ಶನಿವಾರ, ಜೂನ್ 6, 2020
27 °C

ಶತಾಯುಷಿ ಟಾಮಜ್ಜನ 300 ಕೋಟಿಯ ಜೋಳಿಗೆ

ಶ್ರೀಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಜಿಮ್ಮರ್ ಫ್ರೇಮ್. ಮನೆಯ ಹಿಂದಿನ ಮೂವತ್ತಡಿ ಜಾಗ. ಬೆನ್ನು ಬಾಗಿರುವ ಹಳೆಯ ದೇಹ. ಹಳೆಯದು ಅಂದರೆ ಇನ್ನು ಮೂರು ವಾರಗಳಲ್ಲಿ 100 ವರ್ಷ ತುಂಬುವ ವಯಸ್ಸು. ಆದರೂ, ಕೊರೊನಾ ಮಾರಿಗೆ ಹೋರಾಡುತ್ತಿರುವ ಆರೋಗ್ಯ ಸೇವಕರಿಗೆ ಏನಾದರೂ ಮಾಡಬೇಕೆಂಬ ಹಂಬಲ. ಹೊರಟೇಬಿಟ್ಟರು ತಮ್ಮ ಜಿಮ್ಮರ್ ಫ್ರೇಮ್ ಹಿಡಿದು ಮನೆಯ ಹಿಂದಿನ ಮೂವತ್ತಡಿಯ ಜಾಗದಲ್ಲಿ, ನೂರು ತುಂಬುವ ಮುನ್ನ 100 ಲ್ಯಾಪ್ ನಡೆಯುವ ಛಲದಲ್ಲಿ ಕ್ಯಾಪ್ಟನ್ ಟಾಮ್. ಬೆಂಬಲಿಸುವ ಜನರಿಂದ ಒಂದು ಸಾವಿರ ಪೌಂಡ್ ಹಣ ಕೂಡಿಸಿ ಇಂಗ್ಲೆಂಡಿನ ಆರೋಗ್ಯ ಸೇವೆಯ ಒಂದು ಚಾರಿಟಿಗೆ ಕೊಡುವುದು ಆ ಹಿರಿಯ ಜೀವದ ಉದ್ದೇಶ.

ಕ್ಯಾಪ್ಟನ್ ಟಾಮ್ ಮೂರ್ ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಭಾರತ ಮತ್ತು ಬರ್ಮಾದಲ್ಲಿ ಕೆಲಸ ಮಾಡಿದ್ದ ಯೋಧ. ಈಗ ಅವರದು ಕುಟುಂಬದ ಜೊತೆಗೆ ವಿಶ್ರಾಂತ ಜೀವನ. ವಯಸ್ಸಿನ ಭಾರಕ್ಕೆ ದೇಹ ಕುಸಿದಿದ್ದರೂ, ಮನಸ್ಸಿನಲ್ಲಿ ಕುಂದದ ಉತ್ಸಾಹ. ಏಪ್ರಿಲ್ 8ರಿಂದ ಅವರ ನೂರನೇ ಹುಟ್ಟುಹಬ್ಬದ ದಿನವಾದ ಏಪ್ರಿಲ್ 30ರೊಳಗೆ ನೂರು ಲ್ಯಾಪ್ ನಡೆಯುವುದು ಅವರ ಸಂಕಲ್ಪವಾಗಿತ್ತು. ಒಂದು ಸಾವಿರ ಪೌಂಡ್ ದುಡ್ಡು ಒಟ್ಟು ಮಾಡಲು ಅವರ ಮೊಮ್ಮಕ್ಕಳ ಸಹಾಯದಿಂದ ವೆಬ್‌ನಲ್ಲಿ ಹಂಚಿಕೊಂಡಿದ್ದ ಸುದ್ದಿ ಎಲ್ಲೆಡೆ ವೈರಲ್‌ ಆಗಿ ಹಬ್ಬಿ ಒಂದೇ ದಿನಕ್ಕೆ 70 ಸಾವಿರ ಪೌಂಡ್‌ ಸಂಗ್ರಹಗೊಂಡಿದ್ದರಿಂದ ಒಂದು ಮಿಲಿಯನ್ ಪೌಂಡಿನ ಹೊಸ ಗೆರೆ ಹಾಕಿ ತಮ್ಮ ಹೆಜ್ಜೆ ಮುಂದುವರಿಸಿದರು.

ಈ ಸಮಯಕ್ಕೆ ಲಂಡನ್‌ನ ಹೆಚ್ಚಿನ ಆಸ್ಪತ್ರೆಗಳ ವಾರ್ಡ್‌ಗಳು ಕೊರೊನಾಪೀಡಿತರಿಂದ ತುಂಬಿಕೊಂಡಿದ್ದವು. ವೈದ್ಯರು, ನರ್ಸ್‌ಗಳು ಕೊರೊನಾದ ಆತಂಕವನ್ನು ಮಾಸ್ಕ್‌ಗಳಲ್ಲಿ ಮುಚ್ಚಿಟ್ಟು ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಇವರಿಗೆ ಬೆಂಬಲ ನೀಡಲು, ನೂರು ಲ್ಯಾಪ್‌ಗಳನ್ನು ಮುಗಿಸುವ ಯತ್ನದಲ್ಲಿ ಯಾವುದೇ ತಡೆಯಿಲ್ಲದೆ ಕ್ಯಾಪ್ಟನ್ ಟಾಮ್ ಗುರಿ ತಲುಪಿದರು. ಅವರ ಹೆಸರು ಮತ್ತು ಪ್ರಯತ್ನ ಅಷ್ಟರಲ್ಲಿ ಜಗತ್ತನ್ನೆಲ್ಲ ಸುತ್ತಿ, ಅವರ ನೂರನೇ ಹುಟ್ಟುಹಬ್ಬದ ದಿನ ಈ ಮೊತ್ತ ಮೂರು ಕೋಟಿ ಪೌಂಡ್ ಮೀರಿ ನಿಂತಿತ್ತು (ಸುಮಾರು ₹ 300 ಕೋಟಿ).

ಇವರನ್ನು ಸೇರಿಸಿಕೊಂಡು ಮೈಕೆಲ್ ಬಾಲ್ ಎನ್ನುವ ಹಾಡುಗಾರ ಹಾಡಿದ ‘ಯೂ ವಿಲ್ ನಾಟ್ ವಾಕ್ ಅಲೋನ್’ ಹಾಡು ಯುಕೆಯ ಚಾರ್ಟ್‌ಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡಿನ ಸೇನೆ ಇವರಿಗೆ ಗೌರವ ಕರ್ನಲ್ ಹುದ್ದೆ ಕೊಟ್ಟಿದೆ. ಕ್ರಿಕೆಟ್ ಅಭಿಮಾನಿಯಾದ ಇವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡ ಗೌರವ ಸದಸ್ಯರನ್ನಾಗಿ ಸೇರಿಸಿಕೊಂಡಿದೆ. ಇವರ ಅದ್ಭುತ ಒಳಿತನ ಕಾರ್ಯಕ್ಕೆ ‘ನೈಟ್‌ಹುಡ್’ ಪ್ರಶಸ್ತಿಯನ್ನು ಯಾಕೆ ಕೊಡಬಾರದು ಎಂದು ಜನರು ಒತ್ತಾಯಿಸುತ್ತಿದ್ದಾರೆ. 

ತಮಗೆ ಸಿಕ್ಕ ಹೊಸ ಪ್ರಚಾರದಿಂದ ‘ಸ್ನೇಹ, ಸಹಾಯದ ಜೀವನ ನಡೆಸಿ...’ ಎನ್ನುವ ಅನುಭವದ ಮಾತುಗಳನ್ನು ಈ ಹಿರಿಯ ಚೇತನ ಹಂಚಿಕೊಳ್ಳುತ್ತಿದೆ. ಕೊರೊನಾ ಯಾವತ್ತೂ ಇರುವ ಮಾರಿಯಲ್ಲ. ಹೋರಾಡಿ, ಜಯಿಸಿ ಬರುವ ಹೊಸ ನಾಳೆಗಳತ್ತ ಮುಖ ಮಾಡೋಣ ಎನ್ನುವ ಗುಣಾತ್ಮಕ ಸಂದೇಶದ ಮೂಲಕ ಎಲ್ಲರಲ್ಲೂ ಉತ್ಸಾಹ ತುಂಬುತ್ತಿದ್ದಾರೆ.

1918ರ ಇನ್ಫುಯೆಂಜಾ ಮಾರಿಯ ಒಂದೆರಡು ವರ್ಷದಲ್ಲಿ ಜನಿಸಿ, 1920ರ ದಶಕದ ದಿ ಗ್ರೇಟ್ ಡಿಪ್ರೆಶನ್‌ನಲ್ಲಿ ಬೆಳೆದು, ಎರಡನೇ ಮಹಾಯುದ್ಧದಲ್ಲಿ ಹೋರಾಡಿ, ನೂರರ ಹೊಸ್ತಿಲು ದಾಟಿ ನಿಂತಿರುವ ಕರ್ನಲ್ ಟಾಮ್ ಮೂರ್ ಅವರ ಮಾತುಗಳು, ಅವರ ಉತ್ಸಾಹದ ಪ್ರತಿ ಹೆಜ್ಜೆ, ಕೊರೊನಾ ಸಂಕಟದಿಂದ ಹೊರಬರಲು ಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಹೊಸ ಶಕ್ತಿಯನ್ನು ತುಂಬುತ್ತಿದೆ.

ನೂರರ ಗೆರೆ ದಾಟಿ ಮತ್ತೆ ಹೊಸ ಗಾರ್ಡ್ ತೆಗೆದುಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಈ ಹೊಸ ಆಟಗಾರ, ಇನ್ನೆಂದಿಗೂ ಇತಿಹಾಸದ ನೆನಪಿನ ಮೈದಾನದಲ್ಲಿ 100 ನಾಟ್ ಔಟೇ!


 ಲಕ್ಷ ಮೀರಿದ ಟಾಮಜ್ಜನ ನೂರರ ಹುಟ್ಟುಹಬ್ಬದ ಗ್ರೀಟಿಂಗ್ ಕಾರ್ಡ್ಸ್.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು