ಶನಿವಾರ, ಜುಲೈ 2, 2022
23 °C

ಕರ್ನಾಟಕದಲ್ಲಿ ಕವೀಂದ್ರ ರವೀಂದ್ರ

ಜಿ.ಎಸ್.ವೇಣುಗೋಪಾಲ್ Updated:

ಅಕ್ಷರ ಗಾತ್ರ : | |

Prajavani

‘ಭಾನುಸಿಂಗ ಠಾಕೂರ’ ಎಂದರೆ ಯಾರೆಂದು ಹುಬ್ಬೇರಿಸಬಹುದು. ಭಾರತೀಯರಿಗೆ ರವೀಂದ್ರನಾಥ ಟ್ಯಾಗೋರ್ ಎಂಬ ಹೆಸರೇ ಹೆಚ್ಚು ಪರಿಚಿತ. ಭಾನುಸಿಂಗ ಠಾಕೂರ ಎಂಬುದು ಕವೀಂದ್ರ ರವೀಂದ್ರನಾಥ ಟ್ಯಾಗೋರ್‌ ಅವರ ಕಾವ್ಯನಾಮ. ನೊಬೆಲ್ ಪಾರಿತೋಷಕ ಪಡೆದ ಪ್ರಥಮ ಏಶಿಯನ್ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು. ಅವರ ‘ಗೀತಾಂಜಲಿ’ ಕೃತಿಗೆ ಮುನ್ನುಡಿ ಬರೆದಿದ್ದು, ಜಗದ್ವಿಖ್ಯಾತ ಸಾಹಿತಿ ಮತ್ತು ರವೀಂದ್ರರ ನಂತರ ಹತ್ತು ವರ್ಷಗಳ ಬಳಿಕ ನೊಬೆಲ್ ಪ್ರಶಸ್ತಿ ಪಡೆದ ಇಂಗ್ಲಿಷ್ ಕವಿ ಡಬ್ಲ್ಯೂ.ಬಿ.ಯೇಟ್ಸ್.

ಮೂಲ ‘ಗೀತಾಂಜಲಿ’ ಬಂಗಾಳಿ ಭಾಷೆಯಲ್ಲಿ ಇದ್ದರೂ ಇದರ ಇಂಗ್ಲಿಷ್ ತರ್ಜುಮೆ ಮಾಡಿದ್ದು ರವೀಂದ್ರರೇ. ಈ ಕೃತಿ ಈಗಾಗಲೇ ಅನೇಕ ಭಾರತೀಯ ಹಾಗೂ ರಾಷ್ಟ್ರೀಯ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡದಲ್ಲಿಯೂ ಅನೇಕ ಕವಿಗಳು ಇದರ ಅನುವಾದ ಮಾಡಿ ಪ್ರಕಟಿಸಿದ್ದಾರೆ. 1983ರಲ್ಲಿ ಪ್ರಕಟವಾದ ಕನ್ನಡದ ಸಾಹಿತಿ ಬಿ.ಎಸ್. ಅನಂತಸ್ವಾಮಿ ರಾವ್ ಅವರ ಅನುವಾದಿತ ಕೃತಿ, ಮೂಲ ಬಂಗಾಳಿ ಭಾಷೆಯ ಸೊಗಡಿಗೆ ಅತ್ಯಂತ ಹತ್ತಿರವಾಗಿದೆ ಎಂದು ವಿ.ಕೃ. ಗೋಕಾಕ್ ಕೊಂಡಾಡಿದ್ದಾರೆ. 

ಈಗಾಗಲೇ, ಚರಿತ್ರೆಯ ಹಿನ್ನೆಲೆಗೆ ಸರಿದಿರುವ ರವೀಂದ್ರರು ಮತ್ತು ಕರ್ನಾಟಕದ ಜೊತೆಗಿನ ಅವರ ನಂಟಿನ ಬಗ್ಗೆ ಇದೊಂದು ಇಣುಕುನೋಟ. ಪರಂಪರೆಯನ್ನು ಜತನದಿಂದ ಕಾಪಿಟ್ಟುಕೊಳ್ಳದಿದ್ದರೆ ಅದು ಬಹುಬೇಗನೆ ವಿಸ್ಮೃತಿಗೆ ಒಳಗಾಗುತ್ತದೆ. ಇಂತಹ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ಪರಂಪರೆಯು ಅಷ್ಟೋ, ಇಷ್ಟೋ ಉಳಿಯಬಹುದು.

ರವೀಂದ್ರರು ಮತ್ತು ಕಾರವಾರ

1882ರಲ್ಲಿ ಕಾರವಾರದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು ರವೀಂದ್ರನಾಥ ಟ್ಯಾಗೋರ್‌ ಅವರ ಅಣ್ಣ ಸತ್ಯೇಂದ್ರನಾಥ ಠಾಕೂರ್‌. ಕಾರವಾರದಲ್ಲಿನ ಅಣ್ಣನ ಮನೆಗೆ ಬಂದಿದ್ದ ರವೀಂದ್ರ ಅವರನ್ನು ಅಲ್ಲಿನ ಕಡಲ ತಡಿ ಆಕರ್ಷಿಸಿದ್ದು ಆಕಸ್ಮಿಕವೇನಲ್ಲ.

ಕಡಲ ತಡಿಯನ್ನು ವೀಕ್ಷಿಸಿದ ಅವರು ಉದ್ಗರಿಸಿದ್ದು ಹೀಗೆ; ‘ನಿಜದಲ್ಲಿ ಪ್ರಕೃತಿಯ ಸೌಂದರ್ಯವು ಕಲ್ಪನೆಯ ಮರೀಚಿಕೆಯಲ್ಲ ಎಂದು ತಿಳಿಯಲು ಸೂಕ್ತವಾದ ಸ್ಥಳವಾಗಿದೆ ಈ ಕಡಲ ತಡಿ. ಪಾರವಿಲ್ಲದ ಸಂತೋಷವನ್ನು ಪ್ರತಿಬಿಂಬಿಸುತ್ತದೆ; ಮಾತ್ರವಲ್ಲದೆ, ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ’.

ಈ ಮಾತುಗಳನ್ನು ಹೊತ್ತ ಫಲಕ ಮತ್ತು ಅವರ ಪ್ರತಿಮೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ರಾರಾಜಿಸುತ್ತಿದೆ. ಇದಿಷ್ಟು ಸಂತಸದ ವಿಷಯವೇ ಸರಿ. ಆದರೆ, ಈ ಬೀಚ್‌ ಬಳಿಯೇ ಇರುವ ವರ್ಶಿಪ್‌ ಮ್ಯೂಸಿಯಂಗೆ ಇರುವ ಪ್ರಖ್ಯಾತಿ ಹಾಗೂ ಆಕರ್ಷಣೆ, ಚಾರಿತ್ರಿಕವಾಗಿ ಮಹತ್ವವೆನಿಸುವ ‘ಟ್ಯಾಗೋರ್ ಕಾರವಾರದ ಭೇಟಿ’ಗೆ ಇಲ್ಲವಾಗಿರುವುದು- ಹಳೆಯದನ್ನೆಲ್ಲಾ ಹಿಂದಕ್ಕೆ ತಳ್ಳುವ ಮನುಷ್ಯನ ಬೇಜವಾಬ್ದಾರಿತನದ ಪ್ರತೀಕವೇ ಸರಿ. 

ರವೀಂದ್ರರ ಸಂಗೀತ ಮತ್ತು ಮೈಸೂರು

‘ರಾಜರ್ಷಿ’ ಎಂದೇ ಪ್ರಖ್ಯಾತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಮೈಸೂರಿಗೆ ಭೇಟಿ ನೀಡದ ಗಣ್ಯಾತಿಗಣ್ಯರು ವಿರಳ. ಅಂತೆಯೇ, ರವೀಂದ್ರನಾಥ ಟ್ಯಾಗೋರರು ಒಮ್ಮೆ ಮೈಸೂರಿಗೆ ಬಂದಿದ್ದರು. 1922ರಲ್ಲಿ ನಡೆದ ದಸರಾ ಉತ್ಸವದಲ್ಲಿ ವಿಶೇಷ ಅತಿಥಿಯಾಗಿ ಆಗಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್, ಟ್ಯಾಗೋರ್ ಅವರನ್ನು ಸ್ವಾಗತಿಸಲು ವಿಶೇಷ ಆಸಕ್ತಿವಹಿಸಿದ್ದರು. ರವೀಂದ್ರರ ಸ್ಥಳೀಯ ಓಡಾಟಕ್ಕೆ, ವೈಭವೋಪೇತ ರೋಲ್ಸ್ ರಾಯ್ಸ್ ಕಾರನ್ನು ಒದಗಿಸಲಾಗಿತ್ತು.

‘ವೀಣೆಯ ಖನಿಯಿದು ಮೈಸೂರು’ ಎಂದೇ ಪ್ರಖ್ಯಾತವಾಗಿದ್ದ ಮೈಸೂರು ಸಂಸ್ಥಾನ, ಎಲ್ಲಾ ರೀತಿಯ ಸಂಗೀತ ಮತ್ತು ವಾದ್ಯ ಸಂಗೀತಗಳಿಗೆ ತವರೂರಾಗಿತ್ತು. ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತದ ವಿಶಿಷ್ಟ ಸಂಗಮವಾಗಿತ್ತು. ಕಲಾ ಹೃದಯದ ರವೀಂದ್ರರಿಗೆ ಇಂತಹ ವಿವಿಧ ಸಂಗೀತಗಳನ್ನು ಕೇಳಲು ಮತ್ತು ಕಲಾ ಮಾಧುರ್ಯವನ್ನು ಪ್ರಜ್ಞೆಗೆ ಆವಾಹಿಸಿಕೊಳ್ಳಲು, ಇದಕ್ಕಿಂತ ಉತ್ತಮವಾದ ಸಂದರ್ಭ ಒದಗಿರಲಾರದು. ಸಂಗೀತಕ್ಕೆ ಒಗ್ಗುವ ಅನೇಕ ಕೃತಿಗಳನ್ನು ರಚಿಸಿದ ಅವರಿಗೆ, ಸಂಗೀತ ಸಂಯೋಜನೆಯಲ್ಲೂ ಅತೀವ ಆಸಕ್ತಿ. ಮೈಸೂರಿನಲ್ಲೇ ಕೆಲಕಾಲವನ್ನು ಕಳೆದ ಅವರ ಸೋದರ ಸೊಸೆ ಸರಲಾ ದೇವಿ ಟ್ಯಾಗೋರ್ ಅವರನ್ನು ಕರ್ನಾಟಕ ಸಂಗೀತ ಕಲಾವಿದರು ಮತ್ತು ಹಲವಾರು ಸಂಗೀತ ಸಂಯೋಜಕರಿಗೆ ಪರಿಚಯಿಸಿದರು. ಭಾರತೀಯ ಸಂಗೀತದ ಅಂಗವೇ ಆಗಿರುವ ಕರ್ನಾಟಕ ಸಂಗೀತದ ಪರಿಚಯದಿಂದ ಟ್ಯಾಗೋರರು ಪ್ರಭಾವಿತರಾಗಿದ್ದಲ್ಲಿ ಆಶ್ಚರ್ಯವೇನಿಲ್ಲ.

ರವೀಂದ್ರರೇ ಸ್ಥಾಪಿಸಿದ ಶಾಂತಿನಿಕೇತನದಲ್ಲಿ ಕರ್ನಾಟಕದವರೇ ಆದ ಸಂಗೀತ ಕಲಾವಿದೆ ಸಾವಿತ್ರಿ ಗೋವಿಂದಕೃಷ್ಣನ್ ವಿದ್ಯಾರ್ಥಿನಿಯಾಗಿದ್ದರು. ಅವರು ಟ್ಯಾಗೋರ್‌ ಅವರಿಗೆ ದಕ್ಷಿಣ ಭಾರತದ, ಶಾಸ್ತ್ರೀಯ ಸಂಗೀತದ, ಅನೇಕ ಪ್ರಸಿದ್ಧ ಕೃತಿಗಳೊಂದಿಗೆ ಪರಿಚಿತರಾಗಿದ್ದರು. ಟ್ಯಾಗೋರ್ ಅವರು, ಕರ್ನಾಟಕ ಸಂಗೀತದ ತುಣುಕುಗಳನ್ನು ಆಧರಿಸಿ ಅನೇಕ ರವೀಂದ್ರ ಸಂಗೀತ ಸಂಯೋಜನೆಗಳನ್ನು ರಚಿಸಿದ್ದಾರೆ.

ಉದಾಹರಣೆಗೆ ಮೈಸೂರು ಸಂಸ್ಥಾನದ ಅಂದಿನ ರಾಷ್ಟ್ರಗೀತೆ ಎನಿಸಿದ್ದ ‘ಕಾಯೌ ಶ್ರೀ ಗೌರಿ ಕರುಣಾಲಹರಿ. ತೋಯಜಾಕ್ಷಿ ಶಂಕರೀಶ್ವರಿ. ವೈಮಾನಿಕ ಭಾಮಾರ್ಚಿತ ಕೋಮಲಕರ ಪಾದೆ ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೆ’ ಎ೦ಬ ಕೃತಿಯು ಬಂಗಾಳಿ ಭಾಷೆಯಲ್ಲಿ ಪ್ರಸಿದ್ಧವಾಗಿರುವ ‘ಆನಂದ ಲೋಕೆ ಮಂಗಳ ಲೋಕೆ’ ಎಂಬ ಗೀತೆಗೆ ಆಧಾರವಾಗಿತ್ತು. ಕಳೆದ ವರ್ಷವಷ್ಟೇ ನಿಧನರಾದ ಬಂಗಾಳಿ ಕಲಾವಿದೆ, ಕೋಲ್ಕತ್ತ ಯೂತ್ ಕಾಯರ್‌ನ ರುಮಗುಹ ಟಾಕುರ್ ತಾ ಹಾಡಿರುವ ಈ ಗೀತೆಯನ್ನು ಕೇಳಿರುವ ಎಲ್ಲರಿಗೂ ‘ಕಾಯೌ ಶ್ರೀಗೌರಿ’ ಕೃತಿಯ ಸಂಗೀತ ಸಂಯೋಜನೆ ಹಾಗೂ ರವೀಂದ್ರರ ಮೈಸೂರು ಭೇಟಿಗೂ ಇರುವ ಚಾರಿತ್ರಿಕ ಸಂಬಂಧದ ಬಗೆಗೆ ಹೆಮ್ಮೆ ಎನಿಸುತ್ತದೆ. ಟ್ಯಾಗೋರರ ನೇರ ಶಿಷ್ಯೆಯಾಗಿದ್ದ ಸಾವಿತ್ರಿ ಗೋವಿಂದ ಕೃಷ್ಣನ್ ಕರ್ನಾಟಕದ ಏಕೈಕ ರವೀಂದ್ರ ಸಂಗೀತ ಗಾಯಕಿ.

ರವೀಂದ್ರ ಕಲಾಕ್ಷೇತ್ರ

ಅರವತ್ತರ ದಶಕದ ಪ್ರಾರಂಭದಲ್ಲಿ ಟ್ಯಾಗೋರರ ಜನ್ಮ ಶತಮಾನೋತ್ಸವದ ಅಂಗವಾಗಿ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿಯೇ ಆರಂಭವಾದದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ. ಅದೇ ಸುಮಾರಿನಲ್ಲಿ ಹೈದರಾಬಾದ್‌ನಲ್ಲಿ ರವೀಂದ್ರ ಭಾರತಿ ಆಡಿಟೋರಿಯಂ ಕೂಡ ಪ್ರಾರಂಭವಾಯಿತು. ಆಗಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಅಧ್ಯಕ್ಷತೆಯಲ್ಲಿ ಟ್ಯಾಗೋರರ ಜನಶತಾಬ್ದಿಯ ಅಂಗವಾಗಿ ಕಲಾಕ್ಷೇತ್ರ ನಿರ್ಮಿಸಲು ಉನ್ನತಮಟ್ಟದ ಸಮಿತಿ ರಚಿಸಲಾಯಿತು. ಆ ಸಮಿತಿಯಲ್ಲಿ ಶಿವರಾಮ ಕಾರಂತ, ಮಲ್ಲಿಕಾರ್ಜುನ ಮನ್ಸೂರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ. ಚೌಡಯ್ಯ ಮುಂತಾದವರು ಸದಸ್ಯರಿದ್ದರು. ಕಟ್ಟಡದ ನಿರ್ಮಾಣಕ್ಕೆ ಅಂದಿನ ಜನಪ್ರಿಯ ತಮಿಳು ನಟ ಶಿವಾಜಿ ಗಣೇಶನ್ ಸೇರಿದಂತೆ ಹಲವರು ಆರ್ಥಿಕ ನೆರವು ನೀಡಲು ಮುಂದೆ ಬಂದರು. 1960ರ ಸೆಪ್ಟೆಂಬರ್ 16ರಂದು ಕಲಾಕ್ಷೇತ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಪ್ರಖ್ಯಾತ ವಾಸ್ತುಶಿಲ್ಪಿ ಚಾರ್ಲ್ಸ್ ವಿಲ್ಸನ್ ಮತ್ತು ಮೈಸೂರು ಸರ್ಕಾರದ ಮುಖ್ಯ ಎಂಜಿನಿಯರ್ ಬಿ.ಆರ್. ಮಾಣಿಕ್ಯಂ ಈ ಕಟ್ಟಡದ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಲಾಕ್ಷೇತ್ರದ ಉದ್ಘಾಟನೆಯು ಅಂದಿನ ಕೇಂದ್ರ ಶಿಕ್ಷಣ ಸಚಿವ ಡಾ.ಹುಮಾಯುನ್ ಕಬೀರ್ ಅವರಿಂದ(1963ರ ಮಾರ್ಚ್ 9ರಂದು) ವಿಜೃಂಭಣೆಯಿಂದ ನೆರವೇರಿತು. 

ಬೆಂಗಳೂರಿನ ನಂಟು

1928ರಲ್ಲಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಹಿಬ್ಬರ್ಟ್ ಮಾಲಿಕೆ ಉಪನ್ಯಾಸ ನೀಡಲು ಸಿದ್ಧರಾಗಿದ್ದ ಟ್ಯಾಗೋರ್ ಅನಾರೋಗ್ಯಕ್ಕೆ ತುತ್ತಾದರು. ಉಪನ್ಯಾಸ ರದ್ದುಪಡಿಸಿ ವಿಶ್ರಾಂತಿಯ ಕಾರಣಕ್ಕಾಗಿ ಬೆಂಗಳೂರಿಗೆ ಬ೦ದರು. ಆಗ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ, ಬಂಗಾಳದವರೇ ಆದ ಪ್ರೊ.ಬ್ರಜೇಂದ್ರನಾಥ ಸೀಲ್ ಅವರ ಒತ್ತಾಸೆಯ ಮೇರೆಗೆ ಬೆಂಗಳೂರಿನಲ್ಲಿ ಕೆಲಕಾಲ ವಾಸ್ತವ್ಯ ಮಾಡಿದ್ದರು. ಆ ಸಮಯದಲ್ಲಿ ಅವರು ಬರೆದ ಮತ್ತೊಂದು ಪ್ರಖ್ಯಾತ ಪ್ರೇಮ ಕಾದ೦ಬರಿ ‘ಶೇಷೆರ್ ಕೊಬಿತ’(ಉಳಿದ ಕವಿತೆ). ಭಾರತೀಯ ಸಂಖ್ಯಾಶಾಸ್ತ್ರದ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದ ಪ್ರಶಾಂತ ಚಂದ್ರ ಮಹಾಲಾನಬಿಸ್ ಮತ್ತು ಅವರ ಪತ್ನಿ ರಾಣಿ ಆ ವೇಳೆ ಬೆಂಗಳೂರಿನಲ್ಲೇ ವಾಸವಿದ್ದರು. ‘ಶೇಷೆರ್ ಕೊಬಿತ’ ಕಾದಂಬರಿಯನ್ನು ಟ್ಯಾಗೋರರು ಈ ದಂಪತಿಗೆ ಓದಿ ಹೇಳಿದ್ದರು. ಇದು ‘ಪ್ರಭೋಶಿ’ ಎಂಬ ಬಂಗಾಳಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಮುಂದೆ ಪುಸ್ತಕವಾಗಿ ಹೊರಹೊಮ್ಮಿತು. ಹೀಗೆ ರವೀ೦ದ್ರನಾಥ ಟ್ಯಾಗೋರ್ ಮತ್ತು ಕರ್ನಾಟಕ ಸ೦ಬ೦ಧ ಕೇವಲ ಚಾರಿತ್ರಿಕ ಕಾರಣಗಳಿಗಷ್ಟೇ ಅಲ್ಲದೆ ಸಾ೦ಸ್ಕೃತಿಕ ಕಾರಣಗಳಿಗೂ ಮುಖ್ಯವೆನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು