ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಸೂತ್ರಗಳು.. ಸಂತಸದ ಮಂತ್ರಗಳು..

ಮತ್ತೆ ಹೊಸ ವರ್ಷ ಬಂದಿದೆ...
Last Updated 31 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕೆಲವು ಪುಟ್ಟ ಪುಟ್ಟ ನಡೆಗಳಿಂದ ನಮ್ಮೊಳಗಿನ ಸಮಾಧಾನವೊಂದು, ಸಂಭ್ರಮವಾಗಿ ಬದಲಾಗುತ್ತದೆ. ಹೊಸ ವರ್ಷದ ಆರಂಭದಿಂದಲೇ ಈ ಸಂಭ್ರಮದ ಬದಲಾವಣೆಯ ಹಾದಿಯಲ್ಲಿ ಹೆಜ್ಜೆ ಹಾಕೋಣ.

**

ಈ ಸಹಸ್ರಮಾನ ಶುರುವಾದಾಗ ಹೊಸತನವೆಂಬುದು ಇನ್ನೀಗ ಆರಂಭ ಅನ್ನುವ ಭಾವ ನನ್ನೊಳಗೆ ತುಂಬಿತ್ತು. ನನಗೂ ಆಗ 20ರ ಹರೆಯ. ಹಾಗಾಗಿ ಸಹಸ್ರಮಾನವೆಂದರೆ ಇನ್ನೇನು.. ಜಾತಿ, ವರ್ಗ ಇವೆಲ್ಲ ಇನ್ನು ಇತಿಹಾಸಕ್ಕೆ ಸೇರುತ್ತವೆ. ಹೊಸ ಸಹಸ್ರಮಾನವೊಂದು ಶತಮಾನಗಳ ಸಂಘರ್ಷದಿಂದ ನವನೀತ ತಂದು ಕೊಡುತ್ತದೆ...

ಹೀಗೆ ಏನೆಲ್ಲ ಯೋಚನೆಗಳು ಆಗ..? ಆರ್ಚಿಸ್‌ನ ಗ್ಯಾಲರಿಯಲ್ಲಿ ಪದಸಿರಿಯೊಳು ಮೊಳಕೆಯೊಡೆದ ಪ್ರೀತಿಯೆಲ್ಲ ಬೆಳೆಗಳಾಗಿ ತೆನೆದೂಗುತ್ತವೆ. ಸಹಸ್ರಮಾನದ ಮಕ್ಕಳೆಲ್ಲ ಚಂದನೆಯ ಜಗತ್ತಿನೊಳಗ ಕಣ್ಬಿಡ್ತಾರ.. ಬಯಕೆಗಳೆಷ್ಟವು ಈ ಮನಕೆ? ಎಣಿಸಿದವರು ಯಾರು... ಹೀಗೆ ಸಹಸ್ರಮಾನದ ಎರಡು ದಶಕಗಳು ಕಳೆದು, ವರ್ಷವೂ ಉರುಳಿ ಹೋಯಿತು.

ಕ್ಯಾಲೆಂಡರ್‌ಗಳನ್ನು ಬದಲಿಸುತ್ತಲೇ ಇದ್ದೆವು. ಲಿಂಗ, ಜಾತಿ, ವರ್ಗ ಇವೆಲ್ಲವೋ ಗೋಡೆಯ ಮೇಲಿನ ಮೊಳೆಗಳಾಗಿಯೇ ಶಾಶ್ವತವಾಗಿದ್ದವು. ಜಗಬದಲಿಸುವ ಉಮೇದಿನೊಂದಿಗೆ ನಾನ್ಹೇಗೆ ಬದಲಾಗಬಹುದು ಎಂದು ಪ್ರಶ್ನಿಸಿಕೊಳ್ಳಬೇಕು. ಬದುಕು ತದುಕಿ ತದುಕಿ ಕಲಿಸಿದ ಪಾಠಗಳು ಹಲವು. ಅವುಗಳನ್ನು ಅಪ್ಪಿಕೊಂಡರೆ ಬಂದು ಹೋಗುವ ವರುಷಗಳೆಲ್ಲವೂ ಹರುಷವನ್ನೇ ತರುವವು. ಅದಕ್ಕಾಗಿ ಈ ಒಂದಿಷ್ಟು ಸೂತ್ರಗಳು, ಸಂತಸದ ಮಂತ್ರಗಳು:

ಇಲ್ಲವೆನ್ನಿ: ನಿರಾಕರಿಸುವುದು ಕಷ್ಟ. ದಾಕ್ಷಿಣ್ಯಕ್ಕೆ ಬಿದ್ದಾದರೂ ಆ ಭಾರವನ್ನು ಹೊರುತ್ತೇವೆ. ಸ್ಪಷ್ಟವಾಗಿ ನಿರಾಕರಿಸಿ. ಯಾವುದೇ ಅಪರಾಧಿ ಭಾವವಿಲ್ಲದೆ. ನಮ್ಮ ಪರಿಸ್ಥಿತಿ, ಸಮಸ್ಯೆ, ಸನ್ನಿವೇಶಗಳಲ್ಲಿ ಇಲ್ಲವೆನ್ನುವುದು ಅನಿವಾರ್ಯವಾದರೆ, ನಮಗಿಷ್ಟವಿಲ್ಲದಿದ್ದಲ್ಲಿ ಇಲ್ಲವೆಂದೇ ಹೇಳಿ. ಯಾವ ದಾಕ್ಷಿಣ್ಯವೂ ಬೇಡ.

ಸ್ವಪ್ರೀತಿ: ಆತ್ಮರತಿಯಲ್ಲದ ಸ್ವಪ್ರೀತಿ ಕಲಿಯಿರಿ. ನನ್ನನ್ನು ನಾನು ಅಕ್ಕರೆಯಿಂದ ಕಾಣುವ, ಆರೈಕೆ ಮಾಡಿಕೊಳ್ಳುವ, ನಿಮಗಾಗಿ ಚೂರು ಖರ್ಚು ಮಾಡುವ, ಅದಕ್ಕೆ ಯಾವುದೇ ಸಮರ್ಥನೆಗಳನ್ನು ಕೊಡದೆ, ಸಂಭ್ರಮಿಸುವುದನ್ನು ಕಲಿಯಿರಿ.

ನಾ ಮೊದಲು: ಸ್ವಾರ್ಥಿಯಾಗಬೇಕೆ ಎಂದು ಹಣೆಗಂಟಿಕ್ಕಬೇಡಿ. ಮನೆ, ಕುಟುಂಬ, ಮಕ್ಕಳು ಇವೆಲ್ಲ ಆದ್ಯತೆಪಟ್ಟಿಯಲ್ಲಿದ್ದೇ ಇರುತ್ತವೆ. ಈ ಪಟ್ಟಿಯಲ್ಲಿ ನಿಮ್ಮ ಅನುಕೂಲ, ಆರಾಮಗಳು, ಖುಷಿ, ಸಂತೋಷಗಳೂ ಮೊದಲಿಗೆ ಇರಲಿ. ನಿಮ್ಮೊಳಗಿನ ಖುಷಿ, ನಿಮ್ಮ ಸುತ್ತಲೂ ಹರಡುವುದೆಂದು ಈ ‘ಮೊದಲು’ ಎಂಬ ತತ್ವಕ್ಕೆ ಅಂಟಿಕೊಳ್ಳಿ

ಸಮಜಾಯಿಷಿಗಳೇಕೆ: ನೀವು, ನಿಮ್ಮ ನಿರ್ಧಾರಗಳು, ತೀರ್ಮಾನಗಳು ಸರಿ ಇವೆ ಎಂದು ಎನಿಸಿದಾಗ, ಯಾರಿಗೂ ಯಾವ ಕಾರಣಕ್ಕೂ ಸಮಜಾಯಿಷಿಗಳನ್ನು ನೀಡಬೇಡಿ. ಸಮಜಾಯಿಷಿಗಳಿಂದ ಸನ್ನಿವೇಶದ ಓರೆಕೋರೆಗಳನ್ನು ನಾವೇ ಪರರೆದುರು ತೆರೆದಿಟ್ಟಂತಾಗುತ್ತದೆ. ನಮ್ಮವರೆನಿಸಿಕೊಂಡವರಲ್ಲಿ, ಏನಾದರೂ ಬದಲಾವಣೆಗಳಾಗುವ ನಿರೀಕ್ಷೆ ಇದ್ದಲ್ಲಿ ಮಾತ್ರ ಸಮಜಾಯಿಷಿಗಳಿರಲಿ. ಪುರಾವೆ ಒದಗಿಸುವ ಮಟ್ಟಕ್ಕಿಳಿಯಬೇಡಿ

ಪರನಿಂದೆಗೆ ಕುಗ್ಗದಿರಿ: ಪರನಿಂದೆಗೆ ಅಳಕುವ ಜೀವಕೆ ತಿಳಿಹೇಳಿ, ಆ ನಿಂದೆಗೆ ಕಾರಣ ನೀವಲ್ಲ, ಅವರ ಯೋಚನಾಸರಣಿಯೆಂದು. ನಿಂದನೆಗೆ ಅಳಕುವ, ಅಳುವ, ಸಮಜಾಯಿಷಿ ನೀಡುವ ಅಗತ್ಯವಿಲ್ಲ, ಇನ್ನೊಬ್ಬರು ನಿಮ್ಮನ್ನು ಹಳಿಯಲು ಅವರಿಗೆ ಅವರದ್ದೇ ಅದ ಕಾರಣ ಮತ್ತು ನಿರೀಕ್ಷೆಗಳಿರುತ್ತವೆ.

ಸಂತಸಕೆ ನಾವೇ ಕಾರಣರು: ನಮ್ಮ ಖುಷಿಗೆ ನಾವು ಮಾತ್ರ ಜವಾಬ್ದಾರರಾಗಿರುತ್ತೇವೆ. ಖುಷಿಯೆಂಬುದು ಮನದಾಳದ ಲಹರಿ. ಅದು ನರನಾಡಿಗಳಲ್ಲಿ ಹರಡಿ, ಕಣ್ಣಲ್ಲಿ ಮಿಂಚು, ತುಟಿಯಂಚಿಗೆ ನಗು ತಂದೊಡ್ಡುತ್ತದೆ. ಅಂಥ ಸಂತಸ, ಸಂಭ್ರಮಗಳು ನಮ್ಮ ನಿಲುವಿನಲ್ಲಿರುತ್ತವೆಯೇ ಹೊರತು ಬಾಹ್ಯ ಪ್ರಪಂಚದೊಳಗಲ್ಲ. ಎಂಥದ್ದೇ ಪರಿಸ್ಥಿತಿಯಿದ್ದರೂ ನಾನು ಖುಷಿಯಾಗಿರುವೆ ಎಂಬುದನ್ನು ನಿರ್ಧರಿಸಿದರೆ ಮುಂದಿನದೆಲ್ಲವೂ ಆನಂದಮಯವೇ.

ಬೆಚ್ಚಿಗಿಡಲು ಕಿಚ್ಚಿರಬೇಕಿಲ್ಲ: ನಮ್ಮವರನ್ನು ಬೆಚ್ಚಗಿಡಲೆಂದೇ ನಮ್ಮ ಮಡಿಲೊಳಗ ಕಿಚ್ಚಿಡಬೇಕಾಗಿಲ್ಲ. ನಮ್ಮ ಆತ್ಮಗೌರವಕ್ಕೆ ಕುಂದು ಬಂದಲ್ಲಿ, ಚಾರಿತ್ರ್ಯದ ಬಗ್ಗೆ ಹೀನಾಯವಾದ ಮಾತುಗಳಿಂದ ಹೀಗಳೆದಲ್ಲಿ, ಅವನ್ನೆಲ್ಲ ಸಹಿಸಬೇಕಾಗಿಲ್ಲ. ಕೌಟುಂಬಿಕ ಕ್ರೌರ್ಯಕ್ಕೆ ಸುಮ್ಮನಿದ್ದು, ಆ ಕೆಂಡವನ್ನು ಸೆರಗಿನಂಚಿಗೆ ಕಟ್ಟಿಕೊಳ್ಳಬೇಕಿಲ್ಲ. ಮನೆ, ಮನೆಯವರನ್ನು ಬೆಚ್ಚಗಿಡಲು ನಾವು ದಹಿಸಿಕೊಳ್ಳಬೇಕಿಲ್ಲ. ಇಂಥ ಸಂದರ್ಭಗಳು ಬಂದಾಗ ಧ್ವನಿಯೆತ್ತಿ.

ಮುಂದೂಡಬೇಡಿ: ನಾಳೆಗೆ ನೋಡಿದರಾಯಿತು, ಇನ್ನೊಮ್ಮೆ ಹೇಳಿದರಾಯಿತು, ಮತ್ತೊಮ್ಮೆ ಕೊಂಡುಕೊಂಡರಾಯಿತು... ಇಂಥ ನೆಪಗಳಿಂದ, ನಿಮ್ಮ ಸಂತಸದ ಗಳಿಗೆಗಳನ್ನು ಮುಂದೂಡಬೇಡಿ. ಒಂದು ಮಾತು, ಕೃತಿಯಿಂದ ಆ ಕ್ಷಣಕ್ಕೆ ಸಂತಸವಾಗುವಂತಿದ್ದರೆ ಅಂಥ ಕೆಲಸಗಳನ್ನು ಆ ಕ್ಷಣದಲ್ಲೇ ಮಾಡಿ. ನಂತರದ ಪಶ್ಚಾತ್ತಾಪಕ್ಕಿಂತಲೂ ಆ ಕ್ಷಣಕ್ಕೆ ಹೇಳಿ ಹಗುರುವಾಗುವುದು ಉತ್ತಮ.

ನೆನಪಿರಲಿ ಎಲ್ಲ ಬದಲಾಗುತ್ತಾರೆ: ಕೆಲವೊಮ್ಮೆ ಕುಟುಂಬದವರೂ ಬದಲಾಗುತ್ತಾರೆ. ಆ ಬದಲಾವಣೆಗೆ ಅವರ ಆದ್ಯತೆ ಹಾಗೂ ಆಯ್ಕೆಗಳು ಕಾರಣವಾಗಿರುತ್ತವೆಯೇ ಹೊರತು, ನಿಮ್ಮೊಳಗಿನ ಕುಂದುಕೊರತೆಗಳಲ್ಲ. ಬದಲಾಗುವ ಪ್ರತಿ ವ್ಯಕ್ತಿಗೂ ಆ ಹಕ್ಕಿದೆ. ಆ ಬದಲಾವಣೆಯನ್ನು ಸ್ವೀಕರಿಸಿ. ಅದರಿಂದ ನಿಮಗೆ ನೋವಾದರೆ ಆ ಬಗ್ಗೆ ಚರ್ಚಿಸಿ. ನಿಮ್ಮ ತೀರ್ಮಾನ ಕೈಗೊಳ್ಳಿರಿ. ನಿಮ್ಮ ತೀರ್ಮಾನದಲ್ಲಿ ನಿಮ್ಮ ಖುಷಿಗೆ ಮೊದಲ ಆದ್ಯತೆ ಇರಲಿ

ನಕಾರಾತ್ಮಕ ವ್ಯಕ್ತಿತ್ವಗಳಿಂದ ದೂರ ಸರಿಯಿರಿ: ನಿಮ್ಮೊಳಗಿನ ಸಾಮರ್ಥ್ಯವನ್ನು ಅಲ್ಲಗಳೆಯುವಂಥ, ನಿಮ್ಮನ್ನು ಕೀಳಾಗಿ ಕಾಣುವ, ನಿಮ್ಮನ್ನು ಹೀಗಳೆಯುವ, ವಿನಾಕಾರಣ ದೂಷಿಸುವ ಯಾರೇ ಆದರೂ.. ಅವರಿಂದ ದೂರ ಸರಿಯಿರಿ. ಹೀಗೆ ದೂರ ಆಗುವುದು, ನಿಮ್ಮೊಳಗಿನ ಶಾಂತಿ ಸಮಾಧಾನಕ್ಕೆ ಎಂಬುದು ಮನವರಿಕೆ ಮಾಡಿಕೊಳ್ಳಿ.

ನಮ್ಮೊಳಗಿನ ಸಮಾಧಾನವೊಂದು, ಸಂಭ್ರಮವಾಗಿ ಬದಲಾಗುವುದು ಈ ಕೆಲವು ಪುಟ್ಟ ನಡೆಗಳಿಂದ. ಕಾಲಪಲ್ಲಟವಾಗಲಿ ಎಂದು ಕಾಯುವ ಬದಲು, ನಮ್ಮೊಳಗಿನ ಖುಷಿಗಾಗಿ ನಾವು ಬದಲಾಗಬೇಕು. ಕ್ಯಾಲೆಂಡರ್‌ ಜೊತೆಗೆ ನಮ್ಮ ಸಂತಸದ ಸ್ಕೇಲ್‌ ಮೇಲೇರುತ್ತಿರಬೇಕು.

ಹೊಸತನದ, ಹೊಸವರ್ಷದ ಶುಭಾಶಯಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT