ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿಗೆ ಸಂಕ್ರಮಣದ ಬುತ್ತಿಯೂಟ: ಎದಿತುಂಬ ಕುಸುರೆಳ್ಳು ಮೂಡಿದ್ಹಂಗ...

Last Updated 15 ಜನವರಿ 2022, 3:06 IST
ಅಕ್ಷರ ಗಾತ್ರ

ಸಂಕ್ರಾಂತಿ ಸುಗ್ಗಿ ಸಂಭ್ರಮದ ಹಬ್ಬ. ಹೆಣ್ಣು ಮಕ್ಕಳಿಗಂತೂ ವಿಶಿಷ್ಟವಾದ ಹಬ್ಬ. ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರು ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸುವ ಪರಿಯನ್ನು ಆ ನೆಲದ ಸೊಗಡಿನಲ್ಲೇ ಆಸ್ವಾದಿಸಿ...

****

ಸಂಕ್ರಾಂತಿ ಹಿಂದಿನ ದಿನದ ಸಂಭ್ರಮನೇ ಸಂಭ್ರಮ. ನಮ್ಮನ್ಯಾಗ ನಮ್ಮವ್ವ ರಾತ್ರಿ ತೊಳದು ಒಣ ಹಾಕಿದ ಎಳ್ಳಿಗೆ ಚೂರು ಅರಿಶಿಣ ಕೂಡಿಸಿ, ಮಿಕ್ಸಿಗೆ ಹಾಕಿ ಇಟ್ಲಂದ್ರ ಅವೊತ್ತು ಸಾಬೂನಿಗೆ ಸೂಟಿ ಅಂತರ್ಥ.

ಚಳಿಗಾಲ ಕಳದು, ಬ್ಯಾಸಗಿ ಹೆಜ್ಜಿ ಇಡೂ ಹೊತ್ತಿನಾಗ ತಂಗಾಳಿ, ಒಣಗಾಳಿಯಾಗ್ತದ. ಮೊಣಕಾಲಿನಿಂದ ಕೆಳಗೆಲ್ಲ ಕೆರಕೊಂಡ ಗಾಯಗಳು, ಮೊಣಕೈಯಿಂದ ಮುಂಗೈತನಾನೂ ಗೀರುಗಾಯಗಳು ಮೂಡ್ತಾವ. ಕಣ್ಣಕೆಳಗಿನ ಗಲ್ಲದ ಮ್ಯಾಲೆ ಬರ ಬಿದ್ದ ಹೊಲದಂಥ ಬಿರುಕುಗಳು ಮೂಡಿದ್ರ, ನಗೂದು ತ್ರಾಸು.

ನಕ್ರ ರಕ್ತ ಸುರಿಯೂಹಂಗ ತುಟಿ ಬಿರೀತಾವ. ಅವಾಗ... ಬರೋಬ್ಬರಿ ಅವಾಗ ಈ ಸಂಕ್ರಾಂತಿ ಬರ್ತದ. ಮೈಮನಸಿಗೆ ಎಣ್ಣಿಯುಣಸಾಕ, ಚರ್ಮ ಮಿದುಗೊಳಿಸಾಕಂತ ಆ ಲೇಪನದಿಂದ ಸ್ನಾನ ಮಾಡ್ತಾರ.

ಹೆಣ್ಮಕ್ಕಳು ಭೋಗಿ ದಿನ ತಲಿಗೆ ಎಣ್ಣಿ, ಮೈಗೆ ಈ ಲೇಪನ ಹಚ್ಕೊಂಡು ಸ್ನಾನ ಮಾಡಿದ್ರ, ಆ ಒಣಚರ್ಮದ ಗುರುತಿಲ್ಲದಷ್ಟು ನುಣ್ಣನೆಯ ನುಣುಪು ಬರ್ತದ. ಸಂಕ್ರಾಂತಿಗೆ ತಣ್ಣನೆಯ ಗಾಳಿಯೊಳಗ ಮೂಡುವ ಎಳೀಬಿಸಿಲಿಗೆ ಕುಂತ್ರ, ಆಹಹಾ.. ಸ್ವರ್ಗ ಮನಿ ಅಂಗಳದಾಗ. ಅಂಗಳ ಇಲ್ಲಂದ್ರ ಬಾಲ್ಕನಿಗೆ ಬಂದಂಗ.

ಅಂಗಳದಾಗ ಕುಂತ ಕೂಡಲೆ, ನಮ್ಮವ್ವ ಮೊದಲು ಕಾಡಗಿ ಹಿಡ್ಕೊಂಡು ಬರ್ತಿದ್ಲು. ಅದೂ ಕಳಸಕ್ಕ ಎಣ್ಣಿ ಹಚ್ಚಿ, ದೀಪದ ಅಡ್ಡ ಹಿಡದು ಬರುವ ಕಪ್ಪು. ಅದನ್ನ ಕಣ್ಣಂಚಿಗೆ ಹಚ್ತಿದ್ರು. ಆ ಅರಿಷಿಣದ ಮೈಗೆ ದೃಷ್ಟಿಯಾಗಬಾರದು ಅನ್ನುವ ಎಚ್ಚರಿಕೆಯಂತ. ಗಲ್ಲದ ತುದಿಗೊಂದು ಕಪ್ಪು ಚುಕ್ಕಿ ಇಟ್ಟಾಗ ಸಮಾಧಾನ ಅವರಿಗೆ. ಬ್ಯಾಡಂದ್ರ ಅಗ್ದಿ ಕಿವಿಹಿಂದರೆ ಒಂದು ದೃಷ್ಟಿಬೊಟ್ಟು ಇಟ್ರೇನೆ ಅವರ ಜನ್ಮಕ್ಕ ಸಮಾಧಾನ ಆಗೂದು.

ಆಮೇಲೆ ಒಂದು ಹರಿವಾಣದಾಗ ಕುದಿಸಿದ ಗೆಣಸು, ಸುಲಿದಿಟ್ಟ ಕಬ್ಬು, ತೊಳೆದಿಟ್ಟ ಸುಲಗಾಯಿ(ಕಡ್ಲೆ ಗಿಡ), ಕ್ಯಾರೆಟ್ಟು, ಸೀಬೆಕಾಯಿ, ಕ್ಯಾರೆಕಾಯಿ, ಹುರದ ಸೇಂಗಾ, ಬೆಲ್ಲ, ಇಲ್ಲಾಂದ್ರ ಸೇಂಗಾದುಂಡಿ, ಎಳ್ಳುಂಡಿಯ ಚಿಗಳಿ ಇವಿಷ್ಟೂ ಬರೂವು. ಅವೊತ್ತು ಮುಂಜಾನಿಯ ನ್ಯಾರಿ (ತಿಂಡಿ)ಗೆ ಇವೇ ಎಲ್ಲ.

ಕೂದಲು ಒಣಗಿಸುವುದರೊಳಗ ಇವನ್ನೆಲ್ಲ ತಿಂದು, ಒಂದು ಹೊರಿ ಕಸ.. ಕಬ್ಬು ಮತ್ತು ಸುಲಗಾಯಿದು. ಅದು ನೋಡಿದಾಗ ಗೊತ್ತಾಗಬೇಕು.. ಇವರ ಮನ್ಯಾಗ ಭೋಗಿ ಅದೆಷ್ಟು ಸಂಭ್ರಮದಿಂದಾಯ್ತು ಅಂತ.

ಇದು ಮುಗಿಸಿ ಒಳ ಬಂದ್ರ, ಸೇಂಗಾದ ಮೈ ಸುಡದ್ಹಂಗ ಹಂಚಿಗೆ ಹಾಕಿ ಹುರೀಬೇಕು. ಅಂದ್ರ ಸತತ ಬಟ್ಟಿಲೆ ಅವುಗಳ ಮೈ ಹೊರಳಸ್ಕೊಂತ ಇರಬೇಕು. ಅಗ್ದಿ ನಮ್ಮ ಬೆರಳಿಗೆ ಕಾವು ತಾಕದ ಕಾಳಜಿಹಂಗೆ, ಸೇಂಗಾ ಕಪ್ಪಾಗದ್ಹಂಗ ನೋಡಬೇಕು.

ಒಣ ಕೊಬ್ಬರಿ ಸಣ್ಣ ಹೆಚ್ಚಬೇಕು. ಪುಠಾಣಿ, ಹಸನು ಮಾಡಬೇಕು. ಡೈಮಂಡ್‌ ಕಲ್ಸಕ್ರಿ ನೋಡಾಕ ಸಿಗ್ತಿದ್ದಿದ್ದೇ ಈ ಸಮಯದೊಳಗ. ಕುಸುರೆಳ್ಳಿನ ಒಂದು ಪಾಕೀಟು. ಜೊತಿಗೆ ನಮ್ಮ ಸ್ನಾನದಷ್ಟೇ ಮುಚ್ಚಟೆಯಿಂದ ತೊಳೆದ ಎಳ್ಳು, ಬಾಣಲಿಯೊಳಗ ಹೊರಳಾಡಿ ಹೊಟ್ಟಿಯುಬ್ಬಿಸಿಕೊಂಡು ಮಲಗಿರ್ತಾವ. ಅವನ್ನು, ಬೆಲ್ಲದ ಚೂರು, ಇವೆಲ್ಲ ಕೂಡಿಸಿ ಕುಸುರೆಳ್ಳು ಮಾಡಿಟ್ರ, ಮಕ್ಕಳಿಗೆಲ್ಲ ಯಾವಾಗ ಇವನ್ನು ಬೀರೇವು.. ಯಾವಾಗ ಬಾಯ್ತುಂಬ ಹಾಕಿಕೊಂಡೇವು ಅಂತ ಕಾಯೂದೆ ಆಗ್ತದ.

ಸಂಕ್ರಾಂತಿ ಬುತ್ತಿ ಕಟ್ಟೂದಂದ್ರ, ಅತ್ಗಿ, ನಾದಿನಿಯರು, ಅತ್ತೆ ಸೊಸೆಯರು, ಅಮ್ಮ ಮಗಳು, ಹಿಂಗ ಎಲ್ಲ ಬಾಂಧವ್ಯಗಳೂ ತಮ್ಮ ತಮ್ಮ ವಿಶೇಷ ಖಾದ್ಯಗಳ ಅಡುಗೆ ಮಾಡಿ, ಎಲ್ಲಾರು ಕೂಡಿ ಎಲ್ಲರೆ ಹೋಗಿ ಉಂಡು ಬರುವ ಯೋಜನೆ ಒಂದು ತಿಂಗಳು ಮೊದಲೇ ಆಗಿರ್ತದ.

ಮಾಮಿ ಯಾವಾಗಲೂ ಚಪಾತಿ ವಹಿಸ್ಕೊತಾಳ, ವೈನಿಗೆ ಎಳ್ಳುಹೋಳಗಿ ಹೇಳಬೇಕು, ಸೇಂಗಾದ ಹೋಳಿಗಿ ಮಾಡುವ ಕಾಕು, ಮೊಸರನ್ನ ತರುವ ಪುಟ್ಟಕ್ಕ, ಚಿತ್ರಾನ್ನ ತರುವ ದೊಡ್ಡಕ್ಕ ಹಿಂಗ ಅವರವರ ವಿಶೇಷಗಳನ್ನು ಅವರವರೇ ವಹಿಸಿಕೊಂಡಿರ್ತಾರ. ಅದಾದ ಮ್ಯಾಲೆ ಪ್ರತಿಯೊಂದಕ್ಕೂ ಹೆಸರಿಡೂದು, ಉಣ್ಣೂಮುಂದ ಯಾವುದು ಹೆಚ್ಚು ಖರ್ಚಾತು ಅಂತ ಕಾಡಿಯಾಡೂದು ಎಲ್ಲ ಇದ್ದದ್ದೇ. ಹಿಂಗ ಎಲ್ಲಾರೂ ಕೂಡೂದ್ರಿಂದಲೇ ಹಬ್ಬಕ್ಕ ಅದೆಷ್ಟು ಖಾದ್ಯಗಳು..

ಖಟಿ ಜೋಳದ ರೊಟ್ಟಿ, ಎಳ್ಳೂ ಹಚ್ಚಿದ ಸಜ್ಜಿ ರೊಟ್ಟಿ, ಚಪಾತಿ, ಸೇಂಗಾ ಮತ್ತು ಎಳ್ಳು ಹೋಳಗಿ, ಮೊಳಕಿ ಕಾಳಿನ ಪಲ್ಯೆ, ಹಿಟ್ಟಿನ ಪಲ್ಯೆ(ಝುಣಕದ ಒಡಿ), ಎಣ್ಣಿಗಾಯಿ (ಹೀರಿಕಾಯಿ, ಬದನಿಕಾಯಿ, ತೊಂಡಿ ಕಾಯಿ), ಭರ್ತ (ಹಸಿಕಾಳು, ಸೊಪ್ಪು, ಗಡ್ಡೆ, ತರಕಾರಿಗಳನ್ನು ಬೇಯಿಸಿ ಮಾಡುವ ಖಾದ್ಯ), ಬಜ್ಜಿ, ಹೆಸರು ಬ್ಯಾಳಿ, ಕಡ್ಲಿಬ್ಯಾಳಿ ಕೋಸಂಬ್ರಿ. ಇಷ್ಟು ಸಾಲದು ಅಂತ ಪಚಡಿ ಬ್ಯಾರೆ. ಮೂಲಂಗಿ, ಮೂಲಂಗಿ ಸೊಪ್ಪನ್ನು ಸಣ್ಣಗೆ ಕೊಚ್ಚಿ, ಸೌತಿಕಾಯಿ ಹೆಚ್ಚಿ, ಉಳ್ಳಾಗಡ್ಡಿ ಹೆಚ್ಚಿ, ಕಲಸೂದು. ಮ್ಯಾಲೆ ಬೇಕಿದ್ದೋರಿಗೆ ಬಿಸಿ ಕಾದೆಣ್ಣಿ, ಅದಕ್ಕ ಗುರೆಳ್ಳು ಇಲ್ಲಾ ಅಗಸಿ ಹಿಂಡಿ ಹಾಕಿ ಕಲಿಸಿ, ಮ್ಯಾಲೆ ಒಂದಿಷ್ಟು ಹುರದಿಟ್ಟ ಸೇಂಗಾ ಹಾಕಿದ್ರ... ಆ ಪಚಡಿಗೆ ಮತ್ತೇನೂ ಬ್ಯಾಡನಿಸ್ತದ. ಹೊಲಕ್ಕ ಹೋಗಿ ಉಣ್ಣೋರು ಅಲ್ಲೇ ಸಿಗುವ ಹಕ್ಕರಕಿನೂ ಕಲಸ್ತಾರ.

ಇಷ್ಟಾದ್ರ ಮುಗಿಯೂದಿಲ್ಲ.. ಚಿತ್ರಾನ್ನ, ಮೊಸರನ್ನ, ಬಿಳಿಯನ್ನ ತುಪ್ಪ, ತೊವ್ವಿ, ಉಪ್ಪಿನಕಾಯಿ, ಜೊತಿಗೆ ಮಿರ್ಚಿ, ಉಳ್ಲಾಗಡ್ಡಿ ಭಜಿ, ಹಪ್ಪಳ, ಸಂಡಗಿ, ಮೆಂತ್ಯ ಮೆಣಸಿನಕಾಯಿ.. ಹುರದಿದ್ದು, ಕರದಿದ್ದು, ಬೆಂದಿದ್ದು, ಬೇಯಿಸಿದ್ದು, ತೋಟದಿಂದ, ಮಡಕೆಯಿಂದ, ಭೂಮಿಯಾಳದಿಂದ, ಬಳ್ಳಿಯಿಂದ, ಗಿಡದಿಂದ, ಮರದಿಂದ, ತೆನಿಯಿಂದ ಹಿಂಗ ಸಮಸ್ತ ತಿನಿಸೂ ಆ ತಾಟಿನೊಳಗ ಇರ್ತದ. ಸಾಕ್ಷಾತ್‌ ಅನ್ನ ಬ್ರಹ್ಮ ಅನಿಸುವ ಊಟ ಅದು.

ಇದಿಷ್ಟೂ ಉಂಡು, ಬೀಡಾ ಹಾಕ್ಕೊಂಡ್ರ ಮಧ್ಯಾಹ್ನದ ಸಂಭ್ರಮ ಮುಗೀತದ. ಸಂಜೀ ಚಾ ಕುಡದ ಮ್ಯಾಲೆ ಆ ಕಣ್ಣಿಗೆ ಒತ್ತಿದ ಕಾಡಗಿಯಷ್ಟೆ ಕಡುಕತ್ತಲೆ ಇಣುಕುವ ಮುಂದ, ಮಕ್ಕಳ ಅಲಂಕಾರದ ಕಲರವ ಶುರು. ಐದು ವರ್ಷಗಳ ಒಳಗಿನ ಮಕ್ಕಳು ಮನ್ಯಾಗಿದ್ರಂತೂ ಹಬ್ಬದ ಸಂಭ್ರಮ ಸರಭರ ಸರಭರ ಅಂತದ.

ಅವರಿಗೆ ಹಣ್ಣೆರಿಬೇಕಲ್ಲ. ಕರಿಯೆರಿಯೂದಂದ್ರ ಚುರುಮುರಿಯೊಳಗ ಸುಲಗಾಯಿ, ಗಜ್ಜರಿ, ಕಬ್ಬು, ಚಾಕ್ಲೆಟು, ಮುತ್ತು ಹವಳ, ಬೆಂಡು, ಬತ್ತಾಸು ಎಲ್ಲಾನೂ ಸಣ್ಣ ಚೂರು ಮಾಡಿ ಒಂದು ಸೇರಿನಾಗ ತುಂಬ್ತಾರ. ಸೋದರ ಮಾವ ಅಥವಾ ಸೋದರ ಅತ್ತಿ ಇವರಿಬ್ಬರೊಳಗ ಯಾರಿದ್ದರೂ ನಡೀತದ. ಇಬ್ಬರೂ ಇದ್ರಂತೂ ಅಗ್ದಿ ಪುಣ್ಯದ ಗಳಿಗೆಯದು. ಮುತ್ತಿನುಂಗುರ ಹಾಕ್ಕೊಂಡು, ಹಿಂಗ ಕರಿಯೆರದ್ರ, ಬದುಕಿನಾಗ ಬರುವ ಎಲ್ಲ ಪೀಡೆಗಳೂ ಸಂಕಷ್ಟ ಪರಿಹಾರ ಆಗ್ತಾವ ಅನ್ನೂದು ನಂಬಿಕಿ.

ತಲಿಮ್ಯಾಲೆ ಇವಿಷ್ಟು ಸುರಿಯೂತನಕಾನೂ ಚುಚ್ಚುವ ಕರಿಕಂಬಳಿ ಮ್ಯಾಲೆ ಕೂಡೂದೆ ಸವಾಲಿನ ಕೆಲಸ. ಹೆಣ್ಮಕ್ಕಳು ಬಂದು ಆರತಿ ಎತ್ತಿ ಹಣ್ಣೆರದ ಮ್ಯಾಲೆ ಅವರಿಗೆ ಅರಿಷಿಣ ಕುಂಕುಮ ಮತ್ತು ಬಾಗಿಣ ಕೊಡಬೇಕು. ಸಣ್ಣದೊಂದು ಕವರಿನಾಗ, ಪುಟ್ಟ ಬಾಚಣಕಿ, ಕನ್ನಡಿ, ಕುಂಕುಮ, ಬಳಿ, ಕಾಲುಂಗುರ ಇರುವುದರ ಜೊತಿಗೆ ಸಂಕ್ರಾಂತಿ ಆದೇಶಿಸಿದ ವಸ್ತುವನ್ನೂ ಇಟ್ಟು ಕೊಡ್ತಾರ.

ಅಲ್ಲಿಗೆ ಸಂಕ್ರಾಂತಿ ಮುಗೀತದ. ಇದಿಷ್ಟೂ ಮನಿಯವರ ಕೂಡ ನಡಿಯುವ ಸಂಭ್ರಮ. ಸಂಗಾತಿಗಳ ಸಂಕ್ರಮಣ ಇದಕ್ಕೂ ಚಂದ. ಇದನ್ನ ನಮ್ಮ ಬೇಂದ್ರೆ ಅಜ್ಜಾರು ಅಗ್ದಿ ಚಂದ ಹೇಳ್ಯಾರ. ಕಾಲ್ಬಿದ್ದು, ಕೈ ಹಿಡಿದು/ ಮುತ್ತಿಟ್ಟು, ಮುಗಿಬಿದ್ದು/ ಮೈಏರಿ, ಮೈ ಹೊತ್ತು ಮಾಗಿ ಬರೆ/ ಮೈಮೈ ಅಡರುವ ಮಾಗಿಯ ಮೈಮೆಯು/ ಬೆಳಗು ಮುಸುಕಿನಲ್ಲೂ ಒಗ್ಗುತಿರೆ/ ಮಕರ ಸಂಕ್ರಾಂತಿಗೆ ಮೈತುಂಬ ತುಟಿತುಂಬ/ ಎದೆತುಂಬ ಕುಸುರೆಳ್ಳು ಮೂಡುತಿದೆ/ ನನಗೂ ನಿನಗೂ ಅಂಟಿದ ನಂಟಿನ/ ಕೊನೆಬಲ್ಲವರಾರು ಕಾಮಾಕ್ಷಿಯೇ ಅಂತ.

ಮನ್ಯಾಗ ಅಲ್ಲಲ್ಲೆ ಬಿದ್ದ ಎಳ್ಳಿನ ಮೊನೆ ಅಂಗಾಲಿಗೆ ಚುಚ್ಚಿದ್ರೂ ಬಾಯಿಗೆ ಬಿದ್ದ ಎಳ್ಳಿನ ಸವಿ ಭಾಳದಿನ ನೆನಪಿರ್ತದ. ಬದುಕಿನ ಸಿಹಿ ಸವಿಯೂದ್ರೊಳಗ ಕಷ್ಟಗಳು ಎಳ್ಳಿನ ಮೊನೆಯಷ್ಟಾಗಲಿ ಅನ್ನುವ ಆಶಯ ಇರಬಹುದು.. ಸಂಕ್ರಮಣ ಬದುಕಿನ ತುಂಬ ಸಿಹಿಯನ್ನೇ ಹಂಚ್ತದ. ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೂನು, ಬೆಲ್ಲದ್ಹಂಗ ಮಾತಾಡೂನು ಅಂತ್ಹೇಳ್ತೀವಿ.. ಅವು ಮಾತಾಗೂದಿಲ್ಲ, ನಡಿಯಾಗ್ತದ

ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ -ಚಿತ್ರ: ತಾಜುದ್ದೀನ್ ಆಜಾದ್
ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ -ಚಿತ್ರ: ತಾಜುದ್ದೀನ್ ಆಜಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT