ಸೋಮವಾರ, ಮೇ 17, 2021
28 °C

ನೂರರ ಏರಿನಲ್ಲಿ ಚಂದವಳ್ಳಿಯ ತೋಟಗಾರ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ನುಡಿದರೆ ಮುತ್ತಿನಹಾರದಂತಿರಬೇಕು, ಸ್ಫಟಿಕದ ಶಲಾಕೆಯಂತಿರಬೇಕು, ಜ್ಯೋತಿರ್ಲಿಂಗದಂತಿರಬೇಕು ಎನ್ನುವ ಬಸವಣ್ಣನವರ ಮಾತಿನ ಜನಪ್ರಿಯ ರೂಪವನ್ನು ಕನ್ನಡದ ಕಾದಂಬರಿ ಸಂದರ್ಭದಲ್ಲಿ ಕಾಣಬೇಕೆಂದರೆ ತ.ರಾ. ಸುಬ್ಬರಾಯರ ಕಾದಂಬರಿಗಳಲ್ಲಿ ಕಾಣಬಹುದು. ಅವರ ಕಾದಂಬರಿಗಳಲ್ಲಿ ಕನ್ನಡ ಮಾತು ನಕ್ಷತ್ರದಂತೆ ಮಿಂಚುತ್ತದೆ, ಮಿಂಚಿನಂತೆ ಕೋರೈಸುತ್ತದೆ.

ಕಾದಂಬರಿಗಳೊಂದಿಗೆ ನಂಟುಳ್ಳ ಕನ್ನಡಿಗರೆಲ್ಲರಿಗೆ ತರಾಸು (1920–1984) ಅರ್ಥಾತ್‌ ತಳುಕಿನ ರಾಮಸ್ವಾಮಯ್ಯನವರ ಮಗನಾದ ಸುಬ್ಬರಾವ್‌ ಅವರ ಹೆಸರು ಸುಪರಿಚಿತ. ಸಾಹಿತ್ಯ ಮಾತ್ರವಲ್ಲ, ಸಿನಿಮಾ ಹಾಗೂ ಪತ್ರಿಕೋದ್ಯಮದಲ್ಲೂ ತರಾಸು ಕಾರ್ಯ ನಿರ್ವಹಿಸಿದ್ದಾರೆ.

ತರಾಸು ಅವರದು ಸಾಹಿತ್ಯಕ ಹಿನ್ನೆಲೆಯ ಕುಟುಂಬ. ಕನ್ನಡದ ಮೊದಲಿನ ಪ್ರಾಧ್ಯಾಪಕರೆನ್ನುವ ಅಗ್ಗಳಿಕೆಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡಿರುವ ಟಿ.ಎಸ್‌. ವೆಂಕಣ್ಣಯ್ಯನವರು ತರಾಸು ಅವರಿಗೆ ದೊಡ್ಡಪ್ಪನಾದರೆ, ಅಧ್ಯಾಪಕರೂ ವಿದ್ವಾಂಸರೂ ಆದ ತ.ಸು. ಶಾಮರಾಯರು ಚಿಕ್ಕಪ್ಪಂದಿರು. ತರಾಸು ಅವರ ತಂದೆ ರಾಮಸ್ವಾಮಿ ಅವರಿಗೆ ಕೂಡ ಸಾಹಿತ್ಯದ ಅಭಿರುಚಿಯಿತ್ತು.

ಚಿತ್ರದುರ್ಗದಲ್ಲಿ ವಕೀಲಿಕೆ ನಡೆಸುತ್ತಿದ್ದ ರಾಮಸ್ವಾಮಿ ಅವರಿಗೆ ತಮ್ಮಂತೆ ಮಗನೂ ವಕೀಲನಾಗಬೇಕು ಎನ್ನುವ ಆಸೆಯಿತ್ತು. ಅದಕ್ಕೆ ತಕ್ಕಂತೆ ಬಾಲ್ಯದಲ್ಲೇ ತರಾಸು ಮಾತುಗಾರಿಕೆಯನ್ನು ಮೈಗೂಡಿಸಿಕೊಂಡಿದ್ದರು. ಆದರೂ ರಾಮಸ್ವಾಮಿಯವರ ಆಸೆ ಪೂರೈಸಲಿಲ್ಲ; ಮೆಟ್ರಿಕ್ಯುಲೇಷನ್‌ ನಂತರ ಮಗನ ವಿದ್ಯಾಭ್ಯಾಸ ಮುಂದುವರೆಯಲಿಲ್ಲ. ಕಾಲೇಜು ಮೆಟ್ಟಿಲು ಹತ್ತಬೇಕು ಅನ್ನುವಾಗ್ಗೆ ಸ್ವಾತಂತ್ರ್ಯ ಚಳವಳಿ ತರಾಸು ಅವರನ್ನು ಸೆಳೆಯಿತು. ಕಾಲೇಜಿಗೆ ಹೋಗುವುದಾದರೆ ಅದು ಸ್ವತಂತ್ರ ಭಾರತದಲ್ಲೇ ಎಂದು ನಿರ್ಣಯಿಸಿ, ಚಳವಳಿಯಲ್ಲಿ ತೊಡಗಿಕೊಂಡರು; ಊರೂರು ಸುತ್ತತೊಡಗಿದರು. ಹೋದಲ್ಲೆಲ್ಲ ಭಾಷಣ, ಕ್ರಾಂತಿಗೀತೆಗಳ ಅನುರಣನ. ಹೀಗೆ ಭಾಷಣ ಮಾಡುತ್ತಿರುವಾಗಲೇ ಮೊದಲ ಬಾರಿಗೆ ಬಂಧನಕ್ಕೊಳಗಾದಾಗ, ಅವರಿಗೆ ಹದಿನೇಳರ ತಾರುಣ್ಯ.

ಚಳವಳಿಯ ನಂಟು ಹಾಗೂ ಸಾಹಿತ್ಯದಲ್ಲಿನ ಆಸಕ್ತಿ ತರಾಸು ಅವರನ್ನು ಪತ್ರಿಕೋದ್ಯಮಕ್ಕೆ ಕರೆತಂದಿತು. ‘ವಿಶ್ವಕರ್ನಾಟಕ’, ‘ಪ್ರಜಾಮತ’, ‘ಪ್ರಜಾವಾಣಿ’ ಸೇರಿ ಹಲವು ಪತ್ರಿಕೆಗಳಲ್ಲಿ ದುಡಿದರು. ಇನ್ನೊಂದು ಕಡೆ ಸಾಹಿತ್ಯಕ ಬರವಣಿಗೆಯೂ ಮುಂದುವರಿಯಿತು.

ತರಾಸು ಅವರ ಮೊದಲ ಬರವಣಿಗೆಯ ಹಿಂದೆ ಸ್ವಾರಸ್ಯಕರ ಸಂಗತಿಯೊಂದಿದೆ. ‘ಮಾತನಾಡಿದ್ದು ಸಾಕು, ಏನಾದರೂ ಬರೆದು ತೋರಿಸು’ ಎನ್ನುವ ದೊಡ್ಡಪ್ಪ ವೆಂಕಣ್ಣಯ್ಯನವರ ಕಿಚಾಯಿಸುವಿಕೆಯೇ ತರಾಸು ಅವರ ಬರವಣಿಗೆಗೆ ಪ್ರೇರಣೆಯಾಯಿತು. ಸವಾಲನ್ನು ಸ್ವೀಕರಿಸಿ ಕಥೆಯೊಂದನ್ನು ಬರೆದು ವೆಂಕಣ್ಣಯ್ಯನವರಿಂದ ಹತ್ತು ರೂಪಾಯಿ ಬಹುಮಾನ ಪಡೆದಿದ್ದರು.

ಸಿದ್ಧವನಹಳ್ಳಿ ಕೃಷ್ಣಶರ್ಮರು ಪತ್ರಿಕೋದ್ಯಮದಲ್ಲಿ ಪ್ರೇರಣೆಯಾದರೆ, ಅ.ನ. ಕೃಷ್ಣರಾಯರು ಸಾಹಿತ್ಯಕ ಗುರು. ಕೃಷ್ಣರಾಯರ ಸಂಪರ್ಕ ಸುಬ್ಬರಾಯರ ಬದುಕಿನ ವಿಶಿಷ್ಟ ಅಧ್ಯಾಯಗಳಲ್ಲೊಂದು. ಸುಬ್ಬರಾಯರ ಪಾಲಿಗವರು ಅಣ್ಣನಿದ್ದಂತೆ. ಆ ಸಖ್ಯದ ಕಾರಣದಿಂದಾಗಿಯೇ ತರಾಸು ಕನ್ನಡ ಚಳವಳಿಯಲ್ಲಿ ತೊಡಗಿಕೊಂಡರು.

ಪ್ರಗತಿಪರ ಸಾಹಿತ್ಯದ ಎರಡು ಕಣ್ಣುಗಳಂತೆ ಅನಕೃ–ತರಾಸು ನಿರಂತರವಾಗಿ ಬರೆದರು. ಅನಕೃ ‘ಕಾದಂಬರಿ ಸಾರ್ವಭೌಮ’ನೆಂದು ಪ್ರಸಿದ್ಧರಾದರು. ಆದರೆ, ಕಾದಂಬರಿಗಳ ಸಂಖ್ಯೆಯ ದೃಷ್ಟಿಯಿಂದ ಎರಡನೆಯವರಾದರೂ, ಗುಣಮಟ್ಟದ ದೃಷ್ಟಿಯಿಂದ ತರಾಸು ಗುರುವನ್ನು ಮೀರಿಸಿದವರು. ಕನ್ನಡದಲ್ಲಿ ಓದುಗವರ್ಗವನ್ನು ವಿಸ್ತರಿಸಿದ ರೂಪಿಸಿದ ಲೇಖಕರಲ್ಲಿ ಈ ಗುರು–ಶಿಷ್ಯ ಜೋಡಿಯದು ಮಹತ್ವದ ಪಾತ್ರ.

ಜನಪ್ರಿಯ ಬರವಣಿಗೆಯ ಚೌಕಟ್ಟನ್ನು ಮೀರಿ ತರಾಸು ಅವರ ಕೆಲವು ರಚನೆಗಳು ಕನ್ನಡದ ಅತ್ಯುತ್ತಮ ಕಾದಂಬರಿಗಳ ಸಾಲಿನಲ್ಲಿ ನಿಲ್ಲಬಲ್ಲವು. ಗಾಂಧೀಜಿಯ ಆಶಯ–ಕನಸುಗಳ ಬೀಜರೂಪದಂತೆ ನೋಡಬಹುದಾದ ‘ಚಂದವಳ್ಳಿಯ ತೋಟ’, ಶಿವರಾಮ ಕಾರಂತರ ‘ಬೆಟ್ಟದ ಜೀವ’ಕ್ಕೆ ಸಮೀಪವಾದ ಕೃತಿ. ಕಾರಂತರ ಕಾದಂಬರಿಯ ಗೋಪಾಲಯ್ಯ ಕಾಡು ಕಡಿದು ಗದ್ದೆ ಮಾಡಿದರೆ, ಚಂದವಳ್ಳಿಯ ಬಂಜರುಭೂಮಿಯಲ್ಲಿ ಶಿವನಂಜಯ್ಯ ನಂದನದಂಥ ತೋಟ ಬೆಳೆಸುತ್ತಾನೆ. ಅವನ ಸಂಕಲ್ಪಶಕ್ತಿಯೆದುರು ಬಂಜರು ನೆಲ ಹೂವಾಗಿ ಅರಳುತ್ತದೆ. ಚಂದವಳ್ಳಿಯ ಕಥನ ಅಷ್ಟಕ್ಕೆ ನಿಲ್ಲುವುದಿಲ್ಲ. ಮಣ್ಣಿನೊಂದಿಗಿನ ರೈತನ ನಂಟಿನೊಂದಿಗೆ, ಗ್ರಾಮೀಣ ಬದುಕಿನ ಕೇಡುಗಳನ್ನು, ಕುಟುಂಬಗಳಲ್ಲಿನ ಒಡಕುಗಳನ್ನು ತರಾಸು ಅದ್ಭುತವಾಗಿ ಚಿತ್ರಿಸಿದ್ದಾರೆ. ಗ್ರಾಮೀಣ ಭಾರತದ ಅಮೃತತ್ವ ಹಾಗೂ ನಂಜನ್ನು  ‘ಚಂದವಳ್ಳಿಯ ತೋಟ’ದಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ ಕಥನಗಳು ಕನ್ನಡದಲ್ಲಿ ತೀರಾ ಕಡಿಮೆ. ಸಾಹಿತ್ಯಕೃತಿಯಾಗಿ ವಿಮರ್ಶೆಯ ನ್ಯಾಯ ದೊರೆಯದಿದ್ದರೂ ಚಲನಚಿತ್ರವಾಗಿ ‘ಚಂದವಳ್ಳಿಯ ತೋಟ’ ಸಹೃದಯರ ಗಮನವನ್ನು ಸೆಳೆಯಿತು; ‘ಅತ್ಯುತ್ತಮ ಕನ್ನಡ ಚಿತ್ರ’ (1964) ಎನ್ನುವ ರಾಷ್ಟ್ರಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರವಾಯಿತು.

ಸಾಹಿತ್ಯದೊಂದಿಗೆ ಚಲನಚಿತ್ರ ಕ್ಷೇತ್ರಕ್ಕೂ ತರಾಸು ಅವರ ಕೊಡುಗೆ ದೊಡ್ಡದು. ‘ಹಂಸಗೀತೆ’, ‘ನಾಗರಹಾವು’, ‘ಮಸಣದ ಹೂವು’, ‘ಆಕಸ್ಮಿಕ’, ‘ಚಂದನದ ಗೊಂಬೆ’ ಸೇರಿ ಹಲವು ಚಿತ್ರಗಳು ಅವರ ಕಾದಂಬರಿಗಳನ್ನು ಆಧರಿಸಿವೆ. ಚಿತ್ರಕಥೆ, ಸಂಭಾಷಣೆಯ ಜೊತೆಗೆ ಗೀತರಚನೆಕಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ ನಟನೆಯ ‘ಚಕ್ರತೀರ್ಥ’ ತರಾಸು ನಿರ್ದೇಶನದ ಜನಪ್ರಿಯ ಚಿತ್ರ.

ತರಾಸು ಕಾದಂಬರಿಗಳ ಚುಂಬಕಶಕ್ತಿ ಕನ್ನಡದ ಚೆಲುವನ್ನೆಲ್ಲ ಒಳಗೊಳ್ಳುವ ಹಂಬಲದ ಭಾಷೆ. ಕಥನದ ಕಾರಣಕ್ಕಾಗಿ ಮಾತ್ರವಲ್ಲ, ಭಾಷಾಸೌಂದರ್ಯದ ಕಾರಣಕ್ಕಾಗಿಯೂ ಅವರ ಕಾದಂಬರಿಗಳನ್ನು ಓದಬೇಕು. ಪಾತ್ರಸೃಷ್ಟಿ, ಸನ್ನಿವೇಶಗಳ ನಿರ್ಮಾಣದಲ್ಲಿ ಅವರಿಗೆ ಅವರೇ ಸಾಟಿ. ತರಾಸು ಅವರ ಪ್ರಯೋಗಶೀಲತೆ ಕನ್ನಡ ಕಾದಂಬರಿಲೋಕದಲ್ಲೇ ಅಪರೂಪದ್ದು. ‘ಕೇದಿಗೆ ವನ’ದ ಬೆಚ್ಚನೆಯ ಪ್ರೇಮಕಥನ, ನರ್ತಕಿಯರನ್ನು ದಾಳಗಳನ್ನಾಗಿಸಿ ಚದುರಂಗವಾಡುವ ‘ಚದುರಂಗದ ಮನೆ’ಯ ಬೆರಗಿನ ಕಥನ, ‘ಹಂಸಗೀತೆ’ಯ ಸಂಗೀತ ವಿದ್ವಾಂಸನ ಸ್ವಾಭಿಮಾನ – ಇವೆಲ್ಲ ಉಳಿದ ಕಾದಂಬರಿಕಾರರಿಗಿಂತಲೂ ತರಾಸು ಹೇಗೆ ಭಿನ್ನರೆನ್ನುವುದಕ್ಕೆ ಕೆಲವು ಉದಾಹರಣೆಗಳಷ್ಟೇ. ಚಿತ್ರದುರ್ಗದ ಚರಿತ್ರೆಯನ್ನು ಆಧರಿಸಿದ ಅವರ ಕಾದಂಬರಿಗಳ ಖ್ಯಾತಿಯಂತೂ ದಂತಕಥೆಯಂತಹದ್ದು. ಈ ಚಾರಿತ್ರಿಕ ಕೃತಿಶ್ರೇಣಿಯಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮನ್ನಣೆಗೆ ಪಾತ್ರವಾದ ‘ದುರ್ಗಾಸ್ತಮಾನ’ ತರಾಸು ಅವರ ಪ್ರತಿಭೆಯನ್ನೆಲ್ಲ ಸೂರೆಗೊಂಡಂತಿರುವ ಕಾದಂಬರಿ. ಕಥೆಗಾರರಾಗಿಯೂ ತರಾಸು ಪ್ರಯೋಗಶೀಲರು. ಅವರ ‘0–0=0’, ಕನ್ನಡದ ಅತ್ಯುತ್ತಮ ಕಥೆಗಳ ಹಲವು ಸಂಕಲನಗಳಲ್ಲಿ ಸ್ಥಾನಪಡೆದಿರುವ ಕಥೆ.

ತೀರಿಕೊಂಡಾಗ (ಏ. 10, 1984) ಸುಬ್ಬರಾಯರಿಗೆ ಅರವತ್ತಮೂರರ ಪ್ರಾಯ. ಬದುಕಿನುದ್ದಕ್ಕೂ ಒಂದಲ್ಲಾ ಒಂದು ಬಗೆಯ ಅಲೆದಾಟದಲ್ಲಿ ತೊಡಗಿದ್ದ ಅವರು, ಒಂದೆಡೆ ಕುಳಿತು ಬರೆಯಬಹುದಾಗಿದ್ದ ಕಾಲದಲ್ಲಿ ಬದುಕೇ ಮುಗಿದುಹೋಯಿತು. ಆದರೆ, ಅವರು ಬರೆದುದರ ಗಂಭೀರ ಮೌಲ್ಯಮಾಪನವೇ ಸರಿಯಾಗಿ ನಡೆದಿಲ್ಲ. ಆ ಮೌಲ್ಯಮಾಪನಕ್ಕೆ ಜನ್ಮ ಶತಮಾನೋತ್ಸವ (ಏಪ್ರಿಲ್‌ 21ಕ್ಕೆ ತರಾಸು ಜನಿಸಿ ನೂರು ವರ್ಷ ತುಂಬುತ್ತದೆ) ಸಂದರ್ಭವೊಂದು ಒಳ್ಳೆಯ ನೆಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು