ಬುಧವಾರ, ನವೆಂಬರ್ 25, 2020
22 °C

PV Web Exclusive: ‘ಮನೆಯನೆಂದೂ ಕಟ್ಟದಿರು... ಅನಂತವಾಗಿರು..’

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಲ್ಲಿ ಮನೆ ಹುಡುಕೋದು ಅಂದರೆ ಸಾಹಸವೇ ಸರಿ– ಗಲ್ಲಿಗೊಂದು ಬ್ರೋಕರ್‌ಗಳಿದ್ದರೂ. ಚಿನ್ನಾರಿ ಮುತ್ತಾ ಸಿನಿಮಾದ ಹಾಡು ನೆನಪಾಗುತ್ತೆ; ‘ಎಷ್ಟೊಂದ್‌ ಜನ ಇಲ್ಲಿ, ಯಾರು ನಮ್ಮೋರು, ಇಷ್ಟೊಂದ್‌ ಮನೆ ಇಲ್ಲಿ, ಯಾವ್ದು ನಮ್ಮನೆ....’

ಈ ಮಹಾನಗರದ ತುಂಬಾ ಕಟ್ಟಡಗಳೇ. ಒಬ್ಬಳೇ ಉಳಿದುಕೊಳ್ಳುವಂಥ ಮನೆ ನನಗೆ ಬೇಕಿತ್ತು. ಹಾಗಾಗಿ ದೊಡ್ಡ ಮನೆ ಏನೂ ಬೇಕಿರಲಿಲ್ಲ. ಅಡುಗೆಮನೆ, ಬಚ್ಚಲಮನೆ, ಒಂದು ಕೋಣೆಯಿರುವಂಥ ಮನೆ.

ಇದಕ್ಕಾಗಿ ಅಲೆದಾಡಿದೆ. ಆದರೆ ನೋಡಿದ ಮನೆಗಳಲ್ಲಿ ಯಾವುದೂ ಹಿಡಿಸಲಿಲ್ಲ. ಯಾವುದೂ ‘ನನ್ನ ಮನೆ. ನನಗೆ ಹೊಂದುವ ಮನೆ’ ಅಂತ ಅನ್ನಿಸಲೇ ಇಲ್ಲ. ಅಡುಗೆಮನೆ, ಬಚ್ಚಲಮನೆ,  ಕೋಣೆಯೂ ಇತ್ತು. ಆದರೂ ಅದು ‘ನನ್ನ ಮನೆ’ ಎಂಬ ಭಾವ ಹುಟ್ಟಲಿಲ್ಲ. ಎಲ್ಲಿ ‘ಮನೆ ಖಾಲಿ ಇದೆ’ ಎಂಬ ಬೋರ್ಡ್‌ ನೇತು ಹಾಕಿರ್ತಾರೋ ಅಲ್ಲಿ ನಿಂತು ವಿಚಾರಿಸುವುದು ನನ್ನ ಕೆಲಸವಾಯಿತು.

ಕೆಲ ಬಡಾವಣೆಗಳಲ್ಲಿ ದೊಡ್ಡ ದೊಡ್ಡ ಮನೆಗಳು. ಅಲ್ಲಿ ಎಲ್ಲರೂ ಶ್ರೀಮಂತರೇ. ಐಷಾರಾಮಿ ಬಂಗಲೆಗಳು. ಇನ್ನು ಕೆಲವು ಏರಿಯಾಗಳಲ್ಲಿ ಒತ್ತೊತ್ತಾಗಿ ಇರುವ ಮನೆಗಳು. ಗೋಡೆಗಳ ನಡುವೆ ಅಂತರವೇ ಇಲ್ಲ ಎನ್ನುವಷ್ಟು! ಇನ್ನೂ ಕೆಲವರಿಗೆ ರಸ್ತೇನೆ ಮನೆ. ಅಲ್ಲೇ ಅವರ ಅಂಗಡಿ. ಅಲ್ಲೇ ಅಡುಗೆಮನೆ, ಬಚ್ಚಲಮನೆ, ಅದೇ ಕೋಣೆ!. ಆದರೆ, ನಾನು ‘ನನ್ನ ಮನೆ’ ಹುಡುಕ್ತಾನೇ ಇದ್ದೆ.

ಈ ಮೂರೂ ರೀತಿಯದ್ದು ಮನೆಗಳೇ. ಕೆಲವರದು ಬಂಗಲೆ; ಹೆಚ್ಚಿನ ಅನುಕೂಲ. ಕೆಲವರದು ಒತೊತ್ತಿಕೊಂಡ ಮನೆ; ಸ್ವಲ್ಪ ಕಡಿಮೆ ಅನುಕೂಲ. ಕೆಲವರದು, ಮೇಲಿನ ಎರಡಕ್ಕೂ ಹೋಲಿಸಿದರೆ ಅನುಕೂಲವೇ ಇರದ ಮನೆಗಳು. ಅನಿವಾರ್ಯವಾಗಿ ಇರಬೇಕಾದಂಥವು. ಮೂರೂ ರೀತಿಯ ಮನೆಗಳಲ್ಲಿ ಜನ ವಾಸವಿರುತ್ತಾರೆ. ಹಾಗಾದರೆ ಮನೆ ಎಂದರೆ ಏನು? ಯಾವುದು ಮನೆ. ಅದರ ಸ್ವರೂಪ ಎಂಥದ್ದಿರಬೇಕು?

ಮನೆಗೆ ಇಂತದ್ದೇ ಸ್ವರೂಪ ಎಂದೇನಿಲ್ಲ (ಸ್ವರೂಪ ನೀಡಿದ್ದು ನಾವೇ ಅಲ್ಲವೇ). ವಿಪರ್ಯಾಸ ಅಂದರೆ, ಸ್ವರೂಪವೇ ಇಲ್ಲದ ಮನೆಗಳಲ್ಲೂ ಜನ ಬದುಕುತ್ತಾರೆ! ಅಂದಮೇಲೆ, ಮನೆ ಎನ್ನುವುದು ಒಂದು ಮನಃಸ್ಥಿತಿ. ಒಲ್ಲದ ಮನಸ್ಸಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರುವುದು ಹಿಂಸೆ. ಸ್ವಾತಂತ್ರ್ಯ ಕಳೆದುಕೊಂಡಂತೆ; ಕಟ್ಟಿ ಹಾಕಿದ ರೀತಿಯ ಭಾವ. ಆದ್ದರಿಂದಲೇ ಅದು ಮನಃಸ್ಥಿತಿ. 

‘ಮನೆ’ ಅಂದರೆ ವಾಸಸ್ಥಳ. ಒಂದು ವಾಸವಿರುವುದಕ್ಕೆ ಮನೆ ಎನ್ನಬಹುದು. ಹೋಟೆಲ್‍ನಲ್ಲೂ ಕೆಲವು ದಿನ ಇರ್ತೀವಿ, ಆದರೂ ಅದು ಮನೆ ಅಗುವುದಿಲ್ಲ. ಕೆಲಸದ ನಿಮಿತ್ತ, ಬೇರೆ ಊರಿನಲ್ಲಿ ಬೇರೆ ಅವರ ಮನೆಯಲ್ಲಿ ವಾಸವಿರಬಹುದು, ಆದರೂ ಅದು ನಮ್ಮ ಮನೆ ಆಗುವುದಿಲ್ಲ. ಹಾಗಾದರೆ, ಕಟ್ಟಡ ಮನೆ ಆಗುವುದು ಅಂದರೆ, ಅದು ಭೌತಿಕ ವಸ್ತು ಯಾ ಮನೆಯ ಸ್ವರೂಪದಿಂದಾಗಿ ಅಲ್ಲ. ಅದು ನಮ್ಮ ಮನಃಸ್ಥಿತಿ ಅಂತಾಯಿತು ಅಲ್ಲವೇ?

ನಮ್ಮ ಮನಸ್ಸು, ಭೌತಿಕ ಕಟ್ಟಡವನ್ನು ಮನೆ ಆಗಿಸುವುದು. ನಮ್ಮ ಬಾಲ್ಯ, ಯೌವ್ವನ, ಸಿಟ್ಟು, ಜಗಳ, ಪ್ರೀತಿ, ಸಲುಗೆ ಹೀಗೆ ಎಲ್ಲವೂ ಮನೆ ಎಂದಾಕ್ಷಣ ಹುಟ್ಟುವ ಭಾವಗಳು. ನಾನು ‘ಮನೆ’ ಹುಡುಕಾಟದಲ್ಲಿ ಇದ್ದೀನಿ. ನನಗೆ ಇನ್ನೂ ಮನೆ ಸಿಕ್ಕಿಲ್ಲ.

ಮನೆ (ಭೌತಿಕ) ಎನ್ನುವಲ್ಲಿ ಸ್ಥಿರತೆ ಇದೆ. ಅದು ಅಚಲವಾದುದು. ಅಲ್ಲಿ ಹೀಗೇ ಎನ್ನುವ ಕಟ್ಟುಪಾಡುಗಳಿವೆ. ಹೀಗೆ ‘ಮನೆ’ಯ ಹಲವಾರು ಅರ್ಥಗಳು ನನ್ನೊಳಗೆ ಸಾಲುಸಾಲಾಗಿ ತೇಲಿ ಬರುತ್ತಿವೆ. ಕಟ್ಟಡವನ್ನು ‘ಮನೆ’ ಆಗಿಸಿಕೊಳ್ಳಬೇಕು ಅಂತ ಹೊರಟ ನಾನು, ಮನೆಯ ಬೇರೆ ಬೇರೆ ಆಯಾಮಗಳು, ಅದರ ಅರ್ಥ ವಿಸ್ತಾರಕ್ಕೆ ಮೆಲ್ಲನೆ ತೆರೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ಆವರಿಸಿಕೊಳ್ಳುತ್ತಿದೆ!       

ವಚನಕಾರರು, ಕವಿಗಳು ಮನೆಯನ್ನು ಬೇರೆ ಬೇರೆ ರೀತಿಯಾಗಿಯೇ ಅರ್ಥೈಸಿದ್ದಾರೆ. ಬಸವಣ್ಣ ಹೇಳುತ್ತಾರೆ, ‘ಮನೆಯಲ್ಲಿ ಮನೆಯೊಡೆಯನಿದ್ದಾನೋ ಇಲ್ಲವೊ/ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ/ ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವಾ.’ ಇಲ್ಲಿ ಮನೆ ಎಂದರೆ ದೇಹ. 

ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ‘ಮನೆಯಿಂದ ಮನೆಗೆ..’ ಕವಿತೆಯಲ್ಲಿ ಮನೆಯನ್ನು ಬೇರೆಯದೇ ಆಗಿ ಗ್ರಹಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಬದಲು ಮಾಡುವ ಬಾಡಿಗೆಮನೆ, ಹೊತ್ತು ಸಾಗಿಸುವ ವಸ್ತುಗಳು, ಬಾಡಿಗೆ ಮನೆಯ ಮಾಲೀಕನ ಕಿರಿಕಿರಿಯಿಂದ ಶುರುವಾಗುವ ಪದ್ಯ ನಂತರದಲ್ಲಿ ಬೇರೆಯದೇ ಸ್ಥಿತಿ ತಲುಪುತ್ತದೆ. ಪದ್ಯದ ಕೊನೆಯಲ್ಲಿ ಅವರು ಹೇಳುತ್ತಾರೆ: ‘...ಮೊದಲ ಮನೆಯಿಂದ ಆದರವಿರದ, ಕದವಿರದ, ಹೆಸರಿರದ, ಇನ್ನೊಂದು ಮನೆಗೆ/ ಹೊಸತು ಹಳೆಯದೆಲ್ಲ ಯಾತ್ರೆಗೆ ಹೊರಟಿದ್ದೇವೆ.... ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ; ಅದೇ ಕಡೆಯ ಮನೆ!/ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ/ಆಗಾಗ ಬೀಸುವುದು ಬಯಲ ಗಾಳಿ.’ ಇದು ಸಾವಿನ ಮನೆ.

ಬಿಎಂಶ್ರೀ ಅವರ ಅನುವಾದದ ‘ಕರುಣಾಳು ಬಾ ಬೆಳೆಕೆ’ (lead kindly light)ನಲ್ಲಿ, ಕವಿ ಹೇಳುತ್ತಾರೆ. ‘... ಇರುಳುಕತ್ತಲೆಯ ಗವಿ ಮನೆ ದೂರ ಕನಿಕರಿಸಿ, ಕೈ ಹಿಡಿದು ನಡೆಸೆನ್ನನ್ನು...’. ಇಲ್ಲಿ, ಮನೆ ಅಂದರೆ ಗಮ್ಯ.

ಹಾಗಾದರೆ, ನನಗೆ ಬೇಕಾಗಿರುವ ಮನೆ? ನಾನು ಏನನ್ನು ಹುಡುಕುತ್ತಿದ್ದೇನೆ ಅಥವಾ ಹುಡುಕಬೇಕು. ನನಗೆ ಕಟ್ಟಡ ಬೇಕೊ ಅಂದರೆ ಸ್ಥಿರತೆಯೋ ಅಥವಾ ಕಟ್ಟಡವನ್ನು ಮನೆಯಾಗಿರುವ ಮನಃಸ್ಥಿತಿಯೋ. ಇಷ್ಟೊಂದು ಮನೆಗಳಲ್ಲಿ ‘ನನ್ನ ಮನೆ’ ಯಾವುದು? ಗೊಂದಲ.

ಕುವೆಂಪು ಅವರ ಅನಿಕೇತನ ಪದ್ಯ ನೆನಪಾಗುತ್ತದೆ. ಬಹುಷ ಇದು ಉತ್ತರವಾಗಬಹುದು ಎನಿಸುತ್ತದೆ. ‘...ಎಲ್ಲಿಯೂ ನಿಲ್ಲದಿರು; ಮನೆಯನೆಂದೂ ಕಟ್ಟದಿರು; ಕೊನೆಯನೆಂದೂ ಮುಟ್ಟದಿರು; ಓ ಅನಂತವಾಗಿರು! ಓ ನನ್ನ ಚೇತನ ಆಗು ನೀ ಅನಿಕೇತನ...’ ಹಾಗಾದರೆ, ಮನೆಯೊಳಗಿದ್ದೂ ಇಲ್ಲದ ಸ್ಥಿತಿಯಲ್ಲಿ ಇರಬೇಕಾ?. ಬಹುಶ: ಇದನ್ನೇ ಕುವೆಂಪು ಹೇಳಹೊರಟಿರುವುದಾ. ಮನೆಯಲ್ಲೇ ಇದ್ದು ಜಂಗಮನಾಗುವುದು. ಅನಂತ ಆಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು