ಗುರುವಾರ , ಏಪ್ರಿಲ್ 15, 2021
20 °C

ಸರ್ಕಾರದ ಭಾಷೆಯೇ ಪ್ರಜೆಗಳ ಭಾಷೆಯಾಗಬೇಕೇ? ಭಿನ್ನ ಧ್ವನಿಗೆ ಇಲ್ಲಿಲ್ಲವೇ ಜಾಗ?

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

Prajavani

ವಿದ್ವಾಂಸರಾದ ಪ್ರೊ. ಹಂಪ ನಾಗರಾಜಯ್ಯ ಅವರನ್ನು ಪೊಲೀಸರು ಸ್ಟೇಶನ್ನಿಗೆ ಕರೆಯಿಸಿಕೊಂಡು, ಸ್ಪಷ್ಟೀಕರಣ ಕೇಳಿ ಕಳುಹಿಸಿಕೊಟ್ಟ ವಿಷಯ ಈಚಿನದು. ಹಂಪನಾ ಅವರನ್ನು ನಾನು ಕಳೆದ 40 ವರ್ಷಗಳಿಂದ ಬಲ್ಲೆ. ಅವರೆಂದೂ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರಲ್ಲ, ಬದಲು ವ್ಯವಸ್ಥೆಯ ಪರವಾಗಿಯೇ ಇದ್ದವರು. ಅಂತ ಹಿರಿಯರು ಕಾರ್ಯಕ್ರಮವೊಂದರಲ್ಲಿ ರೈತರ ಮೇಲಿನ ಕಳಕಳಿಯಿಂದ ಹೇಳಿದ ಉಪಮೆಯೊಂದಕ್ಕೆ ವ್ಯವಸ್ಥೆ ಬೆಚ್ಚಿ ಬಿದ್ದಿದೆ ಎಂದರೆ ಈ ವ್ಯವಸ್ಥೆಯು ಯಾವ ಮಟ್ಟಿನ ಮನೋರೋಗದಿಂದ ನರಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಹಂಪನಾ ಅವರನ್ನು ಸ್ಟೇಶನ್ನಿಗೆ ಬರ ಹೇಳಿದ ಪೊಲೀಸರಿಗೆ ಅವರ‍್ಯಾರೆಂದು ತಿಳಿದಿರಲಾರದು. ಎಂ.ಎಂ.ಕಲಬುರ್ಗಿಯವರಿಗೆ ಗುಂಡು ಹಾಕಿದವನಿಗೂ ಕಲಬುರ್ಗಿಯವರ ಯೋಗ್ಯತೆಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆದರೆ, ಇವರೆಲ್ಲರಿಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತುಗಳ ಮೂಲಕ, ಹೇಗೆ ಮಾಡಿದರೆ ಈ ಕಾಲಕ್ಕೆ ಉಚಿತವಾಗಬಹುದು ಎಂಬ ಒಂದು ಬಗೆಯ ತಿಳಿವಳಿಕೆ ಮೂಡಿರುತ್ತದೆ. ಟಿ.ವಿ. ಚಾನೆಲ್‌ಗಳ ಅರಚಾಟ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿ, ಎಲ್ಲೆಂದರಲ್ಲಿ ಕೇಳಿ ಬರುತ್ತಿರುವ ದ್ವೇಷಪೂರಿತ ಭಾಷೆ, ರಾಜಕಾರಣಿಗಳು ಬಳಸುವ ಸೌಜನ್ಯರಹಿತ ನುಡಿಗಟ್ಟುಗಳು, ನಿರಂತರವಾಗಿ ನಡೆಯುತ್ತಿರುವ ಚಾರಿತ್ರ್ಯಹನನ ಇತ್ಯಾದಿಗಳು ನಮ್ಮ ನೆಲದ ಗುಣವನ್ನೇ ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನೇ  ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನರು ಬದಲಾಗಿದ್ದಾರೆ. ಇಂಥಲ್ಲಿ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಲೇಖಕರಿಗೆ ಮಹತ್ವ ಕಡಿಮೆಯಾಗುತ್ತದೆ.

ಈ ನಡುವೆ, ನಾಡಿನ ಬಗೆಗೆ ತಿಳಿವಳಿಕೆಯನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರ್ಕಾರಗಳ  ಅತಿ ದೊಡ್ಡ ಕರ್ತವ್ಯ ಎಂಬುದನ್ನು ಸರ್ಕಾರಗಳೇ  ಮರೆತಿವೆ, ಮಾತ್ರವಲ್ಲ ಜನರಿಂದಲೂ ಅದನ್ನು ಮರೆಸಲು ನೇರವಾಗಿ ಮತ್ತು ಪರೋಕ್ಷವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ತಂತ್ರಗಳಿಗೆ ಬಲಿ ಬಿದ್ದ ಪ್ರಜೆಗಳೂ ಸರ್ಕಾರದ ಭಾಷೆಯನ್ನೇ ನಿಧಾನವಾಗಿ ಕಲಿಯಲು ಆರಂಭಿಸಿದ್ದಾರೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರ್ಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ವರ್ತಮಾನ ಕಾಲದಲ್ಲಿ ಸರ್ಕಾರಗಳೇ ಅಂಥ ಪ್ರಕ್ರಿಯೆಗಳಿಗೆ ವಿರುದ್ಧವಾಗಿವೆ.

ನಮ್ಮ ಸಂವಿಧಾನ ಮತ್ತು ಕಾನೂನುಗಳನ್ನು ಹೇಗೆ ಬೇಕಾದರೂ ತಿರುಚುವ ಕಲೆಗಾರಿಕೆಯನ್ನು ನಮ್ಮ ಪ್ರಸಿದ್ಧ ವಕೀಲರುಗಳೇ ನಮಗೆ ಹೇಳಿಕೊಡುತ್ತಿರುವುದರಿಂದ, ಹಣವಿದ್ದರೆ ನಾವೀಗ ಸುರಕ್ಷಿತ ಮತ್ತು ಹೇಗೆ ಬೇಕಾದರೂ ಮಾತಾಡಬಹುದು ಎಂಬ  ನಂಬುಗೆ ವೇಗವಾಗಿ ಬೆಳೆಯುತ್ತಿದೆ. ಸರ್ಕಾರದ ಕೃಪೆಯಿದ್ದರೆ ‘ಗೋಲಿ ಮಾರೋ’ ಎಂದು ಸಾರ್ವಜನಿಕವಾಗಿಯೇ ಹೇಳಬಹುದು. ಇಲ್ಲದಿದ್ದರೆ ಮುನಾವರ್ ಫಾರೂಕಿಯ ಒಂದು ಜೋಕ್ ಕೂಡಾ ಕೇಳುವಂತಿಲ್ಲ.  

ಇಂಡಿಯನ್ ಪೀನಲ್ ಕೋಡ್ (ಐಪಿಸಿ) 124ಎ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 70 ಕೇಸುಗಳನ್ನು ‘ದೇಶದ್ರೋಹ’ದ ಆಪಾದನೆಯ ಮೇಲೆ ದಾಖಲಿಸಲಾಗಿದೆ. 1860ರ ಹೊತ್ತಿಗೆ ದೇಶದಾದ್ಯಂತ ದಂಗೆಯೇಳುತ್ತಿದ್ದ ಸಮುದಾಯಗಳನ್ನು ಸದೆ ಬಡೆಯಲು ಬ್ರಿಟಿಷರು ಚಾಲ್ತಿಗೆ ತಂದ ಕಾನೂನನ್ನು ಈಗ ದೇಶದ ಪ್ರಜೆಗಳ ಮೇಲೆಯೇ ನಿರ್ದಯವಾಗಿ ಜಾರಿಗೆ ತರಲಾಗುತ್ತಿದೆ.

ಈ ಲೇಖನ ಬರೆಯುವ ಹೊತ್ತಿಗೆ ದೆಹಲಿ ಗಡಿಭಾಗದಲ್ಲಿ ಚಳವಳಿ ನಡೆಸುತ್ತಿರುವ ಕೆಲವು ರೈತ ನಾಯಕರ ಮೇಲೂ ದೇಶದ್ರೋಹದ ಕೇಸು ದಾಖಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ಧ ಸಂವಿಧಾನಾತ್ಮಕವಾಗಿಯೇ ಹೋರಾಡಿದವರ ಮತ್ತು ಭೂ ಸಂಬಂಧಿ ವ್ಯಾಜ್ಯಗಳಲ್ಲಿ ತೊಡಗಿಸಿಕೊಂಡ ಸಾವಿರಾರು ನಾಗರಿಕರ ಮೇಲೆಯೂ ದೇಶದ್ರೋಹದ ಕೇಸುಗಳನ್ನು ಜಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರಲ್ಲಿ ಹೆಚ್ಚಿನವರು ಸರ್ಕಾರದ ಕ್ರಮಗಳನ್ನು ವಿಮರ್ಶೆ ಮಾಡಿದ್ದಾರೆಯೇ ವಿನಾ ದೇಶದ್ರೋಹದ ಕೆಲಸವೇನೂ ಮಾಡಿದಂತಿಲ್ಲ. ಆದರೆ ಐದು ವರ್ಷಕ್ಕೊಮ್ಮೆ ಅಧಿಕಾರಕ್ಕೆ ಬರುವ ಸರ್ಕಾರವು ತನ್ನನ್ನೇ ದೇಶದೊಂದಿಗೆ ಸಮೀಕರಿಸಿಕೊಂಡು ಈ ಕೆಲಸಗಳನ್ನು ಮಾಡಲು ಹಿಂಜರಿಯಲಿಲ್ಲ.

ಐಪಿಸಿ ಸೆಕ್ಷನ್ 153ಎ – ಗುಂಪುಗಳ ನಡುವೆ ದ್ವೇಷ ಉಂಟು ಮಾಡುವಂಥ ಮಾತುಗಳನ್ನು ‘ಅಪರಾಧ’ ಎಂದು ಹೇಳುತ್ತದೆ. ಆದರೆ ದ್ವೇಷದ ಮಾತುಗಳನ್ನಾಡಿಯೇ ಅಧಿಕಾರಕ್ಕೆ ಬಂದ ಎಷ್ಟು ಜನರ ಮೇಲೆ ಇಂಥ ಕೇಸುಗಳು ದಾಖಲಾಗಿವೆ? ಇದು ನಮ್ಮ ನ್ಯಾಯ ವ್ಯವಸ್ಥೆಯ ದೌರ್ಬಲ್ಯದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಭಿನ್ನ ಧ್ವನಿಗಳನ್ನು ಅಡಗಿಸುವ ಹುನ್ನಾರ ಪ್ರಜಾಪ್ರಭುತ್ವವನ್ನು ಸಾಯಿಸಿ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತದೆ.

ಹಂಪನಾ ಅವರಂಥ ಲೇಖಕರೇ ಸುಲಭವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಮಾಯಕ  ವಿದ್ಯಾರ್ಥಿಗಳು ಆನಂತರದ ಸಾಲಿನಲ್ಲಿರುತ್ತಾರೆ. ಈ ವಿಷಯದಲ್ಲಿ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದವರೆಲ್ಲರೂ ಬಲಿಪಶುಗಳೇ. 1989ರಲ್ಲಿ ರಾಜೀವ್ ಗಾಂಧಿಯವರು ಮುಸ್ಲಿಮರ ಪ್ರತಿಭಟನೆಗೆ ಹೆದರಿ, ಸಲ್ಮಾನ್ ರಶ್ದಿಯವರ  ಸೆಟಾನಿಕ್ ವರ್ಸಸ್ ಅನ್ನು ನಿಷೇಧಿಸಿದರು.  1990 ಮತ್ತು 2000ರಲ್ಲಿ ಜಗತ್ಪ್ರಸಿದ್ಧ ಕಲಾವಿದ ಎಂ.ಎಫ್.ಹುಸೇನರ ಮೇಲೆ ಆಕ್ರಮಣ ಮಾಡಲಾಯಿತು. 2012ರಲ್ಲಿ ವ್ಯಂಗ್ಯ ಚಿತ್ರಕಾರ ಅಸೀಂ ತ್ರಿವೇದಿಯವರನ್ನು ಜೈಲಿಗೆ ತಳ್ಳಲಾಯಿತು. 2014ರಲ್ಲಿ ಗುಜರಾತಿನ ದೀನನಾಥ ಬಾತ್ರಾ ಎಂಬವರ ದೂರಿನ ಮೇಲೆ ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್’ ಪುಸ್ತಕವನ್ನು ಪೆಂಗ್ವಿನ್ ಹಿಂತೆಗೆದುಕೊಂಡಿತು.

2015ರಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಕೋಮುವಾದಿ ಶಕ್ತಿಗಳ ಉಪದ್ರವ ತಾಳಲಾರದೆ ‘ನಾನು ಸತ್ತಿದ್ದೇನೆ’ ಎಂದು ಘೋಷಿಸಿಕೊಂಡರು. ಅದು ಲೇಖಕನೊಬ್ಬನ ಆತ್ಮಹತ್ಯೆಗೆ ಸಮನಾಗಿತ್ತು. 2016ರಲ್ಲಿ ಮದ್ರಾಸ್ ಹೈಕೋರ್ಟು ಮುರುಗನ್ ಪರವಾಗಿ ತೀರ್ಪು ಕೊಟ್ಟರೂ ಅಷ್ಟು ಹೊತ್ತಿಗೆ ಲೇಖಕ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ಎ.ಕೆ. ರಾಮಾನುಜನ್ ರಾಮಾಯಣದ ಮೇಲೆ ಬರೆದ ಪ್ರಬುದ್ಧ ಲೇಖನವನ್ನು ತೆಗೆದು ಹಾಕಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಉನ್ನತ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ.

‘ಮಾನನಷ್ಟ’ ಮೊಕದ್ದಮೆಗಳೂ ಈಚಿನ ದಿನಗಳಲ್ಲಿ ಬರಹಗಾರರ ಬಾಯಿ ಕಟ್ಟಿಸಿದೆ. ಪೀನಲ್ ಕೋಡಿನ 499 ಮತ್ತು 500ರ ಪ್ರಕಾರ ನಿಮ್ಮ ಮೇಲೆ ಯಾರು ಬೇಕಾದರೂ ಮೊಕದ್ದಮೆ ದಾಖಲಿಸಬಹುದು. ‘ಆ ಲೇಖನದಿಂದ ನನ್ನ ಭಾವನೆಗಳಿಗೆ ನೋವಾಗಿದೆ’ ಎಂದರೆ ಸಾಕು, ಈ ದಿನಗಳಲ್ಲಿ ಏನು ಬೇಕಾದರೂ ಅಗಬಹುದು. ‘ನಾನು ಕಂಡದ್ದನ್ನು, ಅನುಭವಿಸಿದ್ದನ್ನು ಬರೆಯದಿದ್ದರೆ ನನ್ನ ಭಾವನೆಗಳಿಗೆ ನೋವಾಗುತ್ತದೆ’ ಎಂದು ಯಾರೂ ಹೇಳುವಂತಿಲ್ಲ. ವರ್ಷಾನುಗಟ್ಟಲೆ ನಡೆಯಬಹುದಾದ ಕೋರ್ಟು ವ್ಯವಹಾರಗಳಿಗೆ ಹೆದರಿ ಲೇಖಕರು ಬರೆಯುವುದನ್ನೇ ನಿಲ್ಲಿಸಿಬಿಡುತ್ತಾರೆ. ವ್ಯವಸ್ಥೆಗೆ ಬೇಕಾದ್ದೂ ಅದುವೇ.

ಪ್ರಸಿದ್ಧ ಲೇಖಕರಾದ ಪರೊಂಜಯ್ ಥಾಕುರ್ತಾ ಮತ್ತು ಜ್ಯೋತಿರ್ಮಯ ಚೌಧುರಿ ಅವರು ಬರೆದ ಪುಸ್ತಕವೊಂದರ ಮೇಲೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ 1.64 ಕೋಟಿ ಡಾಲರ್‌ಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತು. ಇದನ್ನು ಗಮನಿಸಿದ ಅನೇಕ ಲೇಖಕರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಬರೆಯುವುದನ್ನೇ ನಿಲ್ಲಿಸಿದರು. ಕಂಪನಿಗಳಿಗೆ ಬೇಕಾದದ್ದೂ ಅದುವೇ. ಪರಿಸರವಾದಿ ಪತ್ರಿಕೋದ್ಯಮಿ ಕೇಯ ಆಚಾರ್ಯರನ್ನೂ ಹೀಗೆಯೇ ಮಾಡಿ ಹೆದರಿಸಿ ಬಾಯಿ ಮುಚ್ಚಿಸಲಾಯಿತು. ಪರಿಣಾಮವಾಗಿ ಪರಿಸರ ನಾಶ ಸರಾಗವಾಯಿತು. ಇಂಥ ಬೆಳವಣಿಗೆಗಳ ನೇರ ಪರಿಣಾಮ ಜನರಿಗೆ ಸತ್ಯ ಹೇಳಬೇಕಾದ  ಪತ್ರಕರ್ತರ ಮೇಲಾಗಬೇಕಿತ್ತು. ಅದರೆ ಹೆಚ್ಚಿನ ಪತ್ರಕರ್ತರು ಸರ್ಕಾರದ ಪರವಾಗಿಯೇ ಮಾತಾಡುತ್ತಾ ಅಪಾಯದಿಂದ ಪಾರಾಗುತ್ತಿದ್ದಾರೆ.

ಚಾನೆಲ್ಲುಗಳಿಗೆ ದುಡ್ಡು ಹಾಕಿದವರು ಸರ್ಕಾರದಲ್ಲಿ ಶಾಮೀಲಾಗಿರುವುದರಿಂದ ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದೂ ತಪ್ಪು. ಜನಗಳಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಆದರೆ ಅವರಲ್ಲಿ ಹೆಚ್ಚಿನ ಪರ್ಯಾಯಗಳಿಲ್ಲ.  2020ರಲ್ಲಿ  ಜಗತ್ತಿನ 180 ದೇಶಗಳಲ್ಲಿ ನಮ್ಮ ದೇಶ ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಿಂದ 142ನೇ ಸ್ಥಾನದಲ್ಲಿ ನಿಂತಿರುವುದು ಆತಂಕಕಾರಿ ವಿಷಯವಾಗಿದೆ.

ಸರ್ಕಾರವನ್ನು ವಿಮರ್ಶೆ ಮಾಡಿದವರನ್ನೆಲ್ಲ ‘ರಾಷ್ಟ್ರದ್ರೋಹಿ’ ಎಂದು ಬಿಂಬಿಸಲು ನಮ್ಮಲ್ಲಿ ದೊಡ್ಡ ಪಡೆಯೇ ಕೆಲಸ ಮಾಡುತ್ತದೆ. ಇಂಟರ್ನೆಟ್‌ಗಳನ್ನು ಸರ್ಕಾರವೇ ಬೇಕೆಂದಾಗ ಸ್ಥಗಿತಗೊಳಿಸುತ್ತದೆ. ಜನರು ತಾವಾಗಿಯೇ ಬಾಯಿ ಮುಚ್ಚಿಕೊಳ್ಳುವಂತೆ ಮಾಡುವ ಹೊಸ ತಂತ್ರಗಾರಿಕೆಯನ್ನು ಭಾರತೀಯ ಸಮಾಜ ಕಂಡುಕೊಂಡಿದೆ. ಲೇಖಕ ಡಾ. ಆನಂದ್ ತೇಲ್ತುಂಬ್ಡೆ, ತೆಲುಗಿನ ಕವಿ, ವರವರ ರಾವ್, ಫರಿದಾಬಾದಿನ ಡಾ.ಸುಧಾ ಭಾರದ್ವಾಜ್, ನವದೆಹಲಿಯ ಗೌತಮ್ ನವ್‌ಲಖಾ, ಮುಂಬೈನ ವರ್ನಾನ್ ಗೋನ್ಸಾಲ್ವೆಸ್ ಹಾಗೂ ಅರುಣ್ ಫೆರೆರಾ, ರಾಂಚಿಯ
ಸ್ಟ್ಯಾನ್ಲಿ ಸ್ವಾಮಿಯವರು ಈಗಾಗಲೇ ಜೈಲು ಸೇರಿದ್ದಾರೆ. ಅವರಿಗೆ ಜಾಮೀನು ಕೂಡಾ ಸಿಕ್ಕಿಲ್ಲ.

ಮಾನವ ಹಕ್ಕುಗಳ ಹೋರಾಟಗಾರರಾದ ಇವರ ಬಗ್ಗೆ ನ್ಯಾಯಾಲಯ ಏನು ಹೇಳುವುದೋ ಕಾದು ನೋಡಬೇಕಾಗಿದೆ. ಆದರೆ ಇವರ ಬಂಧನದಿಂದ, ಸರ್ಕಾರೀ  ಪ್ರಾಯೋಜಿತ ಲೇಖಕರು ಹೊರತುಪಡಿಸಿ ಉಳಿದ ಲೇಖಕರು ಬೆಚ್ಚಿಬಿದ್ದಿದ್ದಾರೆ. ಪ್ರೊ.ಅಮರ್ತ್ಯ ಸೇನ್, ನೋಮ್ ಚಾಮ್ಸ್ಕಿ, ಜೀನ್ ಡ್ರೆಜ್, ಬಿ.ಎಲ್. ಮುಂಗೇಕರ್, ರೋಮಿಲಾ ಥಾಪರ್ ಮೊದಲಾದ 5000ಕ್ಕೂ ಹೆಚ್ಚು ವಿದ್ವಾಂಸರು ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ವಿರುದ್ಧ ಮಾತಾಡಿದ್ದಾರೆ. ಇಂಥವರ ಮಹತ್ವ ತಿಳಿಯದವರು ಅವರನ್ನೂ ಅರ್ಬನ್‌ ನಕ್ಸಲ್‌ಗಳು ಎಂದು ಕರೆದು ಅವಮಾನಿಸಿದರು. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಬಲವಾದ ಪೆಟ್ಟು ಬಿದ್ದಿದೆ. 2020ರ ಮಾನವ ಹಕ್ಕುಗಳ ಸೂಚ್ಯಂಕದಲ್ಲಿ 162 ದೇಶಗಳಲ್ಲಿ ಭಾರತದ ಸ್ಥಾನ 111.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದೆಡೆ ಹಾಗೆ ನಡೆಯುತ್ತಿದ್ದರೆ, ಇನ್ನೊಂದೆಡೆಯಲ್ಲಿ ಜನರ ನಡುವೆ ಪರಸ್ಪರ ಅಸಹನೆ ಹುಟ್ಟಿಸುವಂಥ ವ್ಯವಸ್ಥೆ ಗಟ್ಟಿಯಾಗಿ ಬೆಳೆಯುತ್ತಿದೆ. ಇದು ಅಧಿಕಾರ ರಾಜಕಾರಣಕ್ಕೆ ಪೂರಕವಾಗಿರುವುದರಿಂದ ಸರ್ಕಾರವೂ ಈ ಬಗ್ಗೆ ಮೌನ ತಾಳಿದೆ. ಆರ್ನಬ್ ಗೋಸ್ವಾಮಿ ಮತ್ತು ಅತನನ್ನು ಅನುಸರಿಸುವವರು ಟಿಆರ್‌ಪಿಗಾಗಿ ನಡೆಸುವ ಏಕಪಕ್ಷೀಯ ಟಿ.ವಿ ಚರ್ಚೆಗಳು ಭಾರತೀಯ ಸಮಾಜದ ಮೇಲೆ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ. ಮೇಲ್ನೋಟಕ್ಕೆ ಅವು ಭಾರತೀಯ ಸಮಾಜವನ್ನು ಒಂದು ಬಗೆಯ ಉದ್ರೇಕಕ್ಕೆ ತಳ್ಳಿವೆ. ಅಸಹನೆಯನ್ನು ವ್ಯಾಪಕವಾಗಿ ಬೆಳೆಸಿವೆ. ಮುಸ್ಲಿಮರನ್ನು ಅತಂತ್ರಗೊಳಿಸಿವೆ. ರಾಜಕೀಯವು ನಮ್ಮ ಕುಟುಂಬಗಳ ಒಳಗೆ ಪ್ರವೇಶಿಸಿ, ಛಿದ್ರಗೊಳಿಸಿದೆ. ಜನರಿಗೆ ಎಲ್ಲಿ, ಏನನ್ನು ಎಷ್ಟು ಮಾತಾಡಬೇಕೆಂಬ ಪ್ರಜ್ಞೆಯೇ ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಶಃ ಸರ್ಕಾರಗಳು ಸಂವೇದನಾಶೀಲವಾಗಿ ವರ್ತಿಸುವ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರೆ ಹಂಪನಾ ಅವರಂಥವರೂ ಪೊಲೀಸ್ ಸ್ಟೇಶನ್ನಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬಂತಾಗಿದೆ ಪರಿಸ್ಥಿತಿ. ಸರ್ಕಾರವು ತನ್ನ ಭಾಷೆಯನ್ನೇ ಪ್ರಜೆಗಳ ಭಾಷೆಯನ್ನಾಗಿ  ಪರಿವರ್ತಿಸಬಯಸಿದರೆ ಆಗ ಅಲ್ಲಿ ಸರ್ಕಾರ ಇರುತ್ತದೆ, ಪ್ರಜೆಗಳು ಇರುವುದಿಲ್ಲ. ಪ್ರಜೆಗಳೇ ಇಲ್ಲದ ಪ್ರಜಾಪ್ರಭುತ್ವವನ್ನು ನಾವೀಗ  ಕಟ್ಟಲು ಹೊರಟಿದ್ದೇವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು