ಶನಿವಾರ, ಜುಲೈ 2, 2022
22 °C

‘ನೀವ್‌ ಮಕ್ಕಳ ಸಾಹಿತ್ಯ ಸಮ್ಮೇಳನ’ ನಾಳೆಯಿಂದ

ಬೆನಿಟಾ ಚಾಕೊ Updated:

ಅಕ್ಷರ ಗಾತ್ರ : | |

‘ಓದಲು ಕಲಿ, ತಿಳಿಯಲು ಓದು’– ಮಕ್ಕಳನ್ನು ಓದುವತ್ತ ಸೆಳೆಯುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಕಳೆದ ವರ್ಷ ಆರಂಭವಾದುದು ‘ನೀವ್‌ ಲಿಟರೇಚರ್‌ ಫೆಸ್ಟಿವಲ್‌’ (ನೀವ್‌ ಸಾಹಿತ್ಯ ಸಮ್ಮೇಳನ). ಓದುವಿಕೆ ಮತ್ತು ಮಕ್ಕಳು ಎಂಬ ಪರಿಕಲ್ಪನೆಯನ್ನು ನಾನಾ ಆಯಾಮಗಳಿಗೆ ವಿಸ್ತರಿಸಿಕೊಂಡಿದ್ದ ಈ ಸಮ್ಮೇಳನ ಯಶಸ್ವಿಯೂ ಆಗಿತ್ತು. ಸಮ್ಮೇಳನ ಆಯೋಜಿಸಿದ್ದ ‘ನೀವ್‌ ಅಕಾಡೆಮಿ’ ಅದೇ ಉಮೇದಿನಿಂದ ಈ ಬಾರಿಯ ಆವೃತ್ತಿಯನ್ನು ಹಮ್ಮಿಕೊಂಡಿದೆ.

ನೀವ್‌ ಅಕಾಡೆಮಿಯ ಯಮಲೂರಿನ ಕ್ಯಾಂಪಸ್‌ನಲ್ಲಿ ಸೆಪ್ಟೆಂಬರ್‌ 27ರಿಂದ 29ರವರೆಗೆ ಈ ಬಾರಿಯ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಾತು ಬಲ್ಲ ಮತ್ತು ಮಾತನ್ನು ಅರ್ಥೈಸಿಕೊಳ್ಳಬಲ್ಲ ಮಕ್ಕಳು ಈ ಸಮ್ಮೇಳನದ ಪ್ರಮುಖ ಪ್ರೇಕ್ಷಕರು. ಹೆತ್ತವರು, ಪೋಷಕರು, ಶಿಕ್ಷಕರು, ಗ್ರಂಥಪಾಲಕರು, ಶಿಕ್ಷಣ ತಜ್ಞರು ಹಾಗೂ ಮಕ್ಕಳು ಮತ್ತು ಅವರ ಸಾಹಿತ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರಿಗೂ ಸಮ್ಮೇಳನಕ್ಕೆ ಪ್ರವೇಶವಿದೆ.

ಮಕ್ಕಳ ಸಾಹಿತಿಗಳನ್ನು ಒಂದೇ ಸೂರಿನಡಿ ಕಲೆಹಾಕಿ ವೇದಿಕೆ ಒದಗಿಸಿರುವ ಅಪರೂಪದ ಕಾರ್ಯಕ್ರಮವಿದು. ನಮ್ಮ ದೇಶದ ಮತ್ತು ವಿದೇಶಗಳ 65 ಮಂದಿ ಆಹ್ವಾನಿತ ಲೇಖಕರು, ಕತೆ ಹೇಳುವವರು, ಚಿತ್ರಕಾರರು ಮತ್ತು ಗ್ರಂಥಪಾಲಕರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಮೂಲದ ಲೇಖಕರಾದ ಅಂದಾಲೀಬ್‌ ವಾಜೀದ್‌, ಜಾಹ್ನವಿ ಬರುವಾ, ರಸಿಲ್‌ ಅಹುಜಾ, ಅರುಂಧತಿ ವೆಂಕಟೇಶ್‌ ಮತ್ತು ರೂಪಾ ಪೈ ಕೂಡಾ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಬಾರಿ
‘ನೀವ್‌ ಬುಕ್‌ ಅವಾರ್ಡ್‌’ ಕೊಡುವ ಮೂಲಕ ಮಕ್ಕಳ ಸಾಹಿತ್ಯ ಕ್ಷೇತ್ರದ ಉತ್ತಮ ಕೃತಿಯನ್ನು ಗುರುತಿಸುವ ಪ್ರಯತ್ನವೂ ನಡೆಯಲಿದೆ.

‘ಪ್ರಶಸ್ತಿಗಾಗಿ 22 ಪುಸ್ತಕಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಗುಣಮಟ್ಟ ಮತ್ತು ಪುಸ್ತಕದ ಗಾತ್ರದ ಆಧಾರದಲ್ಲಿ ಮಕ್ಕಳ ಸಾಹಿತ್ಯ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಇರಲಾರದು ಎಂಬ ಪೂರ್ವಗ್ರಹದೊಂದಿಗೆ ಪುಸ್ತಕಗಳನ್ನು ವಿಂಗಡಿಸಲು ತೊಡಗಿದ್ದೆವು. ಆದರೆ ಬೆಚ್ಚಿಬೀಳುವ ಸರದಿ ನಮ್ಮದಾಗಿತ್ತು. ದೊಡ್ಡ ಪಟ್ಟಿಯಿಂದ 22 ಪುಸ್ತಕಗಳನ್ನು ಅಂತಿಮಪಟ್ಟಿಗೆ ಆಯ್ಕೆ ಮಾಡುವುದು ಸವಾಲೇ ಆಗಿತ್ತು’ ಎಂದು ಹೇಳುತ್ತಾರೆ, ನೀವ್‌ ಅಕಾಡೆಮಿಯ ಸಹಸಂಸ್ಥಾಪಕಿ ಕವಿತಾ ಗುಪ್ತಾ ಸಬರ್‌ವಾಲ್.


ಕವಿತಾ ಗುಪ್ತಾ ಸಬರ್‌ವಾಲ್

ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಾಗ ಮಕ್ಕಳಿಗಾಗಿಯೇ ಸಾಹಿತ್ಯ ಸಮ್ಮೇಳನವೊಂದು ನಡೆಯಬೇಕು ಎಂಬ ಯೋಚನೆ ಬಂತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಏನಾಗಿದೆ, ಏನಾಗಬೇಕಾಗಿದೆ ಎಂಬ ಚರ್ಚೆ ನಡೆಯಬೇಕು ಎಂದು ಅನಿಸಿತು. ಕಳೆದ ವರ್ಷ ಮಕ್ಕಳ ಸಾಹಿತ್ಯ ಸಮ್ಮೇಳನ ಆರಂಭಿಸಿದೆವು’ ಎನ್ನುತ್ತಾರೆ ಕವಿತಾ.

‘ಮಕ್ಕಳಲ್ಲಿ ‍ಪುಸ್ತಕ ಓದುವ ಪ್ರೀತಿ, ಹುಚ್ಚು ಹುಟ್ಟಿಸಬೇಕಾದರೆ ಅವರಿಗೆ ಮನೆಯಲ್ಲೇ ಓದುವ ವಾತಾವರಣ ನಿರ್ಮಾಣವಾಗಬೇಕು. ಕೆಲವು ಮಕ್ಕಳಿಗೆ ‍ಪುಸ್ತಕ ಓದುವುದಕ್ಕಿಂತ ಕ್ರಿಕೆಟ್‌ ಆಡುವುದು ಇಷ್ಟವೆಂದಾದರೆ ಕ್ರಿಕೆಟ್‌ಗೆ ಸಂಬಂಧಿಸಿದ ಪುಸ್ತಕದಿಂದಲೇ ಅವರಲ್ಲಿ
ಓದುವ ಹವ್ಯಾಸ ಆರಂಭಿಸಬಹುದು. ಮಕ್ಕಳಿಗೆ ಪುಸ್ತಕ ಕೊಡಿಸಿ ಜೋರಾಗಿ ಓದುವಂತೆ ಹೇಳಿ ಮನೆ ಮಂದಿ ಅದನ್ನು ಆಲಿಸಬೇಕು. ಆಗ ಮಗುವಿಗೆ ಓದುವ ಖುಷಿಯೊಂದಿಗೆ ತನ್ನವರು ನನ್ನ ಶ್ರೋತೃಗಳಾದ ಖುಷಿಯೂ ಸೇರಿಕೊಳ್ಳುತ್ತದೆ. ಒಮ್ಮೆ ಓದುವ ಖುಷಿಯನ್ನು ದಕ್ಕಿಸಿಕೊಂಡ ಮಗು ಮತ್ತೆಂದೂ ಅದನ್ನು ಬಿಡಲಾರದು’ ಎಂಬುದು ಅವರ ಅಸಮಾಧಾನ. 

‘ಬೇರೆ ದೇಶಗಳ ಲೇಖಕರು ಮಾತ್ರವಲ್ಲದೆ ಒಬ್ಬ ಪ್ರಮುಖ ಮನಶಾಸ್ತ್ರಜ್ಞ ಮತ್ತು ಮೂವರು ವಿಶ್ವವಿಖ್ಯಾತ ಲೈಬ್ರೆರಿಯನ್‌ಗಳೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಾಗಾರ, ಗೋಷ್ಠಿ, ಸಂವಾದ ಮತ್ತು ಪುಸ್ತಕ ಪ್ರದರ್ಶನ ಪ್ರೇಕ್ಷಕರ ಮನಗೆಲ್ಲುವ ಭರವಸೆ ಇದೆ. ಗಣನೀಯವಾಗಿ ಹೆಚ್ಚುತ್ತಿರುವ ಚಿತ್ರಕತೆ ಪುಸ್ತಕಗಳ ಪ್ರಮಾಣ, ಲೈಂಗಿಕತೆ, ಧರ್ಮ, ಖಿನ್ನತೆ ಮತ್ತು ಮಾದಕವಸ್ತು ಮುಂತಾದ ವರ್ತಮಾನಕ್ಕೆ ತೀರಾ ಪ್ರಸ್ತುತವೆನಿಸುವ ವಿಷಯಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ವಿಷಯಗಳು ಚರ್ಚೆ ನಡೆಯಬೇಕಾದುದು ಅತ್ಯಂತ ಪ್ರಸ್ತುತ’ ಎಂದು ಕವಿತಾ ಅಭಿಪ್ರಾಯಪಡುತ್ತಾರೆ. 

ದೊಡ್ಡವರ ಆಸಕ್ತಿ ಹೀಗಿದೆ ನೋಡಿ

‘ಮಕ್ಕಳಿಗೆ ಈಗ ಪುಸ್ತಕ ಓದುವುದಕ್ಕೆ ಪೂರಕ ವಾತಾವರಣದ ಕೊರತೆ ಇದೆ’ ಎಂಬುದು ನಗರದ ಲೇಖಕಿ ಅದಿತಿ ರಾವ್‌ ಅವರ ಅಭಿಪ್ರಾಯ.

ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಅಸೈನ್‌ಮೆಂಟ್‌, ಪ್ರಾಜೆಕ್ಟ್‌ಗಳೂ ಇವತ್ತು ಸಂಜೆಯಿಂದ ನಾಳೆ ಬೆಳಗಿನ ಒಳಗೆ ಮುಗಿಸಿ ಒಪ್ಪಿಸಬೇಕಾದ ಒತ್ತಡದಲ್ಲಿರುತ್ತವೆ.  ಮಕ್ಕಳಿಗೆ ಗ್ರಂಥಾಲಯಕ್ಕೆ ಹೋಗಿ ಪುಸ್ತಕ  ಅಥವಾ ಪತ್ರಿಕೆ ಓದಿ ವಿಷಯ ತಿಳಿದು ಚಿತ್ರಗಳನ್ನು ಕಲೆಹಾಕಿಕೊಂಡು ಅದೇ ಪ್ರಾಜೆಕ್ಟ್‌ ಮಾಡುವಷ್ಟು ಕಾಲಾವಕಾಶವನ್ನು ಶಾಲೆಗಳು ಕೊಡುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಪುಸ್ತಕ ಓದುವ ಅವಕಾಶಗಳೇ ಸಿಗುತ್ತಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಮ್ಮೇಳನ ನಡೆಯುವ ಸ್ಥಳ– ನೀವ್‌ ಅಕಾಡೆಮಿ, ಯಮಲೂರು ಕ್ಯಾಂಪಸ್, # 16, ಕೆಂಪಾಪುರ ಮುಖ್ಯರಸ್ತೆ, ಸಾಯಿ ಗಾರ್ಡನ್‌ ಅಪಾರ್ಟ್‌ಮೆಂಟ್‌ ಎದುರು. ಸಂಪರ್ಕಕ್ಕೆ: literaturefestival@neevschools.com

ದೂರವಾಣಿ ಸಂಖ್ಯೆ: 080 7110 1700

* ಅಧ್ಯಾಪಕರಿಗೆ ಮತ್ತು ಗ್ರಂಥಪಾಲಕರಿಗಾಗಿ ಒಂದು ದಿನ ಮೀಸಲಾಗಿರುತ್ತದೆ. ಗ್ರಂಥಾಲಯಗಳನ್ನು ರೂಪಿಸುವ ಮತ್ತು ಲಿಂಗಭೇದವನ್ನು ನಿವಾರಿಸುವ ನಿಟ್ಟಿನಲ್ಲಿ ಗೋಷ್ಠಿ ಮತ್ತು ಕಾರ್ಯಾಗಾರಗಳು ಅಂದು ನಡೆಯಲಿವೆ

* ಮಕ್ಕಳಿಗಾಗಿ ಕಾರ್ಯಾಗಾರ, ಪುಸ್ತಕದ ಓದು, ಪದ್ಯ ಮತ್ತು ಚಿತ್ರ ಬರೆಯುವ ಕಾರ್ಯಾಗಾರ ನಡೆಯಲಿದೆ 

* ಮೂರನೇ ದಿನ ಸಾರ್ವಜನಿಕರು ಪಾಲ್ಗೊಳ್ಳಬಹುದು. ಅಂದು 9 ಗೋಷ್ಠಿ, 12 ಸಂವಾದಗಳಿರುತ್ತವೆ.

* ನೀವ್‌ ವಾರ್ಷಿಕ ಪುಸ್ತಕ ಪ್ರಶಸ್ತಿಯ ಮೊತ್ತ ₹ 1 ಲಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು