ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ನಡುವೆ ಬಾಡದಿರಲಿ ಸಂಬಂಧದ ಬಳ್ಳಿ

Last Updated 16 ಜೂನ್ 2020, 14:02 IST
ಅಕ್ಷರ ಗಾತ್ರ

ಸುಮಾ ಹಾಗೂ ಅವಳ ಗಂಡ ನಿತಿನ್ ಸಾಪ್ಟ್‌ವೇರ್ ಉದ್ಯೋಗಿಗಳು. ಕೆಲಸದ ಮೇಲೆ ದೆಹಲಿಗೆ ಹೋಗಿದ್ದ ನಿತಿನ್‌ ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲೇ ಉಳಿಯಬೇಕಾಗುತ್ತದೆ. ಇತ್ತ ಸುಮಾ ತನ್ನ ಹುಟ್ಟೂರಿಗೂ ಹೋಗಲಾಗದೆ ತನ್ನ ಗಂಡನ ಬಳಿಯೂ ಹೋಗಲಾಗದೆ ಬೆಂಗಳೂರಿನಲ್ಲೇ ಉಳಿಯುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರೂ ನಿತಿನ್‌ಗೆ ಮರಳಿ ಬರಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಕೆಲಸ ಆರಂಭವಾಗಿ ಅಲ್ಲೇ ಇನ್ನಷ್ಟು ದಿನ ಉಳಿಯುವಂತಾಗುತ್ತದೆ. ಇದೆಲ್ಲದರಿಂದ ಬೇಸರಗೊಂಡ ಸುಮಾ ಗಂಡನ ಜೊತೆ ಪ್ರತಿನಿತ್ಯ ಜಗಳವಾಡುತ್ತಿದ್ದಳು. ಅಲ್ಲದೇ ಬೆಂಗಳೂರಿನ ಮನೆ ಖಾಲಿ ಮಾಡಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ಇದರಿಂದ ಕೋಪಗೊಂಡ ನಿತಿನ್‌ ಸುಮಾಳಿಗೆ ಡೈವೋರ್ಸ್ ನೋಟಿಸ್ ಕೂಡ ಕಳುಹಿಸುತ್ತಾನೆ.

ಇದು ಕೇವಲ ಸುಮಾ ಹಾಗೂ ನಿತಿನ್ ಇಬ್ಬರ ಕತೆಯಲ್ಲ. ಲಾಕ್‌ಡೌನ್‌ನ ಅನಿಶ್ಚಿತತೆಯ ಕಾರಣದಿಂದ ಅನೇಕರ ಸಂಬಂಧದಲ್ಲಿ ಈ ರೀತಿಯ ಬಿರುಕು ಮೂಡಿದೆ. ಇದರಿಂದ ಎಷ್ಟೋ ಸಂಬಂಧಗಳು ಹಳಸಿವೆ.

ಇತ್ತೀಚೆಗೆ ಹರಿಯಾಣ ಮೂಲದ ವ್ಯಕ್ತಿಯೊಬ್ಬರು ತನ್ನ ಹೆಂಡತಿ ತನಗೆ ವಿಚ್ಛೇದನ ನೀಡಲು ಬಯಸಿದ್ದಾಳೆ. ಆದರೆ ನಾನು ನಮ್ಮ ಮುಂದಿನ ದಾಂಪತ್ಯದ ಜೀವನದ ಬಗ್ಗೆ ಗೊಂದಲಗೊಂಡಿದ್ದೇನೆ ಎಂದು ಪರಿಹಾರ ಬಯಸಿ ನಟ ಸೋನು ಸೂದ್‌ಗೆ ಟ್ವೀಟ್‌ ಮಾಡಿದ್ದರು. ಸೋನು ಸೂದ್ ಆ ಇಬ್ಬರು ದಂಪತಿಗಳನ್ನು ಒಂದು ಮಾಡಿ ‘ರಿಲೇಷನ್ ಶಿಪ್‌’ ಗುರು ಎನ್ನಿಸಿಕೊಂಡಿದ್ದರು. ಹೀಗೆ ಸಂಬಂಧದ ನಡುವೆ ಬಿರುಕು ಮೂಡಿಸಿಕೊಂಡು ಸಂಬಂಧ ಹಳಸುವ ಮೊದಲೇ ಒಂದಿಷ್ಟು ಪರಿಹಾರ ಕಂಡುಕೊಂಡರೆ ಖಂಡಿತ ಸಂಬಂಧ ವೃದ್ಧಿಯಾಗುತ್ತದೆ.

ಲಾಕ್‌ಡೌನ್‌ ಕಾರಣದಿಂದ ಅನೇಕ ದಂಪತಿಗಳ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಇದಕ್ಕೆ ಕಾರಣಗಳು ಅನೇಕವಿರಬಹುದು. ಇದು ದಂಪತಿಗಳ ನಡುವೆ ದೈಹಿಕ ಸಂಬಂಧ ಹಾಗೂ ಮಾನಸಿಕ ಗೊಂದಲಕ್ಕೂ ಕಾರಣವಾಗಿರಬಹುದು. ಆದರೆ ಅದನ್ನು ಸರಿಯಾದ ಮಾರ್ಗದಲ್ಲಿ ಕಂಡು ಕೊಂಡು ಪರಿಹರಿಸಿಕೊಂಡರೆ ನಿಮ್ಮ ದಾಂಪತ್ಯ ಜೀವನ ಹಿಂದಿನಂತೆ ಮುಂದುವರಿಯುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ತಜ್ಞರು.

ಸಂವಹನವೇ ಪ್ರಮುಖ ಕೀಲಿ ಕೈ

ಯಾವುದೇ ಆರೋಗ್ಯಕರ ಸಂಬಂಧ ವೃದ್ಧಿಯಾಗಲು ಸಂವಹನ ಅತ್ಯಂತ ಮುಖ್ಯ. ಗಂಡ–ಹೆಂಡತಿ ಅಥವಾ ಪ್ರೇಮಿ–ಪ್ರೇಯಸಿ ಇಬ್ಬರೂ ಕುಳಿತು ಮಾತುಕತೆ ನಡೆಸಿದರೆ ಸಂಬಂಧದ ಬಿರುಕಿಗೆ ಕಾರಣವನ್ನು ತಿಳಿದುಕೊಳ್ಳಬಹುದು. ಸಂವಹನ ಎಂದರೆ ನಮ್ಮ ಎದುರು ಮಾತನಾಡುತ್ತಿರುವವರಿಗೆ ಗೌರವ ಕೊಡದೇ ಬಾಯಿ ಮೇಲೆ ಬಾಯಿ ಹಾಕಿ ಮಾತನಾಡುವುದಲ್ಲ. ಬದಲಾಗಿ ಅವರ ಮಾತಿಗೂ ಅವಕಾಶ ನೀಡಿ ಸಮಾಧಾನ ಚಿತ್ತರಾಗಿ ಅವರ ಮಾತನ್ನು ಕೇಳಿಸಿಕೊಳ್ಳಬೇಕು. ಒಂದು ಉತ್ತಮ ಸಂವಹನದಿಂದ ಯಾವುದೇ ರೀತಿಯ ಕಲಹಗಳನ್ನು ಪರಿಹರಿಸಬಹುದು.

ಇನ್ನೊಬ್ಬರ ಅಗತ್ಯತೆಗಳನ್ನು ಗೌರವಿಸಿ

ಲಾಕ್‌ಡೌನ್‌ನಲ್ಲಿ ದಂಪತಿಗಳ ನಡುವೆ ಜಗಳ ಏರ್ಪಡಲು ಮುಖ್ಯ ಕಾರಣ ಅವರವರ ಅಗತ್ಯತೆಗಳನ್ನು ಗೌರವಿಸದೇ ಇರುವುದು. ಮನೆಯೊಳಗೇ ಇರಲಿ, ಹೊರಗೇ ಇರಲಿ ಅವರ ಅಗತ್ಯತೆ ಅವರಿಗೆ ಇರುವುದು. ಅವರಿಗೆ ಇಷ್ಟ ಬಂದ ಹಾಗೆ ಇರಲು ಬಿಡದೇ ಇರುವುದರಿಂದ ಇಬ್ಬರ ನಡುವೆ ಜಗಳ ಉಂಟಾಗುವುದು ಸಾಮಾನ್ಯ. ಆ ಕಾರಣಕ್ಕೆ ಅನೇಕರ ನಡುವೆ ಸಂಬಂಧ ಹಳಸುತ್ತಿದೆ. ಆ ಕಾರಣಕ್ಕೆ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಿ. ಅವರ ಅಗತ್ಯತೆಗಳನ್ನು ತಿಳಿದುಕೊಂಡು ಅವರೊಂದಿಗೆ ವ್ಯವಹರಿಸಿ. ಇದರಿಂದ ಸಂಬಂಧದಲ್ಲಿ ಪ್ರೀತಿ ಹೆಚ್ಚುತ್ತದೆ.

ನಿಮ್ಮ ಪ್ರೇಮಿ ಅಥವಾ ಸಂಗಾತಿಗೆ ಸರ್ಪ್ರೈಸ್‌ ನೀಡಿ

ಈ ಲಾಕ್‌ಡೌನ್‌ನಲ್ಲಿ ಅನೇಕರು ಹೊರಗೆ ಹೋಗಲಾಗದೇ ಮನೆಯೊಳಗೆ ತಿಂಗಳುಗಟ್ಟಲೆ ಕೂತಿದ್ದಾರೆ. ಮೊದಲೆಲ್ಲಾ ಸಿನಿಮಾ, ಮಾಲ್‌, ಪಾರ್ಟಿ ಎಂದೆಲ್ಲಾ ಹೋಗುತ್ತಿದ್ದವರಿಗೆ ಈಗ ಹಿಡಿದು ಕಟ್ಟಿಹಾಕಿದಂತಾಗಿದೆ. ಜೊತೆಗೆ ಒಂದೇ ರೀತಿಯ ಜೀವನಶೈಲಿ ಅವರಿಗೆ ಬೇಸರ ತರಿಸಿರುತ್ತದೆ. ಆ ಕಾರಣಕ್ಕೆ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಹುರುಪು ನೀಡಲು ಈ ಲಾಕ್‌ಡೌನ್‌ ಸಮಯದಲ್ಲಿ ಅವರು ಯೋಚಿಸಲಾಗದಂತಹ ಸರ್ಪಸೈ ನೀಡಿ. ಅಂದರೆ ಹೊರಗಡೆ ಹೋಗಿ ಆಡಂಬರ ವಸ್ತುವನ್ನು ತರುವುದು ಎಂದಲ್ಲ. ಮನೆಯಲ್ಲೇ ನಿಮ್ಮ ಸಂಗಾತಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸುವುದು, ಕ್ಯಾಂಡಲ್‌ ಲೈಟ್ ಡಿನ್ನರ್ ಏರ್ಪಡಿಸುವುದು ಹೀಗೆ. ಸಂಜೆ ವೇಳೆ ಅಥವಾ ರಜಾದಿನಗಳಲ್ಲಿ ಇಬ್ಬರೂ ಜೊತೆಯಾಗಿ ಇಷ್ಟದ ಸಿನಿಮಾಗಳನ್ನು ನೋಡಿ. ಇದರಿಂದ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆದಂತಾಗುತ್ತದೆ. ಜೊತೆಗೆ ಸಂಗಾತಿಯ ಮೇಲೆ ಪ್ರೀತಿ ಹಾಗೂ ಕಾಳಜಿ ವ್ಯಕ್ತಪಡಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT