ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೊ ಕಥೆಗಳ ಸುಧಾ ಮಿಸ್ಸಮ್ಮ

ಮೊಬೈಲ್‌ನ ಆಶಾಭಾವ, ಆತ್ಮವಿಶ್ವಾಸದ ಬರಹಗಳು
Last Updated 26 ಜೂನ್ 2020, 19:30 IST
ಅಕ್ಷರ ಗಾತ್ರ

ಒಂದೆರಡಲ್ಲ, ಅರ್ಧದಷ್ಟು ಪುಟ ಕಥೆ, ಪ್ರಬಂಧ, ಕವನ ಬರೆಯಲು ಕೆಲವರಿಗೆ ಕಷ್ಟ. ಅದರಲ್ಲೂ ಬರವಣಿಗೆ ಹವ್ಯಾಸ ಇಲ್ಲದವರಿಗೆ ಅದೊಂದು ಸವಾಲೇ ಸರಿ. ಆದರೆ, ರಾಜ್ಯಶಾಸ್ತ್ರ ಬೋಧಿಸುವ ಪ್ರಾಧ್ಯಾಪಕಿ ಡಾ. ಜಿ.ಸುಧಾ ಇದ್ಯಾವುದರ ಗೊಡವೆಯೇ ಬೇಡವೆಂದು ನ್ಯಾನೊ ಕಥೆಗಳನ್ನು ಬರೆಯುತ್ತಾರೆ. ಮೊಬೈಲ್‌ ಫೋನ್‌ನಲ್ಲಿ ಕೆಲವೇ ಪದಗಳಲ್ಲಿ ಸಂಕ್ಷಿಪ್ತ ಕಥೆಯನ್ನು ಟೈಪಿಸಿ, ಅಚ್ಚರಿ ಮೂಡಿಸುವಂತೆ ಚುಟುಕಾದ ಸಂದೇಶ ನೀಡುತ್ತಾರೆ!

ರಾಜ್ಯಶಾಸ್ತ್ರ, ಪ್ರಚಲಿತ ವಿದ್ಯಮಾನ, ಸಾಮಾಜಿಕ ಪರಿವರ್ತನೆಯಂತಹ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಸುಧಾ ಅವರು ಈವರೆಗೆ 1300ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಅವು ಕೆಲವರ ಪಾಲಿಗೆ ಸ್ಫೂರ್ತಿಯಾದರೆ, ಇನ್ನೂ ಕೆಲವರಿಗೆ ಹೊಸ ವಿಷಯಗಳನ್ನು ಹೊಳೆಯುವಂತೆ ಮಾಡಿದೆ. ವರ್ಷ 2016ರಿಂದ ಒಂದು ದಿನವೂ ತಪ್ಪದೇ ಬರೆಯುತ್ತಿರುವ ಅವರ ಕಥೆಗಳು ರಾಜ್ಯ, ದೇಶವಷ್ಟೇ ಅಲ್ಲ, ವಿದೇಶಕ್ಕೂ ವ್ಯಾಪಿಸಿವೆ.

ಚಿಕ್ಕಬಳ್ಳಾಪುರದವರಾದ ಡಾ. ಸುಧಾ ಅವರು ಸದ್ಯ ಕೊಳ್ಳೇಗಾಲದಲ್ಲಿ ವಾಸವಿದ್ದು, ಅವರನ್ನು ಬಹುತೇಕ ಶಿಷ್ಯರು ಮಿಸ್ಸಮ್ಮ ಎಂದೇ ಸಂಬೋಧಿಸುತ್ತಾರೆ. ನ್ಯಾನೊ ರೂಪದ ಬರಹಗಳನ್ನು ಬರೆಯಲು ಅವರು ಶುರು ಮಾಡಿದ್ದರ ಹಿಂದೆಯೇ ಆಸಕ್ತಿಕರ ಕಥೆಯಿದೆ. 2016ರಲ್ಲಿ ಅಪಘಾಕ್ಕೀಡಾದ ಅವರು ತಿಂಗಳುಗಟ್ಟಲೇ ‘ಬೆಡ್‌ರೆಸ್ಟ್‌’ನಲ್ಲೇ ಉಳಿದರು. ಈ ಅವಧಿಯಲ್ಲೇ ಅವರ ಕಿರಿಯ ಸ್ನೇಹಿತೆ ನೀಲಿನಾ ಅವರು ‘ಟೆರಿಬಲಿ ಟೈನಿ ಟೇಲ್ಸ್’ ಎಂಬ ಪುಟ್ಟ ಇಂಗ್ಲಿಷ್ ಕಥೆಗಳ ಪುಸ್ತಕ ನೀಡಿದರು.

ಪುಟಾಣಿ ಕಥೆಗಳುಳ್ಳ ಈ ಪುಸ್ತಕವು ಯಾವ ಪರಿ ಪ್ರಭಾವ ಬೀರಿತೆಂದರೆ, ತಾವೇ ಯಾಕೆ ಖುದ್ದು ಒಂದು ಪುಟ್ಟ ಕಥೆ ಬರೆಯಬಾರದು ಎಂಬ ಆಲೋಚನೆ ಮೂಡಿತು. ಅಂದಿನಿಂದಲೇ ಮೊಬೈಲ್ ಫೋನ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಂದೊಂದೇ ಕಥೆ ಬರೆಯತೊಡಗಿದರು. ಆಪ್ತರಿಗೆ ಮಾತ್ರ ಅವುಗಳನ್ನು ಕಳುಹಿಸತೊಡಗಿದ ಅವರು ಕ್ರಮೇಣ ಇತರೆ ಗ್ರೂಪ್‌ಗಳಿಗೂ ವಿಸ್ತರಿಸಿದರು. ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂತು ಅಲ್ಲದೇ ಇನ್ನಷ್ಟು ಬರೆಯಲು ಉತ್ಸಾಹ ತುಂಬಿತು.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೋರಾಟಗಾರರ ಕುರಿತು, ವೈದ್ಯರ ದಿನದಂದು ವೈದ್ಯರು, ಹೊಸ ವರ್ಷಾಚರಣೆ ವೇಳೆ ಸಂಭ್ರಮ, ಶಿಕ್ಷಕರ ದಿನದಂದು ಗುರು–ಶಿಷ್ಯರ ಸಂಬಂಧ ಹೀಗೆ ಆಯಾ ವಿಶೇಷ ದಿನಕ್ಕೆ ಪೂರಕವಾಗಿ ಕಥೆ ಬರೆದ ಅವರಿಗೆ ಉತ್ತಮ ಸ್ಪಂದನೆ ಸಿಕ್ಕಿತು. ಆದರೆ, ಎಲ್ಲಿಯೂ ನಿರಾಸೆ, ಖಿನ್ನತೆ, ನಕರಾತ್ಮಕ ಸಂದೇಶ ನೀಡಲಿಲ್ಲ. ಬದಲಾಗಿ ಆತ್ಮವಿಶ್ವಾಸ ತುಂಬುವ, ಆಶಾಭಾವ ಹೊಂದುವ ಮತ್ತು ಸಾಧನೆ ಮಾಡುವ ಹುರುಪು ಕಥೆಗಳಲ್ಲಿ ತುಂಬಿದರು.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲೆಡೆ ನಿರಾಶಾದಾಯಕ ವಾತಾವರಣ ಆವರಿಸಿದ ಸಂದರ್ಭದಲ್ಲೂ ಡಾ. ಸುಧಾ ಅವರು ಸುಮ್ಮನೆ ಇರಲಿಲ್ಲ. ಬದುಕು ಕಟ್ಟಿಕೊಳ್ಳಲು ಸ್ಫೂರ್ತಿದಾಯಕ ಕಥೆಗಳನ್ನು, ಆರ್ಥಿಕ ಸಮಸ್ಯೆ ನಡುವೆ ಪುಟಿದೇಳುವ ಬರಹಗಳನ್ನು, ಸವಾಲುಗಳ ನಡುವೆಯೂ ಆತ್ಮಸ್ಥೈರ್ಯ ಕಳೆದುಕೊಳ್ಳದಿರುವುದು ಮುಂತಾದ ವಿಷಯಗಳ ಕುರಿತು ತರಹೇವಾರಿ ಕಥೆಗಳನ್ನು ಅತ್ಯಂತ ಸರಳ, ಸಂಕ್ಷಿಪ್ತ ರೂಪದಲ್ಲಿ ಬರೆದರು.

‘ಮೊಬೈಲ್‌ನಲ್ಲಿ ಇರುವ ಈ ಪುಟಾಣಿ ಕಥೆಗಳನ್ನು ಪುಸ್ತಕ ರೂಪದಲ್ಲಿ ತರುವ ಉಮೇದು ಇದೆ. ಆಪ್ತರು, ಸ್ನೇಹಿತರು ಕೂಡ ಆಸಕ್ತಿ ಹೊಂದಿದ್ದಾರೆ. ಲಾಕ್‌ಡೌನ್‌ ಪರಿಣಾಮ ಪುಸ್ತಕ ಪ್ರಕಟಣೆಗೆ ಕೊಂಚ ಹಿನ್ನಡೆಯಾಯಿತು. ಈಗ ಬಹುತೇಕ ಕಡೆ ಮುದ್ರಣ ಕಾರ್ಯ ಆರಂಭವಾಗಿದ್ದು, ಎಲ್ಲರೊಂದಿಗೆ ಚರ್ಚಿಸಿ ಪುಸ್ತಕ ಹೊರತರುವ ಉದ್ದೇಶವಿದೆ. ಇದು ಸಾಹಿತ್ಯ ಕ್ಷೇತ್ರದಲ್ಲೇ ವಿಭಿನ್ನ ಕೃತಿಯಾಗಲಿದೆ’ ಎಂದು ಡಾ. ಜಿ.ಸುಧಾ ಹೇಳುತ್ತಾರೆ.

ಸುಧಾ ಅವರ ಕೆಲವು ನ್ಯಾನೊ ಕಥೆಗಳು

ಸ್ಮಶಾನ ಮೌನ ಎಂದರೇನು?

ಉತ್ತರ ಬರೆದಳು ಹೈಸ್ಕೂಲ್ ವಿದ್ಯಾರ್ಥಿನಿ, ‘ದೆಹಲಿಯ ನಿರ್ಭಯಾ ಅಕ್ಕ ತೀರಿಕೊಂಡಾಗ ನಮ್ಮ ಮನೆಯಲ್ಲಿ ಆವರಿಸಿದ್ದ ಮೌನ. ಹೈದರಾಬಾದ್‌ನ ದಿಶಾ ಅಕ್ಕ ಸಾವನ್ನಪ್ಪಿದಾಗ ಉಂಟಾದ ಮೌನ. ಇತ್ತೀಚೆಗೆ 85 ವರ್ಷದ ಅಜ್ಜಿ ಬೆಂಕಿ ಹಚ್ಚಿದ ಮನೆಯಿಂದ ಹೊರಬರಲಾಗದೆ ಸುಟ್ಟುಹೋದರು ಎಂದು ಪತ್ರಿಕೆಗಳಲ್ಲಿ ಓದಿದಾಗ, ಗಟ್ಟಿಯಾಗಿ ಅಳಲೂ ಆಗದೆ ಉಂಟಾದ ಉಸಿರುಗಟ್ಟಿಸುವ ಮೌನ!

ಸುಂದರ ಜಗತ್ತು

‘ಎಂದೂ ಭೇಟಿಯಾಗಿಲ್ಲ ಎನ್ನುತ್ತೀರ, ಬರಿ ಫೋನಿನಲ್ಲಿ ಮಾತನಾಡುತ್ತಾ ಇಷ್ಟು ಆತ್ಮೀಯತೆ ಹೇಗೆ? ಅವರ ಬಗ್ಗೆ ನಿಮಗೇನು ಗೊತ್ತು?’ ಕೇಳಿದರು ಕೆಲವರು.
‘ಹೆಚ್ಚೇನೂ ಗೊತ್ತಿಲ್ಲ. ಆದರೆ ನಮ್ಮಿಬ್ಬರ ಕನಸೊಂದೇ, ಜಗತ್ತನ್ನು ಸುಂದರಗೊಳಿಸಬೇಕೆಂದು’ ಉತ್ತರಿಸಿದಳಾಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT