕ್ಷಗಾನದ ವಸ್ತುವನ್ನೇ ಪಲ್ಲಟಗೊಳಿಸಿದವು. ತುಳುನಾಡಿನ ಆತ್ಮಕಥೆಗಳಂತಿದ್ದ ಪಾಡ್ದನಗಳ ಸಹಾಯದಿಂದ ಹೊಸ ಲೋಕವೊಂದನ್ನು ಕಟ್ಟಲಾಯಿತು. ಕೋಟಿ ಚೆನ್ನಯ, ತುಳುನಾಡ ಸಿರಿ, ವೀರ ಕಲ್ಕುಡ ಮೊದಲಾದ ಪ್ರಸಂಗಗಳು ಅಪಾರ ಜನಪ್ರಿಯತೆ ಪಡೆದುವು. ತುಳು ಆಟಗಳು ಬಣ್ಣಗಾರಿಕೆಯನ್ನು ನಾಟಕೀಯಗೊಳಿಸಿದವು. ಬಣ್ಣದ ವೇಷಗಳನ್ನು ತೆರೆಮರೆಗೆ ತಳ್ಳಿದವು. ಹಾಸ್ಯಗಾರರಿಗೆ ರಂಗದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಸಿತು. ಪರಂಪರೆಯ ಅನೇಕ ಭಾಗಗಳು ಕಾಣೆಯಾದವು. ಹೀಗೆ ಮುಖ್ಯವಾದ ಕೆಲವನ್ನು ಕಳಕೊಂಡ ಯಕ್ಷಗಾನವು ತುಳುವಿನ ಮೂಲಕ ಬೇರೆ ಕೆಲವನ್ನು ಪಡೆದುಕೊಂಡಿತು.

ತುಳು ಭಾಷೆಯ ಸಮೃದ್ಧ ಬಳಕೆ, ತುಳು ನಾಡಿನ ಚರಿತ್ರೆಯ ಶೋಧನೆ, ಪಾಡ್ದನಗಳ ಬಳಕೆ, ರಂಗದಲ್ಲಿ ವಾಸ್ತವತೆ ಮೂಡಿಸಲು ಮಾಡಿದ ಪ್ರಯತ್ನ ಇತ್ಯಾದಿಗಳು ರಂಗದಲ್ಲಿ ಹೊಸದಾಗಿ ಕಾಣಿಸಿಕೊಂಡವು. ಆದರೆ, ಪಾಡ್ದನಗಳು ಬಹಳ ಬೇಗ ಖಾಲಿಯಾದವು. ಅದರ ಜಾಗವನ್ನು ತುಂಬಲು ಸತ್ವವಿಲ್ಲದ ಕಥೆಗಳು ಬರಲಾರಂಭಿಸಿದುವು. ಈಚೆಗೆ ನಾನು ನೋಡಿದ ತುಳು ಯಕ್ಷಗಾನವೊಂದರಲ್ಲಿ ಪ್ರಬುದ್ಧ ಕಲಾವಿದರಿದ್ದರೂ ಯಾವ ಪರಿಣಾಮ ಬೀರದೆ ಹೋಯಿತು. ಸಿನಿಮೀಯ ಘಟನೆಗಳು, ಅತಿಯಾದ ವಾಸ್ತವತಾವಾದಗಳಿಂದ ಅದು ಸೊರಗಿತ್ತು. ಯಕ್ಷಗಾನದ ಭಾಷೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅದು ವಿಫಲವಾಗಿತ್ತು.

ಕಳೆದ ವರ್ಷ ನೋಡಿದ ಇಡೀ ರಾತ್ರಿಯ ಪ್ರದರ್ಶನಗಳಲ್ಲಿ ಅಂಥ ಬದಲಾವಣೆಗಳೇನೂ ನನಗೆ ಕಾಣಲಿಲ್ಲ. ಹರಕೆ ಯಕ್ಷಗಾನಗಳು ರಾತ್ರಿ 10ಕ್ಕೆ ಶುರುವಾಗಿ, ಮುಂಜಾವ ಆರಕ್ಕೆ ಮುಗಿಯುತ್ತವೆ. ಆಟದ ಪ್ರಾಯೋಜಕರು ತಮ್ಮ ಶ್ರೀಮಂತಿಕೆ ತೋರಿಸಲು ಯಕ್ಷಗಾನಕ್ಕೆ ಅನಗತ್ಯವಾದ ವೈಭವ ತಂದುಕೊಟ್ಟರೂ ಒಳ್ಳೆಯ ಕಲಾವಿದರು ಇಂದಿಗೂ ತಮ್ಮ ಗಹನವಾದ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ದೇವಿ ಮಹಾತ್ಮೆಯ ತ್ರಿಮೂರ್ತಿಗಳು, ಮಧು ಕೈಟಭರು, ದೇವಿ, ಮಹಿಷಾಸುರ, ರಕ್ತ ಬೀಜ ಮೊದಲಾದ ಪಾತ್ರಗಳು ಹಿಂದೆಗಿಂತಲೂ ಇವತ್ತು ಹೆಚ್ಚು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳ್ಳುತ್ತಿವೆ.

ಈಚೆಗೆ ಕಾಲಮಿತಿ ಯಕ್ಷಗಾನ ಜನಪ್ರಿಯವಾಗುತ್ತಿದೆ. ಇಡೀ ರಾತ್ರಿ ಯಕ್ಷಗಾನ ನೋಡುವವರಿಲ್ಲ ಎಂಬುದನ್ನು ಗಮನಿಸಿ, 3- 4 ಗಂಟೆ ಅವಧಿಯ ಯಕ್ಷಗಾನ ಚಾಲ್ತಿಗೆ ಬಂದಿದೆ. ಅದನ್ನು ನೋಡುವ ಹೊಸ ಪ್ರೇಕ್ಷಕ ವೃಂದವೂ ತಯಾರಾಗಿದೆ. ವಿಶಾಲವಾಗಿ ನೋಡಿದರೆ, ಹಿಂದಿನ ಹೆಚ್ಚಿನ ಯಕ್ಷಗಾನಗಳೆಲ್ಲವೂ ‘ಕಾಲಮಿತಿ’ ಯಕ್ಷಗಾನಗಳೇ. ಇಡೀ ರಾತ್ರಿಯ ಆಟದಲ್ಲಿ ಯಾವಾಗಲೂ ಸುಮಾರು ಎರಡೂವರೆ ಗಂಟೆ ಅವಧಿಯ ಮೂರು ಪ್ರಸಂಗಗಳಿರುತ್ತಿದ್ದವು.

ಆದರೆ, ಈಗಿನ ಕಾಲಮಿತಿ ಯಕ್ಷಗಾನದಲ್ಲಿ 8 ಗಂಟೆಯ ಯಕ್ಷಗಾನವು 4 ಗಂಟೆಗೆ ಇಳಿದಿದೆ. ಆದರೆ, ಪ್ರದರ್ಶನದ ಪ್ರಸಂಗಗಳ ಒಟ್ಟು ಸಂಖ್ಯೆ ಮಾತ್ರ ಹಾಗೆಯೇ ಇದೆ. ಇಡೀ ರಾತ್ರಿಯ ಆಟವನ್ನು ಸಂಕ್ಷಿಪ್ತಗೊಳಿಸಿದಾಗ ಪ್ರದರ್ಶನದ ವೇಗ ಹೆಚ್ಚಾಗುತ್ತದೆ. ಪರಿಣಾಮವಾಗಿ ಯಾವ ಪಾತ್ರವೂ ಪ್ರೇಕ್ಷಕನ ಮನಸ್ಸಿನಲ್ಲಿ ಗಾಢವಾಗಿ ಉಳಿಯುವುದಿಲ್ಲ. ಎಲ್ಲ ವೇಷಗಳೂ ಬಿರುಸಿನಿಂದ ಬಂದು ಅಷ್ಟೇ ತುರುಸಿನಿಂದ ನಿರ್ಗಮಿಸುತ್ತವೆ. ಪಾತ್ರಗಳು ರಂಗದ ಮೇಲೆ ಅನನ್ಯವಾಗಿ ಬೆಳೆಯಲು ಇಲ್ಲಿ ಅವಕಾಶವೇ ಇಲ್ಲ. ಆಧುನಿಕ ಜಾಹೀರಾತುಗಳಂತೆ ಕಾಣುವ ಕಾಲಮಿತಿ ಯಕ್ಷಗಾನಗಳು ಕಲಾವಿದನಿಗೆ ಪಾತ್ರವನ್ನು ಬೆಳೆಸಲು ಅವಕಾಶ ಕೊಡುತ್ತಿಲ್ಲವಾದ್ದರಿಂದ ಅಷ್ಟರಮಟ್ಟಿಗೆ ಅದರ ಸೃಜನಶೀಲತೆ ಸೊರಗಿದೆ.

ಧ್ವನಿವರ್ಧಕದ ಬಳಕೆ ಯಕ್ಷಗಾನಕ್ಕೆ ಬಂದು ಹೆಚ್ಚು ಕಡಿಮೆ ಅರ್ಧ ಶತಮಾನ ಆಗಿರಬೇಕು. ಏರು ಧ್ವನಿಯ ಭಾಗವತಿಕೆಗೆ ಸಾಧ್ಯವಾಗದ ಸ್ವರ ವಿಸ್ತಾರವನ್ನು ಧ್ವನಿವರ್ಧಕಗಳು ಭಾಗವತರಿಗೆ ಒದಗಿಸಿದವು. ಈಚಿನ ದಿನಗಳಲ್ಲಿ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ತರುಣ ಭಾಗವತರ ಸಂಖ್ಯೆ (ಸತೀಶ ರೈ ಪಟ್ಲ, ರಾಘವೇಂದ್ರ ಆಚಾರ್ಯ ಜಾನ್ಸಲೆ ಮೊದಲಾದವರು) ಹೆಚ್ಚಿದೆ. ಇದರಿಂದಾಗಿ ಭಾಗವತನೇ ವಿಜೃಂಭಿಸಿ, ಪಾತ್ರಧಾರಿಗಳ ಪ್ರಾಮುಖ್ಯ ಕಡಿಮೆಯಾದದ್ದೂ ಇದೆ. ‌

ಕರಾವಳಿಯ ಜನ ‘ಗಾನ ವೈಭವ’ ಎಂಬ ಕಾರ್ಯಕ್ರಮ ರೂಪಿಸಿ, ನಾಲ್ಕಾರು ಭಾಗವತರನ್ನು ಒಟ್ಟಿಗೇ ಕುಳ್ಳಿರಿಸಿ, ಭಾಗವತಿಕೆಯನ್ನೇ ಮೆರೆಸುವುದುಂಟು. ಭಾಗವತರು ಕೂಡ ತಮ್ಮದೇ ತಂಡ ಕಟ್ಟಿ ‘ನಾಟ್ಯ ವೈಭವ’ ಮಾಡಿ ತಮ್ಮ ಹಾಡಿಗೆ ಕಲಾವಿದರನ್ನು ಕುಣಿಸುವುದೂ ಉಂಟು. ಸುಶ್ರಾವ್ಯವಾಗಿ ಹಾಡುವ ಮಹಿಳಾ ಭಾಗವತರು ಅಭಿಮಾನಿಗಳ ಲೆಕ್ಕ ಇಟ್ಟವರಿಲ್ಲ. ಯಕ್ಷಗಾನ ಪ್ರೇಕ್ಷಕರು ಯಾವುದನ್ನೂ ಬೇಡವೆಂದಿಲ್ಲ.

ಇವತ್ತಿನ ಯಕ್ಷಗಾನದ ಸೌಭಾಗ್ಯ ಎಂದರೆ ಅದಕ್ಕಿರುವ ವೈವಿಧ್ಯಮಯ ಹಾಗೂ ಪ್ರೌಢವಾದ ಪ್ರೇಕ್ಷಕ ವರ್ಗ. ಎಲ್ಲ ಬಗೆಯ ವೃತ್ತಿಗಳ ಜನರು ಯಕ್ಷಗಾನ ನೋಡುತ್ತಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲ ಪಾತ್ರ ಮಾಡುತ್ತಾರೆ. ಬೆಂಗಳೂರಿನ ಬಹುರಾಷ್ಟ್ರೀಯ ಉದ್ಯಮಗಳಲ್ಲಿ ಕೆಲಸ ಮಾಡುವ ಹುಡುಗರೆಲ್ಲ ಶುಕ್ರವಾರ ರಾತ್ರಿ ಮಂಗಳೂರು- ಶಿರಸಿ ಕಡೆ ಹೊರಡುವ ಬಸ್ಸುಗಳನ್ನೇರಿ, ಶನಿವಾರ ಆಟ ನೋಡಿ, ಇಲ್ಲವೇ ಚೆಂಡೆ ಬಾರಿಸಿ, ಭಾನುವಾರ ರಾತ್ರಿ ಮತ್ತೆ ಬಸ್ ಹಿಡಿದು, ಸೋಮವಾರ ಕಚೇರಿಗೆ ಹಾಜರಾಗುವ ಪರಿಯೇ ಚಂದ.
ಯಕ್ಷಗಾನ ಸಂಘಟನೆಗಳು ಬಡ ಕಲಾವಿದರಿಗೆ ಮನೆ ಕಟ್ಟಿಕೊಡುತ್ತಿವೆ. ವಿಮಾ ಯೋಜನೆಯನ್ನು ಜಾರಿಗೆ ತರುತ್ತಿವೆ. ಕಲಾವಿದರ ಮಕ್ಕಳು ಶಾಲೆಗೆ ಹೋಗಲು ಸಹಾಯ ಮಾಡುತ್ತಿವೆ.

ಆಧುನಿಕ ತಂತ್ರಜ್ಞಾನವು ಯಕ್ಷಗಾನವನ್ನು ಪ್ರವೇಶಿಸಿದೆ. ಅತ್ಯಾಧುನಿಕ ಮೊಬೈಲ್‍ಗಳನ್ನು ಹಿಡಿದುಕೊಂಡು ಆಟ ನೋಡುವವರು ಒಂದಷ್ಟು ವಿಡಿಯೊ ಮಾಡಿ ಕುಳಿತಲ್ಲಿಂದಲೇ ಜಾಲ ತಾಣದಲ್ಲಿ ಹರಿಯಬಿಡುತ್ತಾರೆ. ಫೇಸ್‍ಬುಕ್‍ನಲ್ಲಿ ಲೈವ್ ಕೊಡುತ್ತಾರೆ. ಊರಿನ ಗೆಳೆಯರಿಗೆ ಫೋನ್ ಮಾಡಿದರೆ ಯಕ್ಷಗಾನದ ರಿಂಗ್ ಟೋನ್ ಕೇಳಿಸುತ್ತದೆ. ಇಂಥ ಹುಚ್ಚಿನ ಪರಿಣಾಮವಾಗಿ ಇಂದು ಗೂಗಲ್‌ನಲ್ಲಿ ‘ಯಕ್ಷಗಾನ’ ಅಂತ ಕೇಳಿದರೆ ಸುಮಾರು 20 ಲಕ್ಷ ಉಲ್ಲೇಖಗಳು ಕಾಣಿಸುತ್ತವೆ. ಈ ನಡುವೆ ವಿನೂತನ ಪ್ರಯೋಗಗಳು ನಡೆಯುತ್ತಲೇ ಇವೆ.

ವಿಶ್ವ ರಂಗಭೂಮಿಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ಇನ್ನೊಂದು ಕಲೆ ಇರುವುದು ನನಗೆ ಗೊತ್ತಿಲ್ಲ. ಅಂದಹಾಗೆ ಯಕ್ಷಗಾನದ ಹೆಸರಲ್ಲಿ ಇವತ್ತು ₹ 300 ಕೋಟಿ ವ್ಯವಹಾರ ನಡೆಯುತ್ತಿದೆಯಂತೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು