ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ: ಎಂದೂ ಮುಗಿಯದ ಹಾದಿಯಲ್ಲಿ ಕಂಡ ಹೊಸ ಹೂ–ಚಿಗುರು

Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

ಹೊಸ ವರ್ಷದ ಸೂರ್ಯೋದಯ ಮೊನ್ನೆಯಷ್ಟೇ ಆಗಿದೆ. ಹೊಸತರ ಆರಂಭಿಕ ಬಿಂದುವಿನಲ್ಲಿ ನಿಂತು ಸಿಂಹಾವಲೋಕನ ಮಾಡುತ್ತಾ ಭವಿಷ್ಯದ ಕಡೆಗೆ ದೃಷ್ಟಿ ಹಾಯಿಸಿದಾಗ ‘ಕನ್ನಡದ ನಾಳೆ’ಗಳ ಬಗೆಗೆ ಭರವಸೆಯ ಮಿಂಚೊಂದು ಫಕ್ಕೆಂದು ಹೊಳೆಯುತ್ತದೆ. ಅಂತಹ ‘ನಾಳೆ’ಗಳ ಅವಲೋಕನಕ್ಕೆ ಇಲ್ಲಿ ಪ್ರಾತಿನಿಧಿಕವಾಗಿ ಸಾಹಿತ್ಯ, ಸಿನಿಮಾ ಹಾಗೂ ಸಾಮಾಜಿಕ ಸಂಬಂದ ಈ ಮೂರು ವಲಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ಲೇಷಣೆಯ ಹಾದಿಯಲ್ಲಿ ಕಂಡ ಹೂ–ಚಿಗುರುಗಳ ಸೊಬಗಿನ ನೋಟಗಳು ಇಲ್ಲಿವೆ. ಹೌದು, ಸಹೃದಯರು ಹೂವಿನ ಪರಿಮಳವನ್ನೂ ಈ ಬರಹಗಳಲ್ಲಿ ಆಘ್ರಾಣಿಸಬಹುದು..

***

ಯಾವುದೇ ವರ್ಷದ ಸಾಹಿತ್ಯದ ಫಸಲನ್ನು ಅವಲೋಕಿಸುವಾಗ, ಆ ಕೊಯಿಲಿನಲ್ಲಿ ಹೊಸ ತಲೆಮಾರಿನ ಬರಹಗಾರರ ಪಾಲೆಷ್ಟು ಎನ್ನುವುದಕ್ಕೆ ವಿಶೇಷ ಮಹತ್ವವಿದೆ. ಯುವ ಬರಹಗಾರರ ಭರವಸೆಯ ವ್ಯವಸಾಯ ಗಮನಸೆಳೆಯುವಂತಿದ್ದರೆ, ಅದು ಆ ವರ್ಷದ ಸುಗ್ಗಿಯ ಜೊತೆಗೆ ನಾಳೆಗಳ ಸಮೃದ್ಧಿಯತ್ತಲೂ ಬೆಟ್ಟು ಮಾಡುತ್ತಿರುತ್ತದೆ. ಈ ನಿಟ್ಟಿನಿಂದ 2020ನ್ನು ನೋಡಿದರೆ, ಹೊಸ ಕನಸುಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಹೊಂದಿರುವಂತಹ ಹೊಸ ದನಿಗಳು ಮೇಲ್ನೋಟಕ್ಕೇ ಕಾಣುವಂತಿವೆ.

ಮೌಲ್ಯಾ ಸ್ವಾಮಿ
ಮೌಲ್ಯಾ ಸ್ವಾಮಿ

ಕರ್ಕಿ ಕೃಷ್ಣಮೂರ್ತಿ ಕಥೆಗಾರರಾಗಿಕನ್ನಡದ ಓದುಗರಿಗೆ ಪರಿಚಿತರು; ಕಾದಂಬರಿಕಾರರಾಗಿ ಹೊಸಬರು. ಅವರ ಚೊಚ್ಚಿಲ ಕಾದಂಬರಿ ‘ಚುಕ್ಕಿ ಬೆಳಕಿನ ಜಾಡು’ ಕಾದಂಬರಿಕಾರರಾಗಿ ಕೃಷ್ಣಮೂರ್ತಿಯವರ ನಾಳೆಗಳ ಹಾದಿಗೆ ಬೆಳಕು ಚೆಲ್ಲುವಂತಿದೆ. ಜಗಲಿಯಲ್ಲಿ ಕೂತು ಜಗತ್ತಿಗೆ ಕನ್ನಡಿಯಾಗುವುದು ಕನ್ನಡ ಸಾಹಿತ್ಯಪರಂಪರೆಯ ಲಕ್ಷಣಗಳಲ್ಲೊಂದು. ಕೃಷ್ಣಮೂರ್ತಿಯವರ ಕಾದಂಬರಿ, ಜಗತ್ತಿನ ಪರಿಪ್ರೇಕ್ಷ್ಯದ ಬಗ್ಗೆ ಮಾತನಾಡುತ್ತ, ಹಿತ್ತಲಿನ ವಾಸ್ತವಗಳಿಗೆ ಕನ್ನಡಿಯಾಗಬಯಸಿದೆ. ಕಂಪನಿಯ ಕಾರ್ಯನಿಮಿತ್ತ ಮಲೇಷ್ಯಾ ಭೇಟಿ ಕೈಗೊಂಡ ಭಾರತೀಯನೊಬ್ಬನ ಕಣ್ಣುಗಳಲ್ಲಿ ಮಲೇಷ್ಯಾದ ವರ್ತಮಾನ ಅನಾವರಣಗೊಳ್ಳುವುದು ಕಾದಂಬರಿಯ ಕಥೆ. ಮಲೇಷ್ಯಾದ ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತ್ಯಂತರಗಳ ಕಥೆಯನ್ನು ‘ಚುಕ್ಕಿ ಬೆಳಕಿನ ಜಾಡು’ ಹೇಳುತ್ತಿದ್ದರೂ, ಅದು ಹೇಳುತ್ತಿರುವುದು ಭಾರತದ ಈ ಹೊತ್ತಿನ ಕಥೆಯನ್ನೇ. ತನ್ನದಲ್ಲದ ದೇಶದ ಕಥೆಯ ನೆಪದಲ್ಲಿ ತನ್ನ ನೆಲದ ವರ್ತಮಾನವನ್ನೇ ಹೇಳುವ (‘ಸಿಹಿ ಲೇಪಿತ ಕಹಿಸತ್ಯ’ವನ್ನು ಹೇಳುವ) ತಂತ್ರ ಸೊಗಸಾಗಿದೆ ಹಾಗೂ ಕಾದಂಬರಿಕಾರರಿಗೆ ವಿಶಿಷ್ಟ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದೆ. ಮಲೇಷ್ಯಾದಲ್ಲಿನ ‘ಜಂಜಿ ಡಪಾತಿ‘ ಎನ್ನುವ ಜನಪ್ರಿಯ ಸ್ಲೋಗನ್‌ ಭಾರತದ ‘ಅಚ್ಛೇ ದಿನ್‌’ನ ಮಲಯರೂಪವೇ ಆಗಿದೆ.

ಛಾಯಾ ಭಟ್
ಛಾಯಾ ಭಟ್

ಕೃಷ್ಣಮೂರ್ತಿಯವರ ಕಾದಂಬರಿಯ ಇನ್ನೊಂದು ದಿಕ್ಕಿನಲ್ಲಿ ಗುರುಪ್ರಸಾದ್‌ ಕಂಟಲಗೆರೆ ಅವರ ‘ಕೆಂಡದ ಬೆಳುದಿಂಗಳು’ ಕಥಾಸಂಕಲನ ಗಮನಿಸಬಹುದು. ಜಾತೀಯತೆ, ಅಸ್ಪೃಶ್ಯತೆ, ಆಹಾರದ ಪ್ರಶ್ನೆಗಳನ್ನಿಟ್ಟುಕೊಂಡು ಗುರುಪ್ರಸಾದ್‌ರಷ್ಟು ಪರಿಣಾಮಕಾರಿಯಾಗಿ ಭಾರತದ ವರ್ತಮಾನಕ್ಕೆ ಪ್ರತಿಕ್ರಿಯಿಸಿರುವ ಹೊಸ ತಲೆಮಾರಿನ ಮತ್ತೊಬ್ಬ ಕಥೆಗಾರನನ್ನು ಕನ್ನಡದಲ್ಲಿ ಕಾಣುವುದು ಕಷ್ಟ. ‘ಗೋವಿನ ಜಾಡು’ ಸಂಕಲನದ ಮೂಲಕ ಈ ಕಾಲದ ಸಂಕಟಗಳನ್ನು ಚಿತ್ರಿಸಿದ್ದ ಅವರು, ಈಗ ‘ಕೆಂಡದ ಬೆಳುದಿಂಗಳು‘ ಸಂಕಲನದ ಮೂಲಕ ತಮ್ಮ ಕಥೆಗಳ ದಿಕ್ಕನ್ನು ಮತ್ತಷ್ಟು ನಿಚ್ಚಳಗೊಳಿಸಿಕೊಂಡಿದ್ದಾರೆ. ‘ಇಲ್ಲಿ ಎಲ್ಲವೂ ಸರಿಯಾಗಿದೆ, ಸಮೃದ್ಧವಾಗಿದೆ’ ಎನ್ನುವ ರಾಜಕೀಯಪ್ರೇರಿತ ಬೆಳುದಿಂಗಳಿನ ಪರಿಕಲ್ಪನೆಯ ಸಂದರ್ಭದಲ್ಲಿ, ಆ ರಮ್ಯ ಬೆಳಕು ನಾಡಿನ ಬಹುಸಂಖ್ಯಾತರನ್ನು ಕೆಂಡದ ರೂಪದಲ್ಲಿ ಹೇಗೆ ಸುಡುತ್ತಿದೆ ಎನ್ನುವುದನ್ನು ಗುರುಪ್ರಸಾದ್‌ ಸಂಯಮದಿಂದ ಚಿತ್ರಿಸುತ್ತಾರೆ. ಊರುಕೇರಿಗಳಲ್ಲಿನ ಮನುಷ್ಯನಿರ್ಮಿತ ಕೊಳಕನ್ನು ಚಿತ್ರಿಸುವ ‘ಕೆಂಡದ ಬೆಳುದಿಂಗಳು’ ಕಥೆಗಳು, ಸಾಮಾಜಿಕ ಮಾಲಿನ್ಯದಲ್ಲಿ ನಮ್ಮ ಪಾಲೆಷ್ಟು ಎಂದು ಓದುಗರ ಸ್ವವಿಮರ್ಶೆಗೂ ಒತ್ತಾಯಿಸುವಂತಿವೆ.

ಜ.ನಾ.ತೇಜಶ್ರೀ
ಜ.ನಾ.ತೇಜಶ್ರೀ

ಡಿಸೆಂಬರ್‌ ಅಂಚಿನಲ್ಲಿ ‘ಕೆಂಡದ ಬೆಳುದಿಂಗಳು’ ಕೃತಿಯೊಂದಿಗೆ ಪ್ರಕಟಗೊಂಡಿರುವ ಮತ್ತೊಂದು ಗಮನಾರ್ಹ ಕಥಾಸಂಕಲನ ‘ಬೆಳ್ಳಿಮೈ ಹುಳ’. ಈ ಸಂಕಲನದ ಮೂಲಕ, ಕವಯಿತ್ರಿಯಾಗಿ ಪ್ರಸಿದ್ಧರಾದ ತೇಜಶ್ರೀ ಕಥೆಗಾರ್ತಿಯಾಗಿ ಸಹೃದಯರಿಗೆ ಮುಖಾಮುಖಿಯಾಗಿದ್ದಾರೆ. ಸ್ಪರ್ಶಿಸಿದಷ್ಟೂ ಅರ್ಥಗಳನ್ನು ಬಿಟ್ಟುಕೊಡುವ ಭಾಷೆಯ ಸಾಧ್ಯತೆಗಳ ಬಗ್ಗೆ ನಂಬಿಕೆಯುಳ್ಳ ಹಾಗೂ ಬರಹದ ಶಿಲ್ಪದ ಬಗ್ಗೆ ಬದ್ಧತೆಯುಳ್ಳ ರಚನೆಗಳ ರೂಪದಲ್ಲಿ ‘ಬೆಳ್ಳಿಮೈ ಹುಳ’ ಕಥೆಗಳು ಮುಖ್ಯವೆನ್ನಿಸುತ್ತವೆ. ಹೆಣ್ಣುಮಕ್ಕಳ ಮನೋಲೋಕದ ಬಗೆಗೆ ಮಾತನಾಡುತ್ತ, ಆ ಲೋಕದ ಸಂಕಟಗಳ ಬಗ್ಗೆ ಗಮನಸೆಳೆಯುವ ಕಥೆಗಾರ್ತಿಗೆ, ಆ ಮಾತುಗಳೆಲ್ಲವನ್ನೂ ಲೋಕದ ಕುರಿತಾದ ಮಾತು–ತಲ್ಲಣಗಳಾಗಿಸಲು ಸಾಧ್ಯವಾಗಿದೆ.

ಕರ್ಕಿ ಕೃಷ್ಣಮೂರ್ತಿ
ಕರ್ಕಿ ಕೃಷ್ಣಮೂರ್ತಿ

‘ಛಂದ ಪುಸ್ತಕ ಬಹುಮಾನ’ ಪಡೆದಿರುವ ಛಾಯಾ ಭಟ್‌ರ ‘ಬಯಲರಸಿ ಹೊರಟವಳು’ ಸಂಕಲನದ ಕಥೆಗಳು ಮಂದ್ರಶ್ರುತಿಯ ಆಲಾಪಗಳಂತೆ ಗಮನಸೆಳೆಯುತ್ತವೆ. ಸಣ್ಣ ಸಣ್ಣ ಸಂಗತಿಗಳ ಮೂಲಕ ಬದುಕಿನ ಚೆಲುವನ್ನು ಕಾಣಿಸಲು ಹಂಬಲಿಸುವ ಛಾಯಾ ಅವರ ಕಥೆಗಳು, ಸರಳತೆಯಲ್ಲಿಯೇ ಮಹತ್ವವಾದುದನ್ನು ಸಾಧಿಸಲು ಹಂಬಲಿಸುವ ಪ್ರಯತ್ನಗಳಾಗಿವೆ.

ಅಮರೇಶ ಗಿಣಿವಾರ
ಅಮರೇಶ ಗಿಣಿವಾರ

ಅಮರೇಶ ಗಿಣಿವಾರರ ‘ಹಿಂಡೇಕುಳ್ಳು’ 2020ರ ಮತ್ತೊಂದು ಗಮನಾರ್ಹ ಕಥಾಸಂಕಲನ. ಮೊದಲ ಸಂಕಲನದ ಮೂಲಕವೇ ಹೈದರಾಬಾದ್‌ ಕರ್ನಾಟಕ ಭಾಗದ ಕಥಾಪರಂಪರೆಯ ಸಶಕ್ತ ಕೊಂಡಿಯಾಗಿ ಕಾಣಿಸುವ ಅಮರೇಶ, ಆ ಪರಂಪರೆಯ ಭಾಗವಾಗಿದ್ದುಕೊಂಡೂ ತಮ್ಮದೇ ಆದ ಭಿನ್ನಹಾದಿಯೊಂದನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವಂತಿದೆ. ಗಿಣಿವಾರರು ಚಿತ್ರಿಸುವ ರಾಯಚೂರು ಸೀಮೆಯ ಜನಸಾಮಾನ್ಯರ ಬವಣೆಗಳು, ಗ್ರಾಮಭಾರತದ ದೀನದಲಿತರ ಬದುಕಿನ ನರಳಿಕೆಗಳೂ ಆಗಿವೆ. ತಾನು ಹೇಳುವ ಕಥೆಗಳ ಭಾಗವಾಗದಂತೆ ಸಾಧಿಸಿರುವ ಅಂತರ ಹಾಗೂ ಭಾಷೆಯನ್ನು ಎಚ್ಚರದಿಂದ ಬಳಸುವ ಪ್ರಜ್ಞೆಯ ಕಾರಣದಿಂದಾಗಿ ಗಿಣಿವಾರರನ್ನು ಹೊಸ ತಲೆಮಾರಿನ ಕಥೆಗಾರರ ಸಾಲಿನಲ್ಲಿ ಭಿನ್ನವಾಗಿ ನೋಡಬಹುದಾಗಿದೆ.

ಚಾಂದ್ ಪಾಷ
ಚಾಂದ್ ಪಾಷ

ಕಾವ್ಯದ ಕಲರವದ ದೃಷ್ಟಿಯಿಂದಲೂ 2020 ನಿರಾಶಾದಾಯಕ ವರ್ಷವೇನಲ್ಲ. ‘ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ’ ಪಡೆದ ಚಾಂದ್‌ ಪಾಷ ಅವರ ‘ಚಿತ್ರ ಚಿಗುರುವ ಹೊತ್ತು’, ಬಿ.ಆರ್‌. ಶ್ರುತಿ ಅವರ ‘ಜೀರೋ ಬ್ಯಾಲೆನ್ಸ್‌’ ಹಾಗೂ ಶಿಲ್ಪ ಬೆಣ್ಣೆಗೆರೆ ಅವರ ‘ಕೊಲ್ಲುವವನೆ ದೇವರಾದನಲ್ಲ’ ಸಂಕಲನಗಳನ್ನು 2020ರ ಯುವಕಾವ್ಯದ ಪ್ರಾತಿನಿಧಿಕ ಕೃತಿಗಳಾಗಿ ಭಾವಿಸಬಹುದು.

ಗುರುಪ್ರಸಾದ್ಕಂಟಲಗೆರೆ
ಗುರುಪ್ರಸಾದ್ಕಂಟಲಗೆರೆ

ಸಾಮಾಜಿಕ ಕಾಯಿಲೆಗಳಿಗೆ ಮದ್ದು ಹುಡುಕುವ ಪ್ರಯತ್ನದ ರೂಪದಲ್ಲಿ ಕಾವ್ಯದ ಕಂದೀಲು ಹಿಡಿದಿರುವ ಚಾಂದ್‌, ತಮ್ಮೆದೆಯೊಳಗೆ ಕಾವ್ಯದ ಬೀಜಗಳನ್ನು ಊರಿಕೊಂಡಿರುವಂತಿದೆ. ಶ್ರುತಿ ಅವರ ‘ಜೀರೊ ಬ್ಯಾಲೆನ್ಸ್‌’ ಹೊಸಕಾಲದ ಹೆಣ್ಣಿನ ಅನನ್ಯತೆಯನ್ನು ಶೋಧಿಸುವ ಪ್ರಯತ್ನವಾಗಿ ಗಮನಸೆಳೆಯುತ್ತದೆ.ಶಿಲ್ಪ ಅವರ ಪಾಲಿಗೆ ಕವಿತೆಯ ಮಾಧ್ಯಮ ವರ್ತಮಾನದ ದಂದುಗಗಳಿಗೆ ಸೃಜನಶೀಲ ಪ್ರತಿಕ್ರಿಯೆಯ ರೂಪದಲ್ಲಿ ಒದಗಿಬಂದಿದೆ. ಬೆಳಗಾವಿಯ ಪ್ರವೀಣರ ‘ಬಾನಸಮುದ್ರಕೆ ಗಾಳನೋಟ’ ಬುದ್ಧಿ–ಭಾವದ ಹದವಾದ ಮಿಳಿತ ಹಾಗೂ ಹೊಸ ಪ್ರತಿಮೆಗಳ ಮೂಲಕ ಗಮನಸೆಳೆದ ಕವನಸಂಕಲನ.

ಪ್ರವೀಣ್‌
ಪ್ರವೀಣ್‌

‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ 2020ರ ಕೊನೆಯಲ್ಲಿ ಪ್ರಕಟವಾಗಿರುವ ಮೌಲ್ಯ ಸ್ವಾಮಿ ಅವರ ಕವನಸಂಕಲನ. ದುಃಖ, ವಿಷಾದ, ಸಿಟ್ಟನ್ನು ಸ್ಥಾಯಿಭಾವವಾಗುಳ್ಳ ಮೌಲ್ಯ ಅವರ ಕವಿತೆಗಳು ನೋವಿನಲ್ಲಿ ಅದ್ದಿ ತೆಗೆದಂತಿವೆ. ಒಡಲುರಿಯ ಅಭಿವ್ಯಕ್ತಿಗೆ ಕಾವ್ಯವೇ ಪರಿಣಾಮಕಾರಿ ಮಾಧ್ಯಮ ಎಂದು ನಂಬಿ ಬರೆದಿರುವಂತೆ ಇಲ್ಲಿನ ಬಿಕ್ಕುಗಳು ಆರ್ದ್ರವಾಗಿವೆ, ಸಹೃದಯರನ್ನು ಕಾಡುವಂತಿವೆ.

ಶಿಲ್ಪ ಬೆಣ್ಣೆಗೆರೆ
ಶಿಲ್ಪ ಬೆಣ್ಣೆಗೆರೆ

ನರೇಂದ್ರ ಪೈ ಅವರ ‘ಕನಸುಗಳು ಖಾಸಗಿ’ ಕೃತಿಯನ್ನು ಉಲ್ಲೇಖಿಸದೆ ಹೋದರೆ 2020ರ ಸುಗ್ಗಿ ಸಂಭ್ರಮ ಅಪೂರ್ಣಗೊಳ್ಳುತ್ತದೆ. ಕಥೆ, ವಿಮರ್ಶಾ ಬರಹಗಳ ಮೂಲಕ ಪ್ರಸಿದ್ಧರಾದ ನರೇಂದ್ರ ಪೈ ಹಿರಿಯ ಬರಹಗಾರರ ಸಾಲಿಗೆ ಸೇರಿದ್ದರೂ, ಅವರ ‘ಕನಸುಗಳು ಖಾಸಗಿ’ ಸಂಕಲನದಲ್ಲಿನ ತಾರುಣ್ಯವನ್ನು ಗಮನಿಸಬೇಕು. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಿಂದ ಹೊರಬಂದಿರುವ ಕನ್ನಡ ಸಾಹಿತ್ಯ, ವಿಭಿನ್ನ ಕ್ಷೇತ್ರಗಳ ಸಂವೇದನೆಗಳನ್ನು ಒಳಗೊಂಡು ಹೊಸ ಹೊಳಪಿನಿಂದ ಕಂಗೊಳಿಸುತ್ತಿದೆ ಎನ್ನುವ ಮಾತು–ಚರ್ಚೆಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಸಂಖ್ಯಾ ದೃಷ್ಟಿಯಿಂದ ಇದು ಸಮೃದ್ಧಿಯ ಕಾಲ ಎನ್ನುವುದು ನಿಜ. ಬಿಡಿ ಬರಹಗಳ ಮಟ್ಟಿಗೆ ಅಲ್ಲೊಂದು ಇಲ್ಲೊಂದು ಬೆಳ್ಳಿಗೆರೆ ಮಿನುಗುತ್ತಿರುವುದೂ ನಿಜ. ಆದರೆ, ಸಾಹಿತ್ಯ ಪರಂಪರೆಯ ಜೊತೆಗಿಟ್ಟು ನೋಡಿದರೆ, ವರ್ತಮಾನದ ಸುಗ್ಗಿಯ ಅಸಲಿಯತ್ತು ಸ್ಪಷ್ಟವಾಗುತ್ತದೆ.

ಶ್ರುತಿ ಬಿ.ಆರ್‌.
ಶ್ರುತಿ ಬಿ.ಆರ್‌.

‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಮನೋಭಾವ ಸಾಹಿತ್ಯ ಸಂದರ್ಭದಲ್ಲಿ ಬಲವಾಗುತ್ತಿರುವ ಸಂದರ್ಭದಲ್ಲಿ, ಬರವಣಿಗೆಯ ಬಗೆಗಿನ ಶ್ರದ್ಧೆ–ಬದ್ಧತೆ, ಭಾಷೆಯ ಜೀವಶಕ್ತಿಯ ಬಗೆಗಿನ ನಂಬಿಕೆ, ಶಿಲ್ಪದ ಬಗೆಗಿನ ಆಸಕ್ತಿ, ಕಸುಬುದಾರಿಕೆ, ಮಹತ್ವಾಕಾಂಕ್ಷೆ – ಇವುಗಳನ್ನೆಲ್ಲ ಇಡಿಯಾಗಿ ಕಾಣುವುದು ಕಷ್ಟ. ಈ ಸಾಹಿತ್ಯಿಕ ಗುಣಗಳ ಪ್ರಯೋಗಶಾಲೆಯ ರೂಪದಲ್ಲಿ ‘ಕನಸುಗಳು ಖಾಸಗಿ’ ಸಂಕಲನ ಕಾಣಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡ ಅತ್ಯುತ್ತಮ ಕೃತಿಗಳಲ್ಲೊಂದಾದ ಈ ಕೃತಿ, ಸಾಹಿತ್ಯದ ವಿದ್ಯಾರ್ಥಿಗಳು ಪಠ್ಯದಂತೆ ಗಮನಿಸಬಹುದಾದುದು. ನರೇಂದ್ರ ಪೈ ಅವರ ಖಾಸಗಿ ಕನಸುಗಳು ಸಾರ್ವತ್ರಿಕ ಆಗಬೇಕಾದುದು ಕನ್ನಡ ಸಾಹಿತ್ಯದ ನಾಳೆಗಳ ದೃಷ್ಟಿಯಿಂದ ಅಗತ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT