ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಮಾರುಕಟ್ಟೆ ಮತ್ತು ಮೇಡ್ ಇನ್ ಚೀನಾ

Last Updated 5 ಜುಲೈ 2020, 4:50 IST
ಅಕ್ಷರ ಗಾತ್ರ

ಚೀನಾ ಮೂಲದ ಕೊರೋನಾ ವೈರಸ್, ನಿಯಂತ್ರಣ ಮೀರಿ ದೇಶದಲ್ಲೆಡೆ ಸಾವು, ನೋವುಗಳಿಗೆ ಕಾರಣವಾಗಿದೆ. ಇದೇ ಹೊತ್ತಲ್ಲಿ ಚೀನಾದ ಸೈನಿಕರು ಗಡಿಯಲ್ಲಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಪುಂಡಾಟ ನಡೆಸಿ ನಮ್ಮ 20 ಸೈನಿಕರ ಸಾವಿಗೆ ಕಾರಣರಾಗಿದ್ದಾರೆ. ಘರ್ಷಣೆಯ ನೆಪದಲ್ಲಿ ನಮ್ಮ 10 ಸೈನಿಕರನ್ನು ಎಳೆದೊಯ್ದು, ಬಳಿಕ ಒತ್ತಡಕ್ಕೆ ಮಣಿದು ವಾಪಸ್‌ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾದ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕೆಂಬ ಕೂಗು ದೇಶದೆಲ್ಲೆಡೆ ಕೇಳಿಬರುತ್ತಿದೆ. ಅದಕ್ಕೆ ಸ್ಪಂದಿಸಿರುವ ಭಾರತ ಸರ್ಕಾರವು ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಆಧುನಿಕ ಕಾಲದ ಯುದ್ಧ ಕೇವಲ ಗಡಿಯಲ್ಲಿ ನಡೆಯುವುದಲ್ಲ; ಮಾರುಕಟ್ಟೆಗಳಲ್ಲಿಯೂ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸರ್ಕಾರದ ನಿಷೇಧದ ಬೆನ್ನಲ್ಲೇ ಕೋಟ್ಯಂತರ ಭಾರತೀಯರು ತಮ್ಮ ಮೊಬೈಲ್‌ಗಳಿಂದ ಚೀನಾದ ಆ್ಯಪ್‌ಗಳನ್ನು ಕಿತ್ತೊಗೆದಿದ್ದಾರೆ. ಪರ್ಯಾಯ ಆ್ಯಪ್‌ಗಳ ಅನ್ವೇಷಣೆಯೂ ನಡೆದಿದೆ.

ಸರ್ಕಾರದ ಈ ಕ್ರಮಕ್ಕೆ ಜನರಿಂದ ಸ್ವಾಗತ ವ್ಯಕ್ತವಾಗಿದೆ. ಆದರೆ ಅದರ ಬೆನ್ನಲ್ಲೇ, ಈ ಕ್ರಮದಿಂದ ನಿಜಕ್ಕೂ ಚೀನಾವನ್ನು ಮಣಿಸಲು ಸಾಧ್ಯವೇ ಎನ್ನುವ ಅನುಮಾನವೂ ಎದ್ದಿದೆ. ‘ಅವರು ನಮ್ಮ ಮ್ಯಾಪ್‌ ಬದಲಾಯಿಸಿದರು. ನಾವು ಅವರ ಆ್ಯಪ್‌ ಬದಲಾಯಿಸಿದೆವು’ ಎಂದು ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ, ಒಂದರ್ಥದಲ್ಲಿ ನೈಜ ಪರಿಸ್ಥಿತಿಯ ಅನಾವರಣವೂ ಹೌದು. ಹಾಗೆಂದು ಭಾರತ ಸರ್ಕಾರ ಇಷ್ಟಕ್ಕೇ ಸುಮ್ಮನಾಗಿಲ್ಲ. ಚೀನಾವನ್ನು ವ್ಯಾಪಾರ ಕ್ಷೇತ್ರದಲ್ಲಿ ಮಣಿಸಲೇಬೇಕೆಂಬ ಉದ್ದೇಶದಿಂದ ಒಂದೊಂದೇ ಕ್ಷೇತ್ರದಲ್ಲಿ ಚೀನಾದ ಬಂಡವಾಳಕ್ಕೆ ಕೊಕ್ಕೆ ಹಾಕುವ ಕೆಲಸವನ್ನೂ ಶುರು ಮಾಡಿದೆ. ಚೀನಾ ಕಂಪೆನಿಗಳಿಗೆ ಗುತ್ತಿಗೆ ಕೊಡಬೇಡಿ ಎಂದು ಭಾರತೀಯ ರೈಲ್ವೆಗೆ ಸೂಚನೆ ಹೋಗಿದೆ. ಹೆದ್ದಾರಿ ಗುತ್ತಿಗೆಗಳು ಚೀನಾಗೆ ಇಲ್ಲ ಎಂದು ನಿರ್ಧಾರವಾಗಿದೆ. ಬಿಎಸ್‌ಎನ್‌ಎಲ್‌ನ 4ಜಿ ಅಪ್‌ಗ್ರೇಡ್‌ಗೆ ಕರೆಯಲಾಗಿರುವ ಟೆಂಡರ್‌‌ ರದ್ದು ಮಾಡಲಾಗಿದೆ.

ಚೀನಾದ ವಸ್ತುಗಳ ಬಳಕೆ ನಮ್ಮಲ್ಲಿ ವ್ಯಾಪಕವಾಗಿದೆ ಎನ್ನುವುದು ವಾಸ್ತವ. ಈ ಬಳಕೆಯನ್ನು ಜನರೂ ನಿಲ್ಲಿಸಬೇಕು ಎನ್ನುವುದು ಈಗ ಎಲ್ಲೆಡೆ ಕೇಳಿಬರುತ್ತಿರುವ ಆಗ್ರಹ. ‘ಚೀನಾದ ವಸ್ತುಗಳನ್ನು ಬಹಿಷ್ಕರಿಸಿ’ ಎನ್ನುವುದೀಗ ಭಾರತೀಯರ ಘೋಷ. ಹಿಂದೆ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧೀಜಿಯವರು ಇದೇ ಅಸ್ತ್ರ ಬಳಸಿದ್ದರು. ಆಗ ಲಕ್ಷಾಂತರ ಭಾರತೀಯರು ಇಂಗ್ಲೆಂಡಿನ ಬಟ್ಟೆಗಳನ್ನು ತಂದು ಬೆಂಕಿಗೆ ಹಾಕಿದ್ದರು. ಅದೇ ರೀತಿ ದಂಡಿ ಉಪ್ಪಿನ ಸತ್ಯಾಗ್ರಹವೂ ನಡೆದಿತ್ತು. ‘ವಿದೇಶೀ ಉಪ್ಪು ಬೇಡ; ನಮ್ಮ ಉಪ್ಪನ್ನು ನಾವೇ ತಯಾರಿಸೋಣ’ ಎನ್ನುವ ಗಾಂಧೀಜಿಯ ಕರೆ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತ್ತು. ಇದೀಗ ನಡೆದಿರುವ ‘ಬಾಯ್ಕಾಟ್ ಚೀನಾ’ ಹೋರಾಟ ಚೀನೀಯರನ್ನು ಕಂಗಾಲು ಮಾಡಬಹುದೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಮೊದಲು, ದೇಶದ ವ್ಯಾಪಾರ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ‘ಹಿಂದೀ ಚೀನೀ ಭಾಯಿ ಭಾಯಿ’ ಪರಿಸ್ಥಿತಿಯನ್ನು ಒಮ್ಮೆ ಮೊಗೆದು ನೋಡಬೇಕು.

ಭಾರತವು ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆ ಆಗಿದ್ದರೆ, ಚೀನಾ ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆ. ಆದರೆ ಎರಡೂ ದೇಶಗಳ ಆರ್ಥಿಕತೆಗಳ ನಡುವಿನ ಅಂತರ ಎಷ್ಟೆಂದರೆ– ಚೀನಾದ ಆರ್ಥಿಕತೆಯ ಶಕ್ತಿ ಭಾರತದ ಐದರಷ್ಟು! ಜಗತ್ತಿನಲ್ಲೇ ಇವತ್ತು ದೈತ್ಯಶಕ್ತಿಯಾಗಿ ಬೆಳೆದುನಿಂತಿರುವ ಚೀನಾಕ್ಕೆ ಆ್ಯಪ್‌ಗಳ ನಿಷೇಧದಿಂದ ಅಷ್ಟೊಂದು ದೊಡ್ಡ ಅರ್ಥಿಕ ದುಷ್ಪರಿಣಾಮವೇನೂ ಆಗುವುದಿಲ್ಲ. ಭಾರತವು ಈಗ ನಿಷೇಧಿಸಿರುವ ಆ್ಯಪ್‌ಗಳೆಲ್ಲವೂ 100% ಚೀನಾ ಬಂಡವಾಳ ಹೂಡಿರುವ ಆ್ಯಪ್‌ಗಳು. ಚೀನಾದ ಕಂಪೆನಿಗಳೊಂದಿಗೆ ಸೇರಿ ಭಾರತೀಯ ಉದ್ಯಮಿಗಳು ಬಂಡವಾಳ ಹೂಡಿರುವ ನೂರಾರು ಆ್ಯಪ್‌ಗಳು ಇನ್ನೂ ಚಾಲನೆಯಲ್ಲಿವೆ. ಹಾಗಾಗಿ, ಈಗ ಕೈಗೊಂಡಿರುವುದೊಂದು ಸಾಂಕೇತಿಕ ಕ್ರಮವಷ್ಟೇ. ಮುಂದಿನ ದಿನಗಳಲ್ಲಿ ಚೀನಾ ಕಿರುಕುಳಕ್ಕೆ ಒಳಗಾದ ಇತರ ರಾಷ್ಟ್ರಗಳೂ ಭಾರತದ ಉದಾಹರಣೆಯನ್ನು ಅನುಸರಿಸಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸುತ್ತಾ ನಡೆದರೆ ಸ್ವಲ್ಪ ಮಟ್ಟಿಗೆ ಚೀನಾಗೆ ಬಿಸಿ ತಟ್ಟಬಹುದೇನೋ?

ಆದರೆ, ತನ್ನ ವ್ಯಾಪಾರಿ ಸಾಮ್ರಾಜ್ಯಕ್ಕೆ ಧಕ್ಕೆಯಾಗುವುದನ್ನು ಸಹಿಸಿ ಚೀನಾ ಸುಮ್ಮನಿರಬಹುದೆ? ಭಾರತದಲ್ಲಿ ಚೀನಾ ಈಗಾಗಲೆ ಹೂಡಿರುವ ಬಂಡವಾಳವನ್ನು ಹಿಂದಕ್ಕೆ ಪಡೆಯತೊಡಗಿದರೆ ನಮ್ಮಲ್ಲಿ ನಿರುದ್ಯೋಗದ ಸಮಸ್ಯೆ ಇನ್ನಷ್ಟು ಹೆಚ್ಚಲಿಕ್ಕಿಲ್ಲವೆ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಈಗ ನಿಷೇಧಕ್ಕೆ ಒಳಗಾಗಿರುವ ಟಿಕ್‌ಟಾಕ್‌ನ ಹೂಡಿಕೆ ಸಣ್ಣದು. ಭಾರತದಲ್ಲಿ ಟಿಕ್‍ಟಾಕ್ ಆ್ಯಪ್‌ನ ಎಂಟು ಕಚೇರಿಗಳಿದ್ದು, ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು. ಆದರೆ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಹೂಡಿಕೆ ಇರುವ ಅಟೊಮೊಬೈಲ್‌ ಕ್ಷೇತ್ರದ ಕಥೆ ಹಾಗಿಲ್ಲ. ಹಾಗೆಯೇ ನಿಷೇಧಕ್ಕೆ ಒಳಗಾದ ಚೀನಾದ ಆ್ಯಪ್,‌ ಕ್ಯಾಮ್‌ಸ್ಕ್ಯಾನ್‌ಗೆ ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಗ್ರಾಹಕರಿದ್ದಾರೆ. ಈ ಆ್ಯಪ್‌ ಬದಲಿಗೆ ಮಾರುಕಟ್ಟೆಯಲ್ಲಿ ಬೇರೆ ಆ್ಯಪ್‌ಗಳೂ ಸಿಗುತ್ತಿವೆ. ಕ್ಯಾಮ್‍ಸ್ಕ್ಯಾನ್ಅನ್ನು ಕಿತ್ತು ಹಾಕಿ ಇನ್ನೊಂದು ಅಮೆರಿಕದ ಆ್ಯಪ್‌ ಅನ್ನು ಬಳಸಬಹುದು. ಆದರೆ ಚೀನಾದ ಬದಲಿಗೆ ಅಮೆರಿಕದ ಮೇಲೆ ಅವಲಂಬನೆ ಮುಂದೆ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುವುದಿಲ್ಲವೆ?

ಅತಿಯಾದ ಅವಲಂಬನೆ

ಹಂತ ಹಂತವಾಗಿ ಚೀನೀ ಸರಕುಗಳನ್ನು ನಿಷೇಧಿಸಬೇಕು ಎಂಬ ಜನರ ಕೂಗು ಸರಿಯಾಗಿದೆ. ಆದರೆ, ಜಾಗತಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವ ಸರ್ಕಾರ ಈ ಕೆಲಸವನ್ನು ತಾನೇ ನೇರವಾಗಿ ಮಾಡುವುದು ಕಷ್ಟ. ಸರ್ಕಾರ ಹೆಚ್ಚೆಂದರೆ, ಚೀನೀ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಅವುಗಳು ನಮ್ಮಲ್ಲಿ ಹೆಚ್ಚು ದುಬಾರಿಯಾಗುವಂತೆ ಮಾಡಬಹುದು. ಆದರೆ, ಹಾಗೆ ಮಾಡಿದಾಗ ಚೀನೀ ಸರಕುಗಳಿಗಿಂತ ಕಡಿಮೆ ದರದಲ್ಲಿ ದೇಶೀ ಸರಕುಗಳು ಲಭ್ಯವಾಗುವಂತೆ ಮಾಡಲು ಸಾಧ್ಯವಿದೆಯೆ? ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ’ದೇಶೀ ವಸ್ತುಗಳು ಚೀನಾದ ವಸ್ತುಗಳಿಗಿಂತ ದುಬಾರಿಯಾದರೂ ಪರವಾಗಿಲ್ಲ, ಅವುಗಳನ್ನೇ ಖರೀದಿಸಿ‘ ಎಂದು ಕರೆಕೊಟ್ಟಿದ್ದಾರೆ. ಕರೆ ಕೊಡುವುದು ಸುಲಭ. ಪ್ರತಿದಿನವೂ ಜೀವನ ನಿರ್ವಹಣೆಯ ಖರ್ಚು ವೆಚ್ಚ ಏರುತ್ತಲೇ ಇದ್ದು, ಕೊರೊನಾ ಹೊಡೆತದಿಂದ ಆರ್ಥಿಕತೆಯೂ ನೆಲ ಕಚ್ಚಿರುವ ಈ ದಿನಗಳಲ್ಲಿ ಜನರು ದುಬಾರಿ ಬೆಲೆ ತೆತ್ತು ಸ್ವದೇಶೀ ವಸ್ತುಗಳನ್ನು ಎಷ್ಟು ದಿನ ಖರೀದಿಸಿಯಾರು? ದೇಶಭಕ್ತಿ ಇದೆ ನಿಜ, ಆದರೆ ಹೊಟ್ಟೆಪಾಡು ಕೇಳಬೇಕಲ್ಲ?

ಚೀನಾಕ್ಕೆ ನಿಜವಾದ ಪೆಟ್ಟು ಕೊಡಬಹುದಾದ ಕ್ರಮವೆಂದರೆ, ಅದರದ್ದೇ ಆದ ಭಾಷೆಯಲ್ಲಿ ಉತ್ತರಿಸುವುದು. ಅಂದರೆ, ಭಾರತ ಯಾವ ವಸ್ತುಗಳಿಗಾಗಿ ಚೀನಾದ ಮೇಲೆ ಅವಲಂಬಿತವಾಗಿದೆಯೋ ಆ ಎಲ್ಲಾ ವಸ್ತುಗಳನ್ನು ನಾವೇ ದೇಶೀಯವಾಗಿ ಉತ್ಪಾದಿಸುವುದು. ಇದು ಹೇಳಿದಷ್ಟು ಸುಲಭವಲ್ಲ. ಬೆಳಗ್ಗೆದ್ದು ಹಲ್ಲುಜ್ಜುವ ಬ್ರಷ್, ಪೇಸ್ಟು, ಹ್ಯಾಂಡ್‌ವಾಶ್‌, ಮೌತ್‌ವಾಶ್‌ನಿಂದ ಹಿಡಿದು, ರಾತ್ರಿ ಮಲಗುವಾಗ ಹೊದೆಯಲು ಬಳಸುವ ಹೊದಿಕೆ, ದಿಂಬು, ಹಾಸಿಗೆ ಮಾತ್ರವಲ್ಲದೆ ಸೊಳ್ಳೆ ಹೊಡೆಯುವ ಬ್ಯಾಟು ಕೂಡಾ ನಮಗೆ ಚೀನಾದಿಂದಲೇ ಬರಬೇಕು! ಪೂಜೆಗೆ ಬಳಸುವ ಪೂಜಾ ಸಾಮಗ್ರಿ, ಪೂಜಿಸುವ ದೇವರ ಮೂರ್ತಿ, ದೀಪಾವಳಿಗೆ ಹಚ್ಚುವ ಗೂಡು, ಕಂದೀಲು, ಪಟಾಕಿಗಳನ್ನೂ ಚೀನಾವೇ ನಮಗೆ ಕಳಿಸಬೇಕು! ಕಂಪ್ಯೂಟರ್, ಮೊಬೈಲ್ ಫೋನ್, ವಾಹನಗಳ ಬಿಡಿ ಭಾಗ, ಆಫೀಸ್ ಪರಿಕರ, ಗೃಹಬಳಕೆ ವಸ್ತು, ಇತರ ಯಂತ್ರೋಪಕರಣಗಳಿಗೂ ನಮಗೆ ಚೀನಾವೇ ಪ್ರಮುಖ ಮೂಲ. ಅಷ್ಟೇಕೆ, ಸಣ್ಣದೊಂದು ಸೂಜಿ– ನೂಲು ಕೂಡಾ ನಮಗೆ ಚೀನಾದಿಂದಲೇ ಬರುತ್ತದೆ!

ನಮ್ಮ ಮಕ್ಕಳು ಆಡುವ ಆಟಿಕೆಗಳ ಉದಾಹರಣೆಯನ್ನೇ ನೋಡುವ. ಭಾರತದ ಆಟಿಕೆಗಳ ಮಾರುಕಟ್ಟೆ ಸುಮಾರು ₹ 5000 ಕೋಟಿಯಿಂದ ₹ 7000 ಕೋಟಿಯಷ್ಟಿದೆ. ಇದರಲ್ಲಿ ಚೀನಾದ ಪಾಲು ಶೇಕಡ 70ರಷ್ಟಿದ್ದರೆ, ಭಾರತದ್ದು ಕೇವಲ ಶೇ 20ರಷ್ಟು! ಉಳಿದ ಶೇಕಡ 10ರಷ್ಟು ಇತರ ದೇಶಗಳದ್ದು. ಇದಕ್ಕೆ ಮುಖ್ಯ ಕಾರಣ ಚೀನಾದ ಆಟಿಕೆಗಳು ಇಲ್ಲಿನ ಕಡುಬಡವರೂ ಖರೀದಿಸುವಷ್ಟು ಅಗ್ಗವಾಗಿರುವುದು. ಚನ್ನಪಟ್ಟಣದಂತಹ ದೇಶೀ ಆಟಿಕೆಗಳು ಗುಣಮಟ್ಟದಲ್ಲಿ ಚೀನಾ ಆಟಿಕೆಗಳಿಗಿಂತ ಎಷ್ಟೋಪಟ್ಟು ಮೇಲು ಮತ್ತು ಪರಿಸರ ಸ್ನೇಹಿ. ಆದರೆ, ಅವು ಕೆಳಮಧ್ಯಮ ವರ್ಗದ ಜನರಿಗೂ ಕೈಗೆಟುಕದಷ್ಟು ದುಬಾರಿ. ದೇಶೀ ಆಟಿಕೆಗಳು ದುಬಾರಿಯಾಗಲು ಇನ್ನೊಂದು ಮುಖ್ಯ ಕಾರಣವೆಂದರೆ ನಮ್ಮಲ್ಲಿನ ತೆರಿಗೆ ವ್ಯವಸ್ಥೆ. ಜಿಎಸ್ಟಿ ಬರುವ ಮೊದಲು ಭಾರತದಲ್ಲಿ ತಯಾರಾಗುತ್ತಿದ್ದ ಆಟಿಕೆಗಳ ಮೇಲೆ ಶೇಕಡ 26ರಷ್ಟು ಅಬಕಾರಿ ಸುಂಕ, ವ್ಯಾಟ್‌ ಇತ್ತು. ಆಮದು ವಸ್ತುಗಳ ಮೇಲೆ ಕೇವಲ ಶೇ 5ರಷ್ಟು ತೆರಿಗೆ ಇತ್ತು. ಆಗ ಇಲ್ಲಿನ ಆಟಿಕೆ ತಯಾರಕರಿಗೆ ಅಲ್ಲಿಂದ ತರಿಸಿ ಇಲ್ಲಿ ಮಾರುವುದೇ ಹೆಚ್ಚು ಲಾಭದಾಯಕ ಅನ್ನಿಸಿತು. ಉದ್ಯಮಿಗಳೆಲ್ಲ ವ್ಯಾಪಾರಿಗಳಾದರು! ಸುಮಾರು 1000ದಷ್ಟಿದ್ದ ದೇಶೀ ಆಟಿಕೆ ತಯಾರಕರ ಸಂಖ್ಯೆ ಈಗ 180ಕ್ಕೆ ಇಳಿದಿದೆ. ಇವತ್ತು ರಿಟೇಲ್‌ ವ್ಯಾಪಾರಿಗಳೂ ನೇರವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ.

ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ಸರಕುಗಳ ಆಮದು ಸುಂಕವನ್ನು ಶೇಕಡ 60ರಷ್ಟು ಹೆಚ್ಚಿಸಿದೆ. ಆದರೂ ಭಾರತದ ವ್ಯಾಪಾರಿಗಳು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಪ್ರಮಾಣ ಕಡಿಮೆಯಾಗಿಲ್ಲ. ಏಕೆಂದರೆ, ಶೇಕಡ 60ರಷ್ಟು ಆಮದು ಸುಂಕ ಕೊಟ್ಟು ಆಮದು ಮಾಡಿಕೊಳ್ಳುವ ಚೀನೀ ವಸ್ತುಗಳ ಬೆಲೆ ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಉತ್ಪನ್ನಗೊಳ್ಳುವ ವಸ್ತುಗಳ ದರಕ್ಕಿಂತಲೂ ಕಡಿಮೆ. ಇಲ್ಲಿ ಇನ್ನೊಂದು ವಿಚಾರವಿದೆ. ಚೀನಾವು ಏಷ್ಯಾ- ಪೆಸಿಫಿಕ್ ಟ್ರೇಡ್ ಆಗ್ರಿಮೆಂಟ್ ಒಪ್ಪಂದಕ್ಕೆ ಸಹಿ ಹಾಕಿರುವ ಸದಸ್ಯ ದೇಶ. ಹಾಗಾಗಿ ಆಟಿಕೆಯೂ ಸೇರಿ ಚೀನಾದಿಂದ ಆಮದಾಗುವ ಸುಮಾರು 1000 ವಸ್ತುಗಳಿಗೆ ಶೇ 40ರಷ್ಟು ಆಮದು ತೆರಿಗೆ ವಿನಾಯಿತಿ ಪಡೆಯಲು ಅರ್ಹವಾಗಿದೆ. ಸದ್ಯಕ್ಕೆ ಆ ವಿನಾಯ್ತಿ ಲಾಗೂ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೂ ಆದರೆ ಚೀನಾದ ವಸ್ತುಗಳು ಇನ್ನಷ್ಟು ಅಗ್ಗವಾಗಲಿದೆ!

ಸರಕುಗಳ ಉತ್ಪಾದನೆಯಲ್ಲಿ ಚೀನಾ ‘ಪ್ರಪಂಚದ ಫ್ಯಾಕ್ಟರಿ’ ಎನಿಸಿಕೊಂಡಿದ್ದರೆ ಔಷಧಿಗಳ ಉತ್ಪಾದನೆಯಲ್ಲಿ ಭಾರತ ‘ಪ್ರಪಂಚದ ಫಾರ್ಮಸಿ’ ಎನಿಸಿಕೊಂಡಿದೆ. ಇದಕ್ಕೆ ಕಾರಣ ಭಾರತದಲ್ಲಿ ತಯಾರಾಗುವ ಔಷಧಿಗಳ ಪ್ರಮಾಣ, ವೈವಿಧ್ಯತೆ ಮತ್ತು ಎಲ್ಲಕ್ಕೂ ಮುಖ್ಯವಾಗಿ ಅವುಗಳ ಅಗ್ಗದ ಬೆಲೆ. ಆದರೆ ಭಾರತದಲ್ಲಿ ತಯಾರಾಗುವ ಔಷಧಿಗಳಿಗೆ ಶೇಕಡ 80ರಷ್ಟು ಕಚ್ಚಾವಸ್ತುಗಳು ಬರುವುದು ಚೀನಾದಿಂದ! ನಮ್ಮ ಸೈನಿಕರ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ತಯಾರಿಸಲು ಬಳಸುವ ಕಚ್ಛಾವಸ್ತು ಬರುವುದೂ ಚೀನಾದಿಂದಲೇ! ಚೀನಾದಿಂದ ಬಿಡಿಭಾಗಗಳು ಬರುವುದು ನಿಂತು ಹೋದರೆ ಈಗಾಗಲೇ ನಷ್ಟದಲ್ಲಿರುವ ನಮ್ಮ ದೇಶದ ಆಟೋಮೊಬೈಲ್, ಟೆಲಿಕಾಂ, ಪವರ್ ಪ್ಲಾಂಟ್, ಮೆಟ್ರೋ ರೈಲು, ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್ ಮತ್ತು ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳು ಇನ್ನಷ್ಟು ಕುಸಿಯುತ್ತವೆ. ಏಕೆಂದರೆ, ಈ ಬಿಡಿಭಾಗಗಳನ್ನು ದೇಶೀಯವಾಗಿ ತಯಾರಿಸುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿಲ್ಲ.

ಭಾರತದ ಉದ್ಯಮಿಗಳು ಇತರ ದೇಶಗಳಿಗೆ ರಫ್ತು ಮಾಡುವ ವಸ್ತುಗಳಲ್ಲೂ ಚೀನಾದ ಅವಲಂಬನೆ ಇದೆ! ಈ ರಫ್ತು ವಸ್ತುಗಳನ್ನು ತಯಾರಿಸಲು ಬಳಸುವ ಕಚ್ಚಾವಸ್ತು, ಬಿಡಿಭಾಗಗಳಲ್ಲಿ ಬಹುಪಾಲನ್ನು ಚೀನಾ ಒದಗಿಸುತ್ತದೆ. ಈ ಕಾರಣದಿಂದಲೇ ಭಾರತದ ರಫ್ತುದಾರರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರದಲ್ಲಿ ತಮ್ಮ ವಸ್ತುಗಳನ್ನು ಮಾರಲು ಸಾಧ್ಯವಾಗಿದೆ. ಒಂದು ವೇಳೆ ಚೀನಾದಿಂದ ಈ ಕಚ್ಚಾವಸ್ತುಗಳು ಬರುವುದು ನಿಂತರೆ ಉತ್ಪಾದನಾ ವೆಚ್ಚ ಹೆಚ್ಚಿ ಭಾರತ ರಫ್ತು ಮಾಡುವ ಈ ವಸ್ತುಗಳು ತಮ್ಮ ಸ್ಪರ್ಧಾತ್ಮಕ ದರದ ಆಕರ್ಷಣೆ ಕಳೆದುಕೊಳ್ಳುತ್ತವೆ. ನೋಟ್‌ಬ್ಯಾನ್‌, ಜಿಎಸ್‌ಟಿ ಹೊಡೆತಕ್ಕೆ ತತ್ತರಿಸಿದಾಗ ಆದಂತೆ, ಇನ್ನಷ್ಟು ಸಣ್ಣ, ಮಧ್ಯಮ ಉದ್ದಿಮೆಗಳು ಬಾಗಿಲು ಮುಚ್ಚುತ್ತವೆ.

ಅತಿದೊಡ್ಡ ಟ್ರೇಡ್‌ ಪಾರ್ಟ್‌ನರ್‌

ಚೀನಾವು ಭಾರತದ ಅತಿದೊಡ್ಡ ಟ್ರೇಡ್‌ ಪಾರ್ಟ್‌ನರ್‌ ಕೂಡಾ ಹೌದು.ಚೀನಾದ ಹಲವು ಕಂಪೆನಿಗಳು ಭಾರತದಲ್ಲಿ ಈಗಾಗಲೇ ಸುಮಾರು 6 ಬಿಲಿಯನ್ ಡಾಲರಿನಷ್ಟು ಬಂಡವಾಳ ಹೂಡಿವೆ. ಓಲಾ, ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್, ಸ್ವಿಗ್ಗಿ, ಬಿಗ್ ಬಾಸ್ಕೆಟ್, ಪೇಟಿಎಮ್ ಎಲ್ಲವೂ ಚೀನಾ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ಪ್ರಮುಖ ಕಂಪೆನಿಗಳು. ಭಾರತದ ಒಟ್ಟು 30 ಯೂನಿಕಾರ್ನ್‌ ಕಂಪೆನಿಗಳ ಪೈಕಿ 18 ಕಂಪೆನಿಗಳಲ್ಲಿ ಹೂಡಿಕೆಯಾಗಿರುವ ಬಹುಪಾಲು ಹಣ ಚೀನೀಯರದ್ದು.(ಯೂನಿಕಾರ್ನ್‌ ಕಂಪೆನಿಗಳೆಂದರೆ, ಒಂದು ಶತಕೋಟಿ ಅಮೆರಿಕನ್‌ ಡಾಲರ್‌ಗಿಂತ ಹೆಚ್ಚು ಹೂಡಿಕೆಯುಳ್ಳ ಸ್ಟಾರ್ಟಪ್‌ ಕಂಪೆನಿಗಳು). ಹಾಗೆಂದು ನಾವು ಚೀನಾದಲ್ಲಿ ಎಷ್ಟು ಹೂಡಿಕೆ ಮಾಡಿದ್ದೇವೆ? ಎಷ್ಟು ರಫ್ತು ಮಾಡುತ್ತಿದ್ದೇವೆ? ನಮ್ಮ ಹೂಡಿಕೆ ಮತ್ತು ರಫ್ತು ನಿಲ್ಲಿಸಿದರೆ ಚೀನಾಕ್ಕೆ ಏನಾಗಬಹುದು? ಏನೂ ಆಗುವುದಿಲ್ಲ. ಏಕೆಂದರೆ ಅಲ್ಲಿರುವ ನಮ್ಮ ಪಾಲು ತೀರಾ ನಗಣ್ಯ.

40 ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಆರ್ಥಿಕವಾಗಿ ಹೆಚ್ಚೂ ಕಡಿಮೆ ಒಂದೇ ಹಂತದಲ್ಲಿದ್ದವು. ಕಮ್ಯೂನಿಸ್ಟ್ ಆಡಳಿತವಿದ್ದರೂ ಚೀನಾ ಯಾವುದೇ ಬಂಡವಾಳಶಾಹಿ ರಾಷ್ಟ್ರಕ್ಕೆ ಕಡಿಮೆಯಿಲ್ಲದಂತೆ ತನ್ನ ಸಿದ್ದಾಂತ, ಧೋರಣೆಗಳಲ್ಲಿ ಬದಲಾವಣೆ ಮಾಡಿಕೊಂಡು ಈಗ ಅಮೆರಿಕದ ನಂತರದ ವಿಶ್ವದ ಎರಡನೇ ಆರ್ಥಿಕತೆಯ ದೇಶವಾಗಿ ಬೆಳೆದಿದೆ. ಚೀನಾಗೆ ಹೋಲಿಸಿದರೆ ಭಾರತದ ಆರ್ಥಿಕತೆ ಅದರ ಐದನೇ ಒಂದರಷ್ಟು ಮಾತ್ರ! ಭಾರತದ ಸರ್ಕಾರೀ ಕೆಂಪು ಪಟ್ಟಿ ಈಗಲೂ ಜಗದ್ವಿಖ್ಯಾತ. 190 ದೇಶಗಳ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್‌‘ ಪಟ್ಟಿಯಲ್ಲಿ ಭಾರತದ್ದು 63ನೇ ಸ್ಥಾನ. ಚೀನಾದಲ್ಲಿ ಒಂದು ಫ್ಯಾಕ್ಟರಿ ತೆರೆಯಲು ಕೆಲವು ವಾರ ಅಥವಾ ತಿಂಗಳು ಸಾಕಾದರೆ, ನಮ್ಮಲ್ಲಿ ನೂರಾರು ಲೈಸನ್ಸುಗಳ ಹೆಸರಲ್ಲಿ ಕೆಲವು ವರ್ಷಗಳೇ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ವಿಯೆಟ್ನಾಂ, ಕೊರಿಯಾ, ತೈವಾನ್ ನಂತಹ ಚಿಕ್ಕಪುಟ್ಟ ದೇಶಗಳೂ ಉತ್ಪಾದನೆಯಲ್ಲಿ ಭಾರತಕ್ಕಿಂತ ಮುಂಚೂಣಿಯಲ್ಲಿವೆ.

ಕೊರೊನಾ ವೈರಸ್‌ ಹರಡುವಿಕೆಯಿಂದ ಚೀನಾವು, ಅಮೆರಿಕ ಸಹಿತ ಇತರ ದೇಶಗಳ ಜೊತೆಗೂ ತನ್ನ ಸಂಬಂಧ ಹಾಳುಮಾಡಿಕೊಂಡಿದೆ. ಅಮೆರಿಕದ ಹಲವು ಕಂಪೆನಿಗಳು ಚೀನಾದಲ್ಲಿ ಹೂಡಿರುವ ಬಂಡವಾಳವನ್ನು ಹಿಂತೆಗೆದುಕೊಂಡು ಬೇರೆ ದೇಶಗಳಿಗೆ ಸ್ಥಳಾಂತರದ ನಿರ್ಧಾರ ಕೈಗೊಂಡವು. ಆಗ ಈ ಕಂಪೆನಿಗಳು ಭಾರತಕ್ಕೆ ಬರಬಹುದು ಎಂಬ ನಿರೀಕ್ಷೆ ನಮ್ಮದಾಗಿತ್ತು. ಆದರೆ ಅವುಗಳಲ್ಲಿಹೆಚ್ಚಿನವು ಭಾರತದ ಬದಲು ಇಂಡೋನೇಷ್ಯಾ, ವಿಯೆಟ್ನಾಂ, ತೈವಾನ್‌, ಥಾಯ್ಲಂಡ್‌ಗಳಿಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿವೆ. ಬೆರಳೆಣಿಕೆಯಷ್ಟು ಕಂಪೆನಿಗಳು ಮಾತ್ರ ಭಾರತದತ್ತ ಮುಖ ಮಾಡಿವೆ.

ಭಾರತದಲ್ಲಿ ಲೇಬರ್ ವೆಚ್ಚ ಚೀನಾಕ್ಕಿಂತ ಅಗ್ಗವಾದರೂ, ಚೀನಾದ ಸರಾಸರಿ ಲೇಬರ್ ಪ್ರೊಡಕ್ಟಿವಿಟಿ ಭಾರತದ ದುಪ್ಪಟ್ಟು. ನಮ್ಮಲ್ಲಿ ಬೃಹತ್ ಪ್ರಮಾಣದ ಉತ್ಪಾದನೆಗೆ ಬೇಕಾದ ವಾತಾವರಣವಾಗಲೀ, ಅದಕ್ಕೆ ಬೇಕಾದ ಮೂಲಸೌಲಭ್ಯಗಳಾಗಲೀ ಇನ್ನೂ ಬೆಳೆದಿಲ್ಲ. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಘೋಷಣೆಗೆ ಆರು ವರ್ಷಗಳೇ ಆದರೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

‘ಹಿಂದೀ ಚೀನೀ ಭಾಯೀ ಭಾಯೀ’ ಎಂಬ ಭಾರತದ ಆಶಯಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವ ಚೀನಾ ಜೊತೆಗಿನ ರಾಜಕೀಯ ಸಂಬಂಧ ಸದ್ಯಭವಿಷ್ಯದಲ್ಲಿ ಸುಧಾರಿಸುವುದು ಕಷ್ಟ. ಹೀಗಾಗಿ ಚೀನಾದ ಮೇಲಿನ ನಮ್ಮ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದು ಈಗ ಜಾಣತನದ ಕ್ರಮ. ಸ್ವಾವಲಂಬನೆಯನ್ನು ಹೆಚ್ಚಿಸುವುದೇ ಅದಕ್ಕಿರುವ ದಾರಿ. ರಾಜಕೀಯ ಇಚ್ಚಾಶಕ್ತಿ ಹಾಗೂ ಖಾಸಗಿ ವಲಯದ ಪ್ರಾಮಾಣಿಕ ಸಹಯೋಗವಿದ್ದರೆ ಇದು ಅಸಾಧ್ಯವೇನಲ್ಲ. ಆದರೆ ಚೀನಾದ ಜೊತೆಗೆ ಸೆಡ್ಡು ಹೊಡೆಯಲೆಂದು ಅಮೆರಿಕದ ಕಂಪೆನಿಗಳಿಗೆ ಈಗ ಕೆಂಪುಹಾಸು ಹಾಸಿದರೆ, ಮುಂದೆ ಅದೂ ನಮ್ಮ ಆರ್ಥಿಕತೆಗೆ ಭಾರವಾಗುವುದು ಖಚಿತ.

ಚಲನಶೀಲ ಆರ್ಥಿಕತೆಯು ಯಾವತ್ತೂ ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತದೆ. ಈಗ ನಮ್ಮ ಮುಂದಿರುವ ಕೋವಿಡ್ ಬಿಕ್ಕಟ್ಟು‌ ಮತ್ತು ಚೀನಾ ಪುಂಡಾಟಿಕೆಯ ಸವಾಲುಗಳು ಹೀಗೆಯೇ ಪರಿವರ್ತನೆಗೊಳ್ಳಬೇಕು.60ರ ದಶಕದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳ ಕೊರತೆಯಿಂದ ಎದ್ದ ಹಾಹಾಕಾರ ‘ಹಸಿರು ಕ್ರಾಂತಿ’ಗೆ ಜನ್ಮ ಕೊಟ್ಟು ಭಾರತ ಸ್ವಾವಲಂಬಿಯಾದ ಕಥೆ ಇನ್ನೂ ಮರೆತುಹೋಗಿಲ್ಲ. 70ರ ದಶಕದ ‘ಕ್ಷೀರಕ್ರಾಂತಿ’ ಭಾರತವನ್ನು ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಹಾಲು ಉತ್ಪಾದಿಸುವ ದೇಶವನ್ನಾಗಿಸಿತು. ಈ ಎರಡು ಉದಾಹರಣೆಗಳೂ ಭಾರತದ ಸುಪ್ತ ಸಾಮರ್ಥ್ಯಕ್ಕೆ ಸಾಕ್ಷಿ. ಆಗ ಇದ್ದಂತಹ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತ ಜಾಣ್ಮೆ ಈಗ ನಮ್ಮಲ್ಲಿ ಇದೆಯೆ.. ಎನ್ನುವುದಷ್ಟೇ ಪ್ರಶ್ನೆ.

ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಮುಖವಾಣಿ ‘ಗ್ಲೋಬಲ್ ಟೈಮ್ಸ್’, ‘ಚೀನಾ ಭಾರತದ ವಸ್ತುಗಳನ್ನು ನಿಷೇಧಿಸಬೇಕೆಂದಿದ್ದರೂ ನಮ್ಮಲ್ಲಿ ಭಾರತೀಯ ಸರಕುಗಳೇ ಇಲ್ಲವಲ್ಲ’ ಎಂದು ಕುಹಕದ ಟ್ವೀಟ್ ಮಾಡಿದಾಗ, ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಆನಂದ ಮಹೀಂದ್ರ, ‘ಭಾರತೀಯ ಜನತೆ ನಿಮ್ಮ ಈ ಮಾತುಗಳನ್ನು ಸವಾಲಾಗಿ ಸ್ವೀಕರಿಸಲಿದೆ. ನಮ್ಮನ್ನು ಉದ್ರೇಕಿಸಿರುವುದಕ್ಕೆ ಕೃತಜ್ಞತೆಗಳು' ಎಂದು ಉತ್ತರಿಸಿರುವುದು ಗಮನಾರ್ಹ.

ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರಿಸುವುದು ಅಸಾಧ್ಯದ ಸಂಗತಿಯೇನಲ್ಲ. ನಾವು ಕೂಡಾ ಚೀನಾದ ಮಾದರಿಯಲ್ಲೇ ‘ವಿಶ್ವಕ್ಕಾಗಿ ಉತ್ಪಾದನೆ’ಯ ವಿನ್ಯಾಸಗಳನ್ನು ನಮ್ಮದಾಗಿಸಿಕೊಳ್ಳಬೇಕು. ಆದರೆ ಅದಕ್ಕಾಗಿ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ನಮ್ಮ ಖಾಸಗಿ ಟೆಲಿಕಾಂ ಕಂಪನಿಗಳ ಸಂಘಟನೆಯೊಂದು ನೀಡಿರುವ ಹೇಳಿಕೆಯನ್ನೇ ಗಮನಿಸಿ– ‘ಜಾಗತಿಕ ರಾಜಕೀಯ ನಿರ್ಧಾರಗಳು ಬೇರೆ; ಉದ್ಯಮ ಜಗತ್ತಿನ ನಿರ್ಧಾರಗಳೇ ಬೇರೆ. ಎಲ್ಲಿಂದ ಕಚ್ಚಾವಸ್ತುಗಳನ್ನು ತರಿಸಬೇಕು, ಹೇಗೆ ಕಡಿಮೆ ದರದಲ್ಲಿ ಉತ್ಪಾದಿಸಬೇಕು ಎನ್ನುವುದನ್ನು ಉದ್ಯಮ ಜಗತ್ತಿಗೇ ಬಿಡುವುದು ಒಳ್ಳೆಯದು’.

ಅಮೆರಿಕವನ್ನು ನಂಬಬಹುದೆ?

ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಭಾರತದ ಕ್ರಮಕ್ಕೆ ಅಮೆರಿಕ ಬಹಿರಂಗ ಬೆಂಬಲ ಪ್ರಕಟಿಸಿದೆ. ಆದರೆ ಅಮೆರಿಕದಲ್ಲಿ ಈ ಚೀನೀ ಆ್ಯಪ್‌ಗಳು ನಿಷೇಧಗೊಂಡಿಲ್ಲ ಎನ್ನುವುದು ಕುತೂಹಲಕರ. ಹಾಗೆಯೇ ಚೀನಾದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವ ಅಮೆರಿಕದ ಬಹುತೇಕ ಕಂಪೆನಿಗಳು, ಅಲ್ಲಿಂದ ಕಾಲ್ತೆಗೆದು ಭಾರತಕ್ಕೇನೂ ಬಂದಿಲ್ಲ. ಅವುಗಳುಇಂಡೋನೇಷ್ಯಾ, ವಿಯೆಟ್ನಾಂ, ತೈವಾನ್‌, ಥಾಯ್ಲಂಡ್‌ಗಳಿಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT