ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಘನತೆಗಿಂತ ಮಿಗಿಲಾದುದು ಬೇರೇನಿದೆ?

Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ಕೋರ್ಟ್‌ನ ಘನತೆಯನ್ನು ಕಾಪಾಡುವ’ ಮತ್ತು ‘ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ರಕ್ಷಿಸುವ ವಾದಗಳು ಮುಖಾಮುಖಿಯಾದಾಗ ಕೊನೆಗೆ ನಿಲ್ಲುವುದು ಕೋರ್ಟ್‌ನ ಘನತೆಯನ್ನು ಕಾಪಾಡುವ ವಾದವೇ.

ಪ್ರಶಾಂತ್‌ ಭೂಷಣ್‌ ಪ್ರಕರಣದಲ್ಲಿ ನಿಜವಾಗಿ ಚರ್ಚೆ ಆಗಬೇಕಿರುವುದು ಸುಪ್ರೀಂ ಕೋರ್ಟ್‌ನ ಮೇಲೆ ಈ ಪ್ರಕರಣ ಹೇಗೆ ಪರಿಣಾಮ ಬೀರಿದೆ ಹಾಗೂ ಮುಂದಿನ ದಿನಗಳಲ್ಲೂ ಬೀರಲಿದೆ ಎಂಬ ವಿಷಯವಾಗಿ. ಆದರೆ, ಸದ್ಯ ನಡೆದಿರುವ ಚರ್ಚೆಗಳೆಲ್ಲ ವಾಕ್‌ ಸ್ವಾತಂತ್ರ್ಯ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಪ್ರಶ್ನೆಗಳ ಸುತ್ತಲೇ ಸುತ್ತುತ್ತಿವೆ.

ಸುಪ್ರೀಂ ಕೋರ್ಟ್‌ಗೆ ಈ ನೆಲದ ಕಾನೂನುಗಳ ಕುರಿತು ತೀರ್ಮಾನಿಸುವ ಎಲ್ಲ ಸಾಂವಿಧಾನಿಕ ಅಧಿಕಾರ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆಲದ ಕಾನೂನು ಎನ್ನುವುದು ಅನಿಯಂತ್ರಿತವಾಗಿ ಇರುವುದಾಗಲಿ, ತಾರತಮ್ಯ ಇಲ್ಲವೆ ಅನ್ಯಾಯದಿಂದ ಕೂಡಿರುವುದಾಗಲಿ ಅಲ್ಲ ಎನ್ನುವುದು ‍ಪ್ರತಿಯೊಬ್ಬರ ಸಾಮಾನ್ಯ ನಂಬಿಕೆ. ಭಾರತೀಯ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನವಾಗಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿರುವುದು ನಿಜ. ಇಂದಿನ ಜಗತ್ತಿನಲ್ಲಿ ಆ ಸ್ವಾತಂತ್ರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಅಭಿಮತಗಳು ಇಲ್ಲವೆ ಹೇಳಿಕೆಗಳ ಮೂಲಕವೂ ಅಭಿವ್ಯಕ್ತಗೊಳ್ಳುತ್ತಿದ್ದು, ಅಂತಹ ಅಭಿವ್ಯಕ್ತಿಯು ಅರೆಕ್ಷಣದಲ್ಲಿ ಜಗತ್ತನ್ನೇ ತಲುಪುತ್ತಿದೆ.

ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿಯ ತಾಣಗಳು ಎಂದು ಮೊದಲೇ ಹೇಳಿದೆನಲ್ಲ? ಪ್ರಸಕ್ತ ಪ್ರಕರಣಕ್ಕೆ ವಕೀಲರೊಬ್ಬರು ಟ್ವೀಟ್‌ ಮೂಲಕ ಮಾಡಿದ ಅಂತಹ ಅಭಿವ್ಯಕ್ತಿಯೇ ಕಾರಣ. ಉನ್ನತ ಕೋರ್ಟ್‌ಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಎರಡೂ ಉನ್ನತ ಸ್ತರದಲ್ಲೇ ಇರಬೇಕು ಎಂಬ ವಿಷಯವಾಗಿ ಅವರು ಹೋರಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯವೇ. ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಪ್ರಜೆಗಳ ಹಕ್ಕೂ ಹೌದು. ಅಲ್ಲದೆ, ನ್ಯಾಯ ವ್ಯವಸ್ಥೆಯು ಜನಸಾಮಾನ್ಯರ ಇಂತಹ ಪರಿಶೀಲನೆಗೆ ಒಳಗಾಗುವುದು ಅಪೇಕ್ಷಣೀಯ ಕೂಡ.

ಕೋರ್ಟ್‌ಗಳು ಹಾಗೂ ನ್ಯಾಯ ವ್ಯವಸ್ಥೆಯ ಆಡಳಿತದ ಘನತೆಯನ್ನು ಕಾಪಾಡುವ ಸಲುವಾಗಿ ಸಾಕಷ್ಟು ಚಿಂತಿಸಿಯೇ, ಸಂವಿಧಾನದಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸಂವಿಧಾನದ 129ನೇ ವಿಧಿಯಲ್ಲಿ ಉಲ್ಲೇಖಿಸಲಾದ ಸುಪ್ರೀಂ ಕೋರ್ಟ್‌ನ ಅಧಿಕಾರಕ್ಕೆ ಅನುಗುಣವಾಗಿಯೇ ನ್ಯಾಯಾಂಗ ನಿಂದನೆ ಕಾಯ್ದೆ–1971 ರೂಪಿತವಾಗಿದೆ.

ಇತಿಹಾಸದ ಉದ್ದಕ್ಕೂ ‘ರಾಜ ಎಂದಿಗೂ ತಪ್ಪು ಮಾಡುವುದಿಲ್ಲ’ ಎನ್ನುವ ಪರಿಕಲ್ಪನೆಯ ಆಧಾರದ ಮೇಲೆಯೇ ನ್ಯಾಯ ವ್ಯವಸ್ಥೆಯನ್ನು ಟೀಕಿಸುವವರು ಶಿಕ್ಷೆಗೆ ಒಳಗಾಗಬೇಕು ಎನ್ನುವ ಕಾಯ್ದೆಗಳು ರೂಪುಗೊಳ್ಳುತ್ತಾ ಬಂದಿದ್ದು. ನಂತರದ ದಿನಗಳಲ್ಲಿ ಆ ಹಕ್ಕು ಕೋರ್ಟ್‌ಗಳಿಗೆ ವಿಸ್ತರಣೆಯಾಗಿದೆ. ಆದರೆ, ಕೋರ್ಟ್‌ಗಳು ತಾವೂ ತಪ್ಪು ಮಾಡಿರುವುದನ್ನು ಹಲವು ಬಾರಿ ಒಪ್ಪಿಕೊಂಡಿವೆ; ಮಾತ್ರವಲ್ಲ, ತೀರ್ಪನ್ನು ಮರುಪರಿಶೀಲನೆಗೂ ಒಳಪಡಿಸಿವೆ. ಕೋರ್ಟ್‌ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದರೆ ಇಲ್ಲವೆ ಅದರ ಹೆಸರಿಗೆ ಅಪಚಾರ ಬಗೆಯಲು ಯತ್ನಿಸಿದರೆ ಅಥವಾ ಇಂಥದ್ದೇ ಇತರ ಸಂದರ್ಭಗಳಲ್ಲಿ ನ್ಯಾಯಾಂಗ ನಿಂದನೆಯ ‘ದಂಡ’ವನ್ನು ಪ್ರಯೋಗಿಸಬಹುದು.

ಲಾರ್ಡ್‌ ಡೆನಿಂಗ್‌ ಅವರ ಮಾತು ಇಲ್ಲಿ ಉಲ್ಲೇಖನೀಯ. ‘ಕೋರ್ಟ್‌ಗಳು ಹಾಗೂ ನ್ಯಾಯಮೂರ್ತಿಗಳ ವಿರುದ್ಧದ ಟೀಕೆಯೂ ವಾಕ್‌ ಸ್ವಾತಂತ್ರ್ಯವೇ ಆಗಿದೆ. ಆದರೆ, ನ್ಯಾಯಮೂರ್ತಿಗಳು ತಮ್ಮ ಸಮರ್ಥನೆಯನ್ನು ತಮ್ಮ ನಡವಳಿಕೆಯ ಮೂಲಕವೇ ತೋರಬೇಕು’ ಎಂದು ಅವರು ಹೇಳಿದ್ದರು. ಅಂದರೆ ನ್ಯಾಯಾಂಗ ನಿಂದನೆಯ ಅಸ್ತ್ರವನ್ನು ನ್ಯಾಯಮೂರ್ತಿಗಳ ರಕ್ಷಣೆಗೆ ಬಳಸಬಾರದು ಎನ್ನುವುದು ಡೆನಿಂಗ್‌ ಅವರ ನಂಬಿಕೆಯಾಗಿತ್ತು. ಆದರೆ, ಪ್ರಸಕ್ತ ಪ್ರಕರಣದಲ್ಲಿ ಆ ಆಶಯದ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಭೂಷಣ್‌ ಅವರು ಚಳವಳಿಗಳ ಜತೆ ಗುರುತಿಸಿಕೊಂಡ ವಕೀಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಹಲವು ಎನ್‌ಜಿಒಗಳ ಜತೆಯಲ್ಲೂ ನಿಂತವರು. ಲೋಕಪಾಲ್‌ ಆಂದೋಲನದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡವರು. 1980ರ ದಶಕದಿಂದಲೂ ನ್ಯಾಯಾಂಗ ವ್ಯವಸ್ಥೆಯ ಉತ್ತರದಾಯಿತ್ವಕ್ಕಾಗಿ ಕೆಲಸ ಮಾಡುತ್ತಾ ಬಂದವರು.

ಮೇಲಿನ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಂಡಾಗ ಭೂಷಣ್‌ ಅವರ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಎಂತಹ ಪರಿಣಾಮವನ್ನು ಬೀರಬಲ್ಲದು? ಅಟಾರ್ನಿ ಜನರಲ್‌ ಅವರ ಶಿಫಾರಸಿನ ಮೇರೆಗೆ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ಕಾಯ್ದೆ ಹೇಳಿದರೂ ನ್ಯಾಯಮೂರ್ತಿಗಳು ಪ್ರಕರಣವನ್ನು ಸ್ವಯಂ ದಾಖಲಿಸಿಕೊಂಡರು. ಭೂಷಣ್‌ ಅವರಿಗೆ ಶಿಕ್ಷೆ ನೀಡಬಾರದು ಎಂದೂ ಅಟಾರ್ನಿ ಜನರಲ್‌ ಅವರು ಕೇಳಿಕೊಂಡಿದ್ದರು. ಹೀಗಿರುವಾಗ ಕೋರ್ಟ್‌, ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು ಅಷ್ಟೊಂದು ಸಮಂಜಸ ಎನಿಸುವುದಿಲ್ಲ. ಹಾಗೆಯೇ ಭೂಷಣ್‌ ಅವರು ಟ್ವೀಟ್‌ಗಳ ಮೂಲಕ ನೀಡಿದ ಹೇಳಿಕೆ ಕೂಡ ನ್ಯಾಯಯುತವಲ್ಲ ಎಂಬುದು ಕೂಡ ಸ್ಪಷ್ಟ.

ಭೂಷಣ್‌ ಅವರು ದೇಶದ ಮುಕ್ತ ಪ್ರಜೆಯಷ್ಟೇ ಅಲ್ಲ; ಸುಪ್ರೀಂ ಕೋರ್ಟ್‌ನ ವಕೀಲರೂ ಹೌದು. ಹೀಗಾಗಿ ಅವರೊಬ್ಬ ಕೋರ್ಟ್‌ನ ಅಧಿಕಾರಿಯೂ ಆಗಿದ್ದಾರೆ. ಆ ಸಂಸ್ಥೆಗೆ ಕೆಟ್ಟ ಹೆಸರು ಅಂಟಿಕೊಳ್ಳದಂತೆ ನಡೆದುಕೊಳ್ಳುವ ಹೊಣೆಗಾರಿಕೆ ಅವರ ಮೇಲೆಯೂ ಇದೆ. ‘ನನ್ನ ಟ್ವೀಟ್‌ಗಳು ರಚನಾತ್ಮಕ ಟೀಕೆಗಳಾಗಿದ್ದವು’ ಎನ್ನುವ ಅವರ ವಾದ, ಸುಲಭವಾಗಿ ತಳ್ಳಿಹಾಕುವಂತಿದೆ. ಭೂಷಣ್‌ ಅವರ ದಶಕಗಳಷ್ಟು ಹಳೆಯದಾದ ನ್ಯಾಯಾಂಗ ಸಂಬಂಧವು ವಿವಾದಗಳಿಂದಲೇ ಕೂಡಿದೆ. ವೈದ್ಯಕೀಯ ಕಾಲೇಜು ಲಂಚದ ಹಗರಣ, ಸಿಪಿಐಎಲ್‌, ನ್ಯಾಯಮೂರ್ತಿ ಲೋಯಾ ಸಾವಿನ ವಿವಾದ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವರು ಮಾಡಿದ ಆರೋಪಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯನ್ನು ಕೋರ್ಟ್‌ ಗಮನಿಸಿತ್ತು. ಕೆಲವು ಪ್ರಕರಣಗಳಿಗೆ ಸಂಬಂಧಿಸಿ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ವೆಚ್ಚ ಭರಿಸಲು ಸೂಚಿಸಿದ್ದ ಕೋರ್ಟ್‌, ಇನ್ನು ಕೆಲವು ಪ್ರಕರಣಗಳಲ್ಲಿ ಅವರನ್ನು ತರಾಟೆಗೂ ತೆಗೆದುಕೊಂಡಿತ್ತು.

ಭೂಷಣ್‌ ಅವರು ಪ್ರಸಕ್ತ ಪ್ರಕರಣದಲ್ಲಿ ಕೋರ್ಟ್‌ನ ತೀರ್ಪನ್ನು ಒಪ್ಪುವುದಿಲ್ಲವೆಂದು ಹೇಳಿ, ಕ್ಷಮೆ ಕೇಳಲು ನಿರಾಕರಿಸಿದರು. ‘ನನಗೆ ಯಾವುದೇ ಕರುಣೆ ತೋರಬೇಕಿಲ್ಲ. ನನ್ನ ವಿಷಯವಾಗಿ ಹೃದಯ ವೈಶಾಲ್ಯ ಮೆರೆಯುವಂತೆಯೂ ನಾನು ಬೇಡುವುದಿಲ್ಲ’ ಎಂದು ಗಾಂಧೀಜಿಯ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು. ಆದರೆ, ಇಲ್ಲಿನ ದ್ವಂದ್ವ ಏನೆಂದರೆ, ಗಾಂಧೀಜಿಯವರು ದಂಡ ಭರಿಸದೆ, ಪರಿಣಾಮಗಳನ್ನು ಎದುರಿಸಿದರು. ಭೂಷಣ್‌ ಅವರು ದಂಡವನ್ನು ಪಾವತಿಸುವ ಮೂಲಕ ಕೋರ್ಟ್‌ನ ತೀರ್ಪನ್ನು ಕೊನೆಗೆ ಒಪ್ಪಿಕೊಂಡರು.

ಕೋರ್ಟ್‌ನ ಹಿರಿಯ ವಕೀಲರ ಇಂತಹದ್ದೇ ಇನ್ನೊಂದು ನ್ಯಾಯಾಂಗ ನಿಂದನೆ ಪ್ರಕರಣವೆಂದರೆ ಅದು ಗುಜರಾತ್‌ ಹೈಕೋರ್ಟ್‌ನ ಯತಿನ್‌ ಓಝಾ ಅವರದು. ಹೈಕೋರ್ಟ್‌ ಅನ್ನು ‘ಜೂಜಿನ ಬಿಲ’ ಎಂದು ಕರೆದಿದ್ದ ಅವರು, ‘ಹೈಕೋರ್ಟ್‌ನ ನೋಂದಣಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಆರೋಪಿಸಿದ್ದರು. ನ್ಯಾಯಾಂಗ ನಿಂದನೆ ತಪ್ಪಿಗಾಗಿ ಅವರು ಹಿರಿಯ ವಕೀಲನ ಸ್ಥಾನಮಾನವನ್ನು ಕಳೆದುಕೊಳ್ಳಬೇಕಾಯಿತು. ಕೋರ್ಟ್‌ ಈ ಪ್ರಕರಣವನ್ನೂ ಸ್ವಯಂ ದಾಖಲು ಮಾಡಿಕೊಂಡಿತ್ತು. ಓಝಾ, ಕೋರ್ಟ್‌ನ ಬೇಷರತ್‌ ಕ್ಷಮೆ ಯಾಚಿಸಿದ್ದರು.

‘ಕೋರ್ಟ್‌ನ ಘನತೆಯನ್ನು ಕಾಪಾಡುವ’ ಮತ್ತು ‘ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ರಕ್ಷಿಸುವ ವಾದಗಳು ಮುಖಾಮುಖಿಯಾದಾಗ ಕೊನೆಗೆ ನಿಲ್ಲುವುದು ಕೋರ್ಟ್‌ನ ಘನತೆಯನ್ನು ಕಾಪಾಡುವ ವಾದವೇ. ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ನ್ಯಾಯಾಂಗ ವ್ಯವಸ್ಥೆಗೆ ಅಪಚಾರ ಬಗೆಯುವಂತಿಲ್ಲ. ಭಾರತೀಯ ಸಂವಿಧಾನದ 19 (1) (ಎ) ವಿಧಿ ಕೂಡ ಕೋರ್ಟ್‌ಗೆ ಆ ಹಕ್ಕನ್ನು ಕೊಟ್ಟಿದೆ.

ಕೋರ್ಟ್‌ನ ಅಧಿಕಾರಿಯಾದವನು ನ್ಯಾಯ ವ್ಯವಸ್ಥೆಯ ಘನತೆಯನ್ನು ಕಾಪಾಡುವ ವಿಷಯದಲ್ಲಿ ಜನಸಾಮಾನ್ಯರಿಗಿಂತ ಹೆಚ್ಚಿನ ಕಾಳಜಿ ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದುದು ಅತ್ಯಗತ್ಯ. ಆದರೆ, ಅಂಥವರಿಂದಲೇ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಆಹ್ವಾನಿಸುವಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಇನ್ನೂ ಹಸಿರಾಗಿರುವ ಅಂತಹದ್ದೊಂದು ಪ್ರಕರಣವೆಂದರೆ ನ್ಯಾಯಮೂರ್ತಿ ಕಾಟ್ಜು ಅವರದು. ಕೋರ್ಟ್‌ನ ತೀರ್ಪನ್ನು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಟೀಕಿಸಿದ್ದ ಅವರು, ಅದನ್ನು ಮರುವಿಮರ್ಶೆಗೆ ಒಳಪಡಿಸುವಂತೆ ಆಗ್ರಹಿಸಿದ್ದರು. ನ್ಯಾಯಾಂಗ ನಿಂದನೆಯ ವಿಧಿ 5ರಲ್ಲಿ ರಚನಾತ್ಮಕವಾದ ವಿಮರ್ಶೆಯು ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ನ್ಯಾಯಾಂಗ ನಿಂದನೆಯ ಹೆಸರಿನಲ್ಲಿ ಶಿಕ್ಷೆ ವಿಧಿಸುವ ಕುರಿತು ಕಾಯ್ದೆಯಲ್ಲಿ ಸ್ಪಷ್ಟ ವ್ಯಾಖ್ಯಾನವಿದ್ದು, ಕೋರ್ಟ್‌ಗಳಿಗೆ ಕೆಲವು ಮಿತಿಗಳನ್ನೂ ವಿಧಿಸಲಾಗಿದೆ. ಹಾಗಿದ್ದರೂ ಈ ಅಸ್ತ್ರ ಬಳಕೆ ಆಗುತ್ತಲೇ ಇದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಅಸಮಂಜಸವಾಗಿಯೂ ಬಳಕೆಯಾಗಿದೆ.

ನ್ಯಾಯಾಂಗ ನಿಂದನೆ ಕಾಯ್ದೆಯ ಅಡಿ ಇದುವರೆಗೆ ಗರಿಷ್ಠ ಶಿಕ್ಷೆ ಅನುಭವಿಸಿದವರು, ತಪ್ಪಿತಸ್ಥ ಎಂದು ಕೋರ್ಟ್‌ ತೀರ್ಪು ನೀಡಿದಾಗ ಇನ್ನೂ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಕರ್ಣನ್‌ ಅವರು. ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳಿದ್ದ ಪೀಠ ಅವರಿಗೆ ಶಿಕ್ಷೆ ವಿಧಿಸಿತ್ತು. ಅವರ ನಡವಳಿಕೆ ಹಾಗೂ ಪದ ಬಳಕೆ ಹೇಗಿತ್ತೆಂದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಲ್ಲಿ ನ್ಯಾಯಮೂರ್ತಿಗಳ (ರಕ್ಷಣಾ) ಕಾಯ್ದೆ–1985 ಕೂಡ ಅವರ ಆಸರೆಗೆ ಬರಲಿಲ್ಲ.

ನ್ಯಾಯಾಂಗ ವ್ಯವಸ್ಥೆಯ ಎಲ್ಲ ಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವಲ್ಲಿ ನ್ಯಾಯ ವ್ಯವಸ್ಥೆ ಹಾಗೂ ಅದರ ಸಂಸ್ಥೆಗಳ ಘನತೆ ಅಡಗಿದೆ. ಸುಪ್ರೀಂ ಕೋರ್ಟ್‌ ಏನೂ ‘ಈಟಿ ಚುಚ್ಚಿಸಿಕೊಳ್ಳುವ ರಾಷ್ಟ್ರೀಯ ಹಲಗೆಯಲ್ಲ’ (national dartboard) ಎಂದು ಹರೀಶ್‌ ಸಾಳ್ವೆ ಅವರು ಹೇಳಿರುವುದು ಸರಿಯಾಗಿಯೇ ಇದೆ. ಸಾಮಾಜಿಕ ಜಾಲತಾಣಗಳಿಗೆ ಸದ್ಯ ಸರಿಯಾದ ನಿಯಂತ್ರಣಗಳು ಇಲ್ಲ. ಇದರಿಂದ ಅಪಾಯದ ಸಾಧ್ಯತೆಯೇ ಹೆಚ್ಚು. ಅಲ್ಲಿ ಮಾನಹಾನಿಕರವಾದ ಟ್ವೀಟ್‌ಗಳು, ಪೋಸ್ಟ್‌ಗಳು, ವೈಯಕ್ತಿಕ ದಾಳಿಗಳು ಮಾಮೂಲಿಯಾಗಿಬಿಟ್ಟಿವೆ. ಸಾಮಾಜಿಕ ಜಾಲತಾಣ ವೇದಿಕೆಗಳು ಅಂತಹ ಟ್ವೀಟ್‌, ಪೋಸ್ಟ್‌ಗಳನ್ನು ಅಳಿಸಿ ಹಾಕುವ ಹಾಗೂ ಬರೆದವರ ಖಾತೆಗಳನ್ನು ಸ್ಥಗಿತಗೊಳಿಸುವ ನೀತಿ ಹೊಂದಿವೆಯಾದರೂ, ವೈಯಕ್ತಿಕ ಹೊಣೆಗಾರಿಕೆಯನ್ನು ಯಾರೂ ಮರೆಯುವಂತಿಲ್ಲ.

ನಮ್ಮ ಸಮಾಜ ‘ಹಕ್ಕು’ಗಳ ವಿಷಯವಾಗಿ ಸಿಕ್ಕಾಪಟ್ಟೆ ಗಮನ ಕೇಂದ್ರೀಕರಿಸಿದೆ. ಈಗ ‘ಕರ್ತವ್ಯ’ಗಳ ಕುರಿತು ಚಿಂತಿಸುವ ಸಮಯವೂ ಬಂದಿದೆ. ಈ ಬದಲಾವಣೆಯು ‘ಹೊಸ ಭಾರತ’ಕ್ಕೆ ನಾಂದಿ ಹಾಡಬಹುದು. ಕೋರ್ಟ್‌ನ ಕಾರಿಡಾರ್‌ಗಳಲ್ಲಿ ಚಳವಳಿಗಾರರಾಗಿಯೂ ಓಡಾಡುವ ವಕೀಲರಿಗೆ ಕಠಿಣ ಸಂದೇಶ ನೀಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಈ ತೀರ್ಪಿಗೆ ಬಂದಿರಬಹುದು. ಕೋರ್ಟ್‌ನ ಅಧಿಕಾರಿಗಳಾಗಿರುವ ವಕೀಲರಿಗೆ ಅದರ ಘನತೆಯನ್ನು ಕಾಯುವುದು ಅವರ ಉಳಿದೆಲ್ಲ ‘ಕರ್ತವ್ಯ’ಗಳಿಗಿಂತ ಮುಖ್ಯ
ವಾದುದು ಎಂಬ ಕಿವಿಮಾತೂ ಅದರಲ್ಲಿ ಇರಬಹುದು.

ಲೇಖಕ: ಪ್ರಾಧ್ಯಾಪಕ, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT