ಶನಿವಾರ, ನವೆಂಬರ್ 28, 2020
18 °C

ಪ್ರೇಮ ವಿವಾಹ: ಅರಬ್ಬರಿಂದ ಅಕ್ಬರ್‌ವರೆಗೆ

ಪಿ.ಎಸ್‌. ಶ್ರೀಧರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದಲ್ಲಿ ಅನ್ಯಧರ್ಮೀಯರ ಜತೆ ಪ್ರೇಮ ವಿವಾಹ ಶುರುವಾಗಿದ್ದು ಹದಿನಾರು ಶತಮಾನಗಳ ಹಿಂದೆ; ಅದೂ ದಕ್ಷಿಣ ಭಾರತದ ಪಶ್ಚಿಮ ತೀರದಲ್ಲಿ. ಅಂದರೆ ಕೇರಳ–ಕರ್ನಾಟಕದ ಕಡಲ ತೀರದಲ್ಲಿ. ಆಗಿನಿಂದಲೂ ಅರಬ್ಬರು ಸಮುದ್ರದ ಮೂಲಕ ವ್ಯಾಪಾರಕ್ಕಾಗಿ ಈ ಕಡಲ ತೀರಕ್ಕೆ ಬರುತ್ತಿದ್ದರು. ಹಾಗೆ ಬರುತ್ತಿದ್ದ ಅರಬರೊಡನೆ ಪ್ರೇಮ ವಿವಾಹಕ್ಕೆ ನಾಂದಿ ಹಾಡಿದವರು ಕೇರಳದ ನಿಮ್ನವರ್ಗಗಳ (ಶೂದ್ರ, ಬೆಸ್ತ, ಕುಂಬಾರ ಇತ್ಯಾದಿ) ಯುವತಿಯರು. ಈ ಬಗೆಗಿನ ಮಾಹಿತಿಗಳನ್ನು ಚರ್ಚಿಸುವ ಮೊದಲು ಈ ವರ್ಗದ ಮಹಿಳೆಯರ ದುಃಸ್ಥಿತಿಯನ್ನು ಅರಿತುಕೊಳ್ಳುವುದು ಅಗತ್ಯ.

 ಆಗ ಕೇರಳದ ಅರ್ಚಕರು ಈ ಕೆಳವರ್ಗದ ಮಹಿಳೆಯರನ್ನು ತಮಗೆ ಇಷ್ಟಬಂದಂತೆ ನಡೆಸಿಕೊಳ್ಳುವ ಹಕ್ಕನ್ನು ಹೊಂದಿದ್ದರು. ಈಗಲೂ ಇದು ಸಣ್ಣ ಪ್ರಮಾಣದಲ್ಲಿ ರೂಢಿಯಲ್ಲಿದೆ. ತಮ್ಮ ಮಗಳು ಬ್ರಾಹ್ಮಣರನ್ನು ಆಕರ್ಷಿಸಿದ್ದಾಳೆ ಎನ್ನುವುದೇ ಈ ವರ್ಗಗಳ ಕುಟುಂಬಗಳಿಗೆ ಹೆಮ್ಮೆಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿಯೋ ಏನೋ ಈ ವರ್ಗದ ಯುವತಿ– ಮಹಿಳೆಯರಿಗೆ ರವಿಕೆಯನ್ನು ತೊಡುವ ಮತ್ತು ಸೆರಗನ್ನು ಹೊದ್ದುಕೊಳ್ಳುವ ಸಂಪ್ರದಾಯ ಸಹ ಇರಲಿಲ್ಲ.

ಟಿಪ್ಪು ಸುಲ್ತಾನ್ ತನ್ನ ರಾಜ್ಯವನ್ನು ಕೇರಳದವರೆಗೆ ವಿಸ್ತರಿಸಿದ್ದು, ಯುವತಿ– ಮಹಿಳೆಯರನ್ನು ಈ ದುಃಸ್ಥಿತಿಯಲ್ಲಿರಿಸುವ ಅನಿಷ್ಟ ಪದ್ಧತಿಯನ್ನು ತಡೆದದ್ದಲ್ಲದೆ ಈ ಪದ್ಧತಿಯನ್ನು ಅಪರಾಧವೆಂದು ಘೋಷಿಸಿದ್ದ. ದಲಿತ ಸ್ತ್ರೀಯರು ಸೆರಗು ಹೊದೆಯುವುದು ಶಿಷ್ಟಾಚಾರದ ಉಲ್ಲಂಘನೆ ಎಂಬ ಸಾಮಾಜಿಕ ಕಟ್ಟುಪಾಡು ಇತ್ತೀಚಿನವರೆಗೆ ಜೀವಂತವಾಗಿತ್ತು ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು.

ನಾಯರ್ ಎಂಬ ಶೂದ್ರ ಪಂಗಡವೊಂದು ಕೇರಳದಲ್ಲಿದ್ದು ಈ ಜಾತಿಯ ಮಹಿಳೆಯರು ಈ ದುಷ್ಟ ಪರಂಪರೆಯ ಶೋಷಣೆಗೆ ಬಲಿಯಾಗಿದ್ದರು. ನಂಬೂದ್ರಿ ಪುರುಷ– ನಾಯರ್‌ ಮಹಿಳೆ, ಇವರ ಸಂತಾನಕ್ಕೆ ನಂಬೂದ್ರಿಯ ಸ್ವತ್ತಿನಲ್ಲಿ ಭಾಗವಿಲ್ಲ. ನಾಯರ್‌ ಮಹಿಳೆಗೂ ಭಾಗವಿಲ್ಲ. ಅವಳ ಪೋಷಣೆಗೆಂದು ಅಷ್ಟಿಷ್ಟು ಹಣ ಕೊಡುವುದುಂಟು. ಇದಕ್ಕೆ ಕೇರಳದಲ್ಲಿ ‘ಸಂಬಂಧಂ’ ಎಂಬ ಹೆಸರಿದೆ.

ಇಂಥ ಅವಹೇಳನದ ಬದುಕು, ಶೋಷಣೆ, ದೌರ್ಜನ್ಯಗಳಿಂದ ಪಾರಾಗಲು ಈ ವರ್ಗದ ಯುವತಿಯರು ಅರಬರೊಂದಿಗೆ ಪ್ರೇಮ ವಿವಾಹಕ್ಕೆ ಮುಂದಾದರು ಮತ್ತು ಅರಬರ ಕುಟುಂಬಗಳ ಅವಿಭಾಜ್ಯ ಅಂಗವಾಗಿಹೋದರು. ನಂಬೂದ್ರಿ ಬ್ರಾಹ್ಮಣರು ಇವರನ್ನು ವಿವಾಹವಾಗುತ್ತಿರಲಿಲ್ಲ. ವೇಶ್ಯೆ ಎಂಬ ಮಾತನ್ನು ಬಳಸದೆಯೇ ವೇಶ್ಯಾಜೀವನಕ್ಕೆ ತಳ್ಳಲ್ಪಟ್ಟಿದ್ದ ಇವರನ್ನು ಮತ್ತು ಇವರ ಕುಟುಂಬದ ಯುವತಿಯರನ್ನು ಜಾತಿ ಕಟ್ಟಳೆಯಿಂದಾಗಿ ವಿವಾಹವಾಗುತ್ತಿರಲಿಲ್ಲ. ಇಸ್ಲಾಂ‌ ಸ್ಥಾಪನೆಯಾದ ನಂತರ,  ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದ ಅರಬ್ಬರ ಪ್ರಭಾವದಿಂದ ಇಲ್ಲಿ ನೆಲೆಸಿದ್ದ ಅರಬರೂ ಮುಸ್ಲಿಮರಾದರು. ಈ ಎಲ್ಲ ಕಾರಣಗಳಿಂದಾಗಿ ಆ ರಾಜ್ಯ ಯಾವುದೇ ಕಾಲದಲ್ಲಿ ಮುಸ್ಲಿಂ ಆಳ್ವಿಕೆಗೆ ಒಳಪಡದಿದ್ದಾಗ್ಯೂ, ಅಲ್ಲಿ ರಾಜ್ಯದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮುಸ್ಲಿಮರಾಗಿದ್ದಾರೆ; ಅಂತೆಯೇ ಮೂರನೇ ಒಂದು ಭಾಗ ಕ್ರಿಶ್ಚಿಯನ್ನರಾಗಿದ್ದಾರೆ. ಉಳಿದ ಮೂರನೇ ಒಂದು ಭಾಗ ಹಿಂದೂಗಳಾಗಿದ್ದಾರೆ.

ವೈಶ್ಯ, ಕ್ಷತ್ರಿಯ, ಬ್ರಾಹ್ಮಣ ಎಂಬ ಜನಿವಾರವಂಥ ಜಾತಿಗಳ ಯುವಕ ಜನಿವಾರರಹಿತ ಜಾತಿಗಳ ಯುವತಿಯನ್ನು ವಿವಾಹವಾದರೆ ಅದಕ್ಕೆ ಅನುಲೋಮ ಎಂದೂ, ಜನಿವಾರವಂಥ ಜಾತಿಯ ಯುವತಿ ಜನಿವಾರರಹಿತ ಜಾತಿಯ ಯುವಕನನ್ನು ವಿವಾಹವಾದರೆ ಅದನ್ನು ಪ್ರತಿಲೋಮ ಎಂದೂ ಕರೆಯುತ್ತಾರೆ. 1956ರಲ್ಲಿ (ಆಗ್ಗೆ ಡಾ. ಅಂಬೇಡ್ಕರ್ ಕೇಂದ್ರ ಕಾನೂನು ಮಂತ್ರಿ) ಹಿಂದೂ ಕೋಡ್ ಬಿಲ್ ಮೂಲಕ ಹೊಸ ಹಿಂದೂ ಕಾಯ್ದೆ ಜಾರಿಗೆ ಬರುವ ಮುನ್ನ ವಿವಾಹದಿಂದ ಹುಟ್ಟಿದ ಗಂಡು ಮಕ್ಕಳಿಗೆ ಮಾತ್ರ ತಂದೆಯ ಆಸ್ತಿಯಲ್ಲಿ ಹಕ್ಕಿತ್ತು. ಹೆಣ್ಣು ಮಕ್ಕಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಆಸ್ತಿ ಹಕ್ಕಿರಲಿಲ್ಲ. ಏಕೆಂದರೆ ಅವಳೇ ಒಂದು ಸ್ವತ್ತಾಗಿದ್ದಳು. ಕನ್ಯಾದಾನ ಎಂಬ ಶಬ್ದ ಕುರಿತು ಈ ಹಿನ್ನೆಲೆಯಲ್ಲಿ ಆಲೋಚಿಸಬೇಕು.

ಹೆಣ್ಣು ಮಕ್ಕಳ ಕುರಿತು ಚರಿತ್ರೆಯಲ್ಲಿ ಸಿಗುವ ನೋವಿನ ಸಂಗತಿಗಳು ಇವುಗಳಾದರೆ, ಪ್ರೇಮ ವಿವಾಹದ ಭವ್ಯ ಇತಿಹಾಸ ಖುಷಿ ಕೊಡುತ್ತದೆ. ಪ್ರೇಮ ವಿವಾಹಗಳಿಗೆ ಧರ್ಮ ಒಂದು ಬೇಲಿ ಆಗಲೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಗುಜರಾತ್‌ನ ಸಣ್ಣ ರಾಜ್ಯದ ರಾಜಕುಮಾರಿಯಾಗಿದ್ದ ಕಮಲಾದೇವಿ ಆಗಿನ ದೊರೆಯಾಗಿದ್ದ ಅಲ್ಲಾವುದ್ದೀನ್‌ ಖಿಲ್ಜಿಯನ್ನು ವಿವಾಹವಾಗಿ ರಾಣಿಪಟ್ಟಕ್ಕೆ ಏರಿದ್ದಳು. ಅಲ್ಲಾವುದ್ದೀನ್‌ನ ಪುತ್ರ ಖಿಜರ್‌ ಖಾನನನ್ನು ಮತ್ತೊಬ್ಬ ರಾಜಕುಮಾರಿ ಧವಳಾದೇವಿ ವರಿಸಿದ್ದಳು.

ಬಹ್ಲೋಲ್‌ ಲೋಧಿ, ವಿಶ್ವಕರ್ಮ ಸಮುದಾಯದ ಹಿಂದೂ ಮಹಿಳೆಯನ್ನು ವಿವಾಹವಾಗಿದ್ದ. ಅವಳ ಪುತ್ರ ಸಿಕಂದರ್‌ ಷಾ ಮುಂದೆ ದೊರೆಯಾಗಿ ನೇಮಕಗೊಂಡ. ವಿ.ಡಿ. ಮಹಾಜನ್‌ ಅವರು ಬರೆದಿರುವ ‘ಮುಸ್ಲಿಂ ರೂಲ್‌ ಇನ್‌ ಇಂಡಿಯಾ’ ಕೃತಿಯಲ್ಲಿ ಇಂತಹ ವಿವರಗಳು ಬೇಕಾದಷ್ಟು ಸಿಗುತ್ತವೆ.

ರಜಪೂತ ಸಮುದಾಯಕ್ಕೆ ಸೇರಿದ ಜೋಧಾಬಾಯಿಯು ಅಕ್ಬರ್‌ ಚಕ್ರವರ್ತಿಯ ಕೈಹಿಡಿದಿದ್ದು ಎಲ್ಲರಿಗೂ ಗೊತ್ತಿದೆ. ಜವಾಹರಲಾಲ್‌ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್‌ ಅವರು ಪತ್ರಕರ್ತ ಸಯ್ಯದ್‌ ಹುಸೇನ್‌ ಅವರನ್ನು ವಿವಾಹವಾಗಿದ್ದರು. ಶರ್ಮಿಳಾ ಟ್ಯಾಗೋರ್‌ ಅವರು ನವಾಬ್‌ ಪಟೌಡಿಯವರನ್ನು ಮದುವೆಯಾಗಿದ್ದು ಗೊತ್ತಿದೆಯಲ್ಲವೇ? ಮತಾಂತರಕ್ಕಾಗಿ ಮದುವೆ ಎನ್ನುವುದು ಶುದ್ಧ ಸುಳ್ಳು. ಹೆಣ್ಣು–ಗಂಡಿನ ಮಧ್ಯೆ ಪ್ರೇಮ ಅರಳಿದಾಗ ಅಲ್ಲಿ ಧರ್ಮದ ಬೇಲಿ ಹಾಕುವ ಅಗತ್ಯವಾದರೂ ಏನಿದೆ? ಅದಕ್ಕೆ ಹುನ್ನಾರ ನಡೆಸುವುದಾದರೂ ಏಕೆ?

ಲೇಖಕ: ನಿವೃತ್ತ ಪ್ರಾಧ್ಯಾಪಕ, ಹಿರಿಯ ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು