ಗುರುವಾರ , ಡಿಸೆಂಬರ್ 1, 2022
21 °C

ಬಹುಮುಖಿ ವ್ಯಕ್ತಿತ್ವದ ಸಂಶೋಧಕ ಡಾ. ಎಚ್.ಎಸ್.ಗೋಪಾಲರಾವ್

ಡಿ.ವಿ.ಪರಮಶಿವಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಹಿರಿಯ ವಿದ್ವಾಂಸ, ಶಾಸನತಜ್ಞ ಡಾ. ಎಚ್.ಎಸ್.ಗೋಪಾಲರಾವ್ ಅವರಿಗೆ ಕನ್ನಡದ ಸಾಂಸ್ಕೃತಿಕ ಲೋಕವು ಬೆಂಗಳೂರಿನ ದಿ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಇಂದು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದೆ. ‘ಬಹುಮುಖಿ’ ಅಭಿನಂದನಾ ಗ್ರಂಥವೂ ಬಿಡುಗಡೆ ಆಗುತ್ತಿದೆ.

---

ವೃತ್ತಿ, ಪ್ರವೃತ್ತಿಗಳ ನಡುವೆ ಸಮನ್ವಯವನ್ನು ಸಾಧಿಸಿಕೊಂಡು ಸಾಂಸ್ಕೃತಿಕ ಕೊಡುಗೆ ನೀಡಿದ ಗಣ್ಯರ ಸಾಲಿನಲ್ಲಿ ನಿಲ್ಲಬಲ್ಲ ವಿದ್ವಾಂಸರಲ್ಲಿ ಡಾ. ಎಚ್.ಎಸ್.ಗೋಪಾಲರಾವ್ ಸಹ ಒಬ್ಬರಾಗಿದ್ದಾರೆ. ಗೋಪಾಲರಾವ್ ಹುಟ್ಟಿದ್ದು 1946ರ ನವೆಂಬರ್ 18ರಂದು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿದ ಹುಲ್ಲೇಗೌಡನಹಳ್ಳಿಯ ಶಾನುಭೋಗ ಕುಟುಂಬಕ್ಕೆ ಸೇರಿದವರು. ತಂದೆ ಎಚ್.ಎನ್. ಸೂರ್ಯನಾರಾಯಣ ರಾವ್ ಸರ್ಕಾರಿ ಶಾಲೆಯ ಮೇಷ್ಟ್ರಾಗಿದ್ದವರು; ಕುಮಾರವ್ಯಾಸನ ಗದುಗಿನ ಭಾರತವನ್ನು ಸೊಗಸಾಗಿ ವಾಚಿಸುತ್ತಿದ್ದರು. ತಾಯಿ ಮಹಾಲಕ್ಷ್ಮಮ್ಮ ಗೃಹಿಣಿಯಾಗಿ ತುಂಬು ಕುಟುಂಬದ ಅಮ್ಮನಾಗಿದ್ದವರು.

ತಾಯಿಯ ಕಡೆಯ ಸಂಬಂಧಿಕರಾಗಿದ್ದ ಗೋಪಾಲರಾವ್ ಅವರ ತಾತ ಎನ್.ಲಕ್ಷ್ಮೀನಾರಾಯಣರಾಯರು ಕರ್ನಾಟಕದ ಇತಿಹಾಸ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದವರು. ಮಹಾರಾಷ್ಟ್ರದಲ್ಲಿ ಪತ್ತೆಯಾದ, ಕನ್ನಡದ ಹಿರಿಮೆಯನ್ನು ಸಾರುವ ಜುರ ಶಾಸನ ಹಾಗೂ ನೂರಾರು ಶಾಸನಗಳನ್ನು ಓದಿ, ಪ್ರಕಟಿಸಿದ ಕೀರ್ತಿ ಅವರದು. ಇಂತಹ ಪ್ರಾಜ್ಞರ ಕುಟುಂಬಕ್ಕೆ ಸೇರಿದ ರಾಯರಿಗೆ ಸಾಹಿತ್ಯದ ಆಸಕ್ತಿ ಪ್ರಾಥಮಿಕ ಶಿಕ್ಷಣದಲ್ಲಿಯೇ ಮೂಡಿತ್ತು.
ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಕೋರ್ಸ್‍ ಓದುವಾಗಲೇ ‘ಜೇನು ನಂಜು’, ‘ಗತಿ’, ‘ಬಿನ್ನ’ ಹಾಗೂ ‘ಪರಿಗ್ರಹಣ’ ಕಾದಂಬರಿಗಳನ್ನು ಬರೆದರು. ಅವರು ರಚಿಸಿದ ‘ಗುಲ್ಪುಟ್ಟಿ ಮುನ್ಪುಟ್ಟಿ’ ಮಕ್ಕಳ ನಾಟಕವು ಅಂತರಶಾಲಾ ಮಟ್ಟದ ಉತ್ತಮ ನಾಟಕವೆಂಬ ಪ್ರಶಸ್ತಿಗೆ ಪಾತ್ರವಾಗಿ ರಂಗಭೂಮಿಯಲ್ಲಿಯೂ ಗೋಪಾಲರಾವ್ ಅವರ ಹೆಸರು ಸ್ಥಾಪಿತಗೊಳ್ಳುವಂತಾಗಿತು.

ಗೋಪಾಲರಾವ್ ಅವರು, ಅಣ್ಣ ಎಚ್.ಎಸ್.ನಾಗೇಶರಾವ್, ರಂಗಕರ್ಮಿ ಎನ್.ಎ.ಸೂರಿ ಮೊದಲಾದ ಆಸಕ್ತರೊಡನೆ ಸೇರಿ ನಡೆಸಿದ ರಂಗಭೂಮಿಯ ಕೆಲಸಗಳು ಆ ಸಮಯದಲ್ಲಿ ಇವರ ಬೆಳವಣಿಗೆಗೆ ನೆರವಾದವು. ಟಿ.ಎಸ್.ನಾಗಾಭರಣರಿಗೆ ‘ಗ್ರಹಣ’, ‘ಬರ’, ‘ಬಂಗಾರದ ಜಿಂಕೆ’ ಚಿತ್ರ ನಿರ್ಮಾಣದಲ್ಲಿ ಅವರು ಸಾಂದರ್ಭಿಕವಾಗಿ ನೆರವಾದರು. ಗೋಪಾಲರಾವ್ ಬರೆದಿದ್ದ ‘ಮೃಚ್ಛಕಟಿಕಾ’ ನಾಟಕದ ‘ಶುಂದರಿ, ಶೂರ್ಪನಖಿ’ ಹಾಡನ್ನು ನಾಗಾಭರಣ ಅವರು ಇಂದಿಗೂ ನೆನಪಿಸಿಕೊಳ್ಳುವರು.

1970ರ ದಶಕದಲ್ಲಿ ಒಂದೇ ಬಾರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದವರು ಕಡಿಮೆ. ಅಂತಹ ಕಾಲದಲ್ಲಿ ನೆಲಮಂಗಲದಲ್ಲಿ ‘ಸರಸ್ವತಿ ವಿದ್ಯಾಮಂದಿರ’ ಟ್ಯುಟೋರಿಯಲ್ಸ್ ಆರಂಭಿಸಿ, ಅಣ್ಣ ನಾಗೇಶರಾವ್, ಭಾವಮೈದುನ ಎಂ.ಎನ್.ದೇವರಾಜ ಶರ್ಮ ಅವರೊಂದಿಗೆ ಉತ್ತಮಮಟ್ಟದ ವಿದ್ಯಾಭ್ಯಾಸ ನೀಡಿ ‘ಗೋಪಾಲ ಮೇಷ್ಟ್ರು’ ಎಂದು ಖ್ಯಾತರಾಗಿದ್ದರು. ಅದೇ ಸುಮಾರಿನಲ್ಲಿ ‘ವಿದ್ಯಾ ಪ್ರಿಂಟಿಂಗ್ ಪ್ರೆಸ್’ ಆರಂಭಿಸಿ ಕೆಲವು ವರ್ಷ ಮುದ್ರಣ ವ್ಯಾಪಾರವನ್ನು ಮಾಡಿದರು.

ಸೋದರಮಾವನ ಮಗಳು ಸೀತಾಲಕ್ಷ್ಮಿ ಅವರೊಂದಿಗೆ ವಿವಾಹವಾದ ಅವರು ಅದೇ ಸುಮಾರಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸಕ್ಕೆ ಸೇರಿದರು. ಕೇಂದ್ರ ಕಚೇರಿಯ ಅಂಕಿ-ಅಂಶ ವಿಭಾಗದಲ್ಲಿ ಕೆಲಸ ಮಾಡಿ, ಮುಂದೆ ಅಲ್ಲಿನ ಕನ್ನಡ ಘಟಕದ ಸಮನ್ವಯಾಧಿಕಾರಿಯಾಗಿ ನಿವೃತ್ತರಾದರು.

ಗೋಪಾಲರಾವ್ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ,
ಬಿ.ಎಂ.ಶ್ರೀ ಪ್ರತಿಷ್ಠಾನ, ಗೋಖಲೆ ಸಾರ್ವಜನಿಕ ಸಂಸ್ಥೆ, ಕನ್ನಡ ಗೆಳೆಯರ ಬಳಗ ಮೊದಲಾದ ಅನೇಕ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ತರಗತಿಗಳ ಮೊದಲ ವಿದ್ಯಾರ್ಥಿಯಾಗಿ, ಆನಂತರ ಈ ತರಗತಿಗಳ ಬೋಧಕರಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ 25 ವರ್ಷಗಳಿಗಿಂತ ಹೆಚ್ಚು ಕಾಲ ಸಾರ್ಥಕ ಸೇವೆ ಸಲ್ಲಿಸಿ ನಾಡಿನಲ್ಲಿ ಇತಿಹಾಸದ ಅರಿವು ಹೆಚ್ಚಲು ಕಾರಣರಾದರು. ಜಿ.ಎಸ್.ದೀಕ್ಷಿತ್, ಸೂರ್ಯನಾಥ ಕಾಮತ್, ಶ್ರೀನಿವಾಸ ರಿತ್ತಿ, ಶ್ರೀನಿವಾಸ ಹಾವನೂರ, ನಿಟ್ಟೂರು ಶ್ರೀನಿವಾಸರಾವ್‌, ಕೋ.ಚೆನ್ನಬಸಪ್ಪ ಮೊದಲಾದ ಅನೇಕ ದಿಗ್ಗಜರ ಒಡನಾಟದ ಸವಿ ಅನುಭವಿಸಿದರು. ಎಂ.ಚಿದಾನಂದಮೂರ್ತಿ, ಎ.ಎಂ.ಅಣ್ಣಿಗೇರಿ, ಆರ್.ಶೇಷಶಾಸ್ತ್ರಿ ಮೊದಲಾದವರ ಒಡನಾಡಿಯೂ ಹೌದು.

ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ತರಗತಿಗಳ ವಿದ್ಯಾರ್ಥಿಯಾಗಿದ್ದ ಕಾಲಕ್ಕೆ ಗೋಪಾಲರಾವ್ ಪತ್ತೆ ಮಾಡಿ ಪ್ರಕಟಿಸಿದ ‘ಜಲಗಾರ ದಿಬ್ಬದ ಶಾಸನ’ದ ವಿವರಗಳು ಕರ್ನಾಟಕದ ಶಾಸನಕ್ಷೇತ್ರದಲ್ಲಿ ಸಂಚಲನವನ್ನು ಉಂಟುಮಾಡಿದ್ದನ್ನು ಹಲವರು ಇಂದಿಗೂ ನೆನಪಿಸಿಕೊಳ್ಳುವರು. ಹಲ್ಮಿಡಿ ಶಾಸನಕ್ಕಿಂತಲೂ ಹಿಂದಿನ ಶಾಸನ ಎಂಬ ಪ್ರಮೇಯವನ್ನು ಮುಂದಿಟ್ಟು ಪ್ರಕಟಿಸಿದ್ದ ಶಾಸನವನ್ನು ಅಂದಿನ ಹಲವು ತಜ್ಞರು ಪರಿಶೀಲಿಸಿ ಉತ್ತಮ ಚರ್ಚೆಗಳಾದುದು ಇಂದಿಗೆ ಇತಿಹಾಸ.

ಗೋಪಾಲರಾವ್ ಅವರು 1984ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪರೀಕ್ಷೆಯನ್ನು 2 ಚಿನ್ನದ ಪದಕಗಳೊಂದಿಗೆ ಪಡೆದು, ಆನಂತರ 1941ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾ. ಬಾ.ರಾ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಬರೆದ ‘ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು - ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಶೀರ್ಷಿಕೆಯ ಮಹಾಪ್ರಬಂಧಕ್ಕೆ ಪಿಎಚ್.ಡಿ ದೊರೆಯಿತು.

ಗೋಪಾಲರಾವ್‌ ಅವರ ‘ನಮ್ಮ ನಾಡು ಕರ್ನಾಟಕ’, ‘ಇತಿಹಾಸದ ಅಧ್ಯಯನ ಅಂದು-ಇಂದು’ ಹಾಗೂ ‘ಕರ್ನಾಟಕ ಏಕೀಕರಣ ಇತಿಹಾಸ’ ಕೃತಿಗಳು ಈ ಕಾಲದ ಪ್ರಮುಖ ಆಕರಗಳಾಗಿವೆ. ‘ಚಂಗಾಳ್ವರು’, ‘ಶಾಸನ ಸಂಕಲನ’, ‘ಇತಿಹಾಸದ ಇಣುಕು ನೋಟ’, ‘ನಮ್ಮದಿದು ಇತಿಹಾಸ’, ‘ಕರ್ನಾಟಕ ಏಕೀಕರಣ’, ‘ಸಂಯುಕ್ತ ಬೆಂಗಳೂರು ಜಿಲ್ಲೆ: ಪ್ರಾಗಿತಿಹಾಸ ಮತ್ತು ಇತಿಹಾಸ: ಕೆಲವು ಪುಟಗಳು’, ‘ಶಾಸನಾಧ್ಯಯನ: ಕೆಲ ಹೆಜ್ಜೆಗುರುತುಗಳು’ ಹಾಗೂ ‘ರಾ.ಶಿ’ ಇವರ ಲೇಖನಿಯಿಂದ ಬಂದಿರುವ ಕೃತಿಗಳು.

ಬಿ.ಎಸ್.ಉಪಾಧ್ಯಾಯರ ‘ಫೀಡರ್ಸ್ ಆಫ್ ಇಂಡಿಯನ್ ಕಲ್ಚರ್’ ಕೃತಿಯನ್ನು ‘ಭಾರತೀಯ ಬಹುಮುಖೀ ಸಂಸ್ಕೃತಿ’ ಎಂಬ ಹೆಸರಿನಲ್ಲಿ ಹಾಗೂ ಬಿಪಿನ್ ಚಂದ್ರ ಅವರ ‘ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ’ ಕೃತಿಯನ್ನು ‘ಆಧುನಿಕ ಭಾರತದ ಚರಿತ್ರೆ’ ಎಂದು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಡಾ. ಎಸ್.ಶ್ರೀಕಂಠಶಾಸ್ತ್ರಿಗಳ ‘ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ ಸಂ.1’ರ ಲಿಪ್ಯಂತರ ಹಾಗೂ ಅನುವಾದವನ್ನು ‘ಕರ್ನಾಟಕ ಇತಿಹಾಸ ಆಕರಗಳು ಸಂ.1’ ಎಂಬುದಾಗಿ ಮಾಡಿಕೊಟ್ಟಿದ್ದಾರೆ. ‘ಮಣ್ಣೆ-ಒಂದು ವಿವರಣಾತ್ಮಕ ಅಧ್ಯಯನ’ ಅವರ ಇತ್ತೀಚಿನ ಪ್ರಕಟಣೆಯಾಗಿದ್ದು, ಐತಿಹಾಸಿಕ ಪ್ರದೇಶವೊಂದರ ಚರಿತ್ರೆಯನ್ನು ಇವರು ಕಟ್ಟಿಕೊಟ್ಟಿರುವ ರೀತಿ ಅನನ್ಯವಾಗಿದೆ. ಇವರ ಬಹುತೇಕ ಕೃತಿಗಳೆಲ್ಲವೂ ಮುಂದಿನ ತಲೆಮಾರಿನವರಿಗೆ ಮಾದರಿಯಾಗಿವೆ.

ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ನಾಗಾಭರಣರ ನಿರ್ದೇಶನದಲ್ಲಿ ದೂರದರ್ಶನಕ್ಕಾಗಿ ಮಾಡಿದ್ದ ‘ಕರ್ನಾಟಕದ ದೇವಾಲಯಗಳು’ ಹಾಗೂ ಶ್ರವಣಬೆಳಗೊಳದ ‘ಮಹಾಮಸ್ತಕಾಭಿಷೇಕ’ದ ಸಂದರ್ಭದಲ್ಲಿ ಮಾಡಿದ್ದ ಸಾಕ್ಷ್ಯಚಿತ್ರಕ್ಕೆ ವಿಷಯತಜ್ಞರಾಗಿ ನೆರವಾಗಿರುವ ಗೋಪಾಲರಾವ್ ಅವರು ‘ರಾತ್ರಿಯಲ್ಲಿ ಹಂಪೆ’ ಬೆಳಕು-ಧ್ವನಿ ಕಾರ್ಯಕ್ರಮಕ್ಕೆ ರೂಪಕ ರಚನೆ ಮಾಡಿಕೊಟ್ಟಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ನೆರವಾಗಿರುವ ಗೋಪಾಲರಾವ್ ನೇರ, ನಿಷ್ಠುರ ಮಾತಿನ, ನಿರಂತರ ಪರಿಶ್ರಮದ ಬದುಕಿನಲ್ಲಿ ಮಾಡಿರುವ ಸಾಧನೆ ಹಲವರಿಗೆ ಪ್ರೇರಣೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು