ಮಂಗಳವಾರ, ಜನವರಿ 26, 2021
16 °C
‘ಮುತ್ತುಗಳ ನಗರಿ’ ಹೈದರಾಬಾದ್‌ನಲ್ಲಿ ಅಪರೂಪದ ವಸ್ತು ಸಂಗ್ರಹಾಲಯ

PV Web Exclusive: ಸಾಲಾರ್‌ ಜಂಗ್ ಮ್ಯುಸಿಯಂನಲ್ಲಿ ಆ ನಾಲ್ಕು ತಾಸು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸಾಲಾರ್ ಜಂಗ್ ಮ್ಯುಸಿಯಂ ಪ್ರವೇಶಿಸುವ ಮುನ್ನ ನೆನಪಿರಲಿ. ಒಮ್ಮೆ ಒಳಗಡೆ ಹೆಜ್ಜೆಯಿಟ್ಟರೆ, ಹೊರಬರಲು ಕನಿಷ್ಠ 6 ಗಂಟೆ ಬೇಕು. ಪ್ರತಿಯೊಂದು ಗ್ಯಾಲರಿಗೂ ಭೇಟಿ ನೀಡಿ, ಅಲ್ಲಿನ ಒಂದೊಂದು ವಸ್ತುಗಳನ್ನು ಸೂಕ್ಷ್ಮವಾಗಿ ನೋಡಲು ಸಮಯ ಬೇಕು. ಅಲ್ಲಿ ಇಡೀ ಅರ್ಧ ದಿನ ಕಳೆದರೂ ಖಂಡಿತ ಬೇಸರ ಆಗುವುದಿಲ್ಲ’.

ಗೆಳೆಯ ರೌಫ್ ಅಹಮದ್ ಹೇಳಿದ ಮಾತಿದು. ‘ಹೈದರಾಬಾದ್‌ಗೆ ಭೇಟಿ ನೀಡಿದಾಗ ಸಾಲಾರ್ ಜಂಗ್ ವಸ್ತು ಸಂಗ್ರಹಾಲಯಕ್ಕೆ ಹೋಗಬೇಕು ಮತ್ತು ಇತರ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕು’ ಎಂದು ಹೇಳಿದಾಗ, ದೇಶದ ಪ್ರಮುಖ ವಸ್ತು ಸಂಗ್ರಹಾಲಯದ ಬಗ್ಗೆ ಹೀಗೆ ಎರಡು ಸಾಲಿನ ಸಂಕ್ಷಿಪ್ತ ವಿವರಣೆ ಆತ ನೀಡಿದ.

‘ಮುತ್ತುಗಳ ನಗರಿ’ ಹೈದರಾಬಾದ್‌ಗೆ ಇತ್ತೀಚೆಗೆ ಭೇಟಿ ನೀಡಿ, ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದಾಗ ಗೆಳೆಯನ ಮಾತು ಅಕ್ಷರಶಃ ನಿಜವೆನ್ನಿಸಿತು. ಬೆಳಗಿನ ಎರಡು ಗಂಟೆಗಳ ಅವಧಿಯಲ್ಲಿ ಸಂಗ್ರಾಹಲಯವನ್ನು ಸುತ್ತಾಡಿ, ಬೇರೆ ಸ್ಥಳಗಳಿಗೆ ಹೋಗಲು ಕೈಗೊಂಡಿದ್ದ ಯೋಜನೆ ಅನಿವಾರ್ಯವಾಗಿ ಕೈಬಿಡಬೇಕಾಯಿತು.

ದೇಶ ಮತ್ತು ವಿದೇಶದ ಅಮೂಲ್ಯ, ಪುರಾತನ ಮತ್ತು ಪಾರಂಪರಿಕ ವಸ್ತುಗಳನ್ನು ಹೊಂದಿರುವ ಈ ಸಂಗ್ರಹಾಲಯವನ್ನು ಸಮಗ್ರವಾಗಿ ನೋಡಲು 4 ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಕಟ್ಟಡದ ಒಂದು ತುದಿಯಿಂದ ಮತ್ತೊಂದು ತುದಿಗೆ ಓಡಾಡಿ, ಎರಡೂ ಅಂತಸ್ತುಗಳಲ್ಲಿ ತಿರುಗಾಡಿರೂ ಮನಸ್ಸು ತುಂಬಲಿಲ್ಲ.

ವಸ್ತು ಸಂಗ್ರಹಾಲಯಕ್ಕೆ ಬೆಳಿಗ್ಗೆ 10ಕ್ಕೆ ಪ್ರವೇಶಿಸಿ, ಹೊರಬಂದಾಗ ಮಧ್ಯಾಹ್ನ 2.30 ಆಗಿತ್ತು. ಒಂದೊಂದು ಗ್ಯಾಲರಿ ನೋಡಲು ಕಡಿಮೆಯೆಂದರೂ 20 ನಿಮಿಷ ಬೇಕಾಯಿತು. ಕೆಲವನ್ನೂ ಅವಸರದಲ್ಲಿ ನೋಡಬೇಕಾಯಿತು. ಇನ್ನೂ ಕೆಲ ಗ್ಯಾಲರಿಗಳಲ್ಲಿ ಕುತೂಹಲ ಕಾರಣಕ್ಕೆ ದೀರ್ಘ ಹೊತ್ತು ಇರಬೇಕಾಯಿತು.

ಒಂದೊಂದು ಗ್ಯಾಲರಿಗೆ ಭೇಟಿ ನೀಡಿದಾಗಲೂ ಅಲ್ಲಿನ ವಸ್ತುಗಳು ಅಚ್ಚರಿ ಮೂಡಿಸಿದವು. ವಿಶ್ವದ ವಿವಿಧ ಖಂಡಗಳಲ್ಲಿನ ಜೀವನಶೈಲಿ ಮತ್ತು ಸಂಸ್ಕೃತಿ ಬೆರಗು ಉಂಟು ಮಾಡಿದವು. ಪ್ರಖ್ಯಾತ ಕಲಾವಿದರ ಕಲಾಕೃತಿಗಳು, ಶಿಲ್ಪಕಲೆಗಳು ಪುರಾತನ ಸಂಗತಿಗಳನ್ನು ಹೇಳಿದವು. ಅವುಗಳ ಕುರಿತ ಮಾಹಿತಿ ಫಲಕಗಳು ಜ್ಞಾನ ವೃದ್ಧಿಸಿದವು.

ಗ್ಯಾಲರಿಗಳು: ವಸ್ತು ಸಂಗ್ರಹಾಲಯದ ವಿಶಾಲವಾದ ಕಟ್ಟಡದಲ್ಲಿ ಒಟ್ಟು ಮೂರು ವಿಭಾಗಗಳು ಮತ್ತು 39 ಗ್ಯಾಲರಿಗಳಿವೆ. ಕೇಂದ್ರ ವಿಭಾಗದಲ್ಲಿ 27, ಪಶ್ಚಿಮ ವಿಭಾಗದಲ್ಲಿ 7 ಮತ್ತು ಪೂರ್ವ ವಿಭಾಗದಲ್ಲಿ 4 ಗ್ಯಾಲರಿಗಳಿವೆ. ಒಟ್ಟಾರೆ 14,000ಕ್ಕೂ ಹೆಚ್ಚು ವಸ್ತುಗಳು ಪ್ರದರ್ಶಿಸಲಾಗಿದೆ.

ಕೇಂದ್ರ ವಿಭಾಗದಲ್ಲಿ ತೆಲಂಗಾಣ, ತಮಿಳುನಾಡು, ಕರ್ನಾಟಕ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ತಾನ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು–ಕಾಶ್ಮೀರ ರಾಜ್ಯಗಳಿಂದ ಅಲ್ಲದೇ ಕಾಂಗ್ರಾ, ಬಾಶೋಲಿ, ಜೈಪುರ, ಉದಯಪುರ, ಮೇವಾಡ, ಹೈದರಾಬಾದ್, ಗೋಲ್ಕೊಂಡಾ, ವಿಜಯಪುರ, ಕರ್ನೂಲ್ ಪ್ರದೇಶದ ವಸ್ತುಗಳಿವೆ.

ಪಶ್ಚಿಮ ವಿಭಾಗದಲ್ಲಿ ಇಂಗ್ಲೆಂಡ್, ಐರ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಇಟಲಿ, ಜರ್ಮನಿ, ಜೆಕೊಸ್ಲೊವಾಕಿಯಾ, ವೆನ್ಸಿಸ್ ಮತ್ತು ಆಸ್ಟ್ರಿಯಾ ದೇಶದ ಅಮೂಲ್ಯ ವಸ್ತುಗಳಿವೆ. ಪೂರ್ವ ವಿಭಾಗದಲ್ಲಿ ಚೀನಾ, ಜಪಾನ್, ಬರ್ಮಾ, ಕೊರಿಯಾ, ನೇಪಾಳ, ಥಾಯ್ಲೆಂಡ್ ಮತ್ತು ಇಂಡೊನೇಷ್ಯಾದ ವಸ್ತುಗಳಿವೆ. ಇಜಿಪ್ಟ್, ಸಿರಿಯಾ, ಪರ್ಶಿಯಾ ಮತ್ತು ಅರೇಬಿಯಾ ದೇಶದ ವಸ್ತುಗಳೂ ಸಹ ಇವೆ.

ಶಿಲ್ಪಕಲೆ, ಕಲಾಕೃತಿಗಳು, ಆಧುನಿಕ ಕಲಾಕೃತಿಗಳು, ಆನೆ ದಂತದ ಕಲಾಕೃತಿಗಳು, ಜವಳಿ ಉತ್ಪನ್ನಗಳು, ಬಿದರಿ ಕಲಾಕೃತಿಗಳು, ಶಸ್ತ್ರಾಸ್ತ್ರಗಳು, ಉಪಕರಣಗಳು ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮ್ಯುಸಿಯಂಗೆ 70 ವರ್ಷ: ಸಾಲಾರ್‌ ಜಂಗ್ ವಸ್ತು ಸಂಗ್ರಹಾಲಯವು ದೇಶದ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ಒಂದು. ವಿಶ್ವದ ಎಲ್ಲಾ ಭಾಗಗಳ ಅಮೂಲ್ಯ ವಸ್ತುಗಳು, ಕಲಾಕೃತಿಗಳು ಮತ್ತು ಅಪರೂಪದ ದಾಖಲೆಗಳನ್ನು ಹೊಂದಿರುವ ಈ ವಸ್ತು ಸಂಗ್ರಹಾಲಯಕ್ಕೆ ಪ್ರತಿಷ್ಠಿತ ಸ್ಥಾನಮಾನ ತಂದುಕೊಡುವಲ್ಲಿ ಸಾಲಾರ್ ಜಂಗ್ ಕುಟುಂಬವು ಮಹತ್ತರ ಪಾತ್ರ ನಿಭಾಯಿಸಿದೆ. ಹೈದರಾಬಾದ್‌ನಲ್ಲಿ ನಿಜಾಮ್ ಆಳ್ವಿಕೆಯಿದ್ದ ಸಂದರ್ಭದಲ್ಲಿ ಸಾಲಾರ್‌ ಜಂಗ್ ಕುಟುಂಬದ ಐವರು ಪ್ರಧಾನ ಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವುದು ವಿಶೇಷ.

ಈ ವಸ್ತುಸಂಗ್ರಹಾಲಯದ ಮುಖ್ಯ ರೂವಾರಿ ನವಾಬ್ ಮೀರ್ ಯೂಸುಫ್ ಅಲಿ ಖಾನ್ (ಸಾಲಾರ್ ಜಂಗ್ III). 1912ರಲ್ಲಿ ನವಾಬ್ ಮೀರ್ ಓಸ್ಮಾನ್ ಅಲಿ ಖಾನ್ (ನಿಜಾಮ್ VII) ಅವರು ನವಾಬ್ ಮೀರ್ ಯೂಸುಫ್ ಅಲಿ ಖಾನ್ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಎರಡೇ ವರ್ಷದಲ್ಲಿ ಆ ಹುದ್ದೆಯನ್ನು ಅವರು ತ್ಯಜಿಸಿದರು.

ವರ್ಣಮಯ ಮತ್ತು ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಅವರು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯತ್ತ ವಿಶೇಷ ಆಸಕ್ತಿ ತೋರಿಸಿದರು. ದೇಶ–ವಿದೇಶ ಸುತ್ತಿದ ಅವರು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿದರು. ಆಯಾ ಪ್ರದೇಶದ ಜೀವನಶೈಲಿ, ಪದ್ಧತಿ ಮತ್ತು ವಿಶೇಷತೆಗಳನ್ನು ಅರಿತರು. ಪುರಾತನ ಮತ್ತು ಪಾರಂಪರಿಕ ವಸ್ತುಗಳ ಸಂಗ್ರಹಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಅವರು ವಿಶ್ವದೆಲ್ಲೆಡೆ ಸ್ನೇಹಿತರು ಮತ್ತು ಆಪ್ತರನ್ನು ಗಳಿಸಿದರು. ವಸ್ತು ಸಂಗ್ರಹಾಲಯಕ್ಕೆ ಅಲ್ಲದೇ ವೈಯಕ್ತಿಕ ಆಸಕ್ತಿಯಿಂದಲೂ ಅಮೂಲ್ಯ ವಸ್ತುಗಳನ್ನು ಖರೀದಿಸಿದರು.

ಪುರಾತನ, ಪಾರಂಪರಿಕ ಮತ್ತು ಅಪರೂಪದ ಕಲಾಕೃತಿಗಳನ್ನು, ಹಸ್ತಪ್ರತಿಗಳನ್ನು ಮುಂತಾದವುಗಳನ್ನು ಸಂಗ್ರಹಿಸಲು ಆದ್ಯತೆ ನೀಡಿದಅವರು ತಮ್ಮ ಕುಟುಂಬ ಸದಸ್ಯರ ಕುರಿತು ಹಲವಾರು ಪುಸ್ತಕಗಳನ್ನು ಹೊರತಂದರು. 1949ರ ಮಾರ್ಚ್‌ 2ರಂದು ಅವರು ನಿಧನರಾದ ಬಳಿಕ, ಕುಟುಂಬ ಸದಸ್ಯರು ಎಲ್ಲಾ ವಸ್ತುಗಳನ್ನು ಒಟ್ಟುಗೂಡಿಸಿದರು, ದೇಶಕ್ಕೆ ಸಮರ್ಪಸಿದರು.

1951ರ ಡಿಸೆಂಬರ್ 16ರಂದು ದೇಶದ ಮೊದಲ ಪ್ರಧಾನಿ ಪಂಡಿತ್ ಜವಹಾರಲಾಲ್ ನೆಹರೂ ಅವರು ಸಾಲಾರ್ ಜಂಗ್ ಅವರ ನಿವಾಸದಲ್ಲೇ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು. ನಂತರ ಕೇಂದ್ರ ಸರ್ಕಾರವು ಕುಟುಂಬ ಸದಸ್ಯರ ಸಮ್ಮತಿ ಪಡೆದು ವಸ್ತು ಸಂಗ್ರಹಾಲಯವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ‌

ನಂತರ ಆಗಿನ ವೈಜ್ಞಾನಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ವ್ಯಾಪ್ತಿಗೆ ಒಪ್ಪಿಸಲಾಯಿತು. 1961ರಲ್ಲಿ ಸಂಸತ್ತಿನ ಕಾಯ್ದೆಯನುಸಾರ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ರಾಷ್ಟ್ರದ ಪ್ರಮುಖ ಸಂಸ್ಥೆ ಎಂದು ಘೋಷಿಸಲಾಯಿತು. ವಸ್ತು ಸಂಗ್ರಹಾಲಯದ ಕಟ್ಟಡ ನಿರ್ಮಾಣಕ್ಕೆ 1963ರ ಜುಲೈ 23ರಂದು ಜವಾಹರಲಾಲ್ ನೆಹರೂ ಶಂಕುಸ್ಥಾಪನೆ ನೆರವೇರಿಸಿದರು

1968ರಲ್ಲಿ ವಸ್ತು ಸಂಗ್ರಹಾಲಯವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆಗಿನ ರಾಷ್ಟ್ರಪತಿ ಜಾಕೀರ್ ಹುಸೇನ್ ಅವರು ಉದ್ಘಾಟಿಸಿದರು. ನಂತರ ಆಂಧ್ರಪ್ರದೇಶ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸ್ವಾಯತ್ತ ಮಂಡಳಿಯನ್ನು ರಚಿಸಿ, ಅವರಿಗೆ ಒಪ್ಪಿಸಲಾಯಿತು. ಆಂಧ್ರಪ್ರದೇಶದ ವಿಭಜನೆಯಾದ ಬಳಿಕ ಪ್ರಸ್ತುತ ತೆಲಂಗಾಣದ ರಾಜ್ಯಪಾಲರು ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು