ಶುಕ್ರವಾರ, ನವೆಂಬರ್ 22, 2019
27 °C
ಇಂತಹ ಕುತೂಹಲ ನಿಮಗೂ ಇರಲಿ ಮಕ್ಕಳೆ, ಸೃಜನಶೀಲತೆ ಮೈಗೂಡುವುದು

ಚಂದಿರನೇತಕೆ ಓಡುವನಮ್ಮಾ...

Published:
Updated:
Prajavani

ಪ್ರೀತಿಯ ಮುದ್ದು ಮಕ್ಕಳೇ,

ನೀವೊಬ್ಬ ದೊಡ್ಡ ವಿಜ್ಞಾನಿಯಾಗಿ ಬೆಳೆಯಬೇಕು ಎಂಬುದಕ್ಕಿಂತಲೂ ದೊಡ್ಡ ನೌಕರಿಯನ್ನು ಪಡೆದು ಶ್ರೀಮಂತನಾಗಬೇಕು ಎಂಬ ಕನಸನ್ನೇ ಎದೆಯಲ್ಲಿ ಬಿತ್ತುವಂತಹ ವಾತಾವರಣ ಇಂದಿನ ಜಗತ್ತಿನಲ್ಲಿದೆ. ಐ.ಟಿಯಂತಹ ಕ್ಷೇತ್ರಗಳತ್ತ ಎಲ್ಲರೂ ಆಕರ್ಷಿತರಾಗಲು ಇದೇ ಮುಖ್ಯ ಕಾರಣ.

ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳು ಪಡೆಯುವ ಸಂಬಳ ನಿಮ್ಮ ಕಣ್ಣುಗಳನ್ನು ಕುಕ್ಕಿಸುತ್ತಿದೆ ತಾನೇ? ಶ್ರೀಮಂತಿಕೆಯ ದಾಹ ಒಳ್ಳೆಯದಲ್ಲ. ಒಳ್ಳೆಯ ಜೀವನ ನಡೆಸುವುದಕ್ಕಾಗಿ ಕೈತುಂಬಾ ಸಂಪಾದನೆ ಮಾಡುವುದು ಕೆಟ್ಟದ್ದೇನಲ್ಲ. ಆದರೆ, ಹಣ ಗಳಿಕೆಯೇ ಜೀವನದ ಗುರಿ ಆಗದಿರಲಿ.

ವಿಜ್ಞಾನಕ್ಕೆ ಬಡವ– ಶ್ರೀಮಂತ ಎಂಬ ಭೇದವಿಲ್ಲ. ವಿಶ್ವದ ಅತ್ಯುತ್ತಮ ವಿಜ್ಞಾನಿಗಳು ಬಡತನದ ಬೆಂಕಿಯಲ್ಲೇ ಅರಳಿದವರು. ಹಳ್ಳಿಯ ವಾತಾವರಣದಲ್ಲೇ ಬೆಳೆದವರು. ನಿಜ ಹೇಳಬೇಕೆಂದರೆ ಗ್ರಾಮೀಣ ಪರಿಸರದಲ್ಲೇ ವಿಜ್ಞಾನದ ಪ್ರತಿಭೆಗಳು ರೂಪುಗೊಳ್ಳಲು ಹದವಾದ ವಾತಾವರಣ ಇರುವುದು. ನೀವು ಎಲ್ಲಿಯೇ ಇದ್ದರೂ ಯಶಸ್ಸು ಪಡೆಯಬೇಕಾದರೆ ಕಠಿಣ ಪರಿಶ್ರಮವನ್ನಂತೂ ಪಡಬೇಕು.

ಶಿಕ್ಷಣ ಕ್ಷೇತ್ರದಲ್ಲಿ ಪಾಲಕರ ಒತ್ತಡವೇ ಹೆಚ್ಚು. ಮಕ್ಕಳ ಭವಿಷ್ಯವನ್ನು ತಪ್ಪುದಾರಿಗೆ ಎಳೆಯುವವರೂ ಅವರೇ. ಆದರೆ, ಅಪ್ಪ– ಅಮ್ಮನ ಒತ್ತಡಕ್ಕೆ ಸಿಲುಕದೆ ನಿಮ್ಮ ಮನಸ್ಸಿಗೆ ಯಾವುದು ಹಿಡಿಸುವುದೋ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮಿಷ್ಟದ ಕ್ಷೇತ್ರದಲ್ಲೇ ಮುಂದುವರಿಯಿರಿ. ಪಾಠದ ಜತೆಗೆ ಆಟಕ್ಕೂ ಸಮಯ ನೀಡಿ. ಹೊಸ ಆವಿಷ್ಕಾರಗಳಿಗೆ ಸದಾ ತೆರೆದುಕೊಳ್ಳಿ.

ನನ್ನ ಬಾಲ್ಯದ ಬಗೆಗೆ ನಿಮಗೂ ಕುತೂಹಲವೇ? ಚಿಕ್ಕವನಾಗಿದ್ದಾಗಿನಿಂದಲೇ ನನಗೆ ವಿಜ್ಞಾನದ ಕುರಿತು ವಿಶೇಷ ಆಸಕ್ತಿ. ಹೈಸ್ಕೂಲ್‌ನಲ್ಲಿದ್ದಾಗ ಸಿ.ವಿ. ರಾಮನ್ ಅವರನ್ನು ಭೇಟಿ ಮಾಡಿದ್ದೆ. ಅವರೇ ನನಗೆ ಸ್ಫೂರ್ತಿ. ಅವರನ್ನು ಮಾತನಾಡಿಸಿದ್ದಲ್ಲದೆ, ಅವರ ಪ್ರಯೋಗಾಲಯಕ್ಕೂ ಭೇಟಿ ಕೊಟ್ಟಿದ್ದೆ. ಮೈಕಲ್‌ ಪ್ಯಾರಡೆ ನನ್ನ ಅಚ್ಚುಮೆಚ್ಚಿನ ವಿಜ್ಞಾನಿ.

ನಾನು 17ರ ಹರೆಯದ ಹುಡುಗನಾಗಿದ್ದಾಗ ವಿಜ್ಞಾನದ ವಿದ್ಯಾರ್ಥಿಯಾದೆ. ಭವಿಷ್ಯದ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಯೋಚಿಸಬೇಡ, 30 ವರ್ಷ ದುಡಿಯವುದು, ಆಮೇಲೆ ನಿವೃತ್ತನಾಗುವುದು ಎಂದು ಜನ ಹೇಳುತ್ತಿದ್ದರು. ಅವರ ಮಾತುಗಳಿಂದ ನನ್ನ ಉತ್ಸಾಹವೇನೂ ಕುಂದಲಿಲ್ಲ.

ಬಿ.ಎಸ್‌.ಸಿ ಓದುವಾಗ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದೆ. ಹಲವು ಜನರ ಹೆಸರುಗಳೊಂದಿಗೆ ಸಂಶೋಧನಾ ಪ್ರಬಂಧಗಳು ಪ್ರಕಟವಾದಾಗಲೆಲ್ಲಾ ನನ್ನಲ್ಲಿ ಒಂದು ರೀತಿ ಬೆರಗು ಮೂಡುತ್ತಿತ್ತು. ಎಷ್ಟೋ ಶಿಕ್ಷಕರನ್ನು ಸಂಶೋಧನೆ ಮಾಡುವ ಕುರಿತು ವಿಚಾರಿಸುತ್ತಿದ್ದೆ. ‘ನೀನಿನ್ನೂ ಬಿಎಸ್‌ಸಿ ವಿದ್ಯಾರ್ಥಿ’ ಎಂದು ಹೇಳಿ, ಉತ್ಸಾಹಕ್ಕೆ ತಣ್ಣೀರೆರಚಲು ಯತ್ನಿಸುತ್ತಿದ್ದರು. ಆದರೆ, ಛಲ ಬಿಡದೆ ನಿಂತಿದ್ದರಿಂದ ನನಗೆ ಅಷ್ಟೊಂದು ಪ್ರಬಂಧಗಳನ್ನು ಮಂಡಿಸಲು ಸಾಧ್ಯವಾಯಿತು.

ಶಾಲಾ ಪರಿಸ್ಥಿತಿಯಲ್ಲಿ ಈಗಲೂ ಹೆಚ್ಚಿನ ಬದಲಾಗಿಲ್ಲ. ಪೂರ್ಣಪ್ರಮಾಣದ ಪ್ರೋತ್ಸಾಹ ಸಿಗುತ್ತದೆ ಎನ್ನುವುದು ಖಚಿತವಿಲ್ಲ. ಆದರೆ, ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳದೆ ಮುನ್ನುಗ್ಗಿ. ದೊಡ್ಡ ಕನಸನ್ನು ಕಾಣಿ. ಅದನ್ನು ನನಸಾಗಿಸಲು ಗರಿಷ್ಠ ಪ್ರಯತ್ನ ಹಾಕಿ. ಯಶಸ್ಸು ಕಟ್ಟಿಟ್ಟಬುತ್ತಿ.

ಕನ್ನಡ ಸಾಹಿತ್ಯ ಬಾಲಪ್ರಪಂಚದ ಅರಿವಿನ ವಿಸ್ತಾರಕ್ಕೆ ಹಲವು ಕಾಣಿಕೆಗಳನ್ನು ಕೊಟ್ಟಿದೆ. ‘ಚಂದಿರನೇತಕೆ ಓಡುವನಮ್ಮ’ ತರಹದ ಶಿಶು ಪದ್ಯಗಳಂತೂ ಮಕ್ಕಳಲ್ಲಿ ಅನನ್ಯವಾದ ಯೋಚನಾ ಶಕ್ತಿಯನ್ನು ತುಂಬುತ್ತವೆ. ನೀವೂ ಹಾಗೆ ಯೋಚಿಸಲು ಕಲಿತರೆ ಪುಟ್ಟಪ್ಪನವರು ಹೇಳಿದಂತೆ, ‘ಮೂಡುವನು (ಪ್ರಗತಿಯ) ರವಿ ಮೂಡುವನು, ಕೊರತೆಗಳ ಕತ್ತಲೆಯನ್ನು ಓಡಿಸುವನು’
                                                                                                  -ನಿಮಗೆಲ್ಲ ಶುಭಾಶಯಗಳು

 


ಕನ್ನಡ ನಾಡಿನಲ್ಲಿ ಅರಳಿದ ‘ಭಾರತ ರತ್ನ’ ಸಿಎನ್‌ಆರ್‌ ರಾವ್‌. ಜಗತ್ತಿನ ವಿಜ್ಞಾನ ರಂಗದಲ್ಲಿ ಭಾರತದ ಪತಾಕೆಯನ್ನು ಹಾರಿಸಿದ ಸಾಧಕ

 

ಪ್ರತಿಕ್ರಿಯಿಸಿ (+)