ಮಂಗಳವಾರ, ಮಾರ್ಚ್ 28, 2023
23 °C

PV Web Exclusive | ಹೇಳ್‌ ಗುರು: ನಾವೂ ನಿಮ್‌ ಜಾತಿನೇ...

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಕ್ಯಾಂಪ್ ಕ್ಲೋಸ್. ಚಿಕ್ಕಂದಿನಲ್ಲಿ ಇನ್ನಿಲ್ಲದ ಉತ್ಸಾಹವನ್ನು, ಹಲವು ನಿರೀಕ್ಷೆಗಳನ್ನು ನನ್ನಲ್ಲಿ ಹುಟ್ಟಿಸುತ್ತಿದ್ದ ಪದ ಇದು. ಹೊಸ ಊರು, ಹೊಸ ಗೆಳೆಯರು, ಹೊಸ ಮನೆ, ಹೊಸ ಜನರನ್ನ ನೋಡೋ ಕುತೂಹಲ ನನಗೆ. ಮೂರು-ನಾಲ್ಕು ತಿಂಗಳಿಗೊಮ್ಮೆ ನನಗೆ ಪ್ರಾಪ್ತವಾಗುತ್ತಿದ್ದ ಸಂಭ್ರಮವಿದು. ಅಂದ್ರೆ ನೂರು, ನೂರಿಪ್ಪತ್ತು ದಿನಗಳಿಗೊಂದು ಕ್ಯಾಂಪ್ ಚೇಂಜ್ !

ಅಪ್ಪ ಹಾರ್ಮೋನಿಯಂ ಮೇಷ್ಟ್ರು. ಅಮ್ಮ ರಂಗಭೂಮಿ ಕಲಾವಿದೆ. ನಾಟಕದ ಕಂಪನಿಯ ಕ್ಯಾಂಪ್‌ ಎಲ್ಲೆಲ್ಲಿ ಹಾಕುತ್ತಿದ್ರೋ ಅತ್ತ ಸಾಗುತ್ತಿತ್ತು ನಮ್ಮ ಪಯಣ. ಹುಟ್ಟಿನಿಂದ ಹನ್ನೆರಡು–ಹದಿಮೂರನೇ ವಯಸ್ಸಿನವರೆಗೆ ಇಂಥ ಹಲವು ಕ್ಯಾಂಪ್ ಚೇಂಜು- ಕ್ಲೋಸುಗಳಿಗೆ ನಾನು ಸಾಕ್ಷಿಯಾಗುತ್ತಿದ್ದೆ.

ತಗಡಿನ ಶೀಟುಗಳು, ಕಂಬ-ಬೊಂಬುಗಳು, ನಾಟಕದ ಪರದೆಗಳು, ಸೌಂಡ್ ಸಿಸ್ಟಮ್, ಚೇರುಗಳು ಹಾಗೂ ನಮ್ಮಂತೆ ಉಳಿದ ಫ್ಯಾಮಿಲಿಗಳ ಲಗೇಜ್‌ಗಳನ್ನೂ ಹೊತ್ತುಕೊಂಡು ಹೊರಡುತ್ತಿದ್ದವು ದೊಡ್ಡ ಲಾರಿಗಳು. ಅಷ್ಟೆಲ್ಲ ಸಾಮಾನು-ಸರಂಜಾಮು ಜೊತೆಗೆ, ನಮ್ಮ ಮನೆಯ ಅದೆಷ್ಟು ವಸ್ತುಗಳು ಹಾಳಾಗ್ತಾವೋ, ಮತ್ತೆ ಅವುಗಳನ್ನ ಸರಿ ಮಾಡಿಸೋಕೆ, ಹೊಸದು ತಗೋಳೋಕೆ ದುಡ್ಡು ಹೇಗೆ ಹೊಂದಿಸಬೇಕೋ ಎಂಬ ಚಿಂತೆ ಅಮ್ಮನದ್ದಾಗಿದ್ದರೆ, ಲಾರಿ ಡ್ರೈವರ್ ಪಕ್ಕದ ಸೀಟಿನಲ್ಲಿ ಜಾಗ ಹಿಡಿಯೋದು ನನ್ನ ಏಕಮಾತ್ರ ಗುರಿಯಾಗಿರ್ತಿತ್ತು.

ಹೊಸ ಊರಿನಲ್ಲಿ ಇಳಿಯುತ್ತಿದ್ದಂತೆ ಅಪ್ಪ-ಅಮ್ಮನಿಗೆ ಎದುರಾಗುತ್ತಿದ್ದ ಮೊದಲ ಟಾಸ್ಕ್ ಮನೆ ಹುಡುಕುವುದು. ವರ್ಷಕ್ಕೆ ಮೂರು-ನಾಲ್ಕು ಬಾರಿ ಈ ಸವಾಲು ಎದುರಾಗುತ್ತಿದ್ದುದರಿಂದ ‘ಮನೆ ಸರ್ಚಿಂಗ್’ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೇನೋ ಎಂಬಂತೆ ಇಬ್ಬರೂ ಫೀಲ್ಡಿಗಿಳಿಯುತ್ತಿದ್ದರು. ಖಾಲಿ ಮನೆ ಇರುವ ರಸ್ತೆಯಲ್ಲಿನ ಹೋಟೆಲೋ, ಅಂಗಡಿಗೋ ನುಗ್ಗುತ್ತಿದ್ದರು. ಆ ಮನೆಯವರು ಹೇಗೆ, ಅವರು ಯಾವ ಜಾತಿ ಅನ್ನೋದನ್ನು ಉಪಾಯವಾಗಿ ತಿಳಿದುಕೊಳ್ಳುತ್ತಿದ್ದರು‌.

‘ನೀವು ಯಾವ ಮಂದಿ’ ಎನ್ನುತ್ತಲೇ ಮಾತು ಪ್ರಾರಂಭಿಸುತ್ತಿದ್ದರು ಮನೆ ಮಾಲೀಕರು. (ಇದರಲ್ಲಿ ಕೆಲವು ಘಟನೆಗಳು ನನ್ನ ಅನುಭವಕ್ಕೆ ಬಂದಿದ್ದರೆ, ಹಲವು ಘಟನೆಗಳನ್ನು ಅಪ್ಪ-ಅಮ್ಮ ಆಗಾಗ ಹೇಳುತ್ತಿದ್ದುದು ಇನ್ನೂ ನೆನಪಿದೆ). ಅವರದು ಯಾವ ಜಾತಿ ಎಂದು ಮೊದಲೇ ತಿಳಿದುಕೊಂಡಿದ್ದರಿಂದ ಅದೇ ಜಾತಿ ಹೆಸರು ಹೇಳುತ್ತಿದ್ದೆವು. ಥಟ್ಟನೆ, ‘ನೀವು ಯಾವ ಕ್ಯಾಸ್ಟ್’ ಎಂದೂ ಅಪ್ಪ ಆ ಮನೆಯವರನ್ನು ಕೇಳುತ್ತಿದ್ದರು. ಅವರು ಉತ್ತರ ಕೊಡ್ತಿದ್ದಂತೆ, ‘ಅಯ್ಯೋ ಹೌದಾ... ನಾವೂ ನಿಮ್ ಮಂದಿನೇ ಹೇಳ್ರೀ...‌. ಛಲೋ ಆಯ್ತಲ್ಲ’ ಅಂತಿದ್ರು. ಅಲ್ಲಿಗೆ ಮನೆ ಫಿಕ್ಸ್ ಆಗೋದು.

ಅಪ್ಪ ಸಸ್ಯಾಹಾರಿ, ಅಮ್ಮ ಮಾಂಸಾಹಾರಿ ಆಗಿದ್ರಿಂದ ಯಾವುದೇ ಮನೆಯ, ಯಾವುದೇ ಆಚಾರ-ವಿಚಾರದ, ಯಾವುದೇ ಸಂಸ್ಕೃತಿಗೆ ನಾವು ತಕ್ಷಣ ಹೊಂದಿಕೊಂಡು ಬಿಡುತ್ತಿದ್ದೆವು. ಇಲ್ಲಿ ನಾವು ‘ಜಾತ್ಯತೀತರು’ ಎಂದು ಬಿಂಬಿಸಿಕೊಳ್ಳುವುದಕ್ಕಿಂತ, ಆ ಪರಿಸ್ಥಿತಿ, ಸನ್ನಿವೇಶ ಮತ್ತು ಅನಿವಾರ್ಯಗಳು ನಮ್ಮ ಬದುಕನ್ನು ಹಾಗೆ ಕರೆದುಕೊಂಡು ಹೋದವು.

ರಂಗಭೂಮಿ ಕನ್ನಡ ನಮ್ಮದಾಗಿತ್ತು. ಅಂದ್ರೆ ಗ್ರಾಂಥಿಕ ರೂಪದ ಕನ್ನಡ ಅದಾಗಿದ್ದರಿಂದ ಯಾವುದೇ ಊರಿನ ಕನ್ನಡದ ಶೈಲಿಗೂ ಒಗ್ಗಿಕೊಂಡು ಬಿಡುತ್ತಿದ್ದೆವು. ಹದಿಮೂರನೇ ವರ್ಷದವರೆಗೆ ಶಾಲೆಯ ಮೆಟ್ಟಿಲು ಹತ್ತದ ನಾನು, ಕನ್ನಡದ ಒತ್ತಕ್ಷರಗಳನ್ನು, ಕೊಂಬು-ದೀರ್ಘಗಳನ್ನು ಕಲಿತಿದ್ದು ಅಪ್ಪ ಬರೆಯುತ್ತಿದ್ದ ನಾಟಕದ ಹೆಸರುಗಳ ಬೋರ್ಡ್‌ಗಳನ್ನು ನೋಡಿ! ಹಾರ್ಮೋನಿಯಂ ಮೇಷ್ಟ್ರಾಗಿದ್ದರೂ, ‘ಸೈಡ್ ಇನ್‌ಕಮ್‌’ಗಾಗಿ ಬೋರ್ಡ್ ಬರೆಯುತ್ತಿದ್ದರು ಅಪ್ಪ. ನೇರವಾಗಿ ನಾಲ್ಕೈದು ಶ್ಲೋಕಗಳನ್ನು, ನಾಟಕದ ಐದಾರು ಡೈಲಾಗುಗಳನ್ನು, ಏಳೆಂಟು ಹಾಡುಗಳನ್ನು ಬರೆಸಿ, ಓದಿಸುವ ಮೂಲಕ ತೀರಾ ‘ಅಸಾಂಪ್ರದಾಯಿಕ’ವಾಗಿ ನನಗೆ ಕನ್ನಡ ಕಲಿಸಿದರು ನನ್ನ ಡ್ಯಾಡಿ.‌ ಅವರೇ ನನ್ನ ಮೊದಲ ಗುರು.

ಮೊಬೈಲ್ ಆಫ್ ಆಗಿ ಒಂದು ಕ್ಲಾಸ್ ಮಿಸ್ ಆದ್ರೆ, ನೆಟ್‌ವರ್ಕ್‌ ಪ್ರಾಬ್ಲಂ ಆಗಿ ಟೀಚರ್ಸ್ ಧ್ವನಿ ಸರಿಯಾಗಿ ಕೇಳಿಸದಿದ್ರೆ ‘ಅಪ್ಪಾ, ನಂದೊಂದು ಕ್ಲಾಸ್ ಹೋಯ್ತು, ಮಿಸ್ ಹೇಳ್ತಿರೋದೇನೂ ಕೇಳಿಸ್ತಿಲ್ಲ...’ ಎಂದು ಬೆಟ್ಟವೇ ತಲೆ ಮೇಲೆ ಬಿದ್ದಂತೆ ಓಡಿ ಬರುವ ಮಗಳನ್ನು ನೋಡಿದಾಗಲೆಲ್ಲ, ಸೈಡ್‌ವಿಂಗ್‌ನಲ್ಲಿ, ರಂಗಪಾರ್ಟಿಯಲ್ಲಿ (ನಟ-ನಟಿಯರು ಬಣ್ಣ ಹಚ್ಚಿಕೊಳ್ಳುವ ಸ್ಥಳ) ಮಲಗಿ, ನಾಟಕ ಮುಗಿದ ಮೇಲೆ ಅಮ್ಮನ ಸೊಂಟದ ಮೇಲೆಯೋ, ಅಪ್ಪನ ಹೆಗಲ ಮೇಲೆಯೋ ಕುಳಿತು, ಮಧ್ಯರಾತ್ರಿಯಲ್ಲಿ ಮನೆ ಸೇರುತ್ತಿದ್ದ ನನ್ನ ಬಾಲ್ಯ ನೆನಪಿಗೆ ಬರುತ್ತದೆ.

ನನ್ನ ವಯಸ್ಸಿನವರು ಸ್ಲೇಟು, ಬಳಪ ಹಿಡಿದು ಶಾಲೆಗೆ ಹೋಗುತ್ತಿದ್ದಾಗ, ‘‘ಮರೆಯದಿರಿ, ಮರೆತು ನಿರಾಶರಾಗದಿರಿ, ‘ಭಾಗ್ಯ ಬಂತು, ಬುದ್ಧಿ ಹೋಯ್ತು’ ಸಾಮಾಜಿಕ ನಾಟಕ, ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುವ ನಾಟಕ.. ಶ್ರೀ ಕುಮಾರೇಶ್ವರ ನಾಟ್ಯಸಂಘ ಚಿತ್ತರಗಿ ಅರ್ಪಿಸುವ ‘ಭಾಗ್ಯ ಬಂತು, ಬುದ್ಧಿ ಹೋಯ್ತು’’ ಎಂದು ಅನೌನ್ಸ್ ಮಾಡುತ್ತಾ ಟಾಂಗಾದಲ್ಲಿ ಹೋಗುತ್ತಿದ್ದ ನನ್ನ ಬಾಲ್ಯ ನೆನಪಿಗೆ ಬರುತ್ತದೆ ಮತ್ತು ನನ್ನ ಆ ಬಾಲ್ಯವೇ ಎಷ್ಟೊಂದು ‘ಶ್ರೀಮಂತವಾಗಿತ್ತು’ ಎನಿಸುತ್ತದೆ.

ನನ್ನಕ್ಕನೊಂದಿಗೆ ಅಕ್ಕನಂತೆಯೇ ಹೊಸ ಬಟ್ಟೆ ಕೊಡಿಸಿ ರಾಖಿ ಕಟ್ಟುತ್ತಿದ್ದ ಬೇಗಂ ಅಕ್ಕ, ಹಬ್ಬಕ್ಕೆ ಚೋಂಗೆ ತಂದು ಕೊಡುತ್ತಿದ್ದ ಬಾನು ಅಕ್ಕ, ಬೀಡಿ ತಂದು ಕೊಟ್ಟಾಗಲೆಲ್ಲ ಕೈಗೆ ಹತ್ತಿಪ್ಪತ್ತು ಪೈಸೆ ಕೊಡುತ್ತಿದ್ದ ಸಂತೋಷಣ್ಣ ಎಲ್ಲ ನೆನಪಿಗೆ ಬರುತ್ತಾರೆ. ಐದಾರು ಹೊಳೆಗಳು, ನೂರೆಂಟು ಕೆರೆಗಳಲ್ಲಿ ಆಡಿದ ಆಟ, ಗೋಕರ್ಣ, ಯಲ್ಲಾಪುರದ ದಪ್ಪಕ್ಕಿ ಊಟ, ಗೋಕಾಕದ ಕರದಂಟು, ರೋಣ, ಪಾರಿಶವಾಡ, ನಾಲತ್ತವಾಡ, ಗೊಡಚಿಯ ಜಾತ್ರೆಗಳು ಕಣ್ಮುಂದೆ ಬರುತ್ತವೆ. ಹೀಗೆ ಇದೆಲ್ಲ ನೆನಪಾದಾಗೆಲ್ಲ ಮತ್ತೆ ಮತ್ತೆ ಅನಿಸುತ್ತೆ, ನನ್ನ‌ ಬಾಲ್ಯ ಎಷ್ಟೊಂದು ವಿಭಿನ್ನವಾಗಿತ್ತು, ಶ್ರೀಮಂತವಾಗಿತ್ತು !

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು