ಗುರುವಾರ , ಜೂನ್ 4, 2020
27 °C

ಕ್ವಾರಂಟೈನ್ ಕ್ವಾಟ್ರಸ್

ವಿದ್ಯಾ ವಿ. ಹಾಲಭಾವಿ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಭೀತಿಯಿಂದಾಗಿ ಈಗ ಎಲ್ಲೆಡೆ ಕೇಳಿಬರುತ್ತಿರುವ ಸಾಮಾಜಿಕ ದೂರ (ಸೋಶಿಯಲ್ ಡಿಸ್ಟೆನ್ಸಿಂಗ್) ಮತ್ತು ಸಂಪರ್ಕ ತಡೆ (ಕ್ವಾರಂಟೈನ್) ಎನ್ನುವ ಪರಿಕಲ್ಪನೆಗಳು ಹೊಸದೇನಲ್ಲ. ಮಧ್ಯಯುಗದಲ್ಲಿ ಏಷ್ಯಾ ಮತ್ತು ಯೂರೋಪ್ ದೇಶಗಳು ಸಿಡುಬು (ಸ್ಮಾಲ್ ಪಾಕ್ಸ್) ಮತ್ತು ಪ್ಲೇಗ್‍ನಂತಹ ಮಾರಣಾಂತಿಕ ಕಾಯಿಲೆಗಳಿಂದ ವಿನಾಶಗೊಂಡಾಗ ವೈದ್ಯರಿಗೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಕುರಿತಾಗಿ ಏನೇನೂ ತಿಳಿದಿರಲಿಲ್ಲ.

ಆದರೆ, ರೋಗದ ಹರಡುವಿಕೆ ತಡೆಗಟ್ಟಲು ಸೋಂಕಿತರನ್ನು ಪ್ರತ್ಯೇಕಿಸಬೇಕು ಎನ್ನುವುದು ಚೆನ್ನಾಗಿ ಗೊತ್ತಿತ್ತು. ಸೋಂಕಿನ ಹರಡುವಿಕೆ ತಡೆಗಟ್ಟಲು ಪ್ರತ್ಯೇಕತೆಯನ್ನು ವಿವರಿಸಲು ಬಳಸುವ ‘ಕ್ವಾಂಟೈನ್’ ಎಂಬ ಪದವು ಲ್ಯಾಟಿನ್ ಪದ ‘ಕ್ವಾರಂಟಾ’ದಿಂದ ಬಂದಿದೆ. ಇದರ ಅರ್ಥ 40. ಏಕೆಂದರೆ ಪ್ರತ್ಯೇಕತೆಯು 40 ದಿನಗಳವರೆಗೆ ಇತ್ತು.

ಸಂಪರ್ಕ ತಡೆಯನ್ನು ಮೊಟ್ಟ ಮೊದಲನೆಯದಾಗಿ ಅಧಿಕೃತವಾಗಿ ಪ್ರಕಟಿಸಿದ್ದು ರಗುಸಾ ಗಣರಾಜ್ಯ (ರಿಪಬ್ಲಿಕ್ ಆಫ್ ರಗುಸಾ). ಈಗಿನ ದಕ್ಷಿಣ ಕೊರಿಯಾದ ಡುಬ್ರೊವ್ನಿಕ್ನ್ ನಗರ. ಆಡ್ರಿಯಾಟಿಕ್ ಕರಾವಳಿಯಲ್ಲಿದ್ದ ರಗುಸಾ ಗಣರಾಜ್ಯವು ಸಕ್ರಿಯ ಬಂದರನ್ನು ಹೊಂದಿದ್ದು ಅದರ ಮೂಲಕ ಪ್ರಪಂಚದಾದ್ಯಂತ ಇರುವ ಜನರು ಮತ್ತು ಸರಕುಗಳು ಪ್ರವೇಶಿಸುತ್ತಿದ್ದವು. 14ನೇ ಶತಮಾನದಲ್ಲಿ ಮೆಡಿಟರೇನಿಯನ್ ಮತ್ತು ಬಾಲ್ಕನ್ ದೇಶಗಳೆಲ್ಲಡೆ ಪ್ಲೇಗ್‍ ರೋಗವು ಭುಗಿಲೆದ್ದಾಗ, ಗ್ರೇಟ್ ಕೌನ್ಸಿಲ್ ಆಫ್ ರಿಪಬ್ಲಿಕ್ ಒಂದು ಶಾಸನವನ್ನು ಅಂಗೀಕರಿಸಿತು. ಅದರ ಪ್ರಕಾರವಾಗಿ ಪ್ಲೇಗ್ ಪೀಡಿತ ಪ್ರದೇಶಗಳಿಂದ ಬರುವ ಎಲ್ಲಾ ವ್ಯಾಪಾರಿಗಳು ನಾವಿಕರು ಮತ್ತು ಸರಕುಗಳೆಲ್ಲವೂ ಸುಮಾರು 40 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಕಳೆಯಬೇಕಿತ್ತು. ಸಂಪರ್ಕ ತಡೆ ಅವಧಿ ಮುಗಿದ ನಂತರ, ವ್ಯಕ್ತಿಯು ಆರೋಗ್ಯವಂತನೆಂದು ಸಾಬೀತಾದರೆ ಮಾತ್ರ ಆತನಿಗೆ ನಗರ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು.

ಡುಬ್ರೊವ್ನಿಕ್ನ್ ಗೋಡೆಗಳಿಂದ ಸ್ವಲ್ಪ ದೂರದಲ್ಲಿ ಮರ್ಕನ್, ಬೊಬರಾ ಮತ್ತು ಸುಪೆಟಾರ್ ಎಂಬ ಮೂರು ದ್ವೀಪಗಳನ್ನು ಜನವಸತಿಗಾಗಿ ಗೊತ್ತುಪಡಿಸಲಾಯಿತು. ಜನರು ತಮ್ಮ ಸಂಪರ್ಕ ತಡೆ ಅವಧಿಯನ್ನು ಇಲ್ಲಿಯೇ ಕಳೆಯಬೇಕಿತ್ತು. ಆರಂಭದಲ್ಲಿ ಈ ದ್ವೀಪಗಳಲ್ಲಿ ಯಾವುದೇ ಮನೆಗಳು ಇರಲಿಲ್ಲ. ತಲೆಯ ಮೇಲೆ ಚಾವಣಿಯಿಲ್ಲದೆ ಜನರ ಸಂಕಷ್ಟಗಳು ರೋಗದಷ್ಟೇ ಯಾತನಾಮಯವಾಗಿದ್ದವು. ಅಧಿಕಾರಿಗಳು ಇದನ್ನು ಅರಿತುಕೊಂಡರು. ಕೆಲವು ಮರದ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದರು.


ಕ್ವಾರಂಟೈನ್ ಕ್ವಾಟ್ರಸ್‌

15ನೇ ಶತಮಾನದ ಹೊತ್ತಿಗೆ ಕ್ವಾರಂಟೈನ್ ಕ್ವಾಟ್ರಸ್‍ಗಳು ಒಬ್ಬ ಪಾದ್ರಿ, ವೈದ್ಯರು, ಕ್ಷೌರಿಕ, ಕಾವಲುಗಾರರು ಮತ್ತು ಸ್ಮಶಾನ ತೋಡುವವರನ್ನು ಹೊಂದಿರುವ ಸಂಕೀರ್ಣ ಸಂಸ್ಥೆಗಳಾಗಿ ಮಾರ್ಪಟ್ಟವು. ಜನರು ಇಲ್ಲಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಇದನ್ನು ಎತ್ತರದ ಗೋಡೆಯಿಂದ ಸುತ್ತುವರಿಯಲಾಗಿತ್ತು.

1397ರಲ್ಲಿ ಗ್ರೇಟ್ ಕೌನ್ಸಿಲ್ ಹೊಸ ಸುಗ್ರಿವಾಜ್ಞೆಯನ್ನು ಅಂಗೀಕರಿಸಿತು. ಈ ಮೂಲಕ ಸಂಪರ್ಕ ತಡೆಯನ್ನು ಹೆಚ್ಚು ಸಂಘಟಿತಗೊಳಿಸಲಾಯಿತು. ಕ್ವಾರಂಟೈನ್ ನಿಬಂಧನೆಗಳ ಅನುಷ್ಠಾನ ಮತ್ತು ಅನುಸರಣೆಯ ಮೇಲ್ವಿಚಾರಣೆಗಾಗಿ ಮೂವರು ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಯಿತು. ನಿಯಮಗಳನ್ನು ಉಲ್ಲಂಘಿಸಿದವರಿಗೆ ಹಾಗೂ ಪಾಲಿಸದವರಿಗೆ ಜೈಲುಶಿಕ್ಷೆ ವಿಧಿಸಲಾಗುತ್ತಿತ್ತು. ಈ ತೀರ್ಪಿನಲ್ಲಿ ‘ಲಾಕ್ ಡೌನ್’ ಅನ್ನು ಪರಿಚಯಿಸಲಾಯಿತು. ಅಂದರೆ ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಯವರೆಗೆ ಗಣರಾಜ್ಯಕ್ಕೆ ಸರಕುಗಳು ಪ್ರವೇಶಿಸುವುದನ್ನು ನಿಷೇಧಿಸುವುದು. ಇದು ಸರಕುಗಳ ಹರಿವನ್ನು ನಿಧಾನಗೊಳಿಸಿ, ನಗರದ ಜನರ ಜೀವನೋಪಾಯದ ಮೂಲವಾದ ವ್ಯಾಪಾರದ ಮೇಲೆ ಋಣಾತ್ಮಕ ಪರಿಣಾಮ ಬೀರಿತು. ಆದರೂ, ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸುವುದು ತಮ್ಮ ನೈತಿಕ ಕರ್ತವ್ಯವೆಂದು ಅಧಿಕಾರಿಗಳು ಭಾವಿಸಿದ್ದರು.

ಎಲ್ಲಾ ಕ್ರಮಗಳ ಹೊರತಾಗಿಯೂ ಡುಬ್ರೊವ್ನಿಕ್ನ್ 1526ರಲ್ಲಿ ಭೀಕರ ಪ್ಲೇಗ್‍ಗೆ ತುತ್ತಾಯಿತು. ಇದು ಆರು ತಿಂಗಳ ಕಾಲ ನಗರವನ್ನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ತಳ್ಳಿತು. ಡುಬ್ರೊವ್ನಿಕ್ನ್ ಸೋಂಕಿಗೆ ಒಳಗಾಗಿ ವಾಸಿಸಲು ಯೋಗ್ಯವಿರದ ಕಾರಣ ಸರ್ಕಾರವು ‘ಗ್ರೂಜ್’ಗೆ ಸ್ಥಳಾಂತರಗೊಂಡಿತು. ಆರು ವರ್ಷಗಳ ನಂತರ ಡುಬ್ರೊವ್ನಿಕ್ನ್‌ನಿಂದ 600 ಮೀಟರ್ ದೂರದಲ್ಲಿರುವ ‘ಲೋಕ್ರಮ್’ ಎಂಬ ದ್ವೀಪದಲ್ಲಿ ದೊಡ್ಡ ಲಾಜರೆಟ್ಟೊ (ಸಂಪರ್ಕ ತಡೆ ವಾಸ ಸೌಲಭ್ಯಗಳು) ನಿರ್ಮಾಣ ಪ್ರಾರಂಭವಾಯಿತು.

1590ರಲ್ಲಿ ಡುಬ್ರೊವ್ನಿಕ್ನ್‌ನಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಫ್ಲೆಸಿಯಾದಲ್ಲಿ ಮತ್ತೊಂದು ಲಾಜರೆಟ್ಟೊವನ್ನು ನಿರ್ಮಿಸಲಾಯಿತು. ಇದು 1642ರಲ್ಲಿ ಪೂರ್ಣಗೊಂಡಿತು. ಇದು 10 ಬಹುಮಹಡಿ ಕಟ್ಟಡಗಳನ್ನು ಹೊಂದಿದ್ದು ಪ್ರತ್ಯೇಕ ಅಂಗಳಗಳು ಮತ್ತು ಕಾವಲುಗಾರರೊಂದಿಗೆ ತನ್ನದೇ ಆದ ಒಳಚರಂಡಿ ವ್ಯವಸ್ಥೆ ಹೊಂದಿತ್ತು. ನಗರಕ್ಕೆ ಪ್ರವೇಶಿಸಿದ ಎಲ್ಲಾ ಸರಕುಗಳನ್ನು ಧೂಪ ಹಾಕಿ ಶುದ್ಧೀಕರಿಸಿ ಕೆಲವುಗಳನ್ನು ನೆನೆಸಿ ಒಳಕ್ಕೆ ತರಲಾಯಿತು (ಆದರೆ ಅಜ್ಞಾನದಲ್ಲಿ ರೋಗದ ಪ್ರಾಥಮಿಕ ವಾಹಕಗಳಾದ ಇಲಿಗಳು ಮತ್ತು ಚಿಗಟಗಳತ್ತ ಗಮನಹರಿಸಲಿಲ್ಲ. ಇದಕ್ಕಾಗಿ ಮುಂದೆ ಭಾರೀ ಬೆಲೆ ತೆರಬೇಕಾಯ್ತು). ಹೊಚ್ಚ ಹೊಸದಾದ ಬಳಕೆಯಾಗದ ಸರಕುಗಳನ್ನು ಮಾತ್ರ ನಗರಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಬಳಕೆಯಾದ ವಸ್ತು, ಹಳೆ ಬಟ್ಟೆ ಇತ್ಯಾದಿಗಳನ್ನು ಅದರ ಮಾಲೀಕರ ಸಮೇತ ನೇರವಾಗಿ ಲಾಜರೆಟ್ಟೊದಲ್ಲಿ ಸಂಪರ್ಕ ತಡೆ ಮಾಡಲು ಇರಿಸಲಾಗುತ್ತಿತ್ತು.

ಲಾಜರೆಟ್ಟೊ ನಿರ್ಮಾಣದ ನಂತರ ಪ್ಲೇಗ್ ಕಾಯಿಲೆಯ ನಿದರ್ಶನಗಳು ಗಣನೀಯವಾಗಿ ಕುಸಿಯಿತು ಎಂದು ರಗುಸಾ ಜನರು ಸಂತಸಪಟ್ಟರು. ಪ್ರತ್ಯೇಕತೆಯು (ಐಸೋಲೇಷನ್) ಬಹುಶಃ ಮಧ್ಯಕಾಲೀನ ಔಷಧದ ಬಹುದೊಡ್ಡ ಸಾಧನೆಯಾಗಿದೆ. ಡುಬ್ರೊವ್ನಿಕ್ನ್ ಮತ್ತು ಕ್ರೋಷಿಯಾದ ವೈದ್ಯಕೀಯ ಪರಂಪರೆಯಲ್ಲಿ ‘ಡುಬ್ರೊವ್ನಿಕ್ನ್ ಸಂಪರ್ಕ ತಡೆ’ಯು ಒಂದು ಪ್ರಮುಖ ಬೆಳವಣಿಗೆಯಾಗಿದೆ. ಫ್ಲೆಸಿಯಾದಲ್ಲಿನ ಲಾಜರೆಟ್ಟೊ ಇಂದಿಗೂ ಅಸ್ತಿತ್ವದಲ್ಲಿದೆ. ಅದನ್ನು ವಿಹಾರ, ಕ್ರೀಡೆ, ಮನೋರಂಜನೆಗೆ ಇಂದಿಗೂ ಬಳಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು