ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲಿ ಚಿನ್ನದ ತಾಜ್‌!

Last Updated 25 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಹುಣ್ಣಿಮೆಯ ಚಂದಿರನಂತೆ ಕಂಗೊಳಿಸುವ ತಾಜ್‌ಮ‌ಹಲ್ ಅಪ್ಪಟ‌ ಪ್ರೀತಿ, ಪ್ರೇಮದ ಸಂಕೇತ. ಶ್ವೇತವರ್ಣದ ಈ ಸುಂದರ ಅಮೃತಶಿಲೆಯ ಮಹಲ್‌ಗೂಅಮೃತಸರದ ‘ಸ್ವರ್ಣ ಮಂದಿರ‌’ದಂತೆಚಿನ್ನದ ಹೊದಿಕೆ ತೊಡಿಸಿದರೆ ಹೇಗಿರುತ್ತದೆ?

ಬೆಂಗಳೂರಿನ ಶ್ರೀರಾಮಪುರದ ಮಂಜುನಾಥ ಜುವೆಲರಿ ವರ್ಕ್ಸ್‌ ಮಾಲೀಕ ನಾಗರಾಜ ರೇವಣಕರ್‌ ಮನದಲ್ಲಿ ಬಹಳ ದಿನಗಳಿಂದ ಇಂಥದೊಂದು ಕುತೂಹಲವಿತ್ತು. ಆ ಸಹಜ ಕುತೂಹಲಕ್ಕೆ ಕಾಲ ಕೂಡಿ ಬಂದಿದ್ದು ಎರಡು ತಿಂಗಳ ಕೊರೊನಾ– ಲಾಕ್‌ಡೌನ್‌ ಸಮಯದಲ್ಲಿ.

ಎರಡು ತಿಂಗಳು ಜುವೆಲರಿ ಅಂಗಡಿ ಬಾಗಿಲು ಮುಚ್ಚಿದ ಕಾರಣ ಕೈಯಲ್ಲಿ ಕೆಲಸ ಇರಲಿಲ್ಲ. ಸುಮ್ಮನೆ ಕಾಲಹರಣ ಮಾಡುವ ಬದಲು ಏನಾದರೂ ಮಾಡಬೇಕಲ್ಲ ಎಂಬ ಚಡಪಡಿಕೆ ಶುರುವಾಯಿತು ಅವರಿಗೆ. ಆಗಲೇ ನೆನಪಾಗಿದ್ದು ಚಿನ್ನದಲ್ಲಿ ತಾಜ್‌ಮಹಲ್‌ ಕೆತ್ತುವ ಕನಸು!

ಹೊರಗಡೆ ಚಿನ್ನದ ಅಂಗಡಿ ಬಾಗಿಲು ಹಾಕಿದ್ದರೂ, ಒಳಗೆ ಮಾತ್ರ ನಾಗರಾಜ ಅವರ ಕೈಯಲ್ಲಿ ತಾಜ್‌ಮಹಲ್‌‌‌ ಅರಳಲು ಶುರುವಾಯಿತು. ನಿತ್ಯ ಮುಂಜಾನೆ ಮೂರು ತಾಸು ಮತ್ತು ಸಂಜೆ ಮೂರು ತಾಸು– ಒಟ್ಟು ಆರು ತಾಸುಗಳ ಕಾಲ ಪಟ್ಟಾಗ ಕುಳಿತು, ತಾಜ್‌ನ ಒಂದೊಂದೇ ಭಾಗಗಳನ್ನು ಕೆತ್ತುತ್ತಾ ಹೊರಟರು. ಕುಸುರಿ ಕೆಲಸದಿಂದ ಕಣ್ಣು ನೋಯಿಸುತ್ತಿತ್ತು.ಮಸೂರದ ಸಹಾಯವಿಲ್ಲದೆ, ಟೇಬಲ್‌ ಲ್ಯಾಂಪ್‌ ಕೂಡ ಬಳಸದೇ ಬರಿಗಣ್ಣಿನಿಂದ ಸೂಕ್ಷ್ಮ ಕುಸುರಿ ಕೆಲಸ ಮಾಡಲು ತಾಳ್ಮೆ ಇರಬೇಕು. ಅಂಥ ತಾಳ್ಮೆಯೊಂದಿಗೆ ಸತತ 27 ದಿನಗಳ ಶ್ರಮದ ನಂತರ ಚಿನ್ನದ ತಾಜ್‌ಮಹಲ್‌‌‌‌ ಸಿದ್ಧವಾಯಿತು.

‘ಬಹುದಿನಗಳ ಕನಸು, ಲಾಕ್‌ಡೌನ್‌ನಲ್ಲಿ ನನಸಾಯಿತು. ನೋಡಿ ನನ್ನ ಕನಸನ್ನು’ ಎನ್ನುತ್ತಾ ಚಿನ್ನದ ಪುಟ್ಟ ಮಹಲ್‌ ಅನ್ನು ಕೈಗಿತ್ತರು ನಾಗರಾಜ. ಆ ಮಹಲ್‌ ಅನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾಗ, ‘ಬರಿಗಣ್ಣಿನಿಂದ ನೋಡಿದರೆ ನಾಲ್ಕು ಮಿನಾರ್‌ ಮತ್ತು ಒಂದು ಗುಂಬಜ್‌ ಬಿಟ್ಟರೆ ಬೇರೆನೂ ಕಾಣುವುದಿಲ್ಲ. ಈಗ ಒಂದು ಅಚ್ಚರಿ ತೋರಿಸುತ್ತೇನೆ ಇರಿ’ ಎಂದು, ಕೈಗೆ ಭೂತಗನ್ನಡಿ ಕೊಟ್ಟರು.

‘ಈಗ ಈ ಕನ್ನಡಿಯಲ್ಲಿ ನೋಡಿ’ ಎಂದರು. ಮಹಲ್ ಮೇಲೆ ಭೂತಕನ್ನಡಿ ಹಿಡಿದಾಗ, ವಾವ್‌, ಗೋಡೆ, ಗೋಪುರ ಮತ್ತು ಮಿನಾರ್‌ಗಳ‌‌ ಮೇಲಿನ ಸೂಕ್ಷ್ಮ ಕೆತ್ತನೆ ಕೆಲಸಗಳು ಕಾಣಿಸಿದವು. ಅಷ್ಟೇ ಅಲ್ಲ, ತಾಜ್‌ಮಹಲ್‌ ಮೇಲಿನ ಗೋಪುರದ ಒಳ ಮತ್ತು ಹೊರ ಆವರಣದ ಮೇಲೆ ಚಿನ್ನದ ದಾರದಲ್ಲಿ ಐ ಲವ್ ಇಂಡಿಯಾ, ಕರ್ನಾಟಕ ಮತ್ತು ಡಾ.ರಾಜ್‌ ಅವರ ಹೆಸರು ಬರೆದಿರುವುದೂ ಕಂಡಿತು. ‘ನಾನು ಅಣ್ಣಾವ್ರ ಅವರ ಅಭಿಮಾನಿ. ಅದಕ್ಕಾಗಿ ಅವರ ಹೆಸರು ಹಾಕಿದ್ದೇನೆ’ ಎಂದರು ನಾಗರಾಜ.

‘ಇಷ್ಟೇ ಅಲ್ಲ, ನಿಮಗೆ ಮತ್ತೊಂದು ಅಚ್ಚರಿ ತೋರಿಸ್ತಿನಿ ಇರಿ...’ ಎಂದವರೇ ಒಂದೊಂದಾಗಿ ಮಿನಾರ್‌, ಗೋಪುರ ಕಳಚ ತೊಡಗಿದರು. ಚಿನ್ನದ ತಟ್ಟೆ (ಫ್ಲಾಟ್‌ಫಾರ್ಮ್‌), ನಾಲ್ಕು ಮಿನಾರ್‌, ಒಂದು ಗೋಪುರ, ಗೋಡೆಗಳು ಸೇರಿದಂತೆ ಒಂಬತ್ತು ಬಿಡಿಭಾಗಗಳನ್ನು ಕಳಚಿ ಚಿಕ್ಕ ಬಾಕ್ಸ್‌ನಲ್ಲಿ ಹಾಕಿಟ್ಟರು. ನಂತರ ಮತ್ತೆ ಸ್ಕ್ರೂ ಹಾಕಿ ಎಲ್ಲವನ್ನೂ ಮರಳಿ ಮೊದಲಿನಂತೆ ಜೋಡಿಸಿಟ್ಟರು. 4 ಸೆಂಟಿ ಮೀಟರ್‌ ಎತ್ತರ ಮತ್ತು 3.5 ಸೆಂಟಿ ಮೀಟರ್‌ ಅಗಲವಿರುವ ಈ ಕಿರು ತಾಜ್‌ಮಹಲ್‌‌ ಅನ್ನು ಅಂಗೈಯಲ್ಲಿ ಎತ್ತಿ ಹಿಡಿಯಬಹುದು. 16, 900 ಗ್ರಾಂ ತೂಕದ ಈ ಪ್ರತಿಕೃತಿ ತಯಾರಿಸಲು 22 ಕ್ಯಾರೆಟ್‌ ಚಿನ್ನ ಬಳಸಿದ್ದಾರೆ.

ನಾಗರಾಜ ಅವರ ಸಂಗ್ರಹದಲ್ಲಿ ಆಯಾ ಕಾಲಕ್ಕೆ ಸಾಕ್ಷಿಯಾಗುವಂತಹ ಹಲವು ಚಿನ್ನದ ಪ್ರತಿಕೃತಿಗಳಿವೆ. ಈ ಪ್ರತಿಕೃತಿಗಳನ್ನು ಕೆಲ ಗ್ರಾಹಕರು ದುಪ್ಪಟ್ಟು ಹಣ ನೀಡಿ ಖರೀದಿಸಲು ಮುಂದೆ ಬಂದಿದ್ದಾರೆ. ಆದರೆ, ಅವುಗಳನ್ನು ಅವರು ಮಾರಾಟ ಮಾಡಿಲ್ಲ. ‘ಹವ್ಯಾಸ ಮತ್ತು ಆತ್ಮ ಸಂತೋಷಕ್ಕಾಗಿ ಇವುಗಳನ್ನು ತಯಾರಿಸಿದ್ದೇನೆಯೇ ಹೊರತು ಮಾರಾಟಕ್ಕಲ್ಲ’ ಎನ್ನುವುದು ನಾಗರಾಜ ಅವರ ನಿಲುವು.

ಬಾಹುಬಲಿ, ಮಿನಿ ವರ್ಲ್ಡ್ ಕಪ್!

ಕಳೆದ ಬಾರಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್ ಗೆದ್ದು ತರಲಿಲ್ಲ. ಅವರು ಗೆದ್ದು ಟ್ರೋಫಿ ತರದಿದ್ದರೂ, ನಾಗರಾಜ ಅವರ ಸಂಗ್ರಹದಲ್ಲಿ ‘ವಿಶ್ವಕಪ್’ ಇದೆ. ಅದೂ ಚಿನ್ನದ ಟ್ರೋಫಿ. ಅಷ್ಟೇ ಅಲ್ಲ, ಚಂದ್ರನ ಅಂಗಳಕ್ಕೆ ಹಾರಿದ ‘ಬಾಹುಬಲಿ’ ರಾಕೆಟ್‌ ಪ್ರತಿಕೃತಿಯೂ ಇದೆ. ಇವುಗಳ ಸಾಲಿಗೆ ಈಗ ತಾಜ್‌ಮಹಲ್‌ ಸೇರ್ಪಡೆಯಾಗಿದೆ.

ವಿಶೇಷ ಸಂದರ್ಭಗಳಿಗೆ ಅನುಸಾರವಾಗಿ ಚಿನ್ನದಲ್ಲಿ ಏನಾದರೂ ತಯಾರಿಸುವುದು ನಾಗರಾಜ ಹವ್ಯಾಸಗಳಲ್ಲೊಂದು. ಕಳೆದ ವಿಶ್ವಕಪ್‌ ಕ್ರಿಕೆಟ್‌ ಸಂದರ್ಭದಲ್ಲಿ ಮೂರು ದಿನದಲ್ಲಿ ಮಿನಿವರ್ಲ್ಡ್‌ಕಪ್‌ ಪ್ರತಿಕೃತಿ ತಯಾರಿಸಿ ಗಮನ ಸೆಳೆದಿದ್ದರು.ಕಿರು ಬೆರಳಲ್ಲಿ 0.490 ಮಿಲಿ ಗ್ರಾಂ ತೂಕದ ವರ್ಲ್ಡ್‌ ಕಪ್‌ ಎತ್ತಿ ಹಿಡಿಯಬಹುದು.

ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಯಶಸ್ಸಿನ ಸಂಭ್ರಮದ ಸಮಯದಲ್ಲಿ ಚಿನ್ನದಲ್ಲಿ ಮಿನಿ ‘ಚಂದ್ರಯಾನ–2’ ಪ್ರತಿಕೃತಿ ತಯಾರಿಸಿಇಸ್ರೊ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದರು.30 ತಾಸಿನಲ್ಲಿಮೂರು ಸೆಂಟಿ ಮೀಟರ್‌ ಎತ್ತರದ 2.700 ಗ್ರಾಂ ಚಿನ್ನದ ಬಾಹುಬಲಿ ರಾಕೆಟ್‌ ಸಿದ್ಧಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT