ಶನಿವಾರ, ಸೆಪ್ಟೆಂಬರ್ 19, 2020
21 °C

ನಿಲ್ಸಾಕ ಏನ್‍ ಗಂಟು ಹೊಕ್ಕೈತಿ?

ಅಮರೇಶ ಗಿಣಿವಾರ Updated:

ಅಕ್ಷರ ಗಾತ್ರ : | |

Prajavani

ನಾವು ಚಿಕ್ಕವರಿದ್ದಾಗ ಬಸ್ಸುಗಳೆಂದರೆ ಕೆಂಪುಬಣ್ಣ ಮಾತ್ರ ನೆನಪಿಗೆ ಬರುತ್ತಿತ್ತು. ಈಗೆಲ್ಲಾ ಒಂದೊಂದು ಸಾರಿಗೆ ಸಂಸ್ಥೆಯದು ಒಂದೊಂದು ಕಲರ್ ಬಸ್‌ ಅದಾವು. ಬಸ್ಸು ಹತ್ತಿದ ತಕ್ಷಣ ಮೊದಲು ಕಿಡಕಿ ಸಿಗ್ಲಪ್ಪ ಎನ್ನುವುದು ಎಲ್ಲರ ಆಸೆ. ಇಪ್ಪತ್ತು ವರುಷದ ಹಿಂದೆ ನಮ್ಮೂರಿನ ಜನ ಫಸ್ಟ್ ಬಸ್, ಲಾಸ್ಟ್ ಬಸ್, ಎಂಬ ಎರಡೇ ಇಂಗ್ಲಿಷ್ ಪದ ಕಲಿತಿದ್ದರು.

ಆಗ ಸಮಯ ತಿಳಿಯುತ್ತಿರಲಿಲ್ಲ. ‘ಆರು ಗಂಟೆ ಆತಿ, ತಿರುಗಿ ಫಸ್ಟ್‌ ಬಸ್ ಮ್ಯಾಕ ಹೋತಿ’ ಅಂತ, ಅವಸರದಾಗ ಎದ್ದು ಹಳ್ಳದ ನೀರಿಗೆ ಹೋಗೋರು ಹಳ್ಳದ ನೀರಿಗೆ, ಬಿತ್ತಾಕ ಹೋಗೋರು ಬಿತ್ತಾಕ, ಕೂಲಿ ಆಳುಗಳನ ಕರೆಯೋರು, ಕರಿಯಾಕ ಮನಿಮನಿಗೆ  ಹೋಗೋರು. ಕೆಲವರು ತಂಬಿಗೆ ಹಿಡಕೊಂಡು ಎರಡಕ್ಕ ಹೋಗೋದನ್ನ ಫಸ್ಟ್‌ ಬಸ್ಸಿನ ಟೈಮಿಗೇ ರೂಢಿ ಮಾಡ್ಕೊಂಡಿದ್ರು. ಹೆಣ್ಮಕ್ಕಳು ಮುಂಜಾನೆ ಫಸ್ಟ್ ಬಸ್ಸು ಬರೋದಕ್ಕಿಂತ ಮುಂಚೆ ಅಥವಾ ರಾತ್ರಿ ಲಾಸ್ಟ್ ಬಸ್ ಬಂದು ಹೋದ ನಂತರ ಹೋಗುವ ರೂಢಿ ಮಾಡ್ಕೊಂಡಿದ್ರು. ಅಕಸ್ಮಾತ್‌ ಬಸ್ಸು ಲೇಟ್‌ ಆಗಿ ಬಂದ್ರ ಅವರ ಫಜೀತಿ ದೇವರಿಗೇ ಪ್ರೀತಿ. ಸೋಮವಾರ ಬಂತಂದ್ರ ಬಸ್ಸಿನ್ಯಾಗ ಡ್ರೈವರ್ ಮುಂದ ಕುರಿಮರಿಗಳನ್ನ ತುಂಬುತಿದ್ರು, ಹಿಕ್ಕೆ, ಮೂತ್ರ ಸೇರಿ ಕಾಲ ಸಂದಿಗೆ ಹರಿದರೆ  ‘ಹಳ್ಳ ಬಂದಾಗತೆಪ್ಪ’ ಎಂಬ ಮಾತು ಕೇಳಿ ಬರುತ್ತಿತ್ತು.

ನಮ್ಮೂರು ದೊಡ್ಡತೆಗ್ಗು ಇಳಿದು ಏರಿದಾಗ ಬಸ್ಸು ಕಾಣತಿತ್ತು. ನಾವು ಬಸ್ಸು ಕಂಡಾಗ ಯಮಾ ಬಸ್ಸು ಬಂತು ಅಂತ ಕುಣಿತಿದ್ವಿ. ನಾನೇ ಮೊದಲು ನೋಡಿದ್ದು ಅಂತ ವಾರಿಗೇರ ಕೂಡ ಜಗಳ ಮಾಡತಿದ್ವಿ. ದೀಪಾವಳಿ, ಪೀರಲಬ್ಬ ಹಬ್ಬಗಳು ಬಂದವಂದ್ರ ಬೀಗರು ಬರತಾರ ಅಂತ ಮುಂಜಾನಿಯಿಂದ ಬಸ್‌ಸ್ಟಾಂಡಿನ್ಯಾಗ ಕಾಯತಿದ್ವಿ. ಯಾಕಂದ್ರ ಬಾಳೆಹಣ್ಣು, ಬ್ರೆಡ್ಡು ಸಿಗತಾವ ಅಂತ ಆಸೆ ದೊಡ್ಡದಿತ್ತು.

ಲಾಸ್ಟ್ ಬಸ್ಸಿಗೆ ಬರೋರೆಲ್ಲ ಆತಂಕವಾದಿಗಳು ಆಗಿರುತ್ತಿದ್ದರು! ಯಾಕಂದ್ರ ಕುಡುಕರು, ದವಾಖಾನಿಗೆ ಹೋದೋರು, ಮಣ್ಣಿಗೆ ಹೋದೋರು,  ಬಸ್ಸು ತಪ್ಪಿಸಿಕೊಂಡೋರು, ಸತ್ತ ಸುದ್ದಿ ತರೋರು ತರತರಹದ ಮಂದಿ ಲಾಸ್ಟ್ ಬಸ್ಸಿಗೆ ಬರುತ್ತಿದ್ದರು.

ದೇಶದಾಗ ಎಲ್ಲಾ ಸಮಸ್ಯೆ ಸ್ವಲ್ಪ ಬದಲಾವಣೆ ಆದಾವು. ಕಂಡಕ್ಟರ್‌ಗೆ ಚಿಲ್ಲರೆ ಸಮಸ್ಯೆ ಎಂದೂ ಬಗೆಹರಿಯುವಂತೆ ಕಾಣುವುದಿಲ್ಲ. ಟಿಕೇಟಿನ ಹಿಂದೆ ಬರೆದರೆ ‘ಇಳಿವತ್ತಿನ್ಯಾಗ ದ್ಯಾಸ ಮಾಡಿ ಇಸಗಲೋ’ ಎಂದು ಆ ಕೆಲಸ ನಮಗೆ ವಹಿಸುತ್ತಿದ್ದರು..

 ಮನೆ ಪಕ್ಕದ ಪಾರ್ತೆಮ್ಮ ಹಾಗೂ ಸಾಂತಮ್ಮ ಲಾಸ್ಟ್ ಬಸ್ಸು ಬರತಾನ ಸುದ್ದಿ ಹೇಳೋದು ರೂಢಿ ಮಾಡಿಕೊಂಡಿದ್ರು. ಓಣ್ಯಾಗಿನ ಹೆಂಗಸರೇ ಆವಾಗಿನ ನ್ಯೂಸ್ ಚಾನೆಲ್‌ ಆಗಿದ್ದರು. ಅನೈತಿಕ ಸಂಬಂಧ ಇಟ್ಟುಕೊಂಡವರ ಸುದ್ದಿನೇ ಜಾಸ್ತಿ. ಪಕ್ಕದಲ್ಲಿ ಇದ್ದೋರಿಗೆ ಕೇಳಸಲಾರದಂಗ ಧ್ವನಿಪೆಟ್ಟಿಗೆ ಬಳಸಲಾರದೇ ಉಸಿರಿನ ಕೂಡ 'ಗುಸುಗುಸು'. ಲಾಸ್ಟ್ ಬಸ್ಸು ಬಂದಾಗ ಮಂದಿ ಸುದ್ದಿ ತಗಂಡ ನಾವೇನ ಮಾಡೋಣ ಅಂತ ಸೀರೆ ಜಾಡಿಸಿ ಎದ್ದೋಗತಿದ್ರು.

ಆವಾಗ ಬಸ್ಸಿಗೆ ಟಾಪ್‍ ಇರುತಿದ್ದವು. ನಮ್ಮೂರು ಮಂದಿ ಏಣಿ ಇದ್ರನೂ ಹತ್‌ತ್ತಿದ್ದಿಲ್ಲ, ಡ್ರೈವರ್‌ನ ಕಿಡಕಿ ತೆಗೆದು ಅದರ ಮ್ಯಾಲ ಕಾಲಿಟ್ಟು ಹತ್ತುತ್ತಿದ್ದರು.

ಹಳ್ಳಿ ಜನಕ್ಕ ಕಂಡಕ್ಟರ್‌ ಜೊತಿ ಜಗಳ ಮಾಡಿದ್ರ ನೇರವಾಗಿ ಸರಕಾರದ ಕೂಡ ಜಗಳ ಮಾಡಕತ್ತೀವಿ ಅಂತ  ಭಾಸವಾಗತ್ತಿತ್ತು. ನಮ್ಮೂರವ ಹರಿದಿದ್ದು ನೋಟು ಕೊಟ್ಟಾಗ ಕಂಡಕ್ಟರ್ ಬ್ಯಾರೇದು ಕೊಡಪ ಅಂದ. ‘ಗೋರ್‌ಮೆಂಟಿಗೆ ಯಾಕ ಈ ನೋಟ ನಡೆಲ್ಲಪ’ ಅಂತ ಜಗಳಕ ಬಿದ್ದ. ಕೊನೆಗೆ ಕಂಡಕ್ಟರ್ ಸೋತ.

ಒಂದು ದಿನ ಹಾಫ್‍ ಟಿಕೆಟ್ ಸಲುವಾಗಿ ಜಗಳ. ಹೆಣ್ಮಗಳು ತನ್ನ ಮಗನ ಕರ್ಕಂಡು ಊರಿಗೆ ಹೊರಟಿದ್ದಳು. ಕಂಡಕ್ಟರ್‌ ಹಾಫ್‌ ಟಿಕೆಟ್‌ ತಗೋಬೇಕು ಅಂದ.  ಆ ಹೆಣ್ಮಗಳು ‘ಸಾಲಿಗೆ  ಹಚ್ಚೇ ಇಲ್ಲ. ಅರ್ಧ ಕೇಳತೀರಲ್ಲ’ ಅಂದಳು. ನೀನು ಮುಂದನೂ ಸಾಲಿಗೆ ಹಚ್ಚಂಗಿಲ್ಲ ಅಂದ್ರ ನಾವ್‍ ಟಿಕಿಟು ಹರಿಯದ ಇರಬೇಕ’ ಅಂತ ತರಾಟೆಗೆ ತಗೊಂಡ.

ಬಸ್ಸುಗಳು ಕೆಳಗ, ಮ್ಯಾಗ ತುಂಬಿಕೊಂಡು ಹೊಂಟರ ದೇವರ ಮೈಯಾಗ ಬಂದೈತೆ ಅನ್ನುವ್ಹಂಗ ಕಾಣುತ್ತಿತ್ತು. ನಮಗೆ ಸ್ಟ್ರೈಕ್ ಎಂಬ ಶಬ್ದ ಗೊತ್ತಾಗಿದ್ದು ಈ ಬಸ್‌ಗಳಿಂದ. ಏಕಾಏಕಿ ಬಸ್ ಬಂದಾದರೆ ಇವತ್ತ ಸ್ಟ್ರೈಕ್‍ ಐತಿ ಅಂತ ಗೊತ್ತಾಗುತ್ತಿತ್ತು.

ಬಸ್ಸು ಒಂದು ದಿನ ರಾಯಚೂರಿನಿಂದ ಸಿಂಧನೂರ ಕಡೆ ಬರುವಾಗ ಮುದುಕಿ ನೀರ್‌ ಮಾನವಿ ಹತ್ತಿರ ಇಳಿಬೇಕಾಗಿತ್ತು. ಆ ಮುದುಕಿ ಸುಕ್ಕು ಮುಖ, ಗಂಟುಗಂಟಿನ ಜಡೆ, ಕೊರಳಾಗ ದೇವರುಗಳನ್ನ ಪೋಣಿಸಿ ಸರ ಮಾಡಿ ಹಾಕಿಕೊಂಡಿದ್ದಳು.

ಬಲಪಕ್ಕೆಯಲ್ಲಿ ಭಂಡಾರದ ಚೀಲ ಕೂಡ ಇತ್ತು, ಒಟ್ಟಿನಲ್ಲಿ ಜೋಗಮ್ಮ. ಯಲ್ಲಮ್ಮನಗುಡಿ ಹತ್ತಿರ ನಿಲ್ಲಿಸಿ ಅಂತ ಕಂಡಕ್ಟರ್ ನನ್ನ ಅಲುವತ್ತುಕೊಂಡಳು, ಕಂಡಕ್ಟರ್ ನಿರಾಕರಿಸಿದ, ತಕ್ಷಣವೇ ದೇವಿ ಮೈಯಲ್ಲಿ ಆವರಿಸಿ ಭಂಡಾರ ಚೀಲ ತೂರಾಡಿ, ಮೈ ಅಲ್ಲಾಡಿಸುತ್ತ ಗಟ್ಟಿ ದನಿಯಿಂದ ‘ಒರೇಕೊಡ ಕಾಯಾಟಿಕಿ ಪೋತಾವ ಪೋರಾ’ ಅಂತ ಕಂಡಕ್ಟರ್‌ಗೆ ಚಾರ್ಜ್‌ ಮಾಡಿದಳು. ಬಸ್ಸಿನಲ್ಲಿದ್ದವರು ದೇವಿ ದೊಡ್ಡಾಕಿ ಸ್ವಲ್ಪ ಗುಡಿತಲ್ಲಿ ನಿಲ್ಸಾಕ ಏನ್‍ಗಂಟು ಹೊಕ್ಕೈತಿ ಎಂದು ಎಲ್ಲರೂ ದನಿ ಜೋಡಿಸಿದ್ದರು. ಕನ್ನಡದ ದೇವರಗಳನ್ನು ನೋಡಿದ್ದೆ. ತೆಲುಗಿನ ದೇವರನ್ನು ಬಸ್ಸಿನಲ್ಲಿ ಮೊದಲ ಬಾರಿ ನೋಡಿದೆ.

ಒಂದು ದಿನ ಲಾಸ್ಟ್‌ ಬಸ್ಸಿಗೆ ಒಬ್ಬ ಆಸಾಮಿ ಬಂದು ಪಕ್ಕದಲ್ಲೇ ಕುಳಿತ. ತೀರ್ಥ ಸೇವಿಸಿದ್ದ ಅಂತ ಗೊತ್ತಾಯ್ತು. ತನ್ನ ತೊದಲು ನುಡಿಗಳಿಂದ ‘ಹೇ ಕಂಡಕ್ಟರಾ, ಒಂದು ಟಿಕೆಟು ಕೊಡು, ಊರ ಬಂದಾಗ ಎಬುಸು ಅಂದು ಮಲಗಲು ತಯಾರಾದ. ಕಂಡಕ್ಟರ್ ‘ಎಬ್ಬಿಸಿ ನಿನ್ನ ಮುಖ ತೊಳದು ಕಳಸ್ತೀನಿ’ ಅಂತ ತಿರುಗೇಟು ನೀಡಿದ.

ಹೀಗೆ ಬಸ್ಸುಗಳೆಂದರೆ ಸುಖ-ದುಃಖ ಎಲ್ಲವನ್ನು ಹೊತ್ತೊಯ್ಯುತ್ತವೆ. ಹುಟ್ಟಿದ ಕೂಸನ್ನು ಕಟ್ಟಿಕೊಂಡು ದುಡಿಮೆಗಾಗಿ ಬೆಂಗಳೂರಿಗೆ ಹೋಗುವವರು, ಬಸ್ಸಿನಲ್ಲಿ ತೊಟ್ಟಿಲುಗಳನ್ನು ಕಟ್ಟಿದ ಚಿತ್ರಣ ಕಣ್ಣ ಮುಂದೆ ಹಾಯುತ್ತದೆ. ಮನುಷ್ಯರನ್ನು ಮಾತ್ರವಲ್ಲದೇ ಅಂಚೆಚೀಲ, ಪತ್ರಿಕೆಗಳನ್ನೂ ಬಸ್ಸುಗಳು ಸಾಗಿಸುತ್ತವೆ. ಚಾಲಕನೇ ನಮಗೆ ರಾತ್ರಿ ಪ್ರಯಾಣದಲ್ಲಿ ದೇವರಾಗಿರುತ್ತಾನೆ. ವಸ್ತಿ ಬಸ್ಸುಗಳು ಚಾಲಕ ಮತ್ತು ನಿರ್ವಾಹಕರಿಗೆ ಮನೆಗಳೂ ಆಗುತ್ತವೆ.

ಹೌದು, ಬಸ್ಸುಗಳೆಂದರೆ ಕಕ್ಕುಲಾತಿ, ಪ್ರೀತಿ ಎಲ್ಲಾ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.