ಮಂಗಳವಾರ, ಮಾರ್ಚ್ 28, 2023
25 °C

ಮಹಾತ್ಮನ ಕೊನೆಯ ದಿನ

ಎನ್. ಆರ್. ವಿಶುಕುಮಾರ್ Updated:

ಅಕ್ಷರ ಗಾತ್ರ : | |

ಗಾಂಧೀಜಿಯ ಹತ್ಯೆಯಾಗಿ ಈಗ 75 ವರ್ಷ. ಅಹಿಂಸೆಯ ಈ ಸಾಕಾರ ಮೂರ್ತಿ ಹಿಂಸೆಗೆ ಬಲಿಯಾದರೂ ಮನುಕುಲದ ಚರಿತ್ರೆಯಲ್ಲಿ ಬುದ್ಧ ಮತ್ತು ಏಸುಕ್ರಿಸ್ತರ ಸಾಲಿನಲ್ಲಿ ಶಾಶ್ವತ ತಾರೆಯಾಗಿ ಬೆಳಗುತ್ತಿದ್ದಾರೆ.

**

ಅಂದು 1948ರ ಜನವರಿ 30. ನಸುಕಿನ 3.30ರ ಸಮಯ. ದೆಹಲಿಯ ಬಿರ್ಲಾ ಭವನದಲ್ಲಂತೂ ಪ್ರಶಾಂತ ವಾತಾವರಣ. ಮೈಕೊರೆಯುವ ಆ ಚಳಿಯಲ್ಲಿ, 78ರ ಇಳಿವಯಸ್ಸಿನ ಗಾಂಧೀಜಿ ಎಂದಿನಂತೆ ಬೆಳಿಗ್ಗೆ ಬೇಗ ಎದ್ದರು. ಪಕ್ಕದಲ್ಲಿಯೇ ಮಲಗಿದ್ದ ಹಿರಿಯ ಮೊಮ್ಮಗಳು ಅಭಾಳಿಗೆ ಎದ್ದೇಳುವಂತೆ ಹೇಳಿ, ತಾವು ಶೌಚಕ್ಕೆ ತೆರಳಿದರು. ಶೌಚ ಮುಗಿಸಿ ಬಂದು ಚಾಪೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ಧ್ಯಾನಾಸಕ್ತರಾದರು. ಗಾಂಧೀಜಿಯ ಇನ್ನೊಬ್ಬ ಕಿರಿಯ ಮೊಮ್ಮಗಳು ಮನು ಬೆಳಗಿನ ಪ್ರಾರ್ಥನೆಗೆ ಸಿದ್ಧತೆ ಮಾಡಿದಳು. ಗಾಂಧೀಜಿ ತಮ್ಮ ಆಪ್ತ ಬಳಗದ ಜೊತೆ ಕುಳಿತು ವಿವಿಧ ಧರ್ಮಗಳಿಂದ ಆಯ್ದ ಕೆಲವು ಪ್ರಾರ್ಥನೆಗಳನ್ನು ಹಾಡಿದರು.

ಪ್ರಾರ್ಥನೆ ಮುಗಿದ ಬಳಿಕ ಬಿಸಿನೀರಿಗೆ ತುಸು ಜೇನುತುಪ್ಪ, ನಿಂಬೆರಸ ಬೆರೆಸಿ ಮನು ಕೊಟ್ಟ ಪಾನೀಯವನ್ನು ಗಾಂಧೀಜಿ ಕುಡಿದರು. ಅವತ್ತಿನ ಬೆಳಗಿನ ಪ್ರಾರ್ಥನೆಗೆ ಅಭಾ ಬಾರದಿದ್ದನ್ನು ಗಮನಿಸಿದ್ದ ಗಾಂಧೀಜಿ ಗುಜರಾತಿ ಭಾಷೆಯಲ್ಲಿ ‘ಪ್ರಾರ್ಥನೆ ಎನ್ನುವುದು ನಮ್ಮ ಆತ್ಮವನ್ನು ಸ್ವಚ್ಛಗೊಳಿಸುವ ಪೊರಕೆ. ಇಂಥ ಮಹತ್ವವುಳ್ಳ ಪ್ರಾರ್ಥನೆಗೆ ಅಭಾ ತಪ್ಪಿಸಿಕೊಳ್ಳುವುದು ನನಗೆ ನೋವು ತರುತ್ತಿದೆ. ಪ್ರಾರ್ಥನೆಗೆ ಬರುವುದು ಆಕೆಗೆ ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟು ಹೋಗಬಹುದು. ಇದು ನಮ್ಮಿಬ್ಬರಿಗೂ ಒಳ್ಳೆಯದು’ ಎಂದು ಮನುಗೆ ಮೆಲುದನಿಯಲ್ಲಿ ಹೇಳಿದರು.

ಗಾಂಧೀಜಿಯನ್ನು ಭೇಟಿ ಮಾಡಲು ಬೆಳಿಗ್ಗೆ 6ಕ್ಕೆ ಆರ್.ಕೆ. ನೆಹರೂ ಅವರು ಬಂದಿದ್ದರು. ಅಂದು ಮಧ್ಯಾಹ್ನವೇ ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದ ಅವರಿಗೆ ಗಾಂಧೀಜಿ, ‘ಬಡರಾಷ್ಟ್ರದ ಪ್ರತಿನಿಧಿಯಾಗಿ ಅಲ್ಲಿಗೆ ತೆರಳುತ್ತಿರುವ ನೀನು ಅಮೆರಿಕದಲ್ಲಿ ಸರಳತೆಯ ಜೀವನ ಮತ್ತು ನಡತೆಯನ್ನು ಪ್ರದರ್ಶಿಸಬೇಕು’ ಎಂದು ಹಿತವಚನ ಹೇಳಿ, ಸಹಿ ಮಾಡಿದ ತಮ್ಮ ಭಾವಚಿತ್ರವನ್ನು ಆಕೆಗೆ ನೀಡಿ ಬೀಳ್ಕೊಟ್ಟಿದ್ದರು.

ಬಳಿಕ ಗಾಂಧೀಜಿಯವರಿಗೆ ಅವರ ಆಪ್ತ ಸಹಾಯಕರು ನಿತ್ಯದಂತೆ ಅರ್ಧಗಂಟೆ ಮಸಾಜ್ ಮಾಡಿದರು. ತುಸು ಹೊತ್ತಿನ ನಂತರ ಮನು, ಗಾಂಧೀಜಿಗೆ ಸ್ನಾನ ಮಾಡಿಸಿದರು. ಗಾಂಧೀಜಿಯವರ ಅಂತಿಮ ದಿನಗಳಲ್ಲಿ ಅವರ ಮೊಮ್ಮಕ್ಕಳಾದ ಅಭಾ ಮತ್ತು ಮನು ಅವರ ಪಾತ್ರ ಬಹಳ ಪ್ರಮುಖವಾಗಿತ್ತು. ಸ್ನಾನ ಮುಗಿಸಿ ಬಂದ ನಂತರ ಗಾಂಧೀಜಿ ತುಸು ಗೆಲುವಾಗಿದ್ದರು. ಮನು ಅವರನ್ನು ತೂಕದ ಯಂತ್ರದ ಮೇಲೆ ನಿಲ್ಲಿಸಿ ನೋಡಿದರು. ಗಾಂಧೀಜಿಯ ತೂಕದಲ್ಲಿ ಸ್ವಲ್ಪ ಏರಿಕೆಯಾಗಿತ್ತು. ಐದು ದಿನಗಳ ಉಪವಾಸ ಸತ್ಯಾಗ್ರಹದಲ್ಲಿ ಕಳೆದುಕೊಂಡಿದ್ದ ತೂಕದಲ್ಲಿ ಒಂದು ಕೆ.ಜಿ. ತೂಕ ಗಳಿಸಿ ಅವರು 49 ಕೆ.ಜಿ. ತೂಗಿದರು. ಬೆಳಿಗ್ಗೆ 9.30ಕ್ಕೆ ಉಪಾಹಾರ ಸೇವನೆಗೆ ಕುಳಿತರು. ವೈದ್ಯರ ಸಲಹೆ ಮೇರೆಗೆ ಗಾಂಧೀಜಿಯವರಿಗೆ ಬೇಯಿಸಿದ ತರಕಾರಿ, ಮೇಕೆ ಹಾಲು, ಟೊಮ್ಯಾಟೊ, ಕಿತ್ತಳೆ ಹಣ್ಣಿನ ರಸ, ಕ್ಯಾರೆಟ್ ರಸ ಇವೆಲ್ಲವನ್ನೂ ನೀಡಲಾಗುತ್ತಿತ್ತು.

ಬೆಳಿಗ್ಗೆ ಹೊತ್ತು ಏರುತ್ತಿದ್ದಂತೆ ಬಿರ್ಲಾ ಭವನದಲ್ಲಿ ಚಟುವಟಿಕೆಗಳು ಚುರುಕಾದವು. ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಜನಸಾಮಾನ್ಯರು, ಪತ್ರಕರ್ತರು ಗಾಂಧೀಜಿಯವರ ಭೇಟಿಗಾಗಿ ಬರತೊಡಗಿದರು. ಕೋಮು ಗಲಭೆಗಳಿಂದ ಕಂಗೆಟ್ಟಿದ್ದ ಗಾಂಧೀಜಿ ಜನಸಾಮಾನ್ಯರ ಭೇಟಿ ಮತ್ತು ಪ್ರಾರ್ಥನಾ ಸಭೆಗಳ ಮೂಲಕ ತಮ್ಮ ಮನಸ್ಸಿನ ದುಗುಡ ಕಡಿಮೆ ಮಾಡಿಕೊಳ್ಳಲು ಬಯಸುತ್ತಿದ್ದರು. ಹೀಗಾಗಿ ದಿನನಿತ್ಯ ಅವರ ಭೇಟಿಗಾಗಿ ಬರುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿತ್ತು.

ಗಾಂಧೀಜಿಯವರ ಅಂತಿಮ ದಿನಗಳಲ್ಲಿ ಅವರ ಬಳಿ ಇಬ್ಬರು ಆಪ್ತ ಕಾರ್ಯದರ್ಶಿಗಳಿದ್ದರು. ಒಬ್ಬರು ಅವರ ಹಿರಿಯ ಅತ್ಯಾಪ್ತ ಕಾರ್ಯದರ್ಶಿ ಪ್ಯಾರೇಲಾಲ್ ನಯ್ಯರ್. ಇನ್ನೊಬ್ಬರು ಕಿರಿಯ ಆಪ್ತ ಕಾರ್ಯದರ್ಶಿ ವಿ.ಕಲ್ಯಾಣಂ. ಅತಿ ಗಹನವಾದ ರಾಜಕೀಯ ವಿಷಯಗಳನ್ನು ಪ್ಯಾರೇಲಾಲ್ ನಿರ್ವಹಿಸುತ್ತಿದ್ದರು. ಗಾಂಧೀಜಿಯವರ ಸಂದರ್ಶಕರ ಭೇಟಿ ನಿಗದಿಗೊಳಿಸುವುದು, ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸುವುದು, ಕರಡು ಟಿಪ್ಪಣಿಗಳ ಬೆರಳಚ್ಚು ಮಾಡುವುದು ಹಾಗೂ ಇತರೆ ಕಾರ್ಯಗಳನ್ನು ಕಲ್ಯಾಣಂ ನಿರ್ವಹಿಸುತ್ತಿದ್ದರು.

ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಗಂಭೀರವಾಗಿ ಚಿಂತಿಸುತ್ತಿದ್ದ ಗಾಂಧೀಜಿ ಅದಕ್ಕಾಗಿ ಹಿಂದಿನ ದಿನ ಚರ್ಚಿಸಿ ಒಂದು ಕರಡನ್ನು ಸಿದ್ಧಪಡಿಸಿದ್ದರು. ಗ್ರಾಮೀಣ ಏಳಿಗೆಗೆ ಪೂರ್ಣವಾಗಿ ಶ್ರಮಿಸುವ ಲೋಕ ಸೇವಕ ಸಂಘ ಎನ್ನುವ ಹೆಸರಿನ ಹೊಸ ಸಂಘಟನೆಯನ್ನು ಸ್ಥಾಪಿಸುವ ಬಗ್ಗೆ ಜನವರಿ 29ರಂದು ತಯಾರಿಸಿದ್ದ ಕರಡು ಟಿಪ್ಪಣಿಯ ಮೇಲೆ ಅವರು ಕಣ್ಣಾಡಿಸಿದರು. ಅದನ್ನು ಪ್ಯಾರೇಲಾಲ್ ಅವರಿಗೆ ನೀಡಿ, ತಪ್ಪು ಒಪ್ಪುಗಳನ್ನು ಗಮನಿಸಿ ಶುದ್ಧ ಕರಡನ್ನು ಸಂಜೆಗೆ ನೀಡಬೇಕೆಂದು ಸೂಚನೆ ನೀಡಿದರು. ಹಾಗೆಯೇ ಫೆಬ್ರುವರಿ 2ರಂದು ವಾರ್ಧಾದಲ್ಲಿನ ತಮ್ಮ ಹಳೆಯ ಆಶ್ರಮ ಸೇವಾಗ್ರಾಮಕ್ಕೆ ಭೇಟಿ ನೀಡುವ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಕಲ್ಯಾಣಂ ಅವರಿಗೆ ಸೂಚಿಸಿದರು.

ಹದಿನೈದು ದಿನಗಳ ಹಿಂದಷ್ಟೇ ದೆಹಲಿಯ ಕೋಮು ಗಲಭೆ ನಿಯಂತ್ರಿಸಲು ಒತ್ತಾಯಿಸಿ ಐದು ದಿನಗಳ ಕಾಲ ಉಪವಾಸ ಕೈಗೊಂಡು ನಿತ್ರಾಣಗೊಂಡಿದ್ದ ಗಾಂಧೀಜಿಯವರ ದೇಹ ಹೆಚ್ಚು ವಿಶ್ರಾಂತಿ ಬಯಸುತ್ತಿತ್ತು. ಕೊಂಚ ವಿಶ್ರಾಂತಿಯ ನಂತರ ಗಾಂಧೀಜಿ ಬಿರ್ಲಾ ಭವನದ ಹುಲ್ಲುಹಾಸಿನ ಮೇಲೆ ಚಾರ್ಪಾಯ್ ಹಾಕಿಕೊಂಡು ತುಸು ಬಿಸಿಲು ಕಾಯಿಸಿಕೊಂಡರು. ಕೆಲವು ಮುಸ್ಲಿಂ ಮುಖಂಡರು ಮಧ್ಯಾಹ್ನ 12.30ರ ಸುಮಾರಿಗೆ ಬಂದು ಭೇಟಿಯಾದರು. ‘ದೆಹಲಿ ಗಲಭೆಗಳನ್ನು ನಿಯಂತ್ರಿಸಲು ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಆ ಬಗ್ಗೆ ತಾವು ಮತ್ತೆ ಮತ್ತೆ ಚಿಂತಿಸುವ ಅಗತ್ಯವಿಲ್ಲ’ ಎನ್ನುವ ಭರವಸೆಯನ್ನು ಅವರು ಗಾಂಧೀಜಿಗೆ ನೀಡಿದರು.

ಅಮೆರಿಕದ ‘ಲೈಫ್’ ನಿಯತಕಾಲಿಕದ ಖ್ಯಾತ ಛಾಯಾಗ್ರಾಹಕಿ, ಪತ್ರಕರ್ತೆ ಮಾರ್ಗರೇಟ್ ಬರ್ಕ್‌ವೈಟ್ ಮಧ್ಯಾಹ್ನ 2ರ ಸುಮಾರಿಗೆ ಗಾಂಧೀಜಿಯ ಸಂದರ್ಶನಕ್ಕೆ ಬಂದಿದ್ದರು. ಸಂದರ್ಶನದ ನಡುವೆ ಆಕೆ, ‘ಗಾಂಧೀಜಿ ಹಿಂದೊಮ್ಮೆ ನೀವು 125 ವರ್ಷ ಬದುಕಬೇಕೆಂದು ಹೇಳಿದ್ದಿರಿ. ಆ ರೀತಿ ನಿಮಗೆ ಏಕೆ ಅನಿಸಿತು’ ಎಂದು ಕೇಳಿದರು. ಈ ಪ್ರಶ್ನೆಗೆ ಗಾಂಧೀಜಿಯ ಉತ್ತರ ಆಕೆಯನ್ನು ಚಕಿತಗೊಳಿಸಿತು. ‘ನನಗೀಗ ಆ ಆಸೆ ಉಳಿದಿಲ್ಲ. ಜಗತ್ತಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಾನು ಈ ಕತ್ತಲೆಯಲ್ಲಿ ಬಹಳ ಕಾಲ ಬದುಕಲು ಇಚ್ಛಿಸುವುದಿಲ್ಲ’ ಎಂದು ಗಾಂಧೀಜಿ ಉತ್ತರಿಸಿದ್ದರು. ಗಾಂಧೀಜಿ ತಮ್ಮ ಅಂತಿಮ ದಿನಗಳಲ್ಲಿ, ಈ ರೀತಿ ಹೆಚ್ಚು ಕಾಲ ಬದುಕುವ ಆಸೆ ತನಗಿಲ್ಲ ಎನ್ನುವ ಮನೋ ಇಂಗಿತವನ್ನು ಹಲವಾರು ವೇದಿಕೆಗಳಲ್ಲಿ ಮತ್ತು ಪ್ರಾರ್ಥನಾ ಸಭೆಗಳಲ್ಲಿ ಪದೇ ಪದೇ ಹೇಳುತ್ತಲೇ ಇದ್ದರು.

ಹತ್ತು ದಿನಗಳ ಹಿಂದಷ್ಟೇ, ಜನವರಿ 20ರಂದು, ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಎಸೆಯುವ ಮೂಲಕ ಗಾಂಧೀಜಿಯವರನ್ನು ಹತ್ಯೆ ಮಾಡುವ ವಿಫಲ ಪ್ರಯತ್ನವೂ ನಡೆದಿತ್ತು. ಮದನಲಾಲ್ ಎನ್ನುವ ಪಂಜಾಬ್‌ನ ನಿರಾಶ್ರಿತ ಗಾಂಧೀಜಿಯ ಕಡೆಗೆ ಕೈಬಾಂಬ್ ಎಸೆದಿದ್ದ. ಅದು ಗೋಡೆಗೆ ತಗುಲಿ ಗೋಡೆ ಬಿರುಕು ಬಿಟ್ಟಿತ್ತು. ಈ ಘಟನೆಯಿಂದ ಗಾಂಧೀಜಿ ಸ್ವಲ್ಪವೂ ವಿಚಲಿತರಾಗಿರಲಿಲ್ಲ. ಘಟನೆಯ ನಂತರ ಗೃಹ ಸಚಿವ ಪಟೇಲ್ ಅವರ ಸೂಚನೆಯ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡುವ ಬಗ್ಗೆ ಚರ್ಚಿಸಲು ಬಂದಾಗ, ‘ನನ್ನ ಜೀವನ ದೇವರ ಕೈಯಲ್ಲಿದೆ. ನಾನು ಸಾಯಲೇಬೇಕೆಂದು ದೈವ ನಿರ್ಧರಿತವಾಗಿದ್ದರೆ ನಿಮ್ಮ ಯಾವ ಮುಂಜಾಗ್ರತಾ ರಕ್ಷಣಾ ಕ್ರಮಗಳೂ ನನ್ನನ್ನು ಉಳಿಸಲಾರವು. ನನ್ನ ಸ್ವಾತಂತ್ರ್ಯವನ್ನು ಹರಣ ಮಾಡಿಕೊಂಡು ನಾನು ಜೀವರಕ್ಷಣೆ ಬಯಸುವುದಿಲ್ಲ’ ಎಂದೇ ಕಟುವಾಗಿ ಉತ್ತರಿಸಿದ್ದರು. ಆದರೂ ಬಿರ್ಲಾ ಭವನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡುವಂತೆ ಮಫ್ತಿಯಲ್ಲಿರುತ್ತಿದ್ದ ಪೊಲೀಸರಿಗೆ ಗೃಹ ಇಲಾಖೆ ಸೂಚನೆ ನೀಡಿತ್ತು.

ಇಂಥ ವಿಷಮಯ ಪರಿಸ್ಥಿತಿಯಲ್ಲಿ ಗಾಂಧೀಜಿ ತಮ್ಮ ಅಂತಿಮ ದಿನಗಳನ್ನು ಕಳೆಯುತ್ತಿದ್ದರು. ಜನವರಿ 30ರ ಸಂಜೆ ನಾಲ್ಕಕ್ಕೆ ಗೃಹ ಸಚಿವ ಪಟೇಲ್ ಅವರ ಭೇಟಿ ನಿಗದಿಯಾಗಿತ್ತು. ಸರ್ದಾರ್ ಪಟೇಲ್ ಸಮಯಕ್ಕೆ ಸರಿಯಾಗಿ ತಮ್ಮ ಮಗಳು ಮನುಬೆನ್ ಜೊತೆಗೂಡಿ ಗಾಂಧೀಜಿಯವರ ಭೇಟಿಗೆ ಬಂದರು. ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ನೆಹರೂ ಮತ್ತು ಪಟೇಲ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಉತ್ಸುಕರಾಗಿದ್ದ ಗಾಂಧೀಜಿ, ಪಟೇಲರ ಜೊತೆ ಅಂದು ಗಹನ ಚರ್ಚೆ ನಡೆಸಲಿದ್ದಾರೆ ಎನ್ನುವ ಗುಸು ಗುಸು ಸುದ್ದಿ ಹಬ್ಬಿತ್ತು. ಗಾಂಧೀಜಿ ನೂಲುತ್ತಲೇ ಪಟೇಲರ ಜೊತೆ ಚರ್ಚೆ ನಡೆಸುತ್ತಿದ್ದರು. ಸಮಯ ಐದು ಗಂಟೆ ಕಳೆದರೂ ಅವರಿಬ್ಬರ ನಡುವೆ ಚರ್ಚೆ ನಡೆದೇ ಇತ್ತು.

ಅವರಿಬ್ಬರ ನಡುವಿನ ಚರ್ಚೆ ನಿಲ್ಲುವ ಸೂಚನೆ ಕಾಣದಾದಾಗ ಅಭಾ ಧೈರ್ಯ ಮಾಡಿ ಗಾಂಧೀಜಿಗೆ ಹೊರಗಡೆಯಿಂದಲೇ ಗಡಿಯಾರ ತೋರಿಸಿ ಪ್ರಾರ್ಥನೆಗೆ ಸಮಯ ಮೀರುತ್ತಿದೆಯೆಂದು ಸನ್ನೆಮಾಡಿ ಹೇಳಿದಳು. ಇದನ್ನು ಗಮನಿಸಿದ ಗಾಂಧೀಜಿ, ‘ದೇವರ ಜೊತೆಗಿನ ನನ್ನ ಸಭೆಗೆ ತಡವಾಗುತ್ತಿದೆ’ ಎಂದು ಪಟೇಲರಿಗೆ ತಮ್ಮ ಪ್ರಾರ್ಥನಾ ಸಭೆಯ ಬಗ್ಗೆ ಸೂಚ್ಯವಾಗಿ ತಿಳಿಸಿ ತಡವರಿಸಿಕೊಂಡು ಎದ್ದು ನಿಂತರು.

ಉಪವಾಸ ಸತ್ಯಾಗ್ರಹದ ಕಾರಣದಿಂದ ತೀವ್ರ ಬಳಲಿಕೆಗೆ ಈಡಾಗಿದ್ದ ಗಾಂಧೀಜಿ ಸ್ವತಂತ್ರವಾಗಿ ನಡೆದಾಡಲೂ ಪ್ರಯಾಸಪಡುತ್ತಿದ್ದರು. ಹಾಗಾಗಿ ಅಭಾ ಮತ್ತು ಮನು ಅವರ ಹೆಗಲ ಮೇಲೆ ಕೈ ಊರಿಕೊಂಡು ಸಂಜೆಯ ಪ್ರಾರ್ಥನಾ ಸಭೆಯ ಕಡೆಗೆ ಹೆಜ್ಜೆ ಹಾಕಿದರು. ಎಂದಿನಂತೆ ಸಂಜೆ ಸರಿಯಾಗಿ 5 ಗಂಟೆಗೆ ಆರಂಭವಾಗಬೇಕಿದ್ದ ಪ್ರಾರ್ಥನಾ ಸಭೆ ತಡವಾಗಿದ್ದರಿಂದ ಜನರ ಗುಂಪಿನಲ್ಲಿ ಗುಸು ಗುಸು ಆರಂಭವಾಗಿತ್ತು.

ಗಾಂಧೀಜಿ ತಮ್ಮ ಇಬ್ಬರು ಮೊಮ್ಮಕ್ಕಳೊಡನೆ ಅವರ ಕೊಠಡಿಯಿಂದ ಆಚೆ ಬರುತ್ತಿರುವುದು ಕಾಣುತ್ತಿದ್ದಂತೆ ಜನರು ಖುಷಿಯಿಂದ ‘ಓ ಅಗೋ ಗಾಂಧಿ ಬರುತ್ತಿದ್ದಾರೆ’ ಎಂದು ಉತ್ಸಾಹದಲ್ಲಿ ಉದ್ಗಾರ ತೆಗೆದರು. ಗಾಂಧೀಜಿಯ ಬಲಗಡೆಗೆ ಮನು ಮತ್ತು ಎಡಗಡೆಯಲ್ಲಿ ಅಭಾ ಹೆಜ್ಜೆ ಹಾಕುತ್ತಿದ್ದರು. ಕೇವಲ ನೂರು ಅಡಿ ದೂರದಲ್ಲಿದ್ದ ಪ್ರಾರ್ಥನಾ ವೇದಿಕೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಮೆಲುದನಿಯಲ್ಲಿ ‘ಪ್ರಾರ್ಥನಾ ಸಭೆಗೆ ತಡವಾಗುತ್ತಿದೆ ಎಂದು ಏಕೆ ನನಗೆ ಮೊದಲೇ ಎಚ್ಚರಿಸಲಿಲ್ಲ’ ಎಂದು ಮೊಮ್ಮಕ್ಕಳಿಗೆ ಗದರಿದರು. ‘ನಿಮ್ಮ ಗಂಭೀರ ಚರ್ಚೆಯ ನಡುವೆ ಬಂದು ಸಮಯ ಮೀರುತ್ತಿದೆ ಎಂದು ಎಚ್ಚರಿಸುವ ಧೈರ್ಯ ನಮಗೆ ಬರಲಿಲ್ಲ’ ಎಂದು ಮನು ಉತ್ತರಿಸಿದಳು. ‘ಸಮಯಕ್ಕೆ ಸರಿಯಾಗಿ ರೋಗಿಗೆ ಔಷಧಿ ನೀಡುವುದು ದಾದಿಯರ ಕರ್ತವ್ಯ. ನಿಧಾನವಾದರೆ ರೋಗಿ ಸಾಯಲೂಬಹುದಲ್ಲವೇ’ ಎಂದು ತಿಳಿವಳಿಕೆಯ ಮಾತು ಹೇಳಿ ಮುಂದೆ ಹೆಜ್ಜೆ ಹಾಕಿದರು.

ಗಾಂಧೀಜಿಯ ಪ್ರಾರ್ಥನಾ ಸಭೆಗೆ ಆ ವೇಳೆಗಾಗಲೇ ಸುಮಾರು 200ರಿಂದ 250 ಜನ ಸೇರಿದ್ದರು. ಅವರೆಲ್ಲ ಕೈಜೋಡಿಸಿ ಗಾಂಧೀಜಿಗೆ ನಮಸ್ಕರಿಸುತ್ತಿದ್ದರು. ಗಾಂಧೀಜಿ ಕೂಡಾ ಜನರಿಗೆ ಪ್ರತಿ ನಮಸ್ಕರಿಸುತ್ತಾ ನಿಧಾನವಾಗಿ ಪ್ರಾರ್ಥನಾ ವೇದಿಕೆಯ ಬಳಿಗೆ ಬಂದರು.

ಜನರ ಗುಂಪಿನ ನಡುವೆ ಖಾಕಿ ಉಡುಗೆ ತೊಟ್ಟು ನಿಂತಿದ್ದ ಹಂತಕ ಗೋಡ್ಸೆ ಗಾಂಧೀಜಿಯವರಿಗೆ ಬಾಗಿ ನಮಸ್ಕರಿಸುವಂತೆ ಮುಂದೆ ಬಂದಾಗ ಮನು ಆತನಿಗೆ ಕೈ ಅಡ್ಡಹಿಡಿದು ‘ಅಣ್ಣಾ , ಪ್ರಾರ್ಥನಾ ಸಭೆಗೆ ಈಗಾಗಲೇ ತಡವಾಗಿದೆ. ದಾರಿಬಿಡಿ’ ಎಂದು ಹೇಳಿ ಮುಂದಕ್ಕೆ ಬರುತ್ತಿದ್ದಂತೆಯೇ ಗೋಡ್ಸೆ ತನ್ನ ಎಡಗೈಯಿಂದ ಆಕೆಯನ್ನು ಬದಿಗೆ ದೂಡಿದ. ಮನು ಕೈಯಲ್ಲಿದ್ದ ಪುಸ್ತಕ, ಜಪಮಣಿ ನೆಲಕ್ಕೆ ಬಿದ್ದವು. ಮನು ಸಾವರಿಸಿಕೊಂಡು ಕೆಳಗೆ ಬಿದ್ದಿದ್ದ ಅವುಗಳನ್ನು ಎತ್ತಿಕೊಂಡು ನಿಲ್ಲುವಷ್ಟರಲ್ಲಿ ಆಗಬಾರದ ಅನಾಹುತ ಆಗಿ ಹೋಗಿತ್ತು. ಗೋಡ್ಸೆ ತನ್ನ ಎರಡೂ ಕೈಗಳ ನಡುವೆ ಅಡಗಿಸಿ ಇಟ್ಟುಕೊಂಡಿದ್ದ ಕಪ್ಪುಬಣ್ಣದ ಇಟಾಲಿಯನ್ ನಿರ್ಮಿತ ಬೆರೆಟ್ಟಾ ಪಿಸ್ತೂಲನ್ನು ಹೊರತೆಗೆದು ಮುನ್ನುಗ್ಗಿ ಗಾಂಧೀಜಿಯ ಎದುರಿಗೇ ನಿಂತು ಅವರ ಎದೆಗೆ ಮತ್ತು ಕಿಬ್ಬೊಟ್ಟೆಗೆ ಒಂದರ ಹಿಂದೊಂದರಂತೆ ಮೂರು ಗುಂಡುಗಳನ್ನು ಕೈಅಳತೆಯ ದೂರದಿಂದಲೇ ಹಾರಿಸಿದ. ಶಕ್ತಿಯುತವಾಗಿದ್ದ ವಿದೇಶಿನಿರ್ಮಿತ ಪಿಸ್ತೂಲಿನಿಂದ ಹಾರಿದ ಗುಂಡುಗಳು ಗಾಂಧೀಜಿಯ ದೇಹಕ್ಕೆ ತೂರಿ ಹೊರಬಂದವು. ಎದೆ, ಕಿಬ್ಬೊಟ್ಟೆಯಿಂದ ರಕ್ತ ಚಿಮ್ಮಿ ಅವರು ಹೊದ್ದಿದ್ದ ಶಾಲು ರಕ್ತಮಯವಾಯಿತು. ಅಲ್ಲಿ ಏನಾಗುತ್ತಿದೆ ಎಂದು ಸುತ್ತಲಿನವರಿಗೆ ಅರಿವಾಗುವ ವೇಳೆಗಾಗಲೇ ಗಾಂಧೀಜಿ ಹಿಂದಕ್ಕೆ ಒರಗಿ ನೆಲಕ್ಕೆ ಕುಸಿದಿದ್ದರು. ‘ಹೇ ರಾಮ್... ಹೇ ರಾಮ್...’ ಎನ್ನುವ ಕ್ಷೀಣದನಿಯೊಡನೆ ಅಂತಿಮವಾಗಿ ಗಾಂಧೀಜಿ ಕಣ್ಣು ಮುಚ್ಚಿದರು. ಆಗ ಸಮಯ ಸಂಜೆ 5 ಗಂಟೆ 17 ನಿಮಿಷ.

ಹತ್ಯೆ ನಡೆದಾಗ ಗಾಂಧೀಜಿಯವರ ಹಿಂದೆಯೇ ನಡೆದು ಬರುತ್ತಿದ್ದ ಆಪ್ತ ಸಹಾಯಕ ಬ್ರಿಜ್‌ಕೃಷ್ಣ ಮತ್ತು ಕಲ್ಯಾಣಂ ಗರ ಬಡಿದವರಂತೆ ಹಾಗೆ ನಿಂತುಬಿಟ್ಟರು. ಅವರಿಗೆ ಅರಿವಿಲ್ಲದಂತೆ ಅವರ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಗಾಂಧೀಜಿಯವರ ರಕ್ತಸಿಕ್ತ ದೇಹವನ್ನು ಮನು ಮತ್ತು ಅಭಾ ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಗೋಳಾಡುತ್ತಿದ್ದರು. ನಂತರ ಆಪ್ತಸಹಾಯಕರು ಮೃತದೇಹವನ್ನು ಬಿರ್ಲಾ ಭವನದ ಅವರ ಕೊಠಡಿಗೆ ತಂದು ಚಾಪೆಯ ಮೇಲೆ ಮಲಗಿಸಿದರು.

ಗಾಂಧೀಜಿಯವರ ಹತ್ಯೆಯ ವಿಷಯ ಕ್ಷಣಮಾತ್ರದಲ್ಲಿ ಪ್ರಧಾನಿ ನೆಹರೂ ಕಚೇರಿಗೆ ಮತ್ತು ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರ ಕಚೇರಿಗಳಿಗೆ ತಲುಪಿತು. ಈ ಸುದ್ದಿ ಕೇಳಿದ ಕೂಡಲೇ ಲಾರ್ಡ್ ಮೌಂಟ್ ಬ್ಯಾಟನ್ ಬೆಚ್ಚಿಬಿದ್ದರು. ತಮ್ಮ ಸಹಾಯಕ ಕ್ಯಾಂಪ್ ಬೆಲ್ ಜಾನ್ಸನ್ ಅವರಿಗೆ ‘ಗಾಂಧಿಯನ್ನು ಕೊಂದವರು ಯಾರು? ಅಕಸ್ಮಾತ್ ಆತ ಮುಸ್ಲಿಂ ಆಗಿದ್ದರೆ ಇಡೀ ಜಗತ್ತು ಅರಿಯದ ಭೀಕರ ನರಹತ್ಯೆಯನ್ನು ನಾವು ಕಾಣಲಿದ್ದೇವೆ’ ಎಂದು ಆತಂಕದಿಂದ ನುಡಿದರು. ಗಾಂಧೀಜಿಯವರ ಹತ್ಯೆಯ ಶೋಕದ ಸುದ್ದಿಯನ್ನು ದೆಹಲಿಯ ಆಕಾಶವಾಣಿ ಪ್ರಥಮವಾಗಿ ಪ್ರಸಾರ ಮಾಡಿತು. 

ಪ್ರಧಾನಿ ನೆಹರೂ ಅವರಂತೂ ಈ ಸುದ್ದಿಯಿಂದ ದಿಗ್ಭ್ರಾಂತರಾಗಿದ್ದರು. ಈ ದಿಗ್ಭ್ರಾಂತಿಯ ಸಂದರ್ಭದಲ್ಲೂ ಅವರು ನಿಂತಲ್ಲೇ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಅಮೋಘ ಭಾಷಣ ಹೀಗಿತ್ತು. ‘ನಮ್ಮೆಲ್ಲರ ಬದುಕಿನಿಂದ ಬೆಳಕು ನಂದಿ ಹೋಗಿದೆ. ಎಲ್ಲೆಲ್ಲೂ ಕತ್ತಲು ಆವರಿಸಿದೆ. ನಿಮಗೆ ಏನು ಹೇಳಬೇಕು ಮತ್ತು ಹೇಗೆ ಹೇಳಬೇಕು ಎನ್ನುವುದೇ ನನಗೆ ತಿಳಿಯುತ್ತಿಲ್ಲ. ನಮ್ಮ ನೆಚ್ಚಿನ ನಾಯಕ ರಾಷ್ಟ್ರಪಿತ ಬಾಪೂ ಇನ್ನಿಲ್ಲ. ಆದರೆ, ಅದು ಒಂದು ಅರ್ಥದಲ್ಲಿ ತಪ್ಪು. ಹಲವಾರು ವರ್ಷಗಳಿಂದ ನಾವು ನೋಡಿದ್ದಂತೆ ಮತ್ತೆ ಅವರನ್ನು ನೋಡಲು ಆಗುವುದಿಲ್ಲ. ಸಲಹೆ ಕೇಳಲು ಅವರ ಬಳಿ ಓಡೋಡಿ ಹೋಗುವಂತಿಲ್ಲ, ಸಾಂತ್ವನ ಕೇಳುವಂತಿಲ್ಲ. ಇದು ಆಘಾತಕಾರಿ ಹೊಡೆತ. ನನಗಷ್ಟೇ ಅಲ್ಲ. ಈ ದೇಶದ ಲಕ್ಷ ಲಕ್ಷ ಜನರಿಗೆ ಆಗಿರುವ ನಷ್ಟ. ಈ ಹೊಡೆತದ ಆಘಾತವನ್ನು ಯಾವುದೇ ಸಲಹೆ, ಯಾರದೇ ಸಾಂತ್ವನಗಳಿಂದ ಮೃದುಗೊಳಿಸಿಕೊಳ್ಳುವುದು ಬಹಳ ಕಷ್ಟ. ಬೆಳಕು ಆರಿಹೋಗಿದೆ ಎಂದು ನಾನು ಹೇಳಿದ್ದೇನೆ. ಆದರೆ, ಇದು ಒಂದು ಅರ್ಥದಲ್ಲಿ ಸರಿಯಲ್ಲ. ಈ ದೇಶಕ್ಕೆ ಬೆಳಕು ತೋರಿದ ಅದು ಸಾಧಾರಣ ಬೆಳಕಲ್ಲ. ಇಷ್ಟು ವರ್ಷಗಳ ಕಾಲ ಈ ದೇಶವನ್ನು ಬೆಳಗಿದ ಬೆಳಕು. ಇನ್ನೂ ಹಲವಾರು ವರ್ಷಗಳ ಕಾಲ ಅದು ಈ ದೇಶವನ್ನು ಬೆಳಗುತ್ತದೆ. ಸಾವಿರಾರು ವರ್ಷಗಳ ನಂತರವೂ ಈ ಬೆಳಕನ್ನು ದೇಶದಲ್ಲಿ ನೋಡಬಹುದು’ ಎಂದು ಗದ್ಗದಿತ ದನಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಈ ಭಾಷಣ ರಾಷ್ಟ್ರ ನಾಯಕರೊಬ್ಬರು ನೀಡಿದ ಮಾದರಿ ಶೋಕ ಸಂದೇಶವೆಂದು ಈಗಲೂ ಹೆಸರಾಗಿದೆ.

ಗಾಂಧೀಜಿಯ ಹತ್ಯೆಯಾಗಿ ಈಗ 75 ವರ್ಷ. ಅಹಿಂಸೆಯ ಸಾಕಾರಮೂರ್ತಿ ಮಹಾತ್ಮ ಗಾಂಧೀಜಿ ಅವರು ಹಿಂಸೆಗೆ ಬಲಿಯಾಗಿ ಮನುಕುಲದ ಚರಿತ್ರೆಯಲ್ಲಿ ಬುದ್ಧ ಮತ್ತು ಏಸುಕ್ರಿಸ್ತರ ಸಾಲಿನಲ್ಲಿ ಶಾಶ್ವತ ತಾರೆಯಾಗಿ ಬೆಳಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು