ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ 'ಕನ್ನಡಕ್ಕೆ ಕೈ ಎತ್ತಿದವರು'

Last Updated 1 ನವೆಂಬರ್ 2020, 5:03 IST
ಅಕ್ಷರ ಗಾತ್ರ

‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು…’ ಕುವೆಂಪು ಅವರ ಕವನದ ಈ ಸಾಲೇ ಅಮೆರಿಕದಲ್ಲಿ ಕನ್ನಡ ಅಕ್ಯಾಡೆಮಿ ಸ್ಥಾಪಿಸಿರುವವರಿಗೆ ಪ್ರೇರಣೆ ಆಗಿರಬಹುದು. ಉದ್ಯೋಗ ಅರಸಿ, ಬಹುದೂರದ ಅಮೆರಿಕ ಸೇರಿರುವ ಅನೇಕ ಕನ್ನಡಿಗರಿಗೆ ತಾವೆಲ್ಲಿ ತಮ್ಮ ಮಾತೃಭಾಷೆಯನ್ನು

ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕ ಕಾಡಿದ್ದರಿಂದಲೋ ಏನೋ ಕನ್ನಡ ಅಕ್ಯಾಡೆಮಿ ಸ್ಥಾಪಿಸಿದ್ದಾರೆ. ಅಮೆರಿಕವೂ ಸೇರಿದಂತೆ ಹೊರದೇಶಗಳಲ್ಲಿ ಕನ್ನಡ ಕಲಿಸುವ, ಕನ್ನಡ ಬೆಳೆಸುವ ಮುಖ್ಯ ಧ್ಯೇಯವನ್ನಿಟ್ಟುಕೊಂಡು ಅಕ್ಯಾಡೆಮಿಯನ್ನು ಹುಟ್ಟುಹಾಕಲಾಗಿದೆ. ಆದರೆ ಈ ಕೆಲಸ ಅಷ್ಟು ಸುಲಭವಲ್ಲ ಎಂಬುದು ಅಕ್ಯಾಡೆಮಿಯ ಅಧ್ಯಕ್ಷ ಶಿವಗೌಡರ ಅವರ ಅಭಿಪ್ರಾಯ.

ಅಮೆರಿಕ ಮತ್ತು ರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳು ಬಹುತೇಕವಾಗಿ ಅಲ್ಲಿಯ ಪ್ರಾದೇಶಿಕ ಭಾಷೆಗಳನ್ನು ಕಲಿತು ಅದೇ ಭಾಷೆಗಳಲ್ಲಿ ಪ್ರಬುದ್ಧರಾಗುತ್ತಾರೆ. ಆದರೆ ಅವರಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಬೇಕಾಗಿದೆ ಎನ್ನುವುದು ಅಕ್ಯಾಡೆಮಿ ಸದಸ್ಯರ ಅಭಿಮತ.

ಹಸು ಹಾಲು ಕೊಡುತ್ತದೆ, ಹಸು ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಹುಲ್ಲನ್ನು ಮೇಯುತ್ತದೆ ಎಂದು ನಮ್ಮ ಇಲ್ಲಿಯ ಮಕ್ಕಳಿಗೆ ಬೋಧಿಸಿದರೆ ಅದು ಅವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಏಕೆಂದರೆ ಬಹಳಷ್ಟು ಮಕ್ಕಳು ಮೇಲಿನ ಕ್ರಿಯೆಗಳನ್ನು ಸ್ವತಃ ನೋಡಿರುತ್ತಾರೆ. ಆದರೆ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿರುವ ಮಕ್ಕಳ ಗ್ರಹಿಕೆಗೆ ಇದು ಕಷ್ಟವಾಗಬಹುದು. ಹಾಗಾಗಿಯೇ ಅಲ್ಲಿ ಭಿನ್ನವಾದ ರೂಪದಲ್ಲಿ ಕನ್ನಡವನ್ನು ಕಲಿಸಬೇಕಾಗಿದೆ. ಮಕ್ಕಳು ಪಾಠ ಕೇಳಿದಾಗ ಅರ್ಥಮಾಡಿಕೊಂಡರೂ ಮನೆಯ ವಾತಾವರಣಕ್ಕೆ ಹಿಂದಿರುಗಿದಾಗ ಅವರು ಇಂಗ್ಲಿಷ್ ಮಾತಾಡುತ್ತಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಶಿವಗೌಡರ ಅವರು ವೃತ್ತಿಯಲ್ಲಿ ಒಬ್ಬ ಎಂಜಿನಿಯರ್. ಇಪ್ಪತ್ತು ವರ್ಷಗಳ ಹಿಂದೆಯೇ ಅಮೆರಿಕಕ್ಕೆ ಉದ್ಯೋಗ ನಿಮಿತ್ತ ಹೋಗಿ ಈಗ ಲಾಸ್‍ಏಂಜಲೀಸ್‍ನಲ್ಲಿ ನೆಲೆಸಿದ್ದಾರೆ. ಇದೇ ನಗರದಲ್ಲಿ ಅಕ್ಯಾಡೆಮಿಯ ಕೇಂದ್ರ ಸ್ಥಾನವಿದೆ. ಕನ್ನಡವನ್ನು ಸರಳವಾಗಿ ಏಳು ಹಂತಗಳಲ್ಲಿ ಕಲಿಸುವಲ್ಲಿ ನೆರವಾಗುವಂತಹ ಎಂಟು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಈ ಕನ್ನಡ ಪಠ್ಯ ಪುಸ್ತಕಗಳನ್ನಿಟ್ಟುಕೊಂಡು ಅನೇಕ ದೇಶಗಳಲ್ಲಿ ಕನ್ನಡ ಕಲಿಸಲು ನಮ್ಮ ರಾಜ್ಯದ ಕನ್ನಡಾಭಿವೃದ್ಧಿ ಪ್ರಾಧಿಕಾರವೇ ಮುಂದಾಗಿದೆ. ಪ್ರಾಧಿಕಾರದ ವತಿಯಿಂದಲೇ ಗೌಡರ ಪುಸ್ತಕಗಳನ್ನು ಮುದ್ರಿಸಿ ಹೊರದೇಶಗಳಿಗೆ ಪಠ್ಯ ಪುಸ್ತಕದ ರೂಪದಲ್ಲಿ ಒದಗಿಸಲಾಗಿದೆ. ಕನ್ನಡ ಕಲಿ ಸ್ವರ ಬಲ್ಲ – 1 ಮತ್ತು 2, ಅಕ್ಷರ ಬಲ್ಲ – 1 ಮತ್ತು 2, ಪದ ಬಲ್ಲ – 1 ಮತ್ತು 2, ಜಾಣ-1 ಕರ್ನಾಟಕದ ಪರಿಚಯ ಹಾಗೂ ಜಾಣ-2 ಕರ್ನಾಟಕ ನಡೆದುಬಂದ ಹಾದಿ ಪಠ್ಯ ಪುಸ್ತಕಗಳು ಸರಳವಾದ ಗ್ರಾಮ್ಯ ನುಡಿಗಟ್ಟಿನಲ್ಲಿ ಕನ್ನಡ ಕಲಿಯಲು ನೆರವಾಗುತ್ತಿವೆ.

ಅಕ್ಯಾಡೆಮಿಯ ವತಿಯಿಂದ ಜಗತ್ತಿನಾದ್ಯಂತ ಒಟ್ಟು 30 ಕೇಂದ್ರಗಳಲ್ಲಿ ಕಾರ್ಯಚಟುವಟಿಕೆಗಳು ಪ್ರಾರಂಭವಾಗಿವೆ. ಕನ್ನಡ ಕಲಿಸುವ ಬೋಧಕರಿಗೆ 80 ಗಂಟೆಗಳಿಗೂ ಹೆಚ್ಚು ಕಾಲ ತರಬೇತಿ ನೀಡಲಾಗಿದೆ. 275 ಬೋಧಕರು ಸನ್ನದ್ಧರಾಗಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ಮಲೇಷ್ಯಾ ದೇಶಗಳಲ್ಲಿ ಕನ್ನಡ ಕಲಿಕೆ ನಡೆಯುತ್ತಿದೆ. ಅಮೆರಿಕದ ಕೆಲವು ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ವಿಶೇಷ ಭಾಷೆಯಾಗಿ ಕಲಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಲ್ಲಿ ಅನುಮತಿಗಾಗಿ ಪ್ರಯತ್ನ ನಡೆಯುತ್ತಿದೆ. ಅಮೆರಿಕದಲ್ಲಿ ಭಾರತೀಯ ಭಾಷೆಗಳಾದ ಹಿಂದಿ ಮತ್ತು ತೆಲುಗು ಭಾಷೆಗಳನ್ನು ಮಾತ್ರ ಕೆಲವೆಡೆ ವಿಶೇಷ ಭಾಷೆಯಾಗಿ ಕಲಿಸಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಕನ್ನಡ ಉಳಿಸಿ, ಬೆಳೆಸಿ, ಕಲಿಸಲು ಮುಂದಾಗಿರುವ ಕನ್ನಡ ಅಕ್ಯಾಡೆಮಿಯ ಯತ್ನ ಶ್ಲಾಘನೀಯ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯದಲ್ಲಿ ನೋಂದಣಿಯಾಗಿ, ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕೊರೊನಾ ಕಾಲದಲ್ಲೂ ತನ್ನ ಕಾರ್ಯಚಟುವಟಿಕೆಗಳಿಗೆ ವಿರಾಮಕೊಡದ ಅಕ್ಯಾಡೆಮಿಗೆ
ಪ್ರೊ. ಕೃಷ್ಣೇಗೌಡರು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಟ್ಲಾಂಟದಲ್ಲಿ ಎಂಜಿನಿಯರ್ ಆಗಿರುವ ಅರುಣ್ ಸಂಪತ್ ಪಠ್ಯ ಪುಸ್ತಕಗಳ ಪ್ರಚಾರ ಕಮಿಟಿಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಕೆರೋಲಿನಾದಲ್ಲಿರುವ ಮಧು ರಂಗಪ್ಪಗೌಡ ಅವರು ಅಮೆರಿಕದ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿಸುವ ವಿಭಾಗದ ನೇತೃತ್ವ ವಹಿಸಿದ್ದಾರೆ. ಸಿಯಾಟಲ್‍ನಲ್ಲಿ ಎಂಜಿನಿಯರ್ ಆಗಿರುವ ನವೀನ್ ಮಲ್ಲಿಕಾರ್ಜುನಯ್ಯ ಅಕ್ಯಾಡೆಮಿಯ ಮೂಲಕ ವಿವಿಧ ದೇಶಗಳಲ್ಲಿ ಕನ್ನಡ ಕಲಿಸುವ ಬೆಳೆಸುವ ಮತ್ತು ಗೂಗಲ್ ಓರಿಯೆಂಟೇಷನ್‍ನಲ್ಲಿ ಕಾರ್ಯೋನ್ಮುಖ ರಾಗಿದ್ದಾರೆ. ಸಂಧ್ಯಾ ಸೂರ್ಯಪ್ರಕಾಶ್ ಮತ್ತು ಶಶಿ ಬಸವರಾಜ್ ಅವರು ಸವಿಗನ್ನಡದ ಆನ್‍ಲೈನ್ ತರಗತಿಗಳನ್ನು ನಡೆಸುವುದಲ್ಲದೆ ಜಾಗತಿಕ ವಲಯದಲ್ಲಿ ಕನ್ನಡವನ್ನು ಕಲಿಸಲು ಅನುಕೂಲವಾಗುವಂತಹ ವೆಬ್‍ಸೈಟ್‍ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅನೇಕ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅಕ್ಯಾಡೆಮಿಯ ಪದಾಧಿಕಾರಿಗಳೆಲ್ಲ ಮಾತನಾಡುವಾಗ ಒಂದೂ ಇಂಗ್ಲಿಷ್ ಪದ ಸೇರಿಸದೆ ಸ್ಪಷ್ಟವಾದ, ಸುಂದರವಾದ ಕನ್ನಡ ಮಾತನಾಡುವುದನ್ನು ಕೇಳಿದರೆ ಅವರೆಲ್ಲ ತಮ್ಮ ಮಾತೃಭಾಷೆಯನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದರ ಅರಿವಾಗುತ್ತದೆ. ಗೌಡರು ಮತ್ತು ಅವರ ತಂಡದವರು ಕನ್ನಡ ಅಕ್ಯಾಡೆಮಿಯನ್ನು ಆರ್ಥಿಕ ಲಾಭ ಬಯಸದ ಸಂಸ್ಥೆಯನ್ನಾಗಿಸಿಕೊಂಡು, ತಮ್ಮ ಸ್ವಂತ ಖರ್ಚಿನಿಂದ ಅದರ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ಕನ್ನಡಿಗರೆಲ್ಲ ಅಮೆರಿಕದ ‘ಕನ್ನಡ ಅಕ್ಯಾಡೆಮಿ’ಗೆ ಶುಭ ಹಾರೈಸೋಣ.

https://www.kannadaacademy.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT