ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾತಜ್ಜಿಯ ಬೆಳಕಿನ ಹಾದಿ

Last Updated 22 ಮೇ 2021, 19:30 IST
ಅಕ್ಷರ ಗಾತ್ರ

ಕಣ್ಣು ಕಾಣದಿದ್ದರೂ ನಿತ್ಯ ಸಂಜೆ ಕ್ಯಾತಜ್ಜಿ ದೀಪ ಹೊತ್ತಿಸುತ್ತಿದ್ದುದು ಯಾರಿಗಾಗಿ? ಆ ಮೂಲಕ ಆಕೆ ಕೊಡುತ್ತಿರುವ ಸಂದೇಶವಾದರೂ ಯಾವುದನ್ನು?

***

ಕೂಡಿ ಬಾಳುವ ನಡೆ, ವೈಷಮ್ಯ ಮತ್ತು ದ್ವೇಷಗಳಿಲ್ಲದ, ಹೆಚ್ಚು ವ್ಯಸನಗಳಿಲ್ಲದೆ ಬದುಕಿನ ಸಕಾರಾತ್ಮಕ ನಡವಳಿಕೆಗಳಿಂದಲೇ ಕಾಲ ಮತ್ತು ಆಧುನಿಕತೆಯ ಹೊಡೆತಗಳನ್ನು ಸಮರ್ಥವಾಗಿ ತಡೆದಿರುವ ಹಲವಾರು ಹಟ್ಟಿಗಳು ನನ್ನ ಕಣ್ಣ ಮುಂದಿವೆ. ಅಂತಹ ವಿರಳ ಹಟ್ಟಿಗಳ ಸಾಲಿನಲ್ಲಿ ದೊಡ್ಡೇರಿ ಗೊಲ್ಲರಹಟ್ಟಿಯೂ ಒಂದು. ಸುಮಾರು ಅರವತ್ತರಿಂದ ಎಪ್ಪತ್ತು ಕುಟುಂಬಗಳು ವಾಸವಿದ್ದ ಹಟ್ಟಿ ಅದು. ನಾಲ್ಕೈದು ಮಾಳಿಗೆ ಮನೆಗಳನ್ನು ಬಿಟ್ಟರೆ ಉಳಿದವೆಲ್ಲಾ ಗುಡಿಸಲುಗಳಿಂದಲೇ ಇದ್ದ ಹಟ್ಟಿ. ಕಾರುಣ್ಯ, ಸಾಮರಸ್ಯ, ಅಂತಃಕರಣದ ಮೌಲ್ಯಗಳ ಬೇರು ದಿನನಿತ್ಯದ ಬದುಕಿನ ವಿವರಗಳಲ್ಲಿ ಆಳವಾಗಿ ಹಬ್ಬಿದ್ದ ಹಟ್ಟಿ ಅದು.

ಹಟ್ಟಿಯ ಉದಿಬಾಗಿಲನ್ನು ದಾಟಿ ಒಳಕ್ಕೆ ಹೋದರೆ, ಬಲಕ್ಕೆ ಸಿಗುವುದೇ ಕ್ಯಾತಜ್ಜಿಯ ಮನೆ. ಹಸಿ ಇಟ್ಟಿಗೆಯಿಂದ ಕಟ್ಟಿದ, ಕರಲಿನ ಮಾಳಿಗೆ ಮನೆ ಅದು. ಒಂದು ಬಲವಾದ ಗಾಳಿಗೆ ಉದುರಿ ಬೀಳಬಹುದಾದ, ಒಂದು ಭಾರೀ ಮಳೆಗೆ ಮೈವೊಡ್ಡಿದರೆ ಸೋರುವ ಸುಣ್ಣ-ಬಣ್ಣ ಕಾಣದ ಮನೆಯದು! ನನಗೆ ತಿಳಿದಂತೆ ಕ್ಯಾತಜ್ಜಿ ಹುಟ್ಟುಕುರುಡಿ. ಆದ್ದರಿಂದಲೇ ಹಟ್ಟಿಯಲ್ಲಿ ಎಲ್ಲರೂ ಅವಳನ್ನು ‘ಕುರುಡು ಕ್ಯಾತಜ್ಜಿ’ ಎಂದೇ ಕರೆಯುತ್ತಿದ್ದರು. ಎಡವಿದರೆ ಸಿಗುವ ವರ್ತಮಾನದ ದುಗುಡ, ಆತಂಕ, ನೀರವತೆಗಳ ನಡುವೆಯೂ ಸಣ್ಣಪುಟ್ಟ ಸಂತೋಷಗಳನ್ನು ಬೆನ್ನಟ್ಟಿಹೋಗುವ ನನ್ನ ಇಂಗಲಾರದ ಕುತೂಹಲಗಳ ನಡುವೆ, ಅನೇಕ ಬೇಸಗೆ, ಮಳೆಗಾಲ ಹಾಗೂ ಚಳಿಗಾಲಗಳಲ್ಲಿ ಈ ಹಟ್ಟಿಯೊಂದಿಗೆ ನಾನು ಮಾತನಾಡಿ ಬಂದಿದ್ದೇನೆ. ಇದೇ ಹಟ್ಟಿಯ ಗೋವಿಂದರಾಜು ನನ್ನ ಪ್ರತೀ ಭೇಟಿಯಲ್ಲೂ ನನ್ನೊಂದಿಗೆ ಇರುತ್ತಿದ್ದರು. ಪ್ರತೀ ಭೇಟಿಯಲ್ಲೂ ಈ ಹಟ್ಟಿ ನನಗೆ ಹೊಸತನ್ನೇ ಕಲಿಸಿದೆ. ಯಾವ ಭೇದ ಭಾವವೂ ಇಲ್ಲದ ಸೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು ಎಂದು ಭಾವಿಸಿದ್ದ ಜನಗಳ ಶ್ರದ್ಧೆಯಿಂದ ರೂಪುಗೊಂಡ ಹಟ್ಟಿ ಅದು.

ಕ್ಯಾತಜ್ಜಿಯನ್ನು ಎಲ್ಲರೂ ಕರೆಯುವಂತೆ ‘ಕುರುಡು ಕ್ಯಾತಜ್ಜಿ’ ಎಂದು ಕರೆಯಲು ಏಕೋ ನನ್ನ ಮನಸ್ಸು ಯಾವತ್ತೂ ಒಪ್ಪುತ್ತಿರಲಿಲ್ಲ. ಆದ್ದರಿಂದ ನಾವು ಆಕೆಯನ್ನು ‘ಕ್ಯಾತಜ್ಜಿ’ ಎಂದೇ ಕರೆಯುತ್ತಿದ್ದೆವು. ರವಿಕೆ ಇಲ್ಲದ ದೇಹ, ಹರಿದ ಸೀರೆ, ಮೂಲೆ ಮುಡುಕಲುನಲ್ಲಿದ್ದ ಕೆಲವು ಸ್ವಾರೆಗಳು ಇವಿಷ್ಟೇ ಅವಳ ಆಸ್ತಿ. ಕ್ಯಾತಜ್ಜಿಯ ಮನೆಗೆ ಮಾರು ದೂರದಲ್ಲಿ ಒಂದು ಸೇದೋ ಬಾವಿ. ಬಾವಿಯ ರಾಟೆ ಸದ್ದು ಮಾಡಿದರೆ ಸಾಕು, ಕ್ಯಾತಜ್ಜಿ ಗಡಿಗೆ ಸಮೇತ ಹೊರಬಂದು ‘ಯಾರು ತಾಯಿ, ನನಗೂ ಒಂದು ಗಡಿಗೆ ನೀರು ಸೇದಿ ಹುಯ್ಯವ್ವಾ!’ ಎಂದು ಕೇಳಿ ಪಡೆಯುತ್ತಿದ್ದಳು. ಪ್ರತಿದಿನ ಸಂಜೆ ಆಗುತ್ತಿದ್ದ ಹಾಗೆಯೇ ಕ್ಯಾತಜ್ಜಿ ತನ್ನ ಮನೆಯ ಆಚೆ ನಿಂತು ‘ಲೇ ಅಮ್ಮಯ್ಯಾ, ಯಾರೇ ಅದು! ಯಾರಾದರೂ ಬಂದು ಮನೆವೊಳಗೆ ದೀಪ ಕತ್ತಿಸಿ ಹೋಗ್ರವ್ವ’ ಎಂದು ಕರೆಯುತ್ತಿತ್ತು. ನೀರಿಗಾಗಿ ಬಂದಿದ್ದ ಹೆಣ್ಣುಮಕ್ಕಳಲ್ಲಿ ಯಾರಾದರೂ ಒಬ್ಬರು ಬಂದು ಕ್ಯಾತಜ್ಜಿಯ ಮನೆಯಲ್ಲಿ ದೀಪ ಕತ್ತಿಸಿ ಹೋಗುತ್ತಿದ್ದರು. ಕಣ್ಣಿಲ್ಲದಿದ್ದರೂ ಹಟ್ಟಿಯವರಿಗಾಗಿ ದೀಪ ಬೆಳಗುವ ಕ್ಯಾತಜ್ಜಿಯ ವರ್ತನೆ ಸೋಜಿಗದಂತೆ ನಮಗೆ ಕಾಣುತ್ತಿತ್ತು!

ಆಕೆಯ ಮಾತುಗಳಲ್ಲಿ ಹಳಹಳಿಕೆಯ ಭೂತಕಾಲವೂ ಇರುತ್ತಿರಲಿಲ್ಲ! ಹಾಗೆಯೇ ನಾಳಿನ ಭವಿಷ್ಯದ ಕಲ್ಪನೆಯೂ ಇರುತ್ತಿರಲಿಲ್ಲ. ಆಕೆ ಬದುಕುತ್ತಿದ್ದುದು ಅಚಲ ವರ್ತಮಾನದಲ್ಲಿ ಮಾತ್ರ. ತನ್ನ ಅಂಧತ್ವದ ಬಗ್ಗೆ ಆಕೆ ಎಂದೂ ನೈರಾಶ್ಯದಿಂದ ಮಾತನಾಡಿದ್ದನ್ನು ಹಟ್ಟಿಯವರು ಕೇಳಿರಲಿಲ್ಲ! ಯಾರನ್ನೂ ಆಶ್ರಯಿಸದೆ ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದಳು. ಅವಳಲ್ಲಿದ್ದ ಬದುಕುವ ಛಲ, ಸ್ವಾವಲಂಬನೆಯ ಬಾಳು ಇವೆಲ್ಲವನ್ನೂ ತುಂಬಾ ಹತ್ತಿರದಿಂದಲೇ ನಾವು ನೋಡಿದ್ದೆವು. ಮಮಕಾರವಿಲ್ಲದೆ ವರ್ತಮಾನದಲ್ಲಿ ಜೀವಿಸುವುದು, ಶ್ರದ್ಧೆ ಮತ್ತು ಸರಳತೆ ಅವಳ ಬದುಕಿನ ಮಂತ್ರವಾಗಿತ್ತು. ಇಡೀ ಹಟ್ಟಿ ಅವಳನ್ನು ಹಾಗೆಯೇ ಸ್ವೀಕರಿಸಿತ್ತು. ಸ್ವತಃ ಭೂಮಿ ಕಾಣಿ ಇಲ್ಲದ ಕ್ಯಾತಜ್ಜಿಗೆ ನೆರೆಹೊರೆಯವರು ಕೊಡುತ್ತಿದ್ದ ದವಸವೇ ಜೀವನಾಧಾರವಾಗಿತ್ತು. ಈ ವಿವರಗಳೆಲ್ಲಾ ಈಗಿನವರಿಗೆ ಆಶ್ಚರ್ಯ ತರಿಸುವ ಸಂಗತಿ ಎನಿಸಬಹುದು! ಆದರೆ ಇದೆಲ್ಲವೂ ಸೂರ್ಯನಷ್ಟೇ ಸತ್ಯ. ಸದಾ ಕತ್ತಲಿನ ಸಹವರ್ತಿಯಾಗಿ ಬದುಕುತ್ತಿದ್ದ ಕ್ಯಾತಜ್ಜಿಯ ಮುಖದಲ್ಲಿ ಹೊರಚೆಲ್ಲುತ್ತಿದ್ದ ಪ್ರಶಾಂತತೆ, ಪರಿಶುದ್ಧ ನಗು ಎಲ್ಲೆಡೆ ಹಬ್ಬುವ ಆಶಾವಾದದ ಬುಗ್ಗೆಯಂತೆ ನನಗೆ ಕಂಡಿದೆ.

ಆ ದಿನಗಳಲ್ಲಿ ನಾನು ಕಂಡ ಕ್ಯಾತಜ್ಜಿಯ ಬದುಕಿನ ವಿವರಗಳನ್ನು ಮತ್ತೊಮ್ಮೆ ಸ್ಮೃತಿಪಟಲದ ಮೇಲೆ ತಂದುಕೊಂಡರೆ, ಅವೆಲ್ಲವೂ ಕೇವಲ ದೈನಂದಿನ ಕ್ರಿಯೆಗಳೆಂದು ಹೇಳಲು ನನಗೆ ಬರುವುದಿಲ್ಲ! ಅವಳ ಪಾಲಿಗೆ ಹಗಲೂ ಒಂದೇ; ಕತ್ತಲೆಯೂ ಒಂದೇ. ಹೀಗಿರುವಾಗ ಕ್ಯಾತಜ್ಜಿ ದಿನವೂ ಬೆಳಗುತ್ತಿದ್ದ ದೀಪ ಯಾರಿಗಾಗಿ? ಈ ಹೊತ್ತಿಗೆ ಅದು ಒಂದು ರೂಪಕವಾಗಿಯೋ, ಸಂಕೇತವಾಗಿಯೋ ನನಗೆ ಕಾಣಿಸುತ್ತದೆ. ಅವಳ ವರ್ತನೆಯು ನನಗೆ ಅಂಧ ಸೂಫಿ ಸಂತರೊಬ್ಬರಿಗೆ ಸಂಬಂಧಿಸಿದ ಕತೆಯನ್ನು ನೆನಪಿಸಿತು: ‘ಈ ಕಂದೀಲು ಹಿಡಿದು ನಡೆಯುತ್ತಿರುವುದು ನನಗಾಗಿ ಅಲ್ಲ; ಕತ್ತಲಲ್ಲಿ ನಡೆಯುತ್ತಿರುವವರಿಗೆ ದಾರಿ ಕಾಣಲಿ ಎಂದು!’ ಕ್ಯಾತಜ್ಜಿಯ ಈ ಬದುಕು ಅವಳ ಜೀವನ ಪ್ರೀತಿಗೆ ರೂಪಕದಂತಿದೆ. ಈ ರೂಪಕವು ಹೆಚ್ಚುಕಡಿಮೆ ಜಗತ್ತಿನ ಎಲ್ಲ ನಿರ್ಭಾಗ್ಯರ ಬದುಕಿನ ಕೇಂದ್ರದಂತೆಯೇ ಇದೆ.

ಇದೇ ಹಟ್ಟಿಯ ಗಾರೆಮನೆ ಚಿಕ್ಕಣ್ಣ ಎಂದರೆ ಎಲ್ಲರಿಗೂ ಗೌರವ. ಅವರ ಮನೆತನವೇ ಉದಾರತೆಗೆ ಪ್ರಸಿದ್ಧಿ ಪಡೆದಿತ್ತು. ಹದಿನಾರು ಕಂಬಗಳ ಮೇಲೆ ನಿಂತಿದ್ದ ಮನೆ ಅದು. ಸುಮಾರು ಮೂವತ್ತು ಜನರಿದ್ದ ಕೂಡು ಕುಟುಂಬ. ಅಷ್ಟೇ ಸಂಖ್ಯೆಯ ದನ, ಕರ-ಎಮ್ಮೆಗಳು. ಆಳು-ಕಾಳುಗಳ ಸಂಖ್ಯೆಯೂ ದೊಡ್ಡದಾಗಿಯೇ ಇತ್ತು. ಚಿಕ್ಕಣ್ಣನವರ ಮುಖದ ಮೇಲೆ ಯಾವತ್ತೂ ‘ನಾನು ಕೊಡುವವನು’ ಎಂಬ ಅಹಮ್ಮಿನ ಗೆರೆಯನ್ನು ಹಟ್ಟಿಯವರಾಗಲಿ ಅಥವಾ ನೆರೆಹೊರೆಯ ಗ್ರಾಮಸ್ಥರಾಗಲಿ ಎಂದೂ ಕಂಡಿರಲಿಲ್ಲ. ‘ಇರುವುದೆಲ್ಲವೂ ಕೊಡುವುದಕ್ಕಾಗಿಯೇ’ ಎಂದು ನಂಬಿದ್ದ ಜೀವ ಅದು. ಕೊಟ್ಟಿದ್ದನ್ನು ಯಾರ ಮುಂದೆಯೂ ಹೇಳಿಕೊಳ್ಳದ, ತಮ್ಮಿಂದ ಪಡೆದುಕೊಂಡವರನ್ನು ಅಲ್ಪತನದಿಂದ ಕಾಣದ ದೊಡ್ಡ ಗುಣ ಅವರಲ್ಲಿತ್ತು. ಈ ಗುಣದಿಂದಾಗಿಯೇ ಅವರು ಪ್ರಸಿದ್ಧರಾಗಿದ್ದರು. ಚಿಕ್ಕಣ್ಣನವರ ಮನೆಯಲ್ಲಿ ವರ್ಷೊಂಬತ್ತು ಕಾಲವೂ ಕರಾವು ನಡೆಯೋದು. ನೆರೆಹೊರೆಯವರಿಗೆ ಕೊಡಲೆಂದೇ ಮನೆ ಮುಂದೆ ದೊಡ್ಡ ಗುಡಾಣದಲ್ಲಿ ಮಜ್ಜಿಗೆ ಇಟ್ಟಿರುತ್ತಿದ್ದರು. ಮನೆಗಳಲ್ಲಿ ಉದಕ ಮಾಡಿಲ್ಲದವರು ತಮ್ಮ ಮಕ್ಕಳಿಗೆ ‘ಹೋಗ್ರಲೆ, ಗಾರೆಮನೆಯವರತ್ರ ಹೋಗಿ ವಸಿ ಮಜ್ಜಿಗೆ ತನ್ನಿ’ ಎಂದು ಸ್ವಾರೆ ಕೊಟ್ಟು ಕಳುಹಿಸುತ್ತಿದ್ದರು. ಯಾರು ಹೋದರೂ, ಎಷ್ಟೊತ್ತಿಗೆ ಹೋದರೂ ಅವರ ಕುಟುಂಬದ ಹಿರಿಯರಾದ ಶಿವಜ್ಜಿ ಇಲ್ಲ ಎನ್ನದೆ ಮಜ್ಜಿಗೆ ಕೇಳಿದವರಿಗೆ ಮಜ್ಜಿಗೆ ಕೊಟ್ಟು, ಮಕ್ಕಳು- ಮರಿ ಇರುವ ಮನೆಯವರಿಗೆ ಹಾಲು ಕೊಡುತ್ತಿತ್ತು. ಹೀಗಾಗಿಯೇ ನೈತಿಕ, ಸಾಮಾಜಿಕ ಒಮ್ಮತವಿರುವ ಈ ಹಟ್ಟಿ ನನಗೆ ಸೇರಿದ್ದು, ಇದು ನಮ್ಮೆಲ್ಲರನ್ನೂ ಪೋಷಿಸುತ್ತದೆ ಎಂಬ ಗಾಢ ತಿಳಿವು ಅಲ್ಲಿನ ಮಕ್ಕಳ ಹೃದಯದಲ್ಲಿ ಹುಟ್ಟಿನಿಂದಲೇ ಬಂದಿದೆ.

ಪ್ರತೀ ಭಾನುವಾರ ಚಳ್ಳಕೆರೆ ಸಂತೆ. ಪುರ್ಲಹಳ್ಳಿ, ಗೋಸಿಕೆರೆ, ಚಿಕ್ಕಚೆಲ್ಲೂರು, ದೊಡ್ಡಚೆಲ್ಲೂರು, ಪರಶುರಾಂಪುರ ಮುಂತಾದ ಸುತ್ತಮುತ್ತಲ ಗ್ರಾಮದವರೆಲ್ಲಾ ಎತ್ತಿನ ಗಾಡಿಗಳಲ್ಲಿ ಸಂತೆಗೆ ಬರುತ್ತಿದ್ದರು. ಸಂತೆ ಮುಗಿಸಿ ದಿನಸಿ ಹೇರಿಕೊಂಡು ಹಳ್ಳಿಗೆ ಹೊರಡುವ ಮಾರ್ಗದಲ್ಲಿ ದೊಡ್ಡೇರಿಗೆ ಬರುತ್ತಿದ್ದಹಾಗೆಯೇ ಕತ್ತಲಾದರೆ, ಅವರೆಲ್ಲಾ ಗಾರೆಮನೆ ಚಿಕ್ಕಣ್ಣ ಅವರ ಕಣದಲ್ಲೇ ಆ ರಾತ್ರಿ ಉಳಿದುಕೊಳ್ಳುತ್ತಿದ್ದರು. ಅದೇ ಕಣದಲ್ಲಿ ದೊಡ್ಡ ಬಾರೆ ಹಣ್ಣಿನ ಮರವಿತ್ತು. ಹಟ್ಟಿಯ ಮಕ್ಕಳೆಲ್ಲಾ ಸದಾ ಕಾಲವೂ ಅದರ ನೆರಳನ್ನೇ ಹಿಡಿದು ಆಡುತ್ತಿದ್ದವು. ಆಗೆಲ್ಲಾ ಎತ್ತಿನ ಗಾಡಿಗಳು ಕಳ್ಳಕಾಕರ ಭಯದಿಂದಾಗಿ ನಿರ್ಭೀತಿಯಿಂದ ರಾತ್ರಿಹೊತ್ತು ಪ್ರಯಾಣ ಮಾಡುವ ಹಾಗಿರಲಿಲ್ಲ! ಹೀಗೆ ರಾತ್ರಿ ತಮ್ಮ ಎತ್ತು ಗಾಡಿಗಳೊಂದಿಗೆ ಕಣದಲ್ಲಿ ಉಳಿದುಕೊಂಡವರು ಯಾರ ಅಪ್ಪಣೆಗೂ ಕಾಯದೆ ಅಲ್ಲೇ ಇದ್ದ ಚಿಕ್ಕಣ್ಣನವರ ಬಣವೆಯಿಂದಲೇ ಹುಲ್ಲು ಹಿರಿದು, ತಮ್ಮ ಎತ್ತುಗಳಿಗೆ ಹಾಕುತ್ತಿದ್ದರು. ಚಿಕ್ಕಣ್ಣನವರ ಬಗ್ಗೆ ಅಷ್ಟೊಂದು ನಂಬಿಕೆ ಅವರಿಗೆ. ಅವರೆಲ್ಲರ ಆ ರಾತ್ರಿಯ ಊಟ ನಡೆಯುತ್ತಿದ್ದುದು ಚಿಕ್ಕಣ್ಣನವರ ಮನೆಯಲ್ಲಿಯೇ. ಇದು ಆ ಭಾಗದಲ್ಲಿ ಒಂದು ಸಂಪ್ರದಾಯವೇ ಆಗಿತ್ತು! ಹಟ್ಟಿಯವರು ಹಾಗೂ ನೆರೆಹೊರೆಯ ಗ್ರಾಮಸ್ಥರು ಹೇಳುವ ಪ್ರಕಾರ ‘ಗಾರೆಮನೆ ಚಿಕ್ಕಣ್ಣನವರ ಮನೆಯ ಒಲೆಯಲ್ಲಿ ಉರಿಯುತ್ತಿದ್ದ ಬಂಗಾರದ ಕಿಡಿ ಎಂದೂ ಆರಿಲ್ಲ!’ ನನ್ನ ಹೃದಯಕ್ಕೆ ತೀರ ಹತ್ತಿರವಾದ ಹಟ್ಟಿಯೊಂದರ ಮನಕರಗಿಸುವ ಇಂತಹ ಅನೇಕ ಜೀವಂತ ಚಿತ್ರಗಳು ಕಣ್ಣುಗಳಿಗೆ ಮರೆಯಲಾಗದ ಅನುಭವಗಳನ್ನು ನೀಡಿವೆ. ದ್ವೇಷ ವೈಷಮ್ಯಗಳಿಲ್ಲದೆ ಒಟ್ಟಿಗೆ ಕೂಡಿಬಾಳುವ ತತ್ತ್ವವನ್ನು ಪಾರಂಪರಿಕವಾಗಿ ತಮ್ಮ ತಾಯಂದಿರ ಎದೆಹಾಲಿನಿಂದ ದೊಡ್ಡೇರಿ ಗೊಲ್ಲರಹಟ್ಟಿಯವರು ಪಡೆದಿದ್ದಾರೆ ಎಂದು ನನಗೆ ಭಾಸವಾಗುತ್ತದೆ.

ಈಗ ಕಾಲ ನಿರ್ದಯವಾಗಿ ಮುಂದೆ ಸರಿದಿದೆ. ವಿಘಟನೆ ಮತ್ತು ವಿಸ್ಮೃತಿ ಎನ್ನುವುದೇ ಈಗ ಯುಗಧರ್ಮವಾಗಿದೆ. ಇಂತಹ ಹೊತ್ತಿನಲ್ಲಿ: ಇಂದು ಗಾರೆಮನೆ ಚಿಕ್ಕಣ್ಣನವರ ಕೂಡಿ ಬಾಳಿದ ಮನೆ ಒಡೆದು ಹಲವಾರು ಬಾಗಿಲುಗಳನ್ನು ಕಂಡಿದೆ. ಬಂಗಾರದ ಕಿಡಿಯಂತೆ ಉರಿಯುತ್ತಿದ್ದ ಅವರ ಮನೆಯ ಒಲೆ ಈಗ ನಂದಿಹೋಗಿದೆ. ಸುಣ್ಣ-ಬಣ್ಣಗಳನ್ನು ಕಾಣದೆ ಮನೆಯ ಗೋಡೆಗಳು ಹಿಂದಿನ ನೆನಪನ್ನು ಕಳೆದುಕೊಂಡಿವೆ! ಸದಾ ತೆರೆದಿರುತ್ತಿದ್ದ ಆ ಮನೆಯ ಮುಂಬಾಗಿಲು ಈಗ ಮೌನವಾಗಿ ಯಾವಾಗಲೂ ಮುಚ್ಚಿರುತ್ತದೆ. ನಿರಂತರವಾಗಿ ಅವರ ಮನೆಯ ಮುಂದೆ ಮಜ್ಜಿಗೆಯಿಂದ ತುಂಬಿರುತ್ತಿದ್ದ ಗುಡಾಣ ಇಂದು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಆ ಮನೆಯ ಹಿಟ್ಟುಂಡು ಬೆಳೆದವರು ಈಗಲೂ ಹಟ್ಟಿಯಲ್ಲಿದ್ದಾರೆ. ಚಿಕ್ಕಣ್ಣನವರ ಮನೆಯನ್ನು ನೋಡಿದಾಗಲೆಲ್ಲಾ ಅವರ ಕಣ್ಣುಗಳಲ್ಲಿ ನೀರಾಡುವುದನ್ನು ಕಂಡಿದ್ದೇನೆ. ಕ್ಯಾತಜ್ಜಿ ಬಾಳಿ ಬದುಕಿದ್ದ ಮನೆ ಗುರುತು ಸಿಗದಂತೆ ನೆಲಸಮವಾಗಿದೆ. ಆದರೂ ಹಟ್ಟಿಯ ಮಣ್ಣಿನಲ್ಲಿ ಬೆರೆತಿದ್ದ ಹೊಂದಾಣಿಕೆಯ ಬದುಕು ಇನ್ನೂ ಹಾಗೆಯೇ ಹಸುರಾಗಿದೆ.

ಈ ಎಲ್ಲ ಬದಲಾವಣೆಗಳ ನಡುವೆಯೂ ಗಾರೆಮನೆ ಚಿಕ್ಕಣ್ಣನವರ ಕಣದಲ್ಲಿದ್ದ ಬಾರೆಹಣ್ಣಿನ ಮರ ಈಗಲೂ ಹಟ್ಟಿಯ ಹುಡುಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT