ಶನಿವಾರ, ಜೂನ್ 25, 2022
27 °C

ಪಾಂಡಿತ್ಯದಿಂದ ಬೆಳಗಿದ ‘ಭಾಸ್ಕರ’

ಎಸ್‌.ಆರ್‌. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಗೆಳೆಯ ಡಾ.ಜಿ. ಭಾಸ್ಕರ ಮಯ್ಯ ತೀರಿಕೊಂಡರೆಂದು ಯು.ಆರ್‌. ಜಯವಂತ ತಿಳಿಸಿದಾಗ, ನಮ್ಮ ವೈಚಾರಿಕ ಸಾಹಿತ್ಯದ ಪ್ರಮುಖ ಚಿಂತಕ-ವಿದ್ವಾಂಸರನ್ನು ಕಳೆದುಕೊಂಡೆವಲ್ಲ ಎಂದು ಮನಸ್ಸು ಭಾರವಾಯಿತು. ಮಯ್ಯರು ಕುಂದಾಪುರದ ಭಂಡಾರ್‌ಕರ್‍ಸ್‌ ಕಾಲೇಜಿನಲ್ಲಿ ಹಿಂದಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಪ್ರಮುಖ ಎಡಪಂಥೀಯ ಚಿಂತಕರಾಗಿದ್ದ ಅವರು ತಮಗೆ ಅನಿಸಿದ್ದನ್ನು ತಾತ್ವಿಕ ನಿಷ್ಠೆಯಿಂದ ಯಾರಿಗೂ ಹೆದರದೆ, ಲೌಕಿಕದ ಯಾವ ಲಾಭವನ್ನೂ ಕಳಕೊಳ್ಳಲು ಭಯಪಡದೆ ಹೇಳುತ್ತಿದ್ದರು. ಯಾರನ್ನು ಮೆಚ್ಚಿಸಲೂ ಅವರು ಬರೆದದ್ದಿಲ್ಲ. ಯಾರಿಗೋ, ಯಾವುದಕ್ಕೋ ಹೆದರಿ ಹೇಳಬೇಕಾದ್ದನ್ನು ಹೇಳದೆ ಇದ್ದವರೂ ಅಲ್ಲ. ಇ.ಎಂ.ಎಸ್‌. ನಂಬೂದರಿಪಾಡ್‌, ರಾಹುಲ್‌ ಸಾಂಕೃತ್ಯಾಯನ, ಶಂ.ಬಾ. ಜೋಶಿ, ಬಿಪಿನ್‌ ಪಾಲ್‌ ಮೊದಲಾದವರ ಬರಹ ಚಿಂತನೆಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು.

ಮಯ್ಯರು ಒಣ ಮಾರ್ಕ್ಸ್‌ವಾದಿಯಾಗಿರಲಿಲ್ಲ. ಅವರ ಮಾತು, ಬರಹ ಎರಡರಲ್ಲೂ ಸಾಕಷ್ಟು ವೈವಿಧ್ಯವೂ, ತಲಸ್ಪರ್ಶಿ ಪಾಂಡಿತ್ಯವೂ, ಸಮರ್ಥ ಉದಾಹರಣೆಗಳೂ, ದಾಖಲೆ, ಪುರಾವೆಸಹಿತ ಸಾಕ್ಷ್ಯಗಳೂ ಇರುತ್ತಿದ್ದವು. ನನಗೆ ಹತ್ತು ಕೈಗಳಿದ್ದರೆ ಅವುಗಳಲ್ಲಿ ಮಾರ್ಕ್ಸ್‌ವಾದ ಮಾತ್ರವಲ್ಲ ವೇದಗಳು, ಉಪನಿಷತ್ತು, ತತ್ವಶಾಸ್ತ್ರ, ರಾಮಾಯಣ, ಮಹಾಭಾರತ – ಹೀಗೆ ಎಲ್ಲವನ್ನೂ ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದೆ ಎಂದು ನಂಬೂದರಿಪಾಡ್‌ ಹೇಳಿದ್ದರು. ಅವರ ಮಾತುಗಳನ್ನು ಮಯ್ಯರು ಸ್ವತಃ ಕಾರ್ಯರೂಪಕ್ಕೆ ತಂದವರು. ಅದಕ್ಕೊಂದು ಉದಾಹರಣೆಯಾಗಿ ಅವರ ಈಚಿನ ಐದು ಪುಸ್ತಕಗಳನ್ನು ಹೆಸರಿಸುತ್ತೇನೆ: ‘ಜಾತಿ, ಮತ, ಮತಾಂತರ ಮತ್ತು ಮಾರ್ಕ್ಸ್‌ವಾದಿ ವಿಶ್ವದೃಷ್ಟಿ’, ‘ಜಾಗತೀಕರಣದ ನಾಗಪಾಶ’, ‘ಋಗ್ವೇದ ಮತ್ತು ಜನಸಂಸ್ಕೃತಿ’, ‘ವಾದ ಪ್ರತಿವಾದ ಮತ್ತು ಸಂವಾದ’, ‘ನಿಕಷಕ್ಕೊಡ್ಡದ ನಿರ್ಣಯಗಳು’. ಇವುಗಳಲ್ಲದೆ ಅವರು, ‘ಶಂಬಾ: ವ್ಯಕ್ತಿತ್ವ ಮತ್ತು ಕೃತಿತ್ವ’, ‘ಮಾರ್ಕ್ಸ್‌ವಾದ ಮತ್ತು ಸೌಂದರ್ಯ ಪ್ರಜ್ಞೆ’, ‘ನಾಮವರ್‌ ಸಿಂಹ: ಆಯ್ದ ಲೇಖನಗಳು’ (ನಾಮವರ್‌ ಸಿಂಹ – ಹಿಂದಿ ಸಾಹಿತ್ಯದಲ್ಲಿ ಉಚ್ಚ ಶ್ರೇಣಿಯ ವಿಮರ್ಶಕರ ಪಂಕ್ತಿಯಲ್ಲಿ ಅಗ್ರಗಣ್ಯ ಹೆಸರು) – ಹೀಗೆ ಹಲವು ಕೃತಿಗಳನ್ನು ಕೂಡ ಹೆಸರಿಸಬಹುದು. ಕನ್ನಡ, ಹಿಂದಿ ಮತ್ತು ಅನುವಾದಗಳು ಸೇರಿ ಅವರ ಕೃತಿಗಳ ಸಂಖ್ಯೆ ಐವತ್ತಕ್ಕೂ ಹೆಚ್ಚಿದೆ.

ಭಾಸ್ಕರ ಮಯ್ಯರ ಊರು ಕುಂದಾಪುರ ಸಮೀಪದ ಗುಂಡ್ಮಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದ ಬಳಿಕ ಬಿ.ಇಡಿ ಮಾಡಿದರು. ಹೀಗಾಗಿ ಅವರಿಗೆ ವಿಜ್ಞಾನದ ಅಧ್ಯಯನ ಕ್ರಮದ ತರಬೇತಿ ಮೊದಲಿನಿಂದಲೂ ಇತ್ತು. ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜು ಅಧ್ಯಾಪಕರಾದರು. ಹಿಂದಿ ಸಾಹಿತ್ಯದಲ್ಲಿ ಸಂಶೋಧನಾ ಅಧ್ಯಯನಕ್ಕೆ ಪಿಎಚ್‌.ಡಿ ಪದವಿ ಪಡೆದರು. ಮುಂದೆ ಸತತವಾಗಿ ಅವರು ಫಿಲಾಸಫಿ, ಜೈನಾಲಜಿ ಮತ್ತು ತೌಲನಿಕ ಧಾರ್ಮಿಕ ಅಧ್ಯಯನ, ಪ್ರಾಕೃತ, ಸಂಸ್ಕೃತ, ಇಂಗ್ಲಿಷ್‌ ಸಾಹಿತ್ಯ – ಹೀಗೆ ಆರು ಎಂ.ಎ ಪದವಿಗಳನ್ನು ಪಡೆದರು.

ಯಾವುದೇ ಒಂದು ವಿಚಾರದ ತಲಸ್ಪರ್ಶಿ ಅಧ್ಯಯನಕ್ಕೆ ಎಂ.ಎ ಓದುವಿಕೆ ಕ್ರಮಬದ್ಧವಾದ್ದೊಂದು ವ್ಯವಸ್ಥೆ ಮಾಡಿಕೊಡುತ್ತದೆ. ಸುಮ್ಮನೆ ಓದಲು ಇಷ್ಟವಾಗದ ಕೃತಿಗಳನ್ನು ಸಿಲೆಬಸ್‌ನಲ್ಲಿ ಇರುವುದರಿಂದ ಪರೀಕ್ಷೆಗಾಗಿ ಓದಲೇ ಬೇಕಾಗುತ್ತದೆ. ಆಗ ಒಂದು ಶಾಸ್ತ್ರೀಯ ಕಲಿಕೆ ಆದಂತಾಗುತ್ತದೆ ಎಂದವರು ಹೇಳುತ್ತಿದ್ದರು. ಅವರು ಜೈನಾಲಜಿ, ವೈದಿಕ -ಸಂಸ್ಕೃತ ಮೊದಲಾದವುಗಳ ಬಗ್ಗೆ ಬರೆದ ಕೃತಿಗಳಿಂದ ಅವರ ಓದಿನ ಆಳ–ವಿಸ್ತಾರಗಳು ತಿಳಿಯುತ್ತವೆ.

ಮಯ್ಯರ ಮನೋಭಾವದಲ್ಲೇ ಪ್ರಶ್ನಿಸುವ ಮತ್ತು ಸಂಶೋಧನಾತ್ಮಕವಾಗಿ ಅರಿಯುವ ಗುಣವಿತ್ತು. ಅದಕ್ಕಾಗಿ ಮಂದಾರ್ತಿ ಎಂಬ ಪ್ರಖ್ಯಾತ ದೇವಸ್ಥಾನದ ಬಗ್ಗೆ ಬರೆದ ‘ಮಂದಾರ್ತಿ: ವೇದಿಕೆ ಮತ್ತು ಪ್ರಶ್ನೆಗಳು’ ಎಂಬ ಲೇಖನವನ್ನು ಗಮನಿಸಬಹುದು. ಮಂದಾರ್ತಿ ದೇವಸ್ಥಾನದ ಹೆಸರಲ್ಲಿ ಹೊರಡುವ ಯಕ್ಷಗಾನ ಮೇಳದಿಂದಾಗಿಯೂ ಆ ದೇವಸ್ಥಾನ ಬಹಳ ಕಡೆ ಪ್ರಸಿದ್ಧ. ಕರಾವಳಿಯ ಹೆಚ್ಚಿನ ದೇವಸ್ಥಾನಗಳಂತೆ ಅಲ್ಲೂ ಬಂಟ ಜಾತಿಯವರು ಆಡಳಿತ ಮುಕ್ತೇಸರರು. ಅವರಲ್ಲಿ ಹೆಚ್ಚಿನವರು ಭೂಮಾಲೀಕರು. ಬ್ರಾಹ್ಮಣರು ಅರ್ಚಕರು.

ಮಂದಾರ್ತಿ ಯಕ್ಷಗಾನ ಮೇಳದ ಕಲಾವಿದರಲ್ಲಿ ಬಿಲ್ಲವ ಜಾತಿಗೆ ಸೇರಿದವರು ಅಭಿನಯಿಸುವಂತಿಲ್ಲ ಎಂಬ ಕಟ್ಟಳೆ ಇತ್ತು. ಅದನ್ನು ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ, ಅರಾಟೆ ಮಂಜು ಹಾಗೂ ಇನ್ನಿತರ ಕಲಾವಿದರು ವಿರೋಧಿಸಿದರು. ಆ ಸಂದರ್ಭದಲ್ಲಿ ಮಯ್ಯರು ಉಡುಪಿ ಜಿಲ್ಲಾ ವಿಚಾರವಾದಿ ವೇದಿಕೆ ಅಧ್ಯಕ್ಷರು. ವೇದಿಕೆಯು ಯಕ್ಷಗಾನ ಕಲಾವಿದರ ಪರವಾಗಿ ನಿಂತಿತು. ಆಗ ನಡೆದ ಚರ್ಚೆಗಳಿಂದ ಅಂತಿಮವಾಗಿ ಜಾತಿಭೇದವಿಲ್ಲದೆ ಎಲ್ಲ ಕಲಾವಿದರು ಅಭಿನಯಿಸಬಹುದು ಎಂಬ ನಿರ್ಣಯವಾಗಿ ಕಲಾವಿದರಿಗೆ ಜಯವಾಯಿತು. ಮಯ್ಯರು ಕಲಾವಿದರ ಪರವಾಗಿ ಮಂಡಿಸಿದ ವಾದಗಳ ಕೆಲವು ಅಂಶಗಳು ಅವರ ಚಿಂತನಾಕ್ರಮಕ್ಕೆ ಕನ್ನಡಿ ಹಿಡಿಯಬಲ್ಲವು. ಅದಕ್ಕಾಗಿ ಈ ಕೆಳಗಿನ ಕೆಲವು ಉದಾಹರಣೆಗಳು.

ಮೊದಲಿಗೆ ಅವರು ಸ್ಥಳ ಪುರಾಣದ ಮಹತ್ವ, ಸಂಸ್ಕೃತಿ ಮತ್ತು ಧಾರ್ಮಿಕ ಹಿತದ ಪ್ರಶ್ನೆಗಳಿಗೆ ಉತ್ತರಿಸಿದರು. ಆ ಬಳಿಕ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ಬಿಲ್ಲವರು ಅಭಿನಯಿಸುವಂತಿಲ್ಲ ಎಂಬುದಕ್ಕೆ ‘ಅನಾದಿ ಕಾಲ’ ಎಂದರೆ ಏನೆಂದು ಆ ಕಾಲಕಲ್ಪನೆಯನ್ನು ಪ್ರಶ್ನಿಸಿದರು. ಮಯ್ಯರು ನೀಡಿದ ಆಧಾರಗಳ ಪ್ರಕಾರ ದೇವಸ್ಥಾನವನ್ನು ಎಂಟನೇ ಶತಮಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯುವುದು ಐತಿಹಾಸಿಕ ತಿಳಿವಳಿಕೆಯಂತೆ ಅಸಾಧ್ಯ. ಅನಾದಿ ಕಾಲದ ಹಿನ್ನೆಲೆಯಲ್ಲಿ ‘ದುರ್ಗೆ’ಯ ಸ್ಥಾಪನೆಗಾಗಿ ದೇವಳವು ಋಗ್ವೇದದ ‘ಜಾತವೇದಸೇ ಸುನನಾಮ ಸೋಮ ಮರಾತೀಯತೋ ನಿ ದಹಾತಿ ವೇದಃ...’ ಮಂತ್ರವನ್ನು ಉಲ್ಲೇಖಿಸಿತು.

ಅದಕ್ಕೆ ಉತ್ತರವಾಗಿ ಮಯ್ಯರು, ಅದು ಅಗ್ನಿಯನ್ನು ಅರ್ಚಿಸುವ ಮಂತ್ರ. ದುರ್ಗಾ ಎಂದರೆ ಈ ದೇವಸ್ಥಾನದ ದೇವಿಯಲ್ಲ. ದುರ್ಗಾಣಿ ಎಂದರೆ ಕಷ್ಟಕಾರ್ಪಣ್ಯಗಳು ಎಂದು ಅರ್ಥ. ಇಂಥ ಅರ್ಥವುಳ್ಳ ದುರ್ಗಾ–ದುರ್ಗ ಶಬ್ದವನ್ನು ಬಿಟ್ಟರೆ ಯಾವುದೇ ‘ದುರ್ಗೆ’ ಎಂಬ ದೈವತವೂ ವೇದಗಳಲ್ಲಿ ಇಲ್ಲ. ಕೆಲವೊಂದು ಕಡೆ ವೇದಗಳಲ್ಲಿ ‘ದುರ್ಗಾ’ ಎಂಬ ಪದವು ‘ಅಗ್ನಿ’ಯನ್ನು ಸೂಚಿಸುತ್ತದೆ ಅಷ್ಟೇ ಎಂದು ವಿವರಿಸಿದರು.

ಇದಲ್ಲದೆ 1954ನೆಯ ಇಸವಿವರೆಗೆ ಶ್ರೀಕ್ಷೇತ್ರ ಮಂದಾರ್ತಿ ದೇವಳವು ಮುಳಿಹುಲ್ಲಿನ ಮಾಡನ್ನು ಹೊಂದಿತ್ತು. ಮುಳಿಹುಲ್ಲಿನ ಮಾಡಿರುವ ದೇವಳದ ರಚನೆ ಬಗ್ಗೆ ಯಾವ ಆಗಮದಲ್ಲಿ ಹೇಳಿದೆ? ಭೂತಾರಾಧನೆ ಎಂದೆಂದಿಗೂ ವೈದಿಕವಲ್ಲ. ದೇವಳದ ಒಳ ಆವರಣದಲ್ಲಿ ವೀರಭದ್ರ, ಒಳ ಪ್ರಾಕಾರದಲ್ಲಿ ಬೊಬ್ಬರ್ಯ ಅಲ್ಲದೆ ಚಿಕ್ಕು, ಚಾಮುಂಡಿ, ಕಲ್ಲುಕುಟಿಗ ಇತ್ಯಾದಿ ಕರಾವಳಿಯ ಭೂತ–ದೈವಗಳಿವೆ. ಅದು ಹೇಗೆ ವೈದಿಕ ? ಇತ್ಯಾದಿ 20 ಪ್ರಶ್ನೆಗಳನ್ನು ಮುಂದಿಟ್ಟರು. ಅದಕ್ಕೆ ಸಂಶೋಧನಾ ಆಧಾರಗಳನ್ನು ಕೊಟ್ಟರು.

ದೇವಸ್ಥಾನದಲ್ಲಿ ದೇವಿಯನ್ನು ಸ್ತುತಿಸುವ ‘ಶಂಖಾರಿಚಾಪಶರ ಭಿನ್ನ ಕರಾಂ...’ ಮಂತ್ರ ಮಂದಾರ್ತಿ ದೇವಿಯ ವಿಗ್ರಹಕ್ಕೆ ಸಂಬಂಧಿಸಿದ್ದಾಗಲಾರದು. ಯಾಕೆಂದರೆ ಈಗಿನ ದೇವಿಯ ಶಿಲಾಮೂರ್ತಿಯ ಕೈಯಲ್ಲಿ ಶಂಖ, ಅರಿ, ಚಾಪ, ಶರಗಳಿಲ್ಲ. ಬದಲಾಗಿ ತ್ರಿಶೂಲ ಚಕ್ರ ಮಾತ್ರ ಇದೆ ಎಂದು ವಾದಿಸಿದರಲ್ಲದೆ ದೇವಿಯ ಮುಖವಾಡಗಳ ಬಗ್ಗೆ ತೌಲನಿಕ ಮಾಹಿತಿಯನ್ನೂ ನೀಡಿದರು. ಹೀಗೆ, ವಿಚಾರ, ವಿಜ್ಞಾನ, ತರ್ಕ, ಹೋಲಿಕೆ, ಸಂಶೋಧನೆಗಳಿಂದ ಆಧಾರಸಹಿತ ವಿಶ್ಲೇಷಿಸುವುದು, ಪ್ರಶ್ನಿಸುವುದು ಮಯ್ಯರ ಬರಹಗಳಲ್ಲೆಲ್ಲ ಕಾಣಬಹುದಾದ ಒಂದು ಸಾಮಾನ್ಯ ಅಂಶ.

ನಮ್ಮ ದೇಶದಲ್ಲಿರುವ ಹಿಂದೂ–ಮುಸ್ಲಿಂ ಸಾಮರಸ್ಯದ ಬಗ್ಗೆ ಹಳ್ಳಿಗಳ ಹಲವಾರು ಉದಾಹರಣೆಗಳನ್ನು ಬಿಪಿನ್‌ ಚಂದ್ರಪಾಲ್‌, ರಾಜೇಂದ್ರ ಪ್ರಸಾದ್‌, ಸಾವರ್‌ಕರ್‌ ಮೊದಲಾದವರ ಜೀವನ ಚರಿತ್ರೆ ಮತ್ತಿತರ ಕೃತಿಗಳಿಂದಲೂ ಎತ್ತಿ ತೋರಿಸಿದ್ದರು. ಗಂಭೀರವಲ್ಲದ ಉಡಾಫೆಯ ಬರಹದ ಕ್ರಮವೇ ಅವರದ್ದಾಗಿರಲಿಲ್ಲ. ‘ಪರೀಕ್ಷೆಗೆ ಒಡ್ಡದ ಜೀವನ ಬದುಕಲು ಯೋಗ್ಯವಲ್ಲ’ ಎಂಬ ಸಾಕ್ರೇಟಿಸ್‌ನ ಮಾತು ಅವರಿಗೆ ಬಹಳ ಪ್ರಿಯವಾದುದು.

ಪುತ್ತೂರಿನ ಬಾಲವನದಿಂದ ಸಾಲಿಗ್ರಾಮಕ್ಕೆ 1970ರ ದಶಕದಲ್ಲಿ ಹಿಂತಿರುಗಿದ್ದ ಶಿವರಾಮ ಕಾರಂತರು, ಮಯ್ಯರ ಬರಹಗಳನ್ನು ಗಮನಿಸಿದ್ದರು. ಸಾಲಿಗ್ರಾಮ– ಗುಂಡ್ಮಿ- ಕುಂದಾಪುರಗಳು ಬಹಳ ದೂರದ ಊರುಗಳೂ ಅಲ್ಲ. ‘ವೋಲ್ಗಾದಿಂದ ಗಂಗೆವರೆಗೆ’ ಕೃತಿಯ ಪ್ರಖ್ಯಾತ ಚಿಂತಕ ರಾಹುಲ ಸಾಂಕೃತ್ಯಾಯನ, ಮಯ್ಯರ ಪ್ರಿಯ ಲೇಖಕರಲ್ಲೊಬ್ಬರು. ಅವರ ಬಗ್ಗೆ ಮಯ್ಯರು ಅಲ್ಲಿ ಇಲ್ಲಿ ಬರೆಯುತ್ತಲೇ ಇದ್ದರು. ಆದರೆ, ಕಾರಂತರು ಅಂತಹ ಮಯ್ಯರ ಬರಹಗಳಿಂದ ವಿಶೇಷ ಆಕರ್ಷಿತರಾಗಿರಲಿಲ್ಲ. ಇದನ್ನರಿತ ಪ್ರೊ. ಶ್ರೀಪತಿ ತಂತ್ರಿಯವರು ಸಮಯ ನೋಡಿ, ಮಯ್ಯರನ್ನು ಕರಕೊಂಡು ಕಾರಂತರ ಮನೆಗೆ ಹೋದರು. ಅದು ಸಾಂಕೃತ್ಯಾಯನರ ಜನ್ಮಶತಮಾನ ಸಮಾರಂಭದಲ್ಲಿ ಮಾತನಾಡಲು ಕಾರಂತರನ್ನು ದೆಹಲಿಗೆ ಆಹ್ವಾನಿಸಲಾಗಿದ್ದ ಸಮಯ. ಆ ಸಂದರ್ಭದಲ್ಲಿ ಮಯ್ಯರೊಡನೆ ಕಾರಂತರು ಮಾತನಾಡುತ್ತಾ ಸಾಂಕೃತ್ಯಾಯನರ ಬರಹ ಚಿಂತನೆಗಳ ಬಗ್ಗೆ ಆಳವೂ ಸುದೀರ್ಘವೂ ಆದ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು. ಮಯ್ಯರ ಓದಿನ ಪರಿಶ್ರಮ ತಿಳಿವಳಿಕೆಯ ಆಳವನ್ನರಿತ ಕಾರಂತರು ಅವರ ಅಧ್ಯಯನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಮೊನ್ನೆ ತಂತ್ರಿಯವರು ಆ ಘಟನೆಯನ್ನು ಇನ್ನೊಮ್ಮೆ ನೆನಪಿಸಿಕೊಂಡರು.

ಉಡುಪಿಯಲ್ಲಿ 1980ರಲ್ಲಿ ಮಯ್ಯರನ್ನು ನನಗೆ ಲೇಖಕ, ಗೆಳೆಯ, ನಾಟಕ ನಿರ್ದೇಶಕ ವಸಂತ ಬನ್ನಾಡಿಯವರು ಮೊದಲು ಪರಿಚಯಿಸಿದರು. ಸಾಹಿತ್ಯ ವಿಮರ್ಶೆಗಿಂತ ಹೆಚ್ಚು ರಾಜಕೀಯ ಹಾಗೂ ವೈಚಾರಿಕ ನೆಲೆಗಳಿಗೆ ಮಯ್ಯರು ವಾಲುತ್ತಾರೆ ಎಂದು ನಾನು, ಫಣಿರಾಜ್‌, ಬನ್ನಾಡಿ ಮೊದಲಾದವರು ಮಾತನಾಡಿಕೊಳ್ಳುತ್ತಿದ್ದೆವು. ಮಯ್ಯರು ‘ಅಜನಬೀ ಪನ್‌ ಏಕ್‌ ಸೈದ್ಧಾಂತಿಕ್‌ ಅನುಶೀಲನ್‌’ ಎಂಬ ಕೃತಿಗೆ ರಾಷ್ಟ್ರೀಯ ಪುರಸ್ಕಾರ (2002) ಪಡೆದರು. ಅಂದಿನ ಪ್ರಧಾನಿ ವಾಜಪೇಯಿ ಅವರ ಕೈಯಿಂದ ಪ್ರಶಸ್ತಿ ಪಡೆದ ಫೋಟೊವನ್ನು ಪತ್ರಿಕೆಗಳಲ್ಲಿ ನೋಡಿ ಅಭಿನಂದಿಸಿದ್ದೆ.

ಪಾಶ್ಚಾತ್ಯ ಹಾಗೂ ಪೌರಾತ್ಯ ತತ್ವಶಾಸ್ತ್ರ ಎರಡರಲ್ಲೂ ಅವರಿಗೆ ಸದಾ ಆಸಕ್ತಿ. ಅವರು ಯಾವುದೇ ಒಂದು ಕೆಲಸದಲ್ಲಿ ತೊಡಗಿದರೆ ಅದರಲ್ಲಿ ಸಂಪೂರ್ಣ ಮುಳುಗಿ ಬಿಡುತ್ತಿದ್ದರು. ಒಂದು ಹಂತದಲ್ಲಿ ಅವರು ಸಂಸ್ಕೃತ, ವೇದ, ಆಗಮ ಮೊದಲಾದವುಗಳ ಅಧ್ಯಯನದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದರು. ಅವರ ಸಂಸ್ಕೃತ ಅಧ್ಯಯನದಿಂದ ಅವರ ಮಗ ಪ್ರಜ್ನಾನ ವೈಶ್ವಾನರ ಬಹಳಷ್ಟು ಪ್ರಭಾವಿತರಾದರು. ವೇದಾಧ್ಯಯನದ ಜೊತೆ ಪೌರೋಹಿತ್ಯ ಕಲಿತರು. ಪೌರೋಹಿತ್ಯ ವೃತ್ತಿಯನ್ನೇ ಸ್ವೀಕರಿಸಿದರು. ಮಯ್ಯರೊಡನೆ ಮಾತನಾಡುತ್ತಿದ್ದಾಗ ಅದು ಅವನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರೀತಿ, ಅವನಿಗೆ ಬೇಕಾಗಿದ್ದು ಮಾಡಲಿ ಎಂದಿದ್ದರು. ಅವರ ಮಗಳು ಓದಿ ಮದುವೆಯಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ. ಹಿರಿಯ ಮಗ ಬೆಂಗಳೂರಲ್ಲಿ ಉದ್ಯೋಗಿಯಾಗಿದ್ದರು. ಅದಕ್ಕೆ ತೀರಾ ಭಿನ್ನವಾಗಿ ಒಬ್ಬ ಮಗ ಪೌರೋಹಿತ್ಯ ಸ್ವೀಕರಿಸಿದರೆ ಅದೂ ಸಹಜ ಎಂದರು. ‘ಮಯ್ಯರೆ, ನೀವು ಎಷ್ಟೇ ನಿಷ್ಠುರ ಮಾರ್ಕ್ಸ್‌ವಾದಿಯಾದರೂ, ಒಳಗಿನಿಂದ ಶುದ್ಧ ಪ್ರಜಾಪ್ರಭುತ್ವವಾದಿ. ಉದಾರ ಮಾನವತಾವಾದಿ. ವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಬಯಸುವವರು’ ಎಂದೆ. ದೊಡ್ಡದಾಗಿ ನಕ್ಕಿದ್ದರು. ನಾನೂ ನಕ್ಕಿದ್ದೆ.

ಮಯ್ಯರು ತೀರಿಕೊಂಡ ಸುದ್ದಿ ತಿಳಿದಾಗ ಎಷ್ಟೊಂದು ನೆನಪುಗಳು. ಆನ್‌ಲೈನ್‌ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗೆಳೆಯ ಫಣಿರಾಜ್‌ ಮಾತನಾಡುತ್ತಾ, ‘ಮಯ್ಯರ ಸತತ ಪ್ರಯತ್ನ ಭಾರತೀಯ ಮಾರ್ಕ್ಸ್‌ವಾದವೊಂದನ್ನು ನಮಗೆ ನಾವು ಹೇಗೆ ಸೃಷ್ಟಿಸಿಕೊಳ್ಳಬಹುದು ಎಂಬುದರ ಹುಡುಕಾಟವಾಗಿತ್ತು’ ಎಂದರು. ಅವರ ಋಗ್ವೇದ ಅಧ್ಯಯನದ ಹಿಂದೆ ಇದ್ದುದು ವಸಾಹತುಶಾಹಿ ಚಿಂತನೆಯ ಪ್ರಭಾವದಲ್ಲಿದ್ದ ವಿದ್ವಾಂಸರ ಬುಡವನ್ನು ಅಲುಗಾಡಿಸಿ ಸತ್ಯದರ್ಶನ ಮಾಡಿಸುವ ಪ್ರಯತ್ನ. ಅದು ಕೂಡ ಫಣಿರಾಜ್‌ ಅವರು ಸೂಚಿಸಿದ ಉದ್ದೇಶವೇ ಆಗಿದೆ ಎಂದು ಆಗ ನನಗನಿಸಿತು.

ತಮ್ಮ ವಿಚಾರವನ್ನು ಹಬ್ಬಿಸುವುದಕ್ಕಾಗಿ ಅವರು ಎಲ್ಲಾ ಕಡೆ ಬರೆದರು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ಪತ್ರಿಕೆ ‘ಜನಶಕ್ತಿ’ಯಲ್ಲಿ ನಿರಂತರವಾಗಿ ಲೇಖನಗಳನ್ನು ಪ್ರಕಟಿಸಿದರು. ಹಲವು ಸಂಘಟನೆಗಳಲ್ಲಿ ತೊಡಗಿಕೊಂಡು ಸೈದ್ಧಾಂತಿಕ ಕೆಲಸ ಮಾಡಿದರು. ಮಯ್ಯರು ತೀರಿಕೊಂಡಾಗ ಪ್ರಾಮಾಣಿಕ ವಿದ್ವಾಂಸ, ನಿರ್ಭಿಡೆಯಿಂದ ವೈಚಾರಿಕ ವಿಶ್ಲೇಷಣೆ ಮಾಡಬಲ್ಲ ಒಬ್ಬ ಚಿಂತಕ ಇನ್ನು ನಮ್ಮೊಂದಿಗೆ ಇಲ್ಲವಾದರು. ಆದರೆ ಅವರ ವಿಚಾರಗಳು ನಮ್ಮೊಡನೆ ಇರುತ್ತವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು