ಭಾನುವಾರ, ಮೇ 29, 2022
23 °C

ಹೊಸವರ್ಷ: ತರಗೆಲೆಗಳ ತೂರುತ್ತ, ಹಸಿರೆಲೆಗಳ ಹೊದೆಯುತ್ತ...

ಹಿಮದ್ವತಿ Updated:

ಅಕ್ಷರ ಗಾತ್ರ : | |

Prajavani

ಈ ಬೆಳಗಿನಲ್ಲೊಂದು ಹೊಸತನವಿದೆ.. ವರ್ಷದ ಕೊನೆಯ ನಿಶೆಯ ನಶೆಯಿನ್ನೂ ಆರುವಾಗಲೇ.. ತೇಲುಗಣ್ಣುಗಳು ಬೆಳ್ಳನೆಯ ಸವಿಬೆಳಗನ್ನು ಕಣ್ಣುಕಿರಿದಾಗಿಸಿ, ಕಣ್ತುಂಬಿಕೊಳ್ಳುತ್ತವೆ.

ಅದೇನು ನಿರುಕಿಸುತವೆ ಈ ಕಂಗಳು.. ಆ ಸೊಬಗಿನ ಬೆಳಗಿನಿಂದ.. ಅದೇನು ಕನಸು ಕಂಡವು ಈ ಕಂಬನಿ ಸುರಿದ ಕಂಗಳು, ಸೊಗದಿರುಳಿನಿಂದ... ಅದ್ಯಾವ ಸಗ್ಗ ನಮ್ಮೊಳಗಿಲ್ಲದೆ, ಕಾಲನಿಂದ ಬರಲಿಯೆಂದು ಕಾಯುತ್ತದೆ ಈ ಮನವು..?

ಅವೆಷ್ಟು ಪ್ರಶ್ನೆಗಳು.. ಉತ್ತರಗಳನ್ನು ಹುಡುಕುವಾಗ ಅದ್ಯಾಕೋ ಮೋಡಗಳೆಲ್ಲ ಹೋಗಿ, ಬೆಟ್ಟದ ತುದಿಗೆ ತಲೆ ಚಚ್ಚಿಕೊಂಡಂತೆ... ಈ ಚಳಿಗಾಲವೇ ಹಾಗೆ. ಹಸಿರು ಹೊದ್ದ ಮರಗಳೆಲ್ಲ ಹಣ್ಣಾಗುವ ಹೊಸಿಲಲ್ಲಿರುವಾಗ, ಮೋಡದ ತೆರೆಯೊಂದು ಮುಚ್ಚುತ್ತದೆ. ಇರು.. ಇರು.. ಹೊಸತನ ಹೊಸಿಲಲ್ಲಿದೆ. ಕಳಚಿಕೊ.. ಎಲ್ಲ ಬಂಧಗಳ.. ಎಂಬ ಪಾಠ ಹೇಳಿದಂತೆ..

ಪಟ ಬದಲಿಸ ಬೇಕಿದೆ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ... ನಗೆಯೊಂದು ಮುಡಿಯಬೇಕಿದೆ. ಅರೆಬಿರಿದ ತುಟಿಗಳ ಮೇಲೆ, ಎಲ್ಲವೂ ಚಂದ. ನಾನಿನ್ನು ಪರಮಸುಖಿಯೆಂಬ ಭಾವ ಬೀಸಬೇಕಿದೆ.. ಹೌದೌದು ನಮಗದು ಗೊತ್ತಿದೆ. ನಾವೇನು ಬಯಸುತ್ತೇವೆಯೋ ಅಂತೆಯೇ ನಮ್ಮ ನಗೆ ಸೂಸೂತ್ತದೆಯೆಂದು.

ಆಪ್ತೇಷ್ಟರಿಗೆಲ್ಲ ಶುಭಹಾರೈಸಬೇಕಿದೆ. ಶುಭಕೋರಬೇಕಿದೆ, ಹುಸಿಮುನಿಸು ತೋರಬೇಕಿದೆ, ನಕ್ಕು ಜೀವನಪ್ರೀತಿ ಹುಟ್ಟಿಸಬೇಕಿದೆ, ಈ ಕಂಗಳಲಿ ನಗೆ ಹುಟ್ಟಿದ್ದು, ನಿನಗಾಗಿಯೇ ಎಂಬ ಭಾವ ಸ್ಫುರಿಸಬೇಕಿದೆ. ಈ ಚಳಿಗಾಲದಲ್ಲಿ ಇಂಥ ಎಲ್ಲ ಬೆಚ್ಚನೆಯ ಭಾವಗಳಿರುವಾಗಲೇ.. ಎಲೆಯುದುರುತ್ತವೆ.

ನಾವೂ.. ನಮ್ಮ ಮನಸಮುದ್ರದಲೆಗಳಿಂದ ಇಂಥ ಎಲೆಗಳನ್ನು ಬಿಡಿಸಿಕೊಳ್ಳಬೇಕಿದೆ. ಕಳೆದ ವರ್ಷದಲ್ಲಿ ಕಳೆದುಕೊಂಡವರಿಗೆ ಗೌರವದ ವಿದಾಯ ಹೇಳಬೇಕಿದೆ.

ಇರುವಿಕೆ, ಇಲ್ಲದಿರುವಿಕೆಯ ನಡುವಣ ಗೆರೆ, ನಮ್ಮ ಪ್ರಜ್ಞೆ. ಅದನ್ನೊಂಚೂರು ಪಳಗಿಸಿ, ಆತ್ಮೀಯರು ನಮಗೆ ಬಯಸುವಂಥ ಬದುಕನ್ನು ಎದಿರುಗೊಳ್ಳಬೇಕಿದೆ. ಕಳೆದುಕೊಳ್ಳಬೇಕಿವೆ ಆ ಶುಷ್ಕ ಎಲೆಗಳನ್ನು, ಹೀಗಳೆಯುವಿಕೆಯಲ್ಲಿ, ನಿಮ್ಮನ್ನು ಕುಗ್ಗಿಸಿದ ಮಾತುಗಳು ಮನಕೆ ಜೋತು ಬೀಳದಂತೆ ಉದುರುಸಿಕೊಳ್ಳಬೇಕಿದೆ.

ಹಾರಿ ಹೋಗಲಿ ಆ ತರಗೆಲೆಗಳು, ನಿಮ್ಮ ವ್ಯಕ್ತಿತ್ವಕ್ಕೆ ಮೆರುಗನ್ನು ನೀಡದ, ನಿಮ್ಮ ಇರುವಿಕೆಗೆ ಸಂಭ್ರಮವನ್ನೀಯದ... ತರಗೆಲೆಯ ಮೇಲಿನ ಚೊರಚೊರ ಸದ್ದು ಮಾಡಿದಂತೆ ಕಾಲ ಸರಿದುಹೋಗಲಿ...

ಇದೊಂದು ಮನ್ವಂತರ. ಹೊಸ ಎಲೆಗಳು ಹುಟ್ಟುತ್ತವೆ. ಹೃದಯ ಹಸಿರಾಗುತ್ತದೆ. ಮಣ್ಣು ಹದವಾಗುವಂತೆ ದೇಹವೆಂಬ ಗುಡಿಯೊಳು ಮನಸು ಮೆದುವಾಗುತ್ತದೆ. ಆ ಬೇಸಿಗೆಯೆಂಬ ಬಿಸುಪಿನ, ಕಾವಿನ ಮೋಡಿಯದು. ಒಣಮಣ್ಣಿನಲ್ಲೊಂದು ನೆನಪುಗಳು ಝರಿಯುಕ್ಕುವಂತೆ, ಮನದಾಳಕ್ಕಿಳಿಯುತ್ತದೆ ಜೀವನಪ್ರೀತಿಯೆಂಬ ಝರಿ.

ಅದ್ಯಾಕೋ ಮೊದಲ ಮಳೆಯ ಒಣಮಣ್ಣಿನ ವಾಸನೆ, ಈ ನೆನಪುಗಳ ನೆನೆಯುವಂತೆ, ಮಳೆಯಲ್ಲಿ ತೆರೆದ ಬಾಹುಗಳ ಅಗಲಿಸಿ, ಕಣ್ಣಮೇಲೊಂದು ಹನಿಯುದುರಲಿ ಎಂದು ಗಗನಮುಖಿಯಾಗಿಸುತ್ತದೆ. ಮತ್ತದೇ ಆ ಒಣ ನೆಲದಲ್ಲಿ ಸಂಭ್ರಮ, ಸಂಕಟ, ಸಂತೋಷಗಳೆಲ್ಲವೂ ಮೊಳಕೆಯೊಡೆಯುತ್ತವೆ.

ಅದೇ ಆ ಬೇಸಿಗೆಯ ನೆಲವೆಂಬ ಮನದ ಭಿತ್ತಿಯಲಿ, ನಾವುಬಿತ್ತಿದ ಬೀಜಗಳೆಲ್ಲವೂ ತೆನೆಗಟ್ಟುವ ಕಾಲವಿದು. ಕಣ್ಣೀರಿನಂಥ ಇಬ್ಬನಿಯೇ ಹರಳುಗಟ್ಟಿ ಸವಿಸಕ್ಕರೆಯಾಗುವಾಗ, ನಾವು ಯಾವ ದೂರು, ದುಮ್ಮಾನಗಳಿರಿಸಿಕೊಂಡು ಬೇಯಬೇಕು? ಇಂಥವನ್ನೇ, ಇಂಥ ನಿರಾಸಕ್ತಿಯನ್ನೇ ಮಳೆ ಬಂದು ತೊಳೆದು ಹೋಗುತ್ತದೆ. ಮತ್ತೇನಿದ್ದರೂ ಕಡುಕತ್ತಲೆಯ, ಬಿಡುಬೀಸು ಗಾಳಿಯ ಚಳಿಗಾಲ. ಮೈಮೇಲೆ ಗುಳ್ಳೆಗಳೇಳಿಸುತ, ರೋಮಾಂಚನವಾಗುವಂತೆ ಮಾಡಿ, ನಮ್ಮ ದೇಹವನ್ನು ನಾವೇ ಸವರುವಂತೆ ಹೋಗುವ ಆ ಗಾಳಿ ಪ್ರತಿಸಲವೂ ಹೊಸತನ್ನೇ ತಂದು ನೀಡಲಿ.

ಬದುಕಿದು ಒಂದೇ ಒಂದು ಅವಕಾಶ. ಬಂದು ಹೋಗುವ ವರ್ಷಗಳೆಲ್ಲವೂ ಈ ಯಾನದೊಳಗಿನ ಬುತ್ತಿಯೂಟ ಇದ್ದಂತೆ. ಪುಟ್ಟ ಚಿಕ್ಕಿಯಿಂದ ಹಿಡಿದು, ಕಹಿಹಾಗಲದವರೆಗೂ ಎಲ್ಲ ಖಾದ್ಯಗಳಿವೆ ಈ ಬುತ್ತಿಯ ಬುಟ್ಟಿಯಲ್ಲಿ. ಎಲ್ಲವನ್ನೂ ಸವಿಯುತ್ತಲೇ ದಿನ ಸವೆಸುವ ಕಾಲನ ಈ ಚಲನೆಗೆ, ಹೊಸವರ್ಷವೊಂದು ಮೈಲಿಗಲ್ಲಷ್ಟೆ. ಎಲ್ಲವನ್ನೂ ಹಣೆಗೊತ್ತಿ, ಎದೆಗಿಳಿಸಿಕೊಂಡು ಮುನ್ನಡೆಯುವ, ಬರುವ ಪ್ರತಿವರ್ಷವೂ ಪ್ರತಿ ಅನುಭವದ ಮೂಸೆಯೂ ಭಾವಸಿರಿವಂತಿಕೆಯ ಬೆಳೆಸಲಿ ಎಂದು ಆಶಿಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು