ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹವೆಂಬ ದಿವ್ಯಸಂಜೀವಿನಿ

Last Updated 25 ಜನವರಿ 2021, 19:30 IST
ಅಕ್ಷರ ಗಾತ್ರ

ಉತ್ಸಾಹವೆಂಬ ಅಗ್ನಿಪರ್ವತದ ತುದಿಯಲ್ಲಿ ಹಿಂಜರಿಕೆಯೆಂಬ ಹುಲ್ಲು ಮೊಳೆಯುವುದಿಲ್ಲ...

ಜೀವನದ ಸ್ಥಾಯಿಭಾವ ವಿಷಾದ. ಆದರೆ ಅದನ್ನು ಮೀರಿ ನಿಲ್ಲುವುದರಲ್ಲಿದೆ ಯಶಸ್ಸಿನ ಗುಟ್ಟು. ಹೀಗೆ ನಿಲ್ಲಲು ನೆರವಾಗುವುದೇ ಉತ್ಸಾಹವೆಂಬ ಇಂಧನ. ಸಂಜೀವಿನಿಯನ್ನು ಹೊತ್ತು ತರುವ ಹನುಮಂತನಿಗೂ ಅವನ ಶಕ್ತಿಯ ನೆನಪನ್ನು ಕೆದಕಿದಾಗಲೇ ಸಾಧನೆಯ ಉತ್ಸಾಹ ಪ್ರಜ್ವಲಿಸುವುದು. ಎಂತೆಂತಹ ಧೀರರೂ ಕಂಗಾಲಾಗಿದ್ದಾರೆ, ಬದುಕಿನ ಸವಾಲುಗಳ ಮುಂದೆ. ಒಳಿತು ಕೆಡುಕಿನ, ಸೋಲು ಗೆಲುವಿನ, ಸಂತೋಷ ದುಃಖದ ನಡುವಿನ ಗೊಂದಲದ ಕ್ಷಣಗಳು ಸರ್ವೇ ಸಾಮಾನ್ಯ. ಆಯ್ಕೆಯ ಪ್ರಶ್ನೆ ಬಂದಾಗ ಎಲ್ಲರೂ ಹ್ಯಾಮ್ಲೆಟ್‍ಗಳೇ! ಕೈಗೊಳ್ಳಲೋ ಬೇಡವೋ ಎಂಬ ಅರ್ಜುನರೇ ಎಲ್ಲ. ಆದರೆ ನೆನಪಿರಲಿ, ಮೋಡ ಎಷ್ಟೇ ದಟ್ಟವಾಗಿ ಮುಚ್ಚಿದರೂ ಅದು ಸೂರ್ಯನನ್ನು ಮುಟ್ಟಲಾರದು. ಅಂತರದಲ್ಲಿ ಮುಸುಕು, ಆವರಣ; ಆಂತರ್ಯದಲ್ಲಿ ಸ್ಪಷ್ಟತೆ, ಜ್ಞಾನ. ಈ ಗುಟ್ಟು ತಿಳಿದಾಗಲೇ ಉತ್ಸಾಹ ಪುಟಿಯುವುದು.

ಇಡೀ ಪ್ರಪಂಚವೇ ಬಾಗಿಲು ಕವುಚಿ ಕುಳಿತಾಗ ಬೇಸರ–ಖಿನ್ನತೆಗಳಿಂದ ತೊಳಲಿ ಬಳಲಿದರು ಕೆಲವರು. ಆದರೆ ಈ ಶಿಶಿರಸುಪ್ತಿ (ಹೈಬರ್ನೇಷನ್) ಕಾಲದಲ್ಲಿ ಹೊಸ ಹವ್ಯಾಸಗಳನ್ನು ಕಲಿತವರು, ಹೊಸ ಭಾಷೆಗಳನ್ನು ಕಲಿತವರು, ಅಂತರ್ಜಾಲವನ್ನು ಬಳಸಿ ಹೊಸ ಉದ್ಯಮಗಳನ್ನು, ಅವಕಾಶಗಳನ್ನು ಸೃಷ್ಟಿಸಿಕೊಂಡವರೂ ಇದ್ದಾರೆ. ಉತ್ಸಾಹವೊಂದಿದ್ದರೆ ಇವೆಲ್ಲ ಸಾಧ್ಯ. ಮನುಷ್ಯನಿಗೆ ತನ್ನೊಳಗಿನ ಶ್ರದ್ಧೆಯಲ್ಲಿ ನಂಬಿಕೆ ಇದ್ದರೆ ಅದು ಉತ್ಸಾಹಭರಿತ ಕಾರ್ಯವಾಗಿ ಹೊರಹೊಮ್ಮುತ್ತದೆ. ಹೀಗೆ ಹೊರಹೊಮ್ಮಿದ ಉತ್ಸಾಹ ರಚನಾತ್ಮಕವಾಗಿ ಬಳಕೆಯಾಗಬೇಕು. ಉತ್ಸಾಹವು ಚಿಮ್ಮುಹಲಗೆ. ಬದುಕಿನ ಸವಾಲುಗಳನ್ನು ಮೀರಿ ನಿಲ್ಲುವ ಪ್ರೇರಕ ಶಕ್ತಿ. ಸ್ವಾಮಿ ವಿವೇಕಾನಂದರು ‘ಜೀವನವೆಂದರೇನು?’ ಎಂಬ ಪ್ರಶ್ನೆಗೆ, ‘ತನ್ನನ್ನು ಕೆಳಕ್ಕೊತ್ತುತ್ತಿರುವ ಪರಿಸರ ಮತ್ತು ಪರಿಸ್ಥಿತಿಗಳ ನಡುವೆ ಜೀವಿಯ ವಿಕಸನ ಮತ್ತು ಮುನ್ನಡೆಯೇ ಜೀವನ’ ಎನ್ನುತ್ತಾರೆ. ಭೂಮಿಗೆ ಬಿದ್ದ ಬೀಜವೊಂದು ಮಣ್ಣಿನ ಪದರಗಳನ್ನು ಸೀಳಿ ಆಕಾಶವನ್ನು ಅರಸುವ ಉತ್ಸಾಹ ಹೊಂದಿರದಿದ್ದರೆ ಅದು ಅಲ್ಲಿಯೇ ಕೊಳೆತುಹೋಗುತ್ತದೆ. ಹಾಗೆಯೇ ಜೀವನದಲ್ಲಿ ಉತ್ಸಾಹವನ್ನು ತುಂಬಿಕೊಂಡು ಮುನ್ನಡೆಯದಿದ್ದರೆ ನಮ್ಮೊಳಗಿನ ಅನಂತಶಕ್ತಿ ಪ್ರಕಾಶಕ್ಕೆ ಬರುವುದಿಲ್ಲ, ಜಗತ್ತಿನ ಗಮನ ಸೆಳೆಯುವುದಿಲ್ಲ, ಮನ್ನಣೆ ಗಳಿಸುವುದಿಲ್ಲ.

ಗಿಬ್ರಾನ್, ‘ಉತ್ಸಾಹವೆಂಬ ಅಗ್ನಿಪರ್ವತದ ತುದಿಯಲ್ಲಿ ಹಿಂಜರಿಕೆಯೆಂಬ ಹುಲ್ಲು ಮೊಳೆಯುವುದಿಲ್ಲ’ ಎನ್ನುತ್ತಾನೆ. ನಮ್ಮ ಉತ್ಸಾಹದ ಸಹಜ ವಿಸ್ತರಣೆಯೇ ಸೃಜನಶೀಲತೆ ಎಂದು ಮತ್ತೊಬ್ಬ ಚಿಂತಕರು ಅಭಿಪ್ರಾಯಪಡುತ್ತಾರೆ. ಈ ಅಭಿವ್ಯಕ್ತಿ ಅತ್ಯಂತ ಪ್ರಸ್ತುತವೂ ಪರಿಣಾಮಕಾರಿಯೂ ಆಗಿರಬೇಕು ಎಂದು ಡೇಲ್ ಕಾರ್ನಗಿ ತಿಳಿಸುತ್ತಾನೆ: ‘ನಮ್ಮ ಮುಂದಿರುವ ಇಂದಿನ ಬದುಕಷ್ಟೇ ಖಚಿತ. ಇಂದಿನ ದಿನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಯಾವುದರಲ್ಲಾದರೂ ಆಸಕ್ತಿ ಹೊಂದಿ. ನಿಮ್ಮನ್ನು ನೀವೇ ಎಚ್ಚರಿಸಿಕೊಳ್ಳಿ. ಒಂದು ಹವ್ಯಾಸವನ್ನು ಬೆಳೆಸಿಕೊಳ್ಳಿ. ಉತ್ಸಾಹದ ಮಂದಾನಿಲ ನಿಮ್ಮೊಳಗೆ ತುಂಬಿಕೊಳ್ಳಲಿ. ಇಂದನ್ನು ಬಹಳ ಚೈತನ್ಯಮಯವಾಗಿ ಮಾಡಿಕೊಳ್ಳಿ.’

ಉತ್ಸಾಹವು ಕೇವಲ ಯುವಕರಿಗಷ್ಟೇ ಅಲ್ಲ, ಎಲ್ಲ ವಯೋಮಾನದವರಿಗೂ ಬೇಕು. ‘ಯೌವನದ ಉತ್ಸಾಹವನ್ನು ಕಳೆಯದಂತೆ ಉಳಿಸಿಕೊಳ್ಳಿ. ಏಕೆಂದರೆ ನೀವು ವೃದ್ಧಾಪ್ಯ ತಲುಪಿದಾಗ ಅದನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದು’ ಎನ್ನುತ್ತಾನೆ ಸೆನೆಕ. ಉತ್ಸಾಹದ ಮತ್ತೊಂದು ಮುಖ್ಯ ಪ್ರಯೋಜನವೆಂದರೆ ಅದು ನಮ್ಮ ಕೆಲಸಕಾರ್ಯಗಳನ್ನು ಪ್ರಿಯವಾಗಿಸುತ್ತವೆ. ಆದರೆ ಇದಕ್ಕೆ ಒಳಗೊಂದು ಸಣ್ಣ ಕಿಚ್ಚು ಇರಬೇಕು. ಜೇಮ್ಸ್‌ ಬಾಲ್ಡ್‌ವಿನ್, ‘ಬೆಂಬೂದಿಯಿಂದ ಬೆಂಕಿ ಹೊತ್ತಿಸಲಾಗುವುದಿಲ್ಲ, ಹಾಗೆಯೇ ಚೈತನ್ಯವೇ ಇಲ್ಲದ ಮನುಷ್ಯನಲ್ಲಿ ಉತ್ಸಾಹವನ್ನು ಉಕ್ಕಿಸಲಾಗುವುದಿಲ್ಲ. ಉತ್ಸಾಹ ನಮ್ಮ ಜೀವನದ ನಿತ್ಯಕಾರ್ಯಗಳನ್ನು ಹಗುರಾಗಿಸುತ್ತದೆ ಮತ್ತು ಕೆಲಸವನ್ನು ಆಹ್ಲಾದಕರ ಚಟುವಟಿಕೆಯನ್ನಾಗಿಸುತ್ತದೆ’ ಎಂದು ಹೇಳಿದ್ದಾನೆ.

ಇದೆಲ್ಲ ಸರಿಯೇ, ಆದರೆ ಈ ಉತ್ಸಾಹವನ್ನು ಗಳಿಸುವುದು ಹೇಗೆ?

ಉತ್ಸಾಹವೆಂಬುದು ಕ್ಷಣಿಕ ಸಿಂಪರಣೆಯಾಗದೆ ನಿರಂತರ ಚಿಲುಮೆಯಾಗಿರಬೇಕು. ರಣೋತ್ಸಾಹವು ಯುದ್ಧ ಮುಗಿಯುವವರೆಗೆ ಇರಬೇಕು; ಮಧ್ಯದಲ್ಲಿ ಮತ್ತೆ ಸಮರವೈರಾಗ್ಯ ತಲೆದೋರಿದರೆ ಅಪಜಯ, ಅಪಯಶಸ್ಸು ಕಟ್ಟಿಟ್ಟ ಬುತ್ತಿ. ಬದುಕೆಂಬುದೇ ದೀರ್ಘ ಹೋರಾಟವಾದ್ದರಿಂದ ಜೀವನವಿಡೀ ಉತ್ಸಾಹವನ್ನು ಕಾಪಾಡಿಕೊಳ್ಳಬೇಕು. ಸಾಕ್ರೆಟಿಸ್ ತನ್ನ ಮರಣದಂಡನೆಯ ಹಿಂದಿನ ರಾತ್ರಿ ಕೂಡ ಹೊಸ ಹಾಡೊಂದನ್ನು ಕಲಿಯುತ್ತಾನೆ.

ಸ್ವಾಮಿ ವಿವೇಕಾನಂದರು

‘ಜೀವನವೆಂದರೇನು?’ ಎಂಬ ಪ್ರಶ್ನೆಗೆ, ‘ತನ್ನನ್ನು ಕೆಳಕ್ಕೊತ್ತುತ್ತಿರುವ ಪರಿಸರ ಮತ್ತು ಪರಿಸ್ಥಿತಿಗಳ ನಡುವೆ ಜೀವಿಯ ವಿಕಸನ ಮತ್ತು ಮುನ್ನಡೆಯೇ ಜೀವನ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT