ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ವಿಚಾರ ಪ್ರಣೀತ ಸರ್ವೋದಯ ಮೇಳ

Last Updated 8 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಚಳವಳಿಯ ಘಟನಾವಳಿಗಳನ್ನು ಮೆಲುಕು ಹಾಕುತ್ತಲೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಗಾಂಧಿಮಾರ್ಗದಲ್ಲಿ ಪರಿಹಾರ ಹುಡುಕುವ ವೇದಿಕೆಯಾಗಿರುವ ಸರ್ವೋದಯ ಮೇಳ ಶ್ರೀರಂಗಪಟ್ಟಣದಲ್ಲಿ ಕಳೆದ 72 ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಾ ಬಂದಿದೆ.

ಕಾವೇರಿ ನದಿ ತೀರದ ಪಶ್ಚಿಮವಾಹಿನಿಯಲ್ಲಿ 1948ರಲ್ಲಿ ಆರಂಭವಾದ ಈ ಮೇಳದಲ್ಲಿ ಗಾಂಧೀಜಿಯ ಒಡನಾಡಿಗಳು, ಅವರ ವಿಚಾರಧಾರೆಗಳನ್ನು ಒಪ್ಪುವವರು ಮೂರು ದಿನಗಳ ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ; ಪಾಲ್ಗೊಳ್ಳುತ್ತಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆ, ಹೊರರಾಜ್ಯಗಳ ಗಾಂಧೀಜಿಯ ಅನುಯಾಯಿಗಳು ಈ ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇಲ್ಲಿಗೆ ಬರುವವರು ಪ್ರಜಾತಂತ್ರ ವ್ಯವಸ್ಥೆ, ಸಾಮಾಜಿಕ ಕಂಟಕಗಳು, ಚನಾವಣಾ ಪದ್ಧತಿ, ಶಿಕ್ಷಣ ನೀತಿ, ಮಹಿಳಾ ಸ್ವಾತಂತ್ರ್ಯ, ವಿದೇಶಾಂಗ ವ್ಯವಹಾರ ಹೀಗೆ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚಿಂತನೆ ನಡೆಸುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರ ಡಾ.ಸಿ. ಬಂದೀಗೌಡ ಸರ್ವೋದಯ ಮೇಳದ ಪ್ರಮುಖ ರೂವಾರಿ. 1948ರ
ಫೆ. 12ರಂದು ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ, ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಗಾಂಧೀಜಿ ಅವರ ಚಿತಾಭಸ್ಮ ವಿಸರ್ಜಿಸಲಾಯಿತು. ಅದರ ಕುರುಹಾಗಿ ಇಲ್ಲಿ ಸರ್ವೋದಯ ಮೇಳ ನಡೆಯುತ್ತಿದೆ. ಆರಂಭದ ವರ್ಷಗಳಲ್ಲಿ ಪಶ್ಚಿಮವಾಹಿನಿಯ ‘ಮಹಾರಾಜರ ಛತ್ರ’ದಲ್ಲಿ, ನಂತರ ‘ಚಂದ್ರಗಿರಿ ಚಲುವರಾಯಶೆಟ್ಟರ ಛತ್ರ’ದಲ್ಲಿ ಆಮೇಲೆ ಪಕ್ಕದ ‘ನಂದಿ ಬಸಪ್ಪ ಛತ್ರ’ದಲ್ಲಿ ಮೇಳ ನಡೆಯುತ್ತಿತ್ತು.

ಕಳೆದ 8 ವರ್ಷಗಳಿಂದ ಪಟ್ಟಣದ ವಾಟರ್‌ಗೇಟ್‌ ಸಮೀಪ ಇರುವ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಮೇಳ ನಡೆಯುತ್ತಿದೆ.

ಆರಂಭದ ವರ್ಷಗಳಲ್ಲಿ ಬಂದೀಗೌಡ ಅವರ ನೇತೃತ್ವದಡಿ ಬೆರಳೆಣಿಕೆಯಷ್ಟು ಮಂದಿ ಗಾಂಧಿ ಅನುಯಾಯಿಗಳು ಪಾಲ್ಗೊಂಡು ಸರ್ವೋದಯದ ಪರಿಕಲ್ಪನೆಯಡಿ ವಿಷಯಗಳ ಚರ್ಚೆ ನಡೆಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಈ ಚರ್ಚೆ ವಿಸ್ತೃತ ರೂಪ ಪಡೆಯಿತು. ಸ್ವಾಗತ ಸಮಿತಿ ರಚಿಸಿಕೊಂಡು ಹೊರ ರಾಜ್ಯಗಳಿಂದಲೂ ಗಾಂಧಿವಾದಿಗಳು, ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸುವ ಪರಿಪಾಠ ಪ್ರಾರಂಭವಾಯಿತು. 60ರ ದಶಕದ ಹೊತ್ತಿಗೆ ಈ ಮೇಳ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಸಾರ್ವಕಾಲಿಕವಾದ ಗಾಂಧಿ ವಿಚಾರಗಳನ್ನು ನಾಡಿನಾದ್ಯಂತ ಹರಡುವ ವೇದಿಕೆಯಾಗಿದ್ದು ವಿಶೇಷ. 60ರ ದಶಕದಲ್ಲಿ 5 ದಿನಗಳ ಕಾಲ ನಡೆಯುತ್ತಿದ್ದ ಸರ್ವೋದಯ ಮೇಳ 90ರ ದಶಕದ ನಂತರ 3 ದಿನಗಳಿಗೆ ಸೀಮಿತವಾಗಿದೆ.

ಆಚಾರ್ಯರು

ಸರ್ವೋದಯ ಮೇಳದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸುಚೇತ ಕೃಪಲಾನಿ, ಗಾಂಧೀಜಿ ಅವರ ಸಮೀಪದ ಒಡನಾಡಿಯಾಗಿದ್ದ ದಾದಾ ಧರ್ಮಾಧಿಕಾರಿ, ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದ ಸತ್ಯವ್ರತ, ನೀಲತ್ತಹಳ್ಳಿ ನ. ಭದ್ರಯ್ಯ, ಸ್ವಾತಂತ್ರ್ಯ ಹೋರಾಟಗಾರರಾದ ಎಂ.ಎನ್‌. ಜೋಯಿಸ್‌, ಸೀತಾರಾಮ ಅಯ್ಯಂಗಾರ್‌, ಅನಂತರಂಗಾಚಾರ್‌, ಎಚ್‌.ಎಸ್‌. ದೊರೆಸ್ವಾಮಿ, ವೆಂಕೋಬರಾವ್‌, ಸುರೇಂದ್ರ ಕೌಲಗಿ, ಅನಂತ ರಂಗಾಚಾರ್‌, ಶಂಕರ ಉತ್ತೂರ, ಗೋರೂರು ಗರುಡ ಶರ್ಮಾ, ಕೋ. ಚನ್ನಬಸಪ್ಪ, ಬಿ.ಆರ್‌. ಪ್ರಾಣೇಶರಾವ್‌ ಸೇರಿದಂತೆ ಪ್ರಮುಖರು ಮೇಳದ ಆಚಾರ್ಯರಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

ಈಚಿನ ವರ್ಷಗಳಲ್ಲಿ ಡಾ.ಸಿ. ಬಂದೀಗೌಡ ಅವರ ಪುತ್ರ ಡಾ.ಬಿ. ಸುಜಯಕುಮಾರ್‌ ಸರ್ವೋದಯ ಮೇಳದ ಸಂಯೋಜಕರಾಗಿ ಮುನ್ನಡೆಸುತ್ತಿದ್ದಾರೆ. ಮಂಡ್ಯ, ಮೈಸೂರು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳನ್ನು ಮೇಳದತ್ತ ಆಕರ್ಷಿಸಿ ಗಾಂಧೀಜಿ ಅವರ ವಿಚಾರಗಳನ್ನು ಯುವ ಮನಸ್ಸುಗಳಿಗೆ ಉಣಬಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT