ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ ನೀಡುವ ಮಂದರಗಿರಿ

ಸುತ್ತಾಣ
Last Updated 7 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ತುಮಕೂರು ರಸ್ತೆಯಲ್ಲಿ ದಾಬಸ್‌ಪೇಟೆ ದಾಟುತ್ತಿದ್ದಂತೆ ದೇವರಾಯನದುರ್ಗದ ಸಾಲು ಬೆಟ್ಟಗಳು ರಸ್ತೆಯ ಇಕ್ಕೆಲದಲ್ಲಿ ಸಿಗುತ್ತವೆ. ಹಿರೇಹಳ್ಳಿ ಬಳಿ ಬೋಳು ಬಂಡೆಯ ಮೇಲೆ ಒಂದು ನಾಮ ಬಳಿದಂತೆ ಕಾಣುವ ಮಂದರಗಿರಿ  ಒಂದು ಪ್ರವಾಸಿ ತಾಣ. ಸ್ಥಳೀಯರಲ್ಲಿ ಬಸ್ತಿಬೆಟ್ಟ, ಬಸದಿಬೆಟ್ಟ ಎಂದೆಲ್ಲಾ ಕರೆಸಿಕೊಳ್ಳುವ ಮಂದರಗಿರಿ ಜೈನರ ಧಾರ್ಮಿಕ ಕ್ಷೇತ್ರ.

ತುಮಕೂರು ರಸ್ತೆಯ 59ನೇ ಕಿ.ಮೀ. ಕಲ್ಲಿನ ಬಳಿ ಬಲ ತಿರುವು ಪಡೆದು 1 ಕಿ.ಮೀ. ಕ್ರಮಿಸಿದರೆ ಮಂದರಗಿರಿಯ ತಪ್ಪಲು ತಲುಪುತ್ತೀರಿ. ಎಲ್ಲಾ ಜೈನ ಕ್ಷೇತ್ರಗಳಂತೆ ಇಲ್ಲೂ ಸಪಾಟಾದ ಬೋಳು ಬಂಡೆಯ ಮೇಲೆ ಜಿನ ಮಂದಿರವಿದೆ. ಮತ್ತೂ ಆಶ್ಚರ್ಯವೆಂದರೆ ಬೆಟ್ಟದ ಮೇಲಿರುವ ಬೇಸಿಗೆಯಲ್ಲೂ ಬತ್ತದ ಸಣ್ಣ ನೀರಿನ ಹೊಂಡ.

ಬೆಟ್ಟದ ಬುಡದಿಂದ ಹದಿನೈದು, ಇಪ್ಪತ್ತು ನಿಮಿಷ ಚಾರಣ ಮಾಡಿದರೆ ಮೇಲಿನ ಜಿನ ಮಂದಿರಗಳನ್ನು ನೋಡಬಹುದು. ಬೆಟ್ಟದ ಮೇಲೇರಿದಾಗಲೇ ತುಮಕೂರಿನ ಸೌಂದರ್ಯ ರಾಶಿಯ ಅರಿವಾಗುವುದು. ಮಂದರಗಿರಿಯ ಹಿಂಭಾಗದಲ್ಲಿ ಹರಡಿಕೊಂಡಿರುವ ಬೆಟ್ಟಸಾಲುಗಳು ಒಂದರ ಹಿಂದೆ ಒಂದರಂತೆ ದಿಗಂತದವರೆಗೂ ಚಾಚಿವೆ.

ಅಲ್ಲದೆ ವಿಶಾಲವಾಗಿ ಹರಡಿಕೊಂಡಿರುವ ಮೈದಾಳದ ಕೆರೆ ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ. ಕೆರೆ ತಲುಪಬೇಕಾದರೆ ಮತ್ತೆರಡು ಸಣ್ಣ ಗುಡ್ಡಗಳನ್ನು ಇಳಿಯಬೇಕು. ಪಿಕ್‍ನಿಕ್ ಮಾಡುವವರಿಗೆ ನೋಡಲು, ಹತ್ತಿಳಿಯಲು ಸಾಕಷ್ಟು ಜಾಗಗಳಿವೆ. ಇತಿಹಾಸದ ಬಗ್ಗೆ ಯೋಚಿಸುವವರಿಗೆ ಜಿನಮಂದಿರದ ಆವರಣದಲ್ಲಿಮಾಹಿತಿ ನೀಡುವ ಶಾಸನವಿದೆ. ಅರ್ಧಕ್ಕೆ ನಿಂತ ದೇವಾಲಯದ ಕೆಲಸಕ್ಕೆ ಸಾಕ್ಷಿಯಾಗಿ ಶಿಲಾಸ್ತಂಭಗಳಿವೆ.

ಮೂರು ಜಿನ ಮಂದಿರಗಳು, 28 ಅಡಿ ಎತ್ತರದ ಮಾನಸ್ತಂಭ, ಬೆಟ್ಟದ ಕೆಳಗಿರುವ ಚಂದ್ರಪ್ರಭ ತೀರ್ಥಂಕರನ ಏಕಶಿಲಾ ವಿಗ್ರಹ, ಮಂದರಗಿರಿಯನ್ನು ಸುತ್ತುವರಿದಿರುವ ಗದ್ದೆಗಳ ಸಾಲು, ವಿಶಾಲವಾಗಿ ಹರಡಿಕೊಂಡಿರುವ ಕೆರೆಯಲ್ಲಿ ಗಾಳಕ್ಕೆ ಬೀಳುವ ಮೀನಿಗಾಗಿ ಕಾಯುತ್ತಾ ಕುಳಿತ ಸ್ಥಳೀಯರು...  ನಾಲ್ಕೈದು ಗಂಟೆ ಕಳೆಯಲು ಇನ್ನೇನು ಬೇಕು.

ನಗರದಿಂದ 60 ಕಿ.ಮೀ. ದೂರದಲ್ಲಿರುವ ಮಂದರಗಿರಿಯ ಬುಡದವರೆಗೂ ಉತ್ತಮವಾದ ರಸ್ತೆಯಿದೆ. ಊಟೋಪಚಾರಕ್ಕೆ ಹೆದ್ದಾರಿಯ ಪಕ್ಕದಲ್ಲೇ ಕಾಮತ್ ಉಪಚಾರ್ ಮತ್ತು ಕೆಫೆ ಕಾಫಿ ಡೇಗಳಿವೆ. ಬೆಟ್ಟ ಹತ್ತುವವರು ಒಂದು ಬಾಟಲ್ ನೀರು ಕೊಂಡೊಯ್ಯವುದು ಅವಶ್ಯಕ.
ಸುರಕ್ಷತೆಯ ದೃಷ್ಟಿಯಿಂದ ದೇವಾಲಯದ ಆವರಣಕ್ಕೆ ಬೀಗ ಹಾಕಲಾಗುತ್ತದೆ. ಆಸಕ್ತಿ ಇರುವವರು ಬೆಟ್ಟದ ಕೆಳಗಿರುವ ಜೈನ ಮಿಲನ್ ಸಮಿತಿಯ ಕಚೇರಿಯಲ್ಲಿ ಕೀಲಿಕೈಗಳನ್ನು ಪಡೆದುಕೊಂಡು ಜಿನಮಂದಿರಗಳನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT