ಮಂಗಳವಾರ, ಜೂನ್ 28, 2022
25 °C

ಸುಗಮ ಸಂಗೀತದ ಸೇನಾನಿ ವೈ.ಕೆ.ಮುದ್ದುಕೃಷ್ಣ

ಬಿ.ಆರ್.ಲಕ್ಷ್ಮಣರಾವ್ Updated:

ಅಕ್ಷರ ಗಾತ್ರ : | |

Prajavani

ವೈ.ಕೆ.ಮುದ್ದುಕೃಷ್ಣ ಅವರನ್ನು ನಾನು ಪ್ರೀತಿಯಿಂದ ‘ಬಾಸ್’ ಎಂದು ಕರೆಯುತ್ತೇನೆ. ಒಬ್ಬ ಸಹಜ ನೇತಾರನ ಗತ್ತು ಅವರ ಮಾತು ಮತ್ತು ನಡವಳಿಕೆಯಲ್ಲಿರುವುದೇ ಇದಕ್ಕೆ ಕಾರಣ. ಆದರೆ ಆ ಗತ್ತಿನಲ್ಲಿ ಅಹಂಕಾರವಿಲ್ಲ. ತನಗೆ ಸರಿ ತೋರಿದ್ದನ್ನು ಯಾವುದೇ ಅಂಜಿಕೆ, ಮುಚ್ಚುಮರೆಯಿಲ್ಲದೆ ಖಡಾಖಂಡಿತವಾಗಿ ಹೇಳಬಲ್ಲ ಸತ್ಯನಿಷ್ಠೆ ಮತ್ತು ಆತ್ಮವಿಶ್ವಾಸ ಆ ಗತ್ತಿನಲ್ಲಿವೆ. ಹಾಗೆಯೇ ತನ್ನ ನಿಲುವು ಸರಿಯಲ್ಲವೆಂದು ಅವರಿಗೇ ಮನವರಿಕೆಯಾದಾಗ ಅದನ್ನು ಒಪ್ಪಿಕೊಂಡು, ತಿದ್ದಿಕೊಳ್ಳುವ ವಿನಯವಂತಿಕೆಯೂ ಅವರಿಗಿದೆ. ಇದು ಒಬ್ಬ ಒಳ್ಳೆಯ ‘ಬಾಸ್’ನಲ್ಲಿ ಇರಲೇಬೇಕಾದ ಸದ್ಗುಣವೆಂದು ನಾನು ಭಾವಿಸುತ್ತೇನೆ.

ವೈಕೆ‍ಎಂ ಅವರೊಂದಿಗೆ ನನ್ನ ಪರಿಚಯ ಮತ್ತು ನಿಕಟಸ್ನೇಹ ಮೂರು ದಶಕಗಳಷ್ಟು ಹಳೆಯದು. ರಾಜ್ಯ ಸರ್ಕಾರದ ಹಲವು ಉನ್ನತ ಅಧಿಕಾರ ಸ್ಥಾನಗಳಲ್ಲಿ ಸೇವೆ ಸಲ್ಲಿಸಿ, ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯೆಂದು ಅವರು ಮಾನ್ಯರಾಗಿದ್ದರಾದರೂ ನನಗೆ ಅವರು ಹತ್ತಿರವಾದದ್ದು ಸುಗಮ ಸಂಗೀತದ ಬಗ್ಗೆ ಅವರಿಗಿದ್ದ ಅಪರಿಮಿತ ಪ್ರೀತಿ ಮತ್ತು ಕಾಳಜಿಯ ಕಾರಣವಾಗಿ. ಹಾಗೆ ನೋಡಿದರೆ, ನನಗೆ ಅವರ ಪರಿಚಯವಾದದ್ದೇ ಸುಗಮ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಸಿ.ಅಶ್ವತ್ಥ್ ಅವರ ಮೂಲಕ. ಎಂಬತ್ತರ ದಶಕದಲ್ಲಿ ಅಶ್ವತ್ಥ್ ಹೊರತಂದ ಹಲವು ಭಾವಗೀತೆಗಳ ಧ್ವನಿಸುರುಳಿಗಳ ಹಿಂದೆ ವೈಕೆ‍ಎಂ ಅವರ ಒತ್ತಾಸೆ ಮತ್ತು ಸಹಕಾರ ಇದ್ದದ್ದು ಸರ್ವವಿಧಿತ ಸಂಗತಿ. ಹಾಗೆಯೇ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಕಾಲದಲ್ಲಿ ಎಲ್ಲ ಪ್ರಕಾರಗಳ ಕಲಾವಿದರಿಗೂ ಮುಕ್ತ ಮನಸ್ಸಿನಿಂದ ನೆರವಾಗುತ್ತಿದ್ದದ್ದು ಹಾಗೂ ಬೆಂಗಳೂರಿನ ಭವ್ಯ, ಸುಸಜ್ಜಿತ ‘ಕನ್ನಡ ಭವನ’ದ ನಿರ್ಮಾಣದ ರೂವಾರಿಯಾದದ್ದು ಈಗ ಇತಿಹಾಸ.

ಸುಗಮ ಸಂಗೀತವನ್ನು ಜನರ ಬಳಿಗೊಯ್ಯುವ ಹಾಗೂ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ತೊಂಬತ್ತರ ದಶಕದಲ್ಲಿ ರೂಪುಗೊಂಡ ‘ಧ್ವನಿ’ ಎಂಬ ಸಂಸ್ಥೆಯ ಮುಖ್ಯ ರೂವಾರಿಯೂ ವೈಕೆ‍ಎಂ ಅವರೇ. ‘ಧ್ವನಿ’ಯ ಆಶ್ರಯದಲ್ಲಿ ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ‘ಕಾವ್ಯ ಗಾಯನ’ದ ಅದ್ಧೂರಿ ಕಾರ್ಯಕ್ರಮಗಳು ನಡೆದವು. ಇವುಗಳಲ್ಲಿ ನಾಡಿನ ಸುಪ್ರಸಿದ್ಧ ಕವಿಗಳು ಹಾಗೂ ಸುಗಮ ಸಂಗೀತದ ಗಾಯಕ, ಗಾಯಕಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಇಂತಹ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸುಮಧುರ ನೆನಪುಗಳು ನನಗಿವೆ. ಸುಗಮ ಸಂಗೀತದ ದಿಗ್ಗಜದ್ವಯರಾದ ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಇವುಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದು ಒಂದು ವಿಶೇಷ ಸಂಗತಿ. ಪ್ರತಿಸ್ಪರ್ಧಿಗಳಂತಿದ್ದ ಅವರಿಬ್ಬರೂ ಆತ್ಮೀಯ ಮಿತ್ರರಾಗಲು ಕಾರಣರಾದವರೂ ವೈಕೆ‍ಎಂ ಅವರೇ ಎಂದರೆ ತಪ್ಪಾಗಲಾರದು. ‘ಧ್ವನಿ’ ಸಂಸ್ಥೆ ಆಯೋಜಿಸಿದ ಹಲವು ಸ್ಮರಣೀಯ ಕಾರ್ಯಕ್ರಮಗಳಲ್ಲಿ ‘ಕಾವ್ಯ ಸೌರಭ’ ಎಂಬ ಜೋಡಿ ಕವಿಗಳ ಗೀತ ಪ್ರಸ್ತುತಿಯ ಕಾರ್ಯಕ್ರಮ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ.

ಕರ್ನಾಟಕದಾದ್ಯಂತ ಇರುವ ಸುಗಮ ಸಂಗೀತ ಕವಿ, ಕಲಾವಿದರನ್ನು ಒಗ್ಗೂಡಿಸುವ ಹಾಗೂ ಒಂದು ಜಾಗತಿಕ ಆಂದೋಲನದಂತೆ ಸುಗಮ ಸಂಗೀತವನ್ನು ಬೆಳೆಸುವ ಉದ್ದೇಶದಿಂದ 2003ರಲ್ಲಿ ಸ್ಥಾಪನೆಗೊಂಡದ್ದು ‘ಕರ್ನಾಟಕ ಸುಗಮ ಸಂಗೀತ ಪರಿಷತ್ತು’. ಈವರೆಗೆ (ಒಂದೆರಡು ವರ್ಷಗಳ ತಮ್ಮ ಅನಾರೋಗ್ಯದ ಕಾರಣದ ಅನುಪಸ್ಥಿತಿಯ ಹೊರತಾಗಿ) ಅದರ ಅಧ್ಯಕ್ಷರಾಗಿ, ಪರಿಷತ್ತಿನ ಕನಸುಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸುತ್ತ ಬಂದಿರುವ ಸಮರ್ಥ ನೇತಾರ ವೈಕೆ‍ಎಂ. ಕಸುಸಂಪ ಪ್ರತಿವರ್ಷ ನಿರಂತರವಾಗಿ ರಾಜ್ಯದ ಹಾಗೂ ಹೊರರಾಜ್ಯದ ವಿವಿಧ ನಗರಗಳಲ್ಲಿ ನಡೆಸುತ್ತ ಬಂದಿರುವ ‘ಗೀತೋತ್ಸವ’ ಎಂಬ ಸುಗಮ ಸಂಗೀತ ಸಮ್ಮೇಳನಗಳಲ್ಲಿ ಈವರೆಗೆ ಒಂದನ್ನೂ ತಪ್ಪಿಸಿಕೊಳ್ಳದೆ ಎಲ್ಲದರಲ್ಲೂ ಭಾಗವಹಿಸಿರುವ ಹೆಮ್ಮೆ ನನ್ನದು. ಜೊತೆಗೆ, ‘ಕವಿಯ ನೋಡಿ, ಕವಿತೆ ಕೇಳಿ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನೂ ಸಹ ಪರಿಷತ್ತು ನಿರಂತರವಾಗಿ ನಡೆಸುತ್ತ ಬಂದಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ, ರಾಜ್ಯ ಸರ್ಕಾರದ ವಿವಿಧ ಉತ್ಸವಗಳಲ್ಲಿ ಹಾಗೂ ದಸರಾ ಮಹೋತ್ಸವದಲ್ಲೂ ಸುಗಮ ಸಂಗೀತಕ್ಕೆ ಪ್ರಮುಖ ಸ್ಥಾನಮಾನಗಳನ್ನು ಗಳಿಸಿಕೊಡುವುದರಲ್ಲಿ ವೈಕೆ‍ಎಂ ಅವರ ಪಾತ್ರ ಮಹತ್ವದ್ದಾಗಿದೆ.

ಇದೆಲ್ಲದರ ಹೊರತಾಗಿ ವೈಕೆ‍ಎಂ ನನಗೆ ಅತ್ಯಂತ ಆಪ್ತರಾಗಿರುವುದು ಒಬ್ಬ ಆತ್ಮೀಯ ಮಿತ್ರರಾಗಿ. ನಾನು ಚಿಂತಾಮಣಿಯಲ್ಲಿದ್ದಾಗ ಹಲವಾರು ಬಾರಿ ಅವರು ನಮ್ಮ ಮನೆಗೆ ಬಂದಿದ್ದಾರೆ. ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿದ್ದಾರೆ. ಜಾತ್ಯತೀತವಾದ ಮುಕ್ತ ಮನಸ್ಸು ಅವರದ್ದು. ಅವರಿಗೆ ಪ್ರಿಯವಾದದ್ದು ಒಂದೇ ಜಾತಿ; ಅದು ಕಲಾವಿದರ ಜಾತಿ. ಕಲಾವಿದರ ಕಷ್ಟ ನಷ್ಟಗಳಿಗೆ ಎಲ್ಲ ರೀತಿಗಳಲ್ಲೂ ಬಂದೊದಗುವ ಆಪತ್ಬಾಂಧವರು ಅವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.