ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸಾ ಮೂರ್ತಿಯನ್ನು ನೆನೆಯೋಣ, ನಮಿಸೋಣ, ಆದರಿಸೋಣ, ಅನುಸರಿಸೋಣ...

Last Updated 17 ಏಪ್ರಿಲ್ 2019, 3:35 IST
ಅಕ್ಷರ ಗಾತ್ರ

ಅಹಿಂಸೆಯನ್ನು ಪ್ರಮುಖವಾಗಿ ಬೋಧಿಸಿದ ಧರ್ಮವೇ ಜೈನಧರ್ಮ. ಇದು ಹೆಚ್ಚು ಜನಪ್ರಿಯವಾದದ್ದು ಮಹಾವೀರನಿಂದ. ಭಾರತದ ನೆಲದಲ್ಲಿ ಹುಟ್ಟಿ, ಇಲ್ಲಿಯ ಆಚಾರ–ವಿಚಾರಗಳನ್ನು ಪ್ರಭಾವಿಸಿದ ಮಹಾತ್ಮರಲ್ಲಿ ಮಹಾವೀರ ತೀರ್ಥಂಕರನೂ ಒಬ್ಬ...

***

ಮಹಾವೀರನು (ಇವನಿಗೆ ವರ್ಧಮಾನ ಎಂಬ ಹೆಸರೂ ಉಂಟು) ತೀರ್ಥಂಕರರಲ್ಲಿ ಇಪ್ಪತ್ತನಾಲ್ಕನೆಯವನು ಮತ್ತು ಕೊನೆಯವನು. ಇವನು ಈಗಲೂ ಬಳಕೆಯಲ್ಲಿರುವ ಜೈನಶಕೆಯ ಪ್ರಕಾರ, ಕ್ರಿ. ಪೂ. 599ರಲ್ಲಿ ಹುಟ್ಟಿದನು.

ಇವನ ತಂದೆ ವೈಶಾಲಿಯ ಸಮೀಪದ ಕೌಂಡಿನ್ಯಪುರದ ದೊರೆ. (ವೈಶಾಲಿ – ಇದು ಇಂದಿನ ಪಟ್ನಾದಿಂದ ಉತ್ತರಕ್ಕೆ 44
ಕಿ. ಮೀ. ದೂರದಲ್ಲಿರುವ ಬಸ್ಹರ್‌ ಎಂಬ ಹಳ್ಳಿ.) ವೈಶಾಲಿಯ ಲಿಚ್ಛವಿದೊರೆಯ ಮಗಳಾದ ತ್ರಿಶಲಾದೇವಿ ಇವನ ತಾಯಿ. ಬಾಲ್ಯದಿಂದಲೂ ಮಹಾವೀರನು ಅಂತರ್ಮುಖಿಯಾಗಿದ್ದನು. ಆ ಕಾಲದ ರಾಜಕುಮಾರನಿಗೆ ಉಚಿತವಾದ ವಿದ್ಯೆ ಮತ್ತು ಶಿಕ್ಷಣಗಳನ್ನೆಲ್ಲ ಪಡೆದಮೇಲೆ, ಪ್ರಪಂಚದ ಅನಿತ್ಯತೆಯ ಅರಿವಾಗಿ ಅವನು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸನ್ಯಾಸಿಯಾದನು. ಅವನು ಹನ್ನೆರಡು ವರ್ಷಗಳವರೆಗೆ ಕಠೋರವಾದ ತಪಸ್ಸನ್ನೂ ಧ್ಯಾನವನ್ನೂ ಆಚರಿಸಿದ. ಈ ಅವಧಿಯಲ್ಲಿ ಅವನು ಅಜ್ಞರ ಕೈಯಿಂದ ಬಹುವಾದ ಹಿಂಸೆಗಳನ್ನು ಅನುಭವಿಸಿದರೂ, ಕೊನೆಗೆ ದಿವ್ಯಜ್ಞಾನವನ್ನು ಪಡೆದನು. ಅಲ್ಲಿಂದ ಜನರಿಗೆ ತನ್ನ ತತ್ವಗಳನ್ನು ಬೋಧಿಸಲು ಆರಂಭಮಾಡಿದನು.

ಅವನು ಹೀಗೆ ಪ್ರಚಾರಮಾಡಿದ ಮೂಲತತ್ವದಲ್ಲಿ ಐದು ವ್ರತಗಳು ಮತ್ತು ಇಪ್ಪತ್ತೆರಡು ರೀತಿಯ ಸಹನೆಗಳಿದ್ದವು. ಅವನ ಮುಖ್ಯ ಕಾಣಿಕೆ ಎಂದರೆ ಅಹಿಂಸಾತತ್ವವನ್ನು ಜನಪ್ರಿಯಗೊಳಿಸಿದ್ದು. ಈ ತತ್ವದ ಆಧಾರದ ಮೇಲೆ ಅವನು ಗೃಹಸ್ಥರಿಗೂ ಸನ್ಯಾಸಿಗಳಿಗೂ ಒಂದು ನೀತಿಮಾರ್ಗವನ್ನು ಹಾಕಿಕೊಟ್ಟ.

ಇದರ ಹಿನ್ನೆಲೆಯಲ್ಲಿ ಅವನು ತನ್ನ ಏಳು ತತ್ವಗಳ ದರ್ಶನವನ್ನು ರೂಪಿಸಿದ.ಮಹಾವೀರನು ತನ್ನ ಬೋಧನೆಗಳು ಮಾಗಧೀ ಮತ್ತು ಶೌರಸೇನೀಗಳನ್ನು ಮಾತನಾಡುವ ಎರಡು ಜನರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಅರ್ಧಮಾಗಧೀ ಎಂಬ ಮಿಶ್ರಭಾಷೆಯಲ್ಲಿ ಬೋಧಿಸಿದನು. ಮಹಾವೀರನು ಬೋಧಿಸಿದ ದಾರಿಯೇ ಜೈನಧರ್ಮ ಎಂದು ಹೆಸರಾದದ್ದು.

ಮಹಾವೀರ ತನ್ನ ದೇಹವನ್ನು ವಿಸರ್ಜಿಸಿದ್ದು ಎಪ್ಪತ್ತೆರಡನೆಯ ವಯಸ್ಸಿನಲ್ಲಿ, ಕ್ರಿ. ಪೂ. 527ರಲ್ಲಿ.

ಗೃಹಸ್ಥರ ವ್ರತಗಳು

ಜೈನಧರ್ಮದ ಪ್ರಕಾರ, ಗೃಹಸ್ಥನೊಬ್ಬ ಅನುಸರಿಸಬೇಕಾದ ಅತಿ ಮುಖ್ಯವಾದ ವ್ರತಗಳು ಐದು; ಅವು ಯಾವುವೆಂದರೆ: ಇತರ ಪ್ರಾಣಿಗಳಿಗೆ ಹಿಂಸೆ ಮಾಡಕೂಡದು; ಸತ್ಯವನ್ನು ನುಡಿಯಬೇಕು; ಕಳ್ಳತನ ಮಾಡಬಾರದು; ವ್ಯಭಿಚಾರವನ್ನು ಮಾಡಕೂಡದು; ಐಹಿಕ ಸಂಪತ್ತುಗಳ ಆಸೆಯ ವಿಷಯದಲ್ಲಿ ಮಿತಿಯನ್ನು ಹಾಕಿಕೊಳ್ಳಬೇಕು. ಇವುಗಳನ್ನು ಕ್ರಮವಾಗಿ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ವ್ರತಗಳು ಎಂದು ಕರೆಯುತ್ತಾರೆ.

ಮೋಕ್ಷಮಾರ್ಗ

ಸಮ್ಯಕ್‌ ದರ್ಶನ, ಸಮ್ಯಕ್‌ ಜ್ಞಾನ ಮತ್ತು ಸಮ್ಯಕ್‌ ಚಾರಿತ್ರ – ಇವನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷಮಾರ್ಗಕ್ಕೆ ಸಾಧನಗಳು.ಆತ್ಮದಲ್ಲಿ ದೃಢವಿಶ್ವಾಸ ಸಮ್ಯಕ್‌ ಜ್ಞಾನ; ಆತ್ಮಜ್ಞಾನವೇ ಸಮ್ಯಕ್‌ ಜ್ಞಾನ; ಆತ್ಮಶಕ್ತಿಯಲ್ಲಿ ವಿಶ್ವಾಸ, ಆತ್ಮಶಕ್ತಿಯ ಜ್ಞಾನ – ಇವುಗಳಿಗೆ ಅನುಗುಣವಾದ ನಡತೆಯೇ ಸಮ್ಯಕ್‌ ಚಾರಿತ್ರ.ಗೃಹಸ್ಥರಿಗೂ ಸನ್ಯಾಸಿಗಳಿಗೂ ಜೈನಧರ್ಮದಲ್ಲಿ ಹಲವಾರು ಸಾಧನಗಳನ್ನು ಹೇಳಲಾಗಿದೆ.

(ಆಧಾರ: ‘ವಿಶ್ವಧರ್ಮದರ್ಶನ’ ಸಂಪುಟ 1; ಸಂ: ಪ್ರಭುಶಂಕರ)

ಇನ್ನಷ್ಟು...

ಮುದ ನೀಡುವ ಮಂದರಗಿರಿ-ಇದು ಜೈನ ಯಾತ್ರಾ ಕ್ಷೇತ್ರ

ತುಮಕೂರು ಸಮೀಪದ ಜೈನ ಯಾತ್ರಾ ಕ್ಷೇತ್ರ ಮಂದರಗಿರಿ
ತುಮಕೂರು ಸಮೀಪದ ಜೈನ ಯಾತ್ರಾ ಕ್ಷೇತ್ರ ಮಂದರಗಿರಿ

ತುಮಕೂರು ರಸ್ತೆಯ 59ನೇ ಕಿ.ಮೀ. ಕಲ್ಲಿನ ಬಳಿ ಬಲ ತಿರುವು ಪಡೆದು 1 ಕಿ.ಮೀ. ಕ್ರಮಿಸಿದರೆ ಮಂದರಗಿರಿಯ ತಪ್ಪಲು ತಲುಪುತ್ತೀರಿ. ಎಲ್ಲಾ ಜೈನ ಕ್ಷೇತ್ರಗಳಂತೆ ಇಲ್ಲೂ ಸಪಾಟಾದ ಬೋಳು ಬಂಡೆಯ ಮೇಲೆ ಜಿನ ಮಂದಿರವಿದೆ. ಮತ್ತೂ ಆಶ್ಚರ್ಯವೆಂದರೆ ಬೆಟ್ಟದ ಮೇಲಿರುವ ಬೇಸಿಗೆಯಲ್ಲೂ ಬತ್ತದ ಸಣ್ಣ ನೀರಿನ ಹೊಂಡ. ಬೆಟ್ಟದ ಬುಡದಿಂದ ಹದಿನೈದು, ಇಪ್ಪತ್ತು ನಿಮಿಷ ಚಾರಣ ಮಾಡಿದರೆ ಮೇಲಿನ ಜಿನ ಮಂದಿರಗಳನ್ನು ನೋಡಬಹುದು. ಬೆಟ್ಟದ ಮೇಲೇರಿದಾಗಲೇ ತುಮಕೂರಿನ ಸೌಂದರ್ಯ ರಾಶಿಯ ಅರಿವಾಗುವುದು. ಮಂದರಗಿರಿಯ ಹಿಂಭಾಗದಲ್ಲಿ ಹರಡಿಕೊಂಡಿರುವ ಬೆಟ್ಟಸಾಲುಗಳು ಒಂದರ ಹಿಂದೆ ಒಂದರಂತೆ ದಿಗಂತದವರೆಗೂ ಚಾಚಿವೆ.

ಶ್ರವಣಬೆಳಗೊಳದ ಭಂಡಾರ ಬಸದಿಯ ಹರಿಪೀಠದ ಮೇಲೆ ಪ್ರತಿಷ್ಠಾಪಿಸಿರುವ 24 ತೀರ್ಥಂಕರರ ಜಿನ ಮೂರ್ತಿಗಳು
ಶ್ರವಣಬೆಳಗೊಳದ ಭಂಡಾರ ಬಸದಿಯ ಹರಿಪೀಠದ ಮೇಲೆ ಪ್ರತಿಷ್ಠಾಪಿಸಿರುವ 24 ತೀರ್ಥಂಕರರ ಜಿನ ಮೂರ್ತಿಗಳು

ವೃಷಭನಾಥ, ಅಜಿತನಾಥ, ಶಂಭವನಾಥ, ಅಭಿನಂದನ, ಸುಮತಿನಾಥ, ಪದ್ಮಪ್ರಭ, ಸುಪಾರ್ಶ್ವನಾಥ, ಚಂದ್ರಪ್ರಭ, ಪುಷ್ಪದಂತ, ಶೀತಲನಾಥ, ಶ್ರೇಯಾಂಸನಾಥ, ವಾಸುಪೂಜ್ಯ, ವಿಮಲನಾಥನಾಥ, ಅನಂತನಾಥ, ಧರ್ಮನಾಥ, ಶಾಂತಿನಾಥ, ಕುಂಥುನಾಥ, ಅರನಾಥ, ಮಲ್ಲಿನಾಥ, ಮುನಿಸುವ್ರತ, ನಮಿನಾಥ, ನೇಮಿನಾಥ, ಪಾರ್ಶ್ವನಾಥ, ವರ್ಧಮಾನರೆಂಬು 24 ತೀರ್ಥಂಕರರು ಜೈನ ಧರ್ಮದಲ್ಲಿದ್ದಾರೆ.

‘ನಾನು ತಿಳಿದುಕೊಂಡಿರುವುದೇ ಸರಿ, ಅದುವೇ ಕೊನೆಯ ಸತ್ಯ, ಮತ್ತು ಅದೇ ಅಂತಿಮ’ ಎನ್ನುವ ಅಹಂಕಾರದ ವಾದಕ್ಕೆ ಜೈನಧರ್ಮದಲ್ಲಿ ಸ್ಥಾನವಿಲ್ಲ. ಅನ್ಯರ ಹಾಗೂ ಅನ್ಯಧರ್ಮೀಯರ ವಿಚಾರ, ದೃಷ್ಟಿದರ್ಶನಗಳಿಗೂ ಗೌರವ ನೀಡಬೇಕು ಎನ್ನುವ ವಿಶಾಲ ಹಾಗೂ ಸಮತಾ ಭಾವ ಅನೇಕಾಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT