ಶುಕ್ರವಾರ, ಜುಲೈ 23, 2021
23 °C

ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ವಿದ್ಯಾ ವಿ. ಹಾಲಭಾವಿ Updated:

ಅಕ್ಷರ ಗಾತ್ರ : | |

Prajavani

ಕೊಳೆಯುತ್ತಿರುವ ಸಸ್ಯಗಳಿರುವ ಗದ್ದೆ (ಪೀಟ್ ಬಾಗ್) ಗಳು ಪುರಾತತ್ವ ತಜ್ಞರ ನೆಚ್ಚಿನ ಬೇಟೆಯಾಡುವ ತಾಣಗಳಾಗಿವೆ! ಏಕೆಂದರೆ ಈ ಜವುಗು ಪ್ರದೇಶಗಳು ಕಾಲಕಾಲಕ್ಕೆ ಅನೇಕ ಅಚ್ಚರಿಗಳನ್ನು ಬಹಿರಂಗಪಡಿಸಿವೆ. ಕಡಿಮೆ ತಾಪಮಾನ, ಕಡಿಮೆ ಆಮ್ಲಜನಕ ಹಾಗೂ ಹೆಚ್ಚು ಆಮ್ಲೀಯ ವಾತಾವರಣವಿರುವ ಇಂತಹ ತೇವವುಳ್ಳ ಗದ್ದೆಗಳು ಅತ್ಯಂತ ಗಮನಾರ್ಹ ಸಂರಕ್ಷಣಾ ಗುಣಗಳನ್ನು ಹೊಂದಿವೆ.

ವಾಯವ್ಯ ಯೂರೋಪ್‌ನಲ್ಲಿ ಪೀಟ್ ಬಾಗ್‌ಗಳಲ್ಲಿ ಮುಳುಗಿ ದೇಹ ತ್ಯಾಗ ಮಾಡುವ ಧಾರ್ಮಿಕ ಕ್ರಿಯೆ ಸಾಮಾನ್ಯವಾಗಿತ್ತು. ಯೂರೋಪ್‌ನಾದ್ಯಂತ ಬಾಗ್‍ಗಳಿಂದ ಹೊರತೆಗೆಯಲಾದ ಸಾವಿರಾರು ದೇಹಗಳಿಂದ ಇದು ತಿಳಿದು ಬಂದಿದೆ. ಜನರು ತೇವವುಳ್ಳ ಭೂಮಿಯಲ್ಲಿ ಬೆಳೆಯುತ್ತಿದ್ದ ಸಸ್ಯ(ಪೀಟ್)ಗಳನ್ನು ಕೊಯ್ಲು ಮಾಡುತ್ತಿದ್ದರು ಮತ್ತು ಅನೇಕ ಶತಮಾನಗಳಿಂದ ಇದನ್ನು ಅಡುಗೆಗೆ ಇಂಧನವಾಗಿ ಬಳಸಲಾಗುತ್ತಿತ್ತು. ಪೀಟ್ ಕತ್ತರಿಸುವವರಿಂದ ಕಂಚಿನ ಯುಗದ ವಿವಿಧ ರೀತಿಯ ಕಲಾಕೃತಿಗಳನ್ನು ಮತ್ತು ಮಧ್ಯಯುಗದ ಹಸ್ತಪ್ರತಿಗಳನ್ನು ಸಹ ವಾಪಸ್‌ ಪಡೆಯಲಾಗಿದೆ.

ಪೀಟ್ ಬಾಗ್‌ನಲ್ಲಿ ಶೋಧಿಸಿರುವ ಮತ್ತೊಂದು ಕುತೂಹಲಕಾರಿ ಸಂಶೋಧನೆಯೆಂದರೆ ಬೆಣ್ಣೆಯ ಸಂಗ್ರಹಗಳು. ವಿಶೇಷವಾಗಿ ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್‍ನ ಪೀಟ್ ಬಾಗ್‍ಗಳಲ್ಲಿ ದೊರೆತಿರುವ ಬಾಗ್ ಬೆಣ್ಣೆಯು ಹೂತುಹೋಗಿರುವ ಪುರಾತನವಾದ ಮೇಣದಂತ ವಸ್ತುವನ್ನು ಸೂಚಿಸುತ್ತದೆ. ಬಾಗ್ ಬೆಣ್ಣೆ ಉಂಡೆಗಳನ್ನು ಪರೀಕ್ಷೆಗೆ ಒಳಪಡಿಸಿ ನೋಡಿದಾಗ ತಿಳಿದು ಬಂದದ್ದೇನೆಂದರೆ ಕೆಲವನ್ನು ಕ್ಷೀರೋತ್ಪನ್ನದಿಂದ ತಯಾರಿಸಲಾಗಿದ್ದರೆ, ಮತ್ತೆ ಕೆಲವು ಬೆಣ್ಣೆ ಉಂಡೆಗಳು ಮಾಂಸ ಆಧಾರಿತವಾಗಿವೆ. ಪ್ರಾಣಿ ಮೂಲದ ಬೆಣ್ಣೆಯನ್ನು ‘ಬ್ಯೂಟಿರೆಲೈಟ್’ ಎಂದು ಕರೆಯುತ್ತಾರೆ.

ಬಾಗ್ ಬೆಣ್ಣೆಯನ್ನು ಮರದ ಬಕೆಟ್‍ಗಳು, ಬ್ಯಾರೆಲ್‍ಗಳು, ಬೆಣ್ಣೆ ಕಡೆಯುವಂತಹ ಕೆಲವು ರೀತಿಯ ಮರದಿಂದ ಮಾಡಿರುವ ಪಾತ್ರೆಗಳಲ್ಲಿ ತುಂಬಿ ಪೀಟ್ ಬಾಗ್‌ನಲ್ಲಿ ಹೂತಿಡಲಾಗುತ್ತಿತ್ತು. ಬಹುಶಃ ಇದು ಬೆಣ್ಣೆಯ ತಯಾರಿಕೆ ಹಾಗೂ ಅದನ್ನು ಕೆಡದಂತೆ ಸಂರಕ್ಷಿಸಿಡುವ ಹಳೆಯ ವಿಧಾನವಾಗಿರಬಹುದು. ವಿಜ್ಞಾನಿಗಳು ಹಾಗೂ ಪುರಾತತ್ವ ತಜ್ಞರಿಗೆ 2003 ರವರೆಗೂ ಬಾಗ್ ಬೆಣ್ಣೆಯ ಮೂಲದ ಬಗ್ಗೆ ಏನೂ ಗೊತ್ತಿರಲಿಲ್ಲ. ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೆಣ್ಣೆಯ ಕೆಲವು ಮಾದರಿಗಳು ಅಡಿಪ್ರೆಸ್ (ದೇಹದ ಕೊಬ್ಬು) ಅಥವಾ ಟಾಲೋ (ಗೋ ಮಾಂಸ ಅಥವಾ ಮಟನ್ ಕೊಬ್ಬು)ಮೂಲದವು ಎಂದು ಕಂಡು ಹಿಡಿದಿದ್ದಾರೆ.

ಐರ್ಲೆಂಡ್‌ನಲ್ಲಿ ಬೆಣ್ಣೆಯನ್ನು ಹೂತು ಹಾಕುವ ಅಭ್ಯಾಸವು ಒಂದನೆಯ ಶತಮಾನದಷ್ಟು ಹಿಂದಿನದೆಂದು ಕೋಮಿತ್‌ನಲ್ಲಿ ದೊರೆತ ಬಾಗ್ ಬೆಣ್ಣೆಯಿಂದ ತಿಳಿದು ಬಂದಿದೆ. ಏಪ್ರಿಲ್ 28ರ 2011 ರಂದು ಆಫಲಿ ಕೌಂಟಿಯ ತುಲ್ಲಮೋರ್‌ನಲ್ಲಿ ಅಂದಾಜು 110 ಪೌಂಡ್ (ಸುಮಾರು 50 ಕಿಲೋಗ್ರಾಂ)ಗಳಷ್ಟು ಬಾಗ್ ಬೆಣ್ಣೆ ಸಿಕ್ಕಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇನ್ನೂ ಕ್ಷೀರೋತ್ಪನ್ನದ ವಾಸನೆಯನ್ನು ಹೊಂದಿರುವ ಈ ಬೆಣ್ಣೆಯನ್ನು 0.3 ಮೀಟರ್ ವ್ಯಾಸ ಹಾಗೂ 0.6 ಮೀಟರ್ ಎತ್ತರವಿರುವ ಮರದ ಬೋಗುಣಿಯಲ್ಲಿ 2.3 ಮೀಟರ್‌ನಷ್ಟು ಆಳದಲ್ಲಿ ಹೂತಿಡಲಾಗಿತ್ತು.

ಕಾರಣವೇನಿರಬಹುದು?

ಬಾಗ್ ಬೆಣ್ಣೆ ರಚನೆಯ ಹಿಂದಿರುವ ಮೂಲ ಪ್ರೇರಣೆಗಳು ಏನೆಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆಹಾರ ಉತ್ಪನ್ನಗಳು ಹಾಳಾಗುವುದನ್ನು ತಡೆಯಲು ಬಾಗ್‌ಗಳಲ್ಲಿ ಹೂಳಲಾಗುತ್ತಿತ್ತು ಎಂದು ಕೆಲವರು ಪ್ರತಿಪಾದಿಸುತ್ತಾರೆ. ಪೀಟ್ ಬಾಗ್ ಸಂರಕ್ಷಣೆಯ ಗುಣಗಳನ್ನು ಪರೀಕ್ಷಿಸಲು 1990ರಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಶೀತಲ ನೀರಿನ ತಾಪಮಾನ ಮತ್ತು ಹೆಚ್ಚಿನ ಆಮ್ಲೀಯತೆ ಸಂಯೋಜನೆಯು ಆಮ್ಲಜನಕ ಇಲ್ಲದೆಯೂ ಬದುಕಬಲ್ಲ ಒಂದು ರೀತಿಯ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ ಎಂದು ಇದರಿಂದ ತಿಳಿದು ಬಂತು. ಎರಡು ವರ್ಷಗಳ ಕಾಲ ಬಾಗ್‍ಗಳಲ್ಲಿ ಹೂತಿಟ್ಟು ಮರು ಪಡೆಯಲಾದ ಮಾಂಸದ ಪ್ರಯೋಗಾಲಯದ ವಿಶ್ಲೇಷಣೆಗಳು ಆಧುನಿಕ ಫ್ರೀಜರ್‌ನಲ್ಲಿ ಸಂಗ್ರಹಿಸಿಟ್ಟ ಮಾಂಸದಂತೆಯೇ ಸರಿಸುಮಾರು ಒಂದೇ ರೀತಿಯ ಬ್ಯಾಕ್ಟೀರಿಯಾ ಮತ್ತು ರೋಗಕಾರಕ ನಿಯಂತ್ರಣಗಳನ್ನು ಹೊಂದಿರುವುದು
ಕಂಡುಬಂದಿದೆ.

ಐರ್ಲೆಂಡ್ ಮತ್ತು ಸ್ಕಾಟ್‍ಲ್ಯಾಂಡ್‍ನಾದ್ಯಂತ ಪೀಟ್ ಬಾಗ್‍ಗಳಲ್ಲಿ ಕಂಡು ಬರುವ ಬೆಣ್ಣೆ ಸಂಗ್ರಹಗಳನ್ನು ಸಂರಕ್ಷಣೆಯ ಉದ್ದೇಶಕ್ಕಾಗಿಯೇ ಹೂತಿಟ್ಟಿರುವ ಸಾಧ್ಯತೆಯಿದೆ. ಅವುಗಳನ್ನು ಸಂಸ್ಕರಿಸಲೆಂದು ಸಹ ಹೂಳಿಟ್ಟಿರಬಹುದು.

ಆದರೆ ಅವುಗಳು ಹೇಗೋ ಕಳೆದುಹೋಗಿರಬಹುದು ಅಥವಾ ಮರೆತುಹೋಗಿರಬಹುದು ಅಥವಾ ಅವುಗಳ ಮಾಲೀಕರು ಸತ್ತುಹೋಗಿರಬಹುದು.

ಬೆಣ್ಣೆಯ ಸ್ಠಿತಿ, ವಾಸನೆ ಮತ್ತು ಸಂಯೋಜನೆಯಲ್ಲಿನ ಗಮನಾರ್ಹ ಬದಲಾವಣೆಯಿಂದ ಹೊರಹೊಮ್ಮಿದ ಒಂದು ಊಹೆಯೆಂದರೆ ಪ್ರಾಚೀನ ಆಹಾರ ಸಂಸ್ಕರಣೆಯಂತೆ ಬೆಣ್ಣೆಯು ರಾಸಾಯನಿಕವಾಗಿ ಬದಲಾಗಬೇಕೆಂದು ಆಗಿನ ಜನರು ಬಯಸಿದ್ದರು. ಅನೇಕ ಸಾಂಪ್ರದಾಯಿಕ ಅಡುಗೆ ಪದ್ಧತಿಗಳಲ್ಲಿ ಮಾಂಸ ಮತ್ತು ಡೈರಿ ಉತ್ಪನ್ನಗಳಂತಹ ಹೆಚ್ಚು ಹಾಳಾಗುವ ಆಹಾರಗಳನ್ನು ತಯಾರಿಸುವಾಗ ಅವುಗಳನ್ನು ಹೂತಿಡುವುದು ಅತ್ಯಗತ್ಯವಾಗಿತ್ತು. ಹೊಸರುಚಿ ಪಡೆಯಲು ಅನೇಕ ಆಹಾರಗಳನ್ನು ಉದ್ದೇಶ ಪೂರ್ವಕವಾಗಿ ಹುದುಗಿಸಲಾಗುತ್ತಿತ್ತು.

ಬೆಣ್ಣೆಯನ್ನು ಹೂಳಿಡಲು ಮತ್ತೊಂದು ಕಾರಣವೆಂದರೆ ಭದ್ರತೆ. ಬೆಣ್ಣೆಯು ಅಮೂಲ್ಯವಾದ್ದರಿಂದ ಅದರ ಕಳ್ಳತನವನ್ನು ತಡೆಗಟ್ಟಲು ಬಾಗ್‌ಗಳಲ್ಲಿ ಬಚ್ಚಿಡಲಾಗುತ್ತಿತ್ತು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು