ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನವೂ ಹಬ್ಬವೇ!

Last Updated 19 ಜುಲೈ 2019, 19:45 IST
ಅಕ್ಷರ ಗಾತ್ರ

‘ನಾಳೆ ಎನ್ನುವುದು ಹಾಳು’ ಎಂಬ ಮಾತನ್ನು ನಾವು ಸಾಮಾನ್ಯವಾಗಿ ಕೆಲಸ-ಕಾರ್ಯಗಳು ಚುರುಕಾಗಿ ನಡೆಯಲಿ ಎಂಬರ್ಥದಲ್ಲಿ ಅನ್ವಯಿಸಿಕೊಳ್ಳುತ್ತೇವಾದರೂ ಸಂಭ್ರಮ ಪಡುವುದಕ್ಕೆ, ಖುಷಿಯಾಗಿರುವುದಕ್ಕೆ ಅನ್ವಯಿಸಿಕೊಳ್ಳುವುದು ಅಪರೂಪ. ಸಂಭ್ರಮದ ಬಗ್ಗೆ ಒಂದು ರೀತಿಯ ಭಯ, ಅಪನಂಬಿಕೆ ಮನುಷ್ಯನ ಮನಸ್ಸಿನ ಆಳದಲ್ಲೆಲ್ಲೋ ಇರುವುದೇ ಇದಕ್ಕೆ ಕಾರಣವಿರಬಹುದು. ಈ ದಿನ ಖುಷಿಯಾಗಿದ್ದಾಗ ಸಂಭ್ರಮ ಪಡುವುದರ ನಡುವೆಯೇ 'ನಾಳೆ ಏನೋ ಹೇಗೋ', 'ಈ ಆನಂದಕ್ಕೆ ಅರ್ಥವಿದೆಯೇ?', 'ಖುಷಿ ಸಕಾರಣವಾದದ್ದೇ?', 'ಈ ಸಂಭ್ರಮ ಶಾಶ್ವತವೇ?' - ಎಂಬ ಆತಂಕ ಅನುಮಾನಗಳು ಒಮ್ಮೆ ಸುಳಿದುಹೋಗುವುದು ಸಾಕು ಮನದಲ್ಲಿ ಕಾರ್ಗತ್ತಲು ಮೂಡಲು.

ನಾಳೆಯ ಬದುಕಿನ ಅನಿಶ್ಚಿತತೆಯ ನೆರಳಲ್ಲೇ ಇಂದಿನ ಸಂಭ್ರಮವನ್ನು ಮನಃಪೂರ್ವಕವಾಗಿ ಆಸ್ವಾದಿಸಲು ಧೈರ್ಯವೂ ಶಾಂತಿಯೂ, ಅಪಾರವಾದ ಜೀವನಪ್ರೀತಿಯೂ ಇರಲೇಬೇಕು. ಬಹುಶಃ ಸಂಭ್ರಮದ ಬಗ್ಗೆ ಭಯ ಪಡುವ, ಸಂಭ್ರಮ ಪಡಲು ಏನಾದರೂ ಕಾರಣ ಹುಡುಕುವ ಮನುಷ್ಯಸ್ವಭಾವದ ಅರಿವಿರುವುದರಿಂದಲೇ ಹಬ್ಬಗಳ, ಶುಭಸಮಾರಂಭಗಳ ನೆಪದಿಂದಲಾದರೂ ಕಡ್ಡಾಯವಾಗಿ ಸಂಭ್ರಮಾಚರಣೆಗೆ ಅವಕಾಶ ದೊರೆಯಲಿ ಎಂಬುದು ನಮ್ಮ ಪೂರ್ವಿಕರ ಆಶಯವಾಗಿರಲೂಬಹುದು. ಆದರೆ ಈ ಆಶಯವನ್ನೇ ಬುಡಮೇಲಾಗಿಸಿ ಎಲ್ಲ ಹಬ್ಬಗಳು, ಸಮಾರಂಭಗಳು ಶುಷ್ಕ ಆಚರಣೆಗಳಾಗಲು ಕ್ಷಣ ಮಾತ್ರವೇ ಸಾಕು.

ಸಂಭ್ರಮಾಚರಣೆ ಬರೀ ಮನಸ್ಸಿಗೆ ಸಂಬಂಧಿಸಿದ್ದಲ್ಲ, ಅದು ಕ್ರಿಯೆಗೆ, ಆಚರಣೆಗೆ, ಅಭಿವ್ಯಕ್ತಿಗೆ ಸಂಬಂಧಿಸಿದ್ದು. ಅದು ಸಾಮೂಹಿಕ, ಸಾಮಾಜಿಕವಾದದ್ದೂ ಹೌದು. ಆದರೆ ಸಂಭ್ರಮ ಎಂದ ತಕ್ಷಣ ಅದು 'ಪಾರ್ಟಿ' ಎಂಬರ್ಥದ ಮೋಜಿನ ಕೂಟವೇ ಆಗಿರಬೇಕಿಲ್ಲ. ಹಾಗೆಯೇ ಸಂಭ್ರಮಾಚರಣೆ ಎಂದರೆ ಒಂದು ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ನಂತರದ ಅಧ್ಯಾಯ ಎಂಬ ಅಭಿಪ್ರಾಯ ಅನೇಕರಲ್ಲಿದೆ. 'ಪರೀಕ್ಷೆಯಲ್ಲಿ ಪಾಸಾದರೆ ಬೈಕ್ ಕೊಡಿಸ್ತೀನಿ' ಅನ್ನೋ ಅಪ್ಪ ಅಮ್ಮಂದಿರು, 'ಈ ಪ್ರೊಜೆಕ್ಟ್ ವಿನ್ ಆದ್ರೆ ಟ್ರಿಪ್ಪು' ಅನ್ನೋ ಬಾಸುಗಳು ಇದಕ್ಕೆ ಎಷ್ಟು ಕಾರಣರೊ ಗೊತ್ತಿಲ್ಲ. ಒಟ್ಟಿನಲ್ಲಿ ಸಂಭ್ರಮಾಚಾರಣೆಗೆ ಯೋಗ್ಯತೆ ಪಡೆದುಕೊಳ್ಳಲು ನಾವೇನೋ ಬೆಟ್ಟ ಕಡಿದು ಹಿಟ್ಟು ಮಾಡಿದಂತಹ ಘನಕಾರ್ಯ ಮಾಡಿ ಬಸವಳಿದಿರಬೇಕು ಎಂಬ ಆಲೋಚನೆ ಮನದ ಪದರಗಳಲ್ಲಿ ಹುದುಗಿರುವುದಂತೂ ನಿಜ.

ಸಂಭ್ರಮದ ಅಥವಾ ಹಬ್ಬದ ಈ ವ್ಯಾಖ್ಯಾನವನ್ನು ಸ್ವಲ್ಪ ಬದಲಾಯಿಸುವುದಾದರೆ ಮೊದಲು ಅದರ ಬಗೆಗಿರುವ ಅಪನಂಬಿಕೆ, ಆತಂಕವನ್ನು ಸೂಕ್ಷ್ಮವಾಗಿ ನಮ್ಮಲ್ಲೇ ಅವಲೋಕಿಸಬೇಕಾಗುವುದು. ಅದಕ್ಕೂ ಮುನ್ನ ನಮಗೆ ಸಂಭ್ರಮಗಳು, ಹಬ್ಬಗಳು ಯಾಕೆ ಬೇಕು ಎನ್ನುವ ಪ್ರಶ್ನೆಗೆ ಪ್ರತಿಯೊಬ್ಬರೂ ಅವರದೇ ಆದ ಉತ್ತರಗಳನ್ನು ಕೊಂಡುಕೊಳ್ಳಬೇಕಾದೀತು. ಯಾಂತ್ರಿಕ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಲು ಎಂಬುದು ಸಾರ್ವತ್ರಿಕವಾದರೂ ಯಾವ ರೀತಿಯಲ್ಲಿ ಎಂಬುದು ವೈಯುಕ್ತಿಕ. ಹಾಗಾಗಿ ನಮ್ಮ ದಿನನಿತ್ಯದ ಜೀವನದಲ್ಲಿ (ಮೊದಮೊದಲು ಪ್ರಯತ್ನಪೂರ್ವಕವಾಗಿ ನಂತರ ಅನಾಯಾಸವಾಗಿ) ಸಂಭ್ರಮವನ್ನು ಆಹ್ವಾನಿಸಿ ಪ್ರತಿದಿನವನ್ನು ಹಬ್ಬದಂತೆ ಆಚರಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಗಳನ್ನು ಹುಡುಕಿಕೊಳ್ಳಬಹುದು. ಕೆಲವು ಉದಾಹರಣೆಗಳು ಇಲ್ಲಿವೆ.

ಹಬ್ಬ ಎಂದ ತಕ್ಷಣ ಮನೆಯನ್ನು ಸಾರಿಸಿ ಸಿಂಗಾರ ಮಾಡುವುದಿಲ್ಲವೇ, ಹಾಗೆಯೇ ಮನೆಯನ್ನು ಅಲಂಕರಿಸುವುದರ ಜೊತೆಗೆ ಕೆಲಸಕ್ಕೆ ಬಾರದ ವಸ್ತುಗಳನ್ನು ಮನೆಯಿಂದ ಹೊರಹಾಕುವಂತೆ, ಪ್ರತಿದಿನವೂ ನಮ್ಮ ಮನೋವಿಕಾಸಕ್ಕೆ ತೊಡಕಾಗಿರುವ ಕಸವನ್ನೂ ಹೊರಹಾಕುವುದರ ಕಡೆ ಒಂದೊಂದೇ ಹೆಜ್ಜೆಗಳನ್ನಿಡುವುದು, Unlearning ಎಂಬ ಪ್ರಕ್ರಿಯೆಗೆ ಒಳಗಾಗುವುದು.

ಸಿಹಿ ಊಟವಿಲ್ಲದ ಹಬ್ಬವೂ ಒಂದು ಹಬ್ಬವೇ? ನಮ್ಮ ಪಂಚೇಂದ್ರಿಯಗಳಿಗೆ ಹಿತವೆನಿಸುವ ಯಾವುದಾದರೂ ಸರಳವಾದ ಕ್ರಿಯೆಯನ್ನು ದಿನವೂ ರೂಢಿಸಿಕೊಳ್ಳುವುದು. ಉದಾ: ಆಕಾಶದ ತಿಳಿನೀಲಿಯನ್ನು, ತಂಗಾಳಿಯ ಆಹ್ಲಾದವನ್ನು, ಚಹಾದ ರುಚಿಯನ್ನು ತನ್ಮಯವಾಗಿ ಆಸ್ವಾದಿಸುವುದು.

ಉಡುಗೊರೆಗಳೇ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದಲ್ಲವೇ? ದಿನವೂ ನಮಗಾಗಿ ಏನಾದರೂ 'ಫೇವರ್' ಮಾಡಿಕೊಳ್ಳುವುದು, ಇತರರಿಗೂ ಮಾಡುವುದು. ಉದಾ: ನಮ್ಮನ್ನು ನಾವು ಬೈದುಕೊಳ್ಳುವುದನ್ನು ಕಡಿಮೆ ಮಾಡುವುದು, ಬೇರೆಯವರ ಚಿಕ್ಕ ಪುಟ್ಟ ತಪ್ಪುಗಳನ್ನು ಮರೆತುಬಿಡುವುದು.

ಹಬ್ಬಕ್ಕೂ ಬಾಲ್ಯಕ್ಕೂ ಎಲ್ಲಿಲ್ಲದ ನಂಟು, ಹಾಗಾಗಿ ಬಾಲ್ಯವನ್ನು ಯಾವುದಾದರೂ ರೀತಿಯಲ್ಲಿ ಜೀವಂತವಾಗಿಟ್ಟುಕೊಳ್ಳುವುದು. ಫ್ಯಾಂಟಸಿಗಳಿಲ್ಲದ ಬದುಕು ಬಲು ನೀರಸ, ಬಾಲ್ಯದ ಕನಸುಗಳನ್ನು ಹೊಸ ರೂಪದಲ್ಲಿ ಕಂಡುಕೊಳ್ಳಲು ಸಾಧ್ಯವಿದೆ.

ಎಲ್ಲರೊಂದಿಗೆ ಬೆರೆತು, ಸದಾಶಯಗಳನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಹಬ್ಬದ ಆಚರಣೆ ಪೂರ್ಣವಾಗುವುದೇ ಇಲ್ಲ. ಪ್ರತಿದಿನವೂ ಕರುಣೆ, ಸ್ನೇಹ, ಸಮಾಧಾನವನ್ನು ಪ್ರಪಂಚಕ್ಕೆ ಕೊಡುವ, ಪ್ರಪಂಚದಿಂದ ಪಡೆದುಕೊಳ್ಳುವ 'ritual' ಒಂದನ್ನು ನಾವೇ ಕಂಡುಹಿಡಿದುಕೊಳ್ಳುವುದು. ಉದಾ: ಬದುಕು ನಮಗೇನು ಕೊಟ್ಟಿದೆಯೋ ಅದಕ್ಕೆ ಧನ್ಯತೆಯನ್ನು ಅನುಭವಿಸಿ, ಇತರರೂ ಸುಖವಾಗಿರಲೆಂದು ಪ್ರಾರ್ಥಿಸುವುದು.

ಇಷ್ಟಾದರೂ ಪ್ರತಿದಿನ ಹಬ್ಬವಾಗಿರಲಿಕ್ಕೆ ಸಾಧ್ಯವಿಲ್ಲದಿರಬಹುದು, ನೋವು, ಸಂಕಟ, ಕೋಪ, ಕಾಠಿಣ್ಯ ಒತ್ತರಿಸಿ ಬಂದಾಗ ಅವುಗಳನ್ನು ಇಲ್ಲವಾಗಿಸುವ ವ್ಯರ್ಥ ಪ್ರಯತ್ನ ಮಾಡುವ ಬದಲು, ಅವುಗಳನ್ನು ಪೂರ್ಣವಾಗಿ ಅನುಭವಿಸುವ ಅನುಮತಿಯನ್ನು ನಮಗೆ ನಾವೇ ಕೊಟ್ಟುಕೊಳ್ಳುವುದು, ಏಕೆಂದರೆ ' knowing what you know and feeling what you feel' ಎಂಬುದು ಜೀವಂತಿಕೆಯ ಲಕ್ಷಣ. ಜೀವಂತಿಕೆಯೇ ಹಬ್ಬದ, ಸಂಭ್ರಮದ ಜೀವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT