ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಚಿಣ್ಣರ ತಿನಿಸು: ಆ ಬಗೆ... ಈ ಬಗೆ

Last Updated 5 ಡಿಸೆಂಬರ್ 2020, 0:55 IST
ಅಕ್ಷರ ಗಾತ್ರ
ADVERTISEMENT
""

ಹದಿನೈದು ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಹೊರಳೋಣ. ಅಂದಿನ ಮಕ್ಕಳ ತಿನಿಸುಗಳ ಆಯ್ಕೆ, ಆಟಗಳು ಮತ್ತು ಇಂದಿನ ಮಕ್ಕಳ ತಿನಿಸುಗಳ ಆಯ್ಕೆ, ಆಟಗಳು ಬದಲಾಗಿವೆ. ಈ ಬದಲಾವಣೆಗೆ ತಕ್ಕಂತೆ ಮಾರುಕಟ್ಟೆಯೂ ನವ ನಾವೀನ್ಯ ಪಡೆದಿದೆ. ಅಂದಿನ ಮತ್ತು ಇಂದಿನ ಮಕ್ಕಳ ತಿನಿಸುಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.

‘ಪಾ...ವ್ಂ.... ಪಾ... ವ್ಂ…’ ಸದ್ದು ಮಾಡುತ್ತ ಸಾಬಣ್ಣ ಸೈಕಲ್‌ ಕ್ಯಾರಿಯರ್‌ನಲ್ಲಿ ಐಸ್‌ಪೆಟ್ಟಿಗೆ ಇಟ್ಟುಕೊಂಡು ಪೆಡಲ್‌ ತುಳಿಯುತ್ತ ಬಂದನೆಂದರೆ ಸಾಬಣ್ಣನತ್ತ ಇಡೀ ಓಣಿಯ ಮಕ್ಕಳು ಹೋ ಹೋ ಎಂದು ಓಡುತ್ತಿದ್ದವು. ಇದು ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಚಿತ್ರಣ. ಪ್ರತಿ ಊರಲ್ಲಿಯೂ ಹೀಗೆ ಐಸ್‌ಪೆಟ್ಟಿಗೆಯ ಸಾಬಣ್ಣನದ್ದೋ, ಬಾಬಣ್ಣನದ್ದೋ ಹಾಜರಿ ಇದ್ದೇ ಇರುತ್ತಿತ್ತು. ಆ ಐಸ್‌ಡಬ್ಬದ ಸುತ್ತ ಅಂಟಿಸಿದ್ದ ಹಿಂದಿ ಇಲ್ಲವೆ ಕನ್ನಡ ಚಿತ್ರಗಳ ಪೋಸ್ಟರ್‌ ಸಹ ಮಿನುಗುತ್ತಿದ್ದವು. ಈ ಅಣ್ಣ ತಮ್ಮ ಊರಿನ ಗಡಿದಾಟಿ ಮತ್ತೊಂದು ಊರಿನತ್ತ ತೆರಳುವವರೆಗೂ ಆ ಹಳ್ಳಿಯ ಮಕ್ಕಳು ಸೈಕಲ್ ಹಿಂದಿರುತ್ತಿದ್ದರು. ಆತ ಒಂದು ರೀತಿ ಮಕ್ಕಳ ಸೆಳೆಯುವ ಕಿಂದರಿಜೋಗಿ!

ತುಕ್ಕು ಹಿಡಿದ ಕಬ್ಬಿಣದ ಡಬ್ಬ, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್‌ ಚೀಲ, ಖಾಲಿ ಸೀಸ, ಬರೆದು ಎಸೆದ ಪುಸ್ತಕಗಳನ್ನು ತಡಕಾಡಿ ಕೈಗೆತ್ತಿಕೊಂಡು ಸಾಬಣ್ಣನ ಸೈಕಲ್‌ ಮುಂದೆ ಮಕ್ಕಳು ಹಾಜರಿರುತ್ತಿದ್ದರು. ಸಾಬಣ್ಣ ಡಬ್ಬದ ಒಳಗಿಂದ ಎತ್ತಿ ಕೊಡುತ್ತಿದ್ದ ಬಣ್ಣ ಬಣ್ಣದ ಐಸ್‌ ಕ್ಯಾಂಡಿ ಚೀಪುತ್ತ ಓಣಿ ತುಂಬ ನಡೆದಾಡಿದರೆ ಆ ದಿನ ಸಂಪನ್ನ! ಒಬ್ಬರ ಐಸ್‌ ಇನ್ನೊಬ್ಬರು ಸವಿಯುತ್ತ ಯಾವ ಬಣ್ಣದ್ದು ಹೆಚ್ಚು ರುಚಿ ಎಂದು ತಾಳೆ ಮಾಡುತ್ತ ಮುಂದಿನ ಬಾರಿ ಇದೇ ಬಣ್ಣದ ಐಸ್‌ ಪಡೆಯಬೇಕು ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಿದ್ದರು. ಸಾಬಣ್ಣ ಹೊತ್ತು ತರುತ್ತಿದ್ದ ಆ ಪುಟ್ಟ ಡಬ್ಬ ಆಗಿನ ಮಕ್ಕಳ ಐಸ್‌ಕ್ರೀಂ ಪಾರ್ಲರ್‌ ಆಗಿತ್ತು.

ಹೌದಲ್ಲವೇ; ಇಂದಿನ ಯುವಕರು, ನಡುಪ್ರಾಯದವರ ಬಾಲ್ಯವನ್ನು ಒಮ್ಮೆ ಕೆಣಕಿ ನೋಡಿ, ಇವರಿಂದ ಈ ಸಾಬಣ್ಣ, ಬಾಬಣ್ಣನ ಜತೆಗಿನ ಒಡನಾಟದ ನೆನಪುಗಳು ಒತ್ತೊತ್ತಾಗಿಯೇ ಬಿಚ್ಚಿಕೊಳ್ಳುತ್ತವೆ. ತಾವು ಸವಿದ ರಸವತ್ತಾದ ಸಿಹಿಗಳ ಬಗ್ಗೆ ಇಂದಿನ ಮಕ್ಕಳು ಬಾಯಲ್ಲಿ ನೀರೂರಿಸುವಂತೆ ಮಾತುಗಳನ್ನು ಇಳಿಸುವರು. ಈ ಮಾತುಗಳಲ್ಲಿ ಅಂದಿನ ಮಕ್ಕಳ ಸ್ವಚ್ಛಂದ ವಿಹಾರದ ಜತೆಗೆ ಇಂದಿನ ಮಕ್ಕಳಿಗೆ ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕವಾಗಿ ವಿಧಿಸಿರುವ ಚೌಕಟ್ಟುಗಳು ಸಹ ಎದ್ದು ಕಾಣುತ್ತವೆ.

ಈ ಚೌಕಟ್ಟುಗಳು, ಕಟ್ಟಳೆಗಳ ಬಗ್ಗೆ ಬರೆದರೆ ಅದು ಇನ್ನೊಂದು ಕಥೆಯಾದೀತು. ಅದು ಆ ಕಡೆ ಇರಲಿ. ಹದಿನೈದು ಇಪ್ಪತ್ತು ವರ್ಷಗಳ ಹಿಂದಕ್ಕೆ ಹೊರಳಿದರೆ ಬಾಬಣ್ಣ, ಸಾಬಣ್ಣ ಹೊತ್ತು ತರುತ್ತಿದ್ದ ಐಸ್‌ಕ್ಯಾಂಡಿ, ನಿಂಬೆಹುಳಿ ಹೀಗೆ ನಾನಾ ಬಗೆಯ ರುಚಿಗಳು ಈಗಲೂ ಬಾಯಲ್ಲಿ ನೀರು ತರುತ್ತವೆ. ಅಂದಿನ ಮತ್ತು ಇಂದಿನ ಆಯ್ಕೆಗಳನ್ನು ಗಮನಿಸಿದರೆ ‌‘ಬದುಕು ಬದಲಾಗಿದೆ ಅಲ್ಲವೇ’ ಎನಿಸುವುದು ದಿಟ. ಈ ಬದಲಾವಣೆಗೆ ಜಾಗತೀಕರಣ, ಉದಾರೀಕರಣಗಳನ್ನು ಖಂಡಿತವಾಗಿಯೂ ತಳುಹು ಹಾಕಿ ನೋಡಬಹುದು! ಕಾರಣ ಮಾರುಕಟ್ಟೆ ಯುಗ.

ಆಗಿನ ಐಸ್‌ಗಳು ಈಗ ಮ್ಯಾಂಗೊ ಕ್ಯಾಂಡಿ, ಚಾಕ್ಲೆಟ್‌ ಕ್ಯಾಂಡಿ, ಸ್ಟ್ರಾಬೆರಿ ಹೀಗೆ ಬಗೆ ಬಗೆಯ ಫ್ಲೇವರ್‌ಗಳಲ್ಲಿ ಪ್ಲಾಸ್ಟಿಕ್‌ ಅಂಗಿ (ಪ್ಯಾಕ್‌) ಧರಿಸಿ ಮಾರುಕಟ್ಟೆ ಆವರಿಸಿವೆ. ಆಗ ಕಾಸಿಲ್ಲದೆ (ವಸ್ತು ವಿನಿಮಯಕ್ಕೆ ಆದ್ಯತೆ ಇತ್ತು) ಐಸ್‌ ಪಡೆಯುತ್ತಿದ್ದವರು ಈಗ ತಮ್ಮ ಮಕ್ಕಳಿಗೆ ನೂರಾರು ರೂಪಾಯಿ ತೆತ್ತು ಐಸ್‌ಕ್ರೀಂ ಕೊಡಿಸಬೇಕು.

ಆಧುನಿಕತೆಯ ಓಘದಲ್ಲಿ ಎಲ್ಲವೂ ಹೊಸ ಅವತಾರ ಪಡೆದಿವೆ. ಮಕ್ಕಳ ತಿನಿಸುಗಳನ್ನು ತುಸು ಹೆಚ್ಚೇ ಆವರಿಸಿಕೊಂಡಿದೆ ಅನ್ನಿ.
ಆಗಿನ ಚಿಲ್ಲರೆ ಅಂಗಡಿಗಳ ಡಬ್ಬಗಳಲ್ಲಿರುತ್ತಿದ್ದ ಮಕ್ಕಳ ತಿನಿಸುಗಳು ಈಗ ಬದಲಾಗಿವೆ. ಕೆಲವು ಹೊಸ ರೂಪ ಪಡೆದು ಹಣದ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಇನ್ನು ಕೆಲವು ತೆರೆ ಮರೆಗೆ ಸರಿದಿವೆ. ಹತ್ತು ಪೈಸೆ, ನಾಲ್ಕಾಣೆಯಲ್ಲಿ ತೃಪ್ತಿ ಪಡೆಯುತ್ತಿದ್ದ ಅಂದಿನ ಮಕ್ಕಳಿಗೂ, 40 ರೂಪಾಯಿಯ ‘ಕಿಂಡರ್‌ ಜಾಯ್’ ಬೇಕು ಎಂದು ಹಟ ಹಿಡಿಯುವ ಇಂದಿನ ಮಕ್ಕಳ ಆಯ್ಕೆ ನಡುವೆ ವ್ಯತ್ಯಾಸಗಳು ಎದ್ದು ಕಾಣುತ್ತಿವೆ.

ನಿಂಬೆ ಹುಳಿ, ಶುಂಠಿ ಪೆಪ್ಪರ್‌ಮಿಂಟ್‌, ರಸಗುಲ್ಲ, ಬೋಟಿ, ಗಟ್ಟಿ ಮೈಸೂರ್‌ಪಾಕ್‌, ಹಾಲಿನ ಬರ್ಫಿ, ಕಾಫಿ ಬೈಟ್‌ ಚಾಕ್ಲೆಟ್‌, ಮ್ಯಾಂಗೊ ಚಾಕ್ಲೆಟ್‌, ಕಡ್ಲೆ ಚಿಕ್ಕಿ, ಉಪ್ಪಿನ ಬಿಸ್ಕತ್‌, ಟೀ ಬಿಸ್ಕತ್‌, ಬೊಂಬಾಯಿ ಮಿಠಾಯಿ, ಮಂಡಕ್ಕಿ ಉಂಡೆ, ಶಾಮಾ ಚಾಕ್ಲೆಟ್‌, ಅಜ್ಜಿ ಕೂದಲು... ಇವೆಲ್ಲ ಚಿಲ್ಲರೆ ಅಂಗಡಿಗಳ ಮೆನು ಆಗಿದ್ದವು.

ಜಾತ್ರೆಯೊಂದರಲ್ಲಿ ಬೊಂಬಾಯಿ ಮಿಠಾಯಿ ಮಾರಾಟ

ಈಗ ಲೇಸ್‌, ಕುರ್‌ಕುರೆ, ಡೈರಿ ಮಿಲ್ಕ್‌, ಫೈವ್‌ ಸ್ಟಾರ್‌ ಚಾಕ್ಲೆಟ್‌, ಮಂಚ್‌, ಪೋಲೊ, ಜೆಮ್ಸ್‌, ಕಿಂಡರ್‌ ಜಾಯ್‌, ಮ್ಯಾಗಿ, ಡಾರ್ಕ್‌ ಫ್ಯಾಂಟಸಿ, ಗುಡ್ಡೆ, ಫಿಫ್ಟಿ– ಫಿಫ್ಟಿ, ಕ್ರ್ಯಾಕ್‌– ಜಾಕ್‌ ಹೀಗೆ ಬಗೆ ಬಗೆಯ ಬಿಸ್ಕತ್‌ಗಳು ಮಕ್ಕಳ ಆಯ್ಕೆಯನ್ನೂ
ವಿಸ್ತಾರಗೊಳಿಸಿವೆ.

ಆಗಿನ ಶುಂಠಿ ಪೇಪರ್‌ಮಿಂಟ್‌ ಜಾಗದಲ್ಲಿ ಪೋಲೊ ಬಂದಿದೆ. ರೂಪಾಯಿ ಅಗಲದಷ್ಟು ಇರುತ್ತಿದ್ದ ಶುಂಠಿ ಪೇಪರ್‌ಮಿಂಟ್‌ 25 ಪೈಸೆಗೆ ನಾಲ್ಕು ಸಿಗುತ್ತಿತ್ತು. ಈಗ ಅದೇ ಘಮಲನ್ನು ಉಳಿಸಿಕೊಂಡು ಆಕಾರ ಬದಲಿಸಿ ಮಧ್ಯಕ್ಕೆ ತೂತು ಮಾಡಿ ಗಾತ್ರ ಚಿಕ್ಕದು ಮಾಡಿ ಬೆಲೆ ಹೆಚ್ಚಿಸಲಾಗಿದೆ. ಎರಡು ರೂಪಾಯಿಗೆ ಒಂದು ಪೋಲೊ! ಆದರೆ, ಒಂದನ್ನೇ ಕೊಳ್ಳಲು ಅವಕಾಶವಿಲ್ಲ. ಐದು ಇಲ್ಲ ಹತ್ತು ಪೋಲೊಗಳು ಒಂದರಲ್ಲೇ ಪ್ಯಾಕ್‌ ಆಗಿರುತ್ತವೆ. ಒಂದು ಬೇಕಿದ್ದರೆ ಅಷ್ಟನ್ನೂ ಕೊಳ್ಳಬೇಕು. ಇದೇ ಅಲ್ಲವೇ ಕೊಳ್ಳುಬಾಕತನ ಮತ್ತು ಮಾರುಕಟ್ಟೆಯ ಮಂತ್ರ ಮತ್ತು ತಂತ್ರ. ಕೇವಲ ಒಂದು–ಎರಡು ಪೆಪ್ಪರ್‌ಮಿಂಟ್‌ ಖರೀದಿಸಿ ಚಪ್ಪರಿಸುತ್ತಿದ್ದವರಿಗೆ ಈಗ ಐದ್ಹತ್ತನ್ನು ಖರೀದಿಸಲೇಬೇಕು.

ಹಳ್ಳಿಯಿಂದ ನಗರ, ಪಟ್ಟಣ ಪ್ರದೇಶದ ನಿಲ್ದಾಣಕ್ಕೆ ಬಸ್‌ ಬಂತೆಂದರೆ ಸಾಕು ನಿಂಬೆ ಹುಳಿ ಪೆಪ್ಪರ್‌ಮಿಂಟ್‌ ಘಮಲು ಮಕ್ಕಳ ಮೂಗಿಗೆ ಬಹುಬೇಗ ಬಡಿಯುತ್ತಿತ್ತು. ‘ನಿಂಬೆ ಹುಳಿ... ನಿಂಬೆ ಹುಳಿ... ಟೈಮ್‌ ಪಾಸ್‌ ನಿಂಬೆ ಹುಳಿ...’ ಎನ್ನುತ್ತ ಬಸ್‌ ಹತ್ತುತ್ತಿದ್ದ ಹುಡುಗ ತಕ್ಕಷ್ಟು ವ್ಯಾಪಾರ ಕುದುರಿಸುತ್ತಿದ್ದ. ಬಸ್‌ನಲ್ಲಿ ಮಕ್ಕಳು ಹೆಚ್ಚಿದ್ದರೆ ವ್ಯಾಪಾರವೂ ಹೆಚ್ಚುತ್ತಿತ್ತು.

ಕಿರಾಣಿ ಅಂಗಡಿಯಲ್ಲಿ ಸಿಗುತ್ತಿದ್ದ ಗಟ್ಟಿ ಮೈಸೂರು ಪಾಕ್‌ ಬಹುತೇಕ ಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ಗಾಜಿನ ಅಥವಾ ಪ್ಲಾಸ್ಟಿಕ್‌ ಬಾಕ್ಸ್‌ ಒಳಗೆ ತಿಂಗಳುಗಟ್ಟಲೆ ಇಟ್ಟು ಮಾರಿದರೂ ಅವುಗಳ ಸ್ವಾದ ಕೆಡುತ್ತಿರಲಿಲ್ಲ. ಹೇರಳ ತುಪ್ಪ ಹಾಕಿ ತಯಾರಿಸುವ ಈಗಿನ ಮೈಸೂರು ಪಾಕ್‌ ಅನ್ನು ಹೆಚ್ಚೆಂದರೆ ವಾರದವರೆಗೆ ಇಡಬಹುದು. ತಿಂಗಳವರೆಗೂ ತನ್ನ ಸ್ವಾದ ಉಳಿಸಿಕೊಳ್ಳುತ್ತಿದ್ದ ಆಗಿನ ಮೈಸೂರು ಪಾಕ್‌ ಇಂದಿಗೂ ವಿಸ್ಮಯವೇ ಸರಿ.

ಇನ್ನು ಅಜ್ಜಿ ಕೂದಲು ಈಗಿನ ಸೋನ್‌ಪಪುಡಿಯ ರೂಪು ಪಡೆದಿದೆ. ಆ ಸಿಹಿ ಖಾದ್ಯ ಅಜ್ಜಿಯ ಕೂದಲಿನ ರೀತಿ ಎಸಳು ಎಸಳಾಗಿರುವ ಕಾರಣಕ್ಕೆ ‘ಅಜ್ಜಿ ಕೂದಲು’ ಎಂಬ ಹೆಸರು ಅಂಟಿರಬಹುದೇನೊ. ಈಗಲೂ ಕೆಲವರು ಬಾಕ್ಸ್‌ನಲ್ಲಿ ಬರುವ ಸೋನ್‌ಪಪುಡಿಗೆ ಅಜ್ಜಿ ಕೂದಲೆಂದೇ ಕರೆಯುವರು. ಏಲಕ್ಕಿ, ಆರೆಂಜ್‌, ಚಾಕ್ಲೆಟ್‌ ಫ್ಲೇವರ್‌ಗಳಲ್ಲಿ ಸೋನ್‌ಪಪುಡಿ ಮಕ್ಕಳನ್ನು ಆಕರ್ಷಿಸುತ್ತದೆ.

ಆಗ ಪ್ಯಾಕೆಟ್‌ನಲ್ಲಿ ಬರುತ್ತಿದ್ದ ಏಕೈಕ ಬಿಸ್ಕತ್‌ ಎಂದರೆ ‘ಪಾರ್ಲೆ–ಜಿ’. ತುಸು ಹಣಕಾಸಿನಲ್ಲಿ ಉತ್ತಮವಾಗಿದ್ದವರು ಮಕ್ಕಳಿಗೆ ಈ ಬಿಸ್ಕತ್‌ಗಳನ್ನು ಕೊಡಿಸುತ್ತಿದ್ದರು. ಆಗ ಓಪನ್‌ ಬಿಸ್ಕತ್‌ಗಳ (ಪ್ಯಾಕೆಟ್‌ ಇಲ್ಲದ) ಕಾರುಬಾರು ಹೆಚ್ಚಿತ್ತು. ಉಪ್ಪಿನ ಬಿಸ್ಕತ್‌, ಖಾರದ ಬಿಸ್ಕತ್‌, ಟೀ ಕುಡಿಯುವಾಗ ಸವಿಯಲೆಂದೇ ಟೀ ಬಿಸ್ಕತ್‌, ಬೆಣ್ಣೆ ಬಿಸ್ಕತ್‌ ಹೀಗೆ ಹಲವು ಬಗೆಯ ಬಿಸ್ಕತ್‌ಗಳು ಚಿಲ್ಲರೆ ಅಂಗಡಿಗಳ ಡಬ್ಬಗಳಲ್ಲಿ ಹಾಜರಿರುತ್ತಿದ್ದವು. ಆದರೆ, ಈಗ ಪ್ಯಾಕ್‌ನಲ್ಲಿ ಇಲ್ಲದ ಬಿಸ್ಕತ್ ಇಲ್ಲವೇ ಇಲ್ಲ. ಒಂದು ವೇಳೆ ಪ್ಯಾಕ್‌ ಆಗದ ಬಿಸ್ಕತ್ ಬಂದರೆ ಅದು ಗುಣಮಟ್ಟದಲ್ಲ ಎನ್ನುವ ಷರಾ!

ಆಗಿನ ಬೆಣ್ಣೆ ಬಿಸ್ಕತ್‌ನ ಸ್ವಾದ ಬಲ್ಲವರೇ ಬಲ್ಲರು. ಈಗೇನಿದ್ದರೂ ತಿಂದ ಬಾಯಿ, ನಾಲಗೆ ಕಪ್ಪು ಮಾಡುವ ಡಾರ್ಕ್‌ ಫ್ಯಾಂಟಸಿಯೇ ಮಕ್ಕಳ ಫೇವರಿಟ್‌. 5 ರೂಪಾಯಿ ಕೊಟ್ಟರೆ ಒಂದಿಡೀ ಪಾರ್ಲೆ–ಜಿ ಬಿಸ್ಕತ್‌ ಪ್ಯಾಕ್‌ ಕೈ ಸೇರುತ್ತಿತ್ತು. ಸ್ನೇಹಿತರೆಲ್ಲ ಹಂಚಿಕೊಂಡು ತಿನ್ನುತ್ತಿದ್ದರು. ಈಗ ಐದು ರೂಪಾಯಿಗೆ ಒಂದೇ ಬಿಸ್ಕೆಟ್‌ (ಡಾರ್ಕ್‌ ಫ್ಯಾಂಟಸಿ). ಇನ್ನೊಬ್ಬರು ಜತೆಯಲ್ಲಿದ್ದರೆ ಮತ್ತೆ 5 ರೂಪಾಯಿ ತೆರಬೇಕು.

ಬೊಂಬಾಯಿ ಮಿಠಾಯಿ ಮಕ್ಕಳ ಆಲ್‌ ಟೈಮ್‌ ಫೇವರಿಟ್‌. ಜಾತ್ರೆ ಬಂತೆಂದರೆ ಸಾಕು ಬೊಂಬಾಯಿ ಮಿಠಾಯಿವಾಲಾಗಳು ಕೋಲಿನ ತುಂಬ ಮಿಠಾಯಿ ಸಿಕ್ಕಿಸಿಕೊಂಡು ಹಾಜರಿ ಹಾಕುತ್ತಿದ್ದರು. ಸೈಕಲ್‌ ತುಂಬ ಪಾಲಿಥಿನ್‌ ಚೀಲದೊಳಗೆ ತುಂಬಿದ್ದ ಬೊಂಬಾಯಿ ಮಿಠಾಯಿಗಳೇ ರಾರಾಜಿಸುತ್ತಿದ್ದವು. ನೋಡಲು ಗುಲಾಬಿ ಬಣ್ಣದ ಹತ್ತಿಯಂತೆ ಕಾಣುವ ಮಿಠಾಯಿ ಬಾಯಲ್ಲಿಟ್ಟರೆ ಕರಗಿ ನಾಲಿಗೆಗೆ ಸಿಹಿಯ ರುಚಿ ಕೊಡುತ್ತದೆ. ಮಿಠಾಯಿ ತಿಂದು ಬಾಯಿ ಗುಲಾಬಿ ಬಣ್ಣ ಮಾಡಿಕೊಂಡು ಒಬ್ಬರಿಗೊಬ್ಬರು ನಾಲಿಗೆ ಹಿರಿದು ನೋಡಿಕೊಳ್ಳುವುದೆಂದರೆ ಅದೇನೋ ಹಿಗ್ಗು. ಯಾರದ್ದು ಹೆಚ್ಚು ಕೆಂಪಾಗಿದೆ ಎನ್ನುವ ಸ್ಪರ್ಧೆ ಕೂಡ ಮಕ್ಕಳಲ್ಲಿ ಅನೌಪಚಾರಿಕವಾಗಿ ಏರ್ಪಡುತ್ತಿತ್ತು. ಈಗಲೂ ಹಳ್ಳಿಗಳಲ್ಲಿ ಮಿಠಾಯಿವಾಲಾಗಳು ಸೈಕಲ್‌ ಹತ್ತಿ ಸುತ್ತುತ್ತಾರೆ. ಆದರೆ, ಈಗ
ಮಕ್ಕಳಿಗಿರುವ ಆಯ್ಕೆಗಳು ಹಲವಾರು. ಹಾಗಾಗಿ, ಬೊಂಬಾಯಿ ಮಿಠಾಯಿ ಮೆಲ್ಲಗೆ ಮೂಲೆಗೆ ಸರಿಯುತ್ತಿದೆ. ಮುಂಬೈನಿಂದ ಬೊಂಬಾಯಿ ಮಿಠಾಯಿ ತಯಾರಿಸುವ ಮೆಷಿನ್‌ ಬಂದದ್ದರಿಂದ ಅದಕ್ಕೆ ಆ ಹೆಸರು ಅಂಟಿಕೊಂಡಿರಬಹುದು.

‘ಗಿರ್‌ಗಿಟ್ಲೆ’ ಎನ್ನುವ ತಿನಿಸು ಈಗಲೂ ಸೋಜಿಗವೇ. ಹತ್ತು ಪೈಸೆಯಷ್ಟು ಅಗಲವಿರುತ್ತಿದ್ದ ಗಿರ್‌ಗಿಟ್ಲೆಗೆ ದಾರ ಜತೆಯಾಗಿರುತ್ತಿತ್ತು. ಎರಡೂ ಕೈಗಳಿಂದ ದಾರವನ್ನು ಹಿಡಿದು ಮಧ್ಯದಲ್ಲಿ ಗಿರ್‌ಗಿಟ್ಲೆ ಆಡಿಸುವುದೇ ಸಂಭ್ರಮ. ಆಗಾಗ ಗಿರ್‌ಗಿಟ್ಲೆಯನ್ನು ಚೀಪುತ್ತ ದಾರದೊಂದಿಗೆ ಆಟ ಆಡುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ತಿನಿಸು + ಆಟ ಎರಡೂ ಜತೆಯಾಗಿ ಸಿಗುತ್ತಿದ್ದುದರಿಂದ ಮಕ್ಕಳ ಮನ ಗೆದ್ದಿತ್ತು ಗಿರ್‌ಗಿಟ್ಲೆ. ಗುಲಾಬಿ, ಹಳದಿ, ನೀಲಿ, ಕೆಂಪು ಹೀಗೆ ಬಣ್ಣ ಬಣ್ಣದ ಗಿರ್‌ಗಿಟ್ಲೆ ಸಿಗುತ್ತಿದ್ದವು. ಈಗ ಅವುಗಳ ಕುರುಹೂ ಇಲ್ಲ.

ಇನ್ನು ಕಡ್ಲೆ ಚಿಕ್ಕಿ ಹಲವು ರೂಪ ಪಡೆದು ಇಂದಿನ ಮಕ್ಕಳ ಮನಸನ್ನೂ ಕದ್ದಿದೆ. ಶೇಂಗಾ ಹಾಗೂ ಬೆಲ್ಲದಲ್ಲಿ ತಯಾರಾಗುವ ಕಡ್ಲೆ ಚಿಕ್ಕಿಯ ಆಗಿನ ರೂಪವೇ ಬೇರೆ. ಶೇಂಗಾವನ್ನು ಎರಡು ಹೋಳುಗಳನ್ನಾಗಿ ಮಾಡಲಾಗುತ್ತಿತ್ತಷ್ಟೇ. ಅದಕ್ಕೆ ಹದವಾದ ಬೆಲ್ಲದ ಪಾಕ ಬೆರೆಸಿ ಚಿಕ್ಕಿ ತಯಾರಿಸಲಾಗುತ್ತಿತ್ತು. ಈಗ ಶೇಂಗಾ ಹುಡಿ ಮಾಡಿಕೊಂಡು ಚಿಕ್ಕಿ ತಯಾರಿಸಲಾಗುತ್ತದೆ. ಕೊಬ್ಬರಿ ಚಿಕ್ಕಿ, ಎಳ್ಳಿನ ಚಿಕ್ಕಿಗಳು ಶೇಂಗಾ ಚಿಕ್ಕಿಯ ಕವಲುಗಳು. ಪ್ಲಾಸ್ಟಿಕ್‌ ಕವರ್‌ನಲ್ಲಿ ಪ್ಯಾಕ್‌ ಆಗಿ ಬರುವ ಈ ‘ಚಿಕ್ಕಿ’ಗಳು ಬ್ರಾಂಡ್‌ ರೂಪ ಪಡೆದಿವೆ.

ಈಗಿನ ಮಕ್ಕಳ ಬಹು ಆಕರ್ಷಣೆಯ ಕುರ್‌ಕುರೆ, ಲೇಸ್‌ಗಳು ಆಗಿನ ‘ಬೋಟಿ’ಯ ದಾಯಾದಿಗಳೆಂದೇ ಹೇಳಬಹುದು. ಹತ್ತು ಪೈಸೆಗೆ ಐದು ಬೋಟಿ ಧಾರಾಳವಾಗಿ ಸಿಗುತ್ತಿದ್ದವು. ಬೆರಳ ತುದಿಗೆ ಬೋಟಿ ಸಿಕ್ಕಿಸಿಕೊಂಡು ತಿನ್ನುವುದೇ ಮಜಾ. ಈಗಿನ ಅಮ್ಮಂದಿರ ರೀತಿ ಕೈ ತೊಳೆದು ತಿನ್ನು ಎನ್ನುವ ಹಂಗು ಆಗಿನ ಮಕ್ಕಳಿಗೆ ಇರಲಿಲ್ಲ. ಯಾವಾಗ ಕೈತೊಳೆಯುತ್ತಿದ್ದೆವೊ ನೆನಪೂ ಇರುತ್ತಿರಲಿಲ್ಲ. ಬೋಟಿಯ ಪ್ರೇರಣೆಯಿಂದಲೇ ಕುರ್‌ಕುರೆ, ಲೇಸ್‌ ಹುಟ್ಟಿಕೊಂಡಿವೆ. ಇವುಗಳಲ್ಲಿ ಪ್ಲಾಸ್ಟಿಕ್‌ ಅಂಶ ಇದ್ದು ಮಕ್ಕಳ ಆರೋಗ್ಯಕ್ಕೆ ಅಪಾಯ ಎನ್ನುತ್ತಾರೆ ಮಕ್ಕಳ ತಜ್ಞರು. ‌

ಮಕ್ಕಳ ತಿನಿಸುಗಳ ದೊಡ್ಡ ದೊಡ್ಡ ಉದ್ಯಮಗಳೇ ಈಗ ಉದಯಿಸಿವೆ. ಎಲ್ಲ ಮಕ್ಕಳೂ ಹೆಚ್ಚು ಇಷ್ಟಪಟ್ಟು ತಿನ್ನುವ ಚಾಕೊಲೆಟ್‌ ತನ್ನ ಬಾಹುಗಳನ್ನು ಬಹು ವಿಸ್ತಾರವಾಗೇ ಚಾಚಿದೆ. ಕ್ಯಾಡ್‌ಬರಿ ಕಂಪನಿ ಚಾಕೊಲೆಟ್‌ನ ನೂರಾರು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಮಕ್ಕಳ ಆಕರ್ಷಿಸಲು ಹೊಸ ಹೊಸ ರೂಪ ಪಡೆದು ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ.

‘ಕಿಂಡರ್‌ ಜಾಯ್‌’ ಎಲ್ಲ ಮಕ್ಕಳನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಮಕ್ಕಳ ಇಷ್ಟದ ತಿನಿಸಾಗಿ ಕಿಂಡರ್‌ ಜಾಯ್‌ ಮಾರ್ಪಟ್ಟಿತು. ಬಹುಶಃ ಇಷ್ಟು ವೇಗವಾಗಿ ಬೇರಾವ ತಿನಿಸೂ ಬೆಳದಿರಲಿಕ್ಕಿಲ್ಲ. ಮೊಟ್ಟೆಯಾಕಾರದ ಈ ಉತ್ಪನ್ನವನ್ನು ಇಟಲಿಯ ಮಿಠಾಯಿ ಕಂಪನಿ ಫೆರೆರೊ ಮಾರುಕಟ್ಟೆಗೆ ಪರಿಚಯಿಸಿತು. ಕಂಪನಿಯ ನಿರೀಕ್ಷೆಗೂ ಮೀರಿ ಕಿಂಡರ್‌ ಜಾಯ್‌ ಮಾರಾಟವಾಗುತ್ತಿದೆ. ‌ಪ್ಲಾಸ್ಟಿಕ್‌ ಮೊಟ್ಟೆಯ ಅರ್ಧ ಭಾಗದಲ್ಲಿ ಚಾಕೊಲೆಟ್‌ ಇನ್ನರ್ಧ ಭಾಗದಲ್ಲಿ ಆಟಿಕೆ ಇರುತ್ತದೆ. ಈ ಆಟಿಕೆಗೋಸ್ಕರ ಮಕ್ಕಳು ಅದನ್ನು ಕೊಳ್ಳುತ್ತಾರೆ. ಅದಕ್ಕೆ ಬರೋಬ್ಬರಿ 40 ರೂಪಾಯಿ ತೆರಬೇಕು. ಈಗೀಗ ‘ಕಿಂಡರ್‌ ಜಾಯ್‌ ಬಾಯ್‌– ಗರ್ಲ್‌’ ಎಂದು ಪ್ರತ್ಯೇಕ ಉತ್ಪನ್ನಗಳು ಹುಟ್ಟಿಕೊಂಡಿವೆ. ಈ ಮೂಲಕ ಸದ್ದಿಲ್ಲದೆ ಚಿಕ್ಕ ಮಕ್ಕಳಲ್ಲೂ ಲಿಂಗ ಅಸಮಾನತೆಯನ್ನು ಇದು ಹುಟ್ಟು ಹಾಕುತ್ತಿದೆ ಎಂದು ವಾದಿಸುತ್ತಾರೆ ಹಲವರು.

ಬಹುತೇಕ ಮಕ್ಕಳಿಗೆ ಮೂರು ಹೊತ್ತು ಊಟದ ಜತೆಗೆ ಚಾಕೊಲೆಟ್‌ ಇರಲೇಬೇಕು. ಅದಿಲ್ಲದಿದ್ದರೆ ಊಟ ಮಾಡುವುದಿಲ್ಲ ಎಂದು ಹಟ ಹಿಡಿಯುತ್ತವೆ. ಆದರೆ ಮಕ್ಕಳ ಆರೋಗ್ಯಕ್ಕೆ ಚಾಕೊಲೆಟ್‌ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಗೊಂದಲ ಪೋಷಕರದ್ದು.

‘ಊಟಕ್ಕೆ ಉಪ್ಪಿನ ಕಾಯಿ ಇದ್ದರೆ ಚೆನ್ನ. ಉಪ್ಪಿನ ಕಾಯೇ ಊಟವಾದರೆ ರುಚಿಸುವುದಿಲ್ಲ. ಹಾಗೆಯೇ ಚಾಕೊಲೆಟ್‌ ಕೂಡ. ಚಾಕೊಲೆಟ್‌ನಲ್ಲಿ ಪ್ರೊಟೀನ್‌ ಅಂಶ ಇರುತ್ತದೆ. ಆದರೆ, ಅದು ಮಿತವಾಗಿ ಸವಿದರೆ ಮಕ್ಕಳ ಆರೋಗ್ಯಕ್ಕೆ ಉತ್ತಮ. ಊಟದ ಬದಲು ಚಾಕೊಲೆಟ್‌ ತಿಂದರೆ ದುಷ್ಪರಿಣಾಮವೇ ಹೆಚ್ಚು. ಚಾಕೊಲೆಟ್‌ ತಯಾರಿಗೆ ಕೊಕೊ ಹಾಗೂ ಹೇರಳವಾಗಿ ಸಕ್ಕರೆ ಬಳಸಲಾಗುತ್ತದೆ. ಇವೆರಡೂ ನಾಲಿಗೆಗೆ ರುಚಿ ನೀಡುತ್ತವೆ. ಆದರೆ ಆರೋಗ್ಯಕ್ಕೆ ರುಚಿಸುವುದಿಲ್ಲ. ಅಲ್ಲದೆ ಅತಿಯಾದ ಬಿಸ್ಕತ್ ಸೇವನೆಯೂ ಒಳ್ಳೆಯದಲ್ಲ. ಕೆಲವರು ಮಕ್ಕಳು ಹಸಿವು ಎಂದರೆ ಬಿಸ್ಕತ್ ಕೊಡುತ್ತಾರೆ. ಈ ರೂಢಿ ಆರೋಗ್ಯಕರವಲ್ಲ’ ಎನ್ನುವರು ತುಮಕೂರಿನ ಮಕ್ಕಳ ತಜ್ಞೆ ಜಿ.ಸಿ.ಮುಕ್ತಾಂಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT