ಗುರುವಾರ , ಡಿಸೆಂಬರ್ 1, 2022
27 °C

ದೇವ ದೈವದ ಬನ್ನಿ.. ಜನಪದರ ದಸರಾವೇನು ಸುಮ್ಮನೆಯೇ ಮತ್ತೆ? ವಿಶೇಷ ಲೇಖನ

ನಿಂಗಪ್ಪ ಮುದೇನೂರು Updated:

ಅಕ್ಷರ ಗಾತ್ರ : | |

ಮೈಸೂರು ದಸರಾ ಏನೋ ಜಗದ್ವಿಖ್ಯಾತವಾಗಿದೆ, ನಿಜ. ಆದರೆ, ನಮ್ಮ ಜನಪದರ ದಸರಾವೇನು ಸುಮ್ಮನೆಯೇ ಮತ್ತೆ? ಪ್ರತೀ ಊರಿನಲ್ಲೂ ಎಷ್ಟೊಂದು ಆಚರಣೆಗಳು, ಏನೆಲ್ಲ ವಿಧಾನಗಳು. ನಮ್ಮ ಗ್ರಾಮೀಣರ ಹಬ್ಬಗಳೆಂದರೆ ಅವು ಕೃಷಿ ಪ್ರಧಾನವಾದವುಗಳೇ. ಅಲ್ಲೊಂದು ಫಲವಂತಿಕೆಯ ಆಶಯವೂ ಇದೆ. ದಸರಾ ಸುತ್ತ ಸೃಷ್ಟಿಯಾದ ಜಾನಪದ ಜಗತ್ತೊಂದು ಇಲ್ಲಿ ಅನಾವರಣಗೊಂಡಿದೆ

ಹಬ್ಬ ಜಾತ್ರೆಗಳಿಲ್ಲದಿದ್ದರೆ ಹಳ್ಳಿಗಳ ಬಾಳಿನ ಕೊಂಡಿ ಬೆಸೆಯದು. ವರ್ಷದುದ್ದಕ್ಕೂ ನಡೆಯುವ ಇಂತಹ ಆಚರಣೆಗಳು ಹಳ್ಳಿನಾಡಿನ ಜೀವನೋತ್ಸಾಹದ ಬನಿಗಳು. ಕುಟುಂಬ, ಗ್ರಾಮ, ನಾಡು, ದೇಶ, ಪ್ರಪಂಚ ಎಂದೆಲ್ಲ ಒಡಮೂಡಿ ನಿಲ್ಲುವ ಇವುಗಳ ಲೋಕದೃಷ್ಟಿ ಅಪಾರ. ನಿಸರ್ಗದ ಧರ್ಮವನ್ನು ಕಾಪಿಟ್ಟುಕೊಂಡಿರುವ ಹಬ್ಬಗಳೆಂದರೇನೇ ಸದಾ ಚೆಲುವು.

ಬಹುತೇಕ ನಮ್ಮ ಗ್ರಾಮೀಣ ಪ್ರದೇಶದ ಜನಪದ ಹಬ್ಬಗಳು ಕೃಷಿ ಪ್ರಧಾನವಾದ ಹಬ್ಬಗಳೇ ಆಗಿವೆ. ಅಲ್ಲೊಂದು ಫಲವಂತಿಕೆಯ ಬಯಸುವ ಆಶಯವಿದೆ. ಶಿವ ಮತ್ತು ಶಕ್ತಿ ಪೂಜೆಯೊಂದಿಗೆ ಪಿತೃಪ್ರಧಾನ ವ್ಯವಸ್ಥೆ ಮತ್ತು ಮಾತೃಪ್ರಧಾನ ವ್ಯವಸ್ಥೆಗಳೆರಡು ಸಂಕರಗೊಂಡು ಸಹಬಾಳ್ವೆ ತೋರುವ ವಿಧಾನಗಳಾಗಿಯೂ ಈ ಹಬ್ಬಗಳು ನೆಲೆಗೊಂಡಿವೆ. ನಮ್ಮ ‘ಜನಪದ ದಸರಾ’ ಇದಕ್ಕೊಂದು ಒಳ್ಳೆಯ ಉದಾಹರಣೆ. ಜೀವನದ ವೈವಿಧ್ಯಮಯ ಪರ್ವವಾಗಿ ತೆರೆದುಕೊಳ್ಳುವ ಈ ಹಬ್ಬ ನಾಡಿನ ಹಬ್ಬವಾಗಿ ಗುರ್ತಿಸಿಕೊಂಡಿದೆ. ಮೈಸೂರಿನ ಅರಸರು ಆಚರಿಸುತ್ತಾ ಬಂದ ಮೈಸೂರು ದಸರೆಯಾಗಲೀ ವಿಜಯನಗರದ ಅರಸರ ಮಹಾನವಮಿ ವೈಭವದ ದಸರೆಯಾಗಲೀ ಸಂಡೂರು, ಜರಿಮಲೆ, ಗುಡೇಕೋಟೆ, ಕನಕಗಿರಿ, ಆನೆಗುಂದಿ, ಹರತಿ ಕೋಟೆ, ಸುರಪುರದ ಸ್ಥಳೀಯ ನಾಯಕ ಅರಸರ, ಸಾಮಂತ ಪಾಳೇಗಾರರ ದಸರೆಯಾಗಲೀ ಎಲ್ಲವೂ ಜನಮುಖಿ ಹಬ್ಬಗಳೇ. ಆದರೆ ಅವುಗಳಿಗೆ ಆಯಾ ಅರಸರಿಂದ, ಸಾಮಂತರರಿಂದ ಚಾಲನೆ ದೊರೆತು ವಿಶೇಷವಾಗಿ ಆಚರಿಸಲ್ಪಡುತ್ತಿದ್ದವು. ಒಂದೊಂದು ದಿನ ಒಂದೊಂದು ದೇವತೆಯನ್ನು ಸಿಂಗರಿಸಿ ಪೂಜಿಸುವ, ಅಷ್ಟದ್ರವ್ಯಗಳ ಶಾಸ್ತ್ರ ಮಾಡುವ, ಕಂಕಣವನ್ನು ಪೂಜಿಸಿ ಧರಿಸುವ ವಿಧಾನಗಳು ಈಗಲೂ ವಂಶಪರಂಪರಾನುಗತವಾಗಿವೆ ಮತ್ತು ಅವು ಜನ ಪಾಲ್ಗೊಳ್ಳುವಿಕೆಯ ಆಚರಣೆಗಳೂ ಆಗಿವೆ.

ಹಂಪಿಯ ಜಾನಪದವಾಗಲಿ, ಮೈಸೂರು ಜಾನಪದವಾಗಲಿ ಆಂತರ್ಯದಲ್ಲಿ ಕಟ್ಟಿಕೊಂಡ ಹಿರೀಕರ ಪರಂಪರೆಯ ಸಾಂಸ್ಕೃತಿಕ ಚೆಲುವೇ ಬೇರೆ. ಆನೆ, ಅಂಬಾರಿ, ಪಲ್ಲಕ್ಕಿ, ತುಲಾಭಾರಗಳ ಪ್ರದರ್ಶನಾತ್ಮಕ ಪ್ರಭುತ್ವದ ದಸರೆಗಿಂತ ಜನರೇ ದೈವಗೊಂಡು, ದೈವವೇ ಬೀದಿಗೊಂಡು, ಊರ ಬಾವಿ, ಕೆರೆ, ಹಳ್ಳ, ನದಿ, ಗುಡ್ಡದ ಬಾಳಿನಿಂದ ಗಂಗೆಗೊಂಡು ಬರುವ ವಿಧಾನವೇ ಹೆಚ್ಚು ಚೇತೋಹಾರಿ. ಹೊಸ ದಿನ, ಹೊಸ ಋತು, ಹೊಸ ಪೈರು, ಹೊಸ ಕಾಳು ಕಾಣುವ ಈ ಸೃಷ್ಟಿಯ ಮೂಲ ಸಂಗತಿಗಳನ್ನು ಹಳ್ಳಿ ಬಾಳನ್ನು ಹೊಕ್ಕು ನೋಡಿಯೇ ನಾವು ಸುಖಿಸಬೇಕು.

ಮೈಸೂರು ದಸರಾವನ್ನೇ ನಾವು ನಾಡ ದಸರಾ ಎಂದು ಹೇಳುವಷ್ಟು ಅದು ಜನಪ್ರಿಯಗೊಂಡಿದೆ. ನಮ್ಮ ಮಾಧ್ಯಮಗಳು, ಸಿನಿಮಾಗಳು ಆನೆ, ಅಂಬಾರಿ, ಪಥಸಂಚಲನ, ಕುಸ್ತಿ, ಕ್ರೀಡೆ, ರಾಜಮನೆತನದ ವೈಭವ, ಸರ್ಕಾರದ ನೇರ ಪಾಲ್ಗೊಳ್ಳುವಿಕೆ, ಪ್ರವಾಸೋದ್ಯಮದ ಲಾಭ, ವ್ಯಾಪಾರ ವಹಿವಾಟು ಇವೆಲ್ಲದರ ಭಾಗವಾಗಿ ಅದು ಅಂತರ್ಯದಲ್ಲಿ ಹಬ್ಬದಂತೆ ಕಂಡರೂ ಬಾಹ್ಯದಲ್ಲಿ ಜಾತ್ರೆಯ ಸ್ವರೂಪ ಪಡೆದು ನಿಂತಿದೆ. ಆದರೆ, ಹಳ್ಳಿ ಬಾಳಿನ ಸ್ವರೂಪಕ್ಕೆ ಬಂದಾಗ ಹಬ್ಬಗಳು ಇನ್ನಷ್ಟು ಪವಿತ್ರಗೊಳ್ಳುತ್ತವೆ. ತಮ್ಮ ಕುಲ ದೈವ ಊರದೈವಗಳನ್ನು ಕೂಡಿಕೊಂಡು ಆವರ್ತಗೊಳ್ಳುತ್ತವೆ.

ನಮ್ಮ ಜಾನಪದ ‘ದಸರಾ ಹಬ್ಬ’ವನ್ನು ಈಗಲೂ ‘ಬನ್ನಿ ಹಬ್ಬ’ವೆಂದೇ ಕರೆಯುತ್ತದೆ. ಇದು ಬನ್ನಿ ಮುಡಿಯುವ ಹಬ್ಬ. ಬನ್ನಿ ಮುಡಿದು ಬಂದು ಬನ್ನಿಯನ್ನು ಎಲ್ಲರಿಗೂ ಹಂಚಿ ಬಂಗಾರವಾಗುವ ಮನಸ್ಸಿನ ತಿಳಿಗೊಳದ ಹಬ್ಬ. ಈ ಹಬ್ಬವನ್ನು ನವರಾತ್ರಿ, ಮಹಾನವಮಿ, ದಸರಾ, ವಿಜಯದಶಮಿ, ನಾಡಹಬ್ಬವೆಂತಲೂ ಕರೆಯುತ್ತಾರೆ. ಅದೇನೇ ಇರಲಿ, ಧರ್ಮದ ಜೂಜಾಟದಲ್ಲಿ ಅಂದರೆ ಪಗಡೆ ಆಟದಲ್ಲಿ ಸೋಲು ಕಂಡ ಪಾಂಡವರು ಕೊಟ್ಟ ಮಾತಿನಂತೆ ವನವಾಸವನ್ನು ಅನುಭವಿಸುವರು. ಒಂದು ವರ್ಷದ ಅಜ್ಞಾತವಾಸದ ಮಾರುವೇಷದಲ್ಲಿ ವಿರಾಟ ನಗರಕ್ಕೆ ಬರುವ ಸನ್ನಿವೇಶವು ಈ ಕಥೆಯ ಹಿಂದಿದೆ.

ವನವಾಸಕ್ಕೆ ಹೋಗುವ ಪೂರ್ವದಲ್ಲಿ ಕಾಡಿನ ಶೆಮಿ ವೃಕ್ಷದಲ್ಲಿ (ಬನ್ನಿ ಗಿಡ) ತಮ್ಮ ಶಸ್ತ್ರಾಸ್ತ್ರಗಳನ್ನು ತೂಗುಹಾಕಿ ಹೋದರಂತೆ ಪಾಂಡವರು. ಅವರು ಇಂದಿಗೂ ಬನ್ನಿ ಗಿಡದಲ್ಲಿ ವಾಸವಾಗಿರುವರೆಂದೂ, ಬನ್ನಿ ಮಹಾಕಾಳಿಯೇ ಅವರನ್ನು ರಕ್ಷಿಸುತ್ತಿರುವವಳೆಂದೂ ಜನಪದ ನಂಬಿರುವುದಕ್ಕೆ ಬನ್ನಿ ಮುಡಿಯುವ ಹಬ್ಬವೇ ಸಾಕ್ಷಿ. ಶಿಷ್ಟ ಕಾವ್ಯವನ್ನು ಜನಪದಕ್ಕೂ, ಜನಪದ ಬದುಕನ್ನು ಶಿಷ್ಟ ಸಂಸ್ಕೃತಿಗೂ ಕೂಡಾಳಿಕೆ ಮಾಡಿಕೊಂಡು ಬದುಕುವ ಈ ಸಂಸ್ಕೃತಿ ಅನನ್ಯವಾದುದು. ಸೋತವರನ್ನು, ಸಾವನ್ನಪ್ಪಿದವರನ್ನು ಸ್ಮರಿಸುತ್ತಾ ಅವರ ಬಗೆಗೆ ದಿವ್ಯ ಅನುಕಂಪ, ಅಂತಃಕರಣವನ್ನು ಇಟ್ಟುಕೊಂಡು ಬಾಳುವ, ದೈವಿಕ ನೆಲೆಗೆ ತಂದು ಹಿರಿಯರನ್ನು ಇರಿಸುವ ಹಿರಿದಾದ ಹಬ್ಬವೇ ‘ಹಿರಿಯರ ಹಬ್ಬ’.

ಈ ತ್ರಿಪದಿಯನ್ನು ನೋಡಿ ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರು ಬಂದರೂ ಕೊಡಬೇಡ/ಹಡದಮ್ಮ ಅರ್ಜುನ ಬಂದರ ಕೊಡಬೇಕ

ಹೀಗೆಂದು ಧರ್ಮರಾಯ ಹೇಳಿದಂತೆಯೂ, ಅರ್ಜುನ ಬಂದು ತನ್ನ ಗಾಂಡೀವಾಸ್ತ್ರವನ್ನು ತೆಗೆದುಕೊಂಡು ಹೋದನೆಂತಲೂ ನಂಬಿದ ಜಾನಪದ ಪ್ರಪಂಚ ನಮ್ಮದು. ಪಾಂಡವರ ಬಗೆಗಂತೂ ಎಷ್ಟೊಂದು ಮಮತೆ ಜನಪದರದ್ದು. ಸೋತವರಲ್ಲಿಯೂ ಆತ್ಮವಿಶ್ವಾಸವನ್ನು ತುಂಬಿ ಬದುಕಿಸುವ ಜೀವನ ಪ್ರೀತಿ ಇದು. ಬಡತನ, ಉಪವಾಸ, ವನವಾಸ, ಕಷ್ಟ ಕಾರ್ಪಣ್ಯಗಳ ಜೊತೆಯೂ ಉಕ್ಕುವ ಜಲಪಾತದಂತಹ ಜೀವನ ಪ್ರೀತಿಯನ್ನು ಈ ಹಬ್ಬಗಳು ಮೂಡಿಸುತ್ತವೆ. ಪಾಂಡವರ ಹಬ್ಬದಲ್ಲೂ ಐದು ಜನ ಪಾಂಡವರ ಕಲ್ಲುಗಳನ್ನು ಇಟ್ಟು ಕಲ್ಲುಗಳನ್ನು, ಆ ಮರವನ್ನು, ಹೊಲದ ಪೈರನ್ನು ಪೂಜಿಸುವ, ಹೊಸ ಬೆಳೆಯ ಕಾಳಿನ ಅಂಬಲಿಯನ್ನು ಚರಗ ಚೆಲ್ಲಿ ಸೃಷ್ಟಿಗೆ ನಮಿಸುವ ಧನ್ಯತೆ ಜಾನಪದ ಹಬ್ಬಗಳಲ್ಲಿ ಉಳಿದುಕೊಂಡಿದೆ.

ಈಗಲೂ ಹಬ್ಬವನ್ನು ಆಚರಿಸುವಾಗ ಪಾಂಡವರು ಬನ್ನಿ ಗಿಡದಲ್ಲಿಯೇ ವಾಸವಾಗಿದ್ದಾರೆ ಎಂದು ನಂಬುತ್ತಾರಲ್ಲ ನಮ್ಮ ಜನ. ಶಸ್ತ್ರಾಸ್ತ್ರಗಳು ತೂಗಿನಿಂತ ಜಾಗದಲ್ಲಿ ಈಗ ಕಾಳುಗಟ್ಟಿದ ಜೋಳದ ದಂಟುಗಳು ತೂಗಿ ನಿಲ್ಲುತ್ತವೆ. ಬನ್ನಿ ಮುಡಿಯಲು ಬಂದವರು ತೆನೆ ಇರುವ ಜೋಳದ ದಂಟುಗಳ ಸಮೇತ ಬರಬೇಕೆಂಬ ನಿಯಮವನ್ನು ಊರಹಿರಿಯರೇ ಹಾಕಿರುತ್ತಾರೆ. ಊರದೈವದ ಪಲ್ಲಕ್ಕಿ ಸಮೇತ ಬಂದು ಬನ್ನಿಕಟ್ಟಿಯೋ, ಬನ್ನಿಮಂಟಪದ ಮೇಲೆಯೋ ಪಲ್ಲಕ್ಕಿ ಇರಿಸಿ ಪೂಜಿಸಿ, ಹಾಡು ಶ್ಲೋಕ ಹೇಳಿ ಬನ್ನಿ ಗಿಡಕ್ಕೆ ವಸ್ತ್ರದಹಾರ ಕಟ್ಟಿ, ಮಂಗಳಾರತಿ ಮಾಡಿ, ಬನ್ನಿ ಪತ್ರಿ ಹರಿದುಕೊಂಡು, ತಾವು ತಂದ ಇತರೆ ಮರದ ಎಲೆಗಳನ್ನು ಕೂಡಿಸಿಕೊಂಡು ಸೌಹಾರ್ದದ ಬನ್ನಿಯಾಗಿಸುತ್ತಾರೆ.

‘ಬನ್ನಿ ತಗೊಂಡು ಬಂಗಾರದಂಗೆ ಇರೋಣ' ಎಂದು ಬೇಡಿ ಶಪಥ ಮಾಡಿ ಊರಿಗೆ ಮತ್ತೆ ಮರಳುವ ಹಬ್ಬವಿದು. ಇಡೀ ಊರಿಗೆ ಊರೇ ಬನ್ನಿಕೊಟ್ಟು ಬಂಗಾರಗೊಳ್ಳುವ ಜೀವನ ವಿಧಾನವಿದು. ಪಾಂಡವರು ವನವಾಸ ಕಳೆದು ಸುಖಿಗಳಾದಂತೆ ಜನಪದರು ತಮ್ಮ ಕಷ್ಟ ನೋವುಗಳನ್ನು ಕಳೆದು ಸುಖಿಗಳಾಗುವ ವಿಶ್ವಾಸ ಈ ಹಬ್ಬದ್ದು.

‘ಕಲ್ಲ ಕಡಬ ಮಾಡಿ ಮುಳ್ಳ ಶಾವಿಗೆ ಮಾಡಿ

ಬನ್ನಿ ಎಲೆಯ ಎಡೆಮಾಡಿ/ಪಾಂಡವರು

ಉಂಡು ಹೋಗ್ಯಾರೋ ವನವಾಸ’

ನಾವು ಜನಪದರು ಅನುಭವಿಸುವ ನೈಜತೆಯೇ ಪಾಂಡವರು ಅನುಭವಿಸಿದ ನೈಜತೆ ಎಂದು ಬದುಕುವ ಪರಿ ಇದು. ನಾವು ಬಾಲ್ಯದಲ್ಲಿ ಮಳೆ, ಗುಡುಗು, ಸಿಡಿಲುಗಳಿಂದ ಭಯಭೀತಗೊಂಡಾಗ, ಸಿಡಿಲು ಹೊರಗಡೆ ಜೋರಾಗಿ ಅಪ್ಪಳಿಸಿದಾಗ ಮಣ್ಣಿನ ಮನೆ ಒಳಗೆ ಇರುತ್ತಿದ್ದ ನಾವು ಅವ್ವನೊಂದಿಗೆ ‘ಅರ್ಜುನ ಅರ್ಜುನ, ಭೀಮ, ನಕುಲ, ಸಹದೇವ’ ಎಂದು ಜಪಿಸುತ್ತಿದ್ದೆವು. ಅಂದರೆ, ಇವರನ್ನು ನೆನಪಿಸಿದೆವೆಂದರೆ ಸಿಡಿಲು ಎರಗುವುದು ದೂರವಾಗುತ್ತದೆ ಎಂಬ ನಂಬಿಕೆ ನಮ್ಮ ತಾಯಂದಿರಲ್ಲಿತ್ತು. ಮಕ್ಕಳನ್ನು, ಕುಟುಂಬವನ್ನು ರಕ್ಷಿಸಿಕೊಳ್ಳುವ ರೀತಿಯೇ ಇದಾಗಿತ್ತು. ಆದರೆ ಈಗ...?

ಕಾಲದ ಬದಲಾವಣೆಗಳ ಪರ್ವದಲ್ಲೂ ಈ ಹಬ್ಬಗಳು ಹಳ್ಳಿ ಬಾಳಿನ ದಸರೆಯನ್ನು ಜೀವಂತವಾಗಿ ಇಟ್ಟಿವೆ ‘ಬನ್ನಿ ಮುಡಿಯುವ ಬಾರ ಕೋಲು ಕೋಲ/ಚಿನ್ನ ತರುವುನ ಬಾರ ಕೋಲು ಕೋಲ/’ ಈಗಲೂ ಕೋಲಾಟದ ಪದಗಳಲ್ಲಿ ಬನ್ನಿಹಬ್ಬದ ಸಡಗರವೇ ಜಾಸ್ತಿ. ಊರು ಸೀಮೆ, ಕಾಡು, ಬೆಟ್ಟ ಗುಡ್ಡ ಯಾವುದೇ ಇರಲಿ ಬನ್ನಿ ತಂದು ಜನತೆಗೆ ಪರಸ್ಪರ ಕೈ ಮುಟ್ಟಿ, ಕಾಲು ಮುಟ್ಟಿ ನಮಸ್ಕರಿಸುವುದಷ್ಟೇ ಅಲ್ಲ, ಅದನ್ನು ಬೆಳೆದ ಬೆಳೆಗೂ, ಭೂಮಿತಾಯಿಗೂ, ನಾಡಿನ ಸಂಪತ್ತಿಗೂ ಅನ್ನದಂಬಲಿಯೊಂದಿಗೆ ಬೆರೆಸಿ ಅರ್ಪಿಸುವ ರೀತಿ ಅನನ್ಯ. ದುರ್ಗಮ್ಮ, ಚೌಡಮ್ಮ, ದ್ಯಾಮಮ್ಮ, ಊರಮ್ಮ, ಹುಲಿಗಮ್ಮ, ಎಲ್ಲಮ್ಮ, ಉಚ್ಚೆಂಗೆಮ್ಮ ಯಾವ ದೇವತೆಯೇ ಆಗಿರಲಿ ಎಲ್ಲರನ್ನೂ ಶಕ್ತಿ ದೇವತೆಗಳೆಂದು ಭಕ್ತಿಯಿಂದ ಸ್ಮರಿಸುವ ಸಮಯವೂ ಇದಾಗಿದೆ.

ಹಾಗಂತಲೇ -

‘ದೇವ ದೇವರ ಬನ್ನಿ ದೇವ ದೈವದ ಬನ್ನಿ

ನಾವು ಮುಡಿವುದು ನಮ್ಮ ಬನ್ನಿ’ ಎಂದರು.

‘ಅರಸನ ಅಂಗಳಕ ಸರಸ ರಂಗ ಹೋಯಿಸಿ

ಹೊರಸಿ ತಂದಾರ ಸಿರಿಬನ್ನಿ’ ಎನ್ನುವ ಅರಸರ ಪ್ರೀತಿಯನ್ನು ಜನ ಇನ್ನೂ ಮರೆತಿಲ್ಲ. ಅರಸರಾಗಲಿ, ಜನಸಾಮಾನ್ಯರಾಗಲಿ ಹಬ್ಬ ಎಂದಲ್ಲಿ ಎಲ್ಲರೂ ಸಮಾನರೇ. ಈ ಹಬ್ಬದ ನಿಜವಾದ ಬದುಕಿರುವುದು ‘ನಾವು ಕುಣಿಯೋಣ ಬನ್ನಿ, ಹ್ಯಾಂವ ಮರಿಯೋಣ ಬನ್ನಿ/ಜೀವ ಒಂದಾಗಿ ಇರಬನ್ನಿ ಕೋಲು ಕೋಲ’ ಎನ್ನುವಲ್ಲಿ. ನಮ್ಮೆಲ್ಲ ಹ್ಯಾಂವ, ಈರ್ಷೆ, ವೈರತ್ವ, ಕೊಲೆಗಡುಕತನ ಮರೆತು ಜೀವ ಒಂದಾಗುವುದನ್ನೇ ಈ ಹಬ್ಬಗಳು ಸಾರುತ್ತವೆ. ನಾವು ಈ ಹಬ್ಬಗಳನ್ನು ಕಳೆದುಕೊಂಡರೆ ಮಹಾಭಾರತದ ದಾಯಾದಿಗಳ ಮತ್ಸರದ ಕಥೆಯೇ ನಮ್ಮದಾಗುತ್ತದೆ ಎಂಬುವ ಎಚ್ಚರವೂ ಈ ಜಾನಪದ ದಸರೆಯಲ್ಲಿದೆ.

ಇಂತಹ ವಿಜಯದಶಮಿಗೋ, ಬನ್ನಿ ಮುಡಿಯಲಿಕ್ಕೋ ಮನೆಯಲ್ಲಿ ಮಗನಿಲ್ಲದಾಗ ಜನಪದ ಬದುಕಿಗೆ ದೊಡ್ಡ ಶೋಕವೇ. ಅಂತಹ ಶೋಕವನ್ನು ವ್ಯಕ್ತಪಡಿಸುವುದು ಹೇಗೆಂದರೆ: ‘ಬಂಜೆ ಬಾಗಿಲದಾಗ ಬಂಗಾರದೊಳಕಲ್ಲು, ಬಂದು ಕುಟ್ಟಾಕ ಸೊಸೆ ಇಲ್ಲ/ಮಹಾನವಮಿ/ಬನ್ನಿ ಮುಡಿಯಾಕ ಮಗನಿಲ್ಲ’ ಬಂಗಾರದ ಒಳಕಲ್ಲು ಇದ್ದರೂ ಧಾನ್ಯ ಕುಟ್ಟುವ ಸೊಸೆ ಇಲ್ಲ. ಮಹಾನವಮಿ ಬನ್ನಿ ಇದ್ದರೂ ಮುಡಿಯುವ ಮಗನಿಲ್ಲ. ನನ್ನ ಬಾಳು ಹೇಗೆ ಎಂದು ತಾಯಿ ಪರಿತಪಿಸುವ ಬಗೆಯಂತೂ ಜಾನಪದದ ದಸರೆಯ ಆರ್ದ್ರ ಭಾವವೇ ಆಗಿದೆ. ಆದರೂ ಅವಳು ಹಬ್ಬವಾಗುವವಳೇ. ಪಾಂಡವರ ವನವಾಸದ ಕಷ್ಟದ ಮುಂದೆ ನನ್ನ ಕಷ್ಟ ಯಾವ ಲೆಕ್ಕ ಎಂದು ಮತ್ತೆ ಮತ್ತೆ ಚೈತನ್ಯಗೊಳ್ಳುವ ಹೆಣ್ಣು ಮಕ್ಕಳಿಗಂತೂ, ಊರ ತಾಯಂದಿರಿಗಂತೂ ಹಳ್ಳಿಗಳಲ್ಲಿ ಬರವಿಲ್ಲ.

ಹೊಸಬಟ್ಟೆ, ಹೊಸ ಆಭರಣ, ಗೃಹೋಪಯೋಗಿ ವಸ್ತುಗಳು, ಹೊಸ ಯಂತ್ರಗಳ ಖರೀದಿ, ಮನೆಯ ಗೃಹ ಪ್ರವೇಶದ ಕಾರ್ಯಕ್ರಮ, ಪಾಯಹಾಕಿ ಹೊಸ ಮನೆಗೆ ಶುಭ ಆರಂಭ, ಹೊಸ್ತಿಲ ಪೂಜೆ ಮಾಡುವುದು ಒಂದೇ ಎರಡೇ ದಸರೆಯ ಈ ದಶದಿನಗಳು ವಿರಾಮವಿಲ್ಲದೆ ಸೃಜನಶೀಲವಾಗಿ ಮೂಡಿ ನಿಲ್ಲುವ ಪರಿಯೇ ವಿಶೇಷ. ಉಡಿಯಲ್ಲಿ ಬನ್ನಿ ಇದ್ದರೆ ಅದು ಬಂಗಾರವೇ. ಒಡಲಲ್ಲಿ ಮಗನೋ, ಮಗಳೋ ಇದ್ದರೆ ಅದೂ ಬಂಗಾರವೇ. ಎಷ್ಟೊಂದು ಪ್ರೀತಿ, ಅಕ್ಕರೆ ಈ ನಿಸರ್ಗದ ಮೇಲೆ.

ಜನಪದರೇ ಬಾಳಿಸುವ ಇಂತಹ ನಿಸರ್ಗಗಳೇ ನಮ್ಮ ನಿಜವಾದ ಹಬ್ಬಗಳು. ಹಬ್ಬಗಳು ಉಳಿದರೆ ನಿಸರ್ಗವು ಉಳಿಯುತ್ತದೆ. ನಿಸರ್ಗವು ಉಳಿದರೆ ಹಬ್ಬಗಳು ಉಳಿಯುತ್ತವೆ ಎನ್ನುವುದಕ್ಕೆ ಸಾಕ್ಷಿಪ್ರಜ್ಞೆಯಾಗಿ ಈ ಜನಪದ ದಸರೆ ಇದೆ. ಈ ಬನ್ನಿ ಹಬ್ಬದ ಇನ್ನೊಂದು ವಿಶೇಷವೆಂದರೆ ‘ಗಿಂಡೀಲಿ ನೀರು, ಬಂಡೀಲಿ ಅನ್ನ’ ಎನ್ನುವ ‘ಜೋಳ ಜೊಟ್ಟು ಆದಿತೋ, ಹತ್ತಿ ಬತ್ತಿಯಾದಿತೋ’, ‘ಅರಸ ಹಾಳಾದನೋ, ಕೊರಸ ಮೆರೆದನೋ’ ಎಂಬುವ ಮಾತುಗಳು ಕಾರ್ಣಿಕದ ನುಡಿಗಳಾಗಿ ಮೈಲಾರಗೊಳ್ಳುವುದು ಇದೇ ಬನ್ನಿ ಹಬ್ಬದಲ್ಲಿ. ಭಾರತ ಹುಣ್ಣಿಮೆ, ಜಾತ್ರೆ ನೆರೆಯುವ ಪೂರ್ವಭಾವಿಯಾಗಿಯೂ ಈ ಬನ್ನಿ ಹಬ್ಬದ ದಿನ ಮೈಲಾರ ತನ್ನ ವಿಜಯೋತ್ಸವದ ಸಂಕೇತವಾಗಿಯೂ ಗೊರವರು ದೇವರಗುಡ್ಡದಲ್ಲಿ ನೆರೆತು ಜಾತ್ರೆ ಮಾಡುವರು. ಉಪವಾಸವಿದ್ದ ಹಿರಿಯ ಗೊರವ ಹುಟ್ಲುಗೊಂಡು ಕಾರಣಿಕ ಹೇಳುತ್ತಾನೆ. ಅದು ದೇವರ ಹೇಳಿಕೆಯಾಗಿ ಮಳೆ ಬೆಳೆ, ಜೀವನ ಕಾಲಮಾನವನ್ನು ವ್ಯಾಖ್ಯಾನಿಸುವ ಬಗೆಯನ್ನು ದೇವರಗುಡ್ಡ ಜಾತ್ರೆಯಲ್ಲಿ ಕಾಣುತ್ತೇವೆ. ಮಣಿ ಮಲ್ಲಾಸುರ ರಾಕ್ಷಸರ ಸಂಹರಿಸಿದ ಪುರಾಣ ದ್ಯೋತಕದ ಮೈಲಾರನ ವಿಜಯೋತ್ಸವವೂ ಇದೇ ಬನ್ನಿ ಹಬ್ಬದೊಂದಿಗೆ ಸಂಕರಗೊಂಡಿದೆ.

ಪ್ರತಿಹಬ್ಬವೂ ಒಂದೊಂದು ಹೊಸತನವೇ. ಹಿರಿಯರು ಹೇಗೆ ಬಾಳಿದರು, ಹೇಗೆ ಉಂಡು ಸುಖಿಗಳಾಗಿದ್ದರು, ಯಾವ ಉಡುಗೆ ತೊಡುಗೆಗಳಿಂದ ಸರಳವಾಗಿ ಬದುಕಿ ಸೌಹಾರ್ದಗೊಂಡಿದ್ದರು, ಏನನ್ನು ನುಡಿದರು, ಅವೇ ನುಡಿಗಳು ಹಳ್ಳಿ ಬಾಳನ್ನು ಈಗಲೂ ತುಂಬಿವೆ. ಅದೇ ರುಚಿ, ಅದೇ ಬಣ್ಣ, ಅದೇ ಭಾವ ಹಿರಿಯರ ಹಬ್ಬಕ್ಕೂ ತೋರಣವಾಗಿದೆ. ಕಿರಿಯರ ಪ್ರೀತಿಗೂ ತೋರುಗಂಬವಾಗಿದೆ. ಇಂತಹ ಹಿರಿದಾದ ಎತ್ತರದ ತಲೆಮಾರುಗಳನ್ನು ಬಾಳಿಸುವ ಮುಂದಿನ ಪೀಳಿಗೆಗಾಗಿ ಸ್ಮರಣೆಯನ್ನೊತ್ತು ಸಾಗುವ ಮಾಳಪಕ್ಷ ಈ ಜಾನಪದ ದಸರೆಯು ನಮಗೊಂದು ಆದರ್ಶವಾಗಬೇಕು.

ನಾನು ಬಾಲ್ಯದಲ್ಲಿದ್ದಾಗ ನಮ್ಮ ಹಳ್ಳಿ ಮನೆಗಳಲ್ಲಿ ಮನೆ ಬಾಗಿಲು ತೆರೆದರೆ ಎದುರಿನ ಗೋಡೆಯ ಮೇಲೆ ಸಾಲಾಗಿ ಹಿರೀಕರ ಫೋಟೊಗಳು ಇರುತ್ತಿದ್ದವು. ವಿಭೂತಿ ಹಚ್ಚಿದ, ಕುಂಕುಮವನ್ನಿಟ್ಟ ಬೆರಳ ಗುರುತು ಬಾಳ ಪ್ರತಿಬಿಂಬವಾಗಿತ್ತು. ಹೊರಗೆ ಹೊರಟರೆ ಅವರಿಗೆ ಕೈ ಮುಗಿದೇ ಹೋಗಬೇಕಿತ್ತು. ಅವರ ಜೊತೆಯಲ್ಲಿ ದೇವರ ಫೋಟೊಗಳಿಗೂ ನಮಿಸಬೇಕಿತ್ತು. ಇವುಗಳ ಮಧ್ಯದಲ್ಲಿ ಅರ್ಧ ದೇಹ ಪಶುವಿನದು, ಇನ್ನರ್ಧ ದೇಹ ಮನುಷ್ಯನದು. ಅದರ ತಲೆಯ ಮೇಲೆ ಎರಡು ಕೋಡು, ಬಾಲ, ನಾಲ್ಕು ಕಾಲುಗಳು ಇರುವ ದೊಡ್ಡ ಫೋಟೊವೊಂದು ಇರುತ್ತಿತ್ತು. ನನಗೀಗಲೂ ಅದು ಸೋಜಿಗದ ಸಂಗತಿಯೇ. ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವಿನ ಅನನ್ಯ ಪ್ರಕೃತಿಯ ಸಂಬಂಧವಾಗಿಯೂ ಇಂತಹ ಚಿತ್ರಗಳು ಮೂಡಿ ನಿಂತಿರಬಹುದೇನೋ. ಈಗ ಅವೆಲ್ಲಿ ಮಾಯವಾದವು?

ಅಷ್ಟಾದರೂ ಹಬ್ಬಗಳ ಆಚರಣೆಗಳು, ಜಾತ್ರೆಗಳ ಜೀವಂತಿಕೆಗಳ ವರತೆ ಆರಿಲ್ಲ. ಅದು ಸದಾ ಜಿನಗುವ ಜೀವದ್ರವ್ಯವೇ. ಆ ಜೀವ ದ್ರವ್ಯಗಳು ಇದ್ದರೇನೇ ನಾಡಿಗೆ, ಊರಿಗೆ, ದೇಶಕ್ಕೇ ಸೊಗಸು ಮತ್ತು ಶ್ರೀಮಂತಿಕೆ. ಜಾನಪದ ದಸರೆ ಸೊಗಸಿನ ಹೂ ಪರಿಮಳವನ್ನು ಹರಡುತ್ತಾ, ಧೂಪ ಗಂಧವಾಗುತ್ತಾ, ಹಿರಿಯರ ನುಡಿ ಸಂಸ್ಕೃತಿಯನ್ನು ಹಬ್ಬಿಸುತ್ತಾ ಸಾಗಬೇಕು. ಬನ್ನಿ ನಾವೆಲ್ಲ ಸದಾ ಬಂಗಾರವಾಗೋಣ ಎಂದು ಈ ಹಬ್ಬ ಸಾರಿ ಸಾರಿ ಹೇಳಬೇಕು ಎನ್ನುವುದಷ್ಟೇ ಹಾರೈಕೆ.

----

ಸೃಷ್ಟಿ ಮೂಲ ಸಂಗತಿಗಳ ಹಬ್ಬ

ನವರಾತ್ರಿಯ ಮೂರನೇ ದಿವಸ, ಐದನೇ ದಿವಸ, ಇಲ್ಲವೆ ಒೊಂಬತ್ತನೇ ದಿವಸಕ್ಕೆ ‘ಘಟ್ಟ’ ಹಾಕುವ ಪದ್ಧತಿ ಉತ್ತರ ಕರ್ನಾಟಕದ ಭಾಗದಲ್ಲಿದೆ. ನವಧಾನ್ಯಗಳ ಸಸಿ ನೆಟ್ಟು ಬಿಂದಿಗೆ ನೀರು ತುಂಬಿ ಪೂಜುತ್ತಾರೆ. ಚಟಗಿ ಇಟ್ಟು, ಕಾಯಿ ಇಟ್ಟು ದೇಪ ಹಾಕುವುದು ಇದರ ವಿಶೇಷ. ಮನೆಯಲ್ಲಿ ತರಗಣ ಕಟ್ಟುತ್ತಾರೆ, ಅದರೊಳಗೆ ಕುಬಸದ ಗಳಿಗೆ, ಬೊಂಡಿಗಾಲಿ, ಬಸವಣ್ಣ, ಈಶ್ವರ, ಹಸ್ತ, ಜಡಿ ಇವೆಲ್ಲ ಸೇರಿಸಿ ಚಟಗಿ ತೂಗು ಹಾಕುತ್ತಾರೆ. ಮಣ್ಣಿನ ಚಟಗಿಯಲ್ಲಿ ನವ ಧಾನ್ಯ ಹಾಕಿ ಅದು ಬೆಳಕಿನಲ್ಲಿ, ಸಹಜವಾದ ಸ್ಥಿತಿಯಲ್ಲಿ ಬೆಳೆಯುವುದನ್ನು ಪೂಜ್ಯಭಾವದೊಂದ ಕಾಯುತ್ತಾರೆ. ಹೆಣ್ಣು ಮಕ್ಕಳು ಹಳದಿ ಸಸಿಗಳನ್ನು ಜಡೆಗೆ ಮುಡಿದುಕೊಳ್ಳುವರು. ದೇವರಿಗೂ ಹಸಿರು ಸಸ್ಯಗಳನ್ನು ಇರಿಸುವರು. ಒೊಂದೆಡೆ ಹಳದಿ ಸಸಿ, ಇನ್ನೊಂದೆಡೆ ದೇವರಿಗೆ ಇರಿಸುವ ಹಚ್ಚ ಹಸಿರು ಸಸಿ ಎಲ್ಲವನ್ನೂ ಗಮನಿಸಿದರೆ ಘಟ್ಟ ಹಾಕುವ ಈ ಪದ್ಧತಿ ಹುಲುಸಾದ ಫಲವೊಂತಿಕೆಯ ವಿಧಾನವನ್ನು ಸೂಚಿಸುತ್ತದೆ. ಹಾಗೆ ಬದುಕಿನ ಸೃಷ್ಟಿಮೂಲ ಸೊಂಗತಿಗಳನ್ನೂ ಈ ಹಬ್ಬ ಬಿಂಬಿಸಿಕೊಂಡು ನಿಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು