ಭಾನುವಾರ, ಜುಲೈ 3, 2022
27 °C

ಮೈಸೂರು ಹುಲಿ ಮತ್ತು ಹುಲಿಮನೆ ಶಾಸ್ತ್ರಿ

ನಾರಾಯಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ನಾನು ಈಗ ಹೇಳ/ಬರೆಯಹೊರಟಿರುವುದು ಕತೆಯಲ್ಲ; ಕತೆಯಾಗಿ ಬಿಡಬಹುದಾದ ಘಟನೆಗಳ ಒಂದು ಸರಣಿಯ ಕುರಿತು. ಐವತ್ತು ವರ್ಷಗಳಿಂದ ನಾನು ಅಮೆರಿಕದಲ್ಲಿ ವಾಸಮಾಡುತ್ತಿದ್ದೇನೆ. ಈ ದೇಶಕ್ಕೆ ಹೇಗೆ ಬಂದೆ, ಯಾಕೆ ಬಂದೆ ಎಂಬೆಲ್ಲ ವಿವರಗಳು ಈ ಕಥನಕ್ಕೆ ಅಪ್ರಸ್ತುತ.

ನಾನು ನನ್ನ ಕುಟುಂಬ ವಾಸವಾಗಿರುವ ಮನೆಯ ಬೀದಿಯ ಹೆಸರು ಯಾರ್ಕ್‌ಟೌನ್ ರಸ್ತೆ. ಈ ರಸ್ತೆ ದಾಟಿದರೆ ವಾಷಿಂಗ್ಟನ್ ಅವೆನ್ಯೂ. ಎಡಕ್ಕೆ ತಿರುಗಿದರೆ ಕಾರ್ನ್‌ವಾಲೀಸ್‌ ರಸ್ತೆ. ಇದುವರೆಗೂ ಗಮನಿಸದ ಈ ಅಮುಖ್ಯ ವಿಷಯದತ್ತ ಚಿತ್ತಹರಿದಿದ್ದು ಇತ್ತೀಚೆಗೆ ವಾಕಿಂಗ್‌ ಮಾಡುವಾಗ. ಮುನ್ನೂರು ವರ್ಷಗಳ ಹಿಂದೆ ಅಮೆರಿಕ, ಬ್ರಿಟಿಷ್‌ ಅಧೀನದಿಂದ ಸ್ವತಂತ್ರರಾಗಲು ತೊಡಗಿದ ಯುದ್ಧಗಳಲ್ಲಿ ಮುಖ್ಯಪಾತ್ರವಹಿಸಿದ್ದ ವ್ಯಕ್ತಿಗಳ ಅಥವಾ ಸ್ಥಳಗಳ ಹೆಸರನ್ನೇ ಬೀದಿಗಳಿಗೆ ಇಡಲಾಗಿದೆ. ಅಮೆರಿಕದ ಸಂಕ್ಷಿಪ್ತ ಇತಿಹಾಸದಲ್ಲಿ ಒಂದು ಅತ್ಯಂತ ಮಹತ್ವಪೂರ್ಣ ಸಂದರ್ಭವೆಂದರೆ, 1781ರಲ್ಲಿ ಯಾರ್ಕ್‌ಟೌನ್ ಕಾಳಗದಲ್ಲಿ ಜನರಲ್ ಜಾರ್ಜ್ ವಾಷಿಂಗ್ಟನ್‌, ಜನರಲ್ ಚಾರ್ಲ್ಸ್ ಕಾರ್ನ್‌ವಾಲೀಸ್‌ನನ್ನು ಸೋಲಿಸಿ ಅಮೆರಿಕದ ಮೇಲೆ ಬ್ರಿಟಿಷ್‌ ಆಡಳಿತವನ್ನು ಕೊನೆಗೊಳಿಸಿದ್ದು.

ಆ ಹೆಸರನ್ನು ನಾನು ಆರೇಳು ವರ್ಷದ ಹುಡುಗನಾಗಿದ್ದಾಗ ಸಿದ್ದಾಪುರದಲ್ಲಿ ಕೇಳಿದ್ದೆ. ಕೇಳಿದ್ದೆ ಎನ್ನುವುದಕ್ಕಿಂತ, ಆ ಹೆಸರಿನ ಪಾತ್ರವೊಂದನ್ನು ನಾಟಕವೊಂದರಲ್ಲಿ ಕಂಡಿದ್ದು ನನ್ನ ಸ್ಮೃತಿಯಲ್ಲಿ ಉಳಿದಿದೆ. ಅದು, 1947 ಅಥವಾ 1948ನೇ ಇಸವಿಯಾಗಿರಬಹುದು. ನಾನು ಹುಟ್ಟಿದ ಹಳ್ಳಿ ದೊಡ್ಡಮನೆಯನ್ನು ಬಿಟ್ಟು ನನ್ನ ಅಪ್ಪ ಕುಟುಂಬವನ್ನು ಸಿದ್ದಾಪುರ ಪೇಟೆಗೆ ತಂದಿದ್ದ. ಮುಂದೆ ಅಲ್ಲಿಯೇ ಮನೆ ಕಟ್ಟುವ ಉದ್ದೇಶದಿಂದ ಊರಿನ ಮಧ್ಯದಲ್ಲಿ, ತಾಲ್ಲೂಕು ಕಚೇರಿಯ ಎದುರಿಗೆ ಇದ್ದ ಖಾಲಿ ನಿವೇಶನವನ್ನು ಖರೀದಿಸಿದ್ದ. ಅದೇ ವೇಳೆಗೆ, ಹುಲಿಮನೆ ಸೀತಾರಾಮ ಶಾಸ್ತ್ರಿಯವರ ‘ಜಯಕರ್ನಾಟಕ ನಾಟಕ ಸಂಘ’ ಸಿದ್ದಾಪುರದಲ್ಲಿ ಸ್ವಲ್ಪ ಕಾಲ ನಾಟಕಗಳನ್ನು ಆಡಿತೋರಿಸುವ ಸಲುವಾಗಿ ಜಾಗ ಹುಡುಕುತ್ತಿರುವಾಗ, ಅವರಿಗೆ ಮೊದಲಿನಿಂದ ಪರಿಚಯವಿದ್ದ ನನ್ನ ಅಪ್ಪ ತನ್ನ ನಿವೇಶನವನ್ನು ಬಳಸಿಕೊಳ್ಳಲು ಅನುಮತಿಯಿತ್ತ.

ಪ್ರಯೋಗಶೀಲತೆ ಮತ್ತು ಸ್ವಯಂಪ್ರತಿಭೆಯಿಂದ ಪ್ರಸಿದ್ಧಿ ಪಡೆದಿದ್ದ ಶಾಸ್ತ್ರಿಯವರು, ದೊಡ್ಡ ಊರುಗಳಲ್ಲಿ ತಮ್ಮ ಕಂಪನಿಯ ನಾಟಕಗಳನ್ನಾಡಿಸಿ ಜಯಭೇರಿ ಹೊಡೆದವರು. ಕೆಲವೇ ದಿನಗಳಲ್ಲಿ ಜಯಕರ್ನಾಟಕ ನಾಟಕ ಸಂಘ, ಸಿದ್ದಾಪುರ ಎಂದು ಹೆಸರನ್ನು ಹೊತ್ತುಕೊಂಡ ಆಗಿನ ಕಾಲಕ್ಕೆ ಭವ್ಯವಾದ ತಂಬು ಸಿದ್ಧವಾಗಿ ನಿಂತಿತು. ಇದುವರೆಗೂ ನೋಡಿರದ ಹೊಸ ಮಾದರಿಯ ಸೀನರಿ ಹಾಗೂ ಸೆಟ್‌ಗಳನ್ನು ಹೊಂದಿದ್ದಲ್ಲದೆ ರಂಗಮಂಚವನ್ನು ಬೆಳಗಿಸಲು ಝಗಮಗಿಸುವ ವಿದ್ಯುದ್ದೀಪಗಳು ಬೇರೆ. ತಂಬಿನ ಹಿಂಭಾಗದಲ್ಲಿ ಹೊರಗೆ ಜನರೇಟರ್. ವಿದ್ಯುದ್ದೀಪವನ್ನೇ ಕಂಡಿರದ ಸಿದ್ದಾಪುರದ ಹಾಗೂ ಸುತ್ತಮುತ್ತಲಿನ ಜನರಿಗೆ ಮಾಯಾನಗರಿಯೊಂದನ್ನು ನೋಡಿದ ಅನುಭವ.

ನನಗೆ ಯಾವಾಗ ಎಂದರೆ ಆವಾಗ, ಎಷ್ಟು ಬಾರಿಯಾದರೂ ನಾಟಕಗಳನ್ನು ನೋಡಲು ಕೊಟ್ಟಿದ್ದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡೆ. ಕಂಪನಿಯ ಐದಾರು ನಾಟಕಗಳಲ್ಲಿ, ಪನ್ನಾದಾಸಿ ಅಥವಾ ವೀರ ಕುಣಾಲ್, ವರದಕ್ಷಿಣೆ, ಎಚ್ಚಮನಾಯಕ ಹಾಗೂ ಮೈಸೂರುಹುಲಿ ಟಿಪ್ಪುಸುಲ್ತಾನ್ ನನ್ನ ನೆನಪಿನಲ್ಲಿ ಉಳಿದಿವೆ. ಸ್ವಲ್ಪ ಹೆಚ್ಚು ನೆನಪಿರುವ ನಾಟಕ ಟಿಪ್ಪುಸುಲ್ತಾನ್. ಆ ನಾಟಕವನ್ನು ನಾನು ಐದಾರು ಬಾರಿ ನೋಡಿರುವುದರಿಂದಲೋ, ಮುಂದೆ ಅದೇ ನಾಟಕದಲ್ಲಿ ಪಾತ್ರ ವಹಿಸಿದ್ದರಿಂದಲೋ ಅದರ ವಿವರಗಳನ್ನೆಲ್ಲ ಮರೆತಿಲ್ಲ.

ಶಾಸ್ತ್ರಿಯವರೇ ಬರೆದಿದ್ದ ಆ ನಾಟಕವನ್ನು ಅವರೇ ಅಭಿನಯಿಸಿ ನಾಡಿನಾದ್ಯಂತ ಪ್ರಸಿದ್ಧಿಗೆ ತಂದ ವಿಷಯ ನನಗೆ ತಿಳಿದದ್ದು ವರ್ಷಗಳ ನಂತರ. ಆದರೆ, ಶಾಸ್ತ್ರಿಯವರು ತಮ್ಮ ಅಭಿನಯದಲ್ಲಿ ಕಾಣಿಸಿದ ಟಿಪ್ಪುಸುಲ್ತಾನನ ದೇಶಭಕ್ತಿ, ದೈವಭಕ್ತಿ (‘ರಂಗನಾಥಾ’ ಎಂದು ಮತ್ತೆ ಮತ್ತೆ ಅವನು ಸ್ಮರಿಸುತ್ತಿದ್ದುದು), ಅವನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕುಹಕತನವನ್ನು ಹಳಿಯುತ್ತಿದ್ದ ರೀತಿ ಇವೆಲ್ಲ ನನಗೆ ಅಚ್ಚಳಿಯದ ನೆನಪು. ಅಲ್ಲದೆ, ಶಾಂತಕುಮಾರ್ ಎಂಬ ಉತ್ತಮ ಹಾಸ್ಯನಟ ಅಭಿನಯಿಸುತ್ತಿದ್ದ ಮೀರ್ ಸಾದಿಕ್ ಪಾತ್ರ, ಅವನು ತನ್ನ ಒಂದು ಕಿವಿಯನ್ನು ಕುಣಿಸುತ್ತ ‘ಕ್ಯೂ ಶರ್ಮಾತೀ ಹೋ’ ಎಂಬ ಹಾಡನ್ನು ಗೆಳತಿಯೊಂದಿಗೆ ಹಾಡುವ ರೀತಿ, ಮರೆಯುವಂತಿಲ್ಲ.

ಟಿಪ್ಪುಸುಲ್ತಾನ್ ನಾಟಕದಲ್ಲಿ ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸಿದ ಅನೇಕ ಸಂದರ್ಭಗಳಿದ್ದವು: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಕಂಟಕಪ್ರಾಯನಾಗಿದ್ದ ಟಿಪ್ಪುವನ್ನು ಸೋಲಿಸಲು ಬ್ರಿಟಿಷ್‌ ಪ್ರತಿನಿಧಿಯಾಗಿದ್ದ ಕಾರ್ನ್‌ವಾಲೀಸ್‌, ಟಿಪ್ಪುವಿನ ಕೈಕೆಳಗೆ ಕೆಲಸಮಾಡುತ್ತಿದ್ದ ಮೀರ್ ಸಾದಿಕ್‌ನೊಂದಿಗೆ ಪಿತೂರಿ ನಡೆಸಿದ್ದ. ಅವರಿಬ್ಬರು ತಮ್ಮತಮ್ಮೊಳಗೆ ಮಾತಾಡುತ್ತಿದ್ದರು, ಕನ್ನಡದಲ್ಲಿ. ಟಿಪ್ಪುವನ್ನು ಸೋಲಿಸುವ ಸಲುವಾಗಿ, ಅವನ ಸೈನ್ಯದಲ್ಲಿರುವ ತೋಪುಗಳಲ್ಲಿ ಬಳಸಲಿರುವ ಮದ್ದಿನಲ್ಲಿ ಸಗಣಿಯನ್ನು ಬೆರೆಸಬೇಕೆಂದು ಮೀರ್ ಸಾದಿಕ್‌ನಿಗೆ ಕಾರ್ನ್‌ವಾಲೀಸ್‌ ಹೇಳುತ್ತಿದ್ದ. ಅದೂ ತನ್ನ ಹರಕುಮುರುಕು ಕನ್ನಡದಲ್ಲಿ. ಅವನು ಹೇಳುತ್ತಿದ್ದುದು ‘ಸಗಣಿ’, ಆದರೆ ಮೀರ್ ಸಾದಿಕ್‌ನಿಗೆ ಕೇಳಿಸುತ್ತಿರುವುದು ‘ಶಕುನಿ’. ಇವರಿಬ್ಬರ ಈ ಗೊಂದಲ ಪ್ರೇಕ್ಷಕರನ್ನೆಲ್ಲ ಬಿದ್ದುಬಿದ್ದು ನಗುವಂತೆ ಮಾಡುತ್ತಿತ್ತು.

ಅಮೆರಿಕದಲ್ಲಿ ನನ್ನ ನೆರೆಯ ಬೀದಿಯ ಹೆಸರಿನ ಮೂಲಕ ನನಗೆ ಬಾಲ್ಯದಲ್ಲಿ ನೋಡಿನಲಿದ ಟಿಪ್ಪು ನಾಟಕ ಮತ್ತೆಮತ್ತೆ ಜ್ಞಾಪಕಕ್ಕೆ ಬರುವಂತಾಗಿದೆ. ಆದರೆ, ಯಾರ್ಕ್‌ಟೌನ್ ಯುದ್ಧದಲ್ಲಿ ಸೋಲನ್ನು ಸಹಿಸಿ ಅಮೆರಿಕಕ್ಕೆ ಸ್ವಾತಂತ್ರ್ಯ ಬರುವಂತೆ ಮಾಡಿದ ಕಾರ್ನ್‌ವಾಲೀಸ್‌ ಎಲ್ಲಿ, ಮುಂದೆ ಅದೇ ಕಾರ್ನ್‌ವಾಲೀಸ್‌, ಟಿಪ್ಪುವಿನ ತೋಪುಗಳಲ್ಲಿ ‘ಶಕುನಿ’ ಬೆರೆಸಿ ಟಿಪ್ಪು ಸುಲ್ತಾನನ್ನು ಸೋಲಿಸಿ ಮುಂದೆ ಇಂಡಿಯಾದ ಗವರ್ನರ್ ಜನರಲ್ ಆಗಿದ್ದು, ಮಾರ್ಕ್ವಿಸ್ ಎಂಬ ಬಿರುದು ಪಡೆದಿದ್ದೆಲ್ಲಿ? ಅದು ಬೇರೆ ವಿಷಯ.

ಸೀತಾರಾಮಶಾಸ್ತ್ರಿ ತಮ್ಮ ಪಾತ್ರಾಭಿವ್ಯಕ್ತಿಯ ಮೂಲಕ ಪ್ರಸಿದ್ಧಿಗೆ ತಂದ ಮೈಸೂರು ಹುಲಿ ಟಿಪ್ಪು ಸುಲ್ತಾನ ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ವಿವಾದದ ವ್ಯಕ್ತಿ. ಅವನೊಬ್ಬ ಹಿಂದೂದ್ವೇಷಿಯಾದ ಮುಸಲ್ಮಾನ ಮತಾಂಧ, ಅವನೊಬ್ಬ ಧೀರ ಸಾಹಸಿ ಎಂದು ಇತಿಹಾಸ ಗುರುತಿಸುವುದನ್ನು ತಡೆಯಬೇಕು ಎಂದು ವಾದಿಸುವವರು ಒಂದು ಪಕ್ಷ, ವ್ಯಕ್ತಿತ್ವದಲ್ಲಿ ದೋಷವುಳ್ಳವನಾದರೂ ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ನಿಂತ, ತನ್ನ ಆಡಳಿತದಲ್ಲಿ ಮತೀಯ ಸಾಮರಸ್ಯ ಗಳಿಸಿದ ದಕ್ಷ ಆಡಳಿತಗಾರ ಎಂದು ಅವನನ್ನು ನೋಡುವ ಇನ್ನೊಂದು ಪಕ್ಷ.

ಶಾಸ್ತ್ರಿಯವರು ತಾವು ಬರೆದ ಟಿಪ್ಪುಸುಲ್ತಾನ್ ನಾಟಕದ ಪ್ರದರ್ಶನ ಮಾಡುವ ಆಸೆಯಿಂದ 1940ರ ದಶಕದಲ್ಲಿ ಆಗ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರನ್ನು ಕಾಣಲು ಹೋದಾಗ, ಇಂಡಿಯಾದಲ್ಲಿ ಬ್ರಿಟಿಷ್‌ ಆಡಳಿತ ಇರುವವರೆಗೂ ನಿಮಗೆ ಈ ನಾಟಕವನ್ನು ಪ್ರದರ್ಶಿಸುವುದು ಅಪಾಯಕಾರಿ ಎಂದು ಹೇಳಿದರಂತೆ. ಈಗ, ಇಂದಿನ ಭಾರತದಲ್ಲಿ, ಟಿಪ್ಪುಸುಲ್ತಾನ್ ಎಂಬ ಕನ್ನಡದ ನಾಟಕವನ್ನು, ಇಬ್ಬರು ಬ್ರಾಹ್ಮಣ ನಟರು ಅದರ ಎರಡು ಮುಖ್ಯ ಮುಸಲ್ಮಾನ್ ಪಾತ್ರಗಳನ್ನೂ ಅತ್ಯಂತ ಯಶಸ್ವಿಯಾಗಿ ಪ್ರತಿನಿಧಿಸುವವರಾಗಿದ್ದು, ಕರ್ನಾಟಕದಾದ್ಯಂತ ಯಾವುದೇ ಪ್ರತಿಭಟನೆಯನ್ನೂ ಎದುರಿಸದೆಯೇ ಪ್ರದರ್ಶನಗೊಳಿಸಿದ, ಟಿಪ್ಪುಸುಲ್ತಾನ್ ಪಾತ್ರವನ್ನು ಜನಪ್ರಿಯಗೊಳಿಸಿದ ಆ ಬ್ರಾಹ್ಮಣ ನಾಟಕಕಾರ ಇಂದಿನ ಭಾರತದ ರಾಷ್ಟ್ರಪತಿಗಳಿಂದ ಬಹುಮಾನ ಪದಕವನ್ನು ಪಡೆಯುವುದು ಎಷ್ಟು ಸಂಭವನೀಯವಾದೀತು ಎನ್ನುವ ಪ್ರಶ್ನೆ ಅಪ್ರಸ್ತುತವಲ್ಲ.

ಶಾಸ್ತ್ರಿಯವರು ಕಟ್ಟಿ ಬೆಳೆಸಿದ ಜಯಕರ್ನಾಟಕ ನಾಟಕ ಸಂಘ 1952ರಲ್ಲಿ ರಾಯಚೂರಿನಲ್ಲಿ ಮುಕ್ಕಾಮು ಹಾಕಿರುವಾಗ, ಆಗಿನ ಹೈದರಾಬಾದ್ ನಿಜಾಮ್ ಆಡಳಿತವನ್ನು ಸಮರ್ಥಿಸಿ ಹೋರಾಟ ಮಾಡುತ್ತಿದ್ದ ರಾಜಾಕಾರ್ ದಂಗೆಯ ಸಂದರ್ಭದಲ್ಲಿ ಸಕಲ ಸಾಮಗ್ರಿಗಳೂ ಬೆಂಕಿಯಲ್ಲಿ ಸುಟ್ಟುಹೋಗಿ ಸಂಪೂರ್ಣ ನಾಶಗೊಂಡವು. ಬೇರೆ ದಿಕ್ಕಿಲ್ಲದ ಶಾಸ್ತ್ರಿಯವರು ತಮ್ಮ ಮೂಲ ಊರಾದ ಸಿದ್ದಾಪುರಕ್ಕೆ ಹಿಂದಿರುಗಿದ ಕೆಲವು ವರ್ಷಗಳ ನಂತರ ದೊಡ್ಡಮನೆ ಗಣೇಶ ಹೆಗಡೆ ಮೊದಲಾದ ಕೆಲವು ಹಿತಚಿಂತಕರ ಪ್ರಯತ್ನದಿಂದ ಸಣ್ಣದೊಂದು ಜಮೀನು ಸಾಗುವಳಿ ಮಾಡಿಕೊಂಡು ಇರುವಂತಾಯಿತು.

1936ರಲ್ಲಿ, ನಾನು ಕಾಲೇಜಿನ ರಜೆಯಲ್ಲಿ ಸಿದ್ದಾಪುರಕ್ಕೆ ಬಂದಾಗ, ನನ್ನ ತಂದೆ ತನಗೆ ತೋರಿಸಿದ ಔದಾರ್ಯದ ನೆನಪಿನಲ್ಲಿ ನನ್ನನ್ನು ಮತ್ತು ಗಣೇಶ ಹೆಗಡೆಯವರ ಮಗ ನನ್ನ ಬಂಧು-ಮಿತ್ರ ಸೂರ್ಯನಾರಾಯಣನನ್ನು ಶಾಸ್ತ್ರಿಯವರು ತಾವಿದ್ದ ವಡ್ಡಿನಗದ್ದೆ ಜಮೀನಿನ ಗುಡಿಸಲಿಗೆ ಕರೆದುಕೊಂಡು ಹೋಗಿ, ಸ್ವತಃ ಕೇಸರಿಭಾತ್ ಮಾಡಿ ತಿನ್ನಿಸಿ, ತಮ್ಮ ಜೀವನದ ಕೆಲವು ಘಟನೆಗಳನ್ನು ನಮಗೆ ಹೇಳಿದ ನೆನಪು ಈಗಲೂ ಆಗುವುದು.

ಕಾರ್ನಾಡರ ನೆನಪಲ್ಲಿ ಹುಲಿಮನೆ: ‘ಶಾಸ್ತ್ರಿಗಳು ನಿರೂಪಿಸಿದ ಟಿಪ್ಪು ಸುಲ್ತಾನ ಪಾತ್ರ ಇನ್ನೂ ಢಾಳಾಗಿ ನೆನಪಿಗೆ ಬರುತ್ತದೆ. ಆ ಗಾಂಭೀರ್ಯ, ಆ ದುರಂತ ನಾಯಕನ ಠೀವಿ. ನಾನು 1997ರಲ್ಲಿ ಟಿಪ್ಪು ಬಗ್ಗೆ ಸಂಶೋಧನೆ ಮಾಡಿ ‘ಟಿಪೂ ಸುಲ್ತಾನ ಕಂಡ ಕನಸು’ ಎಂಬ ನಾಟಕ ಬರೆದಿದ್ದೆ. ನಾಟಕ ಬರೆಯುವಾಗ ಕಂಡ ಟಿಪ್ಪು, ಇತಿಹಾಸದ ಸಾಕ್ಷ್ಯಾಧಾರಗಳಿಂದ ನಾನು ಕಲ್ಪಿಸಿದ ಟಿಪ್ಪು ಆಗಿರಲಿಲ್ಲ. ಅದು ಹುಲಿಮನೆ ಸೀತಾರಾಮ ಶಾಸ್ತ್ರಿಗಳು ರಂಗಭೂಮಿಯ ಮೇಲೆ ಸೃಷ್ಟಿಸಿದ ಟಿಪ್ಪುವಿನ ಪ್ರತಿಬಿಂಬವಾಗಿತ್ತು. ಒಂಬತ್ತು ವರ್ಷದ ಬಾಲಕನ ಮೇಲೆ ಶಾಸ್ತ್ರಿಗಳ ನಾಟಕ ಎಂಥ ಗಾಢ ಪ್ರಭಾವ ಬೀರಿತ್ತು ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದೊಮ್ಮೆ ಗಿರೀಶ ಕಾರ್ನಾಡ ನೆನಪಿಸಿಕೊಂಡಿದ್ದರು.

***

‘ಶಾಸ್ತ್ರಿಗಳು ನಿರೂಪಿಸಿದ ಟಿಪ್ಪು ಸುಲ್ತಾನ ಪಾತ್ರ ಇನ್ನೂ ಢಾಳಾಗಿ ನೆನಪಿಗೆ ಬರುತ್ತದೆ. ಆ ಗಾಂಭೀರ್ಯ, ಆ ದುರಂತ ನಾಯಕನ ಠೀವಿ. ನಾನು 1997ರಲ್ಲಿ ಟಿಪ್ಪು ಬಗ್ಗೆ ಸಂಶೋಧನೆ ಮಾಡಿ ‘ಟಿಪೂ ಸುಲ್ತಾನ ಕಂಡ ಕನಸು’ ಎಂಬ ನಾಟಕ ಬರೆದಿದ್ದೆ. ನಾಟಕ ಬರೆಯುವಾಗ ಕಂಡ ಟಿಪ್ಪು, ಇತಿಹಾಸದ ಸಾಕ್ಷ್ಯಾಧಾರಗಳಿಂದ ನಾನು ಕಲ್ಪಿಸಿದ ಟಿಪ್ಪು ಆಗಿರಲಿಲ್ಲ. ಅದು ಹುಲಿಮನೆ ಸೀತಾರಾಮ ಶಾಸ್ತ್ರಿಗಳು ರಂಗಭೂಮಿಯ ಮೇಲೆ ಸೃಷ್ಟಿಸಿದ ಟಿಪ್ಪುವಿನ ಪ್ರತಿಬಿಂಬವಾಗಿತ್ತು. ಒಂಬತ್ತು ವರ್ಷದ ಬಾಲಕನ ಮೇಲೆ ಶಾಸ್ತ್ರಿಗಳ ನಾಟಕ ಎಂಥ ಗಾಢ ಪ್ರಭಾವ ಬೀರಿತ್ತು ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದೊಮ್ಮೆ ಗಿರೀಶ ಕಾರ್ನಾಡ ನೆನಪಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು